ಮಾನವ ವಲಸೆ ಬಂದ ಬಗೆ ಹೇಗೆ?

ಲಕ್ಷಾಂತರ ವರ್ಷಗಳ ಹಿಂದೆ ನಾಗರಿಕತೆ ವಿಕಾಸಗೊಂಡು , ಬದುಕುವ ಕಲೆಯನ್ನು ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಬದಲಿಸಿಕೊಂಡ ಮಾನವ ತಾನಿದ್ದ ಜಾಗದಿಂದ ವಿವಿಧ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಶುರು ಮಾಡಿದ . ಬದುಕಿನ ಚಿತ್ರಣವನ್ನು ಹಂತಹಂತವಾಗಿ ಬದಲಿಸಿಕೊಳ್ಳುತ್ತಾ , ಪ್ರಕೃತಿಯ ಜತೆಗಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಮುಂದೆ ಮುಂದಾ ಸಾಗಿ ಇಂದು ಪ್ರಕೃತಿಯನ್ನೇ ಧಿಕ್ಕರಿಸಿ ನಿಲ್ಲುವ ಮಟ್ಟಕ್ಕೆ ಬಂದಿದ್ದಾನೆ . ಯಾವುದೋ ಪ್ರದೇಶದ ಮೂಲನಿವಾಸಿಯಾಗಿದ್ದವ ಇಂದು ಮತ್ತಾವುದೋ ಪ್ರದೇಶ ಸೇರಿಕೊಂಡು ಅಲ್ಲಿ ತನ್ನ ವಂಶವೃಕ್ಷವನ್ನು ಬೆಳೆಸುತ್ತಿದ್ದಾನೆ . ಆರ್ಯರು , ದ್ರಾವಿಡರು ... ಕೂಡಾ ಒಂದು ಕಾಲದಲ್ಲಿ ವಲಸೆ ಬಂದವರೇ ! ಇದೆಲ್ಲ ಒತ್ತಟ್ಟಿಗಿರಲಿ , ಮಾನವ ವಲಸೆಯ ಇತಿಹಾಸವನ್ನು ಅಧ್ಯಯನ ಮಾಡುವುದಕ್ಕೆ ಈಗ ನಾಟಿಂಗ್ಹ್ಯಾಮ್ ಯೂನಿವರ್ಸಿಟಿಯ ವಂಶವಾಹಿ ತಜ್ಞರು ಸಂಶೋಧನೆ ಆರಂಭಿಸಿದ್ದು , ಬಸವನಹುಳುವಿನ ಮೂಲಕ ತಮ್ಮ ಗಮ್ಯ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ . ಫ್ರಾನ್ಸ್ನ ಪೈರೇನಿಯನ್ ಪ್ರದೇಶದಿಂದ ಐರ್ಲೆಂಡ್ಗೆ ಜನ ವಲಸೆ ಬಂದದ್ದು ಹೇಗೆಂಬುದನ್ನು ಸದ್ಯಕ್ಕೆ ಅಧ್ಯಯನ ಮಾಡುತ್ತಿದ್ದಾರೆ .