ಅಳಿದ ಬಳಿಕ ಚಿಂತಿಸಿ ಫಲವೇನು?
ಉಲ್ಕಾಪಾತದಂಥ ಘಟನೆ ಸಂಭವಿಸಿದರೆ ಅದನ್ನು ತಡೆಯುವುದಕ್ಕೆ ನಮ್ಮಿಂದಾಗದು. ಭೂಮಿಯಾಳದಿಂದ ನುಗ್ಗಿ ಬರುವ ಜ್ವಾಲಾಮುಖಿಯನ್ನು ತಡೆಯಲು ಹೊರಟರೆ ಬೆಂಕಿ ಕೆಂಡವನ್ನು ರಟ್ಟಿನ ಪೆಟ್ಟಿಗೆಯೊಳಗೆ ಅಡಗಿಸಿಡುವ ಸಾಹಸ ಮಾಡಿದಂತಾದೀತು. ಹಾಗಂತ ಮಾನವ ಸೃಷ್ಟಿಸಿರುವ, ಸೃಷ್ಟಿಸುತ್ತಿರುವ ಪ್ರತಿಕೂಲ ವಿಚಾರಗಳಿಂದಾಗಿ ಜೀವಿಗಳು ಅವಸಾನಗೊಳ್ಳುವುದನ್ನು ತಡೆಯುವ ಪ್ರಯತ್ನ ಮಾಡಬಹುದಲ್ಲವೇ?
ಇದ್ದಾಗ ಗೊತ್ತಾಗದ ಮೌಲ್ಯ ಸತ್ತ ಮೇಲೆ ಗೊತ್ತಾಗುತ್ತದೆಯಂತೆ! ಇದು ಸಾರ್ವತ್ರಿಕವಾಗಿ ಅನ್ವಯವಾಗುವಂಥ ಮಾತು. ಅದು ಮನುಷ್ಯರೇ ಇರಲಿ, ಪ್ರಾಣಿಗಳೇ ಇರಲಿ ಯಾವ ಜೀವಿಯೇ ಆದರೂ ಆದು ಇಲ್ಲದಿದ್ದಾಗಲೇ ಅದರ ಬಗ್ಗೆ ಕುತೂಹಲ ಹೆಚ್ಚುತ್ತದೆ. ಈ ಮಾತು ಡೈನೋಸಾರ್ ಗಳ ವಿಚಾರದಲ್ಲಿ ಸಮರ್ಪಕವಾಗಿ ಅನ್ವಯವಾಗುತ್ತದೆ. ಹಲವು ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ಇದ್ದವು ಎಂದು ಹೇಳಲಾಗುವಂಥ ಡೈನೋಸಾರ್ ಗಳು ಹೇಗಿದ್ದವು? ಅವುಗಳ ಶಾರೀರಿಕ ರಚನೆ ಹೇಗಿತ್ತು? ಅವುಗಳು ನಾವಂದುಕೊಂಡಿರುವಂತೆಯೇ ಕ್ರೂರ ಮೃಗಗಳಾಗಿದ್ದವೇ? ಡೈನೋಸಾ ರ್ ಗ ಳ ಬಗೆಗೆ ಪ್ರಶ್ನೆಗಳು ಹುಟ್ಟಿಕೊಳ್ಳುವುದಕ್ಕೆ ಶುರುವಾಗಿ ದಶಕಗಳೇ ಕಳೆದವು. ಸಮರ್ಪಕವಾದ ಉತ್ತರಗಳಿಗೆ ಮಾತ್ರ ಇನ್ನೂ ಹುಡುಕಲಾಗುತ್ತಿದೆ. ಡೈನೋಸಾರ್ ಗಳ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸುತ್ತಿದ್ದಾರೆ.
ಅವರ ಸಂಶೋಧನೆಯ ಪ್ರಕಾರ ಕೇವಲ ಉಲ್ಕಾಪಾತವೊಂದೇ ಡೈನೋಸಾ ರ್ ಗ ಳ ಅಳಿವೆಗೆ ಕಾರಣವಲ್ಲ; ಬದಲಾಗಿ ಅಂದಿನ ಕಾಲದಲ್ಲಿ ಈಗಿನ ಫ್ರಾನ್ಸ್ ಗಿಂತಲೂ ವಿಸ್ತಾರವಾಗಿದ್ದಂಥ ಪಶ್ಚಿಮ ಭಾರತಕ್ಕೆ ತೀರಾ ಅಮೀಪದಲ್ಲಿ ಸ್ಫೋಟಿಸಿದಂಥ ಜ್ವಾಲಾಮುಖಿಯ ಕಾರಣದಿಂದಾಗಿ ಡೈನೋಸಾರ್ ಗಳು ಸಾಮೂಹಿಕ ನಾಶಕ್ಕೆ ಒಳಗಾಗಿರಬೇಕು ಎಂದು ಈ ತಂಡ ಹೇಳಿದೆ. ಇದೇ ವಿವಿಯ ಇನ್ನೊಂದು ತಂಡ ಅತಿ ದೊಡ್ಡ ಗಾತ್ರದ ಉಲ್ಕೆಯೊಂದು ಭೂಮಿಗೆ ಅಪ್ಪಳಿಸಿದ ಕಾರಣದಿಂದಾಗಿ ಉಂಟಾದ ಘರ್ಷಣೆಯ ಪರಿಣಾಮವಾಗಿ ಭಾರೀ ಶಕ್ತಿಯ ಜ್ವಾಲಾಮುಖಿ ಸ್ಫೋಟಗೊಂಡಿರಬೇಕು ಎಂದಿದೆ. ಒಟ್ಟಿನಲ್ಲಿ ಈ ಎರಡೂ ತಂಡಗಳ ಸಂಶೋಧನೆಗಳ ಪ್ರಕಾರ ಡೈನೋಸಾರ್ ಗಳ ಸಾಮೂಹಿಕ ನಾಶಕ್ಕೆ ಒಂದೇ ಕಾರಣವಲ್ಲ; ಎರಡು ಕಾರಣಗಳೂ ಅಲ್ಲ; ಅದಕ್ಕೆ ಹಲವಾರು ಕಾರಣಗಳೇ ಇದ್ದಿರಬೇಕು ಎಂಬುದು ಸ್ಪಷ್ಟವಾಗುತ್ತದೆ. ಅಂದರೆ ಡೈನೋಸಾರ್ ಗಳ ಸಮೂಹನಾಶಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಇನ್ನೂ ಸಿಕ್ಕಿಲ್ಲ ಎಂದಾಯಿತು.
ಡೆಕ್ಕನ್ ಟ್ರಾಪ್

ಉಲ್ಕೆಯ ಘರ್ಷಣೆ
ಕೆಲ್ಲರ್ ಅವರ ನೇತೃತ್ವದ್ದೇ ಇನ್ನೊಂದು ತಂಡ ಭೂಮಿಗೆ ಭಾರೀ ಗಾತ್ರದ ಉಲ್ಕೆಯೊಂದು ಅಪ್ಪಳಿಸಿದ ಪರಿಣಾಮವೂ ಸಹ ಡೈನೋಸಾರ್ ಗಳ ಅಳಿವಿಗೆ ಕಾರಣವಾಗಿದೆ ಎಂದು ಹೇಳಿದೆ. ಡೆಕ್ಕನ್ ಜ್ವಾಲಾಮುಖಿಯಿಂದಾಗಿ ಅಳಿದು ಉಳಿದಂಥ ಕೆಲವೇ ಕೆಲವು ತಳಿಗಳನ್ನು ಈ ಉಲ್ಕಾಪಾತ ಬಲಿತೆಗೆದುಕೊಂಡಿರಬೇಕು ಎಂದು ಈ ತಂಡ ಹೇಳಿದೆ. ಡೆಕ್ಕನ್ ಟ್ರಾಪ್ ಗಿಂತ ಸುಮಾರು 600 ಮೈಲಿ ಪೂರ್ವದಲ್ಲಿ ಉಲ್ಕೆಯು ಅಪ್ಪಳಿಸಿರಬೇಕು. ಇದರ ಅಧಿಕ ಪರಿಣಾಮ ಭಾರತ ಮತ್ತು ಮೇಘಾಲಯಗಳಲ್ಲಿ ಕಂಡುಬಂದಿರಬೇಕು. ಸಮುದ್ರದ ಯಾವ ಭಾಗದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿತ್ತೋ ಅದಕ್ಕೆ ತೀರಾ ಸಮೀಪದಲ್ಲಿಯೇ ಉಲ್ಕೆಯೂ ಅಪ್ಪಳಿಸಿದ್ದಿರಬಹುದು. ಇದರಿಂದಾಗಿ ಕಾಕತಾಳೀಯವಾಗಿ ಪರಿಣಾಮ ಘೋರವಾಗಿದೆ.
ಕಾಕತಾಳೀಯವೋ ಅಥವಾ ಇನ್ಯಾವುದೇ ಕಾರಣವೋ ಈ ಎರಡೂ ಘಟನೆಗಳು ಕೂಡಾ ಡೈನೋಸಾರ್ ಗಳ ಸಮೂಹ ನಾಶಕ್ಕೆ ಕಾರಣವಾದದ್ದಂತೂ ಖಂಡಿತ. ಇದರ ಜೊತೆಗೆ ಇನ್ನೂ ಹಲವು ಕಾರಣಗಳೂ ಇರಬಹುದು ಎಂಬುದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಾಗದು. ಇಂಗಾಲ ಮತ್ತು ಗಂಧಕದ ಡೈ ಆಕ್ಸೈಡುಗಳು ವಾತಾವರಣದಲ್ಲಿ ವ್ಯಾಪಕ ಬದಲಾವಣೆ ತರುವುದಕ್ಕೆ ಕಾರಣವಾಗಿದ್ದವು ಎಂಬುದೂ ನಿಜ. ಆಮ್ಲ ಮಳೆ ಜೀವಿಗಳನ್ನು ನಾಶ ಮಾಡಬಲ್ಲುದು ಎಂಬ ವಿಚಾರವೂ ನಮಗೆ ತಿಳಿದದ್ದೇ. ಇಂತಿರುವಾಗ ನಾವು ಪ್ರಸ್ತುತ ಮಾಡಬೇಕಾದ್ದೇನು ಎಂಬ ಪ್ರಶ್ನೆ ಕಾಡುತ್ತದೆ.
ಪರಿಸರ ರಕ್ಷಣೆ
ಡೈನೋಸಾರ್ ಗಳು ಅಳಿದು ಹಲವು ಸಾವಿರ ಕೋಟಿ ವರ್ಷಗಳಾದವು. ಇನ್ನು ಅವುಗಳನ್ನು ಮರುಸೃಷ್ಟಿ ಮಾಡುವುದು ಕಷ್ಟ. ಅಂಥ ಅಗತ್ಯವೂ ಇಲ್ಲ. ಆದರೆ ಡೈನೋಸಾರ್ ಗಳ ಅಳಿವು ನಮ್ಮಲ್ಲಿ ಜಾಗೃತಿ ಮೂಡಿಸುವಂಥ ಕೆಲಸ ಮಾಡಬೇಕು. ಡೈನೋಸಾರ್ ಗಳ ಅಳಿವಿಗೆ ಕಾರಣ ಏನು ಎಂಬುದು ಸ್ಪಷ್ಟವಾಗಿ ನಮಗೆ ತಿಳಿದಿಲ್ಲ. ಒಟ್ಟಿನಲ್ಲಿ ಪರಿಸರದಲ್ಲಾದಂಥ ವ್ಯಾಪಕ ಬದಲಾವಣೆಗಳು ಡೈನೋಸಾರ್ ಗಳ ಅಳಿವಿಗೆ ಕಾರಣವಾಗಿರುಬಹು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಇದನ್ನೇ ಪ್ರಸ್ತುತ ಪ್ರಪಂಚದೊಂದಿಗೆ ಸಮೀಕರಿಸಿದಾಗ ನಮ್ಮೊಳಗೆ ಜ್ಞಾನೋದಯವಾದರೆ ಈಗ ಅಳಿವಿನ ಅಂಚಿಗೆ ಬಂದು ನಿಂತಿರುವ ಪ್ರಾಣಿಗಳಾದರೂ ಉಳಿದುಕೊಂಡಾವು.
ಪ್ರಸ್ತತ ಭೂಮಿಯಲ್ಲಿನ ವಾತಾವರಣದಲ್ಲಿಯೂ ವ್ಯಾಪಕ ಬದಲಾವಣೆಗಳಾಗುತ್ತಿವೆ. ಜಾಗತಿಕ ತಾಪಮಾನ, ಅರಣ್ಯ ನಾಶ, ಇಂಗಾಲದ ಏರಿಕೆ, ಓಜೋನ್ ಕ್ಷೀಣಗೊಳ್ಳುವಿಕೆ... ಪಟ್ಟಿ ಮಾಡುತ್ತಾ ಹೋದರೆ ಇಂದಿನ ಪರಿಸರದಲ್ಲಾಗುತ್ತಿರುವ ಪ್ರತಿಕೂಲ ಬದಲಾವಣೆಗಳು ಡೈನೋಸಾರ್ ಗಳು ಅವಸಾನವಾದ ಕಾಲದಲ್ಲಿ ಆದಂಥ ಪ್ರತಿಕೂಲ ಬದಲಾವಣೆಗಳಿಗಿಂತಲೂ ಆತಂಕಕಾರಿ ಎಂಬುದು ನಿಜ. ಈಗಾಗಲೇ ಅಳಿದು ಹೋದ ಡೈನೋಸಾರ್ ಗಳ ಬಗ್ಗೆ ಚಿಂತಿಸುತ್ತಾ ಕಾಲಹರಣ ಮಾಡುವುದು ಸಲ್ಲ. ಈಗಲೂ ಉಲ್ಕಾಪಾತದಂಥ ಘಟನೆ ಸಂಭವಿಸಿದರೆ ಅದನ್ನು ತಡೆಯುವುದಕ್ಕೆ ನಮ್ಮಿಂದಾಗದು. ಭೂಮಿಯಾಳದಿಂದ ನುಗ್ಗಿ ಬರುವ ಜ್ವಾಲಾಮುಖಿಯನ್ನು ತಡೆಯಲು ಹೊರಟರೆ ಬೆಂಕಿ ಕೆಂಡವನ್ನು ರಟ್ಟಿನ ಪೆಟ್ಟಿಗೆಯೊಳಗೆ ಅಡಗಿಸಿಡುವ ಸಾಹಸ ಮಾಡಿದಂತಾದೀತು. ಹಾಗಂತ ಮಾನವ ಸೃಷ್ಟಿಸಿರುವ, ಸೃಷ್ಟಿಸುತ್ತಿರುವ ಪ್ರತಿಕೂಲ ವಿಚಾರಗಳಿಂದಾಗಿ ಜೀವಿಗಳು ಅವಸಾನಗೊಳ್ಳುವುದನ್ನು ತಡೆಯುವ ಪ್ರಯತ್ನ ಮಾಡಬಹುದಲ್ಲವೇ? ಇಲ್ಲದಿದ್ದರೆ ನಾವು ಇಂದು ಡೈನೋಸಾರ್ ಗಳ ಬಗ್ಗೆ ತಲೆಕೆಡಿಸಿಕೊಂಡಂತೆ ನಮ್ಮ ಮುಂದಿನ ಪೀಳಿಗೆಯ ಜನರು ಪ್ರಸ್ತುತ ಅವಸಾನದ ಅಂಚಿಗೆ ಬಂದಿರುವ ಜೀವಿಗಳು ಹೇಗೆ ನಾಶ ಹೊಂದಿದವು ಎಂದು ಸಂಶೋಧನೆ ಮಾಡುವಂಥ ಪರಿಸ್ಥಿತಿ ಬಂದೀತು! ನಮ್ಮ ಮುಂದಿನ ಪೀಳಿಗೆಗೆ ಅಂಥದ್ದೊಂದು ಕೆಲಸವನ್ನು ಕೊಡಬೇಕೇ? ಯೋಚಿಸಿ.
very informative....nice article.
ReplyDelete