ಅದೃಶ್ಯಶಕ್ತಿಯ ಬೆನ್ನೇರಿ...


ಈ ಜಗತ್ತಿನ ಸೃಷ್ಟಿಗೆ ಮೂಲ ಕಾರಣ ಎಂದು ವೈಜ್ಞಾನಿಕ ವಲಯ ಭಾವಿಸಿರುವುದು ಅದೃಶ್ಯಶಕ್ತಿಯನ್ನು. ಖಗೋಳಶಾಸ್ತ್ರದ ಪರಿಭಾಷೆಯಲ್ಲಿ ಇದನ್ನು ಡಾರ್ಕ್ ಮ್ಯಾಟರ್ ಅಥವಾ ಅದೃಶ್ಯ ವಸ್ತು ಎಂದು ಕರೆಯಲಾಗುತ್ತದೆ. ಸೂರ್ಯ ಅಥವಾ ಇನ್ಯಾವುದೇ ನಕ್ಷತ್ರಗಳಿಂದ ಇದರ ಮೇಲೆ ಬೀಳುವ ಬೆಳಕು ಪ್ರತಿಫಲನಗೊಳ್ಳುವುದಿಲ್ಲವಾದ ಕಾರಣ ಇದು ಕಾಣಿಸುವುದಿಲ್ಲ. ಹೀಗಾಗಿ ಇದಕ್ಕೆ ಡಾರ್ಕ್ ಮ್ಯಾಟರ್ ಎಂಬ ಹೆಸರು ಬಂತು. ಇದರ ಸ್ವರೂಪವನ್ನು ಕಂಡುಕೊಳ್ಳಬೇಕು, ಜಗತ್ತಿನ ಸೃಷ್ಟಿಯಲ್ಲಿ ಇದು ಹೇಗೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ವಿಜ್ಞಾನಿಗಳು ಹಲವು ದಶಕಗಳಿಂದ ಸಂಶೋಧನೆ ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ಇದೀಗ ಹೊಸ ಭರವಸೆಯ ಕಿರಣವೊಂದು ಗೋಚರಿಸಿದ್ದು, ಅದೃಶ್ಯಶಕ್ತಿಯನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ವಿಜ್ಞಾನಿಗಳ ತಂಡವೊಂದು ಮಹತ್ವದ ಹೆಜ್ಜೆಯಿಟ್ಟಿದೆ.
ನೊಬೆಲ್ ಪುರಸ್ಕೃತ ಭೌತಶಾಸ್ತ್ರಜ್ಞ ಸ್ಯಾಮುಯೆಲ್ ಟಿಂಗ್ ನೇತೃತ್ವದ ವಿಜ್ಞಾನಿಗಳ ತಂಡ ಆಲ್ಫಾ ಮ್ಯಾಗ್ನೆಟಿಕ್ ಸ್ಪೆಕ್ಟ್ರೋಮೀಟರ್ (ಎಎಂಎಸ್1) ಮೂಲಕ ನಡೆಸಿದ ಸಂಶೋಧನೆಯಲ್ಲಿ ಈ ಅದೃಶ್ಯಶಕ್ತಿಯ ಬಗ್ಗೆ ಸುಳಿವು ಸಿಕ್ಕಿದೆಯಂತೆ. ಒಟ್ಟು 200 ಕೋಟಿ ಡಾಲರ್ (ಸುಮಾರು ಕೋಟಿ ರೂ.) ವೆಚ್ಚದಲ್ಲಿ ನಡೆಸಲಾಗಿರುವ ಪ್ರಯೋಗದಲ್ಲಿ 2500 ಕೋಟಿಗೂ ಅಧಿಕ ದಾಖಲೆಗಳನ್ನು ವಿಜ್ಞಾನಿಗಳು ಸಂಗ್ರಹಿಸಿದ್ದಾರೆ. 0.5 ಜಿಇವಿ(ಗಿಗಾ ಎಲೆಕ್ಟ್ರಾನ್ ವೋಲ್ಟ್)ಯಿಂದ 350 ಜಿಇವಿ ನಡುವಿನ ಶಕ್ತಿಮಟ್ಟದಲ್ಲಿರುವ 4 ಲಕ್ಷ ಪಾಸಿಟ್ರಾನ್‌ಗಳು ಕೂಡಾ ಈ ದಾಖಲೆಗಳಲ್ಲಿ ಸೇರಿವೆ. ಕಾಸ್ಮಿಕ್ ಕಿರಣಗಳನ್ನೂ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಪಾಸಿಟ್ರಾನ್‌ಗಳ ಶಕ್ತಿ ಮಟ್ಟದಲ್ಲಿನ ವ್ಯತ್ಯಾಸವನ್ನು ಅಧ್ಯಯನಕ್ಕೊಳಪಡಿಸಿದಾಗ, ಕಾಲದಲ್ಲಾಗಲೀ, ದಿಶೆಯಲ್ಲಾಗಲೀ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಅದರರ್ಥ ಈ ಪಾಸಿಟ್ರಾನ್‌ಗಳ ಸೃಷ್ಟಿಮೂಲ ಅದೃಶ್ಯಶಕ್ತಿ ಅಥವಾ ಡಾರ್ಕ್ ಮ್ಯಾಟರ್ ಆಗಿದೆ ಎನ್ನುತ್ತಾರೆ ಪ್ರೊ. ಟಿಂಗ್.
ಜಿನೇವಾದಲ್ಲಿ ಸಿಇಆರ್‌ಎನ್ ಪ್ರಯೋಗಾಲದಲ್ಲಿಯೇ ಎಎಂಎಸ್ ಪಾರ್ಟಿಕಲ್ ಡಿಕೆಕ್ಟರನ್ನು ಅಳವಡಿಸಲಾಗಿದ್ದು, ಕಳೆದ 18 ತಿಂಗಳುಗಳಿಂದ ನಿರಂತರವಾಗಿ ವಿವಿಧ ಶಕ್ತಿಮಟ್ಟದ ಕಣಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬಾಹ್ಯಾಕಾಶದಿಂದ ಭೂಮಿಯೊಳಕ್ಕೆ ಪ್ರವೇಶಿಸುವ ಕಾಸ್ಮಿಕ್ ಕಿರಣಗಳಲ್ಲಿನ ವಿವಿಧಶಕ್ತಿ ಮಟ್ಟದ ಕಣಗಳನ್ನು ಈ ಉಪಕರಣವು ಸ್ವೀಕರಿಸುತ್ತದೆ. ಕಣಗಳು ಈ ಉಪಕರಣವನ್ನು ಹಾದುಹೋಗುತ್ತಿದ್ದಂತೆ ಅವುಗಳ ವೇಗ, ಶಕ್ತಿಮಟ್ಟ ಮತ್ತು ದಿಶೆಯನ್ನು ಕಂಡುಕೊಳ್ಳಲಾಗುತ್ತದೆ. ಈ ಮೂಲಕ ಜಗತ್ತಿನ ಸೃಷ್ಟಿಗೆ ಕಾರಣವಾಗಿರುವ ಅಂಶವನ್ನು ಕಂಡುಕೊಳ್ಳುವ ಪ್ರಯತ್ನ ವಿಜ್ಞಾನಿಗಳದ್ದು.
ಏನಿದು ಡಾರ್ಕ್ ಮ್ಯಾಟರ್?: ಡಾರ್ಕ್ ಮ್ಯಾಟರ್ ಎಂದಾಕ್ಷಣ ಇದೊಂದು ಕಪ್ಪು ಬಣ್ಣದ ವಸ್ತು ಎಂದು ಭಾವಿಸಿದರೆ ತಪ್ಪಾದೀತು. ಈ ಕಣಗಳು ಯಾವುದೇ ಬಣ್ಣವನ್ನು ಹೊರಹೊಮ್ಮಿಸುವುದಿಲ್ಲ. ಏಕೆಂದರೆ, ಸೂರ್ಯ ಅಥವಾ ಯಾವುದೇ ನಕ್ಷತ್ರದ ಬೆಳಕು ಇದರ ಮೇಲೆ ಬಿದ್ದರೆ, ಅದು ಪ್ರತಿಫಲನಗೊಳ್ಳುವುದಿಲ್ಲ. ಬೆಳಕನ್ನು ಈ ಕಣಗಳು ಹೀರಿಕೊಳ್ಳುವುದೂ ಇಲ್ಲ. ಡಾರ್ಕ್ ಬಾಡಿ ರೇಡಿಯೇಷನ್ ಬಗ್ಗೆ ಕೇಳಿರಬಹುದು. ಈ ಕಿರಣಗಳಿಗೂ ಡಾರ್ಕ್ ಮ್ಯಾಟರ್‌ಗೂ ಹತ್ತಿರದ ನಂಟಿದೆ. ಆದರೆ ಇವೆರಡೂ ಒಂದೇ ಅಲ್ಲ. ಡಾರ್ಕ್ ಬಾಡಿ ರೇಡಿಯೇಷನ್‌ಗಳ ಕಾರಣದಿಂದಾಗಿಯೇ ಈ ಜಗತ್ತನ್ನು ನಾವು ಕಾಣಬಹುದಾಗಿದೆ.
ಇನ್ನು, ಡಾರ್ಕ್ ಮ್ಯಾಟರ್ ಇದೆಯೇ ಇಲ್ಲವೇ ಎಂಬ ಬಗ್ಗೆ ವೈಜ್ಞಾನಿಕ ವಲಯದಲ್ಲಿಯೇ ವಿಭಿನ್ನ ವಾದಗಳು ಕೇಳಿಬರುತ್ತಿವೆ. ಆದರೂ ಇದರ ಬಲವಿಲ್ಲದ ಗೆಲಾಕ್ಸಿಗಳು ಪರಿಭ್ರಮಿಸುವುದಕ್ಕೆ ಮತ್ತು ನಿಗದಿಕ ಆಕಾರವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬ್ರಹ್ಮಾಂಡದಲ್ಲಿರುವ ವಿವಿಧ ಗೆಲಾಕ್ಸಿಗಳ ಮೇಲೆ ಆಗುತ್ತಿರುವ ಗುರುತ್ವಶಕ್ತಿಯ ಪ್ರಭಾವ ಈ ಡಾರ್ಕ್ ಮ್ಯಾಟರ್‌ಗಳದ್ದೇ ಇರಬೇಕು ಎನ್ನುತ್ತಾರೆ ವಿಜ್ಞಾನಿಗಳು.
ಇದೇ ಸಿಇಆರ್‌ಎನ್ ಪ್ರಯೋಗಾಲದಲ್ಲಿನ ಲಾರ್ಜ್ ಹ್ಯಾಡ್ರಾನ್ ಕೊಲೈಡರ್‌ನಲ್ಲಿ ದೇವಕಣ ಅಥವಾ ಹಿಗ್ಸ್ ಬೋಸಾನನ್ನು ಕಂಡುಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ. ದೇವಕಣದ ಅನ್ವೇಷಣೆಯಲ್ಲಿ ಯಶಸ್ವಿಯಾಗಿದ್ದೇವೆ ಎಂದು ವಿಜ್ಞಾನಿಗಳು ಹೇಳಿಕೊಂಡರೂ ದೇವಕಣದ ಬಗ್ಗೆ ನಿಖರ ಪುರಾವೆಗಳಿನ್ನೂ ಸಿಕ್ಕಿಲ್ಲ. ಹೀಗಾಗಿ ವಿಜ್ಞಾನಿಗಳು ಕಲೆಹಾಕಿರುವ ದತ್ತಾಂಶಗಳ ಮೇಲೆ ಇನ್ನಷ್ಟು ಅಧ್ಯಯನ ನಡೆಯಬೇಕಾದದ್ದು ಅನಿವಾರ್ಯವಾಗಿದೆ.
ಹಿಗ್ಸ್ ಬೋಸಾನ್ ಮತ್ತು ಡಾರ್ಕ್ ಮ್ಯಾಟರನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ವಿಜ್ಞಾನಿಗಳು ಶೇ. 100ರಷ್ಟು ಯಶಸ್ವಿಯಾದಲ್ಲಿ ಈ ಬ್ರಹ್ಮಾಂಡದ ಬಗ್ಗೆ, ಇದರ ಸೃಷ್ಟಿ, ಸ್ಥಿತಿ, ಲಯಗಳ ಬಗ್ಗೆ ಹೊಸ ಜ್ಞಾನಪ್ರವಾಹ ಹರಿದುಬಂದೀತು.


Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು