ಅಜ್ಞಾತ ಶಕ್ತಿಯ ಸುತ್ತ ವಿಜ್ಞಾನದ ಪರಿಭ್ರಮಣ

ಜಗತ್ತಿನ ಎಲ್ಲ ಶಕ್ತಿಗಳೂ ಈ ಶಕ್ತಿಯ ಪ್ರತೀಕವಾಗಿವೆ. ಅಂತೆಯೇ ಗುರುತ್ವಾಕರ್ಷಣ ಶಕ್ತಿಯೂ ಅಜ್ಞಾತ ಶಕ್ತಿಯ ಸ್ವರೂಪವೇ ಆಗಿರಬಹುದು. ಆ ಅಜ್ಞಾತ ಶಕ್ತಿಯನ್ನು ಗುರುತಿಸುವಲ್ಲಿ ಐನ್ ಸ್ಟೀನ್ ನ ವಿಫಲವಾಗಿರಬಹುದು. ಅಥವಾ ವಿಶ್ವದ ಅಜ್ಞಾತ ಶಕ್ತಿಯನ್ನೇ ಗುರುತ್ವಾಕರ್ಷಣ ಶಕ್ತಿ ಎಂದೇ ತಿಳಿದುಕೊಂಡಿರಬಹುದು. ಒಂದು ಸಿದ್ಧಾಂತವನ್ನು ಸುಳ್ಳು ಎಂದು ಸಾರಾಸಗಟಾಗಿ ಹೇಳುವ ಮೊದಲು ವಿಚಾರ ಮಾಡುವುದು ಒಳಿತು. ವಿಶ್ವವನ್ನೇ ನಿಯಂತ್ರಿಸುವ ಶಕ್ತಿಯೊಂದಿದೆ. ಆ ಶಕ್ತಿಗೆ ಶರಣಾದರಷ್ಟೇ ಅಭಿವೃದ್ಧಿ ಎಂದರು ನಮ್ಮ ಹಿರಿಯರು. ಶಕ್ತಿಯೂ ಇಲ್ಲ, ಏನೂ ಇಲ್ಲ ಎಂದು ವಿತ್ತಂಡವಾದ ಮಂಡಿಸಿದರು ಕೆಲವೊಂದಷ್ಟು ಜನ ಬುದ್ಧಿಜೀವಿಗಳು. ಕಾಣದ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಸುಲಭವೇನಲ್ಲ. ಒಪ್ಪಿಕೊಳ್ಳಬೇಕೆಂಬ ನಿಯಮವೂ ಇಲ್ಲ. ಅನುಭೂತಿಯಾದಾಗ, ಆ ಶಕ್ತಿಯ ಅಸ್ತಿತ್ವದ ಪ್ರಭಾವ ನಮ್ಮ ಮೇಲಾದಾಗ, ಹೌದು ಇಂಥದ್ದು ಯಾವುದೋ ಒಂದು ಶಕ್ತಿ ಇದೆ. ಆ ಶಕ್ತಿ ನಮ್ಮ ವಿಶ್ವವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡಿದೆ ಎಂದು ಒಪ್ಪಿಕೊಳ್ಳುತ್ತೇವೆ. ವಿಜ್ಞಾನವೂ ಹಾಗೆಯೇ. ಒಬ್ಬ ವಿಜ್ಞಾನಿ ಮಂಡಿಸಿದ ವಾದವನ್ನು ಇನ್ನೊಬ್ಬ ವಿಜ್ಞಾನಿ ಒಪ್ಪಿಕೊಳ್ಳಬೇಕೆಂದಿಲ್ಲ, ಆ ವಿಜ್ಞಾನಿಯ ವಾದಕ್ಕೇ ತನ್ನ ವಾದವೂ ಬಂದು ನಿಲ್ಲುವವರೆಗೆ ಒಪ್ಪಿಕೊಳ್ಳುವುದೂ ಇಲ್ಲ. ಇಂದು ಜಗತ್ತಿನ ಶ್ರೇಷ್ಟಾತಿಶ್ರೇಷ್ಠ ವಿಜ್ಞಾನಿಗಳೆನಿಸಿಕೊಂಡವರು, ಇಂದಿನ ವೈಜ್ಞಾನಿಕ ಆವಿಷ್ಕಾರಗಳಿಗೆ ಆಧಾರಸ...