Posts

Showing posts from February, 2023

ಶಿವ ರೂಪಕಲ್ಪನ ಕಾವ್ಯ

Image
ಶಿವ ರೂಪಕಲ್ಪನ ಕಾವ್ಯ ಹಿಮಸುತೆಯಪತಿ ಮಹಿಮಗಿರಿಯೊಡೆಯ ಶಂಭೋ ಮನದರಿಯ ತರಿದು ಅರಿವ ಬೆಳಗಿಸು ಶಂಭೋ || ಪ || ಹರಹರ ಲಯಹರ ಮೃದುವದನ ಹರಿಬಂಧು ಜಯಕರ ಹಿತಕರ ಜನಮನಗಮನ ಸಿಂಧು ದಿನಕರ ಯಮಹರ ಮದನಹರ ಹರ ಶಂಭೋ ವರ ವರದ ಅಮರ ರುದಿರ ಶಿಶಿರ ಸುಬಂಧು || ೧ || ಅಸುರ ಸುರ ನರ ಅಚರ ಚರ ಗಣಕೆ ಈಶ ಮೃಗಚರುಮ ವಸನ ಮೃಗಪತಿಯೆ ಜಗದೀಶ ಮನನ ಗಮನ ಕಿಡಿನಯನ ಪರಮ ಗಿರೀಶ ಗುಹ ಗಣಪ ಗಿರಿಜೆಯೊಡೆಯನೆ ಉರಗಭೂಷ || ೨ || ಕರದೊಳಗೆ ಡಮ ಡಮ ಡಮ ಡಮರ ನಿನಾದ ಜಗಜಗದ ಕಣಕಣದಿ ಶಿವ ಶಿವ ಸುನಾದ ಮನಕೆರಳೆ ಸುಡುಕಿಡಿಗೆ ಯುಗಯುಗದ ಅಂತ್ಯ ಗತಿಯೆನಲು ಗತನವನು ಅಮಿತಜನ ವಂದ್ಯ || ೩ || ಜನಮನಕೆ ಕೆಡುಕೆನಿಪ ಕಳೆಕಳೆವ ಕಾಲ ಇರಿದಿರಿದು ಅರಿಗಳೆದೆ ಬಗೆಬಗೆವ ಶೂಲ ಬಳಿದಿರಲು ಮಸಣ ಬಸುಮ ಮಹಿಮೆ ಅನಂತ ಅಹಿತವನು ಹಿತವೆನಲು ಕರುಣಶಿವ ಕಾಂತ || ೪ || ಜಗದಗಲ ಹರ ತಿರುಗೆ ಹೊರುವನವ ನಂದಿ ಶಿವಶಿವೆಯ ಮಹಿಮೆ ಜನ ತಿಳಿಯೆ ನೆಪ ಭೃಂಗಿ ಹರನೊಲವ ಇಳೆಗರುಹೆ ಮಹಿಮಗಣ ಶೃಂಗಿ ವಿಷಕುಡಿದು ಜಗಪೊರೆದ ಪಶುಪತಿಯೆ ದಂಡಿ || ೫ || ಶಿರದೊಳಗೆ ಶಶಿಬೆಳಗೆ ನಿಶೆಗಳೆವ ಚಂದ ಹರಜಟೆಯೆ ನೆಲೆಯೆನುವ ಸುರನದಿಯು ಗಂಗಾ ದುರುಳಮನ ಮತಿಗೆಡಿಪ ನಿಜಶರ ಪಿನಾಕಿ ನಿಜಬಕುತಿ ಜಗಮುಕುತಿ ಶಿವನೊಲವ ನಾಕ || ೬ || ಶಿವನೆನೆಯೆ ಪದುಮಜನು ಜಗಸೃಜಿಪ ಹಂಸ ಜಗಪೊರೆವ ಹರಿಯಿರಲು ಉಸಿರುಸಿರೆ ವಂಶ ಉಸಿರಳಿಯೆ ಲಯಹರನೆ ಇಹ ಪರಮಹಂಸ ಸಕಲಮನ ಇಹಪರದಿ ಶಿವಶಿವೆಯ ಅಂಶ || ೭ ||