‘ಶಕ್ತಿ’ಗೆ ಎರಡು ಹೊಸ ದಾರಿಗಳು


ಜಗತ್ತು ಅಭಿವೃದ್ಧಿ ಪಥದಲ್ಲಿ ಕ್ಷಿಪ್ರವಾಗಿ ಹೆಜ್ಜೆಯಿಡುತ್ತಿದೆ. ಇದರ ಜತೆ ಜತೆಗೇ ಜನರ ಅಗತ್ಯಗಳೂ ಹೆಚ್ಚಾಗುತ್ತಿದ್ದು, ಇಂಧನ ಬಳಕೆ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ತತ್ಪರಿಣಾಮ ಇಂಧನ ಕೊರತೆ ಜಗತ್ತಿನ ಎಲ್ಲ ದೇಶಗಳನ್ನೂ ಕಾಡುತ್ತಿದೆ. ಒಂದೆಡೆ ಪ್ರಸ್ತುತ ಉತ್ಪಾದನೆಯಾಗುತ್ತಿರುವ ದ್ರವ ಇಂಧನ ಪ್ರಮಾಣ ವಾಹನಗಳ ಬೇಡಿಕೆಗೆ ಸಾಕಾಗುವಷ್ಟಿಲ್ಲ. ಇನ್ನೊಂದೆಡೆ ಎಷ್ಟು ವಿದ್ಯುತ್ ಉತ್ಪಾದನೆ ಮಾಡಿದರೂ ಕೊರತೆ ನೀಗಿಸುವುದಕ್ಕೆ ಹೆಣಗಾಡುವಂಥ ಪರಿಸ್ಥಿತಿ ಇದೆ. ಈ ಸಮಸ್ಯೆಗಳನ್ನು ಬಗೆ ಹರಿಸಿ ಇಂಧನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವೈಜ್ಞಾನಿಕ ವಲಯ ಹಲವು ವರ್ಷಗಳಿಂದಲೇ ವಿವಿಧ ರೀತಿಯ ಸಂಶೋಧನೆಗಳನ್ನು ನಡೆಸುತ್ತಿದೆ. ಇದೀಗ ನಡೆದಿರುವ ಎರಡು ವಿಭಿನ್ನ ಪ್ರಯೋಗಗಳು ಇಂಧನ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಆಶಾಭಾವನೆಯನ್ನು ಮೂಡಿಸಿವೆ.

 ಸಂಶೋಧನೆ ಒಂದು:
ಬ್ಯಾಕ್ಟೀರಿಯಾಗಳು ಮಾನವನಿಗೆ ಎಷ್ಟು ರೋಗಗಳನ್ನು ಹರಡುತ್ತವೆಯೋ ಅದಕ್ಕಿಂತ ಹೆಚ್ಚು ಉಪಕಾರವನ್ನು ಮಾಡುತ್ತವೆ ಎಂಬುದು ವೈಜ್ಞಾನಿಕ ವಲಯದ ನಂಬುಗೆ. ಇದಕ್ಕೆ ಸಾಕ್ಷಿ ಎಂಬಂತೆ ಬ್ಯಾಕ್ಟೀರಿಯಾಗಳಿಂದ ಪರಿಶುದ್ಧ ವಿದ್ಯುಚ್ಛಕ್ತಿ ಉತ್ಪಾದಿಸುವ ಪ್ರಯೋಗದಲ್ಲಿ ಬ್ರಿಟನ್‌ನ ಈಸ್ಟ್ ಆಂಗ್ಲಿಯಾ ಯೂನಿವರ್ಸಿಟಿಯ ಸಂಶೋಧಕರು ಸಫಲರಾಗಿದ್ದಾರೆ.
ಖನಿಜಗಳ ಮೇಲ್ಮೈಯನ್ನು ಬ್ಯಾಕ್ಟೀರಿಯಾಗಳಲ್ಲಿನ ಪ್ರೋಟೀನ್‌ಗಳ ಪದರ ಸ್ಪರ್ಶಿಸಿದರೆ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತದೆ ಮತ್ತು ಲೋಹಗಳ ಮೇಲ್ಮೈ ಮೇಲೆ ಬ್ಯಾಕ್ಟೀರಿಯಾಗಳನ್ನು ಇರಿಸಿದರೆ ಅವು ತಮ್ಮ ಕೋಶಗಳ ಮೂಲಕ ವಿದ್ಯುಚ್ಛಕ್ತಿಯನ್ನು ಪ್ರವಹಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಸಾಧಿಸಿ ತೋರಿಸಿದ್ದಾರೆ. ಈ ಮೂಲಕ ಬಯೋಬ್ಯಾಟರಿ (ಜೈವಿಕ ಶುಷ್ಕಕೋಶ)ಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಮಹತ್ವದ ಸಂಶೋಧನೆಯನ್ನೇ ನಡೆಸಿದ್ದಾರೆ.
ಮೆರೈನ್ ಬ್ಯಾಕ್ಟೀರಿಯಾ ಕುಟುಂಬಕ್ಕೆ ಸೇರಿದ ಶೆವನೆಲ್ಲಾ ಓನಿಡೆನ್ಸಿಸ್ ಎಂಬ ವರ್ಗದ ಬ್ಯಾಕ್ಟೀರಿಯಾವನ್ನು ಉಪಯೋಗಿಸಿ ಸಂಶೋಧನೆ ನಡೆಸಲಾಗಿದ್ದು, ಎಲೆಕ್ಟ್ರಾನ್‌ಗಳನ್ನು ಪ್ರವಹಿಸುವ ಸಾಮರ್ಥ್ಯವುಳ್ಳ ಪ್ರೋಟೀನ್‌ಗಳನ್ನು ಮಾತ್ರ ಬಳಸಿ ಈ ಬ್ಯಾಕ್ಟೀರಿಯಾದ ಕೃತಕ ತಳಿಯನ್ನು ಸೃಷ್ಟಿಸಿದ್ದಾರೆ. ಈ ಬ್ಯಾಕ್ಟೀರೀಯಾಗಳನ್ನು ಲಿಪಿಡ್ ಮೆಂಬ್ರೇನ್‌ಗಳ ಸಣ್ಣ ಕ್ಯಪ್ಸೂಲ್ (ವೆಸಿಕಲ್)ಗೆ ಹಾಯಿಸಿದ್ದು, ಈ ಮೂಲ ವಿದ್ಯುಚ್ಛಕ್ತಿ ಬ್ಯಾಕ್ಟೀರಿಯಾ ಮೂಲಕ ಪ್ರವಹಿಸುವಂತೆ ಮಾಡಲಾಗಿದೆ.
ಸಂಶೋಧನೆ ಎರಡು:
ಭೂಮಿಯ ವಾಯುಮಂಡಲದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂಬ ಕೂಗು ಜಾಸ್ತಿಯಾಗುತ್ತಿದ್ದು, ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಬೇಕಾದ ಕ್ರಮ ಕೈಗೊಳ್ಳುವುದಕ್ಕೆ ಎಲ್ಲ ದೇಶಗಳೂ ಮುಂದಾಗುತ್ತಿವೆ. ಇಂಗಾಲವನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ವಿಜ್ಞಾನಿಗಳು ಮಾಡುತ್ತಲೇ ಬಂದಿದ್ದು, ಇದೀಗ ಈ ವಿಚಾರದಲ್ಲಿ ಹೊಸ ಹಾದಿಯೊಂದು ಗೋಚರಿಸಿದೆ.
ವಾತಾವರಣದಲ್ಲಿ ಇಂಗಾಲವನ್ನು ಬಳಸಿಕೊಂಡು ಜೈವಿಕ ಇಂಧನ ಉತ್ಪಾದಿಸುವ ಪ್ರಯತ್ನದಲ್ಲಿ ಅಮೆರಿಕದ ಜಾರ್ಜಿಯಾ ಯೂನಿವರ್ಸಿಟಿಯ ವಿಜ್ಞಾನಿಗಳು ಯಶಸ್ಸು ಸಾಧಿಸಿದ್ದಾರೆ. ಇದಕ್ಕಾಗಿ ಸೂಕ್ಷ್ಮಾಣುಜೀವಿಯೊಂದನ್ನು ವಿಜ್ಞಾನಿಗಳು ಸೃಷ್ಟಿಸಿದ್ದು, ಇದು ಸಸ್ಯಗಳು ನಡೆಸುವ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ನಡೆಸುತ್ತವೆ.
ಸಸ್ಯಗಳು ಸೂರ್ಯನ ಬೆಳಕನ್ನು ಬಳಸಿಕೊಂಡು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುತ್ತವೆ. ಆಗ ನೀರು ಮತ್ತು ಇಂಗಾಲದ ಡೈ ಆಕ್ಸೈಡ್ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ. ಈ ಸಕ್ಕರೆಯನ್ನು ಹುದುಗುವಿಕೆ ಪ್ರಕ್ರಿಯೆಗೆ ಒಳಪಡಿಸಿದಾಗ ಮೀಥೇನ್ ಅನಿಲ ಉತ್ಪಾದನೆಯಾಗುತ್ತದೆ. ಆದರೆ ಸಸ್ಯಗಳು ದ್ಯುತಿಸಂಶ್ಲೇಷಣೆ ಮೂಲಕ ಉತ್ಪಾದಿಸಿದ ಸಕ್ಕರೆಯ ಅಂಶ ಅವುಗಳ ಕೋಶಗŅM,M3238?ರಗಳೊಳಗೆ ಸೇರಿಕೊಳ್ಳುವ ಕಾರಣ ಅದನ್ನು ಹೊರತೆಗೆದು ಮೀಥೇನ್ ಅನಿಲ ಉತ್ಪಾದಿಸುವುದು ಕಷ್ಟ. ಆದರೆ ವಿಜ್ಞಾನಿಗಳು ಸೃಷ್ಟಿಸಿರುವ ಸೂಕ್ಷ್ಮಾಣುಜೀವಿ ವಾತಾವರಣದಿಂದ ಇಂಗಾಲದ ಡೈ ಆಕ್ಸೈಡನ್ನು ನೇರವಾಗಿ ಹೀರಿಕೊಂಡು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುವ ಮೂಲಕ ಸಕ್ಕರೆಯನ್ನು ಉತ್ಪಾದಿಸುತ್ತದೆ. ಇದರಿಂದ ಮೀಥೇನ್ ಅನಿಲ ಉತ್ಪಾದಿಸಬಹುದು. ಆದರೆ ಇದನ್ನು ವಾಣಿಜ್ಯೋದ್ದೇಶಿತವಾಗಿ ಬಳಸಿಕೊಳ್ಳಬೇಕಾದರೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕು ಎನ್ನುತ್ತಾರೆ ವಿಜ್ಞಾನಿಗಳು.
ಜಗತ್ತಿನಲ್ಲಿರುವ ೭ ಶತಕೋಟಿಗೂ ಅಧಿಕ ಜನರ ಇಂಧನ ಬೇಡಿಕೆಯನ್ನು ಈಡೇರಿಸಬೇಕಾದರೆ ಇಂಥ ಹೊಸ ಹೊಸ ಪ್ರಯೋಗಗಳು ಅನಿವಾರ್ಯವೇನೋ?!

Comments

Popular posts from this blog

ಅವಸಾನದತ್ತ ಹವಳದ ದಂಡೆಗಳು...!

ಮಾನವ ವಲಸೆ ಬಂದ ಬಗೆ ಹೇಗೆ?

ಶಿವ ರೂಪಕಲ್ಪನ ಕಾವ್ಯ