ಸ್ಪೇಸ್ ವಾರ್

ಇದು ಈ ಬಾರಿ ವಿಜಯ Nextನಲ್ಲಿ ಪ್ರಕಟವಾದ ಕವರ್ ಸ್ಟೋರಿ. ಅದನ್ನು ಯಥಾವತ್ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ


ಮಹಾಕದನಕ್ಕೊಂದು ರಣರಂಗ

ಕೈವಾರ ಗೋಪೀನಾಥ್
೨೦೦೭ರ ಜನವರಿ ೧೧ರಂದು ಒಂದು ಆತಂಕಕಾರಿ ಘಟನೆ ಸಂಭವಿಸಿತು. ದಕ್ಷಿಣ ಚೀನಾದ ಅಂತರಿಕ್ಷದ ಮೇಲೆ ಒಂದು ಕೃತಕ ಉಪಗ್ರಹ ತನ್ನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿತ್ತು. ಇದ್ದಕ್ಕಿದ್ದಂತೆ ಆ ಕೃತಕ ಉಪಗ್ರಹ ಚೂರುಚೂರಾಗಿ ಒಡೆದು ಭಗ್ನಾವಶೇಷಗಳ ಮೋಡವನ್ನೇ ಸೃಷ್ಟಿಸಿತು. ಏಳು ವರುಷಗಳಿಂದ ನಿರಂತರವಾಗಿ ಭೂಕೇಂದ್ರಗಳಿಗೆ ತನಗೆ ಒಪ್ಪಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ ಆ ಆರು ಅಡಿ ಉದ್ದದ ಕೃತಕ ಉಪಗ್ರಹವನ್ನು ನಾಶ ಮಾಡಿದ್ದು ಯಾರು ಎಂಬ ವಿಷಯ ತಿಳಿದರೆ ಅಚ್ಚರಿ ಮೂಡುತ್ತದೆ. ಆ ಕೃತಕ ಉಪಗ್ರಹವನ್ನು ಸೃಷ್ಟಿಸಿದ ಚೀನಾ ದೇಶವೇ ಅದನ್ನು ನಾಶ ಮಾಡಿತು ಎಂದರೆ ಆಶ್ಚರ್ಯವಾಗುತ್ತದೆ. ಸಿಚೂನ್ ರಾಜ್ಯದ ಕ್ಸಿಚಾಂಗ್ ಪ್ರದೇಶದ ಹತ್ತಿರವಿರುವ ಸೋಂಗ್ಲಿನ್ ಪರೀಕ್ಷಾ ಕೇಂದ್ರದಿಂದ ಅಂತರಿಕ್ಷದ ಕಡೆ ಉಡಾಯಿಸಲಾದ ಬಹು-ಹಂತಗಳ ಕ್ಷಿಪಣಿಯೊಂದು ಗಂಟೆಗೆ ೧೮೦೦೦ ಮೈಲಿಗಳ ವೇಗದಲ್ಲಿ ಪ್ರಯಾಣಿಸುತ್ತಾ ಆ ಕೃತಕ ಉಪಗ್ರಹದ ಜಾಡು ಹಿಡಿದು ಅದನ್ನು ನಾಶಮಾಡಿತು.
ಆತಂಕದ ಘಟನೆಗಳು
ಈ ಘಟನೆ ವಿಶ್ವದಾದ್ಯಂತ ತಲ್ಲಣವುಂಟು ಮಾಡಿತು. ಕಾರಣ ಇಷ್ಟೇ  ಇಂತಹ ತಂತ್ರಜ್ಞಾನದಿಂದ ಒಂದು ದೇಶ ಇನ್ನೊಂದು ದೇಶದ ಕೃತಕ ಉಪಗ್ರಹವನ್ನು ನಾಶ ಮಾಡುವ ಸಾಧ್ಯತೆಯಿದೆ. ಈ ಚಿಂತನೆಯ ಬಗ್ಗೆ ಸ್ವಲ್ಪ ಗಮನ ಹರಿಸೋಣ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಮಾಹಿತಿ ತಂತ್ರಜ್ಞಾನಕ್ಕೆ ಪೂರಕವಾದ ನೂರಾರು ಕೃತಕ ಉಪಗ್ರಹಗಳು ನಮ ಭೂಮಿಯ ಸುತ್ತಲ ಕಕ್ಷೆಯಲ್ಲಿ ಸುತ್ತುತ್ತಿವೆ. ಅಂತಹ ಕೃತಕ ಉಪಗ್ರಹಗಳಿಂದ ಊಹೆಗೂ ಬಾರದಷ್ಟು ಅನುಕೂಲತೆಗಳಿವೆ. ಒಂದು ದೇಶದ ಜನರು ತಮ ನಡುವೆ ಮತ್ತು ಇತರ ದೇಶಗಳ ಜನರ ನಡುವೆ ವ್ಯವಹರಿಸುವಾಗ ಉಪಯೋಗಿಸುವ ದೂರವಾಣಿ, ಮೊಬೈಲ್, ಫ್ಯಾಕ್ಸ್ ಉಪಕರಣಗಳಂತಹ ಅನೇಕ ವಿದ್ಯುನಾನ ತಂತ್ರಜ್ಞಾನದಿಂದ ಪೂರಕವಾದ ಸಾಧನಗಳ ಬಳಕೆಗೆ ಕೃತಕ ಉಪಗ್ರಹಗಳು ಅಪಾರ ಸೇವೆ ಸಲ್ಲಿಸುತ್ತಿವೆ. ಅಲ್ಲದೆ ಅವು ಇಲ್ಲದಿದ್ದಿದ್ದರೆ ನಮ್ಮ ಮನೆಯ ಟಿವಿಯಲ್ಲಿ ಕುಳಿತು ವಾರ್ತಾವಾಹಿನಿಗಳನ್ನು ವೀಕ್ಷಿಸಲಾಗುತ್ತಿರಲಿಲ್ಲ, ಒಲಂಪಿಕ್ಸ್ ಕ್ರೀಡೆಗಳನ್ನು ವೀಕ್ಷಿಸಲಾಗುತ್ತಿರಲಿಲ್ಲ. ಆದ್ದರಿಂದ ಕೇವಲ ಉದಾಹರಣೆಗೆ ಚೀನಾ ದೇಶ ಭಾರತದ ಮಾಹಿತಿ ತಂತ್ರಜ್ಞಾನದ ಕೃತಕ ಉಪಗ್ರಹಗಳನ್ನು ನಾಶ ಮಾಡಿತು ಎಂದಿಟ್ಟುಕೊಳ್ಳೋಣ. ಆಗ ಇಡೀ ಭಾರತದಲ್ಲಿನ ಸಂವಹನ ಕ್ರಿಯೆಯೇ ನಿಂತುಹೋಗುತ್ತದೆ. ಆಗ ಮಾಹಿತಿ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಉದ್ಯಮಗಳು ಮುಚ್ಚಿ, ನಿರುದ್ಯೋಗದ ಭೂತ ತಾಂಡವವಾಡಲು ಆರಂಭಿಸುತ್ತದೆ. ಆಫ್ರಿಕಾದ ಅರಣ್ಯಗಳಲ್ಲಿ ವಾಸಿಸುತ್ತಿರುವ ಕಾಡುಮನುಷ್ಯರಂತೆ ನಮ ಸ್ಥಿತಿ ಚಿಂತಾಜನಕವಾಗುತ್ತದೆ. ಹೀಗೆ ಚೀನದ ಕಾರ್ಯಾಚರಣೆ ಅಮೇರಿಕಾ ಸೇರಿದಂತೆ ಎಲ್ಲ ದೇಶಗಳಲ್ಲಿ ನಡುಕ ಹುಟ್ಟಿಸಿದೆ. ಹಾಗಾಗಿ ಮುಂದೆ ಅಂತರಿಕ್ಷ ಸಮರಕ್ಕೆ ಈ ಘಟನೆ ನಾಂದಿಯಾಗಬಹುದೇನೋ ಎನ್ನುವ ಆತಂಕ ಎಲ್ಲ ದೇಶಗಳನ್ನೂ ಕಾಡುತ್ತಿದೆ. ಚೀನದ ಈ ಘಟನೆ ವಿಶ್ವದಾದ್ಯಂತ ಜಗಜ್ಜಾಹೀರವಾಗಿದೆ. ಆದರೆ ಯಾವುದೇ ದೇಶ ಇಂತಹ ಉಗ್ರ-ಕಾರ್ಯಾಚರಣೆಯನ್ನು ರಹಸ್ಯವಾಗಿ ಮಾಡುವ ಸಾಧ್ಯತೆಯಿದೆ ಎಂಬ ಚಿಂತನೆ ಗಂಭೀರವಾದ ಪರಿಸ್ಥಿತಿಯನ್ನು ತಂದೊಡ್ಡಿದೆ.
೨೦೦೯ರ ಫೆಬ್ರವರಿ ೧೧ರಂದು ನಡೆದ ಇನ್ನೊಂದ ಘಟನೆಯ ಬಗ್ಗೆ ಕೂಡ ಅಮೇರಿಕ ದೇಶ ಗಂಭೀರದ ಚಿಂತನೆ ನಡೆಸಿದೆ. ಆ ವರುಷ ಚೀನಾದ ಕಾಸ್ಮೋಸ್ ೨೨೫೨ ಮತ್ತು ಅಮೇರಿಕದ ಖಾಸಗಿ ಉಪಗ್ರಹ ಇರಿಡಿಯಮ್ ನಡುವೆ ಘರ್ಷಣೆಯಾಗಿ ಅಮೇರಿಕದ ಉಪಗ್ರಹ ನಾಶವಾಗಿತ್ತು. ಕಾಸ್ಮೋಸ್ ಕೃತಕ ಉಪಗ್ರಹ ಬಾಹ್ಯಾಕಾಶದಲ್ಲಿನ ಕಕ್ಷೆ ಬದಲಿಸಿದ್ದೇ ಅದಕ್ಕೆ ಕಾರಣ ಎಂಬ ವಾದವೂ ಇದೆ. ಆ ಘಟನೆ ಕಾಕತಾಳೀಯವಾಗಿರಬಹುದು. ಆದರೆ ಉದ್ದೇಶಪೂರ್ವಕವಾಗಿ ಅಂತಹ ಘಟನೆ ಸಂಭವಿಸಿದ್ದರೆ ಬಾಹ್ಯಾಕಾಶದಲ್ಲಿಯೇ ಸಮರ ನಡೆಯುವ ಸಾಧ್ಯತೆಯನ್ನು ಅದು ಹುಟ್ಟಿಹಾಕಿದೆ. ಹಾಗಾಗಿ ಬಾಹ್ಯಾಕಾಶ ಅತ್ಯಂತ ಸೂಕ್ಷ್ಮ ರಾಜಕೀಯ ತಂತ್ರಗಳಿಗೆ ಬಲಿಯಾಗುತ್ತಿದೆಯೇ ಎಂಬ ಸಂದೇಹ ಮೂಡಿಬರುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಆಧಿಪತ್ಯ ಸಾಧಿಸಲು ಬಾಹ್ಯಾಕಾಶವನ್ನು ಮುಂದಿಟ್ಟುಕೊಂಡು ಹೆದರಿಸುವ ತಂತ್ರವನ್ನು ಬಳಸಿದರೆ ಆಶ್ಚರ್ಯವೇನಿಲ್ಲ. ಹಿಂದೆ ಮೊದಲನೆಯ ಮತ್ತು ಎರಡನೆಯ ವಿಶ್ವಸಮರಗಳಲ್ಲಿ ಮಿತ್ರರಾಷ್ಟ್ರಗಳಾಗಿ ಗುಂಪುಗಳು ಹೇಗೆ ರೂಪುಗೊಂಡವೋ ಹಾಗೆಯೇ ಬಾಹ್ಯಾಕಾಶ ಸಮರದ ಚಿಂತನೆಯಲ್ಲಿ ವಿರುದ್ಧ ಗುಂಪುಗಳು ರಚನೆಯಾದರೆ ನಮ ಭೂಮಿಯ ಏಕತೆಗೆ ಭಂಗ ಬರಬಹುದು.
ಬಹಳ ವರುಷಗಳ ಹಿಂದೆ ಬಾಹ್ಯಾಕಾಶದಲ್ಲಿಯೇ ಗೂಢಚಾರಿ ಕೃತಕ ಉಪಗ್ರಹಗಳನ್ನು ಸ್ಥಾಪಿಸಿ, ಅವುಗಳ ಮೂಲಕ ನಮ ಭೂಮಿಯ ನಿಗದಿತ ನೆಲೆಗಳ ಮೇಲೆ ಮಾರಕ ಕಿರಣಗಳನ್ನು ಬೀರಿ, ಬಾಹ್ಯಾಕಾಶದಿಂದಲೇ ಯುದ್ಧ ಮಾಡುವ ಕಾರ್ಯತಂತ್ರವನ್ನು ಅಮೇರಿಕ ರೂಪಿಸಿತ್ತು. ಅಂತಹ ಯೋಜನೆ ಯಶಸ್ಸಿನ ಹಂತ ಮುಟ್ಟುವ ಮೊದಲೇ ನಿಲ್ಲಿಸಲ್ಪಟ್ಟಿತು ಎಂಬ ವರದಿ ಆಗ ಪ್ರಕಟವಾಗಿದ್ದರೂ ಅಂತಹ ತಂತ್ರಜ್ಞಾನ ಅಸ್ತಿತ್ವದಲ್ಲಿದ್ದಿತು ಎಂಬ ಆತಂಕ ಮಾತ್ರ ಮಾಸಿಹೋಗಿಲ್ಲ. ಅಂತಹ ಅಮೇರಿಕ ದೇಶ ಕೂಡ (ಚೀನಾ ತನ್ನ ಕೃತಕ ಉಪಗ್ರಹವನ್ನು ಬಾಹ್ಯಾಕಾಶದಲ್ಲಿ ನಾಶ ಮಾಡಿದ ಮೇಲೆ) ನೀಡಿದ ಹೇಳಿಕೆ ಗಮನಾರ್ಹವಾಗಿದೆ. ಅಮೇರಿಕದ ರಕ್ಷಣಾ  ಇಲಾಖೆಯ ಮಾಹಿತಿ ಕೇಂದ್ರದ ಥೆರೇಸಾ ಹಿಚನ್ಸ್‌ರವರು ಹೀಗೆ ಹೇಳಿದ್ದಾರೆ: ಚೀನಾದ ಆ ಕಾರ್ಯಾಚರಣೆ ಬಾಹ್ಯಾಕಾಶವನ್ನು ಅಸ್ತ್ರವಾಗಿ ಬಳಸುವಂತಹ ಅತ್ಯಂತ ಅಪಾಯಕಾರಿ ಹೆಜ್ಜೆಯಾಗಿದೆ. ನಾವು ಹುಷಾರಾಗಿರದಿದ್ದರೆ ಬಾಹ್ಯಾಕಾಶ ಸಮರದ ಚಟುವಟಿಕೆಗಳ ತಾಣವಾಗುವುದು ಖಚಿತವಾಗಿದೆ. ಏಕೆಂದರೆ ಯಾರೇ ಆಗಲಿ ಅಲ್ಲಿಗೆ ಹೋಗಿ ತಮಗೆ ಇಷ್ಟ ಬಂದಂತೆ ನಾಶ ಮಾಡುವುದು ಸರಿಯಾದ ಕಾರ್ಯವಲ್ಲ. ಅದರ ಪರಿಣಾಮ ಭೀಕರವಾಗಿರುತ್ತದೆ.
ಸ್ವಾರಸ್ಯ ಸಂಗತಿಯೆಂದರೆ ಬಾಹ್ಯಾಕಾಶ ಶಸ್ತ್ರಾಸ್ತ್ರಗಳನ್ನು ನಿಶೇಧಿಸುವ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಚೀನಾ ಕೂಡ ಸಹಿ ಹಾಕಿದೆ. ಅದೇನೇ ಇರಲಿ, ಬಾಹ್ಯಾಕಾಶದ ಭಗ್ನಾವಶೇಷಗಳೂ ಕೂಡ ಅಪರೋಕ್ಷವಾಗಿ ಅಲ್ಲಿನ ಶಸ್ತ್ರಾಸ್ತ್ರಗಳಾಗಿವೆ ಎಂದರೆ ಆಶ್ಚರ್ಯವಾಗಬಹುದು.

ಕಸವೇ ವೆಪನ್
ಎಲ್ಲರಿಗೂ ಗೊತ್ತಿರುವಂತೆ ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣ ಬಾಹ್ಯಾಕಾಶದ ಭೂಕಕ್ಷೆಯಲ್ಲಿ ಸುತ್ತುತ್ತಿದೆ. ಅದರಲ್ಲಿ ಅನೇಕ ಗಗನಯಾತ್ರಿಗಳು ಪ್ರಯೋಗಗಳನ್ನು ನಡೆಸುತ್ತಿರುತ್ತಾರೆ. ೨೦೦೯ರ ಮಾರ್ಚ್ ೧೨ರಂದು ಅಂತರರಾಷ್ಟ್ರೀಯ ಗ್ರೀನ್‌ಮಿಚ್ ಸಮಯ ಸಾಯಂಕಾಲ ೫ಗಂಟೆಗೆ ಅವರಿಗೆ ರವಾನಿಸಲಾದ ಸಂದೇಶವೊಂದು ಆತಂಕದ ಸುಳಿಗಳನ್ನು ಎಬ್ಬಿಸಿತು. ಆ ವೇಳೆಗೆ ಬಾಹ್ಯಾಕಾಶದಲ್ಲಿದ್ದ ಒಂದು ಭಗ್ನಾವಶೇಷದ ತುಣುಕು ಗಂಟೆಗೆ ೧೭೦೦೦ ಮೈಲಿಗಳ ವೇಗದಲ್ಲಿ ಭೂಕಕ್ಷೆಯಲ್ಲಿ ಸುತ್ತುತ್ತಿದ್ದ ಅಂತರರಾಷ್ಟೀಯ ಅಂತರಿಕ್ಷ ನಿಲ್ದಾಣಕ್ಕೆ ಡಿಕ್ಕಿ ಹೊಡೆಯುವ ಅಥವಾ ಅಪ್ಪಳಿಸುವ ಸಾಧ್ಯತೆ ಕಂಡುಬಂದಿತ್ತು.
ಸ್ವಾರಸ್ಯ ಸಂಗತಿಯೆಂದರೆ ಆ ಭಗ್ನಾವಶೇಷದ ತುಣುಕು ಅದೇ ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣದ ಒಂದು ಹಳೆಯ ತುಣುಕು ಎಂಬುದಾಗಿ ನಾಸಾ ಗುರುತಿಸಿತು. ಯಾವುದೇ ಅಪಾಯಕಾರಿ ಸನ್ನಿವೇಶ ಒದಗಿದಾಗ ಅದರಿಂದ ಪಾರಾಗಲು ಅನೇಕ ಪರಿಹಾರಗಳಿರುತ್ತವೆ. ಹಾಗೆಯೇ ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣದಲ್ಲಿಯೂ ಅಂತಹ ವ್ಯವಸ್ಥೆಯಿದೆ. ಆ ನಿಲ್ದಾಣದಲ್ಲಿ ರಷಿಯಾದವರಿಗೆ ಸಂಬಂಧಪಟ್ಟ ಒಂದು ವಿಭಾಗವಿದೆ. ಆ ವಿಭಾಗ ಯಾವುದೇ ಅಪಾಯಕಾರಿ ಪರಿಸ್ಥಿತಿಯಲ್ಲಿ ರಕ್ಷಣೆ ನೀಡುವ ತಾಣವೂ ಹೌದು. ಹೀಗಾಗಿ ಸಂದೇಶ ಬಂದ ತಕ್ಷಣ ಇಬ್ಬರು ಅಮೇರಿಕ ಗಗನಯಾತ್ರಿಗಳು ಮತ್ತು ರಷಿಯಾದ ಒಬ್ಬ ಗಗನಯಾತ್ರಿ ಸೇರಿದಂತೆ ಮೂವರು ಗಗನಯಾತ್ರಿಗಳನ್ನು ರಷಿಯಾದ ವಿಭಾಗಕ್ಕೆ (ಸುರಕ್ಷತೆಗಾಗಿ) ಕಳುಹಿಸಲಾಯಿತು.
ಈಗಾಗಲೇ ಅಂತರಿಕ್ಷದಲ್ಲಿರುವ ಭಗ್ನಾವಶೇಷಗಳು ಪ್ರಸ್ತುತ ಭೂಗ್ರಹದ ಕಕ್ಷೆಯಲ್ಲಿ ಸುತ್ತುತ್ತಿರುವ ಸುಮಾರು ೮೦೦ ಸಂಖ್ಯೆಯ ಮಿಲಿಟರಿ ಮತ್ತು ವಾಣಿಜ್ಯೋದ್ದೇಶದ ಕೃತಕ ಉಪಗ್ರಹಗಳಿಗೆ ಆತಂಕವನ್ನು ಸೃಷ್ಟಿಸುತ್ತಿವೆ. ಏಕೆಂದರೆ ಮಿಲಿಟರಿ ರೇಡಾರ್‌ಗಳು ೧೮೦೦೦ ಅಂತರಿಕ್ಷ ಭಗ್ನಾವಶೇಷಗಳ ಜಾಡನ್ನು ಹಿಡಿಯುತ್ತಿವೆ. ೨೦೦೯ರ ಫೆಬ್ರವರಿ ೧೧ರಂದು ಅಮೇರಿಕದ ಕೃತಕ ಉಪಗ್ರಹ ಇರಿಡಿಯಮ್, ರಷಿಯಾದ ಕಾಸಾಸ್ ಕೃತಕ ಉಪಗ್ರಹಕ್ಕೆ ಡಿಕ್ಕಿ ಹೊಡೆದು, ಅಂತರಿಕ್ಷದ ಕಸದ ತೊಟ್ಟಿಯ ಭಗ್ನಾವಶೇಷಗಳ ಸಂಖ್ಯೆಯನ್ನು ಹೆಚ್ಚಿಸಿರುವುದು ಸರ್ವವಿದಿತವಾಗಿದೆ.
ಸಮಾಧಾನದ ಸಂಗತಿಯೆಂದರೆ ಅಂತರಿಕ್ಷದಲ್ಲಿ ಆತಂಕ ಸೃಷ್ಟಿಸಿದ ಆ ಭಗ್ನಾವಶೇಷ ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣಕ್ಕೆ ಡಿಕ್ಕಿ ಹೊಡೆಯಲಿಲ್ಲ. ಅದರ ಸನಿಹ ಸುಮಾರು ೫ ಕಿ.ಮೀ.ಗಳ ದೂರದಲ್ಲಿ ಹಾದುಹೋಯಿತು. ಏನಾದರೂ ಮಾನವರಿರುವ ಅಂತರಿಕ್ಷ ನಿಲ್ದಾಣಕ್ಕೆ ಆತಂಕ ತಪ್ಪಿದ್ದಲ್ಲ ಎನ್ನುವ ವಿಷಯವನ್ನು ಅದರದೇ ಭಗ್ನಾವಶೇಷ ರುಜುವಾತು ಮಾಡಿದೆ. ಆ ಭಗ್ನಾವಶೇಷ ೧೯೯೩ಯಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲ್ಪಟ್ಟ ರಾಕೆಟ್ಟೊಂದರ ತುಣುಕು ಎಂಬುದಾಗಿ ನಾಸಾ ವಿಜ್ಞಾನಿಗಳು ಗುರುತಿಸಿದ್ದಾರೆ. ಮೊದಲು ಅದರ ವ್ಯಾಸ ೦.೩೫ ಅಂಗುಲಗಳಾಗಿವೆ ಎಂಬುದಾಗಿ ಅಂದಾಜು ಮಾಡಲಾಗಿತ್ತು. ಆದರೆ ಆ ತುಣುಕಿನ ವ್ಯಾಸ ೫ ಅಂಗುಲ ಎಂಬುದಾಗಿ ನಾಸಾ ವರದಿ ಮಾಡಿದೆ. ಆ ತುಣುಕು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಕ್ಕಿ ಹೊಡೆದು, ಅದರಲ್ಲಿರುವ ಒತ್ತಡದ ಪ್ರಕ್ರಿಯೆ ಏರುಪೇರಾಗಿದ್ದಿದ್ದರೆ, ಅದರಲ್ಲಿರುವ ಗಗನಯಾತ್ರಿಗಳ ಸಿಬ್ಬಂದಿ ಕೇವಲ ೧೦ನಿಮಿಷಗಳ ಕಾಲದ ನಂತರ ಗಾಳಿಯ (ಆಮ್ಲಜನಕದ) ಕೊರತೆಯಿಂದ ನರಳಬೇಕಾದ ಪರಿಸ್ಥಿತಿ ಉಂಟಾಗುತ್ತಿದ್ದಿತು.
ರಾಕೆಟ್ಟೊಂದರ ಭಗ್ನಾವಶೇಷದ ತುಣುಕಿನ ಬಗ್ಗೆ ಆತಂಕಗೊಂಡಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇನ್ನೊಂದು ಆಘಾತಕಾರಿ ಸುದ್ದಿ ಬಂದಿತು. ೨೦೦೯ರ ಮಾರ್ಚ್ ತಿಂಗಳ ೧೭ನೆಯ ತಾರೀಖು ಅಂದರೆ ರಾಕೆಟ್ಟಿನ ಭಗಾವಶೇಷ ಕಂಡ ಕೇವಲ ೫ ದಿನಗಳ ಬಳಿಕ ರಷಿಯಾದ ಕೃತಕ ಉಪಗ್ರಹದ ಭಗ್ನಾವಶೇಷದ ಒಂದು ತುಣುಕು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆಯಿತ್ತು. ಆದ್ದರಿಂದ ಅಂತಹ ಅಪ್ಪಳಿಸುವಿಕೆಯನ್ನು ತಪ್ಪಿಸಲು ಬಾಹ್ಯಾಕಾಶ ನಿಲ್ದಾಣದ ಸ್ಥಾನವನ್ನು ಬದಲಾಯಿಸುವ ಅನಿವಾರ್ಯತೆ ಒದಗಿತು. ಹಾಗೆ ಬದಲಾಯಿಸಿದರೆ, ಅದರ ಜೊತೆ ೧೭ನೆಯ ತಾರೀಖು ಬಾಹ್ಯಾಕಾಶದಲ್ಲಿ ಸೇರಿಕೊಳ್ಳಬೇಕಾದ ಸ್ಪೇಸ್ ಷಟಲ್ ಡಿಸ್ಕವರಿ ಕೂಡ ನಿಲ್ದಾಣದ ಸ್ಥಾನಕ್ಕೆ ತನ್ನ ದಿಕ್ಕನ್ನು ಬದಲಾಯಿಸಬೇಕಾದ ಪರಿಸ್ಥಿತಿ ಉದ್ಭವಿಸಿತು. ಜೊತೆಗೆ ಡಿಸ್ಕವರಿ ನಡೆಸಬೇಕಾದ ಕಾರ್ಯಕ್ರಮಗಳಲ್ಲಿ ಕೂಡ ಕಡಿತ ಮಾಡಬೇಕಾದ ಅವಶ್ಯಕತೆ ಮೂಡಿಬಂದಿತು. ಅಲ್ಲದೆ ಡಿಸ್ಕವರಿ ತನ್ನ ಯೋಜನೆಯನ್ನು ಬದಲಾಯಿಸಿ, ಬಾಹ್ಯಾಕಾಶದಲ್ಲಿ ಇರುವ ದಿನಗಳನ್ನು ಕಡಿಮೆ ಮಾಡಿಕೊಳ್ಳುವ ಸಾಧ್ಯತೆ ಕೂಡ ಉದ್ಭವಿಸಿತು!
ಹೀಗೆ ಬಾಹ್ಯಾಕಾಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯ ತಾಣವಾಗಿದೆ. ಒಂದು ದೇಶದ ಕೃತಕ ಉಪಗ್ರಹದ ಭಗ್ನಾವಶೇಷಗಳು ಇತರ ದೇಶಗಳ ಕೃತಕ ಉಪಗ್ರಹಗಳಿಗೆ ಅಪಾಯ ತಂದಿಡುತ್ತಿವೆ. ಹಾಗೆ ನೋಡಿದರೆ ಭಗ್ನಾವಶೇಷಗಳು ಅಪರೋಕ್ಷವಾಗಿ ಬಾಹ್ಯಾಕಾಶದಲ್ಲಿನ ಸಮರಕ್ಕೆ ಉತ್ತೇಜನ ನೀಡುತ್ತಿದೆ. ಅದು ಸಮರದ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿವೆ. ಸಮರದ ಸೂಕ್ಷ್ಮತೆಯ ಎಳೆಗಳನ್ನು ನೇಯುತ್ತಾ ತನ್ನ ಕಬಂಧಬಾಹುಗಳನ್ನು ಹರಡುತ್ತಿವೆ. ಹೀಗೂ ಸಮರ ಸೃಷ್ಟಿಯಾಗಬಹುದು ಎಂಬ ಸೂಚನೆಯನ್ನು ನೀಡುತ್ತಿದೆ.  

ರಣಕಹಳೆ
ಅಂತರರಾಷ್ಟ್ರೀಯ ವಿದ್ಯಮಾನಗಳ ಕಡೆ ಗಮನ ಹರಿಸಿದಾಗ, ಅನೇಕ ದೇಶಗಳ ನಡುವೆ ಮೂಡಿರುವ ವೈಮನಸ್ಯ ಸಮರಕ್ಕೆ ಎಡೆಮಾಡಿಕೊಡಬಹುದು. ಏಕೆಂದರೆ ಚೀನಾ, ಭಾರತಗಳ ನಡುವೆ ಅನೇಕ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಇರುವುದು ಸರ್ವವಿದಿತವಾಗಿದೆ. ಹಾಗೆಯೇ ಚೀನಾ ಟೈವಾನ್ ಮೇಲೆ ಅಪಾದನೆಗಳ ಸುರಿಮಳೆ ಸುರಿಯುತ್ತಿದ್ದರೆ, ಇರಾನ್ ಅಮೇರಿಕದ ವಿರುದ್ಧ ಬೈಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅಂತಹ ಕಾರ್ಯಕ್ರಮಗಳಿಂದ ಅಮೇರಿಕದ ಕೃತಕ ಉಪಗ್ರಹದ ವ್ಯವಸ್ಥೆಯನ್ನು ತಮ ವಿದ್ಯುನಾನ ತಂತ್ರಜ್ಞಾನದಿಂದ ಪೂರಕವಾದ, ಪ್ರತಿ-ಕೃತಕ ಉಪಗ್ರಹ ಶಸ್ತ್ರಾಸ್ತ್ರಗಳಿಂದ ನಾಶ ಮಾಡಿದರೆ, ತಕ್ಷಣವೇ ವಿಶ್ವದಾದ್ಯಂತ ಹರಡಿರುವ ಅಮೇರಿಕದ ಸೈನ್ಯ, ವಿಮಾನಗಳು ಮತ್ತು ಹಡಗುಗಳ ಕಾರ್ಯಾಚರಣೆಯನ್ನು ನಿಸ್ಸತ್ವಗೊಳಿಸಬಹುದಾಗಿದೆ. ಅಂತಹ ಆಕ್ರಮಣಗಳಿಂದ ವಿಮಾನಯಾನ ಮತ್ತು ಸಂವಹನ ಪ್ರಕ್ರಿಯೆಗಳ ಜೊತೆಗೆ  ಭೂಮಂಡಲದ ಆರ್ಥಿಕ ವ್ಯವಸ್ಥೆ ಕುಸಿಯುವ ಸಾಧ್ಯತೆಯಿದೆ. ಅಲ್ಲದೆ ಅಂತಹ ಪರಿಸ್ಥಿತಿಯಲ್ಲಿ ಸೆಲ್‌ಫೋನ್‌ಗಳು ಕೆಲಸ ಮಾಡುವುದಿಲ್ಲ, ಎ.ಟಿ.ಎಮ್.ಗಳ ವ್ಯವಸ್ಥೆ ಹದಗೆಡುತ್ತದೆ, ಬೈಜಿಕ ವಿನಿಮಯ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ಹೀಗೆ ದಿನನಿತ್ಯದ ಚಟುವಟಿಕೆಗಳೂ ಸೇರಿದಂತೆ ಅನೇಕ ಅಂತರಾಷ್ಟ್ರೀಯ ವಿದ್ಯಮಾನಗಳು ಸ್ತಗಿತವಾಗುವ ಪರಿಸ್ಥಿತಿ ಬಾಹ್ಯಾಕಾಶದ ಸಮರದಿಂದ ಉದ್ಭವಿಸುತ್ತದೆ. ಒಟ್ಟಿನಲ್ಲಿ ಯಾವ ಸೇನೆಯ ನೆರವೂ ಇಲ್ಲದೆ ಒಂದು ದೇಶ ಇನ್ನೊಂದು ದೇಶದ ವಿನಾಶಕ್ಕೆ ಕಾರಣವಾಗುವ ಸುಲಭ ತಂತ್ರಜ್ಞಾನ ಬಾಹ್ಯಾಕಾಶ ಸಮರದ ಚಿಂತನೆಯ ಒಂದು ಆಯಾಮವಾಗಿ ಮೂಡಿಬಂದಿದೆ.
ಬಾಹ್ಯಾಕಾಶ ಶಾಂತಿಯ ತಾಣವಾಗಿದ್ದು, ಆನ್ವೇಷಣೆ ಮತ್ತು ಸಂಶೋಧನೆಯ ಅಭಿವೃದ್ಧಿಗೆ ಹೊಸ ಆಯಾಮಗಳನ್ನು ಸೃಷ್ಟಿಸಿದೆ. ಬಾಹ್ಯಾಕಾಶ ಉಗ್ರಚಟುವಟಿಕೆಗಳಿಗೆ ಬಲಿಯಾಗಬಾರದು ಎನ್ನುವ ಚಿಂತನೆ ಚೀನಾ ತನ್ನ ಕೃತಕ ಉಪಗ್ರಹವನ್ನು ನಾಶ ಮಾಡಿದಾಗ ವಿರುದ್ಧ ದಿಕ್ಕಿನಲ್ಲಿ ಮೂಡಿ, ಬಾಹ್ಯಾಕಾಶದ ಸಮರದ ಚಿಂತನೆಗಳಿಗೆ ಸ್ಪೂರ್ತಿ ನೀಡಿದುದು ವಿಪರ್ಯಾಸದ ಸಂಗತಿಯಾಗಿದೆ. ಹಾಗೆ ನೋಡಿದರೆ ಇಂತಹ ಪ್ರತಿ-ಕೃತಕ ಉಪಗ್ರಹದ ಪರೀಕ್ಷೆಗಳನ್ನು ಅಮೇರಿಕ ಮತ್ತು ಸೋವಿಯತ್ ದೇಶಗಳು ೧೯೮೦ರಲ್ಲಿ ನಿಶೇಧಿಸುವ ಒಪ್ಪಂದ ಮಾಡಿಕೊಂಡವು
ಈಗಾಗಲೇ ಸ್ಟಾರ್ ವಾರ‍್ಸ್ ಎಂಬ ವಿಜ್ಞಾನ ಕತೆಯೂ ಸೇರಿದಂತೆ ಅನೇಕ ಚಲನಚಿತ್ರಗಳು ತೆರೆಯ ಮೇಲೆ ರಾರಾಜಿಸಿವೆ. ಅಂತಹ ಕಲ್ಪನಾ ವಿಜ್ಞಾನ ಕತೆಗಳು ಕಿರುತೆರೆಯಲ್ಲಿ ಜನರನ್ನು ರಂಜಿಸಿವೆ. ಸ್ಟಾರ್ ಟ್ರೆಕ್ ಅಂತಹ ಅತ್ಯಂತ ಜನಪ್ರಿಯ ಕಥಾನಕವಾಗಿದೆ. ಅಂತಹ ಕಥಾನಕಗಳೂ ಕೂಡ ಬಾಹ್ಯಾಕಾಶ ಸಮರಕ್ಕೆ ಚೇತನ ನೀಡಬಹುದಾಗಿದೆ. ಅದೇನೇ ಇರಲಿ ಚೀನಾ ತನ್ನ ಕಾರ್ಯಾಚರಣೆಯಿಂದ ಬಾಹ್ಯಾಕಾಶ ಸಮರದ ಬಗ್ಗೆ ಹೊಸ ಅಲೆಗಳನ್ನೆಬ್ಬಿಸಿವೆ. ಆ ಅಲೆಗಳು ಸುನಾಮಿಯಂತೆ ಮೇಲೆದ್ದು ನಮ ಭಾರತದಂತಹ ಅಭಿವೃದ್ಧಿಶೀಲ ದೇಶದಿಂದ ಹಿಡಿದು ಅಮೇರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳ ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಏರುಪೇರುಗಳಾಗುವಂತೆ ತನ್ನ ಅಟ್ಟಹಾಸವನ್ನು ಮೆರೆದರೆ ವಿಶ್ವಮಾನವೀಯತೆಗೆ ವಿರುದ್ಧವಾದ ಪರಿಸ್ಥಿತಿಗೆ ಬಲಿಯಾಗುತ್ತೇವೆ ಎನ್ನುವ ಕಳಕಳಿ ಅನೇಕ ರಾಷ್ಟ್ರಗಳ ವಿಚಾರವಂತ ನಾಗರಿಕರದಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸವನ್ನು ಪರಿಶೀಲಿಸಿದಾಗ ಯಾವುದೇ ಆವಿಷ್ಕಾರವಾಗಿರಲಿ, ಯಾವುದೇ ತಂತ್ರಜ್ಞಾನವಾಗಿರಲಿ ಅದು ಮಾನವನ ಒಳಿತಿಗಿಂತ ಹೆಚ್ಚಾಗಿ ಮಾನವನ ಕೆಡುಕಿಗೆ ಬಳಕೆಯಾಗುತ್ತಿದೆ. ಎರಡನೆಯ ವಿಶ್ವಸಮರದಲ್ಲಿ ಅಮೇರಿಕ ಜಪಾನಿನ ಮೇಲೆ ಹಾಕಿದ ಪರಮಾಣು ಬಾಂಬು ಅದಕ್ಕೆ ಸಾಕ್ಷಿಯಾಗಿದೆ. ಎಲ್ಲ ರಾಷ್ಟ್ರಗಳು ಸಹಬಾಳ್ವೆ ಮಾಡಲೆಂದು ಯುನೈಟೆಡ್ ನೇಶನ್ಸ್ ಸಂಸ್ಥೆ ಶ್ರಮಿಸುತ್ತಿದ್ದರೂ ರಾಷ್ಟ್ರಗಳ ನಡುವೆ, ದೇಶಗಳ ನಡುವೆ ಮುಸುಕಿನ ಗುದ್ದಾಟ ನಡೆದೇ ಇದೆ. ಅಂತಹ ಗುದ್ದಾಟ ತಾರಕ್ಕೇರಿದಾಗ ಬಾಹ್ಯಾಕಾಶ ಸಮರ ಸುಲಭವಾ ಅಸ್ತ್ರವಾಗುವುದರಲ್ಲಿ ಸಂಶಯವಿಲ್ಲ. ಬಾಹ್ಯಾಕಾಶದ ಭಗ್ನಾವಶೇಷಗಳು ಆತಂಕವನ್ನು ಸೃಷ್ಟಿಸಿದ್ದರೆ, ಚೀನದ ಕಾರ್ಯಾಚರಣೆ ಬಾಹ್ಯಾಕಾಶ ಸಮರಕ್ಕೆ ಪರೋಕ್ಷವಾದ ಅಪಾಯಕಾರಿ ಚಿಂತನೆಯನ್ನು ಸೃಷ್ಟಿಸಿದೆ. ಹಾಗಾಗಿ ಬಾಹ್ಯಾಕಾಶ ಸಮರದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ!

ಫ್ಯೂಚರ್ ವಾರ್‌ಫೇರ್

ಪ್ರಕಾಶ್ ಡಿ.ಜಿ.

ಬಾಹ್ಯಾಕಾಶವೆಂಬ ಹಲವು ವಿಸ್ಮಯಗಳ ಗರ್ಭದಲ್ಲಿ ಭೀತಿಯ ಮಿಂಚು ಸಂಚಾರವಾಗುತ್ತಿದೆ. ಹಲವು ಯೋಜನೆಗಳೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ ಸಾಧನೆಯನ್ನು ಮಾಡಬೇಕೆಂದು ತುಡಿಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ನುಗ್ಗಿ ಬರುತ್ತಿವೆ. ಅಪ ಪ್ರಚಾರ ಮಾಡುವ ಮೂಲಕ ಇಸ್ರೋ ಹೆಸರಿಗೆ ಮಸಿ ಬಳಿಯುವ ಹುನ್ನಾರವೂ ನಡೆದಿದೆ, ಇಸ್ರೋದ ಅಂತರಿ? ಮತ್ತು ದೇವಾಸ್ ನಡುವಿನ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂಬ ವರದಿ ಹಬ್ಬಿರುವುದರ ಹಿಂದೆಯೂ ವಿದೇಶಿ ಹಿತಾಸಕ್ತಿಗಳ ಕೈವಾಡವಿದೆ ಎಂಬ ಮಾತು ತೇಲಿ ಬಂದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಭಾರತದಲ್ಲಿ ರಾಜಕಾರಣಿಗಳು ಹಲವಾರು ಹಗರಣಗಳಲ್ಲಿ ಭಾಗಿಯಾಗುವುದು ತೀರಾ ಸಾಮಾನ್ಯದ ಸಂಗತಿ ಎನ್ನಬಹುದು. ವಿಜ್ಞಾನಿಗಳೂ ಹಗರಣ, ಅವ್ಯವಹಾರ, ಭ್ರಷ್ಟಾಚಾರದ ಕೂಪಕ್ಕೆ ಬಿದ್ದಿದ್ದಾರೆಯೇ? ಬಾಹ್ಯಾಕಾಶ ಯೋಜನೆಗಳ ಮೂಲಕ ಭವಿಷ್ಯದಲ್ಲಿ ಭಾರತದ ಕೀರ್ತಿಯನ್ನು ಎತ್ತರಿಸಬಲ್ಲಂಥ ಇಸ್ರೋ ವಿಜ್ಞಾನಿಗಳೇ ಅವ್ಯವಹಾರ ಮಾಡುತ್ತಾರೆಯೇ? ಬಹುಶಃ ಈ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಹಾಗಂತ, ಏಕಾಏಕಿ ಇಸ್ರೋದಂಥ ಘನ ಸಂಸ್ಥೆಯನ್ನೇ ಅವಮಾನಿಸುವ ಮಟ್ಟಕ್ಕೆ ಜಾಗತಿಕ ರಂಗ ಇಳಿಯುತ್ತದೆ, ಯಾವುದೋ ಒಂದು ಆರೋಪವನ್ನೇ ಹಿಡಿದುಕೊಂಡು ಇಸ್ರೋ ಸಂಸ್ಥೆಯೇ ಅವ್ಯವಹಾರದಿಂದ ಕೂಡಿದ್ದು ಎಂಬಂಥ ಮಾತುಗಳನ್ನು ಕೇಳುವ ಪ್ರಸಂಗ ಎದುರಾಗುತ್ತದೆ ಎಂದಾದರೆ ಅಂಥ ಮಾತುಗಳ ಹಿಂದಿನ ಉದ್ದೇಶ ಏನಿರಬಹುದು ಎಂಬುದನ್ನು ಪರಾಮರ್ಶಿಸಲೇಬೇಕಾಗುತ್ತದೆ.

ಮೊದಲ ಬಾಂಬ್!
ಇಸ್ರೋ ಬಗ್ಗೆಯೇ ಅನುಮಾನಗಳ ಹುತ್ತ ಬೆಳೆಯುವುದಕ್ಕೆ ಕಾರಣವಾದದ್ದು ಖಂಡಿತವಾಗಿಯೂ ಚಂದ್ರಯಾನ ಯೋಜನೆ ಎಂದರೆ ಅತಿಶಯೋಕ್ತಿ ಎನಿಸಲಿಕ್ಕಿಲ್ಲ. ಚಂದ್ರನಲ್ಲಿ ನೀರಿದೆ ಎಂಬುದನ್ನು ಮೊದಲು ಬಹಿರಂಗಪಡಿಸಿದ್ದು ಅಮೆರಿಕದ ನಾಸಾ. ಚಂದ್ರನಲ್ಲಿ ನೀರು ಪತ್ತೆ ಮಾಡಿದ ನಾಸಾದ ಎಲ್‌ಕ್ರಾಸ್ ಉಪಕರಣ ಇಸ್ರೋದ ಚಂದ್ರಯಾನ-೧ರ ಜೊತೆಗೇ ಇದ್ದಂಥದ್ದು. ನೀರು ಪತ್ತೆ ಮಾಡುವಲ್ಲಿ ಇಸ್ರೋ ವಿಜ್ಞಾನಿಗಳ ಪಾತ್ರವೂ ಇದೆ ವಿಚಾರ ಬೆಳಕಿಗೆ ಬಂದದ್ದು ತಡವಾಗಿ. ಆದರೆ ಅಷ್ಟು ಹೊತ್ತಿಗಾಗಲೇ ಇಸ್ರೋದ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆದಾಗಿತ್ತು. ಸಾಲದ್ದಕ್ಕೆ ಚಂದ್ರಯಾನ-೧ ಯೋಜನೆಯಲ್ಲಿದ್ದಂಥ ಭಾರತದ ಉಪಕರಣ ಕೆಟ್ಟು ಹೋಗಿತ್ತು. ಇದು ಇಸ್ರೋ ಸಾಮರ್ಥ್ಯದ ಮೇಲೆಯೇ ಅನುಮಾನ ಬರುವಂಥ ಸನ್ನಿವೇಶ ಸೃಷ್ಟಿಸಿತು.
ಇಷ್ಟಾಗುವ ಹೊತ್ತಿಗೆ ಇಸ್ರೋದ ಮೂರು ಯೋಜನೆಗಳು ಸತತವಾಗಿ ವೈಫಲ್ಯಕ್ಕೆ ಒಳಗಾದವು. ಅದು ಅನುಮಾನವನ್ನು ಬಲಪಡಿಸಿತು. ಇಸ್ರೋ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳಲಿಕ್ಕೇ ನಾಲಾಯಕ್ ಎಂಬಂಥ ಅಭಿಪ್ರಾಯಗಳು ಅಕ್ಷರಶಃ ಇಸ್ರೋ ನಿದ್ದೆಗೆಡಿಸಿದವು. ನಿಜಕ್ಕೂ ಇಸ್ರೋ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದದ್ದು ೨೦೦೮ರ ಏಪ್ರಿಲ್ ೨೮ರಂದು ಇಸ್ರೋ ಕೈಗೊಂಡ ಯೋಜನೆ. ಬೇರೆ ಬೇರೆ ದೇಶಗಳ ಒಟ್ಟು ೧೦ ಉಪಗ್ರಹಗಳನ್ನು ಏಕಕಾಲಕ್ಕೆ ಹೊತ್ತೊಯ್ದು ೧೦ ವಿಭಿನ್ನ ಕಕ್ಷೆಗಳಲ್ಲಿ ಯಶಸ್ವಿಯಾಗಿ ಸೇರಿಸಿತು. ಇಸ್ರೋ ಬಗ್ಗೆ ಅಪಪ್ರಚಾರ ಮಾಡುತ್ತಿದ್ದವರಿಗೆ ತಕ್ಕ ಉತ್ತರ ಇದಾಗಿತ್ತು.
ಆದರೆ ಇಸ್ರೋ ಸಾಧನೆಯನ್ನು ಮೂಲೆಗೊತ್ತುವಂತೆ ಮಾಡಿದ್ದು ಅಂತರಿ? ಮತ್ತು ದೇವಾಸ್ ನಡುವಿನ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ವರದಿ. ನಿಜಕ್ಕೂ ಈ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆಯೇ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಆದರೆ ಇಸ್ರೋ ಪಾಲಿಗಂತೂ ಇದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದ್ದಂತೂ ಸತ್ಯ. ಈಗಲೂ ಇಸ್ರೋ ಯೋಜನೆಗಳನ್ನು ವಿಫಲಗೊಳಿಸಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಇಸ್ರೋ ಬಾಹ್ಯಾಕಾಶ ಯೋಜನೆಗಳನ್ನು ವಿಫಲಗೊಳಿಸುವ ಕುತಂತ್ರಗಳು ಕಾರ್ಯರೂಪಕ್ಕೆ ಬರುತ್ತಿವೆ. ಅರ್ಥಾತ್ ಬಾಹ್ಯಾಕಾಶ ಯುದ್ಧವೇ ನಡೆಯುತ್ತಿದೆ ಎನ್ನಬಹುದು.

ಬಾಹ್ಯಾಕಾಶಕ್ಕೇ ಮಿಲಿಟರಿ!
ಬಾಹ್ಯಾಕಾಶ್ ಯುದ್ಧದ ತೀವ್ರತೆ, ಆ ಬಗೆಗಿನ ಹೆದರಿಕೆ ಎಷ್ಟಿದೆ ಎಂದರೆ ಅಮೆರಿಕ ಮತ್ತು ರಷ್ಯಾಗಳು ಬಾಹ್ಯಾಕಾಶದ ಯುದ್ಧಕ್ಕೆಂದೇ ಪ್ರತ್ಯೇಕ ಸೇನೆಗಳನ್ನು ಮೀಸಲಿಟ್ಟಿವೆ. ೧೯೬೦ರಲ್ಲಿ ಅಮೆರಿಕ ಸ್ಪೇಸ್ ಅಂಡ್ ನ್ಯಾಶನಲ್ ಸೆಕ್ಯುರಿಟಿ ಎಂಬ ವಿಭಾಗವನ್ನು ಸ್ಥಾಪಿಸಿತು. ೧೯೮೫ರಿಂದ ೨೦೦೨ರವರೆಗೆ ಬಾಹ್ಯಾಕಾಶದಲ್ಲಿ ಸಂಭವಿಸಬಹುದಾದ ಯುದ್ಧವನ್ನು ತಡೆಯುವುದಕ್ಕೆಂದೇ ಯುನೈಟೆಡ್ ಸ್ಟೇಟ್ಸ್ ಸ್ಪೇಸ್ ಕಮಾಂಡ್ ಕಾರ್ಯಾಚರಿಸುತ್ತಿತ್ತು. ೨೦೦೨ರಲ್ಲಿ ಇದು ಯುನೈಟೆಡ್ ಸ್ಟೇಟ್ಸ್ ಸ್ಟ್ರಾಟಜಿಕ್ ಕಮಾಂಡ್ ಜೊತೆಗೆ ವಿಲೀನಗೊಂಡಿತು. ಅಮೆರಿಕದಲ್ಲಿ ಬಾಹ್ಯಾಕಾಶಕ್ಕಾಗಿಯೇ ವಿಶೇಷ ಸೇನೆ ಇದೆ ಎಂದ ಮೇಲೆ ರಷ್ಯಾ ಸುಮ್ಮನಿರುತ್ತದೆಯೇ? ೧೯೯೨ರ ಆಗಸ್ಟ್ ೧೦ರಂದು ರಷ್ಯನ್ ಸ್ಪೇಸ್ ಫೋರ್ಸ್ ಆರಂಭವಾಗಿತ್ತು. ೨೦೦೧ರ ಜೂನ್ ೧ರಂದು ಇದನ್ನು ರಷ್ಯಾ ಮಿಲಿಟರಿ ಸ್ವತಂತ್ರ ವಿಭಾಗವೆಂದು ಘೋಷಿಸಲಾಯಿತು.

ಬಾಹ್ಯಾಕಾಶದಲ್ಲಿ ಅಣುಬಾಂಬ್
ಅಣುಬಾಂಬ್ ನೆಲದ ಮೇಲೆ ಸ್ಫೋಟಿಸಿದರೆ ಎಂಥ ಪರಿಣಾಮವಾಗುತ್ತದೆ ಎಂಬುದು ನಮಗೆ ಗೊತ್ತು. ಒಂದು ಅಣುಬಾಂಬ್‌ಗೆ ಎಷ್ಟು ಖರ್ಚಾಗಬಹುದು ಎಂಬ ಕಲ್ಪನೆಯೂ ನಮಗಿದೆ. ಬಾಹ್ಯಾಕಾಶದಲ್ಲಿ ಅಣುಬಾಂಬ್ ಸ್ಫೋಟಿಸುವಂಥ ಹಲವು ಕೋಟಿ ಡಾಲರ್ ವೆಚ್ಚದ ಸಾಹಸಕ್ಕೆ ಯಾರಾದರೂ ಕೈಹಾಕಿಯಾರೇ ಎಂಬ ಅನುಮಾನ ಇರಬಹುದು. ಆದರೆ ಬಾಹ್ಯಾಕಾಶ ಅಣುಬಾಂಬ್ ಸ್ಫೋಟಿಸಬಹುದು ಎಂಬುದನ್ನು ಮೊದಲು ತೋರಿಸಿಕೊಟ್ಟದ್ದೇ ಅಮೆರಿಕ. ಬಾಹ್ಯಾಕಾಶದಲ್ಲಿ ಅಣುಬಾಂಬ್ ಸ್ಫೋಟಿಸಿದರೆ ಆ ಕ್ಷಣದಲ್ಲಿ ಸೃಷ್ಟಿಯಾಗುವ ವಿದ್ಯುತ್ಕಾಂತೀಯ ಅಲೆಗಳು ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಶೀಲನೆ ನಡೆಸುವುದಕ್ಕಾಗಿಯೇ ಅಮೆರಿಕ ೧೯೬೩ರಲ್ಲಿ ಅಣ್ವಸ್ತ್ರ ತುಂಬಿದ್ದ ಕ್ಷಿಪಣಿಯನ್ನು ಉಡಾಯಿಸಿ ಬಾಹ್ಯಾಕಾಶದಲ್ಲಿ ಸ್ಫೋಟಿಸಿತ್ತು. ಅದು ಸ್ಫೋಟಗೊಂಡ ಪರಿಣಾಮ ಆ ದಿನಗಳಲ್ಲಿ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದ್ದಂಥ ಬಹುತೇಕ ಎಲ್ಲಾ ಉಪಗ್ರಹಗಳು ನಿಷ್ಕ್ರಿಯಗೊಂಡಿದ್ದವು. ಇದಾದ ಬಳಿಕ ೧೯೬೭ರಲ್ಲಿ ಅಮೆರಿಕ ಮತ್ತು ಅಂದಿನ ಸೋವಿಯಟ್ ಒಕ್ಕೂಟದ ನಡುವೆ ಬಾಹ್ಯಾಕಾಶ ಒಪ್ಪಂದ ಏರ್ಪಟ್ಟು ಬಾಹ್ಯಾಕಾಶದಲ್ಲಿ ಅಣ್ವಸ್ತ್ರ ಸ್ಫೋಟಿಸಬಾರದು ಎಂದು ನಿರ್ಧರಿಸಲಾಗಿತ್ತು.
ಒಪ್ಪಂದಗಳು ಏನೇ ಇದ್ದರೂ ಬಾಹ್ಯಾಕಾಶವನ್ನು ಭಯೋತ್ಪಾದನೆಯ ತಾಣವಾಗಿ ಈಗಲೂ ಬಳಸಿಕೊಳ್ಳಲಾಗುತ್ತಿದೆ ಎಂಬುದು ನಿಜ. ಭಯೋತ್ಪಾದನೆ ಎಂದಾಕ್ಷಣ ಹಿಜ್ಬುಲ್ ಮುಜಾಹಿದೀನ್, ಅಲ್‌ಖೈದಾಗಳಂಥ ಸಂಘಟನೆಗಳು ನಡೆಸುವ ಕೃತ್ಯಗಳು ಎಂದು ಭಾವಿಸಬೇಡಿ. ಇದು ಪೇಯ್ಡ್ ಟೇರರಿಸಮ್ ಅಥವಾ ಪ್ರಾಯೋಜಿತ ಭಯೋತ್ಪಾದನೆ. ಅಮೆರಿಕ, ನಾಸಾ ಪ್ರಾಯೋಜಿತ ಭಯೋತ್ಪಾದನೆ ನಡೆಸಿಕೊಂಡು ಬರುತ್ತಿವೆ ಎಂಬ ಅಭಿಪ್ರಾಯಗಳ ಹಲವು ದಶಕಗಳಿಂದಲೇ ಕೇಳಿಬರುತ್ತಿವೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಚೀನಾ ಮತ್ತು ಪಾಕಿಸ್ತಾನ ಎಲ್ಲಾ ಕ್ಷೇತ್ರಗಳಲ್ಲೂ ಪರಸ್ಪರ ಸಹಕಾರ ಕೊಡುತ್ತಿವೆ. ಇನ್ನು ಅಮೆರಿಕ ಮೇಲ್ನೋಟಕ್ಕೆ ಭಾರತದ ಪರವೆಂದು ಕಾಣಿಸಿದರೂ ಅದರ ಭಾವನೆ ಇರುವುದು ಪಾಕಿಸ್ತಾನದ ಪರವಾಗಿಯೇ. ಪಾಕಿಸ್ತಾನ ಉಪಗ್ರಹಗಳನ್ನು ಸ್ವತಂತ್ರವಾಗಿ ಉಡಾಯಿಸುವ ಶಕ್ತಿ ಹೊಂದಿಲ್ಲ. ಹಾಗಾಗಿ ಪಾಕಿಸ್ತಾನಿ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವುದು ಅಮೆರಿಕ. ಇದೇ ಕಾರಣಕ್ಕಾಗಿಯೇ ಭಾರತ ಸ್ವತಂತ್ರವಾಗಿ ಉಪಗ್ರಹ ಉಡಾವಣೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದೆ. ಒಂದು ವೇಳೆ ಉಪಗ್ರಹ ಉಡಾವಣೆ ಮಾಡುವಾಗ ಸ್ವಲ್ಪ ಮಾಹಿತಿ ಸೋರಿಕೆಯಾದರೂ ಅದರ ಪರಿಣಾಮ ಭೀಕರವಾಗಿರುತ್ತದೆ ಎಂಬ ಸತ್ಯ ಗೊತ್ತಿದ್ದ ಕಾರಣ ಭಾರತ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದೆ.

ಸೆಟಲೈಟ್ ಶೂಟೌಟ್
ಬಹುಶಃ ಇದನ್ನು ನಂಬುವುದಕ್ಕೆ ಕಷ್ಟವಾಗಬಹುದು. ಆದರೆ ಭೂಮಿಯ ಮೇಲಿದ್ದುಕೊಂಡೇ ಸೆಟಲೈಟ್ ಉಡೀಸ್ ಮಾಡುವಂಥ ತಂತ್ರಜ್ಞಾನ ಇಂದು ಬಹಳಷ್ಟು ದೇಶಗಳಲ್ಲಿದೆ. ಭಾರತವೂ ಈ ತಂತ್ರಜ್ಞಾನ ಹೊಂದಿದೆ. ೨೦೦೭ರ ಜನವರಿ ೧೧ರಂದು ಚೀನಾ ತನ್ನದೇ ಉಪಗ್ರಹವನ್ನು ಭೂಮಿಯ ಮೇಲಿದ್ದುಕೊಂಡೇ ಶೂಟೌಟ್ ಮಾಡಿತ್ತು. ಆ ಸಮಯದಲ್ಲಿ ಅಮೆರಿಕ, ಬ್ರಿಟನ್, ಜಪಾನ್ ದೇಶಗಳು ಇದನ್ನು ವಿರೋಧಿಸಿದವು. ಹಾಗಂತ ಈ ತಂತ್ರಜ್ಞಾನವನ್ನು ಮೊದಲು ಪ್ರಯೋಗಿಸಿದ್ದು ಚೀನಾ ಅಲ್ಲ. ಆ ಕೀರ್ತಿ ಸಲ್ಲಬೇಕಾದದ್ದು ಅಮೆರಿಕಕ್ಕೆ. ೧೯೮೦ರಲ್ಲಿಯೇ ಅಮೆರಿಕ ಇಂಥದ್ದೊಂದು ಪ್ರಯೋಗ ಮಾಡಿತ್ತು. ವಾಸ್ತವವಾಗಿ ಚಿಂತಿಸುವುದಕ್ಕೆ ಹೊರಟರೆ ಬಾಹ್ಯಾಕಾಶ ಯುದ್ಧವೆಂಬ ಬೀಜವನ್ನು ಹುಟ್ಟಿಸಿದ್ದೇ ಅಮೆರಿಕ ಎಂದರೆ ತಪ್ಪಾಗಲಾರದು.
ಸೆಟಲೈಟ್ ಶೂಟೌಟ್ ಮಾಡುವುದು ಇಲ್ಲವೇ ಅದನ್ನು ನಾಶ ಮಾಡುವುದು ಅಥವಾ ಅದನ್ನು ನಿಷ್ಕ್ರಿಯಗೊಳಿಸುವುದು ತೀರಾ ಕಷ್ಟದ ಕೆಲಸ ಎಂದು ಭಾವಿಸಿದರೆ ಅದು ನಮ್ಮ ಮೂರ್ಖತನವಾದೀತು. ಸೆಟಲೈಟ್‌ಗಳು ಭೂಮಿಯ ಹೊರಗಿತ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವುದು ನಿಜ. ಆದರೆ ಅವುಗಳ ಸಂಪೂರ್ಣ ನಿಯಂತ್ರಣ ಇರುವುದು ಭೂಮಿಯ ಮೇಲೆ. ಸೆಟಲೈಟ್‌ಗಳು ಯಾವ ರೀತಿ ಕೆಲಸ ಮಾಡಬೇಕೆಂದು ನಿರ್ದೇಶನ ಕೊಡುವುದು ಭೂಮಿಯ ಮೇಲಿಂದಲೇ. ಮೂರು ರೀತಿಯಲ್ಲಿ ಒಂದು ಸೆಟಲೈಟ್ ಡಿಸ್ಟ್ರಾಯ್ ಮಾಡುವುದಕ್ಕೆ ಸಾಧ್ಯವಿದೆ. ಸ್ವತಃ ಸೆಟಲೈಟ್ ಮೇಲೆಯೇ ದಾಳಿ ನಡೆಸಬಹುದು. ಒಂದು ಸೆಟಲೈಟ್‌ನಿಂದ ಅದರ ನಿಯಂತ್ರಣ ಕೇಂದ್ರಕ್ಕೆ ಬರುವ ಮಾಹಿತಿಗಳು ಮತ್ತು ನಿಯಂತ್ರಣ ಕೇಂದ್ರದಿಂದ ಸೆಟಲೈಟ್‌ಗೆ ಹೋಗುವ ಸಂದೇಶಗಳ ದಿಕ್ಕು ತಪ್ಪಿಸಿದರೂ ಉಪಗ್ರಹ ನಿಷ್ಕ್ರಿಯವೆಂದೇ ಲೆಕ್ಕ. ಉಪಗ್ರಹಗಳನ್ನು ನಿಯಂತ್ರಿಸುವ ಭೂಮಿಯ ಮೇಲಿರುವ ನಿಯಂತ್ರಣ ಕೇಂದ್ರವನ್ನು ಹಾಳುಗೆಡವಿದರೂ ಉಪಗ್ರಹ ಡೋಲಾಯಮಾನವಾಗುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ವೆಪನ್ ಸ್ಟಾಕ್‌ಗೆ ಪೈಪೋಟಿ

ಪ್ರಕಾಶ್ ಡಿ.ಜಿ.

ಬಾಹ್ಯಾಕಾಶದಲ್ಲಿ ಯುದ್ಧ ಮಾಡುವುದಕ್ಕೆ ಬೇಕಾದಂಥ ಎಲ್ಲ ಸಲಕರಣೆಗಳನ್ನೂ ಅಮೆರಿಕ ಒಗ್ಗೂಡಿಸಿಕೊಂಡಿತ್ತು. ಅದಕ್ಕೆ ಸ್ಪರ್ಧೆ ಕೊಡುವಂತೆ ರಷ್ಯಾ ಕೂಡ ಹಲವಾರು ಸ್ಪೇಸ್ ವೆಪನ್‌ಗಳನ್ನು ಅಭಿವೃದ್ಧಿಪಡಿಸಿತ್ತು. ಆದರೆ ಇವರೆಡೂ ದೇಶಗಳ ನಡುವೆ ಒಪ್ಪಂದವೇರ್ಪಟ್ಟ ಕಾರಣ ಈ ಶಸ್ತ್ರಾಸ್ತ್ರಗಳು ಬಾಹ್ಯಾಕಾಶದಲ್ಲಿರುವ ಸೆಟಲೈಟ್‌ಗಳ ಮೇಲೆ ಪ್ರಯೋಗಿಸಲ್ಪಡಲಿಲ್ಲ. ಹಾಗಂತ ಆ ಶಸ್ತ್ರಾಸ್ತ್ರಗಳನ್ನು ಎರಡು ದೇಶಗಳೂ ನಾಶ ಮಾಡಿಲ್ಲ. ಹೀಗಾಗಿ ಈ ಕ್ಷಣದಲ್ಲೇ ಸೆಟಲೈಟ್‌ಗಳನ್ನು ಕೇಂದ್ರವಾಗಿರಿಸಿಕೊಂಡು ಯುದ್ಧ ಸಂಭವಿಸಿತು ಎಂದಾದರೆ ಅದಕ್ಕೆ ಬೇಕಾದಂಥ ಸಲಕರಣೆಗಳು ಇವುಗಳ ಬಳಿ ಇವೆ. ಇವುಗಳ ಸಾಲಿಗೇ ಸೇರಿಕೊಂಡಿದೆ ಚೀನಾ. ಈ ರಾಷ್ಟ್ರಗಳಲ್ಲಿ ಬಾಹ್ಯಾಕಾಶದಲ್ಲಿನ ಯುದ್ಧಕ್ಕೆಂದೇ ಸಿದ್ಧಪಡಿಸಲಾದ ಬ್ಯಾಲೆಸ್ಟಿಕ್ ವಾರ್‌ಫೇರ್‌ಗಳು ಅಥವಾ ಖಂಡಾಂತರ ಅಥವಾ ಭೂಮಿಯಿಂದಲೇ ಬಾಹ್ಯಾಕಾಶಕ್ಕೆ ಉಡಾಯಿಸಬಲ್ಲ ಕ್ಷಿಪಣಿಗಳು ಹಲವಾರಿವೆ.
ವಾರ್‌ಫೇರ್ ಅಥವಾ ಶಸ್ತ್ರಾಸ್ತ್ರಗಳೆಂದ ತಕ್ಷಣ ದು ಹೀಗೆಯೇ ಇರಬೇಕು ಎಂಬ ಕಲ್ಪನೆ ನಮ್ಮ ಮನಸಿನಲ್ಲಿ ಮೂಡುತ್ತದೆ. ಆದರೆ ಒಂದು ಸೆಟಲೈಟನ್ನು  ನಾಶ ಮಾಡುವುದಕ್ಕೆ, ಅದರ ದಿಕ್ಕು ಬದಲಿಸುವುದಕ್ಕೆ, ಕಕ್ಷೆ ತಪ್ಪಿಸಿ ಇನ್ನೊಂದು ಕಕ್ಷೆಗೆ ಸೇರಿಸಿ ಬೇರೆ ಸೆಟಲೈಟ್‌ಗಳೊಂದಿಗೆ ಘರ್ಷಣೆಗೆ ಒಳಪಡಿಸುವುದಕ್ಕೆ ದೊಡ್ಡ ದೊಡ್ಡ ಬಂದೂಕುಗಳೋ, ಯುದ್ಧಟ್ಯಾಂಕ್‌ಗಳೋ ಬೇಕಾಗಿಲ್ಲ. ಸೆಟಲೈಟ್ ನಿಯಂತ್ರಣ ಕೇಂದ್ರದಿಂದ ಉಪಗ್ರಹಕ್ಕೆ ಇಲೆಕ್ಟ್ರಾನ್‌ಗಳ ರೂಪದಲ್ಲಿ ಹೋಗುವಂಥ ಸಂದೇಶಗಳಲ್ಲಿ ಅಲ್ಪ ವ್ಯತ್ಯಾಸ ಮಾಡಿದರೆ ಸಾಕು. ಈ ತಂತ್ರಜ್ಞಾನ ಈಗ ಎಲ್ಲರಿಗೂ ಗೊತ್ತಿರುವಂಥದ್ದು. ಮುಖ್ಯವಾಗಿ ಉಗ್ರರಿಗೆ ಇದು ಸುಲಭವಾಗಿ ಸಿಗುವಂಥದ್ದು. ಪ್ರಸ್ತುತ ಎದ್ದಿರುವ ಆತಕಂವೂ ಇದೇ ಆಗಿದ್ದು, ಉಪಗ್ರಹ ನಿಯಂತ್ರಣ ಕೇಂದ್ರದಿಂದ ಉಪಗ್ರಹಕ್ಕೆ ಹೋಗುವಂಥ ಸಂದೇಶಗಳನ್ನು ಹ್ಯಾಕ್ ಮಾಡಿ ಸಂದೇಶಗಳನ್ನು ಬದಲಿಸಿ ಕಳುಹಿಸಿದರೆ ಸೆಟಲೈಟ್‌ಗಳನ್ನೇ ಮಾಹಿತಿ ಶೇಖರಣೆಗೆ, ಉಪಕರಣಗಳು ಕಾರ್ಯನಿರ್ವಹಿಸುವುದಕ್ಕೆ ನೆಚ್ಚಿಕೊಂಡಿರುವ ಜಗತ್ತಿನ ಸ್ಥಿತಿ ಏನಾಗಬಹುದು ಎಂಬ ಚಿಂತೆ ಗಾಢವಾಗಿದೆ.
ಅಲ್ಲದೆ ಸಣ್ಣ ಪುಟ್ಟ ಉಪಗ್ರಹಗಳನ್ನೇ ಕಕ್ಷೆಗೆ ಸೇರಿಸಿ ಅವುಗಳನ್ನು ಅಸ್ತ್ರಗಳನ್ನಾಗಿ ಬಳಸಬಹುದು ಎಂಬ ಆತಂಕವೂ ಸೃಷ್ಟಿಯಾಗಿದೆ. ಬಾಹ್ಯಾಕಾಶದಲ್ಲಿ ಸಣ್ಣ ತುಣುಕೊಂದು ಉಪಗ್ರಹಕ್ಕೆ ಡಿಕ್ಕಿ ಹೊಡೆದರೂ ಅದರ ಪರಿಣಾಮ ಭೀಕರವಾಗಿರುತ್ತದೆ ಎಂಬುದನ್ನು ಯಾವತ್ತೂ ಮರೆಯುವಂತಿಲ್ಲ. ಕಾರಣ ವಸ್ತು ಸಣ್ಣದಾದರೂ ಗುರುತ್ವಾಕರ್ಷಣ ಶಕ್ತಿಯ ಪ್ರಭಾವಕ್ಕೆ ಅದು ಒಳಪಡದೇ ಇರುವ ಕಾರಣ ಅದರ ವೇಗ ಕನಿಷ್ಠ ಗಂಟೆಗೆ ೫೦೦ ಕಿ.ಮೀ.ಗಳಾದರೂ ಇದ್ದೇ ಇರುತ್ತದೆ. ಇದಕ್ಕಾಗಿ ಅಮೆರಿಕ ಪಿಕೋಸ್ಯಾಟ್ಸ್ ಮತ್ತು ಮೈಕ್ರೋಸ್ಯಾಟ್‌ಗಳನ್ನು ಅಭಿವೃದ್ಧಿಪಡಿಸಿದ್ದು ಇವು ಬೇರೆ ಉಪಗ್ರಹಳನ್ನು ದುರಸ್ತಿ ಮಾಡುವುದಕ್ಕೂ ಅನುಕೂಲವಾಗುತ್ತವೆ. ಬೇರೆ ಉಪಗ್ರಹಗಳನ್ನು ನಾಶ ಮಾಡುವ, ಬೇರೆ ಉಪಗ್ರಹಗಳಲ್ಲಿರುವ ಮಾಹಿತಿಗಳನ್ನು ಹ್ಯಾಕ್ ಮಾಡುವಂಥ ಕೆಲಸಗಳನ್ನೂ ಮಾಡಬಲ್ಲವು ಎಂಬುದೂ ಸತ್ಯ.
ಲೇಸರ್‌ಗಳನ್ನು ಬಳಸ ಬಾಹ್ಯಾಕಾಶದಲ್ಲಿರುವ ಕಸಗಳನ್ನು (ನಿಷ್ಕ್ರಿಯಗೊಂಡ ಉಪಗ್ರಹಗಳು, ಉಪಗ್ರಹಗಳ ಭಾಗಗಳು) ನಾಶ ಮಾಡುವುದಕ್ಕೆಂದು ಲೇಸರ್ ಬಳಸಿಕೊಂಡು ಕೆಲಸ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಇವುಗಳನ್ನೂ ದುರುಪಯೋಗಪಡಿಸಿಕೊಳ್ಳುವ ಆತಂಕಗಳು ಈಗ ಹೆಚ್ಚಿವೆ. ಉಗ್ರರಿಗೆ ಸುಲಭದಲ್ಲಿ ಈ ತಂತ್ರಜ್ಞಾನ ಸಿಗುತ್ತಿದೆ ಎಂಬ ಆತಂಕ ಒಂದೆಡೆ. ಬೇರೆ ದೇಶಗಳು ತನಗಿಂತ ಹೆಚ್ಚು ಸಾಧನೆಗಳನ್ನು ಮಾಡಬಾರದು, ಅವುಗಳನ್ನು ತಡೆಯಬೇಕು ಎಂದು ತಂತ್ರಗಳನ್ನು ಹೆಣೆಯುತ್ತಿರುವ ಅಮೆರಿಕ ಇನ್ನೊಂದೆಡೆ. ಒಟ್ಟಿನಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಬೆಳೆಯಬೇಕು ಎಂದು ಆಶಿಸುವ ದೇಶಗಳು ಈ ಉಗ್ರರ (ಇತರರ ಏಳ್ಗೆಯನ್ನು ಸಹಿಸದವರೆಲ್ಲರನ್ನೂ ಉಗ್ರರೆನ್ನಬಹುದು!) ಕಾಟಕ್ಕೆ ತುತ್ತಾಗಬೇಕಾದಂಥ ಸಂದರ್ಭ ಬಂದರೆ ಅದರಲ್ಲಿ ಅಚ್ಚರಿಪಡುವಂಥಾದ್ದು ಏನೂ ಇಲ್ಲ.

ದಾಳಿಯ ಮುನ್ನೆಚ್ಚರಿಕೆ
ಪ್ರತಿಯೊಂದು ದೇಶಗಳ ಮಿಲಿಟರಿ ಉಪಕರಣಗಳನ್ನು ನಿಯಂತ್ರಿಸುತ್ತಿರುವಂಥ ಹಲವಾರು ಉಪಗ್ರಹಗಳು ಬಾಹ್ಯಾಕಾಶದಲ್ಲಿ ಪರಿಭ್ರಮಿಸುತ್ತಿವೆ. ಈ ಉಪಗ್ರಹಗಳು ನಿಷ್ಕ್ರಿಯಗೊಂಡವು ಎಂದಾದರೆ ಮಿಲಿಟರಿ ಉಪಕರಣಗಳೆಲ್ಲ ವ್ಯರ್ಥವೇ  ಸರಿ. ತನ್ನ ಮಿಲಿಟರಿ ಉಪಗ್ರಹದ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದಾದರೆ ತನಗೆ ಮುನ್ನಚ್ಚರಿಕೆ ಕೊಡುವುದಕ್ಕಾಗಿಯೇ ಅಮೆರಿಕ ವಿಶೇಷ ಉಪಕರಣವೊಂದನ್ನು ತನ್ನ ಉಪಗ್ರಹಕ್ಕೆ ಅಳವಡಿಸಿದೆ. Self-Awareness Space Situational Awareness (SASSA) ಎಂಬ ಈ ವ್ಯವಸ್ಥೆಯು ಉಪಗ್ರಹದ ಮೇಲೆ ನಡೆಯಬಹುದಾದ ದಾಳಿಯ ಬಗ್ಗೆ ಎಚ್ಚರಿಕೆ ನೀಡುತ್ತದೆ. ಇದರಿಂದ ಒಂದು ವಿಚಾರವಂತೂ ಸ್ಪಷ್ಟವಾಗುತ್ತದೆ. ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ ಮೇಲೆ ಯಾವ ಕ್ಷಣದಲ್ಲೇ ಆದರೂ ದಾಳಿ ನಡೆಯಬಹುದು ಎಂಬ ಭೀತಿ ಅಮೆರಿಕಕ್ಕಿದೆ. ಇಂತಿರುವಾಗ ಈ ವಿಚಾರದ ಬಗ್ಗೆ ನಿರ್ಲಕ್ಷ್ಯದ ಧೋರಣೆ ತಾಳುವುದು ಸಮಂಜಸವಲ್ಲವೆಂದೇ ಹೇಳಬೇಕು.

ಸ್ಪೈ ಸೆಟಲೈಟ್‌ಗಳು
ಹಲವಾರು ದೇಶಗಳ ಗುಪ್ತಚರ ಉಪಗ್ರಹಗಳು ಹಲವು ಕಕ್ಷೆಗಳಲ್ಲಿ ಗಿರಕಿ ಹೊಡೆಯುತ್ತಿವೆ. ಇವುಗಳ ಮೇಲೆ ನಡೆಯುವ ದಾಳಿ ಮಿಲಿಟರಿ ವ್ಯವಸ್ಥೆಯನ್ನೇ ಧ್ವಂಸ ಮಾಡಬಲ್ಲುದು. ವೈರಿ ರಾಷ್ಟ್ರದ ಮಿಲಿಟಿರಿಯನ್ನೇ ನಿಷ್ಪ್ರಯೋಜಕಗೊಳಿಸಲು ಆ ರಾಷ್ಟ್ರದ ಮಿಲಿಟರಿ ಉಪಗ್ರಹವನ್ನು ನಿಷ್ಕ್ರಿಯಗೊಳಿಸಿದರೆ ಸಾಕು. ಅಷ್ಟರಮಟ್ಟಿಗೆ ನಾವು ಉಪಗ್ರಹಗಳ ಮೇಲೆ ಅವಲಂಬಿತರಾಗಿದ್ದೇವೆ. ಅಮೆರಿಕದ ಲಾಕ್ರಾಸ್/ಓನಿಕ್ಸ್, ಮಿಸ್ಟಿ/ಸಿರ್‌ಕೋನಿಕ್, ಸಮೋಸ್, ಕ್ವಸಾರ್, ವೇಲಾ, ಸೋವಿಯಟ್ ಒಕ್ಕೂಟದ ಕಾಸ್ಮೋಸ್, ಅಲ್ಮಾಸ್, ಯಂಟಾರ್, ಸೆನಿಟ್, ಬ್ರಿಟನ್‌ನ ಸ್ಕೈನೆಟ್, ಫ್ರಾನ್ಸ್‌ನ ಹೆಲಿಯೋಸ್ ೨ಎ, ಜರ್ಮನಿಯ ಸಾರ್-ಲೂಜ್ ೧-೫, ಇಟಲಿಯ ಕಾಸ್ಮೋ-ಸ್ಕೈಮೆಡ್, ಚೀನಾದ ಫನ್‌ಹುಯಿ ಶಿ ವೀಕ್ಸಿಂಗ್ ಮತ್ತು ಭಾರತದ ಟೆಕ್ನಾಲಜಿ ಎಕ್ಸ್‌ಪರಿಮೆಂಟ್ ಸೆಟಲೈಟ್‌ಗಳು ಪ್ರಸ್ತುತ ಅಂತರಿಕ್ಷದಲ್ಲಿ ಪರಿಭ್ರಮಿಸುತ್ತಿರುವ ಸ್ಪೈ ಸೆಟಲೈಟ್‌ಗಳು.


ರೀಲ್ ಅಲ್ಲ, ರಿಯಲ್ ಕದನ
ಚೇತನಾ
ಸ್ಪೇಸ್ ವಾರ್! ಒಂದು ಕಾಲಕ್ಕೆ ಇದು ವಿಜ್ಞಾನ ಕಥೆಗಾರರ ಶುದ್ಧ ಕಟ್ಟುಕಥೆ. ಓದಲಷ್ಟೆ ರುಚಿಕಟ್ಟಾದ, ಥ್ರಿಲ್‌ಗೆಂದೇ ನಿರೂಪಣೆಗೊಳ್ಳುತ್ತಿದ್ದ ಕಥನ ವಸ್ತು. ಶುರುವಲ್ಲಿ ಇದು ಎರಡು ಗ್ರಹಗಳ ಜೀವಿಗಳ (ಇವುಗಳಲ್ಲಿ ಒಂದು ಭೂಮಿ) ನಡುವೆ ನಡೆಯುವ, ನಡೆಯಬಹುದಾದ ತಿರುಳನ್ನು ಒಳಗೊಳ್ಳುತ್ತಿತ್ತು. ಬರಬರುತ್ತ ಇದು ಭವಿಷ್ಯದ ಯುದ್ಧ ಎಂಬ ಅನೂಹ್ಯ ಭೀತಿಯನ್ನು ಬಿಂಬಿಸುತ್ತ, ಸ್ವಲ್ಪಮಟ್ಟಿನ ವೈಜ್ಞಾನಿಕ ಅಧಿಕೃತತೆಯನ್ನು ಹೊತ್ತುಕೊಂಡ ಫಿಕ್ಷನ್ ಶೈಲಿಯಲ್ಲಿ ಜನಪ್ರಿಯವಾಯಿತು. ಈಗ ಈ ಸಂಗತಿ ಸಂಭಾವ್ಯ ಘಟನೆಗಳ ಹೆಣಿಗೆಯಂತೆ ತೋರುತ್ತಿದೆ. ಸ್ಪೇಸ್‌ವಾರ್ ಈಗ ದೇಶ ದೇಶಗಳ ನಡುವಿನ ಸೆಟಲೈಟ್ ಅನ್ನು ಕೇಂದ್ರಬಿಂದುವಾಗಿಟ್ಟುಕೊಂಡ ಯುದ್ಧದ ತಿರುವನ್ನು ಪಡೆದುಕೊಂಡು, ಸಾಧ್ಯತೆಗೆ ಹೆಚ್ಚು ಹತ್ತಿರವಾಗತೊಡಗಿದೆ. ಇಂಥದೊಂದು ಕಾನ್ಸೆಪ್ಟ್ ಕೇವಲ ಕಥೆಯಾಗಿರುವಷ್ಟು ಕಾಲ ಇದ್ದ ಥ್ರಿಲ್‌ಭರಿತ ನೆಮ್ಮದಿ ಇನ್ನು ಮುಂದೆ ಉಳಿಯಲಿಕ್ಕಿಲ್ಲ. ಹಾಗೆ ನೋಡಿದರೆ ಸ್ಪೇಸ್ ಅನ್ನು ಮಾಧ್ಯಮವಾಗಿಸಿಕೊಂಡು ಯುದ್ಧ ಯಾವತ್ತೋ ನಡೆದುಹೋಗಿದೆ. ೧೯೯೧ರಲ್ಲಿ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ಇರಾಕ್‌ಯುದ್ಧದಲ್ಲಿ ಮಾಹಿತಿಗಾಗಿ ಸೆಟಲೈಟ್ ಟೆಕ್ನಾಲಜಿಯನ್ನು ಬಳಸಿದ್ದವು. ಇದರಿಂದಾಗಿ ಇರಾಕಿನ ಪ್ರತಿ ನಡೆಯನ್ನು ಪತ್ತೆ ಹಚ್ಚೋದು ಅವರಿಗೆ ಸಾಧ್ಯವಾಗಿತ್ತು.
ಸ್ಪೇಸ್ ಆಧಾರಿತ ಯುದ್ಧದ ಮುಂದಿನ ನಡೆ ಮತ್ತಷ್ಟು ಆಕರ್ಷಕ. ನ್ಯೂಕ್ಲಿಯರ್ ಮಿಸೈಲ್‌ಗಳನ್ನು ಪತ್ತೆ ಹಚ್ಚಿ ಧರೆಗುರುಳಿಸುವಂತೆ ಸೆಟಲೈಟ್ ವೆಪನ್‌ಗಳನ್ನು ವಿನ್ಯಾಸಗೊಳಿಸ ಲಾಯ್ತು. ಇಂತಹ ವೆಪನ್‌ನ ಅನ್ವೇಷಣೆಯ ಜೊತೆಗೇ ಅದರಿಂದ ರಕ್ಷಣೆ ಒದಗಿಸುವ ಡಿಫೆನ್ಸ್ ವೆಪನ್ ಗಳೂ ವಿನ್ಯಾಸಗೊಂಡವು. ಇದರ ನಂತರ ಮಿಸೈಲ್‌ಗಳನ್ನು ಉರುಳಿಸುವಷ್ಟು ಸಣ್ಣ ಮಟ್ಟದಲ್ಲಿದ್ದ ಲೇಸರ್ ತಂತ್ರಜ್ಞಾನ ಮತ್ತಷ್ಟು ಅಭಿವೃದ್ಧಿಗೊಂಡು, ಸೆಟಲೈಟ್‌ಗಳನ್ನೇ  ಗುರಿಯಾಗಿಸುವ ಮಟ್ಟಿಗೆ ಬೆಳೆದು ನಿಂತಿತು. ಶಸ್ತ್ರಾಸ್ತ್ರಗಳ ದಾಸ್ತಾನಿನಲ್ಲಿ ಮುಂಚೂಣಿಯಲ್ಲಿರುವ ದೇಶಗಳು ಈ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳಲು ಧಾವಿಸಿದವು. ಭಾರತ ಕೂಡಾ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ.
ಆದರೆ, ದೇಶದ ರಕ್ಷಣೆಗೆ ಎಂದೇ ಬಿಂಬಿಸಿಕೊಳ್ಳುವ ಈ ಎಲ್ಲ ಯುದ್ಧ ತಂತ್ರಜ್ಞಾನಗಳು ಪ್ಯಾರಲಲ್ ಆಗಿ ಹೊಸ ಆತಂಕವನ್ನೂ ಹುಟ್ಟುಹಾಕತೊಡಗಿದವು. ಅದು, ಭಯೋತ್ಪಾದಕರದ್ದು.
೨೦೦೮ರಲ್ಲಿ ರಾಬರ್ಟ್ ಜೆ.ಬಂಕರ್ ಎನ್ನುವ ಚಿಂತಕ, ಲೇಖಕ ‘ಟೆರರಿಸ್ಟ್ಸ್ ಅಂಡ್ ಲೆಸರ್ ವೆಪನ್ ಯೂಸ್: ಆನ್ ಎಮರ್ಜೆಂಟ್ ಥ್ರೆಟ್’ ಅನ್ನುವ ಕಿರುಪುಸ್ತಕ ಬರೆದರು. ಅದರಲ್ಲಿ ಲೇಸರ್ ವೆಪನ್‌ಗಳು ಭಯೋತ್ಪಾದಕರ ಕೈಸೇರಬಹುದಾದ ಸಾಧ್ಯತೆಗಳು, ಅವು ಗಳ ದುರ್ಬಳಕೆಯ ದಾರಿಗಳು ಎಲ್ಲ ದರ ಬಗ್ಗೆ ಚರ್ಚಿಸಿದ್ದು ಸಾಕಷ್ಟು ಸುದ್ದಿ ಯಾಗಿತ್ತು. ಈಗ ಅಂತಹ ಚಟುವಟಿಕೆ ಗಳನ್ನು ಗುರುತಿಸಿ, ನಿಯಂತ್ರಿಸುವ ಕೆಲಸ ತುರ್ತಾಗಿ ನಡೆಯುತ್ತಿದೆ.

ನ್ಯೂಕ್ಲಿಯರ್ ಟೆರರ್
ಭೂಮಿಯ ಮೇಲೆ ಅಣುಬಾಂಬ್ ಸ್ಫೋಟವಾದರೆ ಇಂಥದ್ದೇ ಪರಿಣಾಮ ಉಂಟಾಗುತ್ತದೆ ಎಂಬುದನ್ನು ನಾವು ಖಂಡಿತವಾಗಿಯೂ ಹೇಳಬಲ್ಲೆವು. ಒಂದು ವೇಳೆ ಬಾಹ್ಯಾಕಾಶದಲ್ಲಿ ಅಣುಬಾಂಬ್ ಸ್ಫೋಟವಾದರೆ?
ಭೂಮಿಗೆ ಏನೂ ಆಗಲಿಕ್ಕಿಲ್ಲ ಎಂದು ಅಂದಾಜಿಸುತ್ತಿದ್ದೀರಿ ಎಂದಾದರೆ ನಿಮ್ಮ ಎಣಿಕೆ ತಪ್ಪು. ಸೌರಸುನಾಮಿ ಭೂಮಿಗೆ ಬಂದು ಅಪ್ಪಳಿಸಿದರೆ ಯಾವ ಪರಿಣಾಮ ಉಂಟಾಗುತ್ತದೆಯೋ ಅಂಥದ್ದೇ ಪರಿಣಾಮ ಬಾಹ್ಯಾಕಾಶದಲ್ಲಿ ಅಣುಬಾಂಬ್ ಸ್ಫೋಟಿಸಿದರೂ ಉಂಟಾಗುತ್ತದೆ. ಇಂಥದ್ದೊಂದು ಅಪಾಯ ಈಗ ನಿಜಕ್ಕೂ ಎದುರಾಗಿದೆ. ಬಾಹ್ಯಾಕಾಶದಲ್ಲಿ ಅಣುಬಾಂಬ್ ಸ್ಫೋಟಿಸುವ ಬೆದರಿಕೆ ಒಡ್ಡಿರುವುದು ಜಗತ್ತಿಗೇ ಕಂಟಕವಾಗಿರುವ ಉಗ್ರವಾದಿಗಳು.
ಉಗ್ರರು ಬಾಹ್ಯಾಕಾಶದಲ್ಲಿ ಅಣುಬಾಂಬ್ ಸ್ಫೋಟಿಸಲು ಯೋಜನೆ ರೂಪಿಸುತ್ತಿರುವುದರ ಬಗ್ಗೆ ಬ್ರಿಟನ್ ಬೇಹುಗಾರರು ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಬ್ರಿಟನ್‌ನ ವಿದ್ಯುನ್ಮಾನ ಸಂಪರ್ಕಜಾಲವನ್ನು ಹಾಳುಗೆಡವಿ ರಾಷ್ಟ್ರೀಯ ಅಭದ್ರತೆ ಸೃಷ್ಟಿಸುವ ಯೋಜನೆಯಲ್ಲಿರುವ ಉಗ್ರವಾದಿಗಳು ಬಾಹ್ಯಾಕಾಶದಲ್ಲಿ ಅಣುಬಾಂಬ್ ಸ್ಫೋಟಿಸುವ ಸಂಚು ರೂಪಿಸುತ್ತಿದ್ದಾರೆ. ಭೂಮಿಯಿಂದ ಸುಮಾರು ೫೦೦ ಮೈಲಿ ದೂರದಲ್ಲಿ ಅಣುಬಾಂಬ್ ಸ್ಫೋಟಗೊಂಡರೂ ಭಾರೀ ಪ್ರಮಾಣದ ವಿದ್ಯುತ್ಕಾಂತೀಯ ಅಲೆಗಳು ಸೃಷ್ಟಿಯಾಗುತ್ತವೆ. ಇವುಗಳಿಂದ ಸೆಟಲೈಟ್‌ಗಳು, ರಾಡಾರ್‌ಗಳು ಮತ್ತು ಇತರ ಸಂಪರ್ಕ ಮತ್ತು ರಕ್ಷಣಾ ವ್ಯವಸ್ಥೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅಲ್ಲದೆ, ಪ್ರಮುಖ ಮಿಲಿಟರಿ ಉಪಕರಣಗಳು, ಸಾರಿಗೆ ವ್ಯವಸ್ಥೆ, ವಿದ್ಯುತ್ ಮತ್ತು ನೀರು ಪೂರೈಕೆ ವ್ಯವಸ್ಥೆಗಳು ಹದಗೆಡುತ್ತವೆ.
ಸ್ಪೇಸ್ ವೆಪನ್‌ಗಳ ದಾಸ್ತಾನು, ಪ್ರಯೋಗಗಳ ಮೇಲೆ ನಿರ್ಬಂಧ ಹೇರಿಕೊಳ್ಳುವ ಸಲುವಾಗಿ ಈಗಾಗಲೇ ಎರಡು ಬಾರಿ ಶೃಂಗಸಭೆಗಳು ನಡೆದು ವಿಫಲವಾಗಿವೆ. ಇಸ್ರೇಲ್ ಮತ್ತು ಅಮೆರಿಕಾಗಳು ಸಹಿ ಹಾಕುವುದಕ್ಕೆ ಒಪ್ಪದೆ ಇರುವುದೇ ಈ ಹಿನ್ನಡೆಗೆ ಮುಖ್ಯ ಕಾರಣ.

ಸೆಟಲೈಟ್ ಸ್ಪೆಷಲ್


ಸರೋಜಾ ಪ್ರಕಾಶ್

ಅತ್ತ ನಮ್ಮ ತಲೆಯ ಮೇಲೆ ಬಾನಿನಲ್ಲಿ ಮೊಬೈಲ್ ಸಂಪರ್ಕ, ಡಿಟಿಎಚ್, ಹವಾಮಾನ ಅಧ್ಯಯನ, ದೂರಶಿಕ್ಷಣ, ಟೆಲಿಮೆಡಿಸಿನ್, ವಿಪತ್ತು ಮುನ್ಸೂಚನೆ, ರೇಡಿಯೋ ಸಂಪರ್ಕಜಾಲ, ದೂರಸಂವೇದಿ ಹಾಗೂ ಬಾಹ್ಯ ಆಕಾಶದ ಸಂಶೋಧನೆಗಳು... ಈ ಎಲ್ಲ ಉದ್ದೇಶದ ಸುಮಾರು ಮೂರು ಸಾವಿರದಷ್ಟು ನಾವೇ ನಿರ್ಮಿಸಿದ ಉಪಗ್ರಹಗಳು ಹಾರಾಡುತ್ತಿವೆ. ಹಗಲು, ರಾತ್ರಿಯೆನ್ನದೆ ಸತತ ಸಂದೇಶಗಳನ್ನು ಅತ್ತಿಂದಿತ್ತ, ಇತ್ತಿಂದತ್ತ ರವಾನಿಸುತ್ತಿವೆ. ಸೂರ್ಯ ಮತ್ತು ಸುತ್ತಲ ಗ್ರಹಗಳ ಬಗ್ಗೆ ತಿಳಿದುಕೊಂಡ ಮಾನವ ಒಂದು ಕಾಲದಲ್ಲಿ ಕಲ್ಪನೆಯಲ್ಲಿ ಮಾತ್ರ ಆಗಸದಲ್ಲಿ ಹಾರಾಡುವ ಯಂತ್ರಗಳ ಬಗ್ಗೆ ಕತೆ ಹೆಣೆದಿದ್ದ. ಮುಂದೆ, ಬಾನಲ್ಲಿಯೇ ಮನೆ ಮಾಡಿ ಇಲ್ಲಿಯವರೊಂದಿಗೆ ರೇಡಿಯೋ ಸಂಪರ್ಕ ಹೊಂದುವ, ಅಲ್ಲಿನ ವಿಶಿಷ್ಟ ಪರಿಸರದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಸುತ್ತಲೂ ಗಿರಕಿ ಹೊಡೆಯುತ್ತ ಸೂರ್ಯನಿಗೂ ಸುತ್ತು ಪ್ರದಕ್ಷಿಣೆ ಹಾಕುತ್ತಿರುವ ಭೂಮಿಯೆಂಬ ಗೋಲಕ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂಬ ಕುತೂಹಲ ಅವನನ್ನು ಕಾಡಿತ್ತು.  

ಮೊದಲ ಉಪಗ್ರಹ ಸ್ಪುಟ್ನಿಕ್ ಬಾನಿಗೇರಿದ್ದು ಬರೀ ೫೪ ವರ್ಷಗಳ ಹಿಂದೆ. ಈ  ೫೪ ವರ್ಷಗಳ ಅವಧಿಯಲ್ಲಿ ಭೂಮಿಯ ಮೇಲೆ ಕಂಪ್ಯೂಟರ್‌ಗಳು ಹಾಗೂ ಆಚಿನ ಆಕಾಶದಲ್ಲಿ ಹಾರುತ್ತಿರುವ ಯಂತ್ರಗಳಿಂದಾಗಿ ಭೂಮಿಯ ಮೇಲೆಂಥ ಬದಲಾವಣೆ! ಆ ಯಂತ್ರಗಳೋ, ರಾಕೆಟ್ಟುಗಳ ಮೂಲಕ ಭೂಗುರುತ್ವದಾಚೆ ಜಿಗಿದು ಅಲ್ಲಿ ನ್ಯೂಟನ್ನನ ಗುರುತ್ವ ನಿಯಮವನ್ನು ಪಾಲಿಸುತ್ತ ಸದಾಕಾಲ ಭೂಮಿಗೆ ಬೀಳುತ್ತಿರುವ, ವಿವಿಧ ಆಕಾರದ ಉಪಕರಣಗಳು. ಹೆದರಬೇಡಿ! ಇವು ಎಂದಿಗೂ ಭೂಮಿಗೆ ಬೀಳುವುದಿಲ್ಲ, ಏಕೆಂದರೆ ಬೀಳುವ ವೇಗ ದುಂಡನೆಯ ಭೂಮಿಯ ಬಾಗುವಿಕೆಗೆ ಅನುಸಾರವಾಗಿದೆ. ಆದ್ದರಿಂದ ಇವು ಬೀಳುತ್ತಿರುತ್ತವೆ, ಅದೇ ವೇಳೆಗೆ ಭೂಮಿ ತಿರುಗುತ್ತಿರುತ್ತದೆ. ಎರಡೂ ನಡೆಯುತ್ತಲೇ ಇರುತ್ತವೆ.  ಕಕ್ಷೆಯಿಂದ ಆಚೀಚೆ ಸರಿಯದಂತೆ ನಿಯಂತ್ರಣದಲ್ಲಿಡುವ ಒಳಗಿನ ಪುಟ್ಟ ಸಲಕರಣೆಗಳಿಗೆ ಇಂಧನದ ಅಲ್ಪ ಖರ್ಚನ್ನು ಬಿಟ್ಟರೆ, ಧಂಡಿಯಾದ ಸೂರ್ಯಶಕ್ತಿಯನ್ನು ಬಳಸುವ ಈ ಯಂತ್ರಗಳಿಗೆ ನಿರ್ವಹಣಾ ವೆಚ್ಚ ಕಡಿಮೆಯೇ. ಭೂವಾತಾವರಣದಲ್ಲಿ ವಾಯುಮಂಡಲದ ಏರುಪೇರಿನಲ್ಲಿ  ಉಪಗ್ರಹಗಳು ಕೆಲಸ ಮಾಡುವುದು ಕಷ್ಟ, ಆದ್ದರಿಂದ ವಾತಾವರಣದ ಆಚೆ, ವಿವಿಧ ಎತ್ತರಗಳಲ್ಲಿ ಈ ಕೃತಕ ಉಪಗ್ರಹಗಳು ಭೂಮಿಯ ಸುತ್ತ ಹಾರಾಡುತ್ತಿವೆ.

ವಿಶಾಲವಾದ ಮೂರು ಆಯಾಮದ ಬಾಹ್ಯ ಆಕಾಶದಲ್ಲಿ ಎಲ್ಲೆಂದರಲ್ಲಿ ಉಪಗ್ರಹಗಳು ಹಾರುವ ಹಾಗಿಲ್ಲ, ಪ್ರತಿಯೊಂದಕ್ಕೂ ಪ್ರತ್ಯೇಕ ಕಕ್ಷೆ, ಸಮತಲಗಳು, ಹಾಗೂ ವಿವಿಧ ಆಕಾರಗಳು. ಸಾಮಾನ್ಯವಾಗಿ ಭೂಮಿಯ ಒಂದೆಡೆಯಿಂದ ಇನ್ನೊಂದೆಡೆ ಸಂಕೇತಗಳನ್ನು ಕಳಿಸುವುದೇ ಅವುಗಳ ಕೆಲಸ. ಅವು ಒಂದಕ್ಕೊಂದು ಢಿಕ್ಕಿ ಹೊಡೆಯುವ ಸಂದರ್ಭವೇ ಇಲ್ಲ. ಆದರೀಗ ಭೂಸಮೀಪದ ಕಕ್ಷೆಗಳಲ್ಲಿ  ಉಪಗ್ರಹಗಳ ಸಂಖ್ಯೆ ಹೆಚ್ಚಿದೆ. ಅಲ್ಲಿ ಬಾನವಾಹನಗಳ ದಟ್ಟಣೆಯಲ್ಲದೆ ಹಳೆಯ, ಬಳಕೆಯಲ್ಲಿಲ್ಲದ ಉಪಗ್ರಹಗಳ ಚೂರುಗಳು ಬಾನಕಸಗಳಾಗಿ ಅತಿ ವೇಗವಾಗಿ ಹಾರಾಡುತ್ತಿದ್ದು ಕಾರ್ಯನಿರತ ಉಪಗ್ರಹಗಳಿಗೆ ಮುಳುವಾಗುತ್ತಿವೆ.

ಅಷ್ಟೇ ಅಲ್ಲ, ಭೂಮಿಯ ಮೇಲಿನ ಕಾನೂನು ವಿರುದ್ಧದ ಚಟುವಟಿಕೆಗಳು ಬಾನಿಗೂ ವಿಸ್ತರಿಸತೊಡಗಿವೆ. ದೇಶದೇಶಗಳ ನಡುವಿನ ವೈರತ್ವಗಳು ಮೊದಲು ಮಿಲಿಟರಿ ಖಾತೆಗಷ್ಟೇ ಸೀಮಿತವಾಗಿದ್ದು ಈಗೀಗ ಜನಸಾಮಾನ್ಯರಿಗೆ ತೊಂದರೆ ಕೊಡುವ ಹೊಸಹೊಸ ಮಾರ್ಗಗಳನ್ನು ಹುಡುಕುತ್ತಿವೆ.  ಉಪಗ್ರಹ ಸಂದೇಶಗಳನ್ನು ಸದಾಕಾಲ ನಂಬಿರುವ ಈಗಿನ ದಿನಗಳಲ್ಲಿ ಆ ಉಪಗ್ರಹಗಳನ್ನೇ ಹೊಡೆದುಹಾಕಿ ಇಡೀ ಸಂಪರ್ಕ ಜಾಲವನ್ನೇ ತುಂಡಾಗಿಸುವ ಹುನ್ನಾರಗಳು ಬಯಲಾಗುತ್ತಿವೆ. ಭಯೋತ್ಪಾದಕ ಗುಂಪುಗಳು ಉಪಗ್ರಹಗಳ ಕಾರ್ಯವೈಖರಿಯನ್ನೇ ಬದಲು ಮಾಡಿ (ಸೆಟಲೈಟ್ ಹ್ಯಾಕಿಂಗ್) ಅವುಗಳ ಮೂಲಕ ತಮ ಸಂದೇಶಗಳನ್ನು ಬಿತ್ತರಿಸುವ ಪ್ರಯತ್ನ ನಡೆಸಿವೆ.

೨೦೦೭ ಮತ್ತು ೦೮ರ ಅವಧಿಯಲ್ಲಿ  ಚೀನಾದ ಹ್ಯಾಕರ‍್ಸ್ ನಾಲ್ಕು ಬಾರಿ ಅಮೆರಿಕದ ಸರಕಾರೀ ಉಪಗ್ರಹಗಳಿಗೆ ತೊಂದರೆ ತಂದೊಡ್ಡಿದ್ದು ಈಗ ದೃಢಪಟ್ಟಿದೆ. ಆಗ ಒಟ್ಟೂ ಹನ್ನೆರಡು ನಿಮಿಷಗಳ ಕಾಲ ಉಪಗ್ರಹಗಳ ಪ್ರಸಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದೇ ಪ್ರವೃತ್ತಿ ಮುಂದುವರೆದರೆ, ಸರಕಾರೀ ರಹಸ್ಯಗಳು ಆ ಸಂಬಂಧಿತ ಉಪಗ್ರಹಗಳನ್ನು ವಶಪಡಿಸಿಕೊಳ್ಳುವ ಭಯೋತ್ಪಾದಕರ ಕೈಸೇರಿದರೆ, ಭೂಮಿಯಲ್ಲಿ ಅಲ್ಲೋಲಕಲ್ಲೋಲವಾಗುವುದು ಖಂಡಿತ ಎನ್ನುತ್ತಾರೆ ತಜ್ಞರು.

ಜಾಗತಿಕ ದಿಕ್ಸೂಚಿ ವ್ಯವಸ್ಥೆ ಅಥವಾ ಜಿಪಿಎಸ್,  ಇಡೀ ಭೂಮಿಯನ್ನೇ ವೀಕ್ಷಿಸುತ್ತಿರುವ ೨೪ ಕ್ಕಿಂತ ಹೆಚ್ಚು ಉಪಗ್ರಹಗಳ ಜಾಲ.  ಭೂಮಿಯ ಯಾವ ಭಾಗದಲ್ಲೇ ಇರುವ ವಸ್ತು ಅಥವಾ ಸ್ಥಳವನ್ನು ಕನಿಷ್ಟ ನಾಲ್ಕು ಉಪಗ್ರಹಗಳು ಕಾಣುತ್ತಿದ್ದು ಅವುಗಳ ನೆರವಿನಿಂದ ಹಾಗೂ ಸೂಕ್ತ ತಂತ್ರಾಂಶ ಬಳಸಿಕೊಂಡು ಆ ನೆಲೆಯನ್ನು ಪತ್ತೆ ಹಚ್ಚುವ ಜಿಪಿಎಸ್ ಸೇವೆಯಿಂದಾಗಿ ಕೊರಿಯರ್ ಮತ್ತು ಟ್ರಕ್ ಸೇವೆಗಳ ಜಾಲ ಅತ್ಯಂತ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಅಮೆರಿಕದಲ್ಲಿ ಪೋಲೀಸರು ಪೆರೋಲ್ ಮೇಲೆ ಹೊರಗೆ ಬಿಟ್ಟಿರುವ ಕೈದಿಗಳ ಮೇಲೆ ಹಾಗೂ ಆಸ್ಟ್ರೇಲಿಯಾದಲ್ಲಿ ರೈತರು ಮೇಯಲು ಬಿಟ್ಟ ಸಾಕುಪ್ರಾಣಿಗಳ ಮೇಲೆ  ನಿಗಾ ಇಡಲು ಜಿಪಿಎಸ್ ಬಳಸುತ್ತಿದ್ದಾರೆ. ಸಮುದ್ರಯಾನಿಗಳಿಗಂತೂ ಆಳನೀರಿನ ಸಂಶೋಧನೆ, ಮೀನುಗಳ ನೆಲೆಯ ಪತೆ, ಸಾಮಾನು ಸಾಗಾಟದ ಮೇಲ್ವಿಚಾರಣೆ, ಅವಗಢಗಳ ಪತ್ತೆ ಮತ್ತಿತರ ಹತ್ತಾರು ಕಾರಣಗಳಿಗೆ ಜಿಪಿಎಸ್ ಅತ್ಯಂತ ದಕ್ಷ ತಂತ್ರಜ್ಞಾನವಾಗಿದೆ.

ಒಂದು ವೇಳೆ ಜಿಪಿಎಸ್ ಜಾಲದ ಉಪಗ್ರಹಗಳು ನಾಶವಾದರೆ, ಟ್ರಕ್, ಕೊರಿಯರ್ ಜಾಲಗಳೊಂದಿಗೆ, ಜಿಪಿಎಸ್ ನೆಚ್ಚಿಕೊಂಡು ಚಾರಣಕ್ಕೆ ಹೊರಟಿರುವವರು, ಸಮುದ್ರಯಾನಿಗಳು ಹಾಗೂ ಜಿಪಿಎಸ್ ಆಧರಿತ ಎಲ್ಲಾ ಚಟುವಟಿಕೆಗಳೂ ಸ್ತಬ್ಧವಾಗುವುದು ಖಂಡಿತ. ಹವಾಮಾನ ಉಪಗ್ರಹಗಳು ಕಾರ್ಯನಿರ್ವಹಿಸದೆ ಹೋದರೆ, ಹಿಮಪಾತ, ಆಲಿಕಲ್ಲುಮಳೆ, ಪ್ರವಾಹ, ಚಂಡಮಾರುತಗಳ ಬಗ್ಗೆ ಸೂಕ್ತ ಮಾಹಿತಿ ದೊರೆಯದೆ ಹೆಚ್ಚು ಜನರು ತೊಂದರೆಗೀಡಾಗಬಹುದು.
ಸಾಮಾನ್ಯವಾಗಿ ಒಂದಕ್ಕೆ ಬದಲಿಯಾಗಿ ಇನ್ನೊಂದು ಉಪಗ್ರಹ ಸೇವಾನಿರತವಾಗಿಯೋ ಅಥವಾ ಸೇವೆಗೆ ಸಿದ್ಧವಾಗಿಯೋ ಇದ್ದೇ ಇರುತ್ತದೆ. ಆದರೂ, ಒಂದು ಕ್ಷಣ ಯೋಚಿಸಿ. ಮೊಬೈಲ್ ಸೇವೆಯ ಉಪಗ್ರಹವೊಂದು ನಿಷ್ಕ್ರಿಯಗೊಂಡರೆ ಏನಾಗಬಹುದು? ನಿಮ ಮೊಬೈಲ್ ಫೋನಿನಲ್ಲಿ ನೊ ನೆಟ್ ವರ್ಕ್ ಎಂದು ಸಂದೇಶ ದಿನವಿಡೀ ಬರುತ್ತಿದ್ದರೆ ಏನಾದೀತು? ಸುಮ್ಮನೆ ಹರಟೆ, ಸಂಭಾಷಣೆಗಳಲ್ಲಿ ತೊಡಗುವವರಿಂದ ಹಿಡಿದು ಸರಕಾರಿ ಕಚೇರಿಗಳಲ್ಲಿ, ತಮ ಉದ್ಯೋಗಗಳಲ್ಲಿ, ದೂರದ ಪ್ರಯಾಣಗಳಲ್ಲಿ ಮೊಬೈಲ್ ಫೋನ್ ಬಳಸುವವರಿಗೆ ದಿಕ್ಕೇ ತೋಚದಂತಾಗಬಹುದು.
ಒಟ್ಟಾರೆಯಾಗಿ ಈ ಉಪಗ್ರಹಗಳಿಗೆ ಗ್ರಹಚಾರ ಕಾಡಿತೆಂದರೆ ನಮಗದು ತುಂಬಾ ಭಾರವಾಗಲಿದೆ.

ಹ್ಯಾಕಿಂಗ್ ಜಗತ್ತು!
 
ಪ್ರಕಾಶ್ ಡಿ.ಜಿ.

ಸೆಟಲೈಟ್ ಉಡೀಸ್ ಮಾಡೋದು, ಅವುಗಳ ದಿಕ್ಕು ತಪ್ಸೋದು ಎಲ್ಲಾ ದೊಡ್ಡ ಕೆಲ್ಸ ಆಯ್ತು ಅಂತ ಅಂದ್ಕೋಬಹುದು. ಸೆಟಲೈಟ್‌ಗಳನ್ನು ಉಡೀಸ್ ಮಾಡದೇ ಹೆದ್ರಿಕೆ ಹುಟ್ಸೋದಕ್ಕೆ ಸಾಧ್ಯ ಆಗೋದಿಲ್ವೇ ಅಂತ ಯೋಚನೆ ಮಾಡಬೇಕಾಗಿಯೇ ಇಲ್ಲ. ಈಗಿನ ಕಂಪ್ಯೂಟರ್ ವರ್ಲ್ಡ್‌ನಲ್ಲಿ ಹ್ಯಾಕಿಂಗ್ ಅತೀವ ಆತಂಕ ಹುಟ್ಟಿಸಿರುವಂಥ ಕ್ರೈಮ್.  ಜೂಲಿಯಾನ್ ಅಸ್ಸಾಂಜ್ ಮತ್ತು ಅವನ ಪುಟ್ಟ ತಂಡ ನೂರಾರು ದೇಶಗಳ ಮಾಹಿತಿಗಳನ್ನು ಹ್ಯಾಕ್ ಮಾಡಿದ್ದ ಘಟನೆಯನ್ನು ನೆನಪಿಸಿಕೊಳ್ಳಿ. ಆ ವಿಕಿಲೀಕ್ಸ್ ಜಗತ್ತಿನ ದೊಡ್ಡಣ್ಣ ಅಮೆರಿಕಕ್ಕೇ ಬೆವರಿಳಿಸಿತ್ತು. ಇಂತಿರುವಾಗ ನೂರಾರು ಕಂಪ್ಯೂಟರ್ ಎಕ್ಸ್‌ಪರ್ಟ್‌ಗಳನ್ನು ಹೊಂದಿರುವ ದೇಶಗಳಿಗೆ ಮಾಹಿತಿಗಳನ್ನು ಕದಿಯುವುದು ದೊಡ್ಡ ಕೆಲಸವಾಗಲಾರದು.
ಪ್ರಸ್ತುತ ಜಗತ್ತು ಸಂಪೂರ್ಣವಾಗಿ ಸೆಟಲೈಟ್‌ಗಳನ್ನೇ ಅವಲಂಬಿಸಿದೆ. ಬಹುಶಃ ನಮ್ಮ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿರುವ ಫೇಸ್‌ಬುಕ್‌ನಿಂದ ಹಿಡಿದು, ದೇಶದ ರಹಸ್ಯ ಮಿಲಿಟರಿ ದಾಖಲೆಗಳೂ ಅಂತರ್ಜಾಲದಲ್ಲಿ ಅಡಕವಾಗಿರುತ್ತವೆ. ಅದೆಷ್ಟೇ ಕಠಿಣ ಪಾಸ್‌ವರ್ಡ್ ಕೊಟ್ಟರೂ ಇಂಟರ್‌ನೆಟ್‌ನಲ್ಲಿ ಅಡಗಿಕೊಂಡಿರುವ ಡಾಟಾ ಕದಿಯುವುದು ಕಷ್ಟದ ಕೆಲಸವಲ್ಲ. ಅಮೆರಿಕ, ಚೀನಾ ಈಗಾಗಲೇ ಅಂಥ ಕೆಲಸವನ್ನು ಮಾಡುತ್ತಿವೆ. ಚೀನಾವಂತೂ ಅಮೆರಿಕ ಸ್ಪೈ ಸೆಟಲೈಟ್‌ಗಳಲ್ಲಿದ್ದಂಥ ಮಾಹಿತಯನ್ನೇ ಕದ್ದದ್ದಕ್ಕೆ ಪ್ರೂಫ್ ಸಿಕ್ಕಿದೆ. ಮಿಲಿಟರಿ ನಿಯೋಜನೆ ಹೇಗಿದೆ ಎಂಬ ಮಾಹಿತಿ ಆಯಾ ದೇಶದ ರಕ್ಷಣಾ ಇಲಾಖೆಯ ವೆಬ್‌ಸೈಟ್‌ನಲ್ಲಿರುತ್ತದೆ. ಹಾಗಂತ ಆ ವೆಬ್‌ಸೈಟ್‌ಗೆ ಬೇರೆಯವರು ಕನ್ನ ಹಾಕುವುದಕ್ಕಾಗುವುದಿಲ್ಲ ಎಂಬ ಭಾವನೆ ತಾಳುವುದಕ್ಕೆ ಸಾಧ್ಯವಾಗದು. ನಮ್ಮ ವೈರಿಗಳಿಗೆ  ಸೇನೆಯ ರಹಸ್ಯಗಳು ಗೊತ್ತಾದವು ಎಂದಾದರೆ ಅಲ್ಲಿಗೆ ಸೇನೆ ವೇಸ್ಟ್ ಆದಂತೆಯೇ ಲೆಕ್ಕ. ಎಲ್ಲೆಲ್ಲಿ ಸೇನೆಯ ನಿಯೋಜನೆಯಾಗಿದೆ, ಯಾವ್ಯಾವ ರೀತಿಯ ಶಸ್ತ್ರಾಸ್ತ್ರಗಳಿವೆ ಎಂಬ ಮಾಹಿತಿಗಳು ವೈರಿಗಳಿಗೆ ಸಿಕ್ಕರೆ ನಮ್ಮ ಸೇನೆಯ ಮೇಲೆ ಅವರು ದಾಳಿ ಮಾಡುವುದು ತೀರಾ ಸುಲಭವಾಗುತ್ತದೆ. ಅಷ್ಟಕ್ಕೇ ಮುಗಿಯುವುದಿಲ್ಲ. ಸೆಟಲೈಟ್‌ಗಳಿಂದ ಬರುವ ಸಂದೇಶಗಳ ಆಧಾರದಲ್ಲಿ ಕೆಲಸ ಮಾಡುವ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸುವುದಕ್ಕೂ ಈ ಇನ್‌ಫರ್ಮೇಶನ್ ಹ್ಯಾಕಿಂಗ್ ನೆರವಾಗುತ್ತದೆ.
ಉಗ್ರ ಸಂಘಟನೆಗಳೂ ಹ್ಯಾಕಿಂಗ್ ಮೂಲಕ ಹಲವಾರು ದೇಶಗಳ ಕಮ್ಯುನಿಕೇಶನ್, ಮಿಲಿಟರಿ ಮತ್ತು ಸ್ಪೈ ಸೆಟಲೈಟ್‌ಗಳಲ್ಲಿರುವ ಮಾಹಿತಿಗಳಿಗೆ ಕನ್ನ ಹಾಕುತ್ತಿದ್ದಾರೆ ಎಂಬ ಆತಂಕವೂ ಈಗ ಜಗತ್ತನ್ನು ಕಾಡಲಾರಂಭಿಸಿದೆ. ಅದರ ಜೊತೆಯಲ್ಲಿಯೇ ಅಮೆರಿಕ, ಚೀನಾ ಮೊದಲಾದ ದೇಶಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ವ್ಯಾಪಕವಾಗಿ ಬೆಳೆಯುತ್ತಿರುವ ಭಾರತವನ್ನು ತಡೆಯುವುದಕ್ಕೆ ಬೇಕಾಗಿ ಹ್ಯಾಕಿಂಗ್ ಕೆಲಸವನ್ನೇ ಮಾಡುತ್ತಿವೆ ಎಂಬುದೂ ಆತಂಕಕ್ಕೆ ಕಾರಣವಾಗಿದೆ. ಆಂತರಿಕವಾಗಿ ಪಾಕಿಸ್ತಾವನ್ನೇ ಬೆಂಬಲಿಸುತ್ತಾ, ತನಗಿಂತ ಮೇಲ್ಮಟ್ಟಕ್ಕೆ ಬೆಳೆಯುವ ಸಾಮರ್ಥ್ಯ ಹೊಂದಿರುವ ಭಾರತವನ್ನು ಮಟ್ಟ ಹಾಕುವುದಕ್ಕೆ ಬೇಕಾಗಿ ಪಾಕಿಸ್ತಾಕ್ಕೆ ಬೇಕು ಬೇಕಾದದ್ದನ್ನೆಲ್ಲಾ ಕೊಡುತ್ತಾ ಬಂದಿದೆ. ಇದು ಕೂಡಾ ಅಂತರಿಕ್ಷ ಸಮರದ ಭೀತಿಗೆ ಕಿಚ್ಚು ಹಚ್ಚಿದೆ.

Comments

  1. nice article anna....:) ಬಹಳ ಒಳ್ಳೆ ಮಾಹಿತಿ ನೀಡಿದ್ದೆ. ನಮ್ಮಲ್ಲಿಯ ವೈಷಮ್ಯಗಳು ಯಾವ ಮಟ್ಟಕ್ಕೆ ಬೆಳೆದಿದೆ ಅ೦ತ ಇದ್ರಲ್ಲೆ ಗೊತಾಗ್ತು...ಇದನ್ನೆಲ್ಲಾ ನೋಡಿದ್ರೆ ಸದ್ಯದರಲ್ಲೆ ಇತಿಹಾಸ ನೆನಪಿಟ್ಟುಕೊಳ್ಳುವ೦ತಹ ಮಹಾ ಸಮರ ನಡೆಯಬಹುದೇನೋ...ಆದರೆ ಇದರ ಪರಿಣಾಮ ಎಲ್ಲರೂ ಅನುಭವಿಸಬೇಕಾಗುವುದು.

    ReplyDelete
  2. ಮಹತ್ವಪೂಣ೯ ಮಾಹಿತಿಯಾಧರಿತ ಲೇಖನ. ದೇಶ ಎಷ್ಟೇ ಅಭಿವೖದ್ಧಿ ಹೊಂದಿದರೂ ಒಂದಲ್ಲ ಒಂದು ಕಾರಣಕ್ಕೆ ಮಾನವ ಶಕ್ತಿ ಸೋಲುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಶಾಂತಿ, ಸಹಬಾಳ್ವೆಯ ಬದುಕಿಗೆ ಎಲ್ಲಾ ದೇಶಗಳು ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಇಲ್ಲವಾದರೆ ಮುಂದೊಂದು ದಿನ ಮಾನವ ವಾಸಿಸುತ್ತಿದ್ದ ಅನ್ನೋದಕ್ಕೆ ಭೂಮಿಯೇ ಇರದೆ ಹೋಗಬಹುದು...

    ವಿದ್ಯಾ ಇವ೯ತ್ತೂರು

    ReplyDelete
  3. maanyare, idu olleya blog. vaiznanikavaagi tilidukollalu uttama blog. adarallu mukhyavaagi, Akaasha kaayagala bagge olleya mahiti ide. adE reeti, dayavittu "quriyacity" bagge mahiti needalu koruttene. vadanegalodane.

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು