ಸಂಸ್ಕೃತಿಯ ಮೂಲ ಹವಾಮಾನ ವೈಪರೀತ್ಯ!

ಮಾನವ ವಿಶಿಷ್ಟವಾದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿದ್ದಾನೆ. ಜಗತ್ತಿನ ಒಂದೊಂದು ಭಾಗದಲ್ಲಿ ಒಂದೊಂದು ಸಂಸ್ಕೃತಿ ಮನೆಮಾಡಿದೆ. ದೇಶ-ದೇಶಗಳ ಸಂಸ್ಕೃತಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಒಂದು ಜಿಲ್ಲೆಯೇ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ರೀತಿಯ ಸಂಸ್ಕೃತಿ ಬೆಳೆದು ಬಂದಿರುವಂಥ ಸ್ಥಿತಿಯನ್ನೂ ಕಾಣಬಹುದು. ಆದರೆ ಇಂದಿನ ಯುಗದ ಮಾನವ ಬೆಳೆಸಿಕೊಂಡು ಬಂದಿರುವ ಈ ಸಂಸ್ಕೃತಿಗೆ ಕಾರಣವೇನು ಗೊತ್ತೇ? ಹವಾಮಾನದಲ್ಲಾದಂಥ ವೈಪರೀತ್ಯ!
ಅಚ್ಚರಿಯಾಗುತ್ತದೆ ನಿಜ, ಹವಾಮಾನ ವೈಪರೀತ್ಯಕ್ಕೂ ಸಂಸ್ಕೃತಿಗೂ ಎತ್ತಣಿಂದೆತ್ತ ಸಂಬಂಧ? ತಾಪಮಾನ ತೀವ್ರಗತಿಯಲ್ಲಿ ಏರಿಳಿತಗೊಳ್ಳುವುದರಿಂದ ಸಂಸ್ಕೃತಿಯಲ್ಲೇನಾದರೂ ಬದಲಾವಣೆಯಾಗುತ್ತದೆಯೇ? ಹೌದು ಎನ್ನುತ್ತಿದ್ದಾರೆ ಬ್ರಿಟನ್‌ನ ಸಂಶೋಧಕರು. ಕಾರ್ಡಿಫ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಅರ್ಥ್ ಅಂಡ್ ಓಶಿಯನ್ ಸೈನ್ಸಸ್, ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಮತ್ತು ಯೂನಿವರ್ಸಿಟಿ ಆಫ್ ಬಾರ್ಸಿಲೋನಾದ ಸಂಶೋಧಕರ ತಂಡ ನಡೆಸಿದ ಅಧ್ಯಯನದ ಪ್ರಕಾರ ಸಂಸ್ಕೃತಿಯಲ್ಲಿ ಮಹತ್ತರ ಬದಲಾವಣೆಯಾಗುವುದಕ್ಕೆ ಕಾರಣವಾದದ್ದು ಹವಾಮಾನದಲ್ಲಾದ ಹಠಾತ್ ವೈಪರೀತ್ಯ.
ಸುಮಾರು ೮೦,೦೦೦ ವರ್ಷಗಳಷ್ಟು ಹಿಂದೆ, ಅಂದರೆ ಮಧ್ಯಶಿಲಾಯುಗದ ಕಾಲದಲ್ಲಿ ಭೂಮಿಯಲ್ಲಿ ತೀವ್ರ ಹವಾಮಾನ ವೈಪರೀತ್ಯ ಕಾಣಿಸಿಕೊಂಡಿತು. ಭೂಮಿಯ ಉತ್ತರಾರ್ಧಗೋಳ ಭಾರೀ ಪ್ರಮಾಣದ ಚಳಿಗೆ ತುತ್ತಾಯಿತು. ಅದರ ಪರಿಣಾಮವಾಗಿ ಉತ್ತರಾರ್ಧಗೋಳದ ಅತಿ ಎತ್ತರದ ಪ್ರದೇಶಗಳಿಗೆ ಶಾಖ ಪ್ರವಹಿಸುವ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಂಠಿತಗೊಂಡಿತು. ಶೀಖ ಪ್ರವಹನ ನಿಂತೇ ಹೋಯಿತು ಎಂದರೂ ತಪ್ಪಿಲ್ಲ. ಇದು ದಕ್ಷಿಣಾರ್ಧಗೋಳದ ಮೇಲೆ ಪರಿಣಾಮ ಬೀರಿ, ಭಾರೀ ಶಾಖ ವಾತಾವರಣ ನಿರ್ಮಾಣವಾಯಿತು. ದಕ್ಷಿಣ ಆಫ್ರಿಕಾದ ಸಹಾರ ವ್ಯಾಪ್ತಿಯಲ್ಲಿ ಮಾತ್ರ ವಿಪರೀತ ಮಳೆಯಾಯಿತು. ಕ್ಷಿಪ್ರ ಹವಾಮಾನ ವೈಪರೀತ್ಯಕ್ಕೆ ತುತ್ತಾದದ್ದು ದಕ್ಷಿಣ ಆಫ್ರಿಕಾ. ಕಳೆದ ೧ ಲಕ್ಷ ವರ್ಷದಲ್ಲಿ ಈ ಖಂಡ ಭೂಮಿಯ ಇತರ ಭಾಗಗಳಿಗಿಂತ ಅಧಿಕ ಹವಾಮಾನ ವೈಪರೀತ್ಯಕ್ಕೆ ಒಳಗಾಗಿದೆ.
ತೀವ್ರಗತಿಯ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಂಡು ಬದುಕುವ ಅನಿವಾರ್ಯತೆಗೆ ಮಾನವ ಸಿಲುಕಿದ. ಇದರ ಪರಿಣಾಮವೇ ಸಂಸ್ಕೃತಿಯಲ್ಲಿನ ಬದಲಾವಣೆ. ತೀವ್ರ ಶೆಖೆಗೆ ಹೇಗೆ ಹೊಂದಿಕೊಳ್ಳಬೇಕು, ತೀವ್ರ ಚಳಿ, ಮಳೆ ಬಂದರ ಏನು ಮಾಡಬೇಕು? ಎಂಬುದನ್ನೆಲ್ಲ ಲೆಕ್ಕಾಚಾರ ಮಾಡಿ ತಾನು ಬದುಕಬೇಕಾದ ರೀತಿಯನ್ನು ಕಂಡುಕೊಂಡ. ಮಧ್ಯ ಶಿಲಾಯುಗದಲ್ಲಿ ಮಾನವನಲ್ಲಾದ ಈ ಪರಿವರ್ತನೆಯೇ ಸಂಸ್ಕೃತಿಯಾಗಿ ಬೆಳೆದು ಬಂತು. ಕಾಲಕ್ಕೆ ತಕ್ಕಂತೆ ಈ ಸಂಸ್ಕೃತಿಯಲ್ಲೂ ಮಾರ್ಪಾಟುಗಳಾದವು. ಇಂದಿನ ಯುಗದ ಮನುಷ್ಯನ ಹಲವಾರು ವರ್ತನೆಗಳು ಮಧ್ಯ ಶಿಲಾಯುಗದ ಮಾನವನ ವರ್ತನೆಯ ಜತೆ ಸಾಮ್ಯತೆ ಹೊಂದಿವೆ ಎನ್ನುತ್ತಾರೆ ಸಂಶೋಧಕರು.
ಇಂದು ಕೂಡಾ ಜಗತ್ತು ಹವಾಮಾನ ವೈಪರೀತ್ಯಕ್ಕೆ ತುತ್ತಾಗಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತದೆ. ಇಂಗಾಲದ ಡೈ ಆಕ್ಸೈಡನ್ನು ಪರಿಸರಕ್ಕೆ ಉಗುಳುವ ಪ್ರಮಾಣ ನಿಯಂತ್ರಣವನ್ನು ಮೀರಿ ಹೋಗಿದೆ. ವಿಷ ಅನಿಲಗಳನ್ನು ಹೊರಸೂಸುವ ಪ್ರಮಾಣವನ್ನು ನಿಯಂತ್ರಿಸಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಇಂಗಾಲದ ಡೈ ಆಕ್ಸೈಡ್ ನಿಯಂತ್ರಣ ಎಂಬುದೇ ಮುಂದೆ ಸಂಸ್ಕೃತಿಯಾಗಿ, ಮಾನವ ಜೀವನದ ನಿಯಮವಾಗಿ ಬದಲಾಗಬಹುದೇನೋ?!

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು