ಭಾವತೀವ್ರತೆ ಮಾನವನಿಗೆ ಮಾತ್ರವಲ್ಲ!

ಸಿಕ್ಕಾಪಟ್ಟೆ ಸಿಟ್ಟು ಬಂದ ವ್ಯಕ್ತಿ ಕೈಗೆ ಸಿಕ್ಕಿದ್ದನ್ನು ಎತ್ತೆತ್ತಿ ಎಸೆಯುತ್ತಾನೆ. ಸಮಾಧಾನಪಡಿಸುವುದಕ್ಕೆ ಬಂದವರನ್ನೇ ಹೊಡೆದು ಕಳುಹಿಸುತ್ತಾನೆ. ಅದೇ ರೀತಿ ತುಂಬಾ ಸಂತೋಷದಿಂದಿರುವ ವ್ಯಕ್ತಿ ತಾನು ಏನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತು ಖುಷಿಯಾಗಸದಲ್ಲಿ ತೇಲಾಡುತ್ತಾನೆ. ನೋವು ತುಂಬಿದ ಹೃದಯ ಮನುಷ್ಯನನ್ನು ಅನ್ಯಮನಸ್ಕನನ್ನಾಗಿಸುತ್ತದೆ....
ಅದೆಷ್ಟು ಭಾವಗಳು, ಅದೆಂಥ ತೀವ್ರತೆ? ಒಂದೊಂದು ಭಾವಕ್ಕೆ ಒಂದೊಂದು ಪ್ರತಿಕ್ರಿಯೆ. ಪ್ರತಿಕ್ರಿಯೆಯ ತೀವ್ರತೆಯು ಭಾವನೆಗಳ ತೀವ್ರತೆಎ ನೇರಾನುಪಾತದಲ್ಲಿರುತ್ತದೆ. ಈ ಭಾವನೆಗಳು ಅನ್ನೋ ವಿಚಾರ ಎಷ್ಟೊಂದು ವಿಚಿತ್ರ ಅಲ್ವೇ? ಮನುಷ್ಯ ಮಾತ್ರವಲ್ಲ, ಮನುಷ್ಯನ ಪೂರ್ವಜರು ಎನ್ನಿಸಿಕೊಂಡಂಥ ಚಿಂಪಾಂಜಿಗಳು, ಗೋರಿಲ್ಲಾಗಳು ಕೂಡಾ ಮಾನವನ ರೀತಿಯಲ್ಲೇ ಭಾವತೀವ್ರತೆಗೆ ಒಳಗಾಗುತ್ತವಂತೆ!

ಹಾಗಂತ ಇತ್ತೀಚೆಗಿನ ಸಂಶೋಧನೆಯೊಂದು ಹೇಳಿದೆ. ಬ್ರಿಟನ್‌ನ ಯಾಲೆ ಯೂನಿವರ್ಸಿಟಿ ಮತ್ತು ಡ್ಯೂಕ್ ಯೂನಿವರ್ಸಿಟಿಯ ಸಂಶೋಧಕರು ಚಿಂಪಾಂಜಿ ಮತ್ತು ಗೋರಿಲ್ಲಾಗಳ ಭಾವತೀವ್ರತೆಯ ಬಗ್ಗೆ ಅಧ್ಯಯನ ಮಾಡಿದ್ದು, ಮಾನವನ ರೀತಿಯಲ್ಲೇ ಅವುಗಳೂ ವರ್ತಿಸುವುದನ್ನು ಕಂಡುಕೊಂಡಿದ್ದಾರೆ. ಈ ಪ್ರಾಣಿಗಳು ಕೂಡಾ ಸಿಟ್ಟು ಬಂದಾಗ ಕೈಗೆ ಸಿಕ್ಕಿದ್ದನ್ನು ಎಸೆಯುತ್ತವೆ. ಖುಷಿಯಾದಾಗ ಜಗತ್ತನ್ನೇ ಮರೆತುಬಿಡುತ್ತವೆ. ನೋವಾದಾಗ ಮುದುಡಿ ಮೂಲೆಯಲ್ಲಿ ಕುಳಿತುಕೊಳ್ಳುತ್ತವೆ.
ಆಫ್ರಿಕಾದ ವನ್ಯಧಾಮಗಳಲ್ಲಿರುವ ಚಿಂಪಾಂಜಿಗಳು, ಗೋರಿಲ್ಲಾಗಳು ಮತ್ತು ಇದೇ ಜಾತಿಗೆ ಸೇರಿದ ಇತರ ಪ್ರಾಣಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಅವುಗಳ ಮನಃಶಾಸ್ತ್ರೀಯ ವರ್ತನೆಯನ್ನು ಮತ್ತು ಅದರ ಕಾರಣವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಮನುಷ್ಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವನ ಭಾವನೆಗಳು ಪ್ರಧಾನ ಪಾತ್ರ ನಿರ್ವಹಿಸುತ್ತವೆ. ಭಾವನೆಗಳು ಆಕ್ರೋಶ ಅಥವಾ ನೋವಿನದ್ದಾಗಿದ್ದರೆ ತಪ್ಪು ಹೆಜ್ಜೆಗಳನ್ನಿಡುತ್ತಾನೆ. ಅದೇ ರೀತಿ ಮಾನವನ ಪೂರ್ವಜರೆನಿಸಿಕೊಂಡ ಪ್ರಾಣಿಗಳೂ ಇಂಥದ್ದೇ ವರ್ತನೆ ಹೊಂದಿವೆ ಎನ್ನುತ್ತಾರೆ ಸಂಶೋಧಕರು.
ಆಹಾರವನ್ನು ಮುಂದಿಟ್ಟು ಚಿಂಪಾಜಿ ಮತ್ತು ಅದೇ ಜಾತಿಗೆ ಸೇರಿದ ಪ್ರಾಣಿಗಳ ಅಧ್ಯಯನ ನಡೆಸಿದ ಸಂಶೋಧಕರಿಗೆ ಅಚ್ಚರಿ ಎನಿಸಿದ್ದು ಅವುಗಳ ಆಯ್ಕೆ ಮಾಡಿದ ರೀತಿ. ಆಹಾರ ಆಯ್ಕೆ ಮಾಡುವಾಗ ಚಿಂಪಾಂಜಿಗಳ ಭಾವನೆ ಸಾಕಷ್ಟು ಕೆಲಸ ಮಾಡಿದೆಯಂತೆ. ಸೂಕ್ತ ಆಯ್ಕೆ ಸಾಧ್ಯವಾಗದೇ ಇದ್ದಾಗ ಅವು ಸಿಟ್ಟಾಗಿ ಕಿರುಚಿವೆ. ಅವುಗಳ ಅಭಿರುಚಿಗೆ ತಕ್ಕನಾದ ಆಹಾರ ಸಿಗದಿದ್ದಾಗಲೂ ಸಿಟ್ಟು ಪ್ರದರ್ಶಿಸಿವೆ. ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಅವುಗಳ ಭಾವಾತಿರೇಕ ಅಚ್ಚರಿ ಮೂಡಿಸುವಂತಿತ್ತು ಎಂದು ಸಂಶೋಧಕರು ಹೇಳಿದ್ದಾರೆ.
ಮನುಷ್ಯನ ಪೂರ್ವಜರು ಎನ್ನಿಸಿಕೊಂಡುರುವ ಮಂಗ, ಚಿಂಪಾಂಜಿ, ಗೋರಿಲ್ಲಾ ಮೊದಲಾದವುಗಳ ವರ್ತನೆ ವೈಜ್ಞಾನಿಕ ಜಗತ್ತಿಗೆ ಮೊದಲಿನಿಂದಲೂ ಸೋಜಿಗವಾಗಿಯೇ ಕಾಡುತ್ತಿದೆ. ಇದೇ ನಿಟ್ಟಿನಲ್ಲಿ ನಡೆದ ಹತ್ತು ಹಲವು ಸಂಶೋಧನೆಗಳು ಈ ಪ್ರಾಣಿಗಳ ವರ್ತನೆ, ನಡವಳಿಕೆ ಮಾನವನಿಗೆ ಹೋx4q°Í¨5?ತ್ತದೆ ಎಂಬುದನ್ನು ನಿರೂಪಿಸಿವೆ. ಇದನ್ನೆಲ್ಲ ನೋಡಿದ ಮೇಲೆ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಸಮಸ್ತ ಜೀವಸಂಕುಲವೂ ಇದೇ ರೀತಿಯಲ್ಲಿ ವಿಭಿನ್ನ ಭಾವನೆಗಳ ಪ್ರದರ್ಶನವನ್ನು ತೋರಬಾರದೇಕೆ? ವೈಜ್ಞಾನಿಕ ಜಗತ್ತು ಕೂಡಾ ಇದೇ ವಿಚಾರವಾಗಿ ಚಿಂತನೆ ನಡೆಸುತ್ತಿದೆ.


Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು