ಮೃತ್ಯು ವೀಣೆಯಲ್ಲಿ ಮಿಡಿದ ಬಾಳ ಶೃತಿ...


ಆತ್ಮಶಕ್ತಿ, ಮನೋಶಕ್ತಿ, ವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಶೃತಿಯೇ ಸಾಕ್ಷಿ. ಶೃತಿಯ ಜೀವನದ ಮಜಲುಗಳನ್ನು ನೋಡಿದಾಗ, ಆಕೆ ಎದುರಿಸಿದ ಸವಾಲುಗಳನ್ನು ನೆನೆಸಿದಾಗ ಕಣ್ಣುಗಳು ಮಂಜಾಗುತ್ತವೆ. ತನ್ನ ಸಮಸ್ಯೆಗಳ ವಿರುದ್ಧ ಆಕೆ ಹೋರಾಡಿದ ರೀತಿ ಅಭಿಮಾನದ ಹೊಳಹನ್ನು ಮೂಡಿಸುತ್ತದೆ. 

ಆ ಒಂದು ಕ್ಷಣದಲ್ಲಿ ಉಸಿರುಗಟ್ಟಿದಂಥ ಅನುಭವವಾಗಿತ್ತು. ಕಷ್ಟಗಳು, ಸಮಸ್ಯೆಗಳು ಎಂದರೆ ಧೃತಿಗೆಡದೇ ಇದ್ದಂಥ ಜೀವ ಅಂದು ಥರಗುಟ್ಟಿತ್ತು. ಜೊತೆಗೇ ಅಚ್ಚರಿಯ ಆಘಾತ. ಮನೋಸ್ಥೈರ್ಯವನ್ನೇ ಉಸಿರಾಗಿಸಿಕೊಂಡಿರುವಂಥ ದಿಟ್ಟೆದೆಯ ವ್ಯಕ್ತಿತ್ವವನ್ನು ಕಂಡಾಗ ಅಭಿಮಾನದಿಂದ ಕಣ್ಣುಗಳು ಹನಿಗೂಡಿದ್ದರ ಅರಿವೂ ಆಗಿರಲಿಲ್ಲ. ಮಾತಾಡಲೋ, ಬೇಡವೋ, ಪ್ರಶ್ನೆಗಳನ್ನು ಕೇಳಿ ಜೀವನದ ಕಹಿಯನ್ನು ಕೆದಕಿ ಗಾಯದ ಮೇಲೆ ಬರೆ ಎಳೆಯುವಂಥ ದುಸ್ಸಾಹಸಕ್ಕೆ ಮುಂದಾಗಲೋ ಎಂದೆಲ್ಲ ಚಿಂತಿಸಿ, ತಲೆಕಡಿಸಿಕೊಂಡು ಕಡೆಗೂ ಮಾತು ಶುರುವಿಟ್ಟುಕೊಂಡರೆ ಜೀವನವನ್ನು ಎದುರಿಸುವಂಥ ಧೈರ್ಯ ಹೀಗಿರಬೇಕು ಎಂಬ ಭಾವನೆ ಮೂಡಿಸುವಂಥ ಮಾತುಗಳಿಗೆ ಮನಸ್ಸು ಶರಣಾಗಿತ್ತು.

ಅಂಥದ್ದೊಂದು ಶರಣಾಗತಿಗೆ ನನ್ನ ಮನಸ್ಸು ಒಳಗಾದದ್ದು ಜಗತ್ತಿನಲ್ಲಿಡೀ ಪ್ರಖ್ಯಾತಿ ಪಡೆದಂಥ ವ್ಯಕ್ತಿಯೊಂದಿಗೆ ಮಾತನಾಡಿದಾಗ ಅಲ್ಲ. ಬಹುತೇಕ ಜನರು ಜಗತ್ತು ಎಂದರೇನೆಂಬುದನ್ನು, ಜೀವನದ ಸವಾಲುಗಳು ಹೇಗಿರುತ್ತವೆ ಎಂಬುದನ್ನು ಅರಿಯುವುದಕ್ಕೆ ಶುರು ಮಾಡುವಂಥ ಪ್ರಾಯದಲ್ಲಿ ಮೃತ್ಯುವಿನೊಂದಿಗೇ ಸೆಣಸಾಡಿ, ಮೃತ್ಯುಶಕ್ತಿಗೇ ತನ್ನ ಸಂಕಲ್ಪಶಕ್ತಿಯ ಮೂಲಕ ಸೆಡ್ಡು ಹೊಡೆದು ಯಶಸ್ವಿಯಾಗಿರುವಂಥ ಬಾಲಕಿಯೊಂದಿಗೆ ಮಾತಾಡಿದಾಗ.

ಆಕೆ ಶೃತಿ ರಾವ್, ಶಿವಮೊಗ್ಗ ಜಿಲ್ಲೆಯ ಹೊಸನಗರದವಳು. ಅದು 2008ನೇ ಇಸವಿ. 18ರ ಪ್ರಾಯದ ಶೃತಿಯ ಬದುಕಿನಲ್ಲಿ, ಹರೆಯದಲ್ಲಿ ಇರುವಂಥ ಹುರುಪು, ಉತ್ಸಾಹಗಳನ್ನೇ ಕುಗ್ಗಿಸುವಂತೆ ಮೃತ್ಯುವಿನ ವೀಣೆ ಮಿಡಿಯುವುದಕ್ಕೆ ಶುರುವಾಯಿತು. ಮೊಣಕಾಲು ಊದಿಕೊಂಡದ್ದು ಯಾಕೆಂದು ಪರೀಕ್ಷಿಸಲು ಶಿವಮೊಗ್ಗೆಯ ವೈದ್ಯರ ಬಳಿ ಹೋದಾಗ ತಕ್ಷಣ ಮಣಿಪಾಲ ಆಸ್ಪತ್ರೆಗೆ ಹೋಗಬೇಕೆಂದರು. ಮಣಿಪಾಲ ಆಸ್ಪತ್ರೆಯ ವೈದ್ಯರು ಪರೀಕ್ಷೆ ನಡೆಸಿ ಫಲಿತಾಂಶ ತಿಳಿಸಿದಾಗ ಮನೆಯವರಿಗೆಲ್ಲ ಒಂದು ಕ್ಷಣ ಆಘಾತ! ಶೃತಿಗೆ `ಆಸ್ಟಿಯೋ ಸರ್ಕೋಮಾ' (ಕ್ಯಾನ್ಸರ್) ಆಗಿತ್ತು. `ಈ ವಿಚಾರವನ್ನು ಮಗಳ ಬಳಿ ಹೇಗೆ ಹೇಳಲಿ? ಚಿಕಿತ್ಸೆ ಕೊಡಿಸಿದರೆ ಇದು ಗುಣವಾಗಬಹುದೇ?' ಎಂಬ ಅಪ್ಪನ ಚಿಂತೆ. ಆದರೂ ಮಗಳ ಬಳಿ ಹೇಳದೇ ಇರುವುದಕ್ಕಾಗದು, ಚಿಕಿತ್ಸೆ ಕೊಡಿಸದೇ ಇರುವುದಕ್ಕೂ ಆಗದು. ಶೃತಿಯ ಒತ್ತಡಕ್ಕೆ ಮಣಿದು ನಿಜ ವಿಚಾರ ತಿಳಿಸಿದಾಗ ಶೃತಿಯೂ ಅರೆಕ್ಷಣ ದಿಗ್ಮೂಡಳಾಗಿದ್ದಳು. ಆ ಆಘಾತ ಇದ್ದದ್ದು ಒಂದು ಕ್ಷಣ ಮಾತ್ರ. ನಂತರ ಶೃತಿಯ ನಿರ್ಧಾರ ತನ್ನ ಸಮಸ್ಯೆಯ ವಿರುದ್ಧ ಹೋರಾಡುವುದಾಗಿತ್ತು. ಮೃತ್ಯುವೀಣೆ ತನ್ನೆಲ್ಲ ಶಕ್ತಿಯೊಂದಿಗೆ ಮಿಡಿಯುತ್ತಿದ್ದರೂ ಸಹ ಆ ಸದ್ದಿಗೆ ಬಾಲಕಿ ಅಂಜಲಿಲ್ಲ. ಆ ವೀಣೆಯಲ್ಲಿಯೇ ಬಾಳ ಶೃತಿಯನ್ನು ಮೀಟಿದಳು.

ಅಷ್ಟರಲ್ಲಿ ಚಿಕಿತ್ಸೆಗೆ ಸಿದ್ಧಗೊಂಡಿತ್ತು ಶೃತಿಯ ಮನಸ್ಸು. ವೈದ್ಯರು ಚಿಕಿತ್ಸೆ ಫಲಕಾರಿಯಾಗಬಹುದೇ ಎಂದು ಖಚಿತವಾಗಿ ಹೇಳಲಿಲ್ಲ. `ಇದು ರಾಜ್ಯದಲ್ಲಿ 7ನೇ ಕೇಸು. ತೀರಾ ಅಪೂರ್ವಕ್ಕೆ ಇಂಥ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಚಿಕಿತ್ಸೆ ಕೊಡಿ ಅಂದ್ರೆ ಕೊಡ್ತೇವೆ. ಆಮೇಲೆ ಫಲ ಕೊಡದೇ ಹೋದ್ರೆ ನಮ್ಮನ್ನು ದೂರಬಾರದು' ಎಂಬ ವೈದ್ಯರ ಖಡಾಖಡಿ ಮಾತಿಗೆ ಉತ್ತರ ಕೊಡುವುದು ಹೇಗೆಂಬ ಚಿಂತೆ ಆವರಿಸಿಕೊಂಡಿತ್ತು. ಆಗಲೂ ದಿಟ್ಟ ನಿರ್ಧಾರ ತೆಗೆದುಕೊಂಡದ್ದು ಶೃತಿಯೇ. `ನನಗೆ ಚಿಕಿತ್ಸೆ ಕೊಡಿ. ನಾನು ಖಂಡಿತಕ್ಕೂ ಗುಣಮುಖಿಯಾಗುತ್ತೇನೆ' ಎಂದಳು ಶೃತಿ.

ಚಿಕಿತ್ಸೆ ಶುರುವಾಯಿತು. ಎರಡು ಕೀಮೋಥೆರಪಿಗಳು ಆದವು. ವೈದ್ಯರಲ್ಲಿ ಯಾವ ನಂಬಿಕೆಯೂ ಇರಲಿಲ್ಲ. ಮೂರನೇ ಕೀಮೋಥೆರಪಿ ಹೊತ್ತಿಗೆ ಅಚ್ಚರಿಗೊಳಗಾಗುವ ಸರದಿ ವೈದ್ಯರದ್ದಾಗಿತ್ತು. ಶೃತಿಯ ಆತ್ಮಶಕ್ತಿ, ಮನೋಶಕ್ತಿಯ ಮುಂದೆ ಮೃತ್ಯುಶಕ್ತಿ ಕ್ಷೀಣಿಸಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಶೃತಿಯ ದೇಹ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿತ್ತು. `ದೇವರ ದಯೆ, ಗುರುಗಳ ಆಶೀರ್ವಾದ, ನಮ್ಮ ನಂಬಿಕೆ, ವೈದ್ಯರ ಪ್ರಯತ್ನ, ಶೃತಿಯ ಆತ್ಮವಿಶ್ವಾಸ ಎಲ್ಲವೂ ಒಟ್ಟಾಗಿ ನನ್ನ ಮಗಳನ್ನು ಬದುಕಿಸಿದವು' ಎಂದು ಭಾವುಕರಾಗುತ್ತಾರೆ ಶೃತಿಯ ತಂದೆ ಶ್ರೀಪಾದ ರಾವ್.

ಏನಿದು ಆಸ್ಟಿಯೋ ಸರ್ಕೋಮಾ?
ಆಸ್ಟಿಯೋ ಸರ್ಕೋಮಾ ಒಂದು ಬಗೆಯ ಕ್ಯಾನ್ಸರ್. ಎಳವೆಯಲ್ಲಿಯೇ ಕಾಣಿಸಿಕೊಳ್ಳುವಂಥ ಈ ಕ್ಯಾನ್ಸರ್ ಒಮ್ಮೆ ಗುಣಮುಖವಾದರೆ ಮರುಕಳಿಸಿದ ನಿದರ್ಶನಗಳಿಲ್ಲ. ವಯಸ್ಕರಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳೂ ಕಡಿಮೆ. ಇದು ಪ್ರೈಮರಿ ಬೋನ್ ಕ್ಯಾನ್ಸರ್. ಈ ಕ್ಯಾನ್ಸರ್ ಮುಖ್ಯವಾಗಿ, ಮೊಣಕಾಲು, ತೊಡೆಯ ಎಲುಬು, ಮುಂಗಾಲಿನ ಮೂಳೆ, ಭುಜದ ಮೂಳೆಗಳು, ತಲೆಬುರುಡೆ ಮತ್ತು ದವಡೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅಂದರೆ ದೇಹದಲ್ಲಿರುವ ಉದ್ದವಾದ ಮೂಳೆಗಳ ತುದಿಯಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಈ ಕ್ಯಾನ್ಸರ್ ಸೋಂಕಿಗೆ ಒಳಗಾಗುವವರ ಪೈಕಿ ಮೂರನೇ ಒಂದಕ್ಕಿಂತಲೂ ಅಧಿಕ ಜನರು ಸಾವನ್ನಪ್ಪುತ್ತಾರೆ.

ಎಳವೆಯಲ್ಲಿ ಕಾಣಿಸಿಕೊಳ್ಳುವಂಥ ಆಸ್ಟಿಯೋ ಸರ್ಕೋಮಾಕ್ಕೆ ನಿಖರವಾದ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಆದರೆ ಕೀಮೋಥೆರಪಿ ಮತ್ತಿತರ ಚಿಕಿತ್ಸಾ ಪದ್ಧತಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಚಿಕಿತ್ಸೆ ಯಶಸ್ವಿಯಾಗುವುದಿಲ್ಲ. ಈ ಕ್ಯಾನ್ಸರ್ ಕಾಣಿಸಿಕೊಂಡಿತು ಎಂದಾದರೆ ಉದ್ದವಾದ ಮೂಳೆಗಳು ಕೂಡುವ ಜಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ರಾತ್ರಿಯ ವೇಳೆಗೆ ನೋವು ಹೆಚ್ಚಿರುತ್ತದೆ. ಕೆಲವೊಮ್ಮೆ ನೋವು ಬಿಟ್ಟು ಬಿಟ್ಟು ಬರಬಹುದು. ಕ್ಯಾನ್ಸರ್ ಗಡ್ಡೆ ಸ್ವಲ್ಪ ದೊಡ್ಡದಾಗಿದೆ ಎಂದಾದರೆ ಆ ಜಾಗ ಊದಿಕೊಂಡು ಬಾವಿನಂತೆ ಕಾಣಿಸಿಕೊಳ್ಳಬಹುದು. ಈ ಕ್ಯಾನ್ಸರ್ ಸೋಂಕಿಗೆ ಒಳಗಾದ ಮೂಳೆಗಳು ಸಾಮಾನ್ಯ ಮೂಳೆಗಳಷ್ಟು ಗಟ್ಟಿಯಾಗಿರುವುದಿಲ್ಲ.

ಸ್ಫೂರ್ತಿ ತುಂಬಿದ ಶಾನ್


ಶಾನ್ ಸ್ವಾರ್ನರ್
ಇಂಥ ಆಸ್ಟಿಯೋ ಸರ್ಕೋಮಾದಿಂದ ಚೇತರಿಸಿಕೊಂಡಂಥ ಶೃತಿಗೆ ಬದುಕಿನ ಮುಂದಿನ ಹಾದಿಯನ್ನು ಸಮರ್ಥವಾಗಿ ಎದುರಿಸುವುದಕ್ಕೆ ಪ್ರೇರಣೆಯಾದದ್ದು, ಸ್ಫೂರ್ತಿ ನೀಡಿದ್ದು ಅಮೆರಿಕದ ಶಾನ್ ಸ್ವಾರ್ನರ್. ಎರಡೆರಡು ಬಾರಿ ಕ್ಯಾನ್ಸರ್ ತನ್ನನ್ನು ಮುತ್ತಿಕೊಂಡಾಗಲೂ ಅದನ್ನು ಎದುರಿಸಿ ಬದುಕನ್ನು ಛಲದಿಂದ ಸ್ವೀಕರಿಸಿದವನು ಶಾನ್. ಕ್ಯಾನ್ಸರ್ ನಿಂದ ಬದುಕುಳಿದು ಪರ್ವತಾರೋಹಣ ಮಾಡಿದಂಥ ಮೊದಲ ವ್ಯಕ್ತಿ ಇವನು.

ಕ್ಯಾನ್ಸರ್ ಕ್ಲೈಂಬರ್ಸ್ ಅಸೋಸಿಯೇಶನ್ (http://cancerclimber.org/home.php  ಮತ್ತು  http://www.seanswarner.com)   ಸ್ಥಾಪಿಸಿಕೊಂಡು ಕ್ಯಾನ್ಸರ್ ನಿಂದ ಬದುಕುಳಿದ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಂಥ ಕೆಲಸ ಮಾಡುತ್ತಿದ್ದಾನೆ ಶಾನ್. ಕ್ಯಾನ್ಸರ್ ಸಮಸ್ಯೆಯಿಂದ ಚೇತರಿಸಿಕೊಂಡವರಿಗೆ ಮತ್ರವಲ್ಲದೆ ಜೀವನದ ಸಮಸ್ಯೆಗಳ ಜಂಜಾಟದಲ್ಲಿರುವವರಿಗೂ ಇವನ ಜೀವನ ಪ್ರೇರಣೆಯಾಗಬಲ್ಲುದು. ಇಂಥ ಶಾನ್ ಜೀವನಗಾಥೆಯನ್ನು ಯಾವುದೋ ಪತ್ರಿಕೆಯಲ್ಲಿ ಓದಿದಂಥ ಶೃತಿಯ ಜೀವನದಲ್ಲಿ ಭರವಸೆಗಳ ರಾಶಿಯೇ ಸೃಷ್ಟಿಯಾಗಿತ್ತು. `ಎರಡೆರಡು ಬಾರಿ ಕ್ಯಾನ್ಸರ್ ಸೋಂಕಿಗೆ ಒಳಗಾದರೂ ಧೈರ್ಯ ಕುಂದದಂತೆ ಬದುಕಿರುವ ಶಾನ್ ಮುಂದೆ ನನ್ನ ಸಮಸ್ಯೆಗಳು ದೊಡ್ಡದಲ್ಲ ಎಂದು ಭಾವಿಸಿದೆ. ಜೀವನದಲ್ಲಿ ಎಂಥದ್ದೇ ಸಮಸ್ಯೆ ಬಂದರೂ ಎದುರಿಸುವ ಛಾತಿ ಈಗ ನನ್ನಲ್ಲಿದೆ. ಇದಕ್ಕೆ ಕಾರಣವಾದದ್ದು ಶಾನ್ ಜೀವನ ಚರಿತ್ರೆ. ಇತ್ತೀಚೆಗೆ ಶಾನ್ `ನನ್ನ ಬ್ಲಡ್ ರಿಪೋರ್ಟ್ ಬಂದಿದೆ. ಇನ್ನೂ ಒಂದು ವರ್ಷ ಬದುಕಲು ನನಗೆ ಅವಕಾಶ ಇದೆ' ಎಂದು ಬರೆದುಕೊಂಡಿದ್ದ. ಇದನ್ನು ಓದಿ ನನ್ನ ಕಣ್ಣುಗಳು ಜಿನುಗಿದವು. ನೋವಿನಿಂದಲ್ಲ, ಅಭಿಮಾನದಿಂದ. ಇನ್ನೂ ಒಂದು ವರ್ಷ ಬದುಕುವುದಕ್ಕೆ ಅವಕಾಶ ಇದೆ ಎಂಬ ಧನಾತ್ಮಕ ಚಿಂತನೆಯೇ ಆತನನ್ನು ಇಂದು ಅಪ್ರತಿಮ ಸಾಹಸಿಯನ್ನಾಗಿ ಮಾಡಿದೆ' ಎನ್ನುತ್ತಾಳೆ ಶೃತಿ.

ಬೆಳಕು ಚೆಲ್ಲಲಿ ದೀಪಾವಳಿ
ಶೃತಿಯ ಬದುಕಿಗೆ ಶಾನ್ ಸ್ಫೂರ್ತಿಯಾದ. `ನನ್ನ ಬದುಕು ಕೂಡಾ ಇತರರಿಗೆ ಪ್ರೇರಣೆಯಾಗಬೇಕು. ಪ್ರತಿಯೊಬ್ಬರೂ ಕೂಡಾ, ಅದರಲ್ಲೂ ಕ್ಯಾನ್ಸರ್ ನಂಥ ಸೋಂಕಿಗೆ ಒಳಗಾದವರು ಜೀವನವನ್ನು ದೃಢತೆಯಿಂದ, ಆತ್ಮವಿಶ್ವಾಸದಿಂದ ಎದುರಿಸುವಂಥ ಕಲೆಯನ್ನು ಬೆಳೆಸಿಕೊಳ್ಳಬೇಕು. ನಾನು ಕ್ಯಾನ್ಸರ್ ಸೋಂಕಿನಿಂದ ಚೇತರಿಸಿಕೊಂಡಿದ್ದೇನೆ, ಕ್ಯಾನ್ಸರ್ ನಂಥ ಸವಾಲನ್ನು ಮೆಟ್ಟಿ ನಿಂತಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ' ಎಂದು ಆತ್ಮವಿಶ್ವಾಸದಿಂದ ಬೀಗುತ್ತಾಳೆ ಶೃತಿ. ಆಸ್ಟಿಯೋ ಸರ್ಕೋಮಾ ಸೋಂಕಿನಿಂದಾಗಿ ತನ್ನ ಶಿಕ್ಷಣ ಹಳ್ಳ ಹಿಡಿಯಿತು ಎಂದು ಆಕೆ ಬೇಸರಿಸಿಕೊಂಡು ಕುಳಿತಿಲ್ಲ. ಮೈಸೂರು ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದಿಂದ ಮನಃಶಾಸ್ತ್ರ ವಿಷಯದಲ್ಲಿ ಪದವಿ ಪಡೆಯುತ್ತಿದ್ದಾಳೆ. ಜೊತೆ ಜೊತೆಗೆ ಒಂದಷ್ಟು ಬರೆಹಗಳನ್ನು ಬರೆದು ತನ್ನ ಬ್ಲಾಗ್ನಲ್ಲಿ ಪ್ರಕಟಿಸಿಕೊಳ್ಳುತ್ತಾಳೆ. ಆಕೆಯ ಒಳಗೊಬ್ಬ ಬರೆಹಗಾರ್ತಿಯಿದ್ದಾಳೆ, ಒಬ್ಬ ಮನಃಶಾಸ್ತ್ರಜ್ಞೆಯಿದ್ದಾಳೆ. ಈ ಬರೆಹಗಾರ್ತಿಗೆ ಬ್ಲಾಗ್ `ಶ್ರೀವಿರಾಮ' (http://www.shreevirama.blogspot.com) ರೂಪ ಕೊಡುತ್ತಿದ್ದರೆ, ಮನಃಶಾಸ್ತ್ರಜ್ಞೆಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿನ ಓದು ಬೆಳೆಸುತ್ತಿದೆ.

ಆತ್ಮಶಕ್ತಿ, ಮನೋಶಕ್ತಿ, ವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಶೃತಿಯೇ ಸಾಕ್ಷಿ. ಶೃತಿಯ ಜೀವನದ ಮಜಲುಗಳನ್ನು ನೋಡಿದಾಗ, ಆಕೆ ಎದುರಿಸಿದ ಸವಾಲುಗಳನ್ನು ನೆನೆಸಿದಾಗ ಕಣ್ಣುಗಳು ಮಂಜಾಗುತ್ತವೆ. ತನ್ನ ಸಮಸ್ಯೆಗಳ ವಿರುದ್ಧ ಆಕೆ ಹೋರಾಡಿದ ರೀತಿ ಅಭಿಮಾನದ ಹೊಳಹನ್ನು ಮೂಡಿಸುತ್ತದೆ. ಜೀವನವೆಂದರೆ ಅದು ಸವಾಲುಗಳ ಲೋಕ. ಆ ಲೋಕದಲ್ಲಿ ಯಶಸ್ವಿಯಾಗಿ ಹೆಜ್ಜೆಗಳನ್ನಿಡುವುದು ಸುಲಭದ ಮಾತಲ್ಲ. ದೈವಬಲವೊಂದಿದ್ದರೆ ಸಾಲದು, ಜೀವನದಲ್ಲಿ ಸಾಕಷ್ಟು ಸಂಪತ್ತು, ಹಣ, ಶ್ರೀಮಂತಿಕೆ ಇದ್ದರೂ ಪ್ರಯೋಜನವಿಲ್ಲ. ಆತ್ಮಶಕ್ತಿ, ದೃಢಸಂಕಲ್ಪ ಇಲ್ಲದಿದ್ದರೆ ಜೀವನವೇ ನಷ್ಟವಾಗುತ್ತದೆ. ನಮ್ಮಲ್ಲಿ ಅದಿಲ್ಲ, ಇದಿಲ್ಲ ಎಂದು ಕೊರಗುತ್ತಾ ಕೂರುವುದರಿಂದ ಪ್ರಯೋಜನವಿಲ್ಲ. `ಇನ್ನು ಒಂದು ವರ್ಷ ಬದುಕುವುದಕ್ಕೆ ಅವಕಾಶವಿದೆ' ಎಂಬ ಶಾನ್ ಸ್ವಾರ್ನರ್ ಮಾತಿನಲ್ಲಿರುವ ಆತ್ಮವಿಶ್ವಾಸ ನಮ್ಮಲ್ಲಿ ಮೂಡಬೇಕು. ಜೀವನವನ್ನು ಸವಾಲಾಗಿ ಸ್ವೀಕರಿಸಿರುವ ಶೃತಿಗೆ, ಆಕೆಯ ಆತ್ಮಶಕ್ತಿ, ಮನೋಶಕ್ತಿಗೆ ದೀಪಾವಳಿಯ ಈ ಶುಭ ಸಂದರ್ಭದಲ್ಲಿ ನಮೋ ಎನ್ನುತ್ತೇನೆ. ದೀಪಾವಳಿಯು ಪ್ರತಿಯೊಬ್ಬರಲ್ಲಿಯೂ ಆತ್ಮಶಕ್ತಿಯನ್ನು, ಮನೋಶಕ್ತಿಯನ್ನು ತುಂಬಿ, ಋಣಾತ್ಮಕ ಚಿಂತನೆಗಳನ್ನು ನಾಶ ಮಾಡಿ ಜೀವನದಲ್ಲಿ ಬೆಳಕುದಿಸುವಂತೆ ಮಾಡಲಿ ಎಂದು ಹಾರೈಕೆ.

Comments

  1. ಓದುತ್ತಿದ್ದ೦ತೆ,ಕಣ್ನಿನಲ್ಲಿ ನೀರು ಬರುತ್ತಿತ್ತು. ವಿಶ್ನು,ತು೦ಬಾ ಸು೦ದರವಾಗಿ ನಿರೂಪಿಸಿದ್ದೀರಿ.ಆಕರ್ಶಕ ಆಗಿದೆ.ನನಗೆ ಯೇನು ಹೇಳಬೇಕೊ ಗೊತ್ತಾಗ್ತಿಲ್ಲ.
    ಶ್ರೀಪಾದರಾವ್.ಹೆಚ್,ಆರ್.

    ReplyDelete
  2. thanks vishnu anna.....article odi khushiyaaytu. omme haleyadella haage kanna munde bandu hodavu. ninna haaraikege, ninna preetige dhanyavaadagalu.

    ReplyDelete
  3. ಆತ್ಮ ಶಕ್ತಿ ಮನೋ ಶಕ್ತಿ ಇದ್ದಾರೆ ಏನನ್ನಾದರೂ ಸಾಧಿಸ ಬಹುದು...! ಉತ್ತಮ ಲೇಖನ... ಸ್ಪೋರ್ತಿದಾಯಕವಾದ ಲೇಖನ ತುಂಬಾ ಇಷ್ಟವಾಯಿತು...

    ReplyDelete
  4. ನಿಮ್ಮೊಂದಿಗೆ ಅವರಿಗೆ ನಮ್ಮ ಹಾರೈಕೆ ಕೂಡಾ ಇದೆ,, ದೀಪಾವಳಿ ಅವರಿಗೆ ಭರವಸೆಯ ದೀಪ ತರಲಿ ಎಂದು ಹಾರೈಸುತ್ತೇನೆ, ಲೇಖನ ತುಂಬಾ ಚೆನ್ನಾಗಿದೆ.

    ReplyDelete
  5. shruthi--- nan preethi, haraike sada nin jothe irthu...

    ReplyDelete
  6. shreepadanna--- namma nirdhara hegirtho hage badukirthu... badukalli saviraru nirnayagalannu madutteve... nirnaya nirdharavagalla.. nirdhara andre adu achalavadaddu... nimma preetige chiraruni

    ReplyDelete
  7. ಶೃತಿಯ ಬ್ಲಾಗ್ ತಪ್ಪದೇ ಓದುತ್ತೇನೆ ...ಹೆಚ್ಚಿನ ವಿಚಾರ ನಿಮ್ಮಿಂದ ತಿಳಿಯಿತು. ನಿಜಕ್ಕೂ ಅವಳ ಜೀವನ ಸ್ಫೂರ್ತಿದಾಯಕವಾದದ್ದು.

    ReplyDelete
  8. ಒಳ್ಳೆಯ ಬರಹ.. ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸದ ಮುಂದೆ ಯಾವುದೇ ಆದರೂ ತಲೆಬಾಗಲೇ ಬೇಕು .. ಹಬ್ಬ ಹರುಷ ತರಲಿ

    ReplyDelete
  9. ಕಣ್ಣೆದುರಿಗೆ ಬಿಡುಗಡೆಯಾಗದಂಥಹ ನೋವನ್ನು ಇಟ್ಟುಕೊಂಡು ಬದುಕುವದು ಕಷ್ಟ...
    ನೋವು ದಿನ ನಿತ್ಯದ ಸಹಜ ಸಂಗತಿಯಾದಾಗ ಜೀವನ ಇನ್ನೂ ಕಷ್ಟ...
    ಶೃತಿ ಗೆಲ್ಲಬೇಕು...
    ಗೆಲ್ಲುತ್ತಾಳೆ ಎನ್ನುವ ಭರವಸೆ ಇದೆ...

    ನಮ್ಮೆಲ್ಲರ ಶುಭ ಹಾರೈಕೆ.. ಆಶೀರ್ವಾದ ಅವಳ ಜೊತೆ ಯಾವಾಗಲೂ ಇದೆ...

    ReplyDelete
  10. ಅಬ್ಬಾ ನಿಜವಗಿಯೂ ಮನತಟ್ಟುತ್ತದೆ ಈ ಲೇಖನ! ಶೃತಿಯವರಿಗೆ ನೂರು ನಮನಗಳು.

    ReplyDelete
  11. ಶೃತಿಯ ಆತ್ಮ ಸ್ಥೈರ್ಯ ಮತ್ತು ಧೃಢತೆ ಮೆಚ್ಚುವಂತಹುದು. ಎಲ್ಲಾ ರೋಗಿಗಗಳಲ್ಲಿ ಈ ಮಟ್ಟದ ಧೈರ್ಯ ಬಂದರೆ ಔಷಧಿಗಳ ಪ್ರಯೋಗ ೫೦% ಇಳಿಮುಖವಾಗುತ್ತವೆ... ಶೃತಿಯ ಆಯುರಾರೋಗ್ಯಕ್ಕೆ ದೀಪಾವಳಿ ಶುಭ ಘಳಿಗೆ ಶುಭತರ್ಲಿ ಎಂದು ಹಾರೈಸುತ್ತೇವೆ.

    ReplyDelete
  12. ಒಳ್ಳೆಯ ಬರಹ.ಶ್ರುತಿಯ ಆತ್ಮವಿಶ್ವಾಸ ಮತ್ತಷ್ಟು ವೃದ್ಧಿಸಲಿ ಎಂದು ಮನಸಾ ಹಾರೈಸುತ್ತೇನೆ.ಆ ಮಗುವಿನ ಬಾಳು ಬೆಳಗಲಿ ಎಂದು ಆ ದೇವರಲ್ಲಿ ನನ್ನ ಪ್ರಾರ್ಥನೆ.ನಮಸ್ಕಾರ.

    ReplyDelete
  13. olle baraha.shruti dhairya, atma vishwasakke Hats off. E dipavali oled madli heli haraike

    ReplyDelete
  14. hats off to shruthi... i read her blog regularly. good luck to her...

    you have done a good job vishnu sir...

    ReplyDelete
  15. hey nice one :) nan frnd adu i like her confidence :) adratra matadta idre time pass agidde gottagtille :)

    ReplyDelete
  16. shruthi savanne gedha hudugi avala athamashairya mechabekagide. sanna putta jagala- problem ge thelekdesikodu bp hecchu madikkluvavaru plz read it once..

    ReplyDelete
  17. ಮನಸ್ಸಿಗೆ ತಟ್ಟುವ ಲೇಖನ .. ಶ್ರುತಿ ಧೈರ್ಯ ಆತ್ಮ ವಿಶ್ವಾಸ ಇತರರಿಗೆ ಮಾದರಿ

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು