ಚರ್ಮಕೋಶದಿಂದ ಕಾಂಡಕೋಶ


ದೇಹದ ಯಾವುದೇ ಭಾಗದ ಜೀವಕೋಶಗಳು ಅಭಿವೃದ್ಧಿಯಾಗುವುದು ಭ್ರೂಣದಲ್ಲಿರುವ ಶಿಶು ಹೊಂದಿರುವ ಕಾಂಡಕೋಶದಿಂದ. ಮಗು ಜನಿಸಿದ ತಕ್ಷಣ ಹೊಕ್ಕುಳಬಳ್ಳಿಯಿಂದ ಕಾಂಡಕೋಶವನ್ನು ತೆಗೆದು ಸಂಸ್ಕರಿಸಿಟ್ಟು, ಭವಿಷ್ಯದಲ್ಲಿ ದೇಹದ ಯಾವುದಾದರೂ ಭಾಗದ ಜೀವಕೋಶಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ಈಗಾಗಲೇ ವೈಜ್ಞಾನಿಕ ಜಗತ್ತು ಅಭಿವೃದ್ಧಿಪಡಿಸಿದೆ. ಕಾಂಡಕೋಶದ ಮಹತ್ವವನ್ನು ಅರ್ಥ ಮಾಡಿಕೊಂಡಿರುವ ವಿಜ್ಞಾನಿಗಳು ಪ್ರಬುದ್ಧ ಮಾನವನ ದೇಹದಲ್ಲಿರುವ ಜೀವಕೋಶಗಳಿಂದ ಕಾಂಡಕೋಶವನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಬಹಳ ವರ್ಷಗಳಿಂದ ಮಾಡುತ್ತಲೇ ಬಂದಿದ್ದರು. ಆ ಪ್ರಯತ್ನ ಈಗ ಸಾಕಾರಗೊಂಡಿದೆ.
ಚರ್ಮದ ಕೋಶಗಳಿಂದ ಕಾಂಡಕೋಶ ಅಭಿವೃದ್ಧಿಪಡಿಸುವಲ್ಲಿ ಅಮೆರಿಕದ ಓರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿ ಮತ್ತು ಓರೆಗಾನ್ ನ್ಯಾಷನಲ್ ಪ್ರೈಮೇಟ್ ರಿಸರ್ಚ್ ಸೆಂಟರ್‌ನ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ದೇಹದ ಯಾವುದೇ ಭಾಗ ಊನಗೊಂಡರೂ ಕಾಂಡಕೋಶ ಚಿಕಿತ್ಸೆಯ ಮೂಲಕ ಅದನ್ನು ಸರಿಪಡಿಸಬಹುದು. ಹೀಗಾಗಿ ಪ್ರಸ್ತುತ ನಡೆದಿರುವ ಸಂಶೋಧನೆ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಎಂದೇ ಹೇಳಬೇಕು.
ಮೊದಲಿಗೆ ವಿಜ್ಞಾನಿಗಳ ತಂಡ ವ್ಯಕ್ತಿಯ ಡಿಎನ್‌ಎ ಹೊಂದಿರುವ ಚರ್ಮಕೋಶದ ಬೀಜಾಣು ಅಥವಾ ನ್ಯೂಕ್ಲಿಯಸ್ಸನ್ನು ಎಗ್‌ಸೆಲ್ ಅಥವಾ ಅಂಡಕೋಶವಾಗಿ ಪರಿವರ್ತಿಸಿದ್ದಾರೆ. ನಂತರ ಈ ಅಂಡಕೋಶಗಳಿಂದ ಕಾಂಡಕೋಶಗಳನ್ನು ಉತ್ಪಾದಿಸಿದ್ದಾರೆ. ನ್ಯೂಕ್ಲಿಯಾರ್ ಟ್ರಾನ್ಸ್‌ಫರ್ ಎಂಬ ತಂತ್ರಜ್ಞಾನ ಇದಾಗಿದ್ದು, ಈ ತಂತ್ರಜ್ಞಾನದ ಮೂಲಕ ಸೃಷ್ಟಿಸಿದ ಭ್ರೂಣಾವಸ್ಥೆಯ ಕಾಂಡಕೋಶಗಳು ಯಾವುದೇ ಭಾಗದ ಜೀವಕೋಶಗಳಾಗಿ ಪರಿವರ್ತನೆ ಹೊಂದುವ ಶಕ್ತಿ ಪಡೆದಿವೆ ಎನ್ನುತ್ತಾರೆ ವಿಜ್ಞಾನಿ ಡಾ.ಮಿತಾಲಿಪೋವ್.
ಹೃದ್ರೋಗ, ಮರೆಗುಳಿತನ ಮೊದಲಾದ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಕಾಂಡಕೋಶ ಚಿಕಿತ್ಸೆ ಪ್ರಾಮುಖ್ಯತೆ ಪಡೆದಿದೆ. ಹೀಗಾಗಿ ಭವಿಷ್ಯದಲ್ಲಿ ರೋಗಗಳನ್ನು ಸುಲಭವಾಗಿ ಗುಣಪಡಿಸಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ನಡೆಸಿದ ಈ ಪ್ರಯೋಗದಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂಬುದು ಡಾ.ಮಿತಾಲಿಪೋವ್ ಅಂಬೋಣ.
ಏನಿದು ಕಾಂಡಕೋಶ ಚಿಕಿತ್ಸೆ?: ದೇಹದ ಎಲ್ಲಾ ಅಂಗಾಂಗಗಳ ಕೋಶಗಳು ಅಭಿವೃದ್ಧಿಯಾಗುವುದು ಕಾಂಡಕೋಶದಿಂದ. ಯಾವುದೇ ಒಂದು ಅಂಗದ ಕೋಶಗಳು ಅಪಘಾತದಿಂದ, ರೋಗದಿಂದ ಅಥವಾ ಇನ್ಯಾವುದೇ ಕಾರಣದಿಂದ ಹಾನಿಗೀಡಾದರೆ ಅಥವಾ ಊನಗೊಂಡರೆ ಅದನ್ನು ಸರಿಪಡಿಸುವುದಕ್ಕಾಗಿ ವೈದ್ಯಕೀಯ ಜಗತ್ತು ಕಂಡುಕೊಂಡ ಅತ್ಯುತ್ತಮ ಚಿಕಿತ್ಸಾ ಪದ್ಧತಿಯೇ ಕಾಂಡಕೇಶ ಚಿಕಿತ್ಸೆ.
ಪ್ರಬುದ್ಧಗೊಂಡಿರುವ ಕಾಂಡಕೋಶವನ್ನು ಪ್ರಯೋಗಾಲದಲ್ಲಿ ಸಂಸ್ಕರಿಸಿ, ಊನಗೊಂಡಿರುವ ಅಂಗದ ಜೀವಕೋಶಗಳನ್ನು ಸೃಷ್ಟಿ ಮಾಡಲಾಗುತ್ತದೆ. ನಂತರ ಈ ಜೀವಕೋಶಗಳನ್ನು ದೇಹಕ್ಕೆ ಸೇರಿಸಿ, ಊನಗೊಂಡ ಭಾಗವನ್ನು ಸರಿಪಡಿಸಲಾಗುತ್ತದೆ. ಮುಖ್ಯವಾಗಿ ಹೃದ್ರೋಗ, ಮಾಂಸಖಂಡಗಳ ಊನ, ಟೈಪ್ ೧ ಮಧುಮೇಹ, ಪರ್ಕಿನ್ಸನ್ಸ್ ಡಿಸೀಸ್ ಅಥವಾ ಮರೆಗುಳಿತನದಂಥ ರೋಗಗಳಿಗೆ ಚಿಕಿತ್ಸೆ ನೀಡಲು ಈ ತಂತ್ರಜ್ಞಾನವನ್ನೇ ಬಳಸಲಾಗುತ್ತದೆ. ಕಾಂಡಕೋಶ ಚಿಕಿತ್ಸೆಯ ಮೂಲಕ ಕ್ಯಾನ್ಸರ್ ಗುಣಪಡಿಸುವ ಪ್ರಯತ್ನವೂ ವೈದ್ಯವಿಜ್ಞಾನ ವಲಯದಲ್ಲಿ ನಡೆದಿದ್ದು ಶೀಘ್ರವೇ ಈ<<77?ರಯತ್ನದಲ್ಲಿ ಯಶಸ್ಸು ಸಾಧಿಸುವ ನಿರೀಕ್ಷೆಯಿದೆ. ಈ ಎಲ್ಲ ದೃಷ್ಟಿಯಿಂದ ಯೋಚಿಸುವುದಾದದರೆ ಚರ್ಮಕೋಶದಿಂದ ಕಾಂಡಕೋಶ ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾದದ್ದು ಭವಿಷ್ಯದ ವೈದ್ಯವಿಜ್ಞಾನದ ಅಚ್ಚರಿಗಳಿಗೆ ಅಡಿಪಾಯ ಹಾಕಿದಂತಾಗಿದೆ.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು