ಪ್ಲಾಸ್ಟಿಕ್ ತಿನ್ನೋ ಫಂಗಸ್

ಪ್ಲಾಸ್ಟಿಕ್ ತಿನ್ನೋ ಫಂಗಸ್ ಅನ್ನು ಕಂಡು ಹಿಡಿದಿದ್ದಾರೆ ಅಂತ ನನ್ನ ಗಮನಕ್ಕೆ ತಂದವರು ಮಿತ್ರ ಕಿರಣ್ ಪುರಾಣಿಕ್.


ಅದ್ಯಾವ ಪುಣ್ಯಾತ್ಮ ಪ್ಲಾಸ್ಟಿಕ್ ಕಂಡು ಹಿಡಿದ್ನೋ (ಅಲೆಕ್ಸಾಂಡರ್ ಪಾರ್ಕ್ಸ್, ೧೮೬೨ರಲ್ಲಿ ಪ್ಲಾಸ್ಟಿಕ್ ಅನ್ನೋ ಪಾಲಿಇಥಿಲೀನ್ ಅನ್ನು ಜಗತ್ತಿಗೆ ಪರಿಚಯಿಸಿದ್ದ) ಮನೆ ಮುಂದೆ ಎಲ್ಲಾ ಪ್ಲಾಸ್ಟಿಕ್... ಪ್ಲಾಸ್ಟಿಕ್... ಇಂಥದ್ದೊಂದು ಬಯ್ಗುಳ ಪರಿಸರ ಪ್ರಿಯರ ಬಾಯಿಯಿಂದ ಖಂಡಿತ ಕೇಳಿರುತ್ತೀರಿ. ಪರಿಸರ ರಕ್ಷಣೆಯ ಬಗ್ಗೆ ಮಾತುಗಳು ಚುರುಕು ಪಡೆದುಕೊಂಡಿರುವಂಥ ಈ ಸಮಯದಲ್ಲಿ ಜಗತ್ತಿನ ಉದ್ದಗಲಕ್ಕೂ ಪ್ಲಾಸ್ಟಿಕ್ ವಿರೋಧಿ ಮಾತುಗಳೇ ಕಿವಿಗಪ್ಪಳಿಸುತ್ತಿವೆ.

ಇಂಥ ಸಂದರ್ಭದಲ್ಲಿ ಪ್ಲಾಸ್ಟಿಕ್ ವಿರೋಧಿಗಳ ಮತ್ತು ಪರಿಸರ ಪ್ರೇಮಿಗಳ ಮನಸಿಗೆ ಹಿತವಾಗುವಂಥ ಒಂದು ಸಂದೇಶ ಅಮೆರಿಕದಿಂದ ಬಂದಿದೆ. ಇಲ್ಲಿನ ಯಾಲೆ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಅಮೆಜಾನ್ ಕಾಡಿನಲ್ಲಿ ಪ್ಲಾಸ್ಟಿಕ್ ತಿನ್ನುವಂಥ ಫಂಗಸ್ ಇರುವುದನ್ನು ಪತ್ತೆ ಮಾಡಿದ್ದಾರೆ.

ಪ್ಲಾಸ್ಟಿಕ್ ಭಕ್ಷಕಗಳು
ಪೆಟ್ರೋಲಿಯಂ ಉತ್ಪನ್ನವಾಗಿರುವ ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆತು ಹೋಗುವುದಿಲ್ಲ. ವಿಭಜನೆಗೊಳ್ಳುವುದೂ ಇಲ್ಲ. ಸಾಧಾರಣ ಫಂಗಸ್, ಬ್ಯಾಕ್ಟೀರಿಯಾಗಳು ಪ್ಲಾಸ್ಟಿಕ್ ಸುದ್ದಿಗೇ ಹೋಗುವುದಿಲ್ಲ. ಆದರೆ ಅಮೆಜಾನ್ ಮಳೆಕಾಡಿನಲ್ಲಿ ಒಂದು ಬಗೆಯ ಫಂಗಸ್ ಇದೆ. ಇದು ಪರಾವಲಂಬಿ ಜೀವಿಯಾಗಿದ್ದು, ಸಸ್ಯಗಳ ಒಳಗೇ, ಅವುಗಳಿಗೆ ಹೆಚ್ಚು ಹೆಚ್ಚು ಹಾನಿಯಾಗದಂತೆ ಜೀವಿಸುತ್ತದೆ.

ಈ ಫಂಗಸ್ ಪ್ಲಾಸ್ಟಿಕ್ ಭುಂಜಿಸುತ್ತದೆ ಎನ್ನುತ್ತಿದ್ದಾರೆ ಯಾಲೆ ಯೂನಿವರ್ಸಿಟಿಯ ವಿದ್ಯಾರ್ಥಿಗಳು. ಇದಕ್ಕೆ ಎಂಥದ್ದೇ ಕಠಿಣ ಸಂಯುಕ್ತವನ್ನೇ ಆದರೂ ಭೇದಿಸಿ ಛಿದ್ರಗೊಳಿಸುವ ಸಾಮರ್ಥ್ಯ ಇರುವುದರಿಂದಾಗಿ ಇದು ಸಾಧ್ಯವಾಗಿದೆ ಎನ್ನುತ್ತಾರೆ ಅವರು. ಇವುಗಳನ್ನು ಬೆಳೆಸಿದರೆ ನಮ್ಮ ಪರಿಸರದಿಂದ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದಕ್ಕೆ ಸಹಕಾರಿಯಾಗಬಹುದೇ ಎಂಬ ಚಿಂತನೆ ಈಗ ವೈಜ್ಞಾನಿಕ ವಲಯದಲ್ಲಿ ಮೊಳಕೆಯೊಡೆದಿದೆ.
ಈ ಫಂಗಸ್ ಪ್ಲಾಸ್ಟಿಕ್‌ಗಳನ್ನು, ಅದರಲ್ಲೂ ಮುಖ್ಯವಾಗಿ ಪಾಲಿಯೂರೆಥೇನ್ ಸಂಯುಕ್ತವನ್ನು ಛಿದ್ರಗೊಳಿಸುತ್ತದೆ. ಇದು ಜಗತ್ತಿನ ತ್ಯಾಜ್ಯ ನಿರ್ವಹಣೆಗೆ ಸಹಕಾರಿಯಾಗಬಹುದು ಎಂಬುದು ಒಂದು ದೃಷ್ಟಿಕೋನದ ಅಭಿಪ್ರಾಯ.

ಸಮಸ್ಯೆ ಇಲ್ಲವೇ?
ಯಾವುದೇ ಒಂದು ಜೀವಿಯಿಂದ ಎಷ್ಟು ಒಳಿತಾಗುತ್ತದೆಯೇ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಕೆಡುಕುಂಟಾಗುವುದು ಸಹಜ. ನಮಗೆ ಉಪಕಾರ ಮಾಡುತ್ತಿರುವಂಥ ವ್ಯಕ್ತಿಯೇ ದ್ರೋಹವೆಸಗುವ ಪ್ರಸಂಗಗಳಿವೆ. ನಾವು ಸ್ನೇಹಿತ ಎಂದು ತಿಳಿದಿರುವ ವ್ಯಕ್ತಿ ನಮ್ಮ ಹೆಗಲ ಮೇಲೆ ಕೈಯಿಟ್ಟುಕೊಂಡೇ ಬೆನ್ನಿಗೆ ಚೂರಿ ಹಾಕುವುದು ಹೊಸ ವಿಚಾರವೇನೂ ಅಲ್ಲ. ಇಂತಿರುವಾಗ ಇತರ ಜೀವಿಗಳಿಂದ ಸಮಸ್ಯೆ ಇಲ್ಲ ಎಂದು ಭಾವಿಸುವುದು ಹೇಗೆ?

ಗೆದ್ದಲ ಹುಳಗಳು ನಿರ್ಮಿಸುವ ಹುತ್ತಗಳು ಪರಿಸರಕ್ಕೆ ಉಪಕಾರಿಯಾಗುವಂಥವು. ಅಂತರ್ಜಲವನ್ನು ಹೆಚ್ಚಿಸುವಂಥವು. ಆದರೆ ಅದೇ ಗೆದ್ದಲ ಹುಳಗಳು ಮನೆಯೊಳಗೆ ಹುತ್ತವನ್ನು ನಿರ್ಮಿಸಿದರೆ? ಮನೆಯ ಛಾವಣಿಗೆ ಬಳಸಿರುವ ಮರಮಟ್ಟುಗಳನ್ನು ತಿಂದು ಹಾಕಿದರೆ? ಬ್ಯಾಕ್ಟೀರಿಯಾಗಳು ರೋಗವನ್ನು ನಿಯಂತ್ರಿಸಲೂ ನೆರವಾಗುತ್ತವೆ. ಅದೇ ಬ್ಯಾಕ್ಟೀರಿಗಳು ರೋಗವನ್ನು ಹರಡುವುದಕ್ಕೂ ಕಾರಣವಾಗುತ್ತವೆ. ಹೀಗಾಗಿ ಯಾವುದೇ ಒಂದು ವಿಚಾರದ ಬಗ್ಗೆ ವಿಭಿನ್ನ ದೃಷ್ಟಿಕೋನದಿಂದ ಚಿಂತನೆ ಮಾಡುವುದು ಅನಿವಾರ್ಯ.

ಹೊಸದಾಗಿ ಪತ್ತೆಯಾಗಿರುವ ಫಂಗಸ್ ಪ್ಲಾಸ್ಟಿಕ್ ವಸ್ತುಗಳನ್ನು ಭುಂಜಿಸಿ ಜೀರ್ಣಿಸಿಕೊಳ್ಳಬಹುದು. ಒಂದು ವೇಳೆ ಈ ಫಂಗಸ್ ಬೆಳೆಯುವುದಕ್ಕೆ ನಾವು ಮುಂದಾಗಿ, ಅವುಗಳ ಸಂಖ್ಯೆ ಕ್ಷಿಪ್ರಗತಿಯಲ್ಲಿ ವೃದ್ಧಿಸಿದರೆ? ಫಂಗಸ್ ಸಂಖ್ಯೆ ಏರಿಕೆಯಾದಷ್ಟು ಅವುಗಳಿಗೆ ಬೇಕಾದ ಆಹಾರದ ಪ್ರಮಾಣವೂ ಹೆಚ್ಚುತ್ತದೆ. ಅಂಥ ಸಂದರ್ಭದಲ್ಲಿ ನಮಗೆ ಅಗತ್ಯವಿರುವ ಪ್ಲಾಸ್ಟಿಕ್ ವಸ್ತುಗಳಿಗೇ ಅವು ಮುತ್ತಿಗೆ ಹಾಕಿದರೆ ನಿಯಂತ್ರಣ ಮಾಡುವುದಕ್ಕೆ ಸಾಧ್ಯವಾದೀತೇ?

ಉಪಕಾರಕ್ಕೆಂದು ಬೆಳೆಸಿದ ಜೀವಿಗಳು ಹಾನಿ ಮಾಡುವುದಕ್ಕೆ ಶುರು ಮಾಡಿದವು ಎಂದಾದರೆ ಅವುಗಳನ್ನು ನಿಯಂತ್ರಣ ಮಾಡುವುದಕ್ಕೆಂದು ಯಾವುದಾದರೂ ರಾಸಾಯನಿಕವನ್ನು ಔಷಧಿಯಾಗಿ ಬಳಸಬಹುದು. ಅಥವಾ ಅವುಗಳ ನಾಶಕ್ಕೆಂದೇ ಯಾವುದೇ ಒಂದು ಸಂಯುಕ್ತವನ್ನು ಸೃಷ್ಟಿಸಬಹುದು. ಅದು ದೊಡ್ಡ ಸಂಗತಿಯೇನೂ ಅಲ್ಲ. ಆದರೆ ಇದೇ ರೀತಿ ಒಂದು ಜೈವಿಯ ಸೃಷ್ಟಿ ಮತ್ತು ಅದರ ನಾಶಕ್ಕಾಗಿ ಇನ್ನೊಂದು ರಾಸಾಯನಿಕ ಸೃಷ್ಟಿ ಮಾಡುತ್ತಾ ಹೋದೆವು ಎಂದಾದರೆ ನಮ್ಮ ಪ್ರಯೋಗಗಳು ಪರಿಸರಕ್ಕೆ ಉಪಕಾರ ಮಾಡುವ ಬದಲು ಅಪಚಾರವನ್ನೇ ಮಾಡುವ ಪ್ರಮಾಣ ಹೆಚ್ಚಾದೀತು. ಆ ಕಡೆಗೂ ಲಕ್ಷ್ಯ ಕೊಡುವುದು ಸೂಕ್ತವೆಂದೇ ಎನಿಸುತ್ತದೆ.

Comments

  1. ವಿಷ್ಣು...ಬಹಳ ಮಾಹಿತಿಯುಕ್ತ ಲೇಖನ... ನನ್ನಲ್ಲೂ ಈ ಜಿಜ್ಞಾಸೆ ಹಲವು ಬಾರಿ ಮೂಡಿದ್ದೂ ಉಂಟು... ಫಂಗಸ್ ಪ್ಲಾಸ್ಟಿಕ್ ಭಕ್ಷಕ ಶಕ್ತಿಯನ್ನು ಹೊಂದಿದ್ದರೆ ಅದರ ಉಪಯೋಗವನ್ನ ಬಹು ನಿಯಂತ್ರಿತ ರೀತಿಯಲ್ಲಿ ಮಾಡಿಕೊಳ್ಳಬಹುದು.. ಇದರ ಅನಿಯತ್ರಿಂತ ಬೆಳವಣಿಗೆಯ ಬಗ್ಗೆ ಮುಂದಾಲೋಚನೆಯ ಪರಿಯೋಜನೆ ಅಗತ್ಯ...

    ReplyDelete
    Replies
    1. ಹೌದು ಸರ್, ಫಂಗಸ್‌ಗಳ ಉಪಯೋಗ ಖಂಡಿತಕ್ಕೂ ಪಡೆದುಕೊಳ್ಳಬಹುದು. ಆದರೆ ಅವುಗಳಿಂದ ಹಾನಿಯಾಗಬಾರದು. ಅವು ಅನಿಯಂತ್ರಿತವಾಗಿ ಬೆಳೆಯಬಾರದು. ಅಲ್ಲದೇ ಮುಂದೊಂದು ದಿನ ಅವುಗಳ ನಾಶಕ್ಕಾಗಿಯೇ ಏನೋ ಒಂದು ಔಷಧಿ ಕಂಡು ಹಿಡಿದು, ಆ ಔಷಧಿ ನಮ್ಮ ಪರಿಸರಕ್ಕೆ ಮಾರಕವಾಗುವಂತಾಗಬಾರದು.

      Delete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು