ಸೂಪರ್ ಅರ್ಥ್‌ನಲ್ಲಿಯೂ ಇತ್ತು ಜೀವಾಸ್ತಿತ್ವ

ವಿಷ್ಣುಪ್ರಿಯ ಅಂದ್ರೆ ಪ್ರಕಾಶ್ ಪಯಣಿಗ ಎಂಬುದನ್ನು ಬಹಿರಂಗಗೊಳಿಸಿದ ಬಳಿಕ ಮೊದಲ ಲೇಖನ. ಹಾಂ, ಅಂದ ಹಾಗೆ, ಇದು ವಿಜ್ಞಾನಗಂಗೆ ಬ್ಲಾಗ್‌ನಲ್ಲಿ ಮಾತ್ರ!


 ಬ್ರಹ್ಮಾಂಡದ ಉದ್ದಗಲಕ್ಕೂ ಇರುವ ಅಸಂಖ್ಯಾತ ಗ್ರಹಗಳು, ಉಪಗ್ರಹಗಳು ಕ್ಷುದ್ರಗ್ರಹಗಳು.... ಒಟ್ಟಿನಲ್ಲಿ ಪ್ರತಿಯೊಂದು ಆಕಾಶಕಾಯಗಳಲ್ಲಿಯೂ ಜೀವಾಸ್ತಿತ್ವ ಇತ್ತೇ ಎಂಬ ಇದುವರೆಗೆ ಉತ್ತರ ಸಿಗದ ಪ್ರಶ್ನೆಯ ಬೆನ್ನತ್ತಿ ಹೊರಟ ವೈಜ್ಞಾನಿಕ ಜಗತ್ತು ಹಲವು ವಿಸ್ಮಯಗಳನ್ನು ಕಾಣುತ್ತಿದೆ. ಜಗನ್ನಿಯಮ ಹೀಗೂ ಇದೆಯೇ ಎಂಬ ಚಕಿತತೆಯೊಂದಿಗೇ ಹೊಸ ಹೆಜ್ಜೆಯನ್ನು ಇಡುವುದಕ್ಕೆ ಅಣಿಯಾಗುತ್ತಿದೆ. ಮಂಗಳನಲ್ಲಿ, ಚಂದ್ರನಲ್ಲಿ ನೀರು ಸಿಕ್ಕಿದಾಗ ಮರುಭೂಮಿಯಲ್ಲಿ ಓಯಸಿಸ್ ಕಂಡಷ್ಟೇ ಖುಷಿ ಪಟ್ಟಿದ್ದ ವೈಜ್ಞಾನಿಕ ಜಗತ್ತಿಗೆ ಹಲವು ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ರಹಗಳೂ ತಮ್ಮ ಅಗಾಧ ಗರ್ಭದಲ್ಲಿ ಜಲಸಾಗರವನ್ನು ಹೊಂದಿರುವ ಸಂಗತಿ ತಿಳಿದದ್ದು ಹಲವು ಹೊಸ ಮಜಲುಗಳ ದ್ವಾರಗಳನ್ನು ತೆರೆಯುವುದಕ್ಕೆ ಸಿಕ್ಕ ಕೀಲಿಕೈಯಂತಾಗಿದೆ.
ಭೂಮಿಯಲ್ಲಷ್ಟೇ ಜೀವಾಸ್ತಿತ್ವ ಇದೆ ಎಂದು ವೈeನಿಕ ಜಗತ್ತು ಹಲವು ಶತಮಾನಗಳಿಂದ ನಂಬಿಕೊಂಡು ಬಂದಿದ್ದನ್ನೇ ಈ ಸಂಗತಿಗಳು ಬುಡಮೇಲು ಮಾಡಿವೆ. ಭೂಮಿಯ ಹೊರತಾಗಿ ಬೇರೆ ಆಕಾಶಕಾಯಗಳಲ್ಲಿಯೂ ಜೀವಾಸ್ತಿತ್ವ ಯಾಕಿರಬಾರದು? ಅನ್ಯಗ್ರಹ ಜೀವಿಗಳು ಭೂಮಿಯಲ್ಲಿನ ಜೀವಿಗಳಿಗಿಂತ ಯಾಕೆ ಪ್ರಬುದ್ಧರಾಗಿರಬಾರದು? ಎಂಬೆಲ್ಲ ಪ್ರಶ್ನೆಗಳನ್ನು ಪ್ರಪ್ರಥಮ ಬಾರಿಗೆ ವೈಜ್ಞಾನಿಕ ಜಗತ್ತಿನ ಕಡೆಗೆ ಎಸೆದದ್ದು ವೈಜ್ಞಾನಿಕ ಕಾದಂಬರಿಕಾರರು. ಆ ಪ್ರಶ್ನೆಗಳ ಬೆನ್ನತ್ತಿ ಹೋದ ವೈಜ್ಞಾನಿಕ ಜಗತ್ತು, ಕಾದಂಬರಿಕಾರರು ಕಲ್ಪಿಸಿಕೊಂಡ ಅಂಶಗಳನ್ನೆಲ್ಲ ನಿಜವೆಂದು ಸಾಬೀತುಪಡಿಸುತ್ತಾ ಸಾಗಿತು. ಅನ್ಯಗ್ರಹಜೀವಿಗಳು ಅಸ್ತಿತ್ವದಲ್ಲಿವೆ ಎಂಬ ಬಗ್ಗೆಯಂತೂ ಇತ್ತೀಚಿನ ವರ್ಷಗಳಲ್ಲಿ ಕೇಳಿಬರುತ್ತಿರುವ ಮಾತುಗಳು ಅಕ. ಅವುಗಳನ್ನು ಕಂಡಿದ್ದೇವೆ ಎಂದು ಹೇಳಿಕೊಳ್ಳುವವರ ಪಟ್ಟಿ ಉದ್ದಕ್ಕೆ ಬೆಳೆಯುತ್ತಿದೆ.

ಸೂಪರ್ ಅರ್ಥ್‌ನಲ್ಲಿ

ಬೇರೆ ಗ್ರಹಗಳಲ್ಲಿ ಜೀವಿಗಳಿರುವ ಬಗ್ಗೆ ಹೇಳುವುದಕ್ಕೆ ಹೊರಟು ಇಷ್ಟೆಲ್ಲಾ ಕಥೆ ಹೇಳಬೇಕಾಯಿತು ನೋಡಿ. ಸದ್ಯಕ್ಕೆ ವಿಜ್ಞಾನಿಗಳಿಗೆ ತಲೆತುಂಬಾ ಚಿಂತಿಸುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸೂಪರ್ ಅರ್ಥ್. ಮೂರೇ ವರ್ಷಗಳ ಹಿಂದೆ ಪತ್ತೆಯಾದ ಈ ಗ್ರಹದಲ್ಲಿ ಜಲರಾಶಿಯೇ ಇದೆ ಎಂಬ ಸತ್ಯ ಕೇವಲ ಒಂದು ವರ್ಷದ ಹಿಂದೆ ವೈಜ್ಞಾನಿಕ ಜಗತ್ತಿನ ಅರಿವಿಗೆ ನಿಲುಕಿತ್ತು. ಭೂಮಿಯಲ್ಲಿರುವ ನೀರಿಗಿಂತ ೧೪೦ ಪಟ್ಟು ಅಕ ನೀರಿರುವಂಥ ಈ ಸೂಪರ್ ಅರ್ಥ್, ನಮ್ಮಿಂದ ಸುಮಾರು ೪೦ ಜ್ಯೋತಿರ್ವರ್ಷಗಳಷ್ಟು  (೧ ಜ್ಯೋತಿರ್ವರ್ಷ ಅಂದರೆ ೯೪೬೦೭೩೦೪೭೨೫೮೦.೮ ಕಿಲೋ ಮೀಟರ್) ದೂರದಲ್ಲಿದೆ. ವಿಜ್ಞಾನಿಗಳು ತಿಳಿದುಕೊಂಡಿರುವ ಪ್ರಕಾರ ಈ ಸೂಪರ್ ಅರ್ಥ್ ಗೋಲ್ಡಿ ಲಾಕ್ಸ್ ವಲಯದಲ್ಲಿ ಅಂದರೆ ಜೀವಾಸ್ತಿತ್ವಕ್ಕೆ ಅನುಕೂಲಕರವಾಗುವಂಥ ಅಂಶಗಳು ಇರುವಂಥ ಕಕ್ಷೆಯಲ್ಲಿದೆ. ಅಂದರೆ ಈ ಗ್ರಹದಲ್ಲಿ ಜೀವಿಗಳು ಇದ್ದಿರಲೇಬೇಕು ಅಥವಾ ಈಗಲೂ ಅಸ್ತಿತ್ವದಲ್ಲಿರಬಹುದು ಎಂಬುದು ವಿeನಿಗಳ ತರ್ಕ. ಅಮೆರಿಕದ ಹಾರ್ವರ್ಡ್-ಸ್ಮಿತ್‌ಸೋನಿಯನ್ ಸೆಂಟರ್ ಫಾರ್ ಅಸ್ಟ್ರೋಫಿಸಿಕ್ಸ್‌ನ ಬಾಹ್ಯಾಕಾಶ ವಿಜ್ಞಾನಿಗಳು ಹಬಲ್ ಬಾಹ್ಯಾಕಾಶ ದೂರದರ್ಶಕವನ್ನು ಬಳಸಿಕೊಂಡು ೨೦೦೯ರಲ್ಲಿ ಈ ಗ್ರಹವನ್ನು ಪತ್ತೆ ಮಾಡಿದ್ದರು. ಇದಕ್ಕೆ ಜಿಜೆ೧೨೧೪ಬಿ ಎಂದು ನಾಮಕರಣ ಮಾಡಿದ್ದರು.

ಜೀವಿಗಳ ಕಥೆ ಏನು?

ಈ ಸೂಪರ್ ಅರ್ಥ್ ಭೂಮಿಗಿಂತ ೨.೭ ಪಟ್ಟು ಹೆಚ್ಚು ವ್ಯಾಸ ಹೊಂದಿದ್ದು, ೭ ಪಟ್ಟು ಅಕ ರಾಶಿಯನ್ನು ಹೊಂದಿದೆ. ಕಂಪುಕುಬ್ಜ ನಕ್ಷತ್ರದ ಸುತ್ತ ಇದು ಪರಿಭ್ರಮಿಸುತ್ತಿದ್ದು, ಇದಕ್ಕೆ ೩೮ ಗಂಟೆಗಳ ಅವ ತೆಗೆದುಕೊಳ್ಳುತ್ತದೆ. ಸೂಪರ್ ಅರ್ಥ್ ತನ್ನ ಸೂರ್ಯನಿಂದ ಕೇವಲ ೧೩ ಲಕ್ಷ ಮೈಲಿ ದೂರದಲ್ಲಿದೆ. ಅಂದರೆ ಭೂಮಿಗಿಂತ ಸುಮಾರು ೭೦ ಪಟ್ಟು ಹತ್ತಿರದಲ್ಲಿ ಸೂರ್ಯನನ್ನು ಹೊಂದಿದೆ. ಇಲ್ಲಿನ ಉಷ್ಣಾಂಶ ಸುಮಾರು ೨೩೨ ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೂ ಇಲ್ಲಿ ನೀರು ಮಾತ್ರ ಧಾರಾಳ. ಅದಕ್ಕಿಂತಲೂ ಮುಖ್ಯವಾಗಿ ಇಲ್ಲಿ ಜೀವಾಸ್ತಿತ್ವಕ್ಕೆ ಅನುಕೂಲವಾಗುವಂಥ ಗಾಳಿಯೂ ಇದೆ. ಇಷ್ಟೆಲ್ಲ ಇರುವಾಗ ಅಲ್ಲಿ ಜೀವಿಗಳು ಇಲ್ಲದೇ ಇರುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಪ್ರಸ್ತುತ ಇಲ್ಲಿ ಜೀವಿಗಳಿದ್ದಾವೆಯೇ ಎಂಬುದು ಮುಖ್ಯ ಪ್ರಶ್ನೆ. ಇದ್ದರೆ ಯಾವ ಸ್ವರೂಪದಲ್ಲಿವೆ ಎಂಬುದು ಮತ್ತೊಂದು ಪ್ರಶ್ನೆ. ಒಂದು ವೇಳೆ ಜೀವಿಗಳು ಇಲ್ಲ ಎಂದಾದರೆ ಹಿಂದೆ ಯಾವುದೋ ಒಂದು ಸಮಯದಲ್ಲಿ ಇದ್ದರಿಬಹುದೇ ಎಂಬುದು ನಂತರದ ಪ್ರಶ್ನೆ. ಜಲರಾಶಿ ಇದೆ ಎಂದಾದರೆ ಖಂಡಿತಕ್ಕೂ ಅಲ್ಲಿ ಜೀವಿಗಳು ಇರಬಹುದು.

ಈ ಗ್ರಹ ಎಂದಲ್ಲ ಬ್ರಹ್ಮಾಂಡದಲ್ಲಿರುವ ಯಾವ ಭಾಗದಲ್ಲಿ ಬೇಕಾದರೂ ಜೀವಾಸ್ತಿತ್ವ ಇರಬಹುದು ಮತ್ತು ಇರಲೇಬೇಕು. ಯಾಕೆಂದರೆ ಈ ಬ್ರಹ್ಮಾಂಡ ಸಂಪೂರ್ಣವಾಗಿ ಒಂದು. ಈ ಗ್ರಹಗಳು, ಉಪಗ್ರಹಗಳು, ಇತರ ಆಕಾಶ ಕಾಯಗಳು ಅದರೊಳಗೇ ಹಲವು ಅಂಗಗಳು ಅಷ್ಟೆ. ನಮ್ಮ ದೇಹದಲ್ಲಿ ಹಲವು ಅಂಗಗಳಿದ್ದಂತೆ!

ಆ ಕಾರಣದಿಂದಾಗಿಯೇ ನಮ್ಮ ಶರೀರವನ್ನು ಈ ಬ್ರಹ್ಮಾಂಡಕ್ಕೂ, ಆತ್ಮವನ್ನು ಜಗತ್ತಿನ ನಿಯಂತ್ರಕ ಶಕ್ತಿಯಾದ ಪರಬ್ರಹ್ಮ ತತ್ತ್ವಕ್ಕೂ ಹೋಲಿಸಿದ್ದು ನಮ್ಮ ಹಿರಿಯರು. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಇದರ ಉಲ್ಲೇಖವಿದ್ದು ‘ಆತ್ಮ ಏವ ಇದಮಗ್ರ ಆಸೀತ್ ಏಕಮೇವ’ ಎಂದಿದ್ದಾರೆ. ಬಹಳಷ್ಟು ಜನ ತಮ್ಮ ಮನಸನ್ನೇ ಆತ್ಮವೆಂದು ಭ್ರಮಿಸಿದ್ದಾರೆ, ಕೆಲವೇ ಸೌರಮಂಡಲಗಳನ್ನು ಬ್ರಹ್ಮಾಂಡ ಎಂದು ಭಾವಿಸಿದಂತೆ! ಅದನ್ನೇ ಛಾಂದೋಗ್ಯ ಉಪನಿಷತ್‌ನಲ್ಲಿ  ‘ಅನ್ನಮಯಂ ಹಿ ಸೋಮ್ಯ ಮನಃ’ ಎಂದಿದ್ದಾರೆ. ಅಂದರೆ ಮನಸ್ಸು ಆತ್ಮವಲ್ಲ. ಶರೀರ ಸತ್ತಾಗ ಮನಸ್ಸೂ ಸಾಯುತ್ತದೆ ಎಂದರ್ಥ. ಇಲ್ಲಿ ಆತ್ಮವನ್ನು ಪರಬ್ರಹ್ಮ ತತ್ತ್ವವೆಂಬ ಸೃಷ್ಟಿಯ ಮೂಲ ಬೀಜದ ಅಂಶ ಎಂದು ಪರಿಗಣಿಸಲಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಆತ್ಮವೇ ಪರಬ್ರಹ್ಮ ತತ್ತ್ವ ಮತ್ತು ಪರಬ್ರಹ್ಮ ತತ್ತ್ವವೇ ಆತ್ಮ ಎಂದೂ ಹೇಳಲಾಗಿದೆ.

ಹಾಗಿದ್ದರೆ ಈ ಜಗತ್ತಿನಲ್ಲಿ ಜೀವಿಗಳ ಸೃಷ್ಟಿಯಾದದ್ದು ಹೇಗೆ? ಇದನ್ನು ವಿವರಿಸುವುದು ಕಠೋಪನಿಷತ್ತು. ‘ಊರ್ಧ್ವಮೂಲೋನುವಾಕ್ ಶಾಖಮೇಷೋಶ್ವತ್ಥಃ ಸನಾತನಃ’ ಎಂದೂ ‘ತದೇವ ಶುಕ್ರಂ, ತದ್ಬ್ರಹ್ಮ ತದೇವಾಮೃತಮುಚ್ಯತೇ’ ಎಂಬುದಾಗಿಯೂ ಹೇಳುತ್ತದೆ ಕಠೋಪನಿಷತ್ತು. ಅಂದರೆ ಜಗತ್ತಿನ ಸೃಷ್ಟಿಯ ಮೂಲ ಬೀಜವೆಂದು ಪರಿಗಣಿಸಲ್ಪಟ್ಟಂಥ ಶುಕ್ರ (ಇದನ್ನು ಶುಕ್ರಗ್ರಹವೆಂದು ಭಾವಿಸಬೇಡಿ) ಮಹಾಸೋಟಕ್ಕೆ ಒಳಗಾಗಿ ಈ ಬೀಜಾಂಶಗಳು ಹಲವು ಚಿಗುರುಗಳಾಗಿ ಮೊಳಕೆಯೊಡೆದು ಈ ಬ್ರಹ್ಮಾಂಡವೆಂಬ ದೊಡ್ಡ ಅಶ್ವತ್ಥವೃಕ್ಷವಾಗಿದೆ. ಇಂಥ ಶುಕ್ರ ಪರಬ್ರಹ್ಮ ತತ್ತ್ವವಾಗಿದ್ದು ಇದು ಅಮರ ಎಂದರ್ಥ.

ನಾವು ಮಾಡುವ ಬಹುದೊಡ್ಡ ತಪ್ಪೊಂದಿದೆ. ಅದು ಯಾವುದೇ ಒಂದು ವಿಚಾರದ ಯಥಾವತ್ ಅರ್ಥವನ್ನು ಮಾತ್ರ ಪರಿಗಣಿಸುವುದು. ಅಲ್ಲಿ ವಾಸ್ತವವಾಗಿ ಹೇಳಿದ್ದೇನು ಎಂಬುದನ್ನು ಯೋಚಿಸುವುದೇ ಇಲ್ಲ. ಒಂದು ಮರ ಸಾವಿರಾರು ಕಾಯಿಗಳನ್ನು ಬಿಡುತ್ತದೆ. ಆ ಕಾಯಿಗಳು ಬೀಜಗಳಾಗಿ ಮರವಿದ್ದ ಸ್ಥಳದಲ್ಲಿಯೇ ಹುಟ್ಟಿ ಬೆಳೆಯಬೇಕು ಎಂಬ ನಿಯಮವೇನಾದರೂ ಇದೆಯೇ? ಯಾವುದೋ ಹಕ್ಕಿಗಳ ಮೂಲಕವೋ ಪ್ರಾಣಿಗಳ ಮೂಲಕವೋ ಬೀಜ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿ ಅಲ್ಲಿ ಮೊಳಕೆಯೊಡೆದು ಮರವಾಗಿ ಬೆಳೆಯಬಹುದು. ಗಾಳಿಯ ಮೂಲಕವೇ ಹಲವು ದಿಕ್ಕುಗಳಿಗೆ ಚಲಿಸುವ ಬೀಜಗಳೂ ಇವೆ. ಹೀಗಿರುವಾಗ ಮೂಲ ಮರವಿದ್ದ ಜಾಗದಲ್ಲಿಯೇ ಅದರ ಬೀಜದಿಂದ ಹುಟ್ಟುವ ಗಿಡ ಮರವಾಗಿ ಬೆಳೆಯಬೇಕು ಎಂದು ಭಾವಿಸಿದರೆ ಹೇಗಾದೀತು?

ಅಂತೆಯೇ ಬ್ರಹ್ಮಾಂಡ. ಇಲ್ಲಿ ಜೀವಿಗಳು ಹಲವು, ವಿವಿಧ ರೂಪ, ವಿವಿಧ ಆಕಾರ, ಗಾತ್ರ. ಒಂದರಂತೆ ಇನ್ನೊಂದಿಲ್ಲ. ಜೀವಾಂಕುರ ಮಾತ್ರ ಎಲ್ಲದರದ್ದೂ ಒಂದೇ. ಅದುವೇ ಆತ್ಮ. ಪರಬ್ರಹ್ಮ ತತ್ತ್ವದ ಸ್ವರೂಪ. ಈ ಆತ್ಮವೆಂಬೋ ಜೀವಾಂಕುರ ಭೂಮಿಯಲ್ಲಿಯೇ ಮೊಳಕೆಯೊಡೆದು ಜೀವವೃಕ್ಷವಾಗಿ ಬೆಳೆಯಬೇಕೆಂಬ ನಿಯಮವಿಲ್ಲ. ಬ್ರಹ್ಮಾಂಡದ ಯಾವ ಭಾಗದಲ್ಲಿಯಾದರೂ ಹುಟ್ಟಬಹುದು. ಹಾಗಾಗಿ ಯಾವ ಭಾಗದಲ್ಲಿ ಜೀವಿಗಳಿಲ್ಲ ಎಂದು ಹೇಳುವುದು ಕಷ್ಟವಾದೀತು ಮತ್ತು ಅದು ದೊಡ್ಡ ತಪ್ಪಾದೀತು!

Comments

  1. ವಾವ್, ಅಮೋಘವಾಗಿದೆ ಲೇಖನ.. ಹೊಸ ಚಿಗುರು ಹಳೇ ಬೇರು ಸೇರಿಸಿ ಬರೆದಿದ್ದರಿ೦ದ ಮರ ಸೊಬಗು ಆಗಲೇಬೆಕಲ್ಲ.. ಬೇರೆ ಗ್ರಹಗಳ ಜೀವಿಯನ್ನು ನಾನೊಮ್ಮೆ ಭೇಟಿಯಾಗಬೇಕೆ೦ಬಾಸೆ.
    ..
    shreepadarao

    ReplyDelete
  2. nice article...:) ಆದರೆ ನನ್ನದೊ೦ದು ಪ್ರಶ್ನೆ, ಸಾವಿನ ನ೦ತರ ಆತ್ಮ ಇನ್ನೊ೦ದು ಶರೀರವನ್ನು ಸೇರುವಾಗ ಆದೇ ಹಳೆಯ ಮನಸ್ಸು ಹಾಗೂ ಬುದ್ಧಿ ಆತ್ಮವನ್ನು ಅ೦ಟಿಕೊ೦ಡು ಹೋಗುತ್ತದೆ ಅ೦ತ ಒಬ್ಬರು ಹೇಳಿದ್ದ. ಇಲ್ಲಿ ಶರೀರದೊಡನೆ ಮನಸ್ಸು ಕೂಡ ಸಾಯುತ್ತೆ ಅ೦ದರೆ ಹೇಗೆ......?

    ReplyDelete
    Replies
    1. ಮನಸ್ಸು ಬೇರೆ ಆತ್ಮ ಬೇರೆ. ಇವೆರಡನ್ನು ಸಮೀಕರಿಸುವುದಕ್ಕಾಗದು. ಮನಸ್ಸು ಒಂದು ಜನ್ಮಕ್ಕೆ ಸಂಬಂಧಪಟ್ಟದ್ದು. ಆತ್ಮ ಜನ್ಮಜನ್ಮಾಂತರದ್ದು. ಈ ಜನ್ಮದಲ್ಲಿದ್ದಂಥ ಮನಃಸ್ಥಿತಿ ಇನ್ನೊಂದು ಜನ್ಮದಲ್ಲಿ ಇರಲೇಬೇಕೆಂಬ ನಿಯಮವಿಲ್ಲ. ಆದರೆ ಆತ್ಮ ಈ ಜನ್ಮಕ್ಕೂ ಮುಂದಿನ ಜನ್ಮಕ್ಕೂ, ಜನ್ಮ ಇಲ್ಲದ ಸ್ಥಿತಿ ಅಂದರೆ ಮೋಕ್ಷಕ್ಕೂ ಒಂದೇ ಆಗಿರುತ್ತದೆ.

      Delete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು