ಶಿವ ರೂಪಕಲ್ಪನ ಕಾವ್ಯ

ಶಿವ ರೂಪಕಲ್ಪನ ಕಾವ್ಯ


ಹಿಮಸುತೆಯಪತಿ ಮಹಿಮಗಿರಿಯೊಡೆಯ ಶಂಭೋ
ಮನದರಿಯ ತರಿದು ಅರಿವ ಬೆಳಗಿಸು ಶಂಭೋ || ಪ ||

ಹರಹರ ಲಯಹರ ಮೃದುವದನ ಹರಿಬಂಧು
ಜಯಕರ ಹಿತಕರ ಜನಮನಗಮನ ಸಿಂಧು
ದಿನಕರ ಯಮಹರ ಮದನಹರ ಹರ ಶಂಭೋ
ವರ ವರದ ಅಮರ ರುದಿರ ಶಿಶಿರ ಸುಬಂಧು || ೧ ||

ಅಸುರ ಸುರ ನರ ಅಚರ ಚರ ಗಣಕೆ ಈಶ
ಮೃಗಚರುಮ ವಸನ ಮೃಗಪತಿಯೆ ಜಗದೀಶ
ಮನನ ಗಮನ ಕಿಡಿನಯನ ಪರಮ ಗಿರೀಶ
ಗುಹ ಗಣಪ ಗಿರಿಜೆಯೊಡೆಯನೆ ಉರಗಭೂಷ || ೨ ||

ಕರದೊಳಗೆ ಡಮ ಡಮ ಡಮ ಡಮರ ನಿನಾದ
ಜಗಜಗದ ಕಣಕಣದಿ ಶಿವ ಶಿವ ಸುನಾದ
ಮನಕೆರಳೆ ಸುಡುಕಿಡಿಗೆ ಯುಗಯುಗದ ಅಂತ್ಯ
ಗತಿಯೆನಲು ಗತನವನು ಅಮಿತಜನ ವಂದ್ಯ || ೩ ||

ಜನಮನಕೆ ಕೆಡುಕೆನಿಪ ಕಳೆಕಳೆವ ಕಾಲ
ಇರಿದಿರಿದು ಅರಿಗಳೆದೆ ಬಗೆಬಗೆವ ಶೂಲ
ಬಳಿದಿರಲು ಮಸಣ ಬಸುಮ ಮಹಿಮೆ ಅನಂತ
ಅಹಿತವನು ಹಿತವೆನಲು ಕರುಣಶಿವ ಕಾಂತ || ೪ ||

ಜಗದಗಲ ಹರ ತಿರುಗೆ ಹೊರುವನವ ನಂದಿ
ಶಿವಶಿವೆಯ ಮಹಿಮೆ ಜನ ತಿಳಿಯೆ ನೆಪ ಭೃಂಗಿ
ಹರನೊಲವ ಇಳೆಗರುಹೆ ಮಹಿಮಗಣ ಶೃಂಗಿ
ವಿಷಕುಡಿದು ಜಗಪೊರೆದ ಪಶುಪತಿಯೆ ದಂಡಿ || ೫ ||

ಶಿರದೊಳಗೆ ಶಶಿಬೆಳಗೆ ನಿಶೆಗಳೆವ ಚಂದ
ಹರಜಟೆಯೆ ನೆಲೆಯೆನುವ ಸುರನದಿಯು ಗಂಗಾ
ದುರುಳಮನ ಮತಿಗೆಡಿಪ ನಿಜಶರ ಪಿನಾಕಿ
ನಿಜಬಕುತಿ ಜಗಮುಕುತಿ ಶಿವನೊಲವ ನಾಕ || ೬ ||

ಶಿವನೆನೆಯೆ ಪದುಮಜನು ಜಗಸೃಜಿಪ ಹಂಸ
ಜಗಪೊರೆವ ಹರಿಯಿರಲು ಉಸಿರುಸಿರೆ ವಂಶ
ಉಸಿರಳಿಯೆ ಲಯಹರನೆ ಇಹ ಪರಮಹಂಸ
ಸಕಲಮನ ಇಹಪರದಿ ಶಿವಶಿವೆಯ ಅಂಶ || ೭ ||

ಸಸರಿರಿಗಸರಿಗ ಸನಿದಪಮ ದನಿ ರಾಗ
ತಕ ತಕಿಟ ತಕಿಟ ತಕ ನಲಿಪ ನಟರಾಜ
ಪರಿಸರದ ನುಡಿನುಡಿಯು ಹರನೊಲವ ಗಾನ
ದಿಟಮನದ ಸಕಲಕಲೆ ಶಿವನೆಡೆಯ ಯಾನ || ೮ ||

ಶಿವಪದದಿ ಮನವಿರಲು ಬರಬಹುದೆ ಕುತ್ತು
ಮನಮನದಿ ಹರನೆನಲು ಸರಿಯುವುದು ಮೃತ್ಯು
ಋಷಿಜನಕೆ ಮುನಿಗಣಕೆ ಗುರು ಶಿವನನಂತ
ಲಯಹರಗು ಗುರುವವನು ಗಿರಿಜೆಶಿವ ಕಂದ || ೯ ||

ಹರಹರನೆ ಪುರಹರನೆ ಮುರಹರನೆ ಶಂಭೋ
ಅರಿ ತರಿದು ಕರಪಿಡಿದು ನಡೆಸೆನನು ಶಂಭೋ
ಅಚಲ ಚಲ ಬಲ ರುದಿರ ಗುರುತರನೆ ಶಂಭೋ
ಜಯ ಜಯತು ಪಶುಪತಿಯೆ ಜಗದೊಡೆಯ ಶಂಭೋ || ೧೦ ||

ವನಜದಳ ಅರಳಿರಲು ಕವಿಮನದಿ ಕಾವ್ಯ
ಪಶುಪತಿಯ ನೆನೆದಿರುವ ನುಡಿಯಿದುವೆ ಭವ್ಯ
ಪದಪದದಿ ಶಿವಬಕುತ ಪಯಣಿಗನ ಭಾವ
ಮೃಗಪತಿಯೆ ನಲಿನಲಿದು ಹರಸೆನಗೆ ದೇವ || ೧೧ ||

- ಪ್ರಕಾಶ ಪಯಣಿಗ

Comments

Popular posts from this blog

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು