ಮೂತ್ರನಾಳದ ಸಮಸ್ಯೆಗೆ ಅಂಗಾಂಶ ಕಸಿಯ ಪರಿಹಾರ

* ರೋಗಿಗಳ ಜೀವಕೋಶಗಳನ್ನೇ ಪಡೆದು ಮೂತ್ರನಾಳ ಸೃಷ್ಟಿ
* ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿ ರೋಗಿಯ ದೇಹಕ್ಕೆ ಕಸಿ
* ಮುಟ್ಟು ನಿಲ್ಲುವ ಹಂತ ತಲುಪಿದ ಮಹಿಳೆಯರಿಗೆ ಸಹಕಾರಿ


ಗತ್ತಿನಲ್ಲಿ ಲಕ್ಷಾಂತರ ಜನ ಮೂತ್ರನಾಳದ (ಯೂರೆಥ್ರಾ) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೊಂದು ರೋಗಿಗಳಲ್ಲಿ ಆಶಾಭಾವನೆ ಉದಿಸುವಲ್ಲಿ ಸಾಕಾರವಾಗಿದೆ. ಮೂತ್ರನಾಳದ ಸೋಂಕು ತಗುಲಿರುವ ವ್ಯಕ್ತಿಯ ಜೀವಕೋಶಗಳನ್ನು ಪಡೆದು ಅದನ್ನು ಅಂಗಾಂಶ ಕೃಷಿ ವಿಧಾನದ ಮೂಲಕ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ನಂತರ ಇದನ್ನು ರೋಗಿಯ ದೇಹಕ್ಕೆ ಕಸಿ ಮಾಡಲಾಗುತ್ತದೆ.


ಬೆಂಗಳೂರು: ಮುಟ್ಟು ನಿಲ್ಲುವ ಹಂತ ಬಂದಿದೆ. ಮೂತ್ರನಾಳ ಸಿಕ್ಕಾಪಟ್ಟೆ ನೋವು. ಮೂತ್ರ ವಿಸರ್ಜನೆಗೆ ಸಮಸ್ಯೆಯಾಗುತ್ತಿದೆ.... ಪ್ರಾಯ ಆಗ್ತಾ ಬಂದ ಹಾಗೇ ಮೂತ್ರ ಮಾಡುವುದಕ್ಕೂ ಸಮಸ್ಯೆಯೇ? `ಅಜ್ಜನಿಗೆ ಮೂತ್ರ ಮಾಡುವುದಕ್ಕೆ ಎಷ್ಟು ಹೊತ್ತು? ಬೇಗ ಮೂತ್ರ ಮಾಡಿ ಬರದಿದ್ದರೆ ನಮಗೆಲ್ಲ ಟೆನ್ಶನ್ ಆಗೋದಿಲ್ವೆ? ಅಂತ ಮಕ್ಕಳಿಂದ, ಮೊಮ್ಮಕ್ಕಳಿಂದ ನಿಕೃಷ್ಟಕ್ಕೊಳಗಾಗಬೇಕಾಯಿತಲ್ಲ!' ಯಾಕಿಂಥಾ ಕಷ್ಟ...! ನನ್ಗೆ  ಮೂತ್ರ ಮಾಡೋದಕ್ಕೆ ಯಾಕೆ ಕಷ್ಟ ಆಗುತ್ತೆ? ನನ್ನ ಸಮಸ್ಯೆ ಯಾರ ಜೊತೆ ಹೇಳಿಕೊಳ್ಳಲಿ?
    ಇಂಥ ನೋವುಗಳನ್ನು ಪ್ರತಿದಿನವೂ ಅನುಭವಿಸುವವರಿದ್ದಾರೆ. ಸಮಸ್ಯೆಯನ್ನು ಹೇಳಿಕೊಳ್ಳಲಾಗದೆ ವಿಲಿವಿಲಿ ಒದ್ದಾಡುತ್ತಾರೆ. ಜಗತ್ತಿನಲ್ಲಿ ಲಕ್ಷಾಂತರ ಜನ ಮೂತ್ರನಾಳದ (ಯೂರೆಥ್ರಾ) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೊಂದು ರೋಗಿಗಳಲ್ಲಿ ಆಶಾಭಾವನೆ ಉದಿಸುವಲ್ಲಿ ಸಾಕಾರವಾಗಿದೆ. ಮೂತ್ರನಾಳದ ಸೋಂಕು ತಗುಲಿರುವ ವ್ಯಕ್ತಿಯ ಜೀವಕೋಶಗಳನ್ನು ಪಡೆದು ಅದನ್ನು ಅಂಗಾಂಶ ಕೃಷಿ ವಿಧಾನದ ಮೂಲಕ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಈ ರೀತಿ ಅಭಿವೃದ್ಧಿಪಡಿಸಿದ ಅಂಗಾಂಶಗಳಿಗೆ ಮೂತ್ರನಾಳದ ರೂಪು ಕೊಡಲಾಗುತ್ತದೆ. ನಿಗದಿತ ಪ್ರಮಾಣದ ಬೆಳವಣಿಗೆಯನ್ನು ಪಡೆದಂಥ ಮೂತ್ರನಾಳವನ್ನು ಮತ್ತೆ ರೋಗಿಯ ದೇಹಕ್ಕೆ ಕಸಿ ಮಾಡಲಾಗುತ್ತದೆ.
 
ಮೂತ್ರನಾಳ ಸಮಸ್ಯೆ...:
ಮುಟ್ಟು ನಿಲ್ಲುವ ಹಂತಕ್ಕೆ ಬಂದ ಮಹಿಳೆಯರು ಮತ್ತು ನಡುವಯಸ್ಸು ಮೀರಿದ ಹಂತಕ್ಕೆ ಬಂದ ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರಾಯವಾಗುತ್ತಾ ಬಂದಂತೆ ಮೂತ್ರನಾಳದ ಸುತ್ತ ಇರುವ ಮಾಂಸಖಂಡಗಳು ಸಂಕುಚಿತಗೊಳ್ಳುತ್ತವೆ. ಮೂತ್ರನಾಳವೂ ಕುಗ್ಗುತ್ತದೆ. ಇಂಥ ಸಂದರ್ಭದಲ್ಲಿ ಮೂತ್ರ ಸರಾಗವಾಗಿ ಹೊರಬರುವುದು ಸಾಧ್ಯವಿಲ್ಲ. ಇದರಿಂದಾಗಿ ಮೂತ್ರ ಕಟ್ಟಿದಂತಾಗುವುದು, ಮೂತ್ರ ಬಾರದೇ ಇರುವುದು, ಮೂತ್ರ ವಿಸರ್ಜನೆಗೆ ದೀರ್ಘ ಸಮಯ ಬೇಕಾಗುವಂಥ ಸಮಸ್ಯೆಗಳು ತಲೆದೋರುತ್ತವೆ. ಇವರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ.
    ಇನ್ನು ಕೆಲವೊಂದು ಬಾರಿ ಜನನದ ಸಂದರ್ಭದಲ್ಲಿಯೇ ಮೂತ್ರನಾಳದ ಸಮಸ್ಯೆ ಇರುತ್ತದೆ. ಜನನದ ವೇಳೆ ಅಥವಾ ಜನಿಸಿದ ಕೆಲವು  ವಾರಗಳು ಸ್ವಲ್ಪ ಏಟು ಬಿದ್ದರೂ ಮೂತ್ರನಾಳಕ್ಕೆ ಆಘಾತವಾಗುತ್ತದೆ. ಗಂಡುಮಕ್ಕಳಲ್ಲಿ ಮೂತ್ರನಾಳ ಹೊರಕ್ಕೆ ಚಾಚಿರುವ ಕಾರಣ ಜನನದ ಸಂದರ್ಭದಲ್ಲಿ ಮತ್ತು ಎಳವೆಯಲ್ಲಿ ಮೂತ್ರನಾಳಕ್ಕೆ ಏಟಾಗುವ ಸಾಧ್ಯತೆ ಹೆಚ್ಚು.
 
ಪರಿಹಾರದ ಬೆಳಕು:
ಇಂಥ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಭರವಸೆ ನೀಡಿರುವುದು ಅಮೆರಿಕದ ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದ ಇನ್ಸ್ಟಿಸ್ಯೂಟ್ ಫಾರ್ ರಿಜನರೇಟಿವ್ ಮೆಡಿಸಿನ್ನ ಸಂಶೋಧಕರು. ರೋಗಿಯ ಮೂತ್ರಾಂಗದಿಂದಲೇ ಕೋಶಗಳನ್ನು ಪಡೆದ ಸಂಶೋಧಕರು ಅವನ್ನು 2004ರಿಂದ ಸತತವಾಗಿ ವಿವಿಧ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು. ರೋಗಿಗಳ ಮೂತ್ರಾಂಗದ ಕೋಶಗಳನ್ನು ಅಟೋ ಟಿಶ್ಯೂ ಕಲ್ಚರ್ ವಿಧಾನದ ಮೂಲಕ ಪ್ರಯೋಗಾಲಯದಲ್ಲಿ ಬೆಳೆಸಿದರು. ಈ ಬೆಳವಣಿಗೆಯ ಹಂತದಲ್ಲಿ ರಕ್ತನಾಳಗಳು ಬೆಳೆದವು. ಇಂಥ ಕೋಶಗಳನ್ನು ವಿಜ್ಞಾನನಿಗಳು ಪ್ರಯೋಗಾಲಯದಲ್ಲಿ ಬಹುಪಟ್ಟು ವೃದ್ಧಿಸಿದರು.
    ಈ ಕೊಶಗಳ ರಾಶಿಯನ್ನು ಜೈವಿಕವಾಗಿ ಕೊಳೆತುಹೋಗುವ, ಮೂತ್ರನಾಳದ ಆಕಾರದಲ್ಲಿರುವ ಮೆಶ್ನಲ್ಲಿಟ್ಟು  ಸತತವಾಗಿ ಆರು ವಾರಗಳ ಕಾಲ ಬೆಳವಣಿಗೆಯನ್ನು ನೀಡಲಾಯಿತು. ಬಳಿಕ ಇವನ್ನು ಪೂರ್ಣವಾಗಿ ಇನ್ಕ್ಯುಬೇಟರ್ನಲ್ಲಿಟ್ಟು ಸತತ ಏಳು ದಿನಗಳ ಕಾಲ ಶಾಖ ನೀಡಲಾಯಿತು. ಮೂತ್ರನಾಳ ರಚನೆಯಾಯಿತು. ಅದೂ ಬೆಳೆಯಿತು. ಮೂತ್ರನಾಳದ ಬೆಳವಣಿಗೆಗೆ ಒಟ್ಟು ಏಳು ವಾರಗಳ ಅವಧಿ. ಇಷ್ಟಾದ ಮೇಲೆ ಅದನ್ನು ರೋಗಿಯ ದೇಹಕ್ಕೆ ಜೋಡಿಸಿದರು. ರೋಗಿಯ ದೇಹದಿಂದಲೇ ಪಡೆದ ಕೋಶಗಳಿಂದ ಸೃಷ್ಟಿಸಿದ ಮೂತ್ರನಾಳವಾದ ಕಾರಣ ದೇಹವು ಹೊಸಸೇರ್ಪಡೆಯನ್ನು ತಿರಸ್ಕರಿಸಲಿಲ್ಲ. ಹಳೆಯ ಮತ್ತು ಸಮಸ್ಯೆ ಹೊಂದಿರುವ ಮೂತ್ರನಾಳವನ್ನು ತೆಗೆದುಹಾಕಿದರು. ಹೊಸ ಮೂತ್ರನಾಳವು ದೇಹಕ್ಕೆ ಬಲುಬೇಗ ಒಗ್ಗಿಕೊಂಡು ಸಾಮಾನ್ಯ ಮೂತ್ರನಾಳದಂತೆಯೇ ಕಾರ್ಯನಿರ್ವಹಿಸತೊಡಗಿತು. ಜೀವಕೋಶಗಳು ವೃದ್ಧಿಸಿದವು.
    ರಾತ್ರಿ ವೇಳೆ ಮೂತ್ರ ಸೋರಿಕೆಯಾಗುವುದು, ಮೂತ್ರ ವಿಸರ್ಜನೆಗೆ ಕಷ್ಟವಾಗುವುದು, ಮೂತ್ರನಾಳಗಳು ಸಂಕುಚಿತಗೊಳ್ಳುವುದು, ಮೂತ್ರನಾಳಕ್ಕೆ ಸೋಂಕು ತಗುಲುವುದು... ಇವೇ ಮೊದಲಾದ ಸಮಸ್ಯೆಗಳು ಅಂಗಾಂಶ ಕೃಷಿ ಮೂಲಕ ಹೊಸ ಮೂತ್ರನಾಳ ಜೋಡಿಸಿದ ರೋಗಿಯಲ್ಲಿ ಮಾಯವಾಗಿದ್ದವು ಎನ್ನುತ್ತಾರೆ ಸಂಶೋಧಕರು. ಈ ಸಂಶೋಧನೆ ಮೂತ್ರನಾಳದ ಸೋಂಕು ಹೊಂದಿರುವವರು ನೆಮ್ಮದಿಯ ಉಸಿರು ಬಿಡುವಂತೆ ಮಾಡಿರುವುದು ಮಾತ್ರವಲ್ಲ, ಸೋಂಕಿಗೊಳಗಾಗಿರುವ ಇತರ ಅಂಗಾಂಗಗಳನ್ನೂ ಇದೇ ತಂತ್ರಜ್ಞಾನದಿಂದ ಬದಲಾಯಿಸಬಲ್ಲ ಭರವಸೆಯನ್ನು ಹುಟ್ಟಿಸಿದೆ. ಮೂಳೆ ಸವೆತಕ್ಕೊಳಗಾದ ರೋಗಿಗಳಿಗೆ ಇದೇ ತಂತ್ರಜ್ಞಾನದಿಂದ ಹೊಸಮೂಳೆಗಳನ್ನು ಜೋಡಿಸಬಹುದು ಎನ್ನುತ್ತಾರೆ ಸಂಶೋಧಕರ ತಂಡದ ನೇತೃತ್ವ ವಹಿಸಿರುವ ಡಾ.ಆಂಟನಿ ಅಟಾಲಾ.

ಸಾವಿರಾರು ಜನರ ನೋವು ನಿವಾರಕ:
ನೂತನ ತಂತ್ರಜ್ಞಾನದ ಬಗ್ಗೆ ಬೆಂಗಳೂರಿನ ತಜ್ಞೆ  ಡಾ. ವಸುಂಧರಾ ಭೂಪತಿ ಹೀಗೆ ಹೇಳುತ್ತಾರೆ-
ಮುಟ್ಟು ನಿಲ್ಲುವ ಹಂತಕ್ಕೆ ಬಂದ ಮಹಿಳೆಯರಲ್ಲಿ ಮೂತ್ರನಾಳದ ಸಮಸ್ಯೆ ಪದೇ ಪದೇ ಕಾಣಿಸಿಕೊಳ್ಳುತ್ತೆ. ಯಾಕಂದ್ರೆ ಗರ್ಭಕೋಶ ಸಂಕುಚಿತಗೊಂಡಿರುತ್ತದೆ. ಹೀಗಾಗಿ ಮಹಿಳೆಯರು ಇಂಥ ಸಂದರ್ಭದಲ್ಲಿ ಹೆಚ್ಚಾಗಿ ಸಿಸ್ಟೈಟಿಸ್ (ಮೂತ್ರಾಂಗ ಸೋಂಕು) ಸಮಸ್ಯೆಗೆ ಒಳಗಾಗುತ್ತಾರೆ. ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಆದ್ರೆ ಇದನ್ನು ಹೇಳಿಕೊಳ್ಳುವುದಕ್ಕೆ ಹಿಂಜರೀತಾರೆ. ಮುಜುಗರಕ್ಕೊಳಗಾಗುತ್ತಾರೆ. ಮೂತ್ರನಾಳ ಸಾಮಾನ್ಯ ಗಾತ್ರಕ್ಕಿಂತ ಜಾಸ್ತಿ ಜಗ್ಗಲ್ಪಡುತ್ತದೆ ಮತ್ತು ಮುತ್ರನಾಳದ ಸಾಮಥ್ರ್ಯ ಕುಗ್ಗುತ್ತದೆ. ಮಹಿಳೆಯರಲ್ಲಿ ಯಾವುದೇ ಒಂದು, ಜನನಾಂಗ ಇರಬಹುದು, ಮೂತ್ರಾಂಗ ಇರಬಹುದು, ಅವುಗಳ ಸೋಂಕು ಕಾಣಿಸಿಕೊಂಡರೂ ಅದು ಎಲ್ಲ ಭಾಗಗಳಿಗೆ ಹರಡುತ್ತದೆ. ಇದು ಸಮಸ್ಯೆಯ ತೀವ್ರತೆಗೆ ಕಾರಣವಾಗುತ್ತೆ. ಇಂಥವರಿಗೆ ನೂತನ ತಂತ್ರಜ್ಞಾನ ಖಂಡಿತಕ್ಕೂ ಸಹಕಾರಿಯಾಗುತ್ತೆ.
    ಮಹಿಳೆಯರಲ್ಲಿ ಮೂತ್ರನಾಳದ ಸಮಸ್ಯೆ ಸಾಮಾನ್ಯವಾದ್ರೆ ಪುರುಷರಲ್ಲಿ ಯಾವುದಾದ್ರೂ ಸೋಂಕು ತಗುಲಿದರಷ್ಟೇ ಮೂತ್ರನಾಳದ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಅಲ್ಲದೆ, ಕೆಲವೊಮ್ಮೆ ಜನನದ ಸಂದರ್ಭದಲ್ಲಿ ಆಗುವಂಥ ಏಟಿನಿಂದಾಗಿಯೂ ಮೂತ್ರನಾಳದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 60 ವರ್ಷ ದಾಟಿದ ಪುರುಷರಲ್ಲಿ ಮೂತ್ರನಾಳದ ಸಾಮಥ್ರ್ಯ ಕುಗ್ಗಲ್ಪಟ್ಟು ಅವರಿಗೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತೆ. ರೋಗಿಯ ದೇಹದ ಅಂಗಾಂಶಗಳನ್ನೇ ಪಡೆದು ಅಂಗಾಂಶ ಕೃಷಿ (ಅಟೋ ಟಿಶ್ಯೂ ಕಲ್ಚರ್) ಮಾಡುವ ಕಾರಣ ಇಲ್ಲಿ ಕೃತಕತೆಯ ಪ್ರಶ್ನೆ ಬರುವುದಿಲ್ಲ. ಹೀಗಾಗಿ ಇದು ನಿರೀಕ್ಷೆಗೂ ಮೀರಿದ ಫಲಿತಾಂಶ ಕೊಡಬಹುದು. ಆದ್ರೆ ಅಂಗಾಂಶ ಕಸಿ ಮೂಲಕ ಮೂತ್ರನಾಳವನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನ ಮತ್ತು ಅದನ್ನು ರೋಗಿಯ ದೇಹಕ್ಕೆ ಕಸಿ ಕಟ್ಟುವ ಪ್ರಕ್ರಿಯೆ ದುಬಾರಿ ಮತ್ತು ಚಿಕಿತ್ಸೆಗೆ ಹೈಟೆಕ್ ಆಸ್ಪತ್ರೆಗಳೇ ಬೇಕಾಗುಲ್ಲವೆ. ಹೀಗಾಗಿ ಮಧ್ಯಮ, ಮೇಲ್ವರ್ಗದ ಜನಕ್ಕಷ್ಟೇ ಇದರಿಂದ ಪ್ರಯೋಜನ ದೊರಕಬಹುದು. ಅಂಗಾಂಶ ಕಸಿ ಮತ್ತು ಮೂತ್ರನಾಳದ ಜೋಡಣೆ ಪ್ರಕ್ರಿಯೆಯ ವೆಚ್ಚ ಕಡಿಮೆಯಾದಲ್ಲಿ ಲಕ್ಷಾಂತರ ಜನರಿಗೆ ಇದರಿಂದ ಅನುಕೂಲವಾಗುವುದು ಖಂಡಿತ.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು