ಕ್ರೀಡಾಳುಗಳ `ಸಡತ್ ಡೆತ್'ಗೆ ಸಿಕ್ಕಿದೆ ಪರಿಹಾರ!

* ಇಸ್ರೇಲ್ ನ ಸಂಶೋಧಕರಿಂದ ಸಮಸ್ಯೆಯ ಮೂಲ ಪತ್ತೆ
* ಮೊದಲೇ ಚಿಕಿತ್ಸೆ ಪಡೆದರೆ ಕ್ರೀಡಾಳು ಮೈದಾನದಲ್ಲೇ ಸಾಯುವ ಪ್ರಸಂಗ ಬರದು

2004ರ ಡಿಸೆಂಬರ್ 5ನೇ ತಾರೀಕು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಫೂಟ್ಬಾಲ್ ಪಂದ್ಯ ನಡೆಯುತ್ತಿತ್ತು. ಅತ್ಯಂತ ಕುತೂಹಲದ ಘಟ್ಟದಲ್ಲಿ ಪಂದ್ಯ ಪೈಪೋಟಿಯಿಂದ ಸಾಗುತ್ತಿದ್ದಾಗ ಗೋವಾದ ಡೆಂಪೋ ಸ್ಪೋರ್ಟ್ಸ್  ಕ್ಲಬ್ ಪರ ಆಡುತ್ತಿದ್ದ ಕ್ರಿಸ್ಟಿಯಾನೋ ಡಿ ಲಿಮಾ (ಕ್ರಿಸ್ಟಿಯಾನೋ ಜೂನಿಯರ್) ಏಕಾಏಕಿ ಕುಸಿದು ಬಿದ್ದ. ಇದಕ್ಕೆ ನೆಪ ಎದುರಾಳಿ ಮೋಹನ್ ಬಗಾನ್ ತಂಡದ ಗೋಲ್ ಕೀಪರ್ ಗೆ ಡಿಕ್ಕಿ ಹೊಡೆದದ್ದು. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಕೊನೆಯುಸಿರೆಳೆದಿದ್ದ ಕ್ರಿಸ್ಟಿಯಾನೋ.
ಕ್ರಿಸ್ಟಿಯಾನೋ ಸಾವಿಗೆ ಎದುರಾಳಿ ಆಟಗಾರನಿಗೆ ಡಿಕ್ಕಿ ಹೊಡೆದದ್ದು ಕಾರಣವಲ್ಲ. ಆತನಿಗೆ `ಸಡನ್ ಡೆತ್ ಸಿಂಡ್ರೋಮ್' ಇತ್ತು. ಈ ಘಟನೆ ರಾಜ್ಯದ ಕ್ರೀಡಾಪ್ರೇಮಿಗಳ ಮನಸ್ಸಿನಿಂದ ಇನ್ನೂ ಮಾಸಿರಲಿಕ್ಕಿಲ್ಲ. ಇಂಥ ಘಟನೆಗಳು ಫೂಟ್ಬಾಲ್ ಕ್ಷೇತ್ರದಲ್ಲಿ ಹಲವಾರು. ಆಥ್ಲೀಟ್ ಗಳು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪುವ ಘಟನೆಗಳು ಪ್ರತಿ ವರ್ಷವೂ ನಡೆಯುತ್ತವೆ. ಈ ರೀತಿ ಕ್ರೀಡಾಳು ಮೃತಪಟ್ಟರೆ `ಸಾವಿಗೆ ಹೃದಯಾಘಾತ ಕಾರಣ' ಎಂಬ ವರದಿ ವೈದ್ಯರಿಂದ ಬರುತ್ತದೆ. ಸ್ಪಷ್ಟ ಕಾರಣ ಮತ್ತು ಕ್ರೀಡಾಳುಗಳು ಈ ರೀತಿ ಆಘಾತಕಾರಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚುತ್ತಿರುವುದು ಮಾತ್ರ ಇದುವರೆಗೆ ರಹಸ್ಯವಾಗುಳಿದಿತ್ತು. ಇದೀಗ ಅದನ್ನು ಭೇದಿಸುವಲ್ಲಿ ಮತ್ತು ಅದಕ್ಕೆ ಚಿಕಿತ್ಸೆ ಮಾಡಿ ಹಠಾತ್ ಸಾವಿನಿಂದ ಕ್ರೀಡಾಳುಗಳನ್ನು ಪಾರು ಮಾಡುವಲ್ಲಿ ಸಫಲರಾಗಿದ್ದಾರೆ ಇಸ್ರೇಲ್ನ ಟೆಲ್ ಅವೈವ್ ಯೂನಿವರ್ಸಿಟಿಯ ಹೃದ್ರೋಗ ತಜ್ಞರು. 
`ಸಡನ್ ಡೆತ್ ಸಿಂಡ್ರೋಮ್' ಎಂಬ ಈ ಸಮಸ್ಯೆಯನ್ನು ವೈದ್ಯರು, ವೈದ್ಯ ವಿಜ್ಞಾನಿಗಳು ಈ ಮೊದಲೇ ಗುರುತಿಸಿದ್ದರು. ಆದರೆ ಕ್ರೀಡಾಳುಗಳಿಗೆ ಈ ರೋಗ ಬಂದಿದೆಯೇ? ಅವರ ಜೀವಕ್ಕೆ ಅದರಿಂದಾಗಿ ಹಾನಿ ಇದೆಯೇ? ಎಂಬುದನ್ನು ತಿಳಿದುಕೊಳ್ಳುವ ಪರೀಕ್ಷಾ ವಿಧಾನ ಇರಲಿಲ್ಲ. ಹೀಗಾಗಿ ಪ್ರತಿ ವರ್ಷವೂ ಐದಾರು ಕ್ರೀಡಾಪಟುಗಳು ಈ ಸಮಸ್ಯೆಗೆ ಬಲಿಯಾಗಿ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಟೆಲ್ ಅವೈವ್ ಯೂನಿವರ್ಸಿಟಿಯ ಹೃದ್ರೋಗ ತಜ್ಞ ಡಾ.ಸಮಿ ವಿಸ್ಕಿನ್ ನೇತೃತ್ವದ ತಂಡ ಈ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧಿಸಿದ್ದು, `ಅರಿತುಕೊಳ್ಳಲು ಸಾಧ್ಯವೇ ಇಲ್ಲ' ಎಂದು ಎಲ್ಲರೂ ಕೈಚೆಲ್ಲಿದ್ದ ಈ ಸಮಸ್ಯೆಯನ್ನು ಮುಂಚಿತವಾಗಿಯೇ ಅರಿತುಕೊಂಡು ಅದಕ್ಕೆ ಚಿಕಿತ್ಸೆ ನೀಡುವಲ್ಲಿ ಸಫಲರಾಗಿದ್ದಾರೆ.

ಸಮಸ್ಯೆಯ ಪತ್ತೆ ಸುಲಭ 
ಅಥ್ಲೀಟ್ ಗಳನ್ನು ಫೂಟ್ಬಾಲ್ ಆಟಗಾರರನ್ನು ಹೆಚ್ಚಾಗಿ ಕಾಡುವ ಈ ಸಮಸ್ಯೆಯನ್ನು ಮುಂಚಿತವಾಗಿಯೇ ಕಂಡುಕೊಳ್ಳಲು ಹೆಚ್ಚಿನ ಖರ್ಚನ್ನೇನೂ ಮಾಡಬೇಕಿಲ್ಲ. ಡಾ.ವಿಸ್ಕಿನ್ ಅನುಸರಿಸಿದ ಪರೀಕ್ಷಾ ವಿಧಾನ ಕೂಡ ಹೊಸತಲ್ಲ. ಈಗಾಗಲೇ ಬಹುತೇಕ ಹೃದ್ರೋಗ ತಜ್ಞರು ಬಳಸುತ್ತಿರುವ ಸಾಮಾನ್ಯ ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಂ) ಪರೀಕ್ಷೆಯ ಮೂಲಕವೇ ಇದನ್ನು ಪತ್ತೆ ಮಾಡಬಹುದು ಎಂಬುದನ್ನು ಅವರು ಸಾಧಿಸಿ ತೋರಿಸಿದ್ದಾರೆ. ಸಡನ್ ಡೆತ್ ಸಿಂಡ್ರೋಮ್ ಇರುವಂಥ ರೋಗಿಗಳ ಮತ್ತು ಸಾಮಾನ್ಯ ವ್ಯಕ್ತಿಗಳ ಇಸಿಜಿ ಪರೀಕ್ಷೆಯ ಫಲಿತಾಂಶವನ್ನು ಅವರು ಸೂಕ್ಷ್ಮವಾಗಿ ಅವಲೋಕಿಸದರು. ಆಗ ಗೊತ್ತಾಯಿತು- ಇದು ಹೃದಯದ ಗಾತ್ರದ ಅಥವಾ ಇತರ ಸಮಸ್ಯೆಯಲ್ಲ. ಹೃದಯದಿಂದ ಪ್ರತಿ ಕ್ಷಣವೂ ಬಿಡುಗಡೆಯಾಗುವ ವಿದ್ಯುತ್ ತರಂಗಗಳದ್ದು ಮತ್ತು ಕ್ಯು-ಟಿ ಇಂಟರ್ವಲ್  ದೀರ್ಘವಾಗಿರುವುದರಿಂದ ಎಂದು. ವಿದ್ಯುತ್ ತರಂಗಗಳು ನಿಯಮಿತವಾಗಿದ್ದರಷ್ಟೇ ಹೃದಯ ಬಡಿತ ಮತ್ತು ರಕ್ತವನ್ನು ಪಂಪ್ ಮಾಡಿ ದೇಹದ ಪ್ರತಿಯೊಂದು ಭಾಗಕ್ಕೂ ಸರಬರಾಜು ಮಾಡುವ ವ್ಯವಸ್ಥೆ ಸಹಜ ಸ್ಥಿತಿಯಲ್ಲಿ ಇರುತ್ತದೆ. ಇಸಿಜಿ ಪರೀಕ್ಷೆ ನಡೆಸುವಾಗ ಈ ವಿದ್ಯುತ್ ತರಂಗಗಳನ್ನೇ ಅವಲೋಕಿಸಲಾಗುತ್ತದೆ. ಇಸಿಜಿ ಪರೀಕ್ಷೆ ನಡೆಸಿದಾಗ ಸಿಗುವ `ಪಿ', `ಕ್ಯು', `ಆರ್', `ಎಸ್', `ಟಿ' ಎಂಬ ತರಂಗಗಳ ಪೈಕಿ `ಕ್ಯು' ತರಂಗದ ಆರಂಭದಿಂದ `ಟಿ' ತರಂಗ ಕೊನೆಗೊಳ್ಳುವವರೆಗಿನ ಅವಧಿಯೇ `ಕ್ಯು-ಟಿ ಇಂಟರ್ವಲ್'. ಸಾಮಾನ್ಯವಾಗಿ ಹೃದಯ ಬಡಿತ ಹೆಚ್ಚಾದಾಗ ಕ್ಯು-ಟಿ ಇಂಟರ್ವಲ್ ಕಡಿಮೆಯಾಗಬೇಕು. ಇದೇನೂ ಹಠಾತ್ ಆಗುವಂಥ ಸ್ಪಂದನವಲ್ಲ. ಆದರೆ ಸಡನ್ ಡೆತ್ ಸಿಂಡ್ರೋಮ್ ಇರುವಂಥ ವ್ಯಕ್ತಿಗಳಲ್ಲಿ ಈ ಅವಧಿ ದೀರ್ಘವಾಗಿರುತ್ತದೆ. ಇದುವೇ ಲಾಂಗ್ ಕ್ಯು-ಟಿ ಸಿಂಡ್ರೋಮ್(ಎಲ್.ಕ್ಯು.ಟಿ.ಎಸ್.). ಈ ಕ್ಯು-ಟಿ ಇಂಟರ್ವಲ್ ದೀರ್ಘವಾಗಿರುವುದೇ ಹಠಾತ್ ಸಾವಿಗೆ ಕಾರಣವಾಗಿರುತ್ತದೆ. ಜಗತ್ತಿನಲ್ಲಿ ಶೇ.20ರಷ್ಟು ಮಂದಿಗೆ ಈ ಸಮಸ್ಯೆ ಇರುತ್ತದೆ. ಇವರ ಪೈಕಿ ಕ್ರೀಡಾಳುಗಳ ಸಂಖ್ಯೆಯೇ ಅಧಿಕ. 
ಡಾ.ವಿಸ್ಕಿನ್ ಅವರು ಒಂದಷ್ಟು ಜನ ಸಾಮಾನ್ಯ ಆರೋಗ್ಯ ಸ್ಥಿತಿ ಹೊಂದಿರುವ ವ್ಯಕ್ತಿಗಳು, ಇನ್ನೊಂದಷ್ಟು ಜನ ಎಲ್.ಕ್ಯು.ಟಿ.ಎಸ್. ಹೊಂದಿರುವ ವ್ಯಕ್ತಿಗಳನ್ನು ಆಯ್ದುಕೊಂಡರು. ಬಳಿಕ ಅವರನ್ನು 100 ಮೀ. ಓಟಗಾರ ಓಟದ ಮೊದಲು ಮೊಣಕಾಲೂರಿ ಕೂರುವ ಶೈಲಿಯಲ್ಲಿ ಕೂರಿಸಿ ಓಟಗಾರ ಓಡಲು ಮೇಲೇಳುವ ರೀತಿಯಲ್ಲಿ ಕ್ಷಿಪ್ರವಾಗಿ ಮೇಲೇಳುವಂತೆ ಸೂಚಿಸಿದರು. ಈ ಅವಧಿಯಲ್ಲೇ ಇಸಿಜಿಯನ್ನೂ ದಾಖಲಿಸಿಕೊಂಡರು. ವಿವಿಧ ಸಮಯಾವಧಿಯಲ್ಲಿ ಕ್ಯು-ಟಿ ಇಂಟರ್ವಲ್ಲನ್ನು ಅಭ್ಯಸಿಸಿದರು. ಸಾಮಾನ್ಯ ವ್ಯಕ್ತಿಯ ಮತ್ತು ಎಲ್.ಕ್ಯು.ಟಿ.ಎಸ್. ಹೊಂದಿರುವ ವ್ಯಕ್ತಿಯ ಹೃದಯ ಬಡಿತ ಎಲ್ಲಾ ಸಮಯಾವಧಿಯಲ್ಲೂ ಒಂದೇ ರೀತಿ ಇತ್ತು. ಆದರೆ ಕ್ಯು-ಟಿ ಇಂಟರ್ವಲ್ ಮಾತ್ರ ಎಲ್.ಕ್ಯು.ಟಿ.ಎಸ್. ಹೊಂದಿರುವ ವ್ಯಕ್ತಿಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಅಧಿಕವಾಗಿತ್ತು.

ಪರಿಹಾರ ಸುಲಭ
ಈ ಫಲಿತಾಂಶಗಳನ್ನು ಅಭ್ಯಸಿಸಿದ ಡಾ.ವಿಸ್ಕಿನ್ ಒಂದಷ್ಟು ಜನ ಕ್ರೀಡಾಳುಗಳನ್ನು ಪರೀಕ್ಷೆಗೆ ಒಳಪಡಿಸಿದರು. ಅವರಲ್ಲಿ ಕೆಲವರಿಗೆ ಈ ಸಮಸ್ಯೆ ಇರುವುದು ತಿಳಿದುಬಂತು. ಕ್ರೀಡಾಳುಗಳು ಹೆಚ್ಚು ಶ್ರಮವಹಿಸಿ ಆಡುವಾಗ, ಹೆಚ್ಚು ಕಾಲ ಓಡುತ್ತಲೇ ಇರುವಾಗ ಹೃದಯ ಬಡಿತ ಏರುತ್ತದೆ ಮತ್ತು ಆ ಸಮಯದಲ್ಲಿ ದೇಹದ ಎಲ್ಲಾ ಭಾಗಗಳಿಗೂ ರಕ್ತ ಸರಬರಾಜು ಸುಗಮವಾಗಿ ಆಗಬೇಕು ಎಂದಾದರೆ ಹೃದಯ ಆ ಸಮಯಕ್ಕೆ ತಕ್ಕ ಪ್ರಮಾಣದಲ್ಲಿ ರಕ್ತವನ್ನು ಪಂಪ್ ಮಾಡಬೇಕು ಮತ್ತು ಅಷ್ಟೇ ವೇಗದಲ್ಲಿ ಅದು ದೇಹದ ಮುಖ್ಯ ಭಾಗಗಳನ್ನು ಸೇರಬೇಕು. ಇದಕ್ಕೆ ನೆರವಾಗುವುದು ಹೃದಯದಲ್ಲಿ ಉತ್ಪತ್ತಿಯಾಗುವ ವಿದ್ಯುತ್ ತರಂಗಗಳು. ಈ ತರಂಗಗಳು ತಮ್ಮ ಗಮ್ಯವನ್ನು ನಿಧಾನಗತಿಯಲ್ಲಿ ಸೇರಿದವೋ ಆ ವ್ಯಕ್ತಿಯ ದೇಹದ ಎಲ್ಲಾ ಭಾಗಗಳಿಗೂ ಸೂಕ್ತ ಸಮಯದಲ್ಲಿ ರಕ್ತ ಸಂಚಾರ ಆಗುವುದಿಲ್ಲ. ಇದರಿಂದಾಗಿ ಹೃದಯಾಘಾತ ಸಂಭವಿಸಿ ಆತ ಸಾವಿಗೀಡಾಗುತ್ತಾನೆ. ಈ ಸಮಸ್ಯೆ ವಂಶಪಾರಂಪರ್ಯವಾಗಿಯೂ ಬರುತ್ತದೆ. ಸಾಮಾನ್ಯ ವ್ಯಕ್ತಿಗಳಲ್ಲಿ ಈ ಸಮಸ್ಯೆಯಿಂದ ಹಠಾತ್ ಸಾವೇನೂ ಬರಲೇಬೇಕೆಂದಿಲ್ಲ. ಆದರೆ ಕ್ರೀಡಾಳುಗಳು ಹೆಚ್ಚು ಶ್ರಮವಹಿಸುವುದರಿಂದ ಅವರ ಹೃದಯಬಡಿತ, ಅಂಗಾಂಗಳ ಕ್ರಿಯೆಯೂ ಅಷ್ಟೇ ವೇಗದಲ್ಲಿರುವುದರಿಂದ ಎಲ್ಲವೂ ಹಠಾತ್ ಸಂಭವಿಸುತ್ತವೆ.

ಇಷ್ಟನ್ನು ಅರ್ಥ ಮಾಡಿಸಿದ್ದಾರೆ ಡಾ.ವಿಸ್ಕಿನ್. ಇನ್ನು ಚಿಕಿತ್ಸೆಯೇನು ಕಷ್ಟ? ಹೃದಯದಲ್ಲಿ ವಿದ್ಯುತ್ ತರಂಗಗಳು ಸಮರ್ಪಕವಾಗಿ ಉತ್ಪತ್ತಿಯಾಗಲು ನೆರವಾಗುವ ಚಿಕಿತ್ಸೆ ಈಗಾಗಲೇ ಬಳಕೆಯಲ್ಲಿದೆ. ಹೀಗಾಗಿ ಸಾವಿರಾರು ಕ್ರೀಡಾಳುಗಳು ಹಠಾತ್ ಸಾವಿಗೆ ಒಳಗಾಗುವುದನ್ನು ತಡೆಗಟ್ಟಬಹುದು. ಡಾ.ವಿಸ್ಕಿನ್ ಅವರ ಸಂಶೋಧನೆ ಮುಖ್ಯವಾಗಿ ಅಥ್ಲೀಟ್ ಗಳು ಮತ್ತು ಫೂಟ್ಬಾಲ್ ಆಟಗಾರರ ಹೃದಯಬಡಿತವನ್ನು ಸಹಜ ಸ್ಥಿತಿಗೆ ತಂದಿರುವುದಂತೂ ಖಂಡಿತ. 

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು