ಸ್ಪೇಸ್ ವಾರ್

ಇದು ಈ ಬಾರಿ ವಿಜಯ Nextನಲ್ಲಿ ಪ್ರಕಟವಾದ ಕವರ್ ಸ್ಟೋರಿ. ಅದನ್ನು ಯಥಾವತ್ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ ಮಹಾಕದನಕ್ಕೊಂದು ರಣರಂಗ ಕೈವಾರ ಗೋಪೀನಾಥ್ ೨೦೦೭ರ ಜನವರಿ ೧೧ರಂದು ಒಂದು ಆತಂಕಕಾರಿ ಘಟನೆ ಸಂಭವಿಸಿತು. ದಕ್ಷಿಣ ಚೀನಾದ ಅಂತರಿಕ್ಷದ ಮೇಲೆ ಒಂದು ಕೃತಕ ಉಪಗ್ರಹ ತನ್ನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿತ್ತು. ಇದ್ದಕ್ಕಿದ್ದಂತೆ ಆ ಕೃತಕ ಉಪಗ್ರಹ ಚೂರುಚೂರಾಗಿ ಒಡೆದು ಭಗ್ನಾವಶೇಷಗಳ ಮೋಡವನ್ನೇ ಸೃಷ್ಟಿಸಿತು. ಏಳು ವರುಷಗಳಿಂದ ನಿರಂತರವಾಗಿ ಭೂಕೇಂದ್ರಗಳಿಗೆ ತನಗೆ ಒಪ್ಪಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ ಆ ಆರು ಅಡಿ ಉದ್ದದ ಕೃತಕ ಉಪಗ್ರಹವನ್ನು ನಾಶ ಮಾಡಿದ್ದು ಯಾರು ಎಂಬ ವಿಷಯ ತಿಳಿದರೆ ಅಚ್ಚರಿ ಮೂಡುತ್ತದೆ. ಆ ಕೃತಕ ಉಪಗ್ರಹವನ್ನು ಸೃಷ್ಟಿಸಿದ ಚೀನಾ ದೇಶವೇ ಅದನ್ನು ನಾಶ ಮಾಡಿತು ಎಂದರೆ ಆಶ್ಚರ್ಯವಾಗುತ್ತದೆ. ಸಿಚೂನ್ ರಾಜ್ಯದ ಕ್ಸಿಚಾಂಗ್ ಪ್ರದೇಶದ ಹತ್ತಿರವಿರುವ ಸೋಂಗ್ಲಿನ್ ಪರೀಕ್ಷಾ ಕೇಂದ್ರದಿಂದ ಅಂತರಿಕ್ಷದ ಕಡೆ ಉಡಾಯಿಸಲಾದ ಬಹು-ಹಂತಗಳ ಕ್ಷಿಪಣಿಯೊಂದು ಗಂಟೆಗೆ ೧೮೦೦೦ ಮೈಲಿಗಳ ವೇಗದಲ್ಲಿ ಪ್ರಯಾಣಿಸುತ್ತಾ ಆ ಕೃತಕ ಉಪಗ್ರಹದ ಜಾಡು ಹಿಡಿದು ಅದನ್ನು ನಾಶಮಾಡಿತು.