ಸಹಾರಾ ಮರುಭೂಮಿಯಲ್ಲೊಂದು ಓಯಸಿಸ್

ಮಾನವನಿಗೂ ಓಯಸಿಸ್ ನಿರ್ಮಿಸುವುದಕ್ಕೆ ಸಾಧ್ಯವೇ? ಅಚ್ಚರಿಬೇಡ, ಜಗತ್ತು ತಾಂತ್ರಿಕವಾಗು ಮುಂದುವರಿಯುತ್ತಿರುವಂಥ ಇಂದಿನ ದಿನದಲ್ಲಿ ಅಸಾಧ್ಯ ಎಂಬುದು ಬಹುಶಃ ಯಾವುದೂ ಇಲ್ಲ.

 ಅದು ಸಹಾರಾ ಮರುಭೂಮಿ. ಸಾಹಸ ಮಾಡುವುದಕ್ಕೆಂದು ಹೊರಟು ನೀರಿಗಾಗಿ ಹುಡುಕಾಡುತ್ತಿದ್ದೀರಿ. ಎಲ್ಲಿ ನೋಡಿದರೂ ನೀರಿದೆ ಎಂಬ ಭ್ರಮೆ. ಆದರೆ ನೀರು ಕಾಣಿಸುತ್ತಿಲ್ಲ. ಮತ್ತೂ ಸ್ವಲ್ಪ ಮುಂದಕ್ಕೆ ಹೋದಿರಿ. ಅಲ್ಲೊಂದು ನೀರ ಚಿಲುಮೆ ಇದೆ ಎಂದು ನಿಮಗೆ ಭಾಸವಾಗುತ್ತದೆ. ಅದೂ ಮರೀಚಿಕೆಯೇ ಇರಬೇಕು ಎಂಬ ತೀರ್ಮಾನಕ್ಕೆ ಬರುತ್ತೀರಿ. ಆದರೂ ಕುತೂಹಲ. ತಣಿಯದ ದಾಹ. ಹನಿ ನೀರು ಸಿಕ್ಕರೆ ಸಾಕು, ಜೀವನವೇ ಧನ್ಯವಾಗುತ್ತದೆಂಬ ಹಪಹಪಿ. ಹತ್ತಿರ ಹೋಗಿ ನೋಡಿದರೆ ಆಶ್ಚರ್ಯ. ನಿಜಕ್ಕೂ ಅಲ್ಲೊಂದು ಓಯಸಿಸ್. ಅದು ನೈಸರ್ಗಿಕವಲ್ಲ, ಮಾನವ ನಿರ್ಮಿತ.
ಮಾನವನಿಗೂ ಓಯಸಿಸ್ ನಿರ್ಮಿಸುವುದಕ್ಕೆ ಸಾಧ್ಯವೇ? ಅಚ್ಚರಿಬೇಡ, ಜಗತ್ತು ತಾಂತ್ರಿಕವಾಗು ಮುಂದುವರಿಯುತ್ತಿರುವಂಥ ಇಂದಿನ ದಿನದಲ್ಲಿ ಅಸಾಧ್ಯ ಎಂಬುದು ಬಹುಶಃ ಯಾವುದೂ ಇಲ್ಲ. ಹೀಗಿರುವಾಗ ಮರುಭೂಮಿಯಲ್ಲಿ ಓಯಸಿಸ್ ಸೃಷ್ಟಿಸುವುದು ದೊಡ್ಡ ವಿಚಾರವೇ?

ಸಹಾರಾ ಮರುಭೂಮಿಯಲ್ಲಿ ಇಂಥದ್ದೊಂದು ಓಯಸಿಸ್ ಸೃಷ್ಟಿಸಿದ್ದಾರೆ ಸಹಾರಾ ಫಾರೆಸ್ಟ್ ಪ್ರಾಜೆಕ್ಟ್ ತಂಡದ ವಿಜ್ಞಾನಿಗಳು. ಖತಾರ್‌ನ ಸಹಾರಾ ಮರುಭೂಮಿ ವ್ಯಾಪ್ತಿಯಲ್ಲಿನ ಸುಮಾರು
೧೦,೦೦೦ ಚದರ ಮೀಟರ್ ಪ್ರದೇಶದಲ್ಲಿ ಒಟ್ಟು ೩೩ ಲಕ್ಷ ಪೌಂಡ್ (೨೬.೨೬ ಕೋಟಿ ರುಪಾಯಿ) ವೆಟ್ಟದಲ್ಲಿ ಈ ಓಯಸಿಸ್ ನಿರ್ಮಾಣವಾಗುತ್ತಿದೆ. ಇದೇ ವರ್ಷದಲ್ಲಿಯೇ ಇದನ್ನು ಬಳಕೆಗೆ ಮುಕ್ತಗೊಳಿಸುವ ಚಿಂತನೆಯೂ ಇದೆಯಂತೆ.

ಪ್ರೇರಣೆಯಾದದ್ದು ಒಂಟೆಯ ಮೂಗು

ವಿಜ್ಞಾನಿಗಳ ಈ ಸಂಶೋಧನೆಗೆ ಪ್ರೇರಣೆಯಾದದ್ದು ಒಂಟೆಯ ಮೂಗು. ಮರುಭೂಮಿಯಲ್ಲಿ ವಾಸಿಸುವಂಥ ಒಂಟೆ ತಾನು ಬದುಕುವುದಕ್ಕೆ ಬೇಕಾಗಿ ಪ್ರಕೃತಿದತ್ತವಾದ ವಿಶೇಷ ಸಾಮರ್ಥ್ಯವನ್ನು ಹೊಂದಿದೆ. ಇದು ಉಸಿರಾಡುವಾಗ ಗಾಳಿಯಲ್ಲಿರುವ ನೀರಿನ ಅಂಶವನ್ನು ಸೆಳೆದುಕೊಂಡು ಅದನ್ನು ಘನೀಕರಿಸಿ ನೀರಿನ ರೂಪಕ್ಕೆ ಪರಿವರ್ತಿಸಿಕೊಳ್ಳುತ್ತದೆ. ಹೀಗಾಗಿ ಎಷ್ಟು ಹೊತ್ತು ಬೇಕಾದರೂ ನೀರಿಲ್ಲದೇ ಅದು ಬದುಕಬಲ್ಲುದು. ಅಧಿಕ ತೇವಾಂಶವಿರುವ ಗಾಳಿಯಾಗಲೀ, ಅತ್ಯಂತ ತಾಪದಿಂದ ಕೂಡಿರುವ ಗಾಳಿಯೇ ಆಗಲಿ, ಒಂಟೆ ಆ ಗಾಳಿಯಲ್ಲಿರುವ ನೀರಾವಿಯನ್ನು ಸೆಳೆದುಕೊಂಡು ತನ್ನ ಬದುಕು ಸುಗಮವಾಗಿಸಿಕೊಳ್ಳುತ್ತದೆ.

ಇದು ವಿಜ್ಞಾನಿಗಳನ್ನು ಆಕರ್ಷಿಸಿದ್ದು, ಇದನ್ನೇ ಕೃತಕವಾಗಿ ಮಾಡುವ ಮೂಲಕ ಮರುಭೂಮಿಯನ್ನು ಹಚ್ಚಹಸುರಿನ ನಾಡಾಗಿ ಪರಿವರ್ತಿಸುವುದಕ್ಕೆ ಯಾಕೆ ಸಾಧ್ಯವಾಗದು ಎಂದು ಚಿಂತಿಸಿದ್ದಾರೆ. ಅದರ ಪರಿಣಾಮವೇ ಸಹಾರಾ ಮರುಭೂಮಿಯಲ್ಲಿನ ಕಾಡು!

ಮರುಭೂಮಿಯಲ್ಲಿ ಕಾಡು

ಒಂಟೆಯಲ್ಲಿರುವ ಪ್ರಾಕೃತಿಕ ತಂತ್ರಜ್ಞಾನವನ್ನು ವಿಜ್ಞಾನಿಗಳು  ಬಳಸಿಕೊಂಡು, ವಾತಾವರಣದಲ್ಲಿನ ನೀರಾವಿಯನ್ನೇ ತಂಪಾಗಿಸಿ ನೀರಿನ ರೂಪಕ್ಕೆ ಘನೀಕರಿಸುತ್ತಾರೆ. ಈ ರೀತಿ ಘನೀಕರಣಗೊಂಡ ನೀರನ್ನು ತಂಪಾಗಿಡುವುದಕ್ಕೆ ನೆಲದಾಳದ ನೀರನ್ನು ಬಳಸಲಾಗುತ್ತದೆ. ಸುಮಾರು ೨೦೦ ಮೀಟರ್ ಆಳದಲ್ಲಿರುವ ನೀರನ್ನು ಮೇಲಕ್ಕೆ ಪಂಪ್ ಮಾಡುತ್ತಾರೆ. ಈ ನೀರನ್ನು ಗಿಡ-ಮರಗಳು ಮತ್ತು ಪಾಚಿ ಬೆಳೆಸುವುದಕ್ಕಾಗಿ ಬಳಸುತ್ತಾರೆ. ಮರುಭೂಮಿಯಲ್ಲಿ ನೀರು ಬೇಗನೆ ಆವಿಯಾಗುತ್ತದೆ. ಹೀಗಾಗಿ ೨೦೦ ಮೀಟರ್ ಆಳದಿಂದ ನೀರನ್ನು ಮೇಲೆತ್ತುವಾಗಲೇ ಅದನ್ನು ತಂಪಾಗಿಸಿ, ನೀರಿನ ರೂಪದಲ್ಲಿಯೇ ಉಳಿಸುವುದಕ್ಕೂ ವಿಜ್ಞಾನಿಗಳು ವ್ಯವಸ್ಥೆ ಮಾಡಿಕೊಂಡಿದ್ದಾರೆ.  ನೀರನ್ನು ಮೇಲೆತ್ತುವುದಕ್ಕೂ ಸೌರಶಕ್ತಿಯನ್ನು ಬಳಸಿಕೊಂಡಿದ್ದಾರೆ.

ಇಲ್ಲಿ ಬೆಳೆದಿರುವ ಪಾಚಿಗಳನ್ನು ವ್ಯರ್ಥ ಮಾಡುವುದಿಲ್ಲ. ಅವುಗಳಿಂದ ಜೈವಿಕ ಇಂಧನವನ್ನು ಉತ್ಪಾದಿಸಲಾಗುತ್ತದೆ. ಸದ್ಯಕ್ಕೆ ಕೆಲವೇ ಜಾತಿಯ ಗಿಡಗಳನ್ನು ಇಲ್ಲಿ ಬೆಳೆಸಲು ನಿರ್ಧರಿಸಲಾಗಿದ್ದರೂ ಮುಂದೊಂದು ದಿನ ಎಲ್ಲಾ ಜಾತಿಯ ಮರಗಳನ್ನು ಇಲ್ಲಿ ಬೆಳೆಸಿ, ತನ್ಮೂಲಕ ಮರುಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸುವ ಹುಮ್ಮಸ್ಸಿನಲ್ಲಿದ್ದಾರೆ ವಿಜ್ಞಾನಿಗಳು.



ಪ್ರವಾಸಿಗರಿಗೆ ಪ್ರವೇಶಾವಕಾಶ

ಪ್ರಸ್ತುತ ಬೆಳೆಸಲಾಗುತ್ತಿರುವ ಗಿಡಗಳು ಮುಂದಿನ ಜುಲೈ ವೇಳೆಗೆ ಸಾಕಷ್ಟು ಬೆಳೆವಣಿಗೆ ಸಾಧಿಸಿರುತ್ತವೆ. ಆದಾಗ್ಯೂ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುವುದಕ್ಕೆ ಮುಂದಿನ ನವೆಂಬರ್ ನಂತರವೇ ಅವಕಾಶ. ಒಟ್ಟಿನಲ್ಲಿ ತಂತ್ರಜ್ಞಾನವನ್ನು ಪರಿಸರಪ್ರೇಮಿಯಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಈ ವಿಜ್ಞಾನಿಗಳು ಜಗತ್ತಿಗೇ ಮಹತ್ವದ ಸಂದೇಶ ಕೊಟ್ಟಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವಂಥ ಇಂದಿನ ದಿನದಲ್ಲಿ ಇಂಥ ಪ್ರಯೋಗಗಳು ಜಗತ್ತಿಗೆ ಉಪಕಾರಿಯಾದರೆ ಇಂಥದ್ದೊಂದು ಸಾಧನೆ ಮಾಡಿದವರ ಜೀವನ ಸಾರ್ಥಕವಾದೀತು. ಇಂದಿನ ಜಗತ್ತನ್ನು ಪರಿಸರವನ್ನು ರಕ್ಷಿಸಿಕೊಳ್ಳುವ ಸ್ಪಷ್ಟ ದಿಕ್ಕಿನಲ್ಲಿ ಕರೆದೊಯ್ಯುವುದಕ್ಕೆ ದಾರಿದೀಪವಾದೀತು. ಅದು ಮುಂದಿನ ಪೀಳಿಗೆಯ ಜನರಿಗೆ ಮಾದರಿಯಾದೀತು.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು