ಏರುತಿದೆ ಸಾಗರದ ಮಟ್ಟ...


ಅದ್ಯಾಕೋ ಜಗತ್ತು ಅಭಿವೃದ್ಧಿ, ಅಭಿವೃದ್ಧಿ ಎಂದು ಒಂದೇ ಮಂತ್ರ ಜಪಿಸುತ್ತಿದೆ. ಆದರೆ ಈ ಅಭಿವೃದ್ಧಿಯ ಜತೆಯಲ್ಲೇ ಇರಬೇಕಾದ ಪರಿಸರ ಸಂರಕ್ಷಣೆಯ ಮಂತ್ರವನ್ನು ಯಾರೂ ಜಪಿಸುತ್ತಿಲ್ಲ. ಅಂದರೆ ಅಭಿವೃದ್ಧಿ ಎಂಬುದನ್ನು ನಾವು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂಬುದು ದಿಟ. ಚೆಂದ ಚೆಂದದ ಮುಗಿಲೆತ್ತರದ ಕಟ್ಟಡಗಳು, ಕಾರ್ಖಾನೆಗಳು, ನುಣುಪಾದ ರಸ್ತೆಗಳು, ಎಸಿ ಕೋಣೆಗಳು... ಇವೆಲ್ಲ ನಮ್ಮ ದೃಷ್ಟಿಕೋನದಲ್ಲಿ ಅಭಿವೃದ್ಧಿ ಕಾರ್ಯಗಳು. ಆದರೆ ಇವೆಲ್ಲ ಸಾಧ್ಯವಾಗಬೇಕಾದರೆ ಪ್ರಕೃತಿಯ ಮೇಲೆ ನಾವೆಂಥ ಪ್ರಹಾರ ಮಾಡುತ್ತಿದ್ದೇವೆ; ಇದರಿಂದಾಗಿ ನಮ್ಮ ಮುಂದಿನ ಪೀಳಿಗೆ ಎಂಥ ಆಪತ್ತಿನಲ್ಲಿ ಸಿಲುಕಿಕೊಳ್ಳಬೇಕಾದೀತು ಎಂಬುದನ್ನು ಯೋಚಿಸುವ ಗೊಡವೆಗೇ ಹೋಗುವುದಿಲ್ಲ!
ಹೌದು, ವೈಜ್ಞಾನಿಕ ವಲಯದಲ್ಲಿ ಎಚ್ಚರಿಕೆಯ ಗಂಟೆಯೊಂದು ಮೊಳಗಿದೆ. ಮಾನವನಿಂದಾಗಿ ಆಗುತ್ತಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸದೇ ಇದ್ದಲ್ಲಿ ಮುಂದೊಂದು ದಿನ ಸಮುದ್ರದ ಮಟ್ಟ ಹೆಚ್ಚಿ, ಬಹುಪಾಲು ಭೂಮಿ ಸಾಗರ ಪಾಲಾಗುತ್ತದೆ. ಆಗ ಮಾನವ ಸಂಕುಲ ಉಳಿದುಕೊಳ್ಳಲು ಜಾಗಕ್ಕಾಗಿ ಪರದಾಡಬೇಕಾಗುತ್ತದೆ!

ಹೀಗಾಗಬಾರದು ಎಂದಿದ್ದರೆ ಮಾಡಬೇಕಾದದ್ದು ಮಾಲಿನ್ಯ ನಿಯಂತ್ರಣ. ಭಾರತೀಯ ಪರಿಸರತಜ್ಞ ವೀರಭದ್ರನ್ ರಾಮನಾಥನ್ ನೇತೃತ್ವದ ಸಂಶೋಧಕರ ತಂಡ ಈ ಎಚ್ಚರಿಕೆ ನೀಡಿದ್ದು, ಮಾಲಿನ್ಯಕಾರಕಗಳು ಸಮುದ್ರ ಮಟ್ಟವನ್ನು ಶೇ.25ರಿಂದ ಶೇ.50ರಷ್ಟು ಹೆಚ್ಚಿಸುತ್ತಿವೆ. ಹಿಮಪರ್ವತಗಳಲ್ಲಿನ ನೀರ್ಗಲ್ಲುಗಳು ಕರಗುತ್ತಿರುವುದರಿಂದ ಸಮುದ್ರ ಮಟ್ಟ ಪ್ರತಿ ವರ್ಷವೂ 3 ಮಿ.ಮೀ.ನಷ್ಟು ಹೆಚ್ಚಾಗುತ್ತಿದೆ. ಜಾಗತಿಕ ತಾಪಮಾನ ಮತ್ತು ಭೂವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣ ಇನ್ನಷ್ಟು ಏರಿಕೆಯಾದಲ್ಲಿ ಸಮುದ್ರದ ಮಟ್ಟ ಅಪಾಯಕಾರಿಯಾಗಿ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.
ಜಗತ್ತಿನ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ನಗರಗಳಾದ ಮುಂಬೈ, ನ್ಯೂಯಾರ್ಕ್, ಮಿಯಾಮಿ, ಆಮ್‌ಸ್ಟರ್‌ಡ್ಯಾಮ್, ಟೋಕಿಯೋಗಳು ಸಮುದ್ರತೀರದಲ್ಲೇ ಇವೆ. ಸಾಗರ ಮಟ್ಟ ಏರಿಕೆಯಾದಲ್ಲಿ ಈ ನಗರಗಳ ಬಹುಪಾಲು ಪ್ರದೇಶ ಮುಳುಗಡೆಯಾಗುವುದು ಖಂಡಿತ ಎಂದು ಸಂಶೋಧಕರು ಹೇಳಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಪರಿಸರ ಮಾಲಿನ್ಯವನ್ನು ತಡೆಯುವುದಕ್ಕೆ ಅಗತ್ಯ ಕ್ರಮ ಕೈಗೊಂಡಲ್ಲಿ ಮತ್ತು ಅಭಿವೃದ್ಧಿಯ ಜತೆ ಜತೆಗೆ ಹಸಿರುಪ್ರಕೃತಿಯನ್ನು ಬೆಳೆಸುವುದಕ್ಕೂ ಪ್ರಾಧಾನ್ಯತೆ ಕೊಟ್ಟರೆ ಮುಂದಿನ ಪೀಳಿಗೆಗಾಗಿ ನಮ್ಮ ಜಗತ್ತಿನಲ್ಲಿ ಒಂದಷ್ಟು ಅವಕಾಶಗಳಿರುತ್ತವೆ ಎನ್ನುತ್ತಾರೆ ರಾಮನಾಥನ್.
ಒಂದು ವೇಳೆ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೇ ಪ್ರಕೃತಿಯನ್ನು ನಿರ್ಲಕ್ಷಿಸಿದ್ದೇ ಆದಲ್ಲಿ ಸಮುದ್ರದ ಮಟ್ಟ 2100ನೇ ಇಸವಿಯ ವೇಳೆಗೆ ಈಗಿರುವುದಕ್ಕಿಂತ ಶೇ.45ರಷ್ಟು ಹೆಚ್ಚಾಗುತ್ತದೆ. ಹಾಗಾಗಬೇಕೇ ಅಥವಾ ಮಾಲಿನ್ಯ ನಿಯಂತ್ರಣಕ್ಕೆ ನಾವು ಮುಂದಾಗಬೇಕೇ?

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು