ಅವಸಾನದತ್ತ ಹವಳದ ದಂಡೆಗಳು...!


ಹವಳ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ! ಆಭರಣ ಕ್ಷೇತ್ರದಲ್ಲಿ ಅತ್ಯಂತ ಮಹತ್ವ ಹೊಂದಿರುವ ಹವಳ, ಜಗತ್ತಿನ ಆರ್ಥಿಕತೆಗೂ ಅಗಾಧ ಕೊಡುಗೆಯನ್ನು ನೀಡುತ್ತಿದೆ. ಸಮುದ್ರದಾಳದಲ್ಲಿನ ಹವಳದ ದಂಡೆಗಳಿಂದ ಕಚ್ಚಾ ಹವಳಗಳನ್ನು ತೆಗೆಯುವ ಉದ್ಯಮ ದೊಡ್ಡ ಪ್ರಮಾಣದಲ್ಲಿದೆ. ಆದರೆ ಇಂದು ಹವಳದ ದಂಡೆಗಳಿಗೆ ಮತ್ತು ಹವಳ ಉತ್ಪಾದಿಸುವ ಜೀವಿಗಳಿಗೆ ಹಲವಾರು ರೀತಿಯಲ್ಲಿ ಹೊಡೆತ ಬೀಳುತ್ತಿದ್ದು, ವಿನಾಶದ ಅಂಚಿನತ್ತ ಸಾಗುತ್ತಿವೆ. ಹೇರಳವಾಗಿದ್ದ ಹವಳದ ದಂಡೆಗಳ ಪ್ರಮಾಣ ಕಡಿಮೆಯಾಗಿದೆ. ಮುಂದೊಂದು ದಿನ ಹವಳ ದಂಡೆಗಳು ಸಂಪೂರ್ಣ ನಾಶ ಹೊಂದಿದರೂ ಅಚ್ಚರಿಯೇನಿಲ್ಲ!
ಸರಿ, ಈ ಸಂಗತಿ ಬಹುತೇಕ ಜನರಿಗೆ ಗೊತ್ತಿರುವಂಥದ್ದೇ! ಆದರೆ ವಿನಾಶದ ಅಂಚಿನತ್ತ ಸಾಗುತ್ತಿರುವ ವೇಗ ಎಂಥಾದ್ದು ಎಂಬುದನ್ನು ಪತ್ತೆ ಮಾಡುವುದಕ್ಕೆ ಇದುವರೆಗೆ ಯಾವ ಪರೀಕ್ಷೆಯೂ ಇರಲಿಲ್ಲ. ಹೀಗಾಗಿ ಹವಳಗಳನ್ನು ಹೊರತೆಗೆಯುವ ಕಾರ್ಯ ಅವ್ಯಾಹತವಾಗಿ ಮುಂದುವರಿಯುತ್ತಲೇ ಇದೆ. ಇದೀಗ ಅಮೆರಿಕದ ಸ್ಯಾನ್‌ಡಿಯಾಗೋ ವಿಜ್ಞಾನಿಗಳು ಹೊಸ ಪರೀಕ್ಷಾ ವಿಧಾನವೊಂದನ್ನು ಕಂಡುಕೊಂಡಿದ್ದು, ಇದರ ಮೂಲಕ ಹವಳದ ದಂಡೆಗಳು ಮತ್ತು ಅವುಗಳನ್ನು ಉತ್ಪಾದಿಸುವ ಜೀವಿಗಳ ವಿನಾಶದ ತೀವ್ರತೆಯನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹೇಳಿದ್ದಾರೆ.
ಏನಿದು ಪರೀಕ್ಷೆ: ಹವಳಗಳನ್ನು ಉತ್ಪಾದಿಸುವ ಜೀವಿಗಳನ್ನು ಕೋರಲ್‌ಗಳು ಎನ್ನುತ್ತಾರೆ. ಸಮುದ್ರದಾಳದಲ್ಲಿನ ಬಂಡೆ ಕಲ್ಲುಗಳಿಗೆ ಅಥವಾ ಗಟ್ಟಿ ನೆಲಕ್ಕೆ ಅಂಟಿಕೊಂಡಂತೆ ಈ ಹುಳಗಳು ಕೋಶಗಳನ್ನು ಕಟ್ಟುತ್ತವೆ. ಈ ಕೋಶಗಳೇ ನಾವು ಬಳಸುವ ಹವಳಗಳು. ಸಮುದ್ರದಿಂದ ಹೊರತೆಗೆದ ಹವಳಗಳನ್ನು ನೇರವಾಗಿ ಬಳಸುವುದಕ್ಕೆ ಸಾಧ್ಯವಿಲ್ಲ. ಅವುಗಳನ್ನು ಬ್ಲೀಚಿಂಗ್ ಮೂಲಕ ಸಂಸ್ಕರಿಸಬೇಕು. ಇಲ್ಲದಿದ್ದರೆ ಅವುಗಳನ್ನು ಉತ್ಪಾದಿಸುವ ಜೀವಿಗಳು ಕೊಳೆತು ವಾಸನೆ ಬರುವುದಕ್ಕೆ ಶುರುವಾಗುತ್ತದೆಯೇ ಹೊರತು, ಹವಳಗಳು ಸಿಗುವುದಿಲ್ಲ. ಬ್ಲೀಚ್ ಮಾಡುವುದು ಅಂದರೆ ಈ ಜೀವಿಗಳನ್ನು ಸಾಯಿಸುವುದು ಎಂದೇ ಅರ್ಥ.
ಹೀಗಾಗಿ ಬ್ಲೀಚ್ ಮಾಡುವುದಕ್ಕೂ ಮೊದಲೇ ಕೋರಲ್‌ಗಳು ಹೊರಸೂಸುವ ಬೆಳಕನ್ನು ಪರೀಕ್ಷೆಗೆ ಒಳಪಡಿಸಿದರೆ ಕೋರಲ್‌ಗಳ ಆರೋಗ್ಯ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತದೆ. ಅಂದರೆ ಕೋರಲ್‌ಗಳು ಹೊರಸೂಸುವ ಬೆಳಕಿನ ತೀವ್ರತೆ ಎಷ್ಟಿದೆ ಎಂಬುದು ಅವುಗಳ ಆರೋಗ್ಯವನ್ನು ಸೂಚಿಸುತ್ತದೆ. ಪ್ರಖರತೆ ಕಡಿಮೆಯಾಗುತ್ತಾ ಹೋದಂತೆ ಅವುಗಳು ರೋಗಪೀಡಿತವಾಗಿವೆ ಮತ್ತು ವಿನಾಶದ ಅಂಚಿನತ್ತ ಸಾಗುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಸಾಗರ ವಿಜ್ಞಾನಿಗಳಾದ ಮೆಲಿಸಾ ರೋಥ್ ಮತ್ತು ಡಿಮಿಟ್ರಿ ಡೆಹೇನ್.
ಮಾನವನ ಧನದಾಹ ಹವಳದ ದಂಡೆಗಳನ್ನು ಬರಿದು ಮಾಡುತ್ತಿದೆ ಎಂಬುದು ವಾಸ್ತವ. ಅಲ್ಲದೆ, ತೀವ್ರವಾಗಿ ಅಸ್ಥಿರಗೊಳ್ಳುತ್ತಿರುವ ಜಾಗತಿಕ ವಾತಾವರಣ ಕೂಡಾ ಹವಳ ಉತ್ಪಾದಿಸುವ ಕೋರಲ್‌ಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ. ತಾಪಮಾನದ ವೈಪರೀತ್ಯಕ್ಕೆ ಹೊಂದಿಕೊಳ್ಳುವುದು ಕೋರಲ್‌ಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವುಗಳ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಹೊಸದಾಗಿ ಹವಳದ ದಂಡೆಗಳ ಉತ್ಪಾದನೆ ಕುಂಠಿತವಾಗುತ್ತಿದೆ ಎನ್ನುತ್ತಾರೆ ರೋಥ್ ಮತ್ತು ಡೆಹೇನ್. ಇಂಡೋ-ಪೆಸಿಫಿಕ್ ಹವಳದ ದಂಡೆಗಳನ್ನು ವಿವಿಧ ತಾಪಮಾನದಲ್ಲಿ ಪರೀಕ್ಷೆಗೆ ಒಳಪಡಿಸಿ ಇದನ್ನು ಕಂಡುಕೊಂಡಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ವಿನಾಶದ ತೀವ್ರತೆ ಪತ್ತೆ ಮಾಡುವುದು ದೊಡ@ ವಿಚಾರವಲ್ಲ. ಅತ್ಯಮೂಲ್ಯವಾಗಿರುವ ಹವಳಗಳನ್ನು ಮುಂದಿನ ತಲೆಮಾರುಗಳಿಗೂ ಉಳಿಸಿಕೊಂಡು ಹೋಗುವುದಕ್ಕಾಗಿ ಹವಳ ಉತ್ಪಾದಿಸುವ ಕೋರಲ್‌ಗಳನ್ನು ಸಂರಕ್ಷಿಸುವ ಮನಸ್ಥಿತಿ ಮನುಷ್ಯನಿಗೆ ಬರುತ್ತಾ ಎನ್ನುವುದನ್ನು ಯೋಚಿಸಬೇಕಾಗಿದೆ.


Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು