ಏನಿಲ್ಲಾ ಏನಿಲ್ಲಾ ಎನಬೇಡಿ ವೆನಿಲ್ಲಾಕ್ಕೆ ಬೆಲೆ ಬರುತ್ತೆ!

* ವೆನಿಲ್ಲಾ ಕೃಷಿ ಸಮಸ್ಯೆ ನಿವಾರಣೆಗೆ ಅಂಗಾಂಶ ಕೃಷಿಯ ಬಲ
* ಹೊಸ ತಳಿಯ ಸೃಷ್ಟಿ, ಪರಾಗಸ್ಪರ್ಶ ಅಧಿಕ ಫಲಪ್ರದ


ವೆನಿಲ್ಲಾ ಗಿಡ ನೆಟ್ಟವರೆಲ್ಲಾ `ಏನಿಲ್ಲಾ, ಏನಿಲ್ಲಾ' ಅಂತ ನೊಂದುಕೊಂಡರು. ಆದರೆ ವೆನಿಲ್ಲಾಕ್ಕೆ ಮತ್ತೆ ಬೇಡಿಕೆ ಬರಲಾರಂಭಿಸಿದೆ. ಪ್ರಸ್ತುತ ವೆನಿಲ್ಲಾ ಧಾರಣೆ ಹಸಿ ಕೋಡು ಕೆ.ಜಿ.ಗೆ 200 ರು. ಮತ್ತು ಒಣ ಕೋಡು ಕೆ.ಜಿ.ಗೆ 600-700 ರು. ಇದೆ. ಇದರಲ್ಲಿ ಅಧಿಕ ಪಾಲು ಕೃಷಿ ವೆಚ್ಚಕ್ಕೇ ಹೋಗುತ್ತದೆ. ಸಂಶೋಧಕರ ಪ್ರಯತ್ನ ಫಲಿಸಿದ್ದೇ ಆದಲ್ಲಿ ಈ ಧಾರಣೆ ದುಪ್ಪಟ್ಟಾಗುವುದಂತೂ ಖಂಡಿತ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.
 

ಬತ್ತ ನಂಬಿದರೆ ಜೀವನವೇ ಬತ್ತಿ ಹೋದೀತು, ಅಡಕೆ, ತೆಂಗಿಗೆ  ಸಾವಿರ ಸಮಸ್ಯೆ, ಯಾವ ಕೃಷಿಯೂ ಹೊಟ್ಟೆ ತುಂಬುವಷ್ಟು ಆದಾಯ ಕೊಡುತ್ತಿಲ್ಲ ಎಂಬ ಕೊರಗು ಕಾಡಲಾರಂಭಿಸಿದಾಗಲೇ ರೈತನಿಗೆ, ಕೃಷಿಕನಿಗೆ ಆಪದ್ಭಾಂಧವನಾಗಿ ಆಗಮಿಸಿದ್ದು ವೆನಿಲ್ಲಾ. ಇದು ರೈತನ ಮಿತ್ರನಾದದ್ದು ಮಾತ್ರವಲ್ಲ, ರೈತನನ್ನು ಒಂದರ್ಥದಲ್ಲಿ ಸಂಪೂರ್ಣವಾಗಿ ತನ್ನ ಸ್ವಾಧೀನ ಮಾಡಿಕೊಂಡಿತು. ಬೇಡಿಕೆ ಬಂತು ಅಂತ ಎಲ್ಲಾ ರೈತರೂ ವೆನಿಲ್ಲಾ ಬೆಳೆಯಲಾರಂಭಿಸಿದಾಗಲೇ ಕೈ ಕೊಟ್ಟಿತು ನೋಡಿ. ವೆನಿಲ್ಲಾ ಗಿಡ ನೆಟ್ಟವರೆಲ್ಲಾ `ಏನಿಲ್ಲಾ, ಏನಿಲ್ಲಾ' ಅಂತ ನೊಂದುಕೊಂಡರು. ಹಠಾತ್ತನೆ ಭಾರತೀಯ ಕೃಷಿಕ್ಷೇತ್ರಕ್ಕೆ ಕಾಲಿಟ್ಟಿದ್ದ ವೆನಿಲ್ಲಾ ಅಷ್ಟೇ ವೇಗದಲ್ಲಿ ತೋಟಗಳಿಂದ ಮಾಯವಾಯಿತು ಎಂಬುದಂತೂ ನಿಜ. ಆದರೆ ವೆನಿಲ್ಲಾಕ್ಕೆ
ಮತ್ತೆ ಬೇಡಿಕೆ ಬರಲಾರಂಭಿಸಿದೆ. ವೆನಿಲ್ಲಾವನ್ನು ದೀರ್ಘಕಾಲ ಸಂರಕ್ಷಿಸಿಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆಯುತ್ತಿದೆ. ವೆನಿಲ್ಲಾ ಬೆಳೆಯುವಾಗ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನವಾಗುತ್ತಿದೆ.
  ವೆನಿಲ್ಲಾಕ್ಕೆ ಅಂಟಿಕೊಂಡಿದ್ದ `ಏನಿಲ್ಲಾ' ಎಂಬ ಕಪ್ಪು ಚುಕ್ಕೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದು ನಾಟಿಂಗ್ ಹ್ಯಾಮ್ ಯೂನಿವರ್ಸಿಟಿಯ ಮಲೇಷ್ಯಾ ಶಾಖೆಯ ಸಂಶೋಧಕರು. ವೆನಿಲ್ಲಾವನ್ನು ಮತ್ತೆ ರೈತಸ್ನೇಹಿಯನ್ನಾಗಿಸಬೇಕು ಎಂಬ ಪ್ರಯತ್ನಕ್ಕೆ ಅವರಿಗೆ ನೆರವಾದದ್ದು ಅಂಗಾಂಶ ಕೃಷಿ ಅಥವಾ ಟಿಶ್ಯೂ ಕಲ್ಚರ್. ಈ ವಿಧಾನದ ಮೂಲಕ ಅತ್ಯುತ್ತಮ ಇಳುವರಿ ನೀಡುವ ವೆನಿಲ್ಲಾ ಬಳ್ಳಿಯಿಂದ ಹೊಸ ತಳಿ ಸೃಷ್ಟಿಸಿ ಮೂಲ ವೆನಿಲ್ಲಾ ತಳಿಯಲ್ಲಿದ್ದಂಥ ದೋಷಗಳನ್ನು ಹೋಗಲಾಡಿಸುವ ಪ್ರಯತ್ನ ನಡೆಸಲಾಗಿದೆ. ಈ ಪ್ರಯತ್ನ ಬಹುತೇಕ ಯಶಸ್ವಿಯಾಗಿದೆ. ಇನ್ನು ನೇರವಾಗಿ ಕೃಷಿ ಮಾಡಿ ಪರೀಕ್ಷಿಸುವುದಷ್ಟೇ ಬಾಕಿ ಎನ್ನುತ್ತಾರೆ ಸಂಶೋಧಕರು. ವೆನಿಲ್ಲಾಕ್ಕೆ ಏನೆಲ್ಲಾ ಸಮಸ್ಯೆಗಳಿದ್ದವು ಎಂಬುದು ಅದನ್ನು ಬೆಳೆದವರಿಗೆ ಖಂಡಿತ ಗೊತ್ತಿದೆ.

`ಏನಿಲ್ಲ'ದ ಭಾವ ಬಿತ್ತಿದ ಸಮಸ್ಯೆಗಳು
ಜಗತ್ತಿನಲ್ಲಿ ಕೇಸರಿಯ ಬಳಿಕ ಅತ್ಯಧಿಕ ಖ್ಯಾತಿ ಪಡೆದ ಸುವಾಸನಾ ದ್ರವ್ಯ ವೆನಿಲ್ಲಾ. ಅಮೆರಿಕದಲ್ಲಿ ಪ್ರಚಲಿತಕ್ಕೆ ಬಂದಿದ್ದ ವೆನಿಲ್ಲಾ ಬೆಳೆ ಇತ್ತೀಚಿನ ವರ್ಷಗಳಲ್ಲಿ ಜಗತ್ತಿನೆಲ್ಲೆಡೆ ಖ್ಯಾತಿಗೆ ಬಂದಿತ್ತು. ಭಾರತದ ರೈತರ ಮುಖದಲ್ಲೂ ಇದು ನಗು ತರಿಸಿತ್ತು. ಆದರೆ ವೆನಿಲ್ಲಾ ಬೆಳೆಯುವುದೇನೂ ಸುಲಭವಲ್ಲ. ಫಲ ಕೊಡುವ ಬಳ್ಳಿಯಿಂದ ಒಂದು ಭಾಗ ಕತ್ತರಿಸಿ ಅದನ್ನು ನೆಡಬೇಕು. ಈ ರೀತಿ ಕತ್ತರಿಸಿದಾಗ ತಾಯಿ ಬಳ್ಳಿ ಸತ್ತು ಹೋಗುವ ಅಥವಾ ತಾಯಿ ಬಳ್ಳಿಯಲ್ಲಿ ಫಸಲು ಕುಂಠಿತಗೊಳ್ಳುವ ಸಾಧ್ಯತೆಯಿರುತ್ತದೆ. ಮತ್ತು ವೆನಿಲ್ಲಾ ಎಲ್ಲಾ ರೀತಿಯ ವಾತಾವರಣಗಳಿಗೆ ಹೊಂದಿಕೊಳ್ಳುವುದಿಲ್ಲ. ತಾಪಮಾನ ಸ್ವಲ್ಪ ಹೆಚ್ಚಾದರೂ ಒಣಗಲಾರಂಭಿಸುತ್ತದೆ. ಹೀಗಾಗಿಯೇ ಇತರ ಬೆಳೆಗಳ ಎಡೆಯಲ್ಲಿ ವೆನಿಲ್ಲಾ ಬೆಳೆಯುವುದನ್ನು ನಮ್ಮ ರೈತರು ರೂಢಿಸಿಕೊಂಡಿರುವುದು. ಆದರೂ ನಿರೀಕ್ಷಿತ ಮಟ್ಟದ ಫಸಲು ನಮ್ಮಲ್ಲಿ ಸಿಗುವುದು ತುಸು ಕಷ್ಟವೇ.
  ಇನ್ನು ವೆನಿಲ್ಲಾ ಹೂ ಬಿಟ್ಟಾಗ ಅದಕ್ಕೆ ಪರಾಗಸ್ಪರ್ಶ ಮಾಡಬೇಕು. ವೆನಿಲ್ಲಾ ಸ್ವತಃ ಅಥವಾ ಯಾವುದಾದರೂ ಕೀಟಗಳಿಂದ ಪರಾಗಸ್ಪರ್ಶಕ್ಕೆ ಒಳಗಾಗುವುದು ಅತಿ ವಿರಳ. ನಾವು ಪರಾಗಸ್ಪರ್ಶ ಮಾಡಿದ್ದೆಲ್ಲವೂ ಸಫಲವಾಗಿ ಎಲ್ಲಾ ಹೂಗಳೂ ಕೋಡುಗಳಾಗುತ್ತವೆ ಎಂದು ನಂಬುವುದಕ್ಕೂ ಸಾಧ್ಯವಿಲ್ಲ. ಈ ಎಲ್ಲ ಕೆಲಸಗಳಿಗೆ ಕಾರ್ಮಿಕ ವೆಚ್ಚವೂ ಅತ್ಯಧಿಕ. ಹೀಗಿರುವಾಗ ವೆನಿಲ್ಲಾಕ್ಕೆ ಎಷ್ಟು ಧಾರಣೆ ಬಂದರೂ ಲಾಭ ಮಾತ್ರ ಸಿಗುವುದಿಲ್ಲ ಎಂದು ರೈತರು ಬೇಸರಿಸಿಕೊಂಡಿದ್ದರು. ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಸಂಶೋಧಕರದ್ದು.

ಭರವಸೆ ಮೂಡಿಸಿದ ಸಂಶೋಧನೆ
ಸಾವಿರಾರು ಸಮಸ್ಯೆಗಳ ನಡುವೆಯೂ ವೆನಿಲ್ಲಾ ಬಗ್ಗೆ ಜನರಲ್ಲಿ ಮತ್ತೆ ಆಶಾಭಾವನೆ ಮೂಡಿಸಿದ್ದು ಅಂಗಾಂಶ ಕೃಷಿ ತಂತ್ರಜ್ಞಾನ. ಉತ್ತಮ ತಳಿಯ ವೆನಿಲ್ಲಾ ಬಳ್ಳಿಯ ಅಂಗಾಂಶಗಳನ್ನು ಪಡೆದ ಸಂಶೋಧಕರು ಅದನ್ನು ಅಂಗಾಂಶ ಕೃಷಿ ತಂತ್ರಜ್ಞಾನದ ಮೂಲಕ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದರು. ಈ ರೀತಿ ಅಭಿವೃದ್ಧಿಪಡಿಸುವಾಗ ವೆನಿಲ್ಲಾದಲ್ಲಿನ ಕೆಲವೊಂದು ಸಮಸ್ಯೆಗಳನ್ನು ಜೆನೆಟಿಕ್ ಮ್ಯುಟೇಶನ್ (ವಂಶವಾಹಿಗಳ ಮಾರ್ಪಾಟು) ಮೂಲಕ ನಿವಾರಿಸಲು ಪ್ರಯತ್ನಿಸಿದರು. ಮುಖ್ಯವಾಗಿ ಎಂಥ ವಾತಾವರಣಕ್ಕೂ ಹೊಂದಿಕೊಳ್ಳುವ ಗುಣವನ್ನು ವೆನಿಲ್ಲಾಕ್ಕೆ ನೀಡಿದರು. ಪರಾಗಸ್ಪರ್ಶ ಮಾಡಿದ ತಕ್ಷಣ ವೆನಿಲ್ಲಾ ಹೂವುಗಳು ಅದಕ್ಕೆ ಸ್ಪಂದಿಸುವಂತೆ ಮಾಡುವಲ್ಲಿಯೂ ಸಫಲರಾದರು.
  ಇನ್ನೂ ಮುಖ್ಯವಾದ ವಿಚಾರವೆಂದರೆ ವೆನಿಲ್ಲಾವನ್ನು ದೀರ್ಘಕಾಲದವರೆಗೆ ಸಂರಕ್ಷಿಸಿಡುವ ಪ್ರಯತ್ನಗಳು ಜಗತ್ತಿನ ಎಲ್ಲಡೆ ನಡೆಯುತ್ತಿದ್ದು, ಆ ನಿಟ್ಟಿನಲ್ಲಿ ಒಂದಷ್ಟು ಪ್ರಗತಿಯಾಗಿದೆ. ನಾಟಿಂಗ್ ಹ್ಯಾಮ್ ಯೂನಿವರ್ಸಿಟಿಯ ಮಲೇಷ್ಯಾ ಶಾಖೆಯ ಸಂಶೋಧಕರು ಕೂಡಾ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ. ಆದರೆ ಇವರು ನಡೆಸಿದ ಸಂಶೋಧನೆಗಳಲ್ಲಿ ಸಣ್ಣ ಪುಟ್ಟ ದೋಷಗಳಿವೆಯಂತೆ. ಅದನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. ಶೀಘ್ರದಲ್ಲೇ ಈ ಕಾರ್ಯದಲ್ಲೂ ಯಶಸ್ಸು ಸಾಧಿಸುವ ಭರವಸೆ ಸಂಶೋಧಕರದ್ದು.
  ಆದರೂ ವೆನಿಲ್ಲಾ ಬೆಳೆಯುವಾಗ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಅಂಗಾಂಶ ಕೃಷಿ ತಂತ್ರಜ್ಞಾನದ ಮೂಲಕ ಸೃಷ್ಟಿಸಿದ ವೆನಿಲ್ಲಾ ಬಳ್ಳಿಗಳನ್ನು ನೆಟ್ಟು ಅದರಿಂದ ಮತ್ತೆ ಹೊಸ ಬಳ್ಳಿಗಳನ್ನು ಕತ್ತರಿಸಿ ನೆಡಬಹುದು. ಈ ರೀತಿ ಮಾಡಿದಾಗ ತಾಯಿ ಬಳ್ಳಿಗೆ ಯಾವ ಹಾನಿಯೂ ಆಗುವುದಿಲ್ಲ. ಮಲೇಷ್ಯಾದಲ್ಲಿ ಈಗಾಗಲೇ ರೈತರಿಗೆ ಹೊಸ ಬಳ್ಳಿಗಳನ್ನು ನೀಡಲಾಗುತ್ತಿದೆಯಂತೆ. ಅಂಗಾಂಶ ಕೃಷಿ ತಂತ್ರಜ್ಞಾನದಿಂದ ಸೃಷ್ಟಿಸಲ್ಪಟ್ಟ ವೆನಿಲ್ಲಾ ಬಳ್ಳಿಗಳು ಭಾರತದಲ್ಲೂ ಪಾರಮ್ಯ ಸಾಧಿಸುವ ದಿನ ದೂರ ಇಲ್ಲ. ವೆನಿಲ್ಲಾ ಕೋಡುಗಳ ಸಂರಕ್ಷಣೆ ಸುಲಭವಾಗುತ್ತದೆ ಎಂದಾದರೆ ಇನ್ನಷ್ಟು ಲಾಭವಾದೀತು. ವೆನಿಲ್ಲಾ ಒಣಗಿಸುವ ವಿಧಾನದಲ್ಲೂ ಸುಧಾರಣೆಯಾಗಬೇಕಿದ್ದು, ಈ ಬಗ್ಗೆಯೂ ಸಂಶೋಧನೆಗಳು, ಪ್ರಯತ್ನಗಳು ನಡೆಯುತ್ತಿವೆ. ಆ ಮಟ್ಟಿನ ಪ್ರಗತಿ ಎಂದು ಸಾಧ್ಯವಾಗುತ್ತೋ? ಆದರೆ ಈಗ ಆಗಿರುವ ಸಂಶೋಧನೆಯ ಫಲಶೃತಿಯಾಗಿ ವೆನಿಲ್ಲಾ ಧಾರಣೆ ಶೀಘ್ರವೇ ಏರುಮುಖವಾಗಲಿದೆ ಎನ್ನುತ್ತಾರೆ ತಜ್ಞರು. ಪ್ರಸ್ತುತ ವೆನಿಲ್ಲಾ ಧಾರಣೆ- ಹಸಿ ಕೋಡು ಕೆ.ಜಿ.ಗೆ 200 ರು. ಮತ್ತು ಒಣ ಕೋಡು ಕೆ.ಜಿ.ಗೆ 600-700 ರು. ಇದೆ. ಇದರಲ್ಲಿ ಅಧಿಕ ಪಾಲು ಕೃಷಿ ವೆಚ್ಚಕ್ಕೇ ಹೋಗುತ್ತದೆ. ಸಂಶೋಧಕರ ಪ್ರಯತ್ನ ಫಲಿಸಿದ್ದೇ ಆದಲ್ಲಿ ಈ ಧಾರಣೆ ದುಪ್ಪಟ್ಟಾಗುವುದಂತೂ ಖಂಡಿತ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು