ಮಂಗಳಪ್ರಯಾಣಕ್ಕೆ ಸಿದ್ಧತೆ...


ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ. 


ಅದು ಒಂದು ಸಂಪೂರ್ಣ ಮುಚ್ಚಲ್ಪಟ್ಟ ಕೋಣೆ; ಗಾಳಿ ನುಸುಳುವುದಕ್ಕೆ ಒಂಚೂರೂ ಜಾಗವಿಲ್ಲ; ನೀರಂತೂ ಪ್ರವೇಶಿಸುವುದಕ್ಕೇ ಆಗದು; ಒಳಗಣ ಶಾಖಕ್ಕೆ ಸಾಮಾನ್ಯ ಜೀವ ಬೆಂದು ಹೋಗುವಂಥ ಪರಿಸ್ಥಿತಿ; ಆದರೂ ಆರು ಜನ ಅದರೊಳಗಿದ್ದರು; ಒಂದೆರಡು ದಿನವಲ್ಲ; ಬರೋಬ್ಬರಿ 520 ದಿನಗಳು! ಕೃತಕ ಆಮ್ಲಜನಕದ ಉಸಿರಾಟ, ಸಂಸ್ಕರಿತ ಆಹಾರ; ಇವಿಷ್ಟನ್ನೇ ಸೇವಿಸಿಕೊಂಡು ಅಷ್ಟೂ ದಿನ ಈ ಕೋಣೆಯೊಳಗಿದ್ದರು; ಕೆಲವು ದಿನಗಳ ಹಿಂದಷ್ಟೇ ಈ ಆರೂ ಜನರು ಈ ಕೋಣೆಯಿಂದ ಹೊರಬಂದಾಗ ಅವರು ಒಂದಷ್ಟು ಸೊರಗಿದ್ದಾರೆಯೋ ಎಂದೆನಿಸುತ್ತಿತ್ತು; ಆದರೂ ಸಹ ಅವರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು; ಹೊಸದೊಂದು ಸಾಹಸಕ್ಕೆ ಅಣಿಯಾದ, ಯುದ್ಧವನ್ನು ಜಯಿಸಬಲ್ಲೆ ಎಂಬ ದೃಢವಿಶ್ವಾಸ ಹೊಂದಿರುವ ರಣಕಲಿಯ ಕಳೆ ಅವರಲ್ಲಿತ್ತು.

ಅವರು ಬಾಹ್ಯಾಕಾಶ ವಿಜ್ಞಾನಿಗಳು. 2030ರಲ್ಲಿ ಮಂಗಳಗ್ರಹದ ಮೇಲೆ ಪಾದಾರ್ಪಣೆ ಮಾಡಲು ಸಿದ್ಧವಾಗುತ್ತಿರುವ ಅವರು ಇದ್ದದ್ದು, ಮಂಗಳನಲ್ಲಿ ಇರಬಹುದಾದಂಥ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಲ್ಪಟ್ಟಂಥ ಕೋಣೆಯೊಳಗೆ. ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ.


ಮಂಗಳನಲ್ಲಿ ಇಳಿಯುವ ಪ್ರಯತ್ನ
ಮಂಗಳನಲ್ಲಿ ಜೀವಾಸ್ತಿತ್ವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಸಂಶೋಧನೆ ನಡೆಸುವುದಕ್ಕಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಹಲವಾರು ಉಪಗ್ರಹಗಳು ಇದೇ ಕೆಲಸವನ್ನು ಮಾಡುತ್ತಿವೆ. ಆದರೆ ಇದುವರೆಗೆ ಮಾನವನನ್ನು ಮಂಗಳನಲ್ಲಿ ಇಳಿಸುವಂಥ ಪ್ರಯತ್ನ ನಡೆದಿಲ್ಲ. ಅದಕ್ಕೆ ಸಿದ್ಧತೆಯಷ್ಟೇ ಈಗ ಶುರುವಾಗಿದೆ. ಇದೇ ಸಿದ್ಧತೆಗಳ ಸಾಲಿಗೆ ಈ 520 ದಿನಗಳ ತರಬೇತಿಯೂ ಸೇರುತ್ತದೆ. ಮಂಗಳನಲ್ಲಿ ನೀರು, ಗಾಳಿ ಇರುವ ಬಗ್ಗೆ ಈಗಾಗಲೇ ನಮ್ಮಲ್ಲಿ ಮಾಹಿತಿ ಇದೆ. ಆದರೆ ಪ್ರತ್ಯಕ್ಷವಾಗಿ ಮಂಗಳಗ್ರಹಕ್ಕೆ ಹೋಗಿ ಅಲ್ಲಿನ ಸ್ಥಿತಿಯನ್ನು ನೀಡುವಾಗ ಸಿಕ್ಕಿದಷ್ಟು ಮಾಹಿತಿಗಳು ಉಪಗ್ರಹದಿಂದ ಸಿಗಲಾರವು. ಜೊತೆಗೆ ಮಂಗಳನಲ್ಲಿ ಜೀವಾಸ್ತಿತ್ವ ಇದೆಯೇ? ಮಾನವ ಅಲ್ಲಿ ವಾಸಿಸುವುದಕ್ಕೆ ಯಾಗ್ಯವಾದಂಥ ಪರಿಸರ ಇದೆಯೆ ಎಂಬುದನ್ನು ನಿರೂಪಿಸಬೇಕು ಎಂದಾದರೆ ಮಂಗಳಗ್ರಹದ ಮೇಲೆ ಕಾಲಿಡಲೇಬೇಕು. ಅದು ಸಾಧ್ಯವಾಗಬೇಕು ಎಂದಾದರೆ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಅದಕ್ಕೆ ಅಗತ್ಯವಿರುವಂಥ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಯಾವುದೇ ಒಂದು ಹೊಸ ಪರಿಸರಕ್ಕೆ ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಂತ ಹಂತವಾಗಿ ಅಲ್ಲಿನ ಪರಿಸರಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳಬೇಕಾಗುತ್ತದೆ. ಕರಾವಳಿ ಪ್ರದೇಶದಿಂದ ಬಂದಂಥ ಜನರಿಗೆ ಬೆಂಗಳೂರು ಒಗ್ಗುವುದು ಕಷ್ಟ. ಘಟ್ಟದ ಮೇಲಿನವರಿಗೆ ಕರಾವಳಿ ಒಗ್ಗುವುದು ಕಷ್ಟ. ಪ್ರತಿಯೊಂದಕ್ಕೂ ಹೊಂದಿಕೊಳ್ಳುವುದಕ್ಕೆ ಒಂದಷ್ಟು ಸಮಯ ಬೇಕೇ ಬೇಕಾಗುತ್ತದೆ. ನಮ್ಮ ಭೂಮಿಯಲ್ಲಿನ ಪರಿಸರಕ್ಕೇ ಹೊಂದಿಕೊಳ್ಳುವುದು ನಮಗೆ ಅಷ್ಟೊಂದು ಕಷ್ಟವಾಗುತ್ತದೆ ಎಂದಾದರೆ ಇನ್ಯಾವುದೋ ಗ್ರಹಕ್ಕೆ ಹೊಂದಿಕೊಳ್ಳುವುದು? ಅದಕ್ಕಾಗಿಯೇ ಈ 520 ದಿನಗಳ ತರಬೇತಿ. ಪ್ರತಿಯೊಬ್ಬ ಗಗನಯಾನಿಗೂ ಸಹ ಈ ತರಬೇತಿಗೆ 1 ಲಕ್ಷ ಡಾಲರ್ ವೇತನ ನೀಡಲಾಗಿದೆಯಂತೆ.

ಗಗನಯಾನಿಗಳು ಈ ಕೋಣೆಯ ಒಳಗೆ ತರಬೇತಿ ಪಡೆಯುತ್ತಿರಬೇಕಾದರೆ, ತಮ್ಮ ನಿಯಂತ್ರಣ ಕೊಠಡಿಯ ಜೊತೆಗೆ, ತಮ್ಮ ಸಂಬಂಧಿಕರ ಜೊತೆಗೆ ಅಂತರ್ಜಾಲದ ಮೂಲಕ ಸಂಪರ್ಕ ಸಾಧಿಸಿದರು .ಆದರೆ ಗಗನಯಾನ ಮಾಡುವಾಗ ಯಾವ ರೀತಿ ಸಂಪರ್ಕ ವ್ಯತ್ಯಯ ಆಗುತ್ತದೆಯೋ ಅಂಥದ್ದೇ ಅನುಭವವನ್ನು ಕೊಡುವುದಕ್ಕೆ ಬೇಕಾಗಿ ಬೇಕೆಂದೇ ಅಂತರ್ಜಾಲದ ಸಂಪರ್ಕಕ್ಕೆ ಆಗಾಗ ತಡೆ ಒಡ್ಡಲಾಗಿತ್ತು. ಆಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸುವಾಗ ಗಗನ ಯಾನಿಗಳು ಸಂಸ್ಕರಿತ, ಪ್ಯಾಕ್ ಮಾಡಿದಂಥ ಆಹಾರ ಸೇವಿಸುತ್ತಾರೆ. ಇವರಿಗೂ ಅಂಥದ್ದೇ ಆಹಾರವನ್ನು ಕೊಡಲಾಯಿತು. ಒಟ್ಟಿನಲ್ಲಿ ಗಗನಯಾನದ ಅನುಭವವನ್ನೇ ಕೊಡುವಂಥ ಪ್ರಯತ್ನ ಇಲ್ಲಿ ನಡೆಯಿತು.

ಸುಲಭದ ಯಾನವಲ್ಲ
ಮಂಗಳನಲ್ಲಿ ಪ್ರಯಾಣಿಸುವ ಕನಸನ್ನು ನಾವು ಕಾಣುತ್ತಿದ್ದೇವೆ ನಿಜ. ಆದರೆ ಇದೇನೂ ಸುಲಭದ ವಿಚಾರವಲ್ಲ. ಇದಕ್ಕೆ ಅಪಾರವಾದ ಹಣ ವ್ಯಯವಾಗುತ್ತದೆ. ಜೊತೆಗೆ ಅತ್ಯಾಧುನಿಕವಾದಂಥ ತಂತ್ರಜ್ಞಾನದ ಅವಶ್ಯಕತೆಯಿದೆ. ತಂತ್ರಜ್ಞಾನ ಅದೆಷ್ಟು ಅಭಿವೃದ್ಧಿ ಹೊಂದಿದರೂ ಸಹ ಮಂಗಳನ ಯಾನದಲ್ಲಿ ಯಾವ ಸಮಸ್ಯೆ ಬಂದರೂ ಅದು ಕಠಿಣವಾದ ಪ್ರತಿಕ್ರಿಯೆಯನ್ನು ಪಡೆಯುತ್ತದೆ. ಅದರ ಬಗ್ಗೆ ಅಸಮಾಧಾನಗಳು ಮೂಡುವ ಸಾಧ್ಯತೆಗಳೂ ಇಲ್ಲವೆಂದಲ್ಲ. ಹೀಗಾಗಿ ಅತೀವ ಎಚ್ಚರದ ಅಗತ್ಯವಿರುವುದರಿಂದ ಮಂಗಳನ ಯಾನ ಇನ್ನಷ್ಟು ವಿಳಂಬವಾಗುತ್ತಿದೆ. 2030ರ ವೇಳೆಗೆ ಮೊದಲ ಬಾರಿಗೆ ಮಂಗಳನ ಅಂಗಳದಲ್ಲಿ ಕಾಲೂರುವ ನಿರೀಕ್ಷೆಯಿದೆಯಾದರೂ ಅದರ ಬಗ್ಗೆ ಇನ್ನೂ ಸ್ಪಷ್ಟವಾದ ನಿರ್ಧಾರಗಳು ಹೊಡಬಿದ್ದಿಲ್ಲ.

2030ರ ವೇಳೆಗೆ ಮಂಗಳನಲ್ಲಿಗೆ ಗಗನನೌಕೆ ಹೋಗುವ ಯೋಜನೆ ನಾಸಾದಲ್ಲಿದೆ. ಆದರೆ ನೇರವಾಗಿ ಮಂಗಳನ ಮೇಲೆ ಇಳಿಯುವುದಿಲ್ಲ. ಬದಲಾಗಿ, 2025ರ ವೇಳೆಗೆ ಮಂಗಳನಿಗೆ ತೀರಾ ಸಮೀಪದಲ್ಲಿರುವಂಥ  ಕ್ಷುದ್ರಗ್ರಹವೊಂದರ ಮೇಲೆ ಇಳಿಯಲಾಗುತ್ತದೆ. ಅಲ್ಲಿಂದ 2030ರ ವೇಳೆಗೆ ಮಂಗಳನಲ್ಲಿಗೆ ತಲುಪುವ ಯೋಜನೆಯಿದೆ,
ಈ ಯಾನಕ್ಕೆ ಸಿದ್ಧಗೊಳ್ಳುತ್ತಿರುವ ವಿಜ್ಞಾನಿಗಳ ತಂಡದಲ್ಲಿ ಇರುವವರೆಲ್ಲರೂ ಪುರುಷರೇ! ಮಹಿಳೆಯರನ್ನೂ ಕೆಲವರನ್ನು ಆಯ್ಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಆದರೆ ಕೊನೇ ಗಳಿಗೆಯಲ್ಲಿ ಈ ಯೋಚನೆಯನ್ನು ಕೈಬಿಟ್ಟು ಪುರುಷರನ್ನು ಮಾತ್ರ ಈ ತರಬೇತಿಗೆ ಒಳಪಡಿಸುವ ನಿರ್ಧಾರ ಮಾಡಲಾಯಿತು. ಯಾಕೆ ಹೀಗೆ? ಇಲ್ಲೂ ಮಹಿಳೆಯರನ್ನು ವಂಚಿಸಲಾಗುತ್ತಿದೆಯೇ ಎಂಬ ಪ್ರಶ್ನೆಗಳು ನುಸುಳಬಹುದು. ಆದರೆ ಇದರ ಹಿಂದೆಯೂ ಒಂದು ಕಥೆಯಿದೆ.

1999-2000ದಲ್ಲಿ ಇದೇ ರೀತಿಯ ಪ್ರಯೋಗವನ್ನು ಮಾಡಲಾಗಿತ್ತು. ಆಗ ಕೆನಡಾದ ಒಬ್ಬ ಮಹಿಳಾ ಗಗನಯಾನಿಯು ಸಹವಿಜ್ಞಾನಿ, ರಷ್ಯಾದ ಗಗನಯಾನಿ ತನಗೆ ಬಲಾತ್ಕಾರವಾಗಿ ಚುಂಬಿಸಿದ್ದಾಗಿ ದೂರು ನೀಡಿದ್ದರು. ಅಲ್ಲದೆ, ಇದೇ ವಿಚಾರವಾಗಿ ಇಬ್ಬರು ಪುರುಷ ಗಗನಯಾನಿಗಳ ನಡುವೆ ನಡೆದಂಥ ಕಲಹ ತರಬೇತಿ ಕೇಂದ್ರದಲ್ಲಿ ರಕ್ತಸಿಂಚನವಾಗುವುದಕ್ಕೆ ಕಾರಣವಾಗಿತ್ತು. ಈ ಕಹಿ ಘಟನೆಯನ್ನು ನೆನೆಸಿಕೊಂಡ ಸಂಘಟಕರು ತರಬೇತಿಗೆ ಕೇವಲ ಪುರುಷರನ್ನಷ್ಟೇ ಆಯ್ಕೆ ಮಾಡಿದ್ದಾರೆ. ಹೌದು, ಇಂಥ ಘಟನೆಗಳು ನಡೆದರೆ ಅದನ್ನು ತಡೆಯುವುದು ಕಷ್ಟವೇ. ಅದನ್ನು ಅರ್ಥ ಮಾಡಿಕೊಳ್ಳಬೇಕು ನಿಜ. ಆದರೆ ಸಂಘಟಕರು ಈ ವಿಚಾರದಲ್ಲಿ ಸಮಸ್ಯೆಗಳನ್ನು ತಮ್ಮ ಮೈಮೇಲೆ ಎಳೆದುಕೊಳ್ಳಲು ಸಿದ್ಧರಿಲ್ಲ.

ನಿರೀಕ್ಷೆಗಳು ಈಡೇರಿಯಾವೇ?
ಮಂಗಳಗ್ರಹದ ಬಗ್ಗೆ ನಮ್ಮಲ್ಲಿ ಹಲವಾರು ನಿರೀಕ್ಷೆಗಳಿವೆ. ಅಲ್ಲಿ ಬೆಟ್ಟ, ಪರ್ವತಗಳಿವೆ. ನೀರಿನ ಸಾಗರವೇ ಇದೆ, ಮಂಜುಗಡ್ಡೆಯಿದೆ... ಹೀಗೆ ಹಲವಾರು ವಿಚಾರಗಳನ್ನು ಉಪಗ್ರಹಾಧಾರಿತ ಸಂಶೋಧನೆಗಳು ಬಹಿರಂಗಪಡಿಸಿದಾಗ ಅಚ್ಚರಿಯ ಕೂಪದಲ್ಲಿ ಬಿದ್ದಿದ್ದೇವೆ. ಆದರೆ ಇವೆಲ್ಲ ಅಲ್ಲದೆ, ಮಂಗಳ ಗ್ರಹದಲ್ಲಿ ಇನ್ನೂ ಏನೇನಿವೆ? ಅಥವಾ ಈಗ ಅಲ್ಲಿ ಏನೆಲ್ಲ ಇವೆ ಎಂದು ನಾವು ನಂಬಿದ್ದೇವೆಯೋ ಅವೆಲ್ಲ ಅಲ್ಲಿ ನಿಜಕ್ಕೂ ಇವೆಯೇ? ಮಾರ್ಸ್500 ಯೋಜನೆ ಹಲವಾರು ನಿರೀಕ್ಷೆಗಳನ್ನು, ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಎಲ್ಲಿ ನಿರೀಕ್ಷೆಗಳಿರುತ್ತವೆಯೋ ಅಲ್ಲಿ ವಿವಾದಗಳು ಸೃಷ್ಟಿಯಾಗುವುದು ಸಾಮಾನ್ಯ. ಮಂಗಳನಲ್ಲಿಗೆ ಪ್ರಯಾಣಿಸುವ ಯೋಜನೆಯಲ್ಲಿಯೂ ಹಲವಾರು ವಿವಾದಗಳು ಸೃಷ್ಟಿಯಾಗಬಹುದು; ಒಂದು ವೇಳೆ ವಿವಾದಗಳು ಹುಟ್ಟಿಕೊಂಡದ್ದೇ ಆದಲ್ಲಿ ಅದನ್ನೆಲ್ಲ ಹೇಗೆ ನಿಭಾಯಿಸಲಾಗುತ್ತದೆ? ಇವೆಲ್ಲದಕ್ಕಿಂತ ಹೆಚ್ಚಾಗಿ ಮಂಗಳನಲ್ಲಿ ಜೀವಾಸ್ತಿತ್ವ ಇದೆಯೇ? ಅದಕ್ಕೆ ಪೂರಕವಾದ ವಾತಾವರಣ ಇದೆಯೇ? ಒಂದು ವೇಳೆ ಜೀವಾಸ್ತಿತ್ವ ಇದ್ದದ್ದೇ ಆದಲ್ಲಿ ಅದರು ರೂಪ, ಜೀವನ ಹೇಗಿದೆ? ಪ್ರಶ್ನೆಗಳು ಮಂಗಳನಲ್ಲಿ ಯಾನ ಮಾಡಿ ಬಂದ ಬಳಿಕವೂ ಮುಂದುವರಿಯುತ್ತವೆ. ಎಷ್ಟಕ್ಕೆ ಉತ್ತರಗಳು ಸಿಗುತ್ತವೆ ಎಂಬುದನ್ನು ಕಾದು ನೋಡಬೇಕು.

Comments

  1. ಒಳ್ಳೇ ಮಾಹಿತಿ. ಆದರೆ ೨೦೩೦ ರ ಮಂಗಳ ಯಾತ್ರೆಗೆ ಹೋಗುವವರನ್ನು ಈಗಲೇ ೫೨೦ ದಿನಗಳ ತರಬೇತಿಗೆ ಒಳಪಡಿಸುವುದು, ಅದೂ ಒಂದು ಲಕ್ಷ ಡಾಲರ್ ವೆಚ್ಚದಲ್ಲಿ.. ಅಂದರೆ.. ಇನ್ನೂ ೨೨ ವರ್ಷಗಳ ಸಮಯವಿದೆ. ೨೦೨೫ ಅಂದರೂ ಇನ್ನೂ ೧೭ ವರ್ಷಗಳ ಅವಧಿ ಇದೆ. ಅಲ್ಲಿಯವರೆಗೆ ಅವರ ದೇಹಸ್ಥಿತಿ ಹೀಗೆಯೇ ಇರುತ್ತದೆಯೇ? ಈಗಿದ್ದ ಹಾಗೆಯೇ ಇನ್ನು ಹತ್ತು ವರ್ಷದ ನಂತರ ಇರುವುದು ಕಷ್ಟ. ಅಂತಹದರಲ್ಲಿ ಮತ್ತೆ ಭೂ ವಾತಾವರಣಕ್ಕೆ ವಾಪಾಸಾಗಿರುವ ಇವರ ದೇಹ ೧೭ ವರ್ಷಗಳವರೆಗೆ ಈ ತರಬೇತಿಯನ್ನು ನೆನಪಿಡುವುದೇ ?
    ಅಥವಾ ಪದೇ ಪದೇ ೫೨೦ ದಿನಗಳ ತರಬೇತಿ ಕೊಡಬೇಕಾಗುತ್ತದೆಯೇ? ಅಂದರೆ ಎಷ್ಟು ಕಾಲಾವಧಿಯಲ್ಲಿ ತರಬೇತಿಯನ್ನು ಪುನರಾವರ್ತಿಸಬೇಕು ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತಿದೆ. ಈ ವಿಷಯದಲ್ಲಿ ಸ್ಪಷ್ಟತೆಯ ಅವಶ್ಯಕತೆಯಿತ್ತು ಅನಿಸುತ್ತಿದೆ. ಹೊರತಾಗಿ ಒಳ್ಳೇ ಲೇಖನ

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು