ಮಾನವ ವಲಸೆ ಬಂದ ಬಗೆ ಹೇಗೆ?

ಲಕ್ಷಾಂತರ ವರ್ಷಗಳ ಹಿಂದೆ ನಾಗರಿಕತೆ ವಿಕಾಸಗೊಂಡು, ಬದುಕುವ ಕಲೆಯನ್ನು ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಬದಲಿಸಿಕೊಂಡ ಮಾನವ ತಾನಿದ್ದ ಜಾಗದಿಂದ ವಿವಿಧ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಶುರು ಮಾಡಿದ. ಬದುಕಿನ ಚಿತ್ರಣವನ್ನು ಹಂತಹಂತವಾಗಿ ಬದಲಿಸಿಕೊಳ್ಳುತ್ತಾ, ಪ್ರಕೃತಿಯ ಜತೆಗಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಮುಂದೆ ಮುಂದಾ ಸಾಗಿ ಇಂದು ಪ್ರಕೃತಿಯನ್ನೇ ಧಿಕ್ಕರಿಸಿ ನಿಲ್ಲುವ ಮಟ್ಟಕ್ಕೆ ಬಂದಿದ್ದಾನೆ. ಯಾವುದೋ ಪ್ರದೇಶದ ಮೂಲನಿವಾಸಿಯಾಗಿದ್ದವ ಇಂದು ಮತ್ತಾವುದೋ ಪ್ರದೇಶ ಸೇರಿಕೊಂಡು ಅಲ್ಲಿ ತನ್ನ ವಂಶವೃಕ್ಷವನ್ನು ಬೆಳೆಸುತ್ತಿದ್ದಾನೆ. ಆರ್ಯರು, ದ್ರಾವಿಡರು... ಕೂಡಾ ಒಂದು ಕಾಲದಲ್ಲಿ ವಲಸೆ ಬಂದವರೇ!
ಇದೆಲ್ಲ ಒತ್ತಟ್ಟಿಗಿರಲಿ, ಮಾನವ ವಲಸೆಯ ಇತಿಹಾಸವನ್ನು ಅಧ್ಯಯನ ಮಾಡುವುದಕ್ಕೆ ಈಗ ನಾಟಿಂಗ್‌ಹ್ಯಾಮ್ ಯೂನಿವರ್ಸಿಟಿಯ ವಂಶವಾಹಿ ತಜ್ಞರು ಸಂಶೋಧನೆ ಆರಂಭಿಸಿದ್ದು, ಬಸವನಹುಳುವಿನ ಮೂಲಕ ತಮ್ಮ ಗಮ್ಯ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫ್ರಾನ್ಸ್‌ನ ಪೈರೇನಿಯನ್ ಪ್ರದೇಶದಿಂದ ಐರ್ಲೆಂಡ್‌ಗೆ ಜನ ವಲಸೆ ಬಂದದ್ದು ಹೇಗೆಂಬುದನ್ನು ಸದ್ಯಕ್ಕೆ ಅಧ್ಯಯನ ಮಾಡುತ್ತಿದ್ದಾರೆ.

ಸಾವಿರಾರು ಮೈಲಿ ಅಂತರದಲ್ಲಿರುವ ಈ ಎರಡು ಪ್ರದೇಶಗಳ ನಡುವೆ ಸಂಬಂಧ ಹೇಗೆ, ಜನ ಅಲ್ಲಿಂದಿಲ್ಲಿಗೆ ವಲಸೆ ಬಂದಿದ್ದಾರೆ ಎಂದರೆ ಹೇಗೆ? ಅಚ್ಚರಿಯಾದರೂ ಇದು ಸತ್ಯ ಎನ್ನುತ್ತಿದ್ದಾರೆ ಸಂಶೋಧಕರಾದ ಡಾ.ಆಂಗುಸ್ ಡೇವಿಸನ್ ಮತ್ತು ಅಡೇಲ್ ಗ್ರಿಂಡನ್. ಐರ್ಲೆಂಡ್‌ನಲ್ಲಿರುವ ಬಸವನಹುಳುಗಳ ವಂಶವಾಹಿಗಳೂ, ಫ್ರಾನ್ಸ್‌ನ ಪೈರೇನಿಯನ್ ಪ್ರದೇಶದಲ್ಲಿ ಕಾಣಸಿಗುವ ಬಸವನಹುಳುಗಳ ವಂಶವಾಹಿಗಳೂ ಬಹುತೇಕ ಸಾಮ್ಯತೆ ಹೊಂದಿವೆ. ಬಸವನಹುಳುಗಳು ತುಂಬಾ ನಿಧಾನವಾಗಿ ಚಲಿಸುವ ಕಾರಣ ತಕ್ಷಣಕ್ಕೆ ಅವುಗಳು ಸಾವಿರಾರು ಮೈಲಿ ದೂರಕ್ಕೆ ಹೋಗುವುದು ಅಸಾಧ್ಯ. ಸುಮಾರು ೮೦೦೦ ವರ್ಷಗಳ ಹಿಂದೆ ಮಾನವರು ಪೈರೇನಿಯನ್ ಪ್ರದೇಶದಿಂದ ಐರ್ಲೆಂಡ್‌ಗೆ ವಲಸೆ ಬಂದಿರಬೇಕು. ಆಗ ಮನುಷ್ಯರ ಜತೆ ಇವು ಕೂಡಾ ವಲಸೆ ಬಂದಿರಬೇಕು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಇನ್ನೂ ಅಚ್ಚರಿಯ ವಿಚಾರವೆಂದರೆ ಬ್ರಿಟನ್ ಮತ್ತು ಐರ್ಲೆಂಡ್ ಭೌಗೋಳಿಕತೆಯಲ್ಲಿ ಬಹುತೇಕ ಸಾಮ್ಯತೆಯಿದೆ. ಆದರೆ ಇಂಗ್ಲೆಂಡ್‌ನಲ್ಲಿ ಇಲ್ಲದ ಅದೆಷ್ಟೋ ಪ್ರಾಣಿಗಳು ಮತ್ತು ಸಸ್ಯಗಳು ಬ್ರಿಟನ್‌ನಲ್ಲಿವೆ. ಇದು ಹೇಗೆ ಸಾಧ್ಯ ಎಂಬುದೇ ಇದುವರೆಗೂ ಅಚ್ಚರಿಯಾಗಿ ಉಳಿದಿದೆ. ಆದರೆ ಪೈರೇನಿಯನ್ ಪ್ರದೇಶ ಮತ್ತು ಐರ್ಲೆಂಡ್‌ನ ಬಸವನಹುಳುಗಳ ವಂಶವಾಹಿಗಳಲ್ಲಿ ಸಾಮ್ಯತೆ ಕಂಡಿರುವುದು ಹೊಸ ವಿಚಾರವೊಂದನ್ನು ಬೆಳಕಿಗೆ ತರುವ ಸಾಧ್ಯತೆಯಿದೆ.

ಪೈರೇನಿಯನ್ ಪ್ರದೇಶದಲ್ಲಿನ ಮಾನವರು ಬಸವನಹುಳು ಕೃಷಿ ಮಾಡುತ್ತಿದ್ದರು. ಅಂದರೆ ದನಸಾಕಣೆ, ಕುರಿಸಾಕಣೆಯಂತೆ ಅಲ್ಲಿನ ಜನರು ಬಸವನಹುಳು ಸಾಕಣೆ ಮಾಡುತ್ತಿದ್ದರು ಮತ್ತು ಈ ಬಸವನಹುಳುಗಳನ್ನು ತಮ್ಮ ಆಹಾರವಾಗಿ ಬಳಸುತ್ತಿದ್ದರು. ಹೀಗಾಗಿ ಪೈರೇನಿಯನ್ ಪ್ರದೇಶದಿಂದ ಐರ್ಲೆಂಡ್‌ಗೆ ವಲಸೆ ಬಂದ ಮಾನವರು ತಮ್ಮ ಜತೆಯಲ್ಲಿಯೇ ಬಸವನಹುಳುಗಳನ್ನೂ ತೆಗೆದುಕೊಂಡು ಬಂದಿರುವ ಸಾಧ್ಯತೆಯಿದೆ ಎಂಬುದು ವಿಜ್ಞಾನಿಗಳ ಲೆಕ್ಕಾಚಾರ!

Comments

  1. ಮಾನ್ಯರೇ, ಒಳ್ಳೆಯ ಮಾಹಿತಿ. ಅದೇ ರೀತಿ ನಮ್ಮ ಭಾರತ ದೇಶದ ಬಗ್ಗೆ ಸಹ ಇದೇ ಮಾಹಿತಿಯನ್ನು ತಿಳಿದುಕೊಳ್ಳುವುದು ಸೂಕ್ತ ಅಲ್ಲವೇ?

    ReplyDelete

Post a Comment

Popular posts from this blog

ಅವಸಾನದತ್ತ ಹವಳದ ದಂಡೆಗಳು...!

ಶಿವ ರೂಪಕಲ್ಪನ ಕಾವ್ಯ