ಹೂಗಳಿಗೆ ಆಕಾರ ಕೊಡುವವರಾರು?


ಗುಲಾಬಿ ಹೂವಿನ ದಳಗಳು ಚೂಪಾಗಿರುತ್ತವೆ, ಸಂಪಿಗೆಯ ದಳಗಳೂ ಕತ್ತಿಯ ಅಲಗಿನಂತಿರುತ್ತವೆ, ದಾಸವಾಳದ ದಳಗಳದ್ದು ದುಂಡನೆಯ ಆಕಾರ.... ಇದೆಲ್ಲ ನಿಜ, ಆದರೆ ಇವುಗಳಿಗೆ ಇಂಥದ್ದೇ ಆಕಾರಗಳು ಬಂದದ್ದಾದರೂ ಹೇಗೆ? ಆಕಾರ ಕೊಟ್ಟವರು ಯಾರು?
ಮೇಲ್ನೋಟಕ್ಕೆ ಅತ್ಯಂತ ಸರಳ, ಕ್ಷುಲ್ಲಕ ವಿಚಾರ ಎನಿಸಿದರೂ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಯೊಂದಕ್ಕೆ ಇದು ಕಾರಣೀಭೂತವಾಗಿದೆ. ಮೊಗ್ಗು ಬೆಳೆಯುವ ಹಂತದಲ್ಲೇ ಅದರಳೊಗೆ ವಿಶೇಷ ಬಯೋಲಾಜಿಕಲ್ ಮ್ಯಾಪ್(ಜೈವಿಕ ನಕಾಶೆ) ಇರುತ್ತದಂತೆ. ಈ ಕಾರಣದಿಂದಾಗಿ ಹೂವಿನ ದಳಗಳಿಗೆ ನಿಗದಿತ ಆಕಾರ ಬರುತ್ತದೆ.
ಬ್ರಿಟನ್‌ನ ಜಾನ್ ಇನ್ನೆಸ್ ಸೆಂಟರ್ ಮತ್ತು ಯೂನಿವರ್ಸಿಟಿ ಆಫ್ ಈಸ್ಟ್ ಏಂಜಲಿಯಾದ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದು, ಹೂವಿನ ದಳಗಳು ಮಾತ್ರವಲ್ಲದೆ, ಎಲೆಗಳು ಕೂಡಾ ನಿಗದಿಜ ಜೈವಿಕ ನಕಾಶೆಯಿಂದಲೇ ನಿಯಂತ್ರಿಸಲ್ಪಡುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ.
ಒಂದು ಗಿಡದಲ್ಲಿ ಮೊದಲಿಗೆ ಎಲೆಗಳು ಬೆಳೆಯುತ್ತವೆ. ಈ ಎಲೆಗಳ ಜೈವಿಕನಕಾಶೆ ಹೇಗಿರುತ್ತದೋ ಅದೇ ರೀತಿಯ ಜೈವಿಕ ನಕಾಶೆ ಹೂವಿನ ದಳಗಳಲ್ಲೂ ಇರುತ್ತದೆ. ಎಲೆ ಮತ್ತು ಹೂವುಗಳ ಕಾರ್ಯ, ಅವುಗಳ ಆಕಾರ, ಗಾತ್ರ... ಎಲ್ಲವನ್ನೂ ನಿಯಂತ್ರಿಸುವುದು ಈ ನಕಾಶೆಯ ಕೆಲಸ. ಎಲೆಗಳು ದ್ಯುತಿಸಂಶ್ಲೇಷಣೆ ಮೂಲಕ ಆಹಾರ ಉತ್ಪಾದನೆ ಮಾಡುತ್ತವೆ. ಹೂವುಗಳು ಪ್ರಕೃತಿಪ್ರಿಯರನ್ನು ಆಕರ್ಷಿಸುತ್ತವೆ. ಎಲೆಗಳಿಗೆ ಆಹಾರ ಉತ್ಪಾದನೆ ಸಾಮರ್ಥ್ಯ ಮತ್ತು ಹೂವುಗಳಿಗೆ ಆಕರ್ಷಣೆಯ ಶಕ್ತಿ ಕೊಡುವುದು ಜೈವಿಕ ನಕಾಶೆ ಎಂದು ಹೇಳುತ್ತಿದ್ದಾರೆ ವಿಜ್ಞಾನಿಗಳು.
ಎಲೆಗಳು ಮತ್ತು ಹೂವುಗಳ ಆಕಾರ, ಗಾತ್ರ, ಆಹಾರ ಉತ್ಪಾದನೆ ಮತ್ತು ಆಕರ್ಷಣೆಯ ಸಾಮರ್ಥ್ಯ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಭಿನ್ನವಾಗಿರುತ್ತದೆ. ಇದು ಕೂಡಾ ಜೈವಿಕ ನಕಾಶೆಯ ಮೂಲಕ ಪೂರ್ವ ನಿರ್ಧಾರಿತ ಎಂಬುದು ವಿಜ್ಞಾನಿಗಳ ವಾದ.
ಕಂಪ್ಯೂಟರ್ ಮೂಲಕ ಮ್ಯಾಪ್ ಸಿದ್ಧಪಡಿಸಿ ಅದರ ಪ್ರಕಾರ ನಿಗದಿತ ಆಕಾರದ ಎಲೆ ಮತ್ತು ದಳಗಳನ್ನು ಸೃಷ್ಟಿಸುವ ಮೂಲಕ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ಸಸ್ಯವಿಜ್ಞಾನ ಕ್ಷೇತ್ರದಲ್ಲಿ ಹೊಸ ಅಧ್ಯಯನಕ್ಕೆ ಪುಷ್ಟಿ ನೀಡಿದೆ. ಜೆಎಜಿಜಿಇಡಿ ಎಂಬ ಪ್ರೋಟೀನ್ ಹೂವಿನ ದಳಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆದರೆ, ಜೀವಕೋಶಗಳು, ಸಸ್ಯಕೋಶಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದಕ್ಕೆ ಸಾಧ್ಯವಿಲ್ಲ. ಹೀಗಿರುವಾಗ ಎಲೆ, ದಳಗಳ ಬೆಳವಣಿಗೆ ಮತ್ತು ನಿಗದಿತ ಆಕಾರಕ್ಕೆ ಬೇರೆ ಯಾವುದಾದರೊಂದು ವಿಚಾರ ಕಾರಣವಾಗಿರಬೇಕು ಎಂದು ಚಿಂತನೆ ನಡೆಸಿ, ಸಂಶೋಧನೆಗಿಳಿದ ವಿಜ್ಞಾನಿಗಳಿಗೆ ಜೈವಿಕ ನಕಾಶೆಯ ಪಾತ್ರ ಪರಿಚಯವಾಗಿದೆ. ಜೈವಿಕ ನಕಾಶೆಯು ಒಂದು ಜೀವಕೋಶ ಅಥವಾ ಸಸ್ಯಕೋಶ ಬೆಳೆಯಬೇಕಾದ ದಿಕ್ಕು ಮತ್ತು ಪ್ರಮಾಣವನ್ನು ನಿರ್ಧರಿಸುತ್ತವೆ. ಹೀಗಾಗಿ ಎಲೆ ಮತ್ತು ಹೂವಿನ ದಳಗಳಿಗೆ ನಿಗದಿತ ಆಕಾರ ಬರುತ್ತದೆ. ವಿಭಿನ್ನ ಸಸ್ಯಗಳ ಎಲೆಗಳು ಮತ್ತು ಹೂವುಗಳು ವಿಭಿನ್ನವಾಗಿರುವುದೂ ಇದೇ ಕಾರಣಕ್ಕೆ ಎನ್ನುತ್ತಾರೆ ವಿಜ್ಞಾನಿಗಳು.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು