ಒಡಲೂ ನಿನ್ನದೆ ಚಿಗುರೂ ನಿನ್ನದೆ


ಮಕ್ಕಳ ದಿನಾಚರಣೆಗೆ ವಿಶೇಷ ಲೇಖನ. ನವೆಂಬೆರ್ ೧೪, ೨೦೧೦












ಒಡಲೂ ನಿನ್ನದೆ... ಚಿಗುರೂ ನಿನ್ನದೆ...

ವಿಷ್ಣುಪ್ರಿಯ


ಇಂದು ಮಕ್ಕಳ ದಿನ. ಭವ್ಯ ಭಾರತದ ಭವಿಷ್ಯದ ನಿಮಾತೃಗಳ ದಿನ. ಇಂದಿನ ಯುವತಿಯರು ಅಮ್ಮನಾಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳನ್ನು ಹಡೆದರೂ ಅವರನ್ನು ಬೇಬಿ ಸಿಟ್ಟಿಂಗ್‍ಗೆ ಕಳುಹಿಸಿ ಕುರುಡು ಕಾಂಚಾಣದ ಬೆನ್ನು ಹತ್ತಿದ್ದಾರೆ. ತಮ್ಮ ಕರುಳ ಕುಡಿಯ ಭವಿತವ್ಯವನ್ನು ಮರೆತಿದ್ದಾರೆ. ವಂಶದ ಘನತೆಯನ್ನು, ಕೀರ್ತಿಯನ್ನು ಮೇರೆತ್ತರಕ್ಕೆ ಏರಿಸಬೇಕಾದಂಥ ಜೀವವೊಂದರ ವ್ಯಕ್ತಿತ್ವದ ಅಡಿಪಾಯವನ್ನು ಹಾಕಬೇಕಾದ್ದೂ ಗರ್ಭದಲ್ಲಿಯೇ. ಮಾತೃ ಸ್ಥಾನವೇ ಅಂಥಾದ್ದು. ಅದರ ಘನತೆ ತೂಕಕ್ಕೆ ನಿಲುಕದ್ದು. ನಿಮ್ಮೊಡಲಲ್ಲಿ ಮೊಳಕೆಯೊಡೆದ ಚಿಗುರನ್ನು ಹೇಗೆ ಬೆಳೆಸಬೇಕು, ಅದಕ್ಕೆಂಥ ಸಂಸ್ಕಾರ ಕೊಡಬೇಕು ಎಂಬುದನ್ನು ವಿವೇಚಿಸಿ. ಹೊಸ ಕುಡಿಯೂ ನಿಮ್ಮದು, ಅದು ನಡೆವ ಹಾದಿಯೂ ನಿಮ್ಮದು...

ಅದು ಮಾತೃಗರ್ಭ. ಅಲ್ಲಿ ಪುಟ್ಟದೊಂದು ಕುಡಿ ಸಣ್ಣಗೆ ನಗೆ ಬೀರಿದೆ. ಅದೇನನ್ನೋ ಯೋಚಿಸುತ್ತಿರುವಂತೆ ಭಾಸವಾಗುತ್ತಿದೆ. ಗಾಢಾಲೋಚನೆಯಲ್ಲಿದ್ದ ಮಗು ಥಟ್ಟನೆ ಅಳಲಾರಂಭಿಸಿತು. ಒಂದಷ್ಟು ಹೊತ್ತು ಕಳೆಯಿತು. ಮಗು ಕೇಕೆ ಹಾಕಿತು. ಖುಷಿಯ ಉತ್ತುಂಗದಲ್ಲಿ ಗರ್ಭಾಶಯದ ಗೋಡೆಯನ್ನೇ ತನ್ನ ಕೋಮಲ ಪಾದಗಳಿಂದ ಒದೆಯಲಾರಂಭಿಸಿತು. ಕೈ ಅಲ್ಲಾಡಿಸಿತು. ಏನೋ ಹೇಳಬೇಕೆಂಬ ತವಕದಲ್ಲಿ ಬಾಯ್ದೆರೆಯಿತು.
ಶಬ್ದ ಹೊರಬರಲು ಶಕ್ತಿಯಿರಲಿಲ್ಲವಾದರೂ ಈ ಎಲ್ಲ ಸಂವೇದನೆಗಳನ್ನು ಸೂಕ್ಷ್ಮವಾಗಿ ತಾಯಿಮನಸ್ಸು ಅರ್ಥೈಸಿತು. ಅದಕ್ಕೆ ಅಷ್ಟೇ ಸೂಕ್ಷ್ಚವಾಗಿ ಸ್ಪಂದಿಸಿತು. ಮಹೋನ್ನತವಾದ ಆನಂದವನ್ನು ಅನಭವಿಸಿದ ಅಮ್ಮನೆದೆ ಸಂತಸದಿಂದ ಬೀಗಿತು.
ತಾಯಿ ಮಗುವಿನ ನಡುವೆ ಅಕ್ಷಯ ಬಾಂಧವ್ಯಕ್ಕೆ ನಾಂದಿಯಾಗುವುದೇ ಗರ್ಭದಲ್ಲಿ. ವಂಶವೊಂದನ್ನು ಬೆಳೆಸಿ ಪೋಷಿಸಬೇಕಾದ, ವಂಶದ ಘನತೆಯನ್ನು, ಕೀರ್ತಿಯನ್ನು ಮೇರೆತ್ತರಕ್ಕೆ ಏರಿಸಬೇಕಾದಂಥ ಜೀವವೊಂದರ ವ್ಯಕ್ತಿತ್ವದ ಅಡಿಪಾಯವನ್ನು ಹಾಕಬೇಕಾದ್ದೂ ಗರ್ಭದಲ್ಲಿಯೇ. ಮಾತೃ ಸ್ಥಾನವೇ ಅಂಥಾದ್ದು. ಅದರ ಘನತೆ ತೂಕಕ್ಕೆ ನಿಲುಕದ್ದು. ಮಹಾಭಾರತದ ಅಭಿಮನ್ಯು ತಾಯಿ ಸುಭದ್ರೆಯ ಗರ್ಭದಲ್ಲಿದ್ದಾಗಲೇ ಚಕ್ರವ್ಯೂಹವನ್ನು ಭೇದಿಸಲು ಅರಿತಿದ್ದ ಎಂಬುದು ಕಥೆಯಲ್ಲ. ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಗರ್ಭದಲ್ಲಿದ್ದಾಗಲೇ ನೋವು-ನಲಿವುಗಳ ಸಂವೇದನೆಗಳು, ತಾಯಿ ಮನಸ್ಸಿನ ವಾಂಛೆಯ ಪ್ರಭಾವ, ಗರ್ಭಿಣಿಯ ಜ್ಞಾನದಾಹ ಎಲ್ಲವೂ ಗರ್ಭದೊಳಗೆ, ವಿಸ್ಮಯಗಳ ಮಹಾಶರಧಿಯನ್ನು, ವಿಭಿನ್ನವಾದ ಅನುಭವಗಳ ಮಹಾಕೋಶವನ್ನು ಹೊಂದಿರುವ ಪ್ರಾಪಂಚಿಕ ಜೀವನದ ಮಜಲುಗಳನ್ನು ದಾಟಲು, ಸಿದ್ಧವಾಗುತ್ತಿರುವ ಚಿಗುರಿನ ಮೇಲಾಗುತ್ತದೆ.
ಇಷ್ಟೆಲ್ಲಾ ಇದ್ದರೂ ಅಮ್ಮನ ಮಹತ್ವ ಯುವ ಪೀಳಿಗೆಯ ದೃಷಿಯಲ್ಲಿ ಕಡಿಮೆಯಾಗಿರುವುದು ಮಾತ್ರ ವಿಷಾದನೀಯ. ಅದೆಷ್ಟೋ ಯುವತಿಯರು ಅಮ್ಮನಾಗುವುದಕ್ಕೇ ಹಿಂದೇಟು ಹಾಕುತ್ತಿದ್ದಾರೆ. ಅಮ್ಮನಾದರೆ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಮಕ್ಕಳೇ ಬೇಡ ಎಂದು ನಿರ್ಧರಿಸುವವರಿದ್ದಾರೆ. ಭಾರತೀಯ ಸಂಸ್ಕøತಿಯಲ್ಲಿ ಅಮ್ಮನಿಗೆ ಪರಮಪೂಜ್ಯ ಸ್ಥಾನ ನೀಡಿರುವುದು ಏಕೆ ಎಂಬುದರ ಪರಾಮರ್ಶೆ ಮಾಡದೇ ಶಾಸ್ತ್ರಗಳು ಮೂಢನಂಬಿಕೆ ಎಂದು ಜರೆಯುತ್ತಾರೆ. ವಿಜ್ಞಾನಿಗಳು ಯಾವುದೋ ಸಂಶೋಧನೆ ಮಾಡಿ ವೇದಗಳಲ್ಲಿ, ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ಹೇಳಿರುವ ಸಾರ್ವಕಾಲಿಕ ಸತ್ಯಗಳನ್ನೇ ಹೇಳಿದರೆ ಆಗ `ಹೌದೌದು' ಎಂದು ಗೋಣಾಡಿಸುವವರನ್ನು ಏನೆನ್ನೋಣ?
ಮಗುವನ್ನು ಹೆತ್ತು ಎದೆಹಾಲುಣಿಸಿದ ಮಾತ್ರಕ್ಕೇ ಅಮ್ಮನ ಕರ್ತವ್ಯ ಮುಗಿದಿಲ್ಲ. ಮಗುವಿಗೆ ಸಂಸ್ಕಾರ ಕೊಡುವುದರಿಂದ ಶುರುವಿಟ್ಟುಕೊಂಡು ಶಾಲೆಗೆ ಹೋಗುವ ಮಗುವಿನ ಸಂಪೂರ್ಣ ಜವಾಬ್ದಾರಿಯೂ ಅಮ್ಮನದೇ. ಕೆಲಸ, ನೈಟ್ ಶಿಫ್ಟ್, ದುಡ್ಡು, ಶ್ರೀಮಂತಿಕೆ ಇಷ್ಟರ ಗುಂಗಿನಲ್ಲೇ ಜೀವನದ ಘಳಿಗೆಗಳನ್ನು ಕಳೆಯುವ ಯುವಪೀಳಿಗೆಗೆ ಮಕ್ಕಳನ್ನು ಸಾಕುವುದು, ಅವರಲ್ಲಿ ಸಂಸ್ಕಾರ ರೂಪಿಸುವುದು, ಪ್ರಾಪಂಚಿಕ ಜೀವನದ ಒಳಹೊರಗನ್ನು ತಿಳಿಸಿಕೊಡುವುದು ಹೇಗೆಂಬ ಕಲ್ಪನೆಯೇ ಇಲ್ಲ. ಈ ಎಲ್ಲ ಕಾರ್ಯಗಳಲ್ಲೂ ಅಮ್ಮನದೇ ಪ್ರಮುಖ ಪಾತ್ರ. ಹಾಗಾದರೆ `ಅಪ್ಪ' ಅನ್ನಿಸಿಕೊಂಡವರಿಗೇನೂ ಜವಾಬ್ದಾರಿಗಳಿಲ್ಲವೇ ಎಂದು ಸ್ತ್ರೀವಾದಿಗಳು ವಿತ್ತಂಡವಾದ ಶುರುವಿಟ್ಟುಕೊಳ್ಳಬಹುದು. ಅಪ್ಪನಿಗೂ ಜವಾಬ್ದಾರಿಗಳು, ಕರ್ತವ್ಯಗಳು ಇವೆಯಾದರೂ ಮಕ್ಕಳ ಮೇಲೆ ನೇರ ಪರಿಣಾಮ ಬೀರುವವಳು ಅಮ್ಮ. ಅದು ಗರ್ಭದಿಂದಲೇ ಮೂಡಿರುವ ಬಾಂಧವ್ಯದ ಫಲಶೃತಿ. ಮಗುನ ಸಂಸ್ಕಾರವೂ ಅಮ್ಮನದೇ ಬಳುವಳಿ. ಅದುವೇ ವಂಶವಾಹಿ. ಮಗುವಿನ ಭವಿತವ್ಯದಲ್ಲಿ, ಮಗುವಿನ ಜೀವನದ ಪ್ರತಿಯೊಂದು ಹಂತದಲ್ಲೂ ಅಮ್ಮನ ಛಾಪು ಅಚ್ಚೊತ್ತಿರುತ್ತದೆ.

ಗರ್ಭದಲ್ಲೇ ಬಾಂಧವ್ಯದ ಬೆಸುಗೆ
ಅಮ್ಮ ಎಂಥವಳೇ ಆಗಿರಲಿ ಮಗು ತನ್ನೆಲ್ಲಾ ಕೆಲಸ, ಕಾರ್ಯಗಳಿಗೆ, ಅನುಮಾನ, ಸಮಸ್ಯೆಗಳ ಪರಿಹಾರಕ್ಕೆ, ನೋವು-ನಲಿವುಗಳ ವಿನಿಮಯಕ್ಕೆ ಅವಲಂಬಿಸುವುದು ಅಮ್ಮನನ್ನೇ. ಸ್ವತಃ ಅಮ್ಮನೇ ಬಾಸುಂಡೆ ಬೀಳುವಂತೆ ಬಾರಿಸಿದರೂ ಮಗು ಅಮ್ಮನನ್ನೇ ಬಿಗಿದಪ್ಪಿ ರೋಧಿಸುತ್ತದೆ. ಇದು ಎರಡು ಜೀವಗಳ ನಡುವಿನ ಬಂಧ. ಈ ಬಂಧಕ್ಕೆ ಬೆಸುಗೆ ಬೀಳವುದೇ ಗರ್ಭದಲ್ಲಿ.
5ನೇ ವಾರ:
ಮಹಿಳೆ ಗರ್ಭವತಿಯಾದ 5ವೇ ವಾರದಲ್ಲಿ ಪುಟ್ಟ ಗಾತ್ರದ ಭ್ರೂಣದ ಬೆನ್ನು ಹುರಿ ಮತ್ತು ನರಮಂಡಲಗಳು ಮೂಡಲಾರಂಭಿಸುತ್ತವೆ. ಕೈ, ಕಾಲುಗಳ ಬೆಳವಣಿಗೆ ಶುರುವಾಗುವುದೂ ಇದೇ ಹಂತದಲ್ಲಿ. ಬಾಂದವ್ಯದ ಬೆಸುಗೆಯೂ ಇಲ್ಲಿಂದಲೇ ಶುರು.
7ನೇ ವಾರ:
ಆಗಷ್ಟೇ ರೂಪುಗೊಂಡ ಹೃದಯ ಮೆತ್ತಗೆ ಮಿಡಿಯಲಾರಂಭಿಸುತ್ತದೆ. ತನ್ನನ್ನು ಹೊತ್ತಿರುವ ಅಮ್ಮನ ಎದೆಬಡಿತದ ಜೊತೆ ತಾಳ ಹಾಕಲಾರಂಭಿಸುತ್ತದೆ. ಆಕೆಯ ಜೊತೆ ಸಂವಹನ ಏರ್ಪಡಿಸುವುದಕ್ಕೆ ಏರ್ಪಾಟುಗಳಾಗುತ್ತವೆ.
10-13ನೇ ವಾರ:
ಸಂಪೂರ್ಣ ಮಾನವಾಕೃತಿಯನ್ನು ತಾಳುವ ಭ್ರೂಣ ಮಾತೃಗರ್ಭದ ಜೊತೆಗಿನ ಸಂವಹನಕ್ಕೆ ಸಿದ್ಧವಾಗಿರುತ್ತದೆ. ಕೇವಲ 8 ಸೆ.ಮೀ. ಉದ್ದ ಮತ್ತು 60 ಗ್ರಾಂ ತೂಕದ ಭ್ರೂಣ ಮತ್ತು ಅಮ್ಮನ ನಡುವಿನ ಬಾಂಧವ್ಯ ವೃದ್ಧಿಗಾಗಿ ಹೊಕ್ಕುಳ ಬಳ್ಳಿ ಸಂಪೂರ್ಣ ಸಿದ್ಧಗೊಂಡಿರುತ್ತದೆ. ಅಮ್ಮನ ಸಂವೇದನೆಗಳನ್ನು ಅರ್ಥೈಸಿಕೊಳ್ಳಲಾರಂಭಿಸುತ್ತದೆ. ಅಮ್ಮ ಖುಷಿ ಪಟ್ಟರೆ ತಾನೂ ಖುಷಿ ಪಡುತ್ತೆ. ಅಮ್ಮ ಅತ್ತರೆ ಆ ಚಿಗುರಿನ ಕಣ್ಣುಗಳೂ ಜಿನುಗುತ್ತವೆ.
16ನೇ ವಾರ:
ಉಗುರುಗಳ ಬೆಳವಣಿಗೆಯಾಗುತ್ತದೆ. ಕಣ್ಣು ಹುಬ್ಬುಗಳು, ಕಣ್ರೆಪ್ಪೆಯ ಬದಿಯ ಕೂದಲುಗಳು ಚಿಗುರುತ್ತವೆ. ಅಮ್ಮನ ಜೊತೆಗಿನ ಸಂವಹನಕ್ಕೆ ಮತ್ತಷ್ಟು ಶಕ್ತಿ ಬಂದಿರುತ್ತದೆ.
17ನೇ ವಾರ:
ಗರ್ಭದಲ್ಲಿರುವ ಎಳೆ ಚಿಗುರು ಹೊರಗಿನ ಶಬ್ದಗಳನ್ನು ಕೇಳಿಸಿಕೊಳ್ಳಲಾರಂಭಿಸುವುದು ಇದೇ ಹಂತದಲ್ಲಿ. ಮಗುವಿನ ಲಿಂಗ ಪತ್ತೆ ಮಾಡಲು ಸಾಧ್ಯವಾಗುವುದೂ ಇದೇ ಹಂತದಲ್ಲಿ.
22ನೇ ವಾರ:
ಮಗುವಿಗೆ ಇಂದ್ರಿಯ ಶಕ್ತಿ ದೊರಕುತ್ತದೆ. ರುಚಿಯನ್ನು ಆಸ್ವಾದಿಸಲಾರಂಭಿಸುತ್ತದೆ. ವಿವಿಧ ರೀತಿ ಸ್ಪರ್ಶಾನುಭವಗಳೂ ಗರ್ಭಸ್ತ ಶಿಶುವಿಗಾಗುವುದು ಈ ಹಂತದ ಬಳಿಕ.
25ನೇ ವಾರ:
ಎಲ್ಲಾ ಅಂಗಾಗಳೂ ಮೂಡಿ ಅಗತ್ಯಕ್ಕೆ ತಕ್ಕಷ್ಟು ಬೆಳೆದಿರುತ್ತವೆ. ಗರ್ಭಾವಸ್ಥೆಯ ಉಳಿದ ಅವಧಿಯೇನಿದ್ದರೂ ಬೆಳವಣಿಗೆಗೆ ಮೀಸಲು.

ಸ್ಲಿಮ್ ಆಗೋ ಹುಚ್ಚು ಬೇಡ
ಒಂದಿಂಚು ದಪ್ಪಗಾದರೂ ಭೂಮಿ ಆಕಾಶ ಒಂದು ಮಾಡುವ ಯುವತಿಯರು ಗರ್ಭ ಧರಿಸಿದರೂ ಸ್ಲಿಮ್ ಆಗುವ ಹುಚ್ಚನ್ನು ಮಾತ್ರ ಬಿಡುವುದಿಲ್ಲ. ತಮ್ಮ ಸ್ಲಿಮ್ ವ್ಯಾಮೋಹ ಎಳೆ ಜೀವದ ಆರೋಗ್ಯದ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬ ಕಲ್ಪನೆಯೇ ಇಲ್ಲ. ಉದರ ಪೂರ್ಣಚಂದ್ರನ ಆಕಾರಕ್ಕೆ ತಿರುಗುವುದು ಗರ್ಭಾವಸ್ಥೆಯಲ್ಲಿ ಸಹಜವಾದರೂ ಅದಕ್ಕೂ ಆತಂಕ ಪಡುವ ಯುವತಿಯರಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಈ ಬಗ್ಗೆ ತಿಳಿವಳಿಕೆ ಹೊಂದುವ ಬಯಕೆಯಂತೂ ಕನಸು.
ವಂಶವೃಕ್ಷದ ಹೊಸ ಚಿಗುರಿನ ಆರೋಗ್ಯ ನಿರ್ಧಾರವಾಗುವುದೂ ಗರ್ಭದಲ್ಲಿಯೇ. ಅಮ್ಮ ಸೇವಿಸುವ ಆಹಾರ, ನೀರು, ಗಾಳಿ, ಗರ್ಭವತಿಯ ಮಾನಸಿಕ ಸ್ವಾಸ್ಥ್ಯ, ಚಿಂತನೆಗಳು... ಎಲ್ಲವೂ ಅಚ್ಚೊತ್ತುವುದು ಎಳೆ ಕಂದಮ್ಮನಲ್ಲಿ.
ಗರ್ಭಿಣಿ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿನ ಆಹಾರ ಸೇವಿಸಬೇಕಾಗುತ್ತದೆ. ಬೆಳವಣಿಗೆಯ ಹಂತದ ಎಳೆಯ ಜೀವವೂ ಕ್ಯಾಲೊರಿಗಟ್ಟಲೆ ಪೌಷ್ಟಿಕಾಂಶಗಳನ್ನು ಬಯಸುತ್ತದೆ. ಹೀಗಿರುವಾಗ ಗರ್ಭಿಣಿ ತಾನು ಸ್ಲಿಮ್ ಆಗಬೇಕೆಂದು ಕಡಿಮೆ ಆಹಾರ ಸೇವಿಸಿದರೆ ಹೊಡೆತ ಬೀಳುವುದು ಒಡಲಲ್ಲಿ ಬೆಳೆಯುತ್ತಿರುವ ಕಂದಮ್ಮನ ಮೇಲೆ. ಅಮ್ಮನ ಸ್ಲಿಮ್ ಆಗುವ ಹುಚ್ಚು ಕಂದಮ್ಮನಿಗೆ ಹೃದ್ರೋಗ ತರಿಸುವ ಸಾಧ್ಯತೆಗಳು ಅಧಿಕವಾಗಿರುತ್ತವೆ ಎನ್ನುತ್ತದೆ ವೈಜ್ಞಾನಿಕ ಸಂಶೋಧನೆಯೊಂದು. ವರ್ಣತಂತುಗಳು, ವಂಶವಾಹಿಗಳು ಗರ್ಭಸ್ತ ಶಿಶುವಿನಲ್ಲಿ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದಾದಲ್ಲಿ ಗರ್ಭಿಣಿಯ ಆಹಾರ ಸೇವನೆಯೂ ಸಮಪ್ರಮಾಣದಲ್ಲಿರಬೇಕು. ಇನ್ನೂ ವಿಶೇಷವೆಂದರೆ ಗರ್ಭಿಣಿ ಯಾವ ರೀತಿಯ ಆಹಾರವಸ್ತುಗಳನ್ನು ಇಷ್ಟ ಪಡುತ್ತಾಳೆಯೋ ಅವೇ ಆಹಾರಗಳನ್ನು ಮುಂದೆ ಮಗುವೂ ಇಷ್ಟ ಪಡುತ್ತದೆ. ಗರ್ಭಿಣಿ ಫಾಸ್ಟ್ ಫುಡ್, ಜಂಕ್ ಫುಡ್ ಅಂತ ಅನಾರೋಗ್ಯಕರ ಆಹಾರಗಳನ್ನೇ ಸೇವಿಸಿದರೆ ಮುಂದೆ ಮಗುವೂ ಅಂಥದ್ದೇ ಆಹಾರ ಇಷ್ಟ ಪಡುತ್ತೆ. ಆರೋಗ್ಯ ಕೆಡಿಸಿಕೊಳ್ಳುತ್ತೆ ಎನ್ನುತ್ತಾರೆ ವೈದ್ಯಕೀಯ ವಿಜ್ಞಾನಿಗಳು. ಅಂದರೆ ಮಗುವಿನ ಭವಿತವ್ಯದ ಪ್ರತಿಯೊಂದು ಹೆಜ್ಜೆಯೂ ಆರಂಭವಾಗುವುದು ಗರ್ಭದಿಂದಲೇ.

ತಾಯ್ತನಕ್ಕೆ ಲಜ್ಜೆ ಬೇಡ
ತಾಯ್ತನಕ್ಕೆ ವಿಶೇಷವಾದ ಗೌರವವನ್ನು ಕೊಟ್ಟಿದೆ ಭಾರತ ಸಮಾಜ. ಆದರೆ ಇದೇ ಭಾರತೀಯ ಸಮಾಜದ ನಾರಿ ಇಂದು ಅಮ್ಮನ ಪಟ್ಟವೇರುವುದಕ್ಕೆ ಹಿಂದೇಟು ಹಾಕುತ್ತಿರುವುದು ಖೇದಕರ. ಸೌಂದರ್ಯವೇ ತನ್ನ ಜೀವಿತದ ಪರಮೋದ್ದೇಶ ಎಂದು ಭಾವಿಸಿ, ತಾಯಿಯಾದರೆ ಸೌಂದರ್ಯ ಮರೆಯಾಗುತ್ತದೆ ಎಂದು ಕೊರಗುವ ಆಧುನಿಕ ಯುವತಿಯರಿಗೆ ತಾಯ್ತನದಿಂದ ಸಿಗುವ ಬಳುವಳಿಗಳ ಅರಿವೇ ಇಲ್ಲ. ಅಮ್ಮನಾದರೆ ಸೌಂದರ್ಯ ಹಾಳಾಗುವುದಲ್ಲ, ವೃದ್ಧಿಸುತ್ತದೆ ಎಂಬುದನ್ನಂತೂ ಒಪ್ಪಿಕೊಳ್ಳಲೇ ಅವರು ಸಿದ್ಧರಿಲ್ಲ. ಇತ್ತೀಚೆಗೆ ಅಮೆರಿಕದ ವೈದ್ಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಅಮ್ಮನಾದರೆ ಸೌಂದರ್ಯ ವೃದ್ಧಿಸುತ್ತದೆ ಎಂಬುದು ಸಾಬೀತಾಗಿದೆ.
ಯುವತಿಯೋರ್ವಳು ಪ್ರಥಮ ಬಾರಿಗೆ ಅಮ್ಮನಾದ ಬಳಿಕ ಆಕೆಯ ಮೆದುಳು ಕ್ಷಿಪ್ರ ವಿಕಸನ ಕಾಣುತ್ತದೆ. ಮಗುವಿನ ಜೊತೆಗಿನ ಮಧುರ ಬಾಂಧವ್ಯವೇ ಇದಕ್ಕೆ ಕಾರಣ. ಗರ್ಭದಲ್ಲೇ ಮೂಡುವ ಬೆಸುಗೆಯ ಪ್ರಭಾವ. ಯುವತಿ ಮಗುವಿಗೆ ಜನ್ಮ ನೀಡಿದ ತಕ್ಷಣ ಆಕೆಯ ದೇಹದಲ್ಲಿನ ಹಾರ್ಮೋನ್‍ಗಳ ಉತ್ಪತ್ತಿ ಹೆಚ್ಚುತ್ತದೆ. ಈಸ್ಟ್ರೋಜೆನ್, ಆಕ್ಸಿಟೋಸಿನ್, ಪ್ರೋಲಾಕ್ಟಿನ್ ಮೊದಲಾದ ಹಾರ್ಮೋನ್‍ಗಳು ಹೆಚ್ಚೆಚ್ಚು ಸ್ರವಿಸಲಾರಂಭಿಸಿದಂತೆ ಅಮ್ಮನ ಮೆದುಳು ವಿಕಸನಗೊಳ್ಳುತ್ತದೆ. ಮಗುವಿನ ಜೊತೆಗಿನ ಒಡನಾಟ ಆಕೆಯಲ್ಲಿ ಪ್ರಸನ್ನತೆಯನ್ನು ಮೂಡಿಸುತ್ತದೆ. ಮಗುವನ್ನೇ ಸರ್ವಸ್ವವೆಂದು ಭಾವಿಸಿ ಅದರ ಜೊತೆಗೇ ಹೆಚ್ಚಾಗಿ ಒಡನಾಡುವ ಅಮ್ಮನ ಮೆದುಳಿನ ವಿಕಸನವೂ ಹೆಚ್ಚುತ್ತದೆ ಎನ್ನುತ್ತದೆ ಸಂಶೋಧನೆ. ಸಮಸ್ತ ಜೀವಕೋಟಿಯ ಆರೋಗ್ಯ ಅಡಗಿರುವುದೂ ಪ್ರಸನ್ನತೆಯಲ್ಲಿಯೇ. ಅದನ್ನೇ ಒಂದು ಶ್ಲೋಕವೂ ಸಾರುತ್ತದೆ-
ಸಮದೋಷಃ ಸಮಾಗ್ನಿಶ್ಚ
ಸಮಧಾತುಃ ಮಲಕ್ರಿಯಃ
ಪ್ರಸನ್ನಾತ್ಮೇಂದ್ರಿಯ ಮನಃ
ಸ್ವಸ್ಥ ಇತ್ಯಭಿಧೀಯತೆ


ಶಿಕ್ಷಣವೇನೂ ಸುಲಭವಲ್ಲ...
ಎಳೆಯ ಕಂದಮ್ಮನ ಕ್ಷೇಮವನ್ನು ವಿಚಾರಿಸಿಕೊಳ್ಳುವುದು ಎಷ್ಟು ಕಷ್ಟವೋ ಅದರ ಸಾವಿರ ಪಟ್ಟು ಕಷ್ಟ ಎದುರಾಗುವುದು ಮಗು ಶಾಲೆಗೆ ಹೋಗಲಾರಂಭಿಸಿದಾಗ. ಪುಟ್ಟ ಮನಸ್ಸು ಹೊರ ಪ್ರಪಂಚಕ್ಕೆ ತೆರೆದುಕೊಂಡಾಗ ಅಸಂಖ್ಯಾತ ಅನುಮಾನಗಳು, ಪ್ರಶ್ನೆಗಳು ಉದ್ಭವಿಸಿ ಮಗುಮನಸ್ಸನ್ನು ಕೆಡಿಸುತ್ತವೆ. ಕ್ಷಣ ಕ್ಷಣವೂ ಗೊಂದಲದ ಸುನಾಮಿಯನ್ನೇ ಸೃಷ್ಟಿಸುತ್ತವೆ. ತನ್ನೆಲ್ಲಾ ಅನುಮಾನ, ಆತಂಕ, ಗೊಂದಲಗಳ ನಿವಾರಕಿಯಾಗಿ ಆ ಎಳೆ ಮನಸ್ಸಿಗೆ ಗೋಚರಿಸುವುದು ಅಮ್ಮನೇ ಹೊರತು ಮತ್ಯಾರೂ ಅಲ್ಲ. ಅಮ್ಮ ಮಗುವಿನ ಜೊತೆ ಎಷ್ಟು ಹೊಂದಿಕೊಳ್ಳುತ್ತಾಳೆ, ಆಗಷ್ಟೇ ಅರಳಲಾರಂಭಿಸಿರುವ ಮನಸ್ಸಿನ ಜೊತೆ ಆಕೆಯ ಒಡನಾಟ ಹೇಗಿದೆ ಎನ್ನುವುದರ ಮೇಲೆ ಮಗುವಿನ ಶೈಕ್ಷಣಿಕ ಜೀವನ ಅವಲಂಬಿತ.
ಹೇಳಿ ಕೇಳಿ ಇದು ಪುರುಸೊತ್ತೇ ಇಲ್ಲದ ಜಮಾನ. ಅಪ್ಪ, ಅಮ್ಮ ಇಬ್ಬರೂ ಕೆಲಸಕ್ಕೆ ಹೋದರೆ ಮಗುವಿಗೆ ಬೇಬಿ ಸಿಟ್ಟಿಂಗೇ ಗತಿ. ಶುಲ್ಕ ತೆಗೆದುಕೊಂಡ ತಪ್ಪಿಗೆ ಮಗುವಿನ ಊಟ ಉಪಚಾರಗಳೇನೋ ಬೇಬಿ ಸಿಟ್ಟಿಂಗ್‍ನಲ್ಲಿ ಚೆನ್ನಾಗೇ ಆಗುತ್ತವೆ. ಆದರೆ ಅಲ್ಲಿ ಅಮ್ಮನ ಮಮತೆಯಿಲ್ಲ. ತಾಯಿಯ ಹೃದಯದಾಳದಿಂದ ಉದ್ಭವಿಸಿದ ಪ್ರೀತಿಯ ಬಯ್ಗುಳವಿಲ್ಲ. ಬೇಕೆಂದಾಗಲೆಲ್ಲ ಬಿಗಿದಪ್ಪಿ ಸಂತೈಸಿ ಎದೆಹಾಲಿನ ಅಮೃತ ಉಣಿಸಬೇಕಾದ ಅಮ್ಮ ಕಚೇರಿ ಕೆಲಸದಲ್ಲಿ ಬ್ಯುಸಿ. ಲಲ್ಲೆಗರೆದು, ಜೋಗುಳ ಹಾಡಿ, ತೊಟ್ಟಿಲು ತೂಗಿ, ಸುಖನಿದ್ರೆಗೆ ಜಾರಿದ ಮಗುವಿನ ಹಣೆಗೊಂದು ಸಿಹಿ ಮುತ್ತಿಟ್ಟು ಆನಂದತುಂದಿಲಗೊಳ್ಳಬೇಕಾದ ಅಮ್ಮ ಮಗುವಿನ ಮುಖ ನೋಡುವುದು ವೀಕ್ ಎಂಡ್‍ಗೇ!
ಶಾಲೆಯ ಮೆಟ್ಟಿಲೇರಿದ ಮಗುವಿನ ಜೊತೆ ಅಮ್ಮನಾದವಳು ಹೆಚ್ಚು ಹೊತ್ತು ಕಳೆದಷ್ಟೂ ಮಗುವಿನ ಶೈಕ್ಷಣಿಗ ಪ್ರಗತಿ ವಿಕಸನಗೊಳ್ಳುತ್ತದೆ. ಜ್ಞಾನದಾಹ ಹೆಚ್ಚುತ್ತದೆ. ಪ್ರಾಪಂಚಿಕ ಜೀವನದಲ್ಲಿ ತನ್ನ ಕರ್ತವ್ಯಗಳೇನು ಎಂಬುದನ್ನು ಮಗು ಸರಿಯಾಗಿ ಅರ್ಥೈಸಿಕೊಳ್ಳುತ್ತದೆ ಎನ್ನುತ್ತದೆ ಸಂಶೋಧನೆ.
ಎಳೆ ಮನದಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಸಮಸ್ಯೆ `ಮಕ್ಕಳಾಗುವುದು ಹೇಗೆ?' ಎಂಬುದು. ಆದರೆ ಈ ಅನುಮಾನವನ್ನು ಮಗುವಿನ ಮನಸ್ಸಿನಿಂದ ಹೋಗಲಾಡಿಸುವ ಪ್ರಯತ್ನವನ್ನು ಹೆತ್ತವರು ಮಾಡುವುದೇ ಇಲ್ಲ. ಕಾರಣ- ಲೈಂಗಿಕ ವಿಚಾರಗಳ ಬಗ್ಗೆ ಮಕ್ಕಳ ಮುಂದೆ ಮಾತೇ ಇಲ್ಲ. ಮಾತಾಡಿದರೆ ಅದು ಕೊಳಕು, ನಾಚಿಕೆಗೇಡು. ಲೈಂಗಿಕವಾಗಿ ಹರಡುವ ರೋಗಗಳು ಜಗತ್ತಿನೆಲ್ಲೆಡೆ ತಮ್ಮ ಕರಾಳ ಹಸ್ತವನ್ನು ಚಾಚಿರುವ ಇಂದಿನ ದಿನದಲ್ಲಿ ಲೈಂಗಿಕ ವಿಚಾರಗಳ ಬಗೆಗಿರುವ ಭಾವನೆಗಳು ನಿಮ್ಮ ಮಗುವನ್ನು ಹಾದಿ ತಪ್ಪಿಸಿಯಾವು ಎಚ್ಚರ. ಕಡಿದಾದ ಕಲ್ಲನ್ನು ಕೆತ್ತಿ ಸುಂದರ ಮೂರ್ತಿಯನ್ನಾಗಿ ಮಾಡುವ ಶಿಲ್ಪಿಯಾಗಬೇಕು ಅಮ್ಮ.
ಒಡಲೂ ನಿಮ್ಮದೆ, ಚಿಗುರೂ ನಿಮ್ಮದೆ. ಆ ಚಿಗುರು ಅಡ್ಡಾದಿಡ್ಡಿಯಾಗಿ ಬೆಳೆಯಬೇಕೆ? ಕೀರ್ತಿಯ ಉತ್ತುಂಗದತ್ತ ಊಧ್ರ್ವಮುಖಿಯಾಗಿ ಬೆಳೆಯಬೇಕೆ? ಪ್ರಬುದ್ಧತೆಯನ್ನು ಪಡೆದ ಮಗು ತನ್ನ ವ್ಯಕ್ತಿತ್ವ ರೂಪಿಸಿದ, ತನಗೆ ಸಂಸ್ಕಾರವನ್ನು ನೀಡಿದ ಮಹಾಮೂರ್ತಿ ಅಮ್ಮನಿಗೆ ಪ್ರೀತಿ, ಗೌರವಗಳ ಮಹಾಪೂರವನ್ನು ಹರಿಸಿದರೆ, ಜೀವನದ ಸಂಧ್ಯಾಕಾಲದಲ್ಲಿ ಆಸರೆಯಾದರೆ ಆಕೆಗದುವೆ ವಿಶ್ವಶ್ರೇಷ್ಠ ಪುರಸ್ಕಾರ.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು