ಸೂಕ್ಷ್ಮದತ್ತ ಹೊರಟರೆ ಅದು ಸೃಷ್ಟಿ ಮೂಲವಲ್ಲ!


ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿ ನಡೆಸಿದ ಘರ್ಷಣೆಯಿಂದ ಹಿಗ್ಸ್ ಬೋಸಾನ್ ಗಳನ್ನು ವೀಕ್ಷಿಸಲು, ಅವುಗಳ ಗುಣನಡತೆಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ ಎಂಬುದು ನಿಜ. ಹಾಗಂತ ಇದನ್ನೇ ಸೃಷ್ಟಿ ಮೂಲದ ಪತ್ತೆ ಎನ್ನಲಾಗದು. ಯಾವ ಕಣಗಳನ್ನೇ ಆಗಲಿ ಎಷ್ಟೇ ಚಿಕ್ಕದಾಗಿ ಒಡೆಯುತ್ತಾ ಹೋದರೂ ಅದು ಮತ್ತಷ್ಟು ಚಿಕ್ಕ ಕಣಗಳನ್ನು ಕೊಡುತ್ತದೆ. ಇದನ್ನೇ ಮುಂದುವರಿಸಿದರೆ ಹೋಗುವುದು ಇನ್ಫಿನಿಟಿಯತ್ತ. ಅಂದರೆ ಅನಂತದ ಕಡೆಗೆ. ಆ ಅನಂತವನ್ನು ತಲುಪುವತ್ತ ವೈಜ್ಞಾನಿಕ ಜಗತ್ತು ಗಮನ ಹರಿಸಿದರೆ ಸೃಷ್ಟಿ ರಹಸ್ಯದ ಅರಿವು ದೊರಕೀತು. 

ಸೃಷ್ಟಿ- ಇದುವರೆವಿಗೂ ವಿಜ್ಞಾನಿಗಳ ಅರಿವಿಗೆ ನಿಲುಕದೇ ಇರುವಂಥ ವಿಶೇಷ ಕ್ರಿಯೆ. ಈ ಮಹಾನ್ ಕ್ರಿಯೆಯ ಒಳಗಣ ಹೂರಣವನ್ನು ಅರಿತುಕೊಳ್ಳುವ ಪ್ರಯತ್ನ ವೈಜ್ಞಾನಿಕ ಜಗತ್ತಿನಲ್ಲಿ ಹಲವು ದಶಕಗಳಿಂದ ನಡೆಯುತ್ತಿದೆ. ಅಂಥ ಪ್ರಯತ್ನಗಳ ಪೈಕಿ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿ ಮಹಾಸ್ಫೋಟವನ್ನು ಪುನರ್ಸೃಷ್ಟಿಸುವ ಮೂಲಕ ಸೃಷ್ಟಿ ಕ್ರಿಯೆಯ ರಹಸ್ಯ ಭೇದಿಸುವ ಪ್ರಯತ್ನ ಅತಿ ಮುಖ್ಯವಾದುದು. ಮಹಾನ್ ಕ್ರಿಯೆಯೊಂದರ ಮೂಲವನ್ನು ಶೋಧಿಸುತ್ತಾ ಹೊರಟ ಈ ಪ್ರಯತ್ನವೀಗ ಮಹತ್ವದ ಘಟ್ಟವನ್ನು ತಲುಪಿದೆ. ಜಗತ್ತಿನಲ್ಲೇ ಪ್ರಪ್ರಥಮವಾಗಿ ಅತ್ಯಂತ ತೀಕ್ಷ್ಣವಾದ, ಅತಿ ವೇಗದ ಕಿರಣಗಳನ್ನು ಹೊಮ್ಮಿಸುವಲ್ಲಿ ಸಫಲವಾಗಿದೆ. ಆದರೆ, ಇದನ್ನೇ ಸೃಷ್ಟಿ ಮೂಲ ಎಂದು ಕೆಲವರು ಬಣ್ಣಿಸಲು ಹೊರಟಿದ್ದಾರೆ. ಕೆಲವೊಂದು ಮಾಧ್ಯಮಗಳು ಕೂಡಾ ಸೃಷ್ಟಿ ಮೂಲವೇ ಪತ್ತೆಯಾಯಿತು ಎಂದು ಬಣ್ಣಿಸಿವೆ. ಸೂಕ್ಷ್ಮದತ್ತ ಹೊರಟ ಮಾತ್ರಕ್ಕೇ ಸೃಷ್ಟಿ ಮೂಲಕ್ಕೆ ತಲುಪಿದ್ದೇವೆ ಎಂದರೆ ಅದನ್ನು ಒಪ್ಪುವುದಕ್ಕೆ ಸಾಧ್ಯವೇ? ಅಥವಾ ಆ ಸೂಕ್ಷ್ಮವೇ ಸೃಷ್ಟಿ ಮೂಲ ಎಂದು ಯಾರಾದರೂ ದೃಢೀಕರಿಸುವುದಕ್ಕೆ ಸಾಧ್ಯವೇ?
ಸೃಷ್ಟಿಯನ್ನು ಅರಿತುಕೊಳ್ಳು ವಿಜ್ಞಾನದ ತುಡಿತವನ್ನು ಯಾರಾದರೂ ಮೆಚ್ಚಲೇಬೇಕು. ವಿಶ್ವದ ಹುಟ್ಟಿನ ರಹಸ್ಯವನ್ನು ಭೇದಿಸಲು ವೈಜ್ಞಾನಿಕ ಜಗತ್ತು ನಡೆಸಿದ ಪ್ರಯೋಗಗಳೂ ಅಭೂತಪೂರ್ವವೇ. ಹಾಗಂತ ಇದುವೇ ಸೃಷ್ಟಿಯ ಮೂಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಸೃಷ್ಟಿ ಮೂಲ ಒಂದೇ ಒಂದು. ಅದು ಸೂಕ್ಷ್ಮವಾದ ಕಣ ಎನ್ನುತ್ತದೆ ವಿಜ್ಞಾನ. ಆ ಸೂಕ್ಷ್ಮಕಣ ಅಥವಾ ದೇವಕಣವನ್ನು ಪತ್ತೆ ಮಾಡುವುದು ವಿಜ್ಞಾನಿಗಳ ಉದ್ದೇಶ. ಅದಕ್ಕಾಗಿಯೇ ಲಾರ್ಜ್ ಹ್ಯಾಡ್ರಾನ್ ಕೊಲೈಡರನ್ನು ಸ್ಥಾಪಿಸಿ ಅಲ್ಲಿ ಎರಡು ಅಣುಗಳನ್ನು ಘರ್ಷಣೆಗೆ ಒಳಪಡಿಸಿದ್ದರು. ಇದೀಗ ಅದೇ ಹ್ಯಾಡ್ರಾನ್ ಕೊಲೈಡರ್ ನಲ್ಲಿ ಜಗತ್ತು ಇದುವರೆಗೆ ಕಂಡು ಕೇಳರಿಯದಷ್ಟು ತೀವ್ರತೆಯ ಕಿರಣಗಳನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ.

ಅತಿ ತೀಕ್ಷ್ಣ ಕಿರಣ
ಲಾರ್ಜ್ ಹ್ಯಾಡ್ರಾನ್ ಕೊಲೈಡರ್ನಲ್ಲಿ ಎರಡು ಅಣುಗಳನ್ನು ಘರ್ಷಿಸಿದಾಗ 4.67x10ರ ಘಾತ32 ಸಿಎಂ-2ಎಸ್-1ರಷ್ಟು ಕಾಂತಿಯುಕ್ತವಾದಂಥ ಕಿರಣಗಳು ಹೊಮ್ಮಿದವು. ಇದಕ್ಕೂ ಮುನ್ನ ಈ ರೀತಿ ಕೃತಕವಾಗಿ ಸೃಷ್ಟಿಸಲ್ಪಟ್ಟ ಕಿರಣಗಳ ತೀವ್ರತೆ 4.024x10ರ ಘಾತ32 ಸಿಎಂ-2ಎಸ್-1. ಸೃಷ್ಟಿ ರಹಸ್ಯವನ್ನು ತಿಳಿದುಕೊಳ್ಳುವ ಸಲುವಾಗಿ ನಿರ್ಮಿಸಿದ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ಗೆ ಇದು ಸಾಧನೆಯ ಪ್ರಮುಖ ಘಟ್ಟವೇ ಸರಿ. ಏಕೆಂದರೆ ಹೆಚ್ಚು ತೀವ್ರತೆಯ ಕಿರಣಗಳು ಸೃಷ್ಟಿಯಾದವು ಎಂದರೆ ಸೃಷ್ಟಿ ರಹಸ್ಯವನ್ನು ಭೇದಿಸುವಲ್ಲಿ ಹೆಚ್ಚು ಸಾಧನೆ ಮಾಡಿದೆವು ಎಂದೇ ಅರ್ಥ. ಅರ್ಥಾತ್ ಹೆಚ್ಚು ಕಾಂತಿಯುಕ್ತ ಕಿರಣಗಳು ಹೊಮ್ಮಬೇಕಾದರೆ ಕಣಗಳು ಅಷ್ಟೇ ವೇಗದಲ್ಲಿ ಪರಸ್ಪರ ಡಿಕ್ಕಿ ಹೊಡೆಯಬೇಕು. ಈ ರೀತಿ ವೇಗ ವರ್ಧಿಸುತ್ತಾ ಹೋದಾಗ ಅಲ್ಲಿ ಮತ್ತೊಂದು ಹೊಸ ಸೃಷ್ಟಿ ಆದರೂ ಅಚ್ಚರಿಯಿಲ್ಲ. ಸೃಷ್ಟಿ ರಹಸ್ಯ ಅರಿತುಕೊಳ್ಳಬೇಕಾದರೆ ಅತ್ಯಧಿಕ ಪ್ರಮಾಣದ ಮಾಹಿತಿಗಳು ಬೇಕು. ಅರ್ಥಾತ್ ತಪಸ್ಸು ಬೇಕು. ಆ ಮಾಹಿತಿಗಳನ್ನು ಕ್ರೋಢೀಕರಿಸಬೇಕು ಎಂದಾದರೆ ಪ್ರಯೋಗಗಳು ಹೆಚ್ಚು ಹೆಚ್ಚು ನಡೆದು ಅದು ಕ್ಷಣದಿಂದ ಕ್ಷಣಕ್ಕೆ ಅಭಿವೃದ್ಧಿಯಾಗುತ್ತಾ ಹೋಗಬೇಕು.
ಸದ್ಯಕ್ಕೆ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ನಲ್ಲಾಗಿರುವುದೂ ಇದೇ ಪ್ರಗತಿ. ಇದುವೇ ಸೃಷ್ಟಿ ಮೂಲ ಅಲ್ಲ ಅಷ್ಟೆ. ಸೃಷ್ಟಿ ಮೂಲವನ್ನು ಹುಡುಕುತ್ತಾ ಸಾಗುತ್ತಿರುವಾಗ ಸಿಕ್ಕ ಪ್ರಮುಖವಾದಂಥ ಮೈಲಿಗಲ್ಲು! ಈಗ ನಡೆಯುತ್ತಿರುವ ಲಾರ್ಜ್ ಹ್ಯಾಡ್ರಾನ್ ಕೊಲಿಷನ್ (ಹ್ಯಾಡ್ರಾನ್ ಗಳ ಘರ್ಷಣೆ) 2012ರ ವೇಳೆಗೆ ಕೊನೆಗೊಳ್ಳುತ್ತದೆ. ಪ್ರಸ್ತುತ ಒಂದು ಬೆಳಕಿರಣಕ್ಕೆ 3.5 ಟೆರಾ ಎಲೆಕ್ಟ್ರಾನ್ ವೋಲ್ಟ್ನಷ್ಟು ಶಕ್ತಿಯಲ್ಲಿ ಅಣುಗಳನ್ನು ಘರ್ಷಣೆಗೆ ಒಳಪಡಿಸಲಾಗುತ್ತಿದೆ. 2012ರ ಬಳಿಕ ಹೊಸ ಪ್ರಯೋಗ ಶುರುವಾಗಲಿದ್ದು ಆಗ ಈಗಿನದಕ್ಕಿಂತ ಹೆಚ್ಚಿನದಾದ ಶಕ್ತಿ ಮಟ್ಟದಲ್ಲಿ ಅಣುಗಳ ಘರ್ಷಣೆ ನಡೆಯುತ್ತದೆ. ಆಗ ಇನ್ನಷ್ಟು ಮಾಹಿತಿಗಳು ದೊರಕುತ್ತವೆ. ಈ ಎಲ್ಲ ಮಾಹಿತಿಗಳನ್ನು ಕ್ರೋಢೀಕರಿಸಿದರೂ ಸೃಷ್ಟಿ ಮೂಲದ ಸ್ಪಷ್ಟ ಅರಿವಾಗುವುದು ಕಷ್ಟವೇ.

ಇದು ಸಾಧನೆಯಲ್ಲ, ಘಟ್ಟ!
ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿ ಅತ್ಯಧಿಕ ತೀವ್ರತೆಯ ಕಿರಣಗಳನ್ನು ಮತ್ತು ಅತ್ಯಧಿಕ ವೇಗದ ಹೆಚ್ಚು ಘರ್ಷಣೆಗಳನ್ನು ಸೃಷ್ಟಿ ಮಾಡಿದ್ದೇ ದೊಡ್ಡ ಸಾಧನೆ ಎಂದು ಅಮೆರಿಕದ ಮಾಧ್ಯಮಗಳು ಬಣ್ಣಿಸಿವೆ. ಆದರೆ ಇದು ಸಾಧನೆಯಲ್ಲ. ಸಾಧನೆಗೆ ಹೊರಟಿರುವವರು ತಲುಪಿರುವಂಥ ಒಂದು ಮಹತ್ತರವಾದ ಘಟ್ಟ. ಪ್ರಪಂಚದಲ್ಲಿ ಜೀವಿಸುತ್ತಿರುವ ಅತಿ ಚಿಕ್ಕ ಜೀವಿಯೇ ಜಗತ್ತಿನಲ್ಲಿ ಚಿಕ್ಕದೋ ಎಂದುಕೊಂಡಿದ್ದಾಗಲೇ ಅಣುಗಳ ಪತ್ತೆಯಾಯಿತು. ಆ ಅಣುಗಳನ್ನು ಭೇದಿಸಿ ನ್ಯೂಟ್ರಾನ್, ಪ್ರೋಟಾನ್, ಎಲೆಕ್ಟ್ರಾನ್ ಎಂಬ ಮತ್ತೂ ಚಿಕ್ಕ ಕಣಗಳನ್ನು ಕಂಡು ಹಿಡಿದರು. ಅದಕ್ಕೂ ಚಿಕ್ಕದಾದ ನ್ಯೂಟ್ರಿನೋಗಳ ಪತ್ತೆಯಾಯಿತು. ಸೂಕ್ಷ್ಮ ಕಣಗಳ ವಿಚಾರದಲ್ಲಿ ತಾರ್ಕಿಕ ವಾದ ಮಂಡಿಸಿದ್ದ ಹಿಗ್ಸ್ ಮತ್ತು ಜಗದೀಶ್ಚಂದ್ರ ಬೋಸ್ ಪ್ರಕಾರ ಇವೆಲ್ಲಕ್ಕಿಂತ ಚಿಕ್ಕದಾದ ಕಣಗಳು ಕೂಡ ಅಸ್ತಿತ್ವದಲ್ಲಿವೆ. ಅವೇ ಹಿಗ್ಸ್ ಬೋಸಾನ್ ಗಳು. ಇವು ವೈಜ್ಞಾನಿಕ ಜಗತ್ತಿನ ಪ್ರಕಾರ ವಿಶ್ವವನ್ನು ಕಟ್ಟಲು ಬಳಸಲ್ಪಟ್ಟ ಮೂಲವಸ್ತುಗಳು ಅಥವಾ ಬಿಲ್ಡಿಂಗ್ ಬ್ಲಾಕ್ ಗಳು.
ಸದ್ಯಕ್ಕಂತೂ ವೈಜ್ಞಾನಿಕ ಜಗತ್ತು ಸೃಷ್ಟಿಯನ್ನು ಅರಿಯುವ ನಿಟ್ಟಿನಲ್ಲಿ ಅಪರಿಮಿತ ಸಾಧನೆಗಳನ್ನು ಮಾಡಿಲ್ಲ. ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿ ನಡೆಸಿದ ಘರ್ಷಣೆಯಿಂದ ಹಿಗ್ಸ್ ಬೋಸಾನ್ ಗಳನ್ನು ವೀಕ್ಷಿಸಲು, ಅವುಗಳ ಗುಣನಡತೆಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ ಎಂಬುದು ನಿಜ. ಹಾಗಂತ ಇದನ್ನೇ ಸೃಷ್ಟಿ ಮೂಲದ ಪತ್ತೆ ಎನ್ನಲಾಗದು. ವೈಜ್ಞಾನಿಕ ಜಗತ್ತು ಸಂಶೋಧನೆಗಳನ್ನು ನಡೆಸುತ್ತಾ ಇನ್ನಷ್ಟು ಸೂಕ್ಷ್ಮವಾದ ಕಣಗಳನ್ನು ಗುರುತಿಸಬಾರದೆಂದೇನೂ ಇಲ್ಲವಲ್ಲ? ಅಥವಾ ಹಿಗ್ಸ್ ಬೋಸಾನ್ ಗಳಿಗಿಂತ ಸೂಕ್ಷ್ಮವಾದ ಕಣಗಳೇ ಇಲ್ಲ ಎಂದು ವಾದ ಮಾಡಲೂ ಆಗದು. ಈ ಹಿಂದೆ ಇವೇ ಚಿಕ್ಕ ಕಣಗಳು ಎಂದು ವೈಜ್ಞಾನಿಕ ಜಗತ್ತು ವಾದ ಮಾಡಿದಾಗಲೆಲ್ಲ ಅದಕ್ಕಿಂತ ಚಿಕ್ಕದಾದ ಕಣಗಳನ್ನು ಪತ್ತೆ ಮಾಡಿದೆ ಇದೇ ವೈಜ್ಞಾನಿಕ ಜಗತ್ತು. ಹಾಗಿರುವಾಗ ಇವಕ್ಕೂ ಚಿಕ್ಕದಾದ ಕಣಗಳು ಯಾಕೆ ಅಸ್ತಿತ್ವದಲ್ಲಿರಬಾರದು?
ಖಂಡಿತಕ್ಕೂ ಇದ್ದೇ ಇರುತ್ತವೆ. ಯಾವ ಕಣಗಳನ್ನೇ ಆಗಲಿ ಎಷ್ಟೇ ಚಿಕ್ಕದಾಗಿ ಒಡೆಯುತ್ತಾ ಹೋದರೂ ಅದು ಮತ್ತಷ್ಟು ಚಿಕ್ಕ ಕಣಗಳನ್ನು ಕೊಡುತ್ತದೆ. ಇದನ್ನೇ ಮುಂದುವರಿಸಿದರೆ ಹೋಗುವುದು ಇನ್ಫಿನಿಟಿಯತ್ತ. ಅಂದರೆ ಅನಂತದ ಕಡೆಗೆ. ಆ ಅನಂತದಲ್ಲಿರುವ ಅತ್ಯಂತ ಸೂಕ್ಷ್ಮವಾದ ಕಣ ಅಥವಾ ಶಕ್ತಿ ಯಾವುದು ಎಂಬುದನ್ನು ಅರಿತುಕೊಂಡರಷ್ಟೇ ಸೃಷ್ಟಿ ರಹಸ್ಯವನ್ನು ತಿಳಿದುಕೊಳ್ಳಲು ಸಾಧ್ಯವಾದೀತು. ಆ ಹಂತಕ್ಕೆ ತಲುಪಬೇಕೆಂದಾದರೆ ಸಾಗಬೇಕಾದ ಹಾದಿಯೂ ಅನಂತವೇ. ಈ ಹಾದಿಯನ್ನು ಸವೆಸುವುದು, ಈ ರೀತಿ ಸವೆಸುತ್ತಾ ಅನಂತವನ್ನು ತಲುಪುವುದು, ಅಲ್ಲಿ ತಲುಪಿದ ನಂತರ ಅಲ್ಲಿನ ರಹಸ್ಯಗಳನ್ನು ಅರಿತುಕೊಳ್ಳುವುದು, ಅರಿತುಕೊಂಡದ್ದನ್ನು ಮನನ ಮಾಡಿಕೊಂಡು ಮತ್ತೆ ಹಿಂದಿರುಗುವುದು, ಇಲ್ಲಿಗೆ ಬಂದ ಬಳಿಕ ಅದನ್ನು ಜನರಿಗೆ ಅರಿಕೆ ಮಾಡಿಸುವುದು... ಇವೆಲ್ಲ ಮಾತಿನಲ್ಲಿ ಹೇಳಿದಷ್ಟು ಸುಲಭದ ವಿಚಾರವಲ್ಲವಲ್ಲ! ಈ ಪ್ರಕ್ರಿಯೆಯನ್ನೇ ನಮ್ಮ ವೇದಗಳಲ್ಲಿ ತಪಸ್ಸು ಎಂದು ಕರೆದಿರುವುದು. ತಪಸ್ಸು ಎಂದರೆ ಒಂದೆಡೆ ಕುಳಿತು ಕಣ್ಣು ಮುಚ್ಚಿ ಮಂತ್ರ ಹೇಳುವುದು ಎಂದು ಅರ್ಥವಲ್ಲ. ಅದು ಸಾಧನೆಯತ್ತ, ಅನಂತವನ್ನು ಅರಿತುಕೊಳ್ಳುವತ್ತ ಸಾಗುವ ಕಠೋರ ಹಾದಿಯ ಸಂಕೇತ. ಆ ಅನಂತವನ್ನು ತಲುಪುವತ್ತ ವೈಜ್ಞಾನಿಕ ಜಗತ್ತು ಗಮನ ಹರಿಸಿದರೆ ಸೃಷ್ಟಿ ರಹಸ್ಯದ ಅರಿವು ದೊರಕೀತು.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು