ಜೀವಾಂಶ ಭೂಮಿಗೆ ಬಂದದ್ದು ಬಾಹ್ಯದಿಂದ

ವೈಜ್ಞಾನಿಕ ಜಗತ್ತಿನಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಭಾರೀ ಕುತೂಹಲ, ಅದೊಂಥರಾ ಸೂಕ್ಷ್ಮ, ಅದೊಂದು ರೀತಿಯ ಗಾಂಭೀರ್ಯ, ಸ್ವಲ್ಪ ಅಚ್ಚರಿ, ಹೊಸ ಹೊಸ ಅನ್ವೇಷಣೆಗಳಿಗೆ ತುಡಿತ. ವಿಜ್ಞಾನವೇ ಹಾಗೆ, ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ, ಒಂದು ಕ್ಷಣ ಹೊಸದೆನೆಸಿದ್ದು ಮರುಕ್ಷಣದಲ್ಲಿ ಹಳತಾಗುತ್ತದೆ, ಮತ್ತೊಂದು ಹೊಸ ವಿಚಾರ ಕಾಣಿಸಿಕೊಂಡಿರುತ್ತದೆ. ವೈಜ್ಞಾನಿಕ ವಲಯದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿರುವಂಥದ್ದು ಭೂಮಿಯಲ್ಲಿ ಜೀವಸೃಷ್ಟಿ ಹೇಗಾಯ್ತು ಎಂಬ ವಿಚಾರದ ಸುತ್ತ.
ಭೂಮಿಯಲ್ಲಿನ ಜೀವಸೃಷ್ಟಿ, ಜೀವಾಸ್ತಿತ್ವ ಮತ್ತು ಜೀವ ವಿಕಾಸದ ಬಗ್ಗೆ ಒಬ್ಬೊಬ್ಬ ವಿಜ್ಞಾನಿ ಮಂಡಿಸಿದ ಒಂದೊಂದು ಸಿದ್ಧಾಂತಗಳು ಒಂದೊಂದು ವಿಚಾರವನ್ನು ಪ್ರತಿಪಾದಿಸುತ್ತವೆ. ಅವುಗಳದ್ದೇ ಆದ ನೆಲೆಯಲ್ಲಿ ಯೋಚಿಸಿದರೆ ಆ ಎಲ್ಲ ಸಿದ್ಧಾಂತಗಳೂ ಸರಿ ಎಂದೆನಿಸುತ್ತವೆ. ಅವುಗಳ ವಿರುದ್ಧವಾಗಿ ಯೋಚಿಸದರೆ ಆ ಯೋಚನೆಯೂ ಸರಿಯಾಗಿಯೇ ಭಾಸವಾಗುತ್ತದೆ. ಯಾಕೆಂದರೆ ಜೀವಸೃಷ್ಟಿ ಹೀಗೇ ಆಯ್ತು ಎಂದು ಹೇಳುವುದಕ್ಕೆ ನಮ್ಮಲ್ಲಿ ಯಾವ ಆಧಾರವೂ ಇಲ್ಲ. ಇದೀಗ ಹೊಸದೊಂದು ಸಿದ್ಧಾಂತ ಮಂಡನೆಯಾಗಿದ್ದು, ಅದರ ಪ್ರಕಾರ ಭೂಮಿಯಲ್ಲಿ ಜೀವಸೃಷ್ಟಿಗೆ ಕಾರಣವಾದ ಒಂದು ಅಂಶ ಬಂದದ್ದು ಉಲ್ಕೆಗಳಿಂದ. ಅದು ಗಂಧಕದ ಅಂಶ.
ಉಲ್ಕೆಗಳು ಭೂಮಿಗೆ ಅಪ್ಪಳಿಸಿದಾಗ ಅದರಲ್ಲಿದ್ದ ಗಂಧಕದ ಅಂಶ ಭೂಮಿಗೆ ಬಂತು. ಅದು ಜೀವ ಸೃಷ್ಟಿಗೆ ಸಹಕಾರಿಯಾಯ್ತ ಎಂಬ ಸಿದ್ಧಾಂತವನ್ನು ಮಂಡಿಸಿದ್ದಾರೆ ದಕ್ಷಿಣ ಫ್ಲೋರಿಡಾ ಯೂನಿವರ್ಸಿಟಿಯ ಸಂಶೋಧಕರು. ಭೂಮಿಯಲ್ಲಿ ಜೀವಸೃಷ್ಟಿಯಾಗುವುದಕ್ಕೆ ಮೂಲಕಾರಣಗಳೆಂದು ಗುರುತಿಸಲ್ಪಟ್ಟ ಇಯಾನ್‌ಗಳನ್ನು ಆರ್ಕಿಯಾನ್ ಇಯಾನ್‌ಗಳು ಎನ್ನಲಾಗುತ್ತದೆ. ಉಲ್ಕೆಗಳು ಭೂಮಿಗೆ ಅಪ್ಪಳಿಸಿದಾಗ ಭೂಮಿಗೆ ಬಂದ ಗಂಧಕದ ಅಂಶದಿಂದಲೇ ಈ ಇಯಾನ್‌ಗಳು ಸೃಷ್ಟಿಯಾದವು. ಇಯಾನ್‌ಗಳು ನೀರಲ್ಲಿ ಸೇರಿಕೊಂಡು ಜೀವಿಗಳ ಸೃಷ್ಟಿಯಾಯಿತು. ಸೃಷ್ಟಿಯ ಆದಿಯಲ್ಲಿದ್ದ ಸುಣ್ಣದ ಕಲ್ಲಿನಲ್ಲಿ ಈ ಗಂಧಕದ ಅಂಶ ಕಂಡುಬಂದಿದೆ. ಇಷ್ಟೆಲ್ಲ ಕ್ರಿಯೆಗಳು ನಡೆದದ್ದು ಸುಮಾರು 3.5 ಶತಕೋಟಿ ವರ್ಷಗಳ ಹಿಂದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿವಿಧ ದೇಶಗಳಲ್ಲಿ ನಡೆಸಿದ ಸಂಶೋಧನೆಯಿಂದ ಈ ವಿಚಾರ ಕಂಡುಕೊಳ್ಳಲಾಗಿದೆಯಂತೆ.
ವಿಶೇಷ ಎಂದರೆ ಆದಿ ಕಾಲದಲ್ಲಿದ್ದಂಥ ಗಂಧಕದ ಅಂಶವನ್ನು ಯಾವುದೇ ಸರಳ ಸಾವಯವ ರಾಸಾಯನಿಕ ವಸ್ತುವಿನ ಜತೆ ಮಿಶ್ರ ಮಾಡಿದರೆ ಪ್ರಸ್ತುತ ಭೂಮಿಯಲ್ಲಿ ಅಸ್ತಿತ್ವದಲ್ಲಿರುವ ಗಂಧಕದ ಕಣಗಳು ಸೃಷ್ಟಿಯಾಗುತ್ತದೆ. ಉಲ್ಕೆಗಳ ಜತೆ ಬಂದ ಗಂಧಕದ ಅಂಶಗಳು ಭೂಮಿಯಲ್ಲಿನ ಜೀವಿಗಳ ಸೃಷ್ಟಿಗೆ ಅಗತ್ಯವಾದ ಗಂಧಕ ಮತ್ತು ಶಕ್ತಿಯನ್ನು ನೀಡಿದವು ಎಂಬುದು ವಿಜ್ಞಾನಿಗಳ ವಾದ.

ಜೀವ ಸೃಷ್ಟಿಗೇನು ಕಾರಣ ಎಂಬ ಬಗೆಗೇನೋ ಹೊಸ ಸಿದ್ಧಾಂತ ಸೃಷ್ಟಿಯಾಯಿತು. ಆದರೆ ಇದುವೇ ಅಂತಿಮ ಎಂದು ಹೇಳುವುದಕ್ಕಾಗದು. ಇನ್ಯಾವುದೋ ಸಂಶೋಧನೆಗಳು ಸೃಷ್ಟಿಯ ಬಗ್ಗೆ ಬೇರಿನ್ನಾವುದೋ ಸಿದ್ಧಾಂತಗಳನ್ನು ಮಂಡಿಸಬಹುದು. ಜೀವಸೃಷ್ಟಿ ಹೀಗೇ ಆಯಿತು ಎಂದು ನಿರ್ದಿಷ್ಟವಾಗಿ ನಿರೂಪಿಸುವುದಕ್ಕೆ ಅಥವಾ ಅಂಥದ್ದೊಂದು ಸಿದ್ಧಾಂತವನ್ನು ಮಂಡಿಸುವುದಕ್ಕೆ ಸಾಧ್ಯವಾಗುವುದು ಕಷ್ಟಸಾಧ್ಯ ಎಂದೇ ಭಾಸವಾಗುತ್ತದೆ. ಆದಾಗ್ಯೂ, ಈ ಸಿದ್ಧಾಂತಗಳೆಲ್ಲವೂ ಸೃಷ್ಟಿಯ ಬಗೆಗಿನ ಕೌತುಕವನ್ನು, ಅಚ್ಚರಿಯನ್ನು ಹೆಚ್ಚಿಸುತ್ತಿವೆ ಎಂಬುದಂತೂ ಸುಸ್ಪಷ್ಟ!

Comments

Popular posts from this blog

ಅವಸಾನದತ್ತ ಹವಳದ ದಂಡೆಗಳು...!

ಮಾನವ ವಲಸೆ ಬಂದ ಬಗೆ ಹೇಗೆ?

ಶಿವ ರೂಪಕಲ್ಪನ ಕಾವ್ಯ