ಸಂಸ್ಕೃತಿಯ ಮೂಲ ಹವಾಮಾನ ವೈಪರೀತ್ಯ!

ಮಾನವ ವಿಶಿಷ್ಟವಾದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿದ್ದಾನೆ . ಜಗತ್ತಿನ ಒಂದೊಂದು ಭಾಗದಲ್ಲಿ ಒಂದೊಂದು ಸಂಸ್ಕೃತಿ ಮನೆಮಾಡಿದೆ . ದೇಶ - ದೇಶಗಳ ಸಂಸ್ಕೃತಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ . ಒಂದು ಜಿಲ್ಲೆಯೇ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ರೀತಿಯ ಸಂಸ್ಕೃತಿ ಬೆಳೆದು ಬಂದಿರುವಂಥ ಸ್ಥಿತಿಯನ್ನೂ ಕಾಣಬಹುದು . ಆದರೆ ಇಂದಿನ ಯುಗದ ಮಾನವ ಬೆಳೆಸಿಕೊಂಡು ಬಂದಿರುವ ಈ ಸಂಸ್ಕೃತಿಗೆ ಕಾರಣವೇನು ಗೊತ್ತೇ ? ಹವಾಮಾನದಲ್ಲಾದಂಥ ವೈಪರೀತ್ಯ ! ಅಚ್ಚರಿಯಾಗುತ್ತದೆ ನಿಜ , ಹವಾಮಾನ ವೈಪರೀತ್ಯಕ್ಕೂ ಸಂಸ್ಕೃತಿಗೂ ಎತ್ತಣಿಂದೆತ್ತ ಸಂಬಂಧ ? ತಾಪಮಾನ ತೀವ್ರಗತಿಯಲ್ಲಿ ಏರಿಳಿತಗೊಳ್ಳುವುದರಿಂದ ಸಂಸ್ಕೃತಿಯಲ್ಲೇನಾದರೂ ಬದಲಾವಣೆಯಾಗುತ್ತದೆಯೇ ? ಹೌದು ಎನ್ನುತ್ತಿದ್ದಾರೆ ಬ್ರಿಟನ್ನ ಸಂಶೋಧಕರು . ಕಾರ್ಡಿಫ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಅರ್ಥ್ ಅಂಡ್ ಓಶಿಯನ್ ಸೈನ್ಸಸ್ , ಲಂಡನ್ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಮತ್ತು ಯೂನಿವರ್ಸಿಟಿ ಆಫ್ ಬಾರ್ಸಿಲೋನಾದ ಸಂಶೋಧಕರ ತಂಡ ನಡೆಸಿದ ಅಧ್ಯಯನದ ಪ್ರಕಾರ ಸಂಸ್ಕೃತಿಯಲ್ಲಿ ಮಹತ್ತರ ಬದಲಾವಣೆಯಾಗುವುದಕ್ಕೆ ಕಾರಣವಾದದ್ದು ಹವಾಮಾನದಲ್ಲಾದ ಹಠಾತ್ ವೈಪರೀತ್ಯ .