ಶನಿಯಲ್ಲೊಂದು ಮ್ಯಾಜಿಕ್ ವಾತಾವರಣ

ಭೂಮ್ಯೇತರ ಆಕಾಶಕಾಯಗಳು ಸೇರಿದಂತೆ ಬಾಹ್ಯ ಜಗತ್ತಿನ ಬಗ್ಗೆ ಒಂದೇ ವಿಚಾರಗಳು ಬಯಲಾಗುತ್ತಾ ಹೋದಂತೆ ಅವುಗಳ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗಿ, ನಾವು ತಿಳಿದುಕೊಂಡದ್ದರ ಆಚೆಗೆ ಏನಿದೆ ಎಂಬುದನ್ನು ಹಣಕಿ ನೋಡಬೇಕೆನಿಸುತ್ತದೆ. ವೈಜ್ಞಾನಿಕ ಜಗತ್ತಿಗೆ ಈಗಲೂ ಅತ್ಯಂತ ಸೋಜಿಗವಾಗಿ ಕಾಡುತ್ತಿರುವುದು ಬ್ರಹ್ಮಾಂಡ ಪರಮಾಣುಗಳು ಅಥವಾ ಕಾಸ್ಮಿಕ್ ಪಾರ್ಟಿಕಲ್‌ಗಳು. ನಮ್ಮ ಬ್ರಹ್ಮಾಂಡದ ಸೃಷ್ಟಿಗೆ ಈ ಕಾಸ್ಮಿಕ್ ಪಾರ್ಟಿಕಲ್‌ಳು ನೇರ ಕಾರಣ ಎಂಬ ಎಂಬ ನಂಬಿಕೆ ವೈಜ್ಞಾನಿಕ ವಲಯದಲ್ಲಿರುವ ಕಾರಣ ಇವುಗಳ ಬಗ್ಗೆ ಕುತೂಹಲ ಮತ್ತು ತತ್ಪರಿಣಾಮ ಸಂಶೋಧನೆಗಳು ಹೆಚ್ಚುತ್ತಲೇ ಇವೆ.

ಇದೀಗ ವೈಜ್ಞಾನಿಕ ವಲಯವೇ ಖುಷಿಯಿಂದ ಬ್ರಹ್ಮಾಂಡ ಪರಮಾಣುಗಳ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುವಂಥ ವಿಚಾರವೊಂದು ತೆರೆದುಕೊಂಡಿದೆ. ಅದು ಶನಿಗ್ರಹದಲ್ಲಿ!
ಶನಿಯ ಬಗ್ಗೆ ಅಧ್ಯಯನ ಮಾಡುತ್ತಿರುವ ಕ್ಯಾಸಿನಿ ಗಗನನೌಕೆ ಅಲ್ಲಿನ ಕೌತುಕವೊಂದನ್ನು ಮುಂದಿಟ್ಟು ವಿಜ್ಞಾನಿಗಳು ಹುಬ್ಬೇರಿಸುವಂತೆ ಮಾಡಿದೆ. ಶನಿಯ ವಾತಾವರಣದಲ್ಲಿ ತೀರಾ ಅಪರೂಪಕ್ಕೆಂಬಂತೆ ಕಾಣಿಸಿಕೊಂಡ ತೀವ್ರ ಸ್ವರೂಪದ ಸೌರಸುನಾಮಿ ಬ್ರಹ್ಮಾಂಡ ಪರಮಾಣುಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಅವಕಾಶವನ್ನು ಕೊಟ್ಟಿದೆ.
ಸೌರಸುನಾಮಿಯ ಕಾರಣದಿಂದ ಪರಮಾಣುಗಳು ಅತ್ಯುನ್ನತ ಶಕ್ತಿಮಟ್ಟಕ್ಕೆ ವೇಗೋತ್ಕರ್ಷಗೊಂಡ ಚಿತ್ರವನ್ನು ಕ್ಯಾಸಿನಿ ಸೆರೆಹಿಡಿದು ನಾಸಾ ವಿಜ್ಞಾನಿಗಳಿಗೆ ಕಳುಹಿಸಿದೆ. ಈ ರೀತಿ ವೇಗೋತ್ಕರ್ಷಗೊಳ್ಳುವ ಪ್ರಕ್ರಿಯೆ ನಕ್ಷತ್ರವೊಂದು ಮಹಾಸ್ಫೋಟಕ್ಕೆ ಒಳಗಾದಾಗ ಕಾಣಬಹುದು. ಅಲ್ಲದೆ, ಮಹಾಸ್ಫೋಟದ ವೇಳೆ ಬ್ರಹ್ಮಾಂಡ ಪರಮಾಣುಗಳು ಬಿಡುಗಡೆಯಾಗುತ್ತವೆ. ಸದ್ಯಕ್ಕಂತೂ ನಮಗೆ ಮಹಾಸ್ಫೋಟವನ್ನು ಹತ್ತಿರದಿಂದ ಅಧ್ಯಯನ ಮಾಡುವುದಕ್ಕೆ ಸಾಧ್ಯವಿಲ್ಲ. ಅಷ್ಟೇ ಅಲ್ಲ, ನಕ್ಷತ್ರಗಳ ಸಮೀಪ ಹೋಗುವುದಕ್ಕೂ ಸಾಧ್ಯವಿಲ್ಲ. ಇಂತಿರುವಾಗ ಅತ್ಯಂತ ಹತ್ತಿರದಲ್ಲಿರುವ ಶನಿ ಗ್ರಹದಲ್ಲೇ ಇಂಥದ್ದೊಂದು ಅಪೂರ್ವ ವಿಸ್ಮಯ ಜರಗಿದೆ ಎಂದರೆ ಅದನ್ನು ಹಾಗಿಂದ ಹಾಗೇ ಬಿಟ್ಟುಬಿಡುವುದಕ್ಕೆ ವಿಜ್ಞಾನಿಗಳಂತೂ ಸಿದ್ಧರಿಲ್ಲ. ಇದನ್ನು ಅಧ್ಯಯನಕ್ಕೆ ಒಳಪಡಿಸಲು ನಾಸಾ, ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಮತ್ತು ಇಟಲಿ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಈಗಾಗಲೇ ಮುಂದಡಿಯಿಟ್ಟಿದ್ದಾರೆ.
ಸೌರಸುನಾಮಿಗಳು ಅಥವಾ ಶಾಖಭರಿತ ಅಲೆಗಳು ಬ್ರಹ್ಮಾಂಡದಲ್ಲಿ ಹೊಸದೇನೂ ಅಲ್ಲ. ಮಹಾಸ್ಫೋಟದ ಸಂದರ್ಭದಲ್ಲಿ ನಕ್ಷತ್ರವು ಸ್ಫೋಟಗೊಂಡು ಕಣಗಳು ಅತ್ಯಧಿಕ ವೇಗದಲ್ಲಿ ಬಾಹ್ಯಾಕಾಶಕ್ಕೆ ನುಗ್ಗುತ್ತವೆ. ಅದಕ್ಕಿಂತಲೂ ಮುಖ್ಯವಾಗಿ ಸೂರ್ಯ ಸೇರಿದಂತೆ ಎಲ್ಲ ನಕ್ಷತ್ರಗಳಿಂದ ಈ ಅಲೆಗಳು ಸದಾ ಹೊಮ್ಮುತ್ತಿರುತ್ತವೆ. ಕಾಂತವಲಯದ ಪ್ರಭಾವ, ಘರ್ಷಣೆಯ ತೀವ್ರತೆಗಳನ್ನು ಆಧರಿಸಿಕೊಂಡು ಈ ಅಲೆಗಳ ವೇಗ ನಿರ್ಧಾರವಾಗುತ್ತದೆ. ಹೀಗೆ ಹೊರಹೊಮ್ಮುವ ಅತ್ಯುನ್ನತ ಶಕ್ತಿ ಮಟ್ಟದ ಪರಮಾಣುಗಳು ಸುಮಾರು ಬೆಳಕಿನ ವೇಗದಲ್ಲಿ ಚಲಿಸು7ž7ತವೆ. ಸೃಷ್ಟಿ ಮೂಲವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಈ ಬ್ರಹ್ಮಾಂಡ ಪರಮಾಣುಗಳ ಅಧ್ಯಯನ ಪ್ರಮುಖವಾಗಿರುವ ಕಾರಣ ಶನಿಯಿಂದ ಸಿಕ್ಕ ವಿಸ್ಮಯ ಮಾಹಿತಿ ವೈಜ್ಞಾನಿಕ ಕ್ಷೇತ್ರದ ಚಿಂತನೆಗೆ ಹೊಸ ದೃಷ್ಟಿಕೋನವನ್ನು ನೀಡಲಿದೆ ಎಂಬುದರಲ್ಲಿ ಅಚ್ಚರಿಯಿಲ್ಲ.

Comments

  1. ಉತ್ತಮ ಮಾಹಿತಿಯುಳ್ಳ ಲೇಖನ....:) ಈ ಬ್ರಹ್ಮಾ೦ಡ ಪರಮಾಣುಗಳ ಬಗ್ಗೆ ಹೆಚ್ಚಿನ ಸ೦ಶೋಧನೆಗಳು ನಡೆಯಲಿ ಎ೦ಬ ಹಾರೈಕೆ....

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು