ತ್ಯಾಜ್ಯ ನೀರಿನಲ್ಲಿದೆ ವಿದ್ಯುತ್!

ಯೀ ಸೂಯಿ ನೇತೃತ್ವದ ಸಂಶೋಧಕರ ತಂಡ ಒಂದು ವಿಶೇಷವಾದ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದೆ. ಸಿಹಿ ನೀರು ಮತ್ತು ಉಪ್ಪು ನೀರುಗಳಲ್ಲಿರುವ ಕ್ಷಾರತೆಯ ವ್ಯತ್ಯಾಸವನ್ನು ವಿದ್ಯುತ್ ರೂಪಕ್ಕೆ ಪರಿವರ್ತಿಸುವುದು ಈ ಬ್ಯಾಟರಿಯ ವಿಶೇಷ ಗುಣ. ತ್ಯಾಜ್ಯ ನೀರಿನಿಂದಲೂ ಇದೇ ರೀತಿ ವಿದ್ಯುತ್ ಉತ್ಪಾದನೆ ಮಾಡುವುದು ಸಾಧ್ಯವಿದೆ. ಉಪ್ಪು ನಿರಿನಲ್ಲಿರುವಂತೆ ತ್ಯಾಜ್ಯ ನೀರಿನಲ್ಲಿಯೂ ಅಯಾನ್ ಗಳ ಪ್ರಮಾಣ ಹೆಚ್ಚಿರುತ್ತದೆ. ಇದನ್ನೇ ಲಾಭದಾಯಕವಾಗಿಸಿಕೊಂಡರೆ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ನ ಶೇ.50ರಷ್ಟು ವಿದ್ಯುತ್ತನ್ನು ತ್ಯಾಜ್ಯ ನೀರಿನಿಂದಲೇ ಉತ್ಪಾದನೆ ಮಾಡುವುದು ಸಾದ್ಯವಿದೆ. 





ಒಂದೆಡೆ ಜಗತ್ತು ವಿದ್ಯುತ್ ಅಭಾವದಿಂದ ಕೊರಗುತ್ತಿದ್ದರೆ ಇನ್ನೊಂದೆಡೆ ಈ ಸಮಸ್ಯೆಯನ್ನು ಹೋಗಲಾಡಿಸಲು ಒಂದಿಲ್ಲೊಂದು ಪ್ರಯತ್ನಗಳು ನಡೆಯುತ್ತಲೇ ಇವೆ. ಈಗಾಗಲೇ ಹಲವಾರು ರೀತಿಯ ಪ್ರಯತ್ನಗಳು, ಸಂಶೋಧನೆಗಳು ನಡೆದಿವೆ. ಇದೀಗ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಮತ್ತೊಂದು ದಾರಿ ಗೋಚರಿಸಿದೆ. ಇದರ ಹೊಳಹು ಮೂಡಿದ್ದು ಸಮುದ್ರದಲ್ಲಿ. ಆದರೆ ತ್ಯಾಜ್ಯ ನೀರಿಗೂ ಇದೇ ತಂತ್ರವನ್ನು ಅಳವಡಿಸುವ ಸಾದ್ಯತೆಯ ಮಿಂಚು ಮಾಡಿರುವುದು ಭವಿಷ್ಯದಲ್ಲಿ ವಿದ್ಯುತ್ ಅಭಾವ ಕೊನೆಗಾಣಬಹುದೇ ಎಂಬ ಆಶಾಭಾವ ಮೂಡಿಸಿದೆ.
    ಹಾಗಿದ್ದರೆ ಈ ನೂತನ ತಂತ್ರಜ್ಞಾನ ಹೇಗಿರಬಹುದು? ಜಗತ್ತನ್ನು ವಿದ್ಯುತ್ ಸಮಸ್ಯೆಯಿಂದ ಪಾರು ಮಾಡಲು ಹಲವಾರು ವಿಜ್ಞಾನಿಗಳು, ಸಂಶೋಧಕರು ಪಣತೊಟ್ಟಿದ್ದಾರೆ. ಆ ಸಂಶೋಧಕರೆಲ್ಲ ನಡೆದ ಹಾದಿಯನ್ನೇ ಮಾದರಿಯಾಗಿಟ್ಟುಕೊಂಡು ವಿದ್ಯುತ್ ಉತ್ಪಾದನೆಯ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದವರು ಸ್ಟಾನ್  ಫರ್ಡ್ ನ  ಸಂಶೋಧಕರು. ಯೀ ಸೂಯಿ ನೇತೃತ್ವದ ಸಂಶೋಧಕರ ತಂಡ ಒಂದು ವಿಶೇಷವಾದ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದೆ. ಸಿಹಿ ನೀರು ಮತ್ತು ಉಪ್ಪು ನೀರುಗಳಲ್ಲಿರುವ ಕ್ಷಾರತೆಯ ವ್ಯತ್ಯಾಸವನ್ನು ವಿದ್ಯುತ್ ರೂಪಕ್ಕೆ ಪರಿವರ್ತಿಸುವುದು ಈ ಬ್ಯಾಟರಿಯ ವಿಶೇಷ ಗುಣ.
    ಸುಮ್ಮನೇ ಕಲ್ಪಿಸಿಕೊಳ್ಳಿ- ನದಿಗಳು ಸಮುದ್ರ ಸೇರುವ ಪ್ರದೇಶಗಳು ಅಂದರೆ ನದಿ ಮುಖಜಭೂಮಿಗಳಲ್ಲಿ ಒಂದೆಡೆ ಸಮುದ್ರದ ಉಪ್ಪು ನೀರು ಮತ್ತೊಂದೆಡೆ ನದಿಯ ಸಿಹಿ ನೀರು. ಉಪ್ಪು ನೀರಿನಲ್ಲಿ ಆಮ್ಲೀಯತೆ(ಅಸಿಡಿಟಿ)ಯ ಪ್ರಮಾಣ ಹೆಚ್ಚಿದ್ದರೆ, ಸಿಹಿನೀರಿನಲ್ಲಿ ಕ್ಷಾರತೆ(ಸಲೈನಿಟಿ) ಹೆಚ್ಚಿರುತ್ತದೆ. ಇಂಥ ಸ್ಥಳಗಳೇ ಯಾಕೆ ವಿದ್ಯುಚ್ಛಕ್ತಿ ಉತ್ಪಾದನೆಯ ಸಮರ್ಥ ತಾಣಗಳಾಗಬಾರದು? ಎಂದು ಚಿಂತನೆ ನಡೆಸಿದ ವಿಜ್ಞಾನಿಗಳ ತಂಡ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿತು. ನೀರಿನಲ್ಲಿ ಸದಾ ಅಯಾನ್ ಗಳು (ವಿದ್ಯುದಾವೇಶಭರಿತವಾದ ಕಣಗಳು) ಸಂಚರಿಸುತ್ತಿರುತ್ತವೆ. (ಪ್ರತಿಯೊಂದು ವಸ್ತು, ಜೀವಿಗಳಲ್ಲೂ ಈ ಅಯಾನ್ ಗಳಿರುತ್ತವೆ.) ಆದರೆ ಸಿಹಿ ನೀರಿನಲ್ಲಿರುವ ಅಯಾನ್ ಗಳ ಸಂಖ್ಯೆಗಿಂತ 100 ಪಟ್ಟು ಹೆಚ್ಚು ಅಯಾನ್ ಗಳು ಉಪ್ಪು ನೀರಿನಲ್ಲಿರುತ್ತವೆ. ಇದನ್ನೇ ವಿದ್ಯುತ್ ಉತ್ಪಾದನೆಯ ಮಾರ್ಗವಾಗಿ ಬದಲಿಸುವ ಪ್ರಯತ್ನ ವಿಜ್ಞಾನಿಗಳದ್ದು.
    ಇದಕ್ಕಾಗಿ ಅವರು ತಯಾರಿಸಿದ ಬ್ಯಾಟರಿಯಲ್ಲಿ ಅಂಥ ವಿಶೇಷತೆಯೇನಿಲ್ಲ. ಸಾಮಾನ್ಯವಾಗಿ ಬ್ಯಾಟರಿಗಳಲ್ಲಿ ಬಳಸುವಂತೆ ಇಲ್ಲೂ ಕಾರ್ಬನ್ ರಾಡ್  ಗಳನ್ನು ಬಳಸಲಾಗಿದೆ. ಎರಡು ಕಾರ್ಬನ್ ರಾಡ್ ಗಳನ್ನು ವಿದ್ಯುತ್ ಧ್ರುವ (ಎಲೆಕ್ಟ್ರೋಡ್)ಗಳನ್ನಾಗಿ ಅಂದರೆ ಒಂದು ಋಣ ಧ್ರುವ ಮತ್ತೊಂದು ಧನ ಧ್ರುವವನ್ನಾಗಿ ಬಳಸಲಾಗಿದೆ. ಇವನ್ನು ವಿದ್ಯುದಾವೇಶಭರಿತವಾದ ಕಣಗಳು ಅಥವಾ ಅಯಾನ್ ಗಳನ್ನು ಹೊಂದಿರುವ ದ್ರವದಲ್ಲಿ ಮುಳುಗಿಸಲಾಗುತ್ತದೆ. ಈ ದ್ರವದಲ್ಲಿರುವ ಅಯಾನ್ ಗಳೆಂದರೆ ಉಪ್ಪಿನಲ್ಲಿರುವ ಸೋಡಿಯಂ ಮತ್ತು ಕ್ಲೋರಿನ್ ಅಯಾನ್ ಗಳು. ಇನ್ನು ವಿದ್ಯುತ್ ಉತ್ಪಾದನೆಯ ಹಂತ.

ಬಳಕೆಯ ಶೇ.13ರಷ್ಟು ಉತ್ಪಾದನೆ
ಸಿದ್ಧಗೊಂಡ ಬ್ಯಾಟರಿಯಲ್ಲಿ ಮೊದಲಿಗೆ ಸಿಹಿನೀರನ್ನು ತುಂಬಿಸಲಾಗುತ್ತದೆ. ಮತ್ತು ಕಡಿಮೆ ವೋಲ್ಟೇಜ್ನ ಕರೆಂಟ್ ಹಾಯಿಸಿ ಬ್ಯಾಟರಿಯನ್ನು ಚಾರ್ಜ್ ಮಾಡಲಾಗುತ್ತದೆ. ಬಳಿಕ ಸಿಹಿ ನೀರನ್ನು ತೆಗೆದು ಆ ಜಾಗದಲ್ಲಿ ಉಪ್ಪು ನೀರನ್ನು ತುಂಬಿಸಲಾಗುತ್ತದೆ. ಉಪ್ಪು ನೀರಿನಲ್ಲಿ ಅಯಾನ್ ಗಳ ಸಂಖ್ಯೆ ಹೆಚ್ಚಿರುವ ಕಾರಣ ಬ್ಯಾಟರಿಯ ಧ್ರುವಗಳ ನಡುವೆ ವಿದ್ಯುತ್ ಪ್ರಚ್ಛನ್ನಶಕ್ತಿ (ಎಲೆಕ್ಟ್ರಿಕಲ್ ಪೊಟೆನ್ಶಿಯಲ್ ಅಥವಾ ವೋಲ್ಟೇಜ್) ಹೆಚ್ಚುತ್ತದೆ. ಅಂದರೆ ಬ್ಯಾಟರಿಯನ್ನು ಚಾರ್ಜ್ ಮಾಡಲು ಬಳಸಿದ್ದಕ್ಕಿಂತ ಹಲವು ಪಟ್ಟು ಅಧಿಕ ವಿದ್ಯುತ್ ಈಗ ಉತ್ಪಾದನೆಯಾಗುತ್ತದೆ. ಎಷ್ಟು ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂಬುದು ಬ್ಯಾಟರಿಯಲ್ಲಿ ಸೋಡಿಯಂ ಮತ್ತು ಕ್ಲೋರಿನ್ ಅಯಾನ್ಗಳು ಎಷ್ಟು ಪ್ರಮಾಣದಲ್ಲಿವೆ ಎಂಬುದನ್ನು ಅವಲಂಬಿತ. ವಿದ್ಯುತ್ ಉತ್ಪಾದನೆಯಾದ ಬಳಿಕ ಉಪ್ಪು ನೀರನ್ನು ತೆಗೆದು ಮತ್ತೆ ಸಿಹಿ ನೀರನ್ನು ಹಾಕಲಾಗುತ್ತದೆ ಮತ್ತು ಮೊದಲಿನ ಕ್ರಿಯೆಯನ್ನೇ ಪುನರಾವರ್ತಿಸಲಾಗುತ್ತದೆ. ಈ ತಂತ್ರಜ್ಞಾನದ ಮೂಲಕ ವಾರ್ಷಿಕವಾಗಿ ಸುಮಾರಿ 2 ಟೆರಾವೋಲ್ಟ್ ವಿದ್ಯುತ್ ಉತ್ಪಾದನೆ ಮಾಡುವುದು ಸಾಧ್ಯವಿದೆ. ಅಂದರೆ ಪ್ರಸ್ತುತ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ನ ಶೇ.13ರಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ.
    ಪ್ರಸ್ತುತ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಇದನ್ನು ಪರೀಕ್ಷೆಗೆ ಒಳಪಡಿಸಿದ್ದು, ಶೇ.74ರಷ್ಟು ದಕ್ಷತೆಯನ್ನು ಸಾಧಿಸಿದ್ದಾರೆ. ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ ಶೇ.85ರಷ್ಟು ದಕ್ಷತೆ ಸಾಧಿಸುವುದು ಸಾಧ್ಯವಿದೆ ಎನ್ನುತ್ತಾರೆ ಯೀ ಸೂಯಿ. ವಿದ್ಯುತ್ ಧ್ರುವಗಳಿಗೆ ಮ್ಯಾಂಗನೀಸ್ ಡೈ ಆಕ್ಸೈಡ್ ನ  ನ್ಯಾನೋ ರಾಡ್ ಗಳನ್ನು ಬಳಸಬೇಕು. ಆಗ ಸೋಡಿಯಂ ಅಯಾನ್ ಜೊತೆ ಸಂವಹನ ಏರ್ಪಡಲು ಇತರ ಲೋಹಗಳಿಗಿಂತ 100 ಪಟ್ಟು ಅಧಿಕ ಸ್ಥಳಾವಕಾಶ ಸಿಗುತ್ತದೆ. ನ್ಯಾನೋ ರಾಡ್ ಗಳು ಸೋಡಿಯಂ ಅಯಾನ್ ಗಳು ಅಧಿಕ ವೇಗದಲ್ಲಿ ಒಳಹೊರಗು ಚಲಿಸಲು ಅವಕಾಶ ಮಾಡಿಕೊಡುತ್ತವೆ. ಅಯಾನ್ ಗಳ ವೇಗ ಹೆಚ್ಚಿದಂತೆ ವಿದ್ಯುತ್ ಉತ್ಪಾದನೆಯೂ ಹೆಚ್ಚುತ್ತದೆ. ಇಷ್ಟೆಲ್ಲ ಆದರೂ ಒಂದು ಸಮಸ್ಯೆಯನ್ನು ಸೂಯಿ ಕಂಡುಕೊಂಡಿದ್ದಾರೆ. ಧನದ್ರುವಕ್ಕೆ ಮ್ಯಾಂಗನೀಸ್ ರಾಡ್ ಹೊಂದಿಕೆಯಾಗುತ್ತದೆ ನಿಜ, ಆದರೆ ಋಣ ಧ್ರುವಕ್ಕೆ ಒಂದು ಸಮರ್ಥ ಲೋಹದ ಅವಶ್ಯಕತೆ ಬೇಕು ಎಂಬುದು ಅವರ ಚಿಂತನೆ. ಸದ್ಯಕ್ಕೆ ಅವರು ಬೆಳ್ಳಿಯ ರಾಡ್ ಬಳಸಿದ್ದಾರೆ. ಆದರೆ ಬೆಳ್ಳಿ ಸಿಕ್ಕಾಪಟ್ಟೆ ದುಬಾರಿ. ಹೀಗಾಗಿ ಋಣ ಧ್ರುವಕ್ಕೊಂದು ಸಮರ್ಥ ಲೋಹ ಹುಡುಕಬೇಕು ಎಂಬ ಚಿಂತನೆಯಲ್ಲಿದ್ದಾರೆ ಅವರು.

ಪರಿಸರಕ್ಕೂ ಹಾನಿಯಿಲ್ಲ
ಭಾರತ ಸೇರಿದಂತೆ ಜಗತ್ತಿನ ಹಲವಾರು ದೇಶಗಳು ಸಮುದ್ರ ತೀರದಲ್ಲಿವೆ. ಅಸಂಖ್ಯಾತ ನದಿಗಳು ಸಮುದ್ರ ಸೇರುವ ಪ್ರದೇಶಗಳೂ ಇಲ್ಲಿವೆ. ಇಂಥ ಪ್ರದೇಶಗಳಲ್ಲಿ ವಿದ್ಯುತ್ ಉತ್ಪಾದನೆ ಘಟಕ ಆರಂಭಿಸಿದರೆ ಜಗತ್ತಿನ ವಿದ್ಯುತ್ ಅಭಾವ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾದೀತು. ಇನ್ನು ಈ ಘಟಕಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಭೀತಿಯೂ ಇಲ್ಲ. ಏಕೆಂದರೆ ಮೊದಲನೆಯದಾಗಿ ಪರಿಸರಕ್ಕೆ ಹಾನಿಯಾಗುವಷ್ಟು ದೊಡ್ಡ ಘಟಕ ಇದಕ್ಕೆ ಅಗತ್ಯವಿಲ್ಲ. ಆದರೆ ಸಿಹಿ ನೀರು ಸಿಗುವ ಜಾಗದಲ್ಲಿ ಘಟಕ ಆರಂಭಿಸಲು ಭೂಮಿ ಬೇಕು ಅಷ್ಟೆ. ಎರಡನೆಯದಾಗಿ ಬಳಸಿಕೊಂಡ ನೀರನ್ನು ಮತ್ತೆ ಹೊರಗೆ ಬಿಡುವ ಕಾರಣ ನೀರು ನಷ್ಟವಾಗುತ್ತದೆ ಎಂಬ ಚಿಂತೆ ಬೇಕಿಲ್ಲ. ಅಲ್ಲದೆ ಬಳಸಿಕೊಂಡ ನೀರಿಗೆ ಇತರ ಯಾವುದೇ ರಾಸಾಯನಿಕಗಳು ಸೇರ್ಪಡೆಗೊಳ್ಳುವುದಿಲ್ಲವಾದ ಕಾರಣ ನೀರು ಮಲಿನವಾಗುವ ಪ್ರಶ್ನೆಯೇ ಇಲ್ಲ. ಬಳಸಿಕೊಳ್ಳುವ ರಾಸಾಯನಿಕಗಳೆಂದರೆ ಸೋಡಿಯಂ ಮತ್ತು ಕ್ಲೋರಿನ್. ಇವೆರಡೂ ಸಮುದ್ರ ನೀರಿನಲ್ಲೇ ಇರುವಂಥ ಲವಣಗಳು. ನದಿ ನೀರು ಸಮುದ್ರ ಸೇರಿದೊಡನೆ ಅಲ್ಲಿನ ಉಪ್ಪು ನೀರಿನೊಂದಿಗೆ ಹೇಗಿದ್ದರೂ ಮಿಶ್ರಣವಾಗುತ್ತದೆ. ನದಿ ಮುಖಜಭೂಮಿಯಲ್ಲಿ ಘಟಕ ಆರಂಭಿಸಿದರೆ ಅಲ್ಲಿಂದ ಮುಂದಕ್ಕೆ ಸಿಹಿ ನೀರನ್ನು ಬಳಸುವ ಜನರು ಇರುವುದಿಲ್ಲ. ಹೀಗಾಗಿ ಸಿಹಿ ನೀರು ಉಪ್ಪು ನೀರಾಗಿ ಪರಿವರ್ತನೆಗೊಂಡರೂ ಏನೂ ನಷ್ಟ ಇಲ್ಲ. ಅಷ್ಟೇ ಅಲ್ಲದೆ ಸಮ್ಮಿಶ್ರಗೊಂಡ ನೀರನ್ನು ಉಪ್ಪುನೀರು ಮತ್ತು ಸಿಹಿ ನೀರು ಈಗಾಗಲೇ ಮಿಶ್ರಗೊಂಡ ಸ್ಥಳಕ್ಕೆ ಬಿಟ್ಟರೆ ಯಾವ ಸಮಸ್ಯೆಯೂ ಎದುರಾಗದು ಎಂಬುದು ವಿಜ್ಞಾನಿಗಳ ಅಂಬೋಣ.

ತ್ಯಾಜ್ಯ ನೀರೂ ಆಗುತ್ತೆ
ಸಮುದ್ರ ತೀರದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತೆ ಅಂತಾಗಿದ್ರೆ ಇದು ಅಷ್ಟೊಂದು ಗಮನ ಸೆಳೆಯುತ್ತಿರಲಿಲ್ಲ. ವಿಶೇಷ ಅಂದ್ರೆ ತ್ಯಾಜ್ಯ ನೀರಿನಿಂದಲೂ ಇದೇ ರೀತಿ ವಿದ್ಯುತ್ ಉತ್ಪಾದನೆ ಮಾಡುವುದು ಸಾಧ್ಯವಿದೆ. ಉಪ್ಪು ನಿರಿನಲ್ಲಿರುವಂತೆ ತ್ಯಾಜ್ಯ ನೀರಿನಲ್ಲಿಯೂ ಅಯಾನ್ ಗಳ ಪ್ರಮಾಣ ಹೆಚ್ಚಿರುತ್ತದೆ. ಇದನ್ನೇ ಲಾಭದಾಯಕವಾಗಿಸಿಕೊಂಡರೆ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ನ ಶೇ.50ರಷ್ಟು ವಿದ್ಯುತ್ತನ್ನು ತ್ಯಾಜ್ಯ ನೀರಿನಿಂದಲೇ ಉತ್ಪಾದನೆ ಮಾಡುವುದು ಸಾದ್ಯವಿದೆ.
    50 ಘನ ಮೀಟರ್ ಸಿಹಿ ನೀರಿ ಇದೆ ಅಂತಾದ್ರೆ ಸುಮಾರಾಗಿ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ಇಷ್ಟೊಂದು ವಿದ್ಯುತ್ತನ್ನು ಸುಮಾರು 1 ಲಕ್ಷ ಮನೆಗಳಿಗೆ ಪೂರೈಸಬಹುದಾಗಿದೆ. ಆದರೆ ತ್ಯಾಜ್ಯ ನೀರು ಬಳಸಿ ಈ ತಂತ್ರಜ್ಞಾನದ ಮಲಕ ವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಆದರೆ ಅಲ್ಲೊಂದು ಸಾಧ್ಯತೆ ಇಲ್ಲದಿಲ್ಲ. ಮುಂದೊಂದು ದಿನ ನಾವು ತ್ಯಾಜ್ಯ ಎಂದು ಪರಿಗಣಿಸುವುದೆಲ್ಲವೂ ಲಾಭದಾಯಕ ಅಂಶಗಳಾಗಿಯೇ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಅಂತ ದಿನ ಬಂದರೆ ನಗರಗಳೂ ಒಂದಿಷ್ಟು ಹೆಚ್ಚಿಗೆ ಶುದ್ಧವಾಗುತ್ತವೆ, ತ್ಯಾಜ್ಯ ವಿಲೇವಾರಿಯೂ ಸಮರ್ಪಕವಾಗುತ್ತೆ. ತ್ಯಾಜ್ಯವನ್ನು ಲಾಭದಾಯಕವಾಗಿ ಮಾರ್ಪಡಿಸುವಲ್ಲಿ ಪ್ರತಿಯೊಂದು ದೇಶಗಳೂ ಹೆಚ್ಚಿನ ಶ್ರಮವಹಿಸಬೇಕಾದ ಅಗತ್ಯವಿದೆ.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು