`ಮಮ್ಮಿ'ಗಳು ನೆನಪಿಸಿದ ಆಯುರ್ವೇದ ಸಂಹಿತೆಗಳು....

ಪಿರಮಿಡ್ ಗಳೊಳಗೆ ಕೆಡದಂತೆ ಇರಿಸಲ್ಪಟ್ಟ ಶವಗಳನ್ನು ಹೊರತೆಗೆದು ಅವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಿವಿಧ ರೀತಿಯ ಪರೀಕ್ಷೆಗಳಿಗೆ ಒಳಪಡಿಸಿದಾಗ ಚಕಿತರಾದದ್ದು ಸ್ವತಃ ವಿಜ್ಞಾನಿಗಳು. ಅದಕ್ಕೆ ಕಾರಣೀಭೂತವಾದ್ದು ಮಲೇರಿಯಾ, ಮಧುಮೇಹ, ಹೃದ್ರೋಗ ಮೊದಲಾದ ರೋಗಗಳು. ಹಾಗೆ ನೋಡಿದರೆ ನಮ್ಮ ಋಷಿ ಮುನಿಗಳೇ ಹಲವಾರು ವಿಧದ ರೋಗಗಳು ಮತ್ತು ಅವುಗಳ ಚಿಕಿತ್ಸಾ ವಿಧಾನಗಳನ್ನು ವಿವರಿಸಿದ್ದಾರೆ. ಕಾಶ್ಯಪ ಸಂಹಿತೆ, ಚರಕ ಸಂಹಿತೆ, ಸುಶ್ರುತ ಸಂಹಿತೆ, ವಾಗ್ಭಟನ ಅಷ್ಟಾಂಗ ಹೃದಯಂ... ಹೇಗೆ ಹಲವು ಸಂಹಿತೆಗಳು ಹಲವು ರೋಗಗಳ ವಿಚಾರಗಳನ್ನು ತೆರೆದಿಟ್ಟಿವೆ. ನಾವು ಮಾತ್ರ ಆ ಸಂಹಿತೆಗಳನ್ನು ಮುಚ್ಚಿಟ್ಟಿದ್ದೇವೆ.


ವಿಜ್ಞಾನಲೋಕದಲ್ಲಿ ವಿಶೇಷವಾಗಿ ಚರ್ಚೆಗೆ ಒಳಗಾಗುತ್ತಿರುವ, ವಿಜ್ಞಾನ ಕ್ಷೇತ್ರದಲ್ಲಿ ಹೊಸ ಚಿಂತನಧಾರೆಯನ್ನು ಮೂಡಿಸಬಹುದಾದ ವಿಚಾರವೊಂದನ್ನು ಈ ಬಾರಿ ತೆರೆದಿಡಬೇಕು ಅಂತ ಯೋಚಿಸುತ್ತಿದ್ದಾಗಲೇ ಈಜಿಫ್ಟ್ ನ ಪಿರಮಿಡ್  ಗಳ ಒಳಗಡೆ ಬೆಚ್ಚಗೆ, ಶಾಶ್ವತವಾಗಿ ಮಲಗಿರುವ ಮಮ್ಮಿಗಳು ಫಕಫಕನೆ ನಕ್ಕವು! ಸಾವಿರಾರು ವರ್ಷಗಳಷ್ಟು ಹಳೆಯದಾಗಿರುವ ಆ ಮಮ್ಮಿಗಳಲ್ಲೊಂದಾದರೂ ಹೊಸ ವಿಚಾರ ಇರಲೇಬೇಕೆಂಬ ಅಂದಾಜು ಸಿಕ್ಕಿದ್ದು ಆಗಲೇ. ಅದೇ ತುಡಿತದೊಂದಿಗೆ ಒಂದಿಷ್ಟು ಕೆದಕಿ ನೋಡಿದಾಗ ಮಮ್ಮಿಗಳ ಬಗ್ಗೆ ನಡೆದಿರುವ ಕೆಲವೊಂದು, ಆದರೆ ಅತ್ಯಂತ ಮಹತ್ವ ಎನ್ನಬಹುದಾದಂಥ, ವೈಜ್ಞಾನಿಕ ಸಂಶೋಧನೆಗಳು, ಮಮ್ಮಿಗಳೇ ಎದ್ದು ಕುಳಿತಂತೆ, ಥಟಕ್ಕನೆ ಕಣ್ಣ ಮುಂದೆ ಬಂದವು.
    ಕೆಲವೊಂದು ವಿಚಾರಗಳು ವಿಜ್ಞಾನಿಗಳನ್ನು ಬಹಳವಾಗಿ ಕಾಡಿಬಿಡುತ್ತವೆ. ಈ ರೀತಿ ಕಾಡುವುದರಲ್ಲಿ ಆನುವಂಶಿಕ ರೋಗಗಳದ್ದು ಎತ್ತಿದ ಕೈ. ಕೆಲವೊಂದು ಮಾರಕ ರೋಗಗಳೂ ಅಷ್ಟೆ! `ಈ ಹಾಳಾದ ರೋಗಗಳು ಎಲ್ಲಿಂದ ಹುಟ್ಟಿಕೊಂಡವು' ಎಂದು ಪರಿತಪಿಸುವಂತೆ ಮಾಡುವ ರೋಗಗಳು ಎಷ್ಟು ವರ್ಷ ಹಿಂದೆ ಅಸ್ತಿತ್ವದಲ್ಲಿದ್ದವು? ಆ ರೋಗಗಳು ಕಾಣಿಸಿಕೊಳ್ಳಲಾರಂಭಿಸಿದ್ದು ಯಾವಾಗ? ಎನ್ನುವ ಪ್ರಶ್ನೆಗಳು ಸಾಮಾನ್ಯ ಜನರನ್ನೂ ಕಾಡುತ್ತವೆ. ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ತುಡಿತದಲ್ಲಿ ವಿಜ್ಞಾನಿಗಳು ಸಂಪರ್ಕಿಸಿದ್ದು ಈಜಿಫ್ಟ್ ನ ಮಮ್ಮಿಗಳನ್ನು! ಪಿರಮಿಡ್  ಗಳೊಳಗೆ ಕೆಡದಂತೆ ಇರಿಸಲ್ಪಟ್ಟ ಶವಗಳನ್ನು ಹೊರತೆಗೆದು ಅವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಿವಿಧ ರೀತಿಯ ಪರೀಕ್ಷೆಗಳಿಗೆ ಒಳಪಡಿಸಿದಾಗ ಚಕಿತರಾದದ್ದು ಸ್ವತಃ ವಿಜ್ಞಾನಿಗಳು. ಅದಕ್ಕೆ ಕಾರಣೀಭೂತವಾದ್ದು ಮಲೇರಿಯಾ, ಮಧುಮೇಹ, ಹೃದ್ರೋಗ ಮೊದಲಾದ ರೋಗಗಳು. ಕಾರಣ- ತೀರಾ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡದ್ದು ಎಂದೇ ಹೇಳಲಾಗುವ ಈ ರೋಗಗಳು ಈಜಿಫ್ಟ್ ನ  ಮಮ್ಮಿಗಳಲ್ಲೂ ಕಾಣಿಸಿಕೊಂಡಿವೆ. ಪರೀಕ್ಷಿಸಲಾದ ಮಮ್ಮಿಗಳ ಪೈಕಿ ಕೆಲವೊಂದು `ಆ ವ್ಯಕ್ತಿಗಳು' ಇಂಥ ಕಾಯಿಲೆಗಳಿಂದಲೇ ಮೃತಪಟ್ಟು ಮಮ್ಮಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ರೀತಿ ಪರಿಶೀಲಿಸಲ್ಪಟ್ಟ ಮಮ್ಮಿಗಳೂ ಸಾಧಾರಣ ವ್ಯಕ್ತಿಗಳದ್ದಲ್ಲ. ಸಾಧಾರಣ ವ್ಯಕ್ತಿಗಳ ಶವಗಳನ್ನು `ಮಮ್ಮಿ'ಗಳನ್ನಾಗಿಡುವ ಪದ್ಧತಿಯೂ ಇರಲಿಲ್ಲ. ಪುರಾತನ ಜಗತ್ತಿನ ಬಗ್ಗೆ, ಅಂದಿನ ದಿನಗಳ ಬಗ್ಗೆ, ಅಂದು ಜನರು ಎದುರಿಸುತ್ತಿದ್ದಂಥ ರೋಗಗಳ ಬಗ್ಗೆ... ಹೀಗೆ ನಮ್ಮ ಅರಿವಿಗೆ ಇದುವರೆಗೆ ನಿಲುಕದೇ ಇರುವ ಸಹಸ್ರ ವರ್ಷಗಳ ಹಿಂದಿನ ಜನಜೀವನದ ಬಗ್ಗೆ ತಿಳಿದುಕೊಳ್ಳಬಹುದಾದಂಥ ಸಾಧ್ಯತೆಯ ಹೊಳಹನ್ನು ಮೂಡಿಸಿದ್ದು ಒಂದು ಅಹ್ಮೋಸ್ ಮರ್ಯೆಟ್ ಅಮೋನ್ ಎಂಬ ರಾಜಕುಮಾರಿಯ ಮಮ್ಮಿ, ಮತ್ತೊಂದು ಈಜಿಫ್ಟ್ ನಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ ರಾಜ ಟುಟ್  ನದು.
    ಇಂದು ಯಾವೆಲ್ಲ ರೋಗಗಳು ಅತ್ಯಧಿಕವಾಗಿ ಮನುಕುಲವನ್ನು ಕಾಡುತ್ತಿವೆಯೋ ಅವುಗಳ ಅಸ್ತಿತ್ವ ಎಷ್ಟು ವರ್ಷಗಳಿಂದ ಇತ್ತು ಎಂಬ ಬಗ್ಗೆ ಹೊಸ ಚಿಂತನೆ ಮೂಡಿಸಿದ್ದು ಇವೇ ಮಮ್ಮಿಗಳು. ಅಷ್ಟು ಮಾತ್ರವಲ್ಲ, ಇನ್ನೂ ಕೆಲವೊಂದು ರೋಗಗಳು ಸಾವಿರಾರು ವರ್ಷಗಳ ಹಿಂದಿನಿಂದಲೇ ಮನುಕುಲವನ್ನು ಬಾಧಿಸುತ್ತಿದ್ದಿರಬಹುದೇ? ಅಂದಿನ ಜನರಲ್ಲಿ ಆರೋಗ್ಯದ ಬಗ್ಗೆ ಕಡಿಮೆ ಅರಿವು ಇದ್ದಿತೇ? ಇದರಿಂದಾಗಿಯೇ ಅಂದು ರೋಗಗಳಿಂದಾಗಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಜನರು ದುರ್ಮರಣಕ್ಕೀಡಾಗುತ್ತಿದ್ದರೆ? ಎಂಬೆಲ್ಲ ಚಿಂತನೆಗಳನ್ನು ಹುಟ್ಟಿಸಿವೆ. ಇಷ್ಟಕ್ಕೂ ಆ ಮಮ್ಮಿಗಳಲ್ಲಿ ಕಂಡದ್ದೇನು? ವಿಜ್ಞಾನಿಗಳನ್ನು ಚಕಿತರನ್ನಾಗಿಸಿದ ವಿಚಾರಗಳ್ಯಾವವು?

ಹಲವು ರೋಗಗಳು...
ರಾಜಕುಮಾರಿ ಅಹ್ಮೋಸ್ ಮರ್ಯೆಟ್ ಅಮೋನ್ ಳ ಮಮ್ಮಿಯನ್ನು ಪರೀಕ್ಷಿಸಿದಾಗ ವೈದ್ಯ ವಿಜ್ಞಾನಿಗಳು ಗುರುತಿಸಿದ್ದು- `ಆಕೆ 40 ವರ್ಷಕ್ಕೇ ಮೃತಪಟ್ಟಿದ್ದಳು. ಆಕೆಯ ಸಾವಿಗೆ ಕಾರಣವಾದದ್ದು ಹೃದ್ರೋಗ. 40ರ ಹರೆಯದಲ್ಲಿ ಹೃದಯಾಘಾತಕ್ಕೆ ಒಳಗಾದ ಆಕೆ ತಕ್ಷಣವೇ ಸಾವನ್ನಪ್ಪಿದ್ದಳು' ಎಂಬ ವಿಚಾರವನ್ನು. ಅಂದರೆ ಹೃದ್ರೋಗ ಸಾವಿರಾರು ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬ ವಿಚಾರ ಸ್ಪಷ್ಟವಾಗುತ್ತದೆ. ರಾಜಕುಮಾರಿ ಅಹ್ಮೋಸ್ ಜೀವಿತದಲ್ಲಿದ್ದದ್ದು ಸುಮಾರು 3,500 ವರ್ಷಗಳ ಹಿಂದೆ. ವಿಜ್ಞಾನಿಗಳು ಹೇಳುವ ಪ್ರಕಾರ ತನ್ನ ತೂಕವನ್ನು ಒಂದಷ್ಟು ಕಡಿಮೆ ಮಾಡಿಕೊಂಡಿರುತ್ತಿದ್ದರೆ, ಪ್ರತಿದಿನವೂ ಅತಿ ಸ್ವಲ್ಪವಾದರೂ ವ್ಯಾಯಾಮ ಮಾಡಿರುತ್ತಿದ್ದರೆ ಆಕೆ ಇನ್ನೂ ಹೆಚ್ಚು ಕಾಲ ಬದುಕಿರುತ್ತಿದ್ದಳು. ನೈಲ್ ನದಿ ತೀರದಲ್ಲಿರುವ ಡೈರ್ ಎಲ್-ಬಹ್ರಿ ರಾಜಮನೆತನದ ಸ್ಮಾರಕ ದೇಗುಲದಲ್ಲಿನ ಪಿರಮಿಡ್ ನಲ್ಲಿ ಈಕೆಯ ಶವವನ್ನು `ಮಮ್ಮಿ'ಯನ್ನಾಗಿ ಇರಿಸಲಾಗಿತ್ತು. ಅದನ್ನು ತೆಗೆದು ವಿಜ್ಞಾನಿಗಳು ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಿದಾಗ ಆಕೆಗೆ ಹೃದ್ರೋಗವಿದ್ದದ್ದು ಸೇರಿದಂತೆ ಹಲವು ವಿಚಾರಗಳನ್ನು ಪತ್ತೆ ಮಾಡಿದ್ದಾರೆ. ರಾಜಕುಮಾರಿಯ ಮಮ್ಮಿ ಸೇರಿದಂತೆ ಕೈರೋದಲ್ಲಿರುವ ಈಜಿಪ್ಟಿಯನ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ 52ಕ್ಕೂ ಅಧಿಕ ಮಮ್ಮಿಗಳನ್ನು ವೈದ್ಯ ವಿಜ್ಞಾನಿಗಳು ಪರಿಶೀಲಿಸಿದ್ದು, ಅವುಗಳಲ್ಲಿ ಶೇ.50ಕ್ಕೂ ಅಧಿಕ ಮಮ್ಮಿಗಳಿಗೆ ಹೃದ್ರೋಗ ಸಮಸ್ಯೆ ಇತ್ತು ಎಂಬುದು ಗೊತ್ತಾಗಿದೆ. ರಾಜಕುಮಾರಿ ಅಹ್ಮೋಸ್ ಳ 5 ಅಪಧಮನಿಗಳು (ಆರ್ಟರಿಗಳು) ಬ್ಲಾಕ್ ಆಗಿದ್ದವು. ಹೀಗಾಗಿ ಹೃದಯದಿಂದ ಮೆದುಳಿಗೆ ರಕ್ತಸಂಚಾರ ಆಗುತ್ತಿರಲಿಲ್ಲ. ಆಕೆಗೆ ಮಧುಮೇಹವೂ (ಡಯಾಬಿಟಿಸ್) ಇದ್ದಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ಸಂಶೋಧನೆ ನಡೆಸಿದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ವಿಜ್ಞಾನಿಗಳು.
    ರಾಜಕುಮಾರಿ ಅಹ್ಮೋಸ್ ಳ ವಿಚಾರ ಹೀಗಾದರೆ, ರಾಜ ಟುಟ್ನ ಕಥೆಯೂ ಇಂಥಾದ್ದೇ. ಈಜಿಫ್ಟ್ ನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದ್ದ ರಾಜ ಟುಟ್. ಆತನನ್ನು ಇತಿಹಾಸಕಾರರು ವಿವಿಧ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ. ಸೂರ್ಯದೇವನ ಪುತ್ರ ಎಂದೂ ಹೇಳಲಾಗುತ್ತದೆ. ಅಂತಹ ರಾಜ ಟುಟ್ ಮಲೇರಿಯಾ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದ. ಆತನಿಗೆ ಮೂಳೆ ಸಮಸ್ಯೆಯೂ ಇತ್ತು. ಆತ ಜನ್ಮತಃ ಅಂಗವಿಕಲನಾಗಿದ್ದ. ನಡೆದಾಡುವುದಕ್ಕೆ ಊರುಗೋಲಿನ ಅಗತ್ಯ ಬೇಕೇ ಬೇಕು ಎನ್ನುವಷ್ಟು ಅಂಗವೈಕಲ್ಯ ಆತನಿಗಿತ್ತು ಎನ್ನುತ್ತದೆ ಆತನ ಮಮ್ಮಿಯಿಂದ ಪಡೆದ ಡಿಎನ್ಎಗಳ ಅಧ್ಯಯನ. ಇನ್ನೂ ಅಚ್ಚರಿಯ ಅಂಶಗಳು ಡಿಎನ್ಎ ಅಧ್ಯಯನದಿಂದ ತಿಳಿದು ಬಂದಿವೆ. ಮುಖ್ಯವಾದವುಗಳು- ರಾಜ ಟುಟ್ ಅತ್ಯಂತ ದುರ್ಬಲನಾಗಿದ್ದ, ರಥಗಳನ್ನು ಓಡಿಸುವುದಕ್ಕೆ, ರಥದಲ್ಲಿ ನಿಂತು ಯುದ್ಧ ಮಾಡುವುದಕ್ಕೆ ಆತ ಅಶಕ್ತನಾಗಿದ್ದ. ಸುಮಾರು 3300 ವರ್ಷಗಳ ಹಿಂದೆ ರಾಜನಾಗಿದ್ದವ ಆತ. ಇಷ್ಟೆಲ್ಲ ಸಮಸ್ಯೆಗಳಿದ್ದರೂ 9ನೇ ವಯಸ್ಸಿನಲ್ಲಿಯೇ ಅತ ಸಿಂಹಾಸನವೇರಿದ್ದ. ಆಳ್ವಿಕೆ ನಡೆಸಿದ್ದು ಕೇವಲ 10 ವರ್ಷ. ಅಂದರೆ ತನ್ನ 19ನೇ ವಯಸ್ಸಿನಲ್ಲಿ (ಕ್ರಿ.ಪೂ. 1324) ಆತ ಸಾವನ್ನಪ್ಪಿದ್ದ. ಆತನ ಸಾವಿಗೆ ಮುಖ್ಯವಾಗಿ ಕಾರಣವಾದದ್ದು ಮಲೇರಿಯಾ.

ಆನುವಂಶಿಕ ಸಮಸ್ಯೆ
ಇನ್ನೂ ಅಚ್ಚರಿ ಹುಟ್ಟಿಸುವುದು ಈ ಎಲ್ಲ ರೋಗಗಳು ಎರಡೂ ರಾಜಮನೆತನಗಳಲ್ಲಿ ಆನುವಂಶಿಕವಾಗಿ ಹರಿದುಬಂದಿವೆ ಎಂಬುದು. ರಾಜಕುಮಾರಿ ಅಹ್ಮೋಸ್ ಳಿಗಿದ್ದ ಹೃದ್ರೋಗವು ಆಕೆಯ ತಂದೆ, ತಾಯಿ, ಸಹೋದರ, ಸಹೋದರಿಯರಲ್ಲೂ ಇದ್ದಿರಬಹುದು. ಆಕೆಯ ಹೆತ್ತವರಲ್ಲಿ ಇದ್ದದ್ದಂತೂ ಖಚಿತವಾಗಿದೆ ಎನ್ನುತ್ತಾರೆ ಸಂಶೋಧಕರು. ಇನ್ನು ರಾಜ ಟುಟ್ ನ ವಿಚಾರದಲ್ಲಿ ರೋಗಗಳು ಆನುವಂಶಿಕವಾಗಿ ಹರಡಿರುವುದರ ಬಗ್ಗೆ ವಿಜ್ಞಾನಿಗಳು ನಿಖರವಾಗಿಯೇ ಹೇಳಿದ್ದಾರೆ. ರಾಟ ಟುಟ್ ನ ಡಿಎನ್ಎ ಮಾದರಿಗಳನ್ನು ತೆಗೆದು ಅದು ತನ್ನ ಹಿಂದಿನ ತಲೆಮಾರಿನಲ್ಲಿ ಹೇಗಿತ್ತು? ಯಾವ ರೀತಿ ರೂಪಾಂತರಕ್ಕೊಳಗಾಗಿದೆ(ಜೆನೆಟಿಕ್ ಮ್ಯುಟೇಶನ್)? ರಾಜ ಟುಟ್ ನ ನಂತರದ ತಲೆಮಾರುಗಳಿಗೆ ಹರಿಯುವಾಗ ಆದಂಥ ಮಾರ್ಪಾಟುಗಳೇನು? ಈ ರೀತಿ ಮಾರ್ಪಾಟಾಗುವಾಗ ಯಾವೆಲ್ಲ ರೋಗಗಳನ್ನು ಹೊತ್ತೊಯ್ದಿದೆ? ಎಂಬುದನ್ನು ವಿಜ್ಞಾನಿಗಳು ಆದ್ಯಯನ ನಡೆಸಿದ್ದಾರೆ. ರಾಜ ಟುಟ್ ನ ಮನೆತನದ, ರಕ್ತ ಸಂಬಂಧಿಗಳೇ ಆಗಿರುವ ಐವರ ಮಮ್ಮಿಗಳನ್ನು ವಿಜ್ಞಾನಿಗಳು ಗುರುತಿಸಿದ್ದು, ಆ ವ್ಯಕ್ತಿಗಳಿಗೂ ರಾಜ ಟುಟ್ ಗಿದ್ದಂಥ ಸಮಸ್ಯೆಗಳೇ ಇದ್ದುದನ್ನು ಪತ್ತೆ ಮಾಡಿದ್ದಾರೆ.

ನೆನಪಾದವು ಸಂಹಿತೆಗಳು
ಈಜಿಫ್ಟ್ ನ ರಾಜಮನೆತನಗಳ ಸಮಸ್ಯೆಗಳನ್ನು ಗಮನಿಸಿ, `ಆಗಿನ ಕಾಲದಲ್ಲೇ ಈ ಎಲ್ಲ ರೋಗಗಳೂ ಇತ್ತೇ?' ಎಂದು ವಿಜ್ಞಾನಿಗಳು ಅಚ್ಚರಿಪಟ್ಟಿದ್ದಾರೆ. ವಾಸ್ತವ ಎಂದರೆ ಈ ಎಲ್ಲ ರೋಗಗಳು ಅದಕ್ಕೂ ಮುನ್ನವೇ ಅಸ್ತಿತ್ವದಲ್ಲಿದ್ದವು. ಶಸ್ತ್ರಚಿಕಿತ್ಸೆಯ ಜನಕ ಎಂದೆನಿಸಿಕೊಂಡ ಸುಶ್ರುತ ಬರೆದಂಥ `ಸುಶ್ರುತ ಸಂಹಿತೆ'ಯಲ್ಲಿ ಹೃದ್ರೋಗವನ್ನು ಪ್ರಸ್ತಾಪಿಸಲಾಗಿದೆ. ಅದಕ್ಕೆ ಚಿಕಿತ್ಸೆ ಹೇಗೆ ಎಂಬುದನ್ನೂ ಸುಶ್ರುತ ಮುನಿ ವಿವರಿಸಿದ್ದಾನೆ. ಕೇವಲ ಹೃದ್ರೋಗವೊಂದೇ ಅಲ್ಲ, ಇಂದಿನ ಕಾಲಘಟ್ಟದಲ್ಲಿ ಕಾಣಿಸಿಕೊಳ್ಳುತ್ತಿರುವ ಹಲವಾರು ಮಾರಣಾಂತಿಕ ರೋಗಗಳು ಹಲವು ಲಕ್ಷ ವರ್ಷಗಳ ಹಿಂದೆಯೇ ಜೀವಿಗಳಿಗೆ ಮಾರಕವಾಗಿದ್ದವು ಎಂಬುದು ನಮ್ಮ ವೇದ, ಪುರಾಣಗಳನ್ನು ಅಭ್ಯಸಿಸಿದರೆ ಗೊತ್ತಾಗುತ್ತದೆ. ಕಾಶ್ಯಪ ಸಂಹಿತೆ, ಚರಕ ಸಂಹಿತೆ... ಹೀಗೆ ನಮ್ಮ ಋಷಿ-ಮುನಿಗಳು ಸಿದ್ಧಪಡಿಸಿದ್ದಂಥ ವಿವಿಧ ಸಂಹಿತೆಗಳಲ್ಲಿ ವಿವಿಧ ರೋಗಗಳು ಮತ್ತು ಅವುಗಳ ಚಿಕಿತ್ಸೆಯ ವಿಧಾನವನ್ನು ವಿವರಿಸಿದ್ದಾರೆ. ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಆಧಾರವಾಗಿರುವ, ವಾಗ್ಭಟನ `ಅಷ್ಟಾಂಗ ಹೃದಯಂ'ನಲ್ಲಿ ಹೃದ್ರೋಗಗಳು ಮತ್ತು ಅವುಗಳ ಚಿಕಿತ್ಸೆಯ ವಿಧಾನಗಳನ್ನು ವಿವರಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಸುಶ್ರುತ ಮುನಿಯೇ ಹೇಳಿದ್ದ. ಇಷ್ಟೆಲ್ಲ ನಮ್ಮಲ್ಲೇ ಇದ್ದರೂ ನಾವು ಮಾತ್ರ ಯಾಕೆ ಅವುಗಳನ್ನು ಕಡೆಗಣಿಸುತ್ತಿದ್ದೇವೆಯೋ? ನಮ್ಮಾತ್ಮವನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ವಿಜ್ಞಾನ ಲೋಕವನ್ನು ಇಂದು ಅಚ್ಚರಿಯ ಕೂಪಕ್ಕೆ ತಳ್ಳುತ್ತಿರುವ ಹಲವು ರೋಗಗಳು ಮತ್ತು ಅವುಗಳ ಚಿಕಿತ್ಸಾ ಪದ್ಧತಿಯನ್ನು ಈ ಸಂಹಿತೆಗಳಲ್ಲಿ ತೆರೆದಿಟ್ಟಿದ್ದಾರೆ. ನಾವು ಮಾತ್ರ ಆ ಸಂಹಿತೆಗಳನ್ನು ಮುಚ್ಚಿಟ್ಟಿದ್ದೇವೆ!

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು