ಮಕ್ಕಳ ದಿನಾಚರಣೆಗೆ ವಿಶೇಷ ಲೇಖನ. ನವೆಂಬೆರ್ ೧೪, ೨೦೧೦ ಒಡಲೂ ನಿನ್ನದೆ... ಚಿಗುರೂ ನಿನ್ನದೆ... ವಿಷ್ಣುಪ್ರಿಯ ಇಂದು ಮಕ್ಕಳ ದಿನ. ಭವ್ಯ ಭಾರತದ ಭವಿಷ್ಯದ ನಿಮಾತೃಗಳ ದಿನ. ಇಂದಿನ ಯುವತಿಯರು ಅಮ್ಮನಾಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳನ್ನು ಹಡೆದರೂ ಅವರನ್ನು ಬೇಬಿ ಸಿಟ್ಟಿಂಗ್‍ಗೆ ಕಳುಹಿಸಿ ಕುರುಡು ಕಾಂಚಾಣದ ಬೆನ್ನು ಹತ್ತಿದ್ದಾರೆ. ತಮ್ಮ ಕರುಳ ಕುಡಿಯ ಭವಿತವ್ಯವನ್ನು ಮರೆತಿದ್ದಾರೆ. ವಂಶದ ಘನತೆಯನ್ನು, ಕೀರ್ತಿಯನ್ನು ಮೇರೆತ್ತರಕ್ಕೆ ಏರಿಸಬೇಕಾದಂಥ ಜೀವವೊಂದರ ವ್ಯಕ್ತಿತ್ವದ ಅಡಿಪಾಯವನ್ನು ಹಾಕಬೇಕಾದ್ದೂ ಗರ್ಭದಲ್ಲಿಯೇ. ಮಾತೃ ಸ್ಥಾನವೇ ಅಂಥಾದ್ದು. ಅದರ ಘನತೆ ತೂಕಕ್ಕೆ ನಿಲುಕದ್ದು. ನಿಮ್ಮೊಡಲಲ್ಲಿ ಮೊಳಕೆಯೊಡೆದ ಚಿಗುರನ್ನು ಹೇಗೆ ಬೆಳೆಸಬೇಕು, ಅದಕ್ಕೆಂಥ ಸಂಸ್ಕಾರ ಕೊಡಬೇಕು ಎಂಬುದನ್ನು ವಿವೇಚಿಸಿ. ಹೊಸ ಕುಡಿಯೂ ನಿಮ್ಮದು, ಅದು ನಡೆವ ಹಾದಿಯೂ ನಿಮ್ಮದು... ಅದು ಮಾತೃಗರ್ಭ. ಅಲ್ಲಿ ಪುಟ್ಟದೊಂದು ಕುಡಿ ಸಣ್ಣಗೆ ನಗೆ ಬೀರಿದೆ. ಅದೇನನ್ನೋ ಯೋಚಿಸುತ್ತಿರುವಂತೆ ಭಾಸವಾಗುತ್ತಿದೆ. ಗಾಢಾಲೋಚನೆಯಲ್ಲಿದ್ದ ಮಗು ಥಟ್ಟನೆ ಅಳಲಾರಂಭಿಸಿತು. ಒಂದಷ್ಟು ಹೊತ್ತು ಕಳೆಯಿತು. ಮಗು ಕೇಕೆ ಹಾಕಿತು. ಖುಷಿಯ ಉತ್ತುಂಗದಲ್ಲಿ ಗರ್ಭಾಶಯದ ಗೋಡೆಯನ್ನೇ ತನ್ನ ಕೋಮಲ ಪಾದಗಳಿಂದ ಒದೆಯಲಾರಂಭಿಸಿತು. ಕೈ ಅಲ್ಲಾಡಿಸಿತು. ಏನೋ ಹೇಳಬೇಕೆಂಬ ತವಕದಲ್ಲಿ ಬಾಯ್ದೆರೆಯಿತು. ಶಬ್ದ ಹೊರಬರಲು ಶಕ್ತಿಯಿರಲಿಲ್ಲವಾದರೂ ಈ ಎಲ್ಲ ಸ...