ನದಿ ಶುದ್ಧೀಕರಣಕ್ಕೆ ಬಾಳೆಹಣ್ಣಿನ ಸಿಪ್ಪೆ!

ಬಾಳೆಹಣ್ಣಿನಿಂದ ವೈನ್ ತಯಾರಿಸಲಾಗುತ್ತಿದೆ. ಚರ್ಮದ ಮೇಲಿನ ಕಲೆಗಳನ್ನು ನಿವಾರಿಸಲು ಬಳಸಲಾಗುತ್ತಿದೆ. ಬೂಟ್ಗಳನ್ನು ಪಾಲಿಶ್ ಮಾಡುವುದಕ್ಕೆ, ಬೆಳ್ಳಿಯ ಹೊಳಪನ್ನು ಹೆಚ್ಚಿಸುವುದಕ್ಕೆ ಕೂಡಾ ಬಳಕೆಯಾಗುತ್ತಿದೆ. ಇಷ್ಟಕ್ಕೇ ಮುಗಿಯುತ್ತದೆಯೇ? ಧೂಮಪಾನ ಸೇವನೆಯ ಚಟ ಇರುವವರನ್ನು ಆ ಚಟದಿಂದ ತಪ್ಪಿಸುವ ಸಲುವಾಗಿ ಬಾಳೆಹಣ್ಣಿನ ಸಿಪ್ಪೆಯ ನಾರುಗಳನ್ನು ಒಣಗಿಸಿ ಪುಡಿ ಮಾಡಿ ಸೇವಿಸುವುದಕ್ಕೆ ಕೊಡಲಾಗುತ್ತದೆ. ಇದರಿಂದಾಗಿ ಧೂಮಪಾನಿ ನಿಧಾನಕ್ಕೆ ತನ್ನ ಚಟವನ್ನು ಕಡಿಮೆ ಮಾಡಿಕೊಳ್ಳುತ್ತಾ ಬರುತ್ತಾನೆ. ಇಷ್ಟೊಂದು ವಿಧದಲ್ಲಿ ಬಳಕೆಯಾಗುತ್ತಿರುವ ಬಾಳೆಹಣ್ಣು ಇದೀಗ ನದಿ ನೀರಿನ ಶುದ್ಧಿಗೂ ಉಪಕಾರಿ.

ಜೀವಜಲ ಜೀವವನ್ನೇ ಹರಣ ಮಾಡುವ ಮಟ್ಟಕ್ಕೆ ಬಂದಿದೆ. `ಪುಣ್ಯರಾಶಿಯನ್ನೇ ಮೈದುಂಬಿಕೊಂಡಿವೆ' ಎಂದು ವರ್ಣಿಸಲ್ಪಡುತ್ತಿದ್ದ ನದಿಗಳಲ್ಲಿ ಈಗ ಹರಿಯುವುದು ಬರೀ ಪಾಪ ರಾಶಿ, ಅರ್ಥಾತ್  ತ್ಯಾಜ್ಯ ನೀರು. ಈ ನದಿಗಳನ್ನು ಹೇಗಾದರೂ ಶುಚಿಗೊಳಿಸಬೇಕು ಅಂತ ಜಗತ್ತಿನ ವಿವಿಧ ಸರ್ಕಾರಗಳು ಕೋಟಿಗಟ್ಟಲೆ ಖರ್ಚು ಮಾಡುತ್ತಿವೆ. ನದಿಗಳು ಮಾತ್ರ ಶುದ್ಧವಾಗುತ್ತಿಲ್ಲ! ಘನತ್ಯಾಜ್ಯಗಳನ್ನು ನದಿ ನೀರಿಗೆ ಬಿಡುವ ಚಾಳಿಯನ್ನು ಜನರು, ಕೈಗಾರಿಕೆಗಳು ನಿಲ್ಲಿಸುತ್ತಿಲ್ಲ, ಆ ತ್ಯಾಜ್ಯಗಳು ನದಿ ನೀರಿನಿಂದ ಪ್ರತ್ಯೇಕಗೊಳ್ಳುತ್ತಲೂ ಇಲ್ಲ. ಘನತ್ಯಾಜ್ಯಗಳನ್ನು ಪ್ರತ್ಯೇಕಿಸುವುದಕ್ಕೂ ಅಧಿಕ ವೆಚ್ಚವಾಗುತ್ತದೆ. ಇಂತಿರುವಾಗ ನದಿನೀರಿನಿಂದ ಘನತ್ಯಾಜ್ಯಗಳನ್ನು ಪ್ರತ್ಯೇಕಿಸುವ ಅಗ್ಗದ ಮತ್ತು ಸಮರ್ಥ ತಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರ ವಿಜ್ಞಾನಿಗಳಿಗೆ ಹೊಳೆದದ್ದು ಬಾಳೆಹಣ್ಣಿನ ಸಿಪ್ಪೆಯಲ್ಲಿ!
    ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿದರೆ ನದಿನೀರಿನಲ್ಲಿರುವ ಘನತ್ಯಾಜ್ಯಗಳನ್ನು ಪ್ರತ್ಯೇಕಿಸುವುದು ಸುಲಭ ಎಂಬ ಹೊಳಹು ಮೂಡಿದ್ದು ಬ್ರೆಜಿಲ್ನ ಬಯೋಸೈನ್ಸ್ ಸಂಸ್ಥೆಯ ವಿಜ್ಞಾನಿಗಳಲ್ಲಿ. ಒಂದು ಮಾತಿದೆ- `ಹಿತ್ತಲಲ್ಲಿ ಕಾಣುವ ಗಿಡಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತವೆ'. ಇನ್ನು ಬಾಳೆಹಣ್ಣಿನ ಮಹತ್ವದ ಬಗ್ಗೆ ಹೇಳೋದಕ್ಕೆ ಹೊರಟರೆ ಅದು ಮುಗಿಯುವುದೇ ಕಷ್ಟವೇನೋ! ಆಯುರ್ವೇದದಲ್ಲಿ ಬಾಳೆಹಣ್ಣನ್ನು ವಿವಿಧ ರೀತಿಯಲ್ಲಿ ಔಷಧೀಯ ಉಪಯೋಗಗಳಿಗೆ ಬಳಸಲಾಗಿದೆ. ಆದರೆ ವೈಜ್ಞಾನಿಕವಾಗಿ ಇದರ ಸಂಶೋಧನೆ ನಡೆದಿರಲಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನವೂ ನಡೆದಿರಲಿಲ್ಲ. ಆದರೆ, ಇತ್ತೀಚೆಗೆ ಭಾರತೀಯ ಸಂಸ್ಕೃತಿಯಲ್ಲಿ ಬಳಕೆಯಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳ ಸದುಪಯೋಗಗಳು ವಿದೇಶೀಯರ ಕಣ್ಣಿಗೆ ಬೀಳಲಾರಂಭಿಸಿದೆ. ಇದರಿಂದಾಗಿ ಈ ನಿಟ್ಟಿನಲ್ಲಿ ಕೆಲವೊಂದು ಸಂಶೋಧನೆಗಳು ನಡೆದಿವೆ. ಮುಖ್ಯವಾಗಿ ಬಾಳೆಹಣ್ಣಿನ ವಿಚಾರದಲ್ಲಿ ಆಶ್ಚರ್ಯಕರ ಅನ್ನಿಸಬಹುದಾದಂಥ ಮತ್ತು ಜಗತ್ತಿಗೆ ಉಪಕಾರಿಯಾಗುವಂಥ ಕೆಲವೊಂದು ಸಂಶೋಧನೆಗಳು ನಡೆದಿವೆ. ಇಂಥದ್ದೇ ಒಂದು ಪ್ರಯೋಗ ಈಗ ಬ್ರೆಜಿಲ್ನಲ್ಲಿ ನಡೆದಿದ್ದು, ನದಿ ನೀರನ್ನು ಶುದ್ಧಗೊಳಿಸುವಂಥ ಪ್ರಕ್ರಿಯೆಗೆ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿಕೊಳ್ಳುವಂಥ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
    ಈಗಾಗಲೇ ವಿವಿಧ ರೀತಿಯಲ್ಲಿ ಪ್ರಯೋಗಗಳಿಗೆ ಒಳಗಾಗಿರುವಂಥದ್ದು ಬಾಳೆಹಣ್ಣು. ಆಂದರೆ, ಬಾಳೆಹಣ್ಣಿನಿಂದ ವೈನ್ ತಯಾರಿಸಲಾಗುತ್ತಿದೆ. ಚರ್ಮದ ಮೇಲಿನ ಕಲೆಗಳನ್ನು ನಿವಾರಿಸಲು ಬಳಸಲಾಗುತ್ತಿದೆ. ಬೂಟ್ಗಳನ್ನು ಪಾಲಿಶ್ ಮಾಡುವುದಕ್ಕೆ, ಬೆಳ್ಳಿಯ ಹೊಳಪನ್ನು ಹೆಚ್ಚಿಸುವುದಕ್ಕೆ ಕೂಡಾ ಬಳಕೆಯಾಗುತ್ತಿದೆ. ಇಷ್ಟಕ್ಕೇ ಮುಗಿಯುತ್ತದೆಯೇ? ಧೂಮಪಾನ ಸೇವನೆಯ ಚಟ ಇರುವವರನ್ನು ಆ ಚಟದಿಂದ ತಪ್ಪಿಸುವ ಸಲುವಾಗಿ ಬಾಳೆಹಣ್ಣಿನ ಸಿಪ್ಪೆಯ ನಾರುಗಳನ್ನು ಒಣಗಿಸಿ ಪುಡಿ ಮಾಡಿ ಸೇವಿಸುವುದಕ್ಕೆ ಕೊಡಲಾಗುತ್ತದೆ. ಇದರಿಂದಾಗಿ ಧೂಮಪಾನಿ ನಿಧಾನಕ್ಕೆ ತನ್ನ ಚಟವನ್ನು ಕಡಿಮೆ ಮಾಡಿಕೊಳ್ಳುತ್ತಾ ಬರುತ್ತಾನೆ. 
ನದಿ ನೀರಿನ ಶುದ್ಧಿಗೆ...
ಇಷ್ಟೊಂದು ವಿಧದಲ್ಲಿ ಬಳಕೆಯಾಗುತ್ತಿರುವ ಬಾಳೆಹಣ್ಣು ಇದೀಗ ನದಿ ನೀರಿನ ಶುದ್ಧಿಗೂ ಉಪಕಾರಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಬ್ರೆಜಿಲ್ನ ಬಯೋಸೈನ್ಸ್ ಸಂಸ್ಥೆಯ ವಿಜ್ಞಾನಿಗಳು. ಕೃಷಿಯಿಂದ ಮತ್ತು ಕೈಗಾರಿಕೆಗಳಿಂದ ಹೆಚ್ಚಾಗಿ ಘನತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ಇಂಥ ತ್ಯಾಜ್ಯಗಳು ಸೇರುವುದು ನದಿಯನ್ನು. ತ್ಯಾಜ್ಯಗಳಿಂದಲೇ ಕೂಡಿರುವ ನದಿಯ ನೀರನ್ನೇ ಆಶ್ರಯಿಸಿರುವ ಲಕ್ಷಾಂತರ ಜನರು ಪ್ರಪಂಚದಲ್ಲಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಅದೇ ನೀರನ್ನು ಸೇವಿಸುತ್ತಾ ಬದುಕು ಸವೆಸುತ್ತಿರುವ ಜನ ಅವರು. ಆದರೆ, ಇಂಥ ನೀರು ಸೇವನೆಯಿಂದಾಗಿ ವಾಂತಿ, ಕಾಲರಾ, ಫ್ಲೂ, ಶ್ವಾಸಕೋಶದ ಸಮಸ್ಯೆ, ಕಿಡ್ನಿ, ಮೆದುಳಿನ ಸಮಸ್ಯೆ ಮತ್ತಿತರ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣವಾಗಿರುವುದು ನದಿ ನೀರಿಗೆ ಸೇರಿದ ಲೋಹ ತ್ಯಾಜ್ಯಗಳು. ಇಂಥ ಘನತ್ಯಾಜ್ಯಗಳನ್ನು ನದಿ ನೀರಿನಿಂದ ಪ್ರತ್ಯೇಕಿಸುವ ಸಲುವಾಗಿ ಈಗಾಗಲೇ ವಿವಿಧ ತಂತ್ರಗಳನ್ನು ಬಳಸಲಾಗುತ್ತಿದೆ. ಆದರೆ ಈ ಎಲ್ಲ ವಿಧಾನಗಳು ಒಂದೋ ದುಬಾರಿಯಾಗಿವೆ ಇಲ್ಲ ಅಂದರೆ ತ್ಯಾಜ್ಯಗಳನ್ನು ಸಮರ್ಪಕವಾಗಿ ಪ್ರತ್ಯೇಕಿಸುವಲ್ಲಿ ವಿಫಲವಾಗುತ್ತಿವೆ. ಇದು ಮಾತ್ರವಲ್ಲ ಇನ್ನೂ ಕೆಲವೊಂದು ನೈಸರ್ಗಿಕ ವಸ್ತುಗಳನ್ನು ಅಂದರೆ ತೆಂಗಿನ ನಾರು, ಕಡ್ಲೆ ಸಿಪ್ಪೆ ಮೊದಲಾದವುಗಳನ್ನು ಬಳಸಿ ಘನತ್ಯಾಜ್ಯಗಳನ್ನು ಪ್ರತ್ಯೇಕಿಸಲಾಗುತ್ತದೆಯೇ ಎಂದು ಪರೀಕ್ಷೆ ನಡೆಸಲಾಗಿತ್ತು. ಈ ವಿಧಾನಗಳು ಅಗ್ಗವೇನೋ ಆಗಿದ್ದವು ನಿಜ, ಸಮರ್ಥವಾಗಿರಲಿಲ್ಲ. ಹೀಗಾಗಿ ಇದಕ್ಕೊಂದು ಅತ್ಯುತ್ತಮ ಮತ್ತು ಅಗ್ಗದ ವಿಧಾನದ ಅನ್ವೇಷಣೆಯಲ್ಲಿತ್ತು ವೈಜ್ಞಾನಿಕ ಜಗತ್ತು. ಈ ಅಗತ್ಯವನ್ನು ಪೂರೈಸಬಲ್ಲ ಒಂದು ವಿಧಾನವೇ ಬಾಳೆಹಣ್ಣಿನ ಸಿಪ್ಪೆಯ ಬಳಕೆ.
    ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ತುಣುಕುಗಳನ್ನಾಗಿ ಮಾಡಿಯೋ ಅಥವಾ ಹಾಗೆಯೇ ಪೂರ್ಣವಾಗಿಯೋ ನದಿಗೆ ಹಾಕಲಾಗುತ್ತದೆ. ನದಿ ನೀರಿನಲ್ಲಿ ಸೇರುವ ಬಾಳೆಹಣ್ಣಿನ ಸಿಪ್ಪೆ ಘನತ್ಯಾಜ್ಯಗಳನ್ನು, ಮುಖ್ಯವಾಗಿ ಲೋಹಗಳನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಬಾಳೆಹಣ್ಣಿನ ಸಿಪ್ಪೆಯ ಜೊತೆ ಸೇರುವ ಲೋಹಗಳು ಒಂದೇ ಸ್ಥಳದಲ್ಲಿ ಶೇಖರವಾಗುತ್ತವೆ. ಈ ರೀತಿ ಶೇಖರಗೊಂಡ ತ್ಯಾಜ್ಯವನ್ನು ಸುಲಭವಾಗಿ ನದಿಯಿಂದ ಹೊರತೆಗೆಯಬಹುದು. ತ್ಯಾಜ್ಯಗಳ ಪೈಕಿ ಜೀವಿಗಳಿಗೆ ಅತ್ಯಧಿಕ ಮಾರಕವಾಗಿರುವ ಸತು (ಲೆಡ್) ಮತ್ತು ತಾಮ್ರ (ಕಾಪರ್)ದ ಅಂಶಗಳನ್ನು ಸುಲಭವಾಗಿ ನದಿ ನೀರಿನಿಂದ ಪ್ರತ್ಯೇಕಗೊಳಿಸಬಹುದಾಗಿದೆ. ತ್ಯಾಜ್ಯ ಪ್ರತ್ಯೇಕಿಸುವ ಇತರ ವಿಧಾನಗಳಿಂದ ಹೆಚ್ಚು ಪರಿಣಾಮಕಾರಿಯಾಗಿ ಬಾಳೆಹಣ್ಣಿನ ಸಿಪ್ಪೆ ತ್ಯಾಜ್ಯಗಳನ್ನು ಪ್ರತ್ಯೇಕಿಸುತ್ತದೆ.
11 ಪಟ್ಟು ಅಧಿಕ ಪರಿಣಾಮಕಾರಿ
ನದಿ ನೀರಿನ ಶುದ್ಧೀಕರಣಕ್ಕೆ ವಿಜ್ಞಾನಿಗಳು ಮತ್ತು ಪರಿಸರ ಪ್ರೇಮಿಗಳು ವಿವಿಧ ತಂತ್ರಗಳನ್ನು ಪ್ರಯೋಗ ಮಾಡಿ ನೋಡಿದರು. ಆದರೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಬಾಳೆಹಣ್ಣಿನ ಸಿಪ್ಪೆ ಬಳಸಿ ನದಿ ನೀರಿನ ಶುದ್ಧೀಕರಣ ಮಾಡಿದಾಗ 11 ಪಟ್ಟು ಅಧಿಕ ಫಲಿತಾಂಶ ಸಿಕ್ಕಿತು. ಬಾಳೆಹಣ್ಣಿನ ಸಿಪ್ಪೆಯಲ್ಲಿ ಶುದ್ಧೀಕರಣದ ಗುಣ ಇದೆ. ಈ ಗುಣವು ನೀರನ್ನು ತಕ್ಷಣ ಶುದ್ಧ ಮಾಡುತ್ತದೆ. ಮತ್ತು ಇಲ್ಲಿ ಯಾವುದೇ ರಾಸಾಯನಿಕಗಳ ಬಳಕೆ ಮಾಡದೇ ಇರುವ ಕಾರಣ ಶುದ್ಧೀಕರಣ ಸಂದರ್ಭದಲ್ಲಿ ಯಾವುದೇ ಅಪಾಯ ಎದುರಾಗುವುದಿಲ್ಲ ಅಥವಾ ನೀರಿನ ಶುದ್ಧೀಕರಣ ಪ್ರಕ್ರಿಯೆಯೇ ಮಾರಕವಾಗಿ ಪರಿಣಮಿಸುವುದಿಲ್ಲ.
    ನಮ್ಮ ಶಾಸ್ತ್ರಗಳು, ಪುರಾಣಗಳು, ವೇದ-ಉಪನಿಷತ್ತುಗಳಲ್ಲಿಯೂ ಬಾಳೆಹಣ್ಣಿಗೆ ವಿಶೇಷ ಸ್ಥಾನ ಕೊಡಲಾಗಿದೆ. ಯಾವುದೇ ಸಮಾರಂಭ ಇದ್ದರೂ ಅಲ್ಲಿ ಬಾಳೆಹಣ್ಣು ಇರಲೇಬೇಕು. ಅದಕ್ಕೆ ಬಹುಶಃ ಬಾಳೆಹಣ್ಣಿನ ಶುದ್ಧೀಕರಣದ ಗುಣ ಮತ್ತು ರೋಗನಿರೋಧಕ ಗುಣಗಳೇ ಕಾರಣವಿರಬೇಕು. ಬಾಳೆಹಣ್ಣಿನ ಸಿಪ್ಪೆಯನ್ನೂ ತಿಂದರೆ (ಸಿಪ್ಪೆಯಲ್ಲಿ ಯಾವುದೇ ದೋಷಗಳು ಇಲ್ಲವಾದಲ್ಲಿ) ಉತ್ತಮ ಎನ್ನುತ್ತದೆ ನ್ಯಾಚುರೋಪತಿ ಚಿಕಿತ್ಸಾ ಪದ್ಧತಿ. ಹಲವಾರು  ಔಷಧೀಯ ಗುಣಗಳು ಬಾಳೆಹಣ್ಣಿನಲ್ಲಿವೆ ಎನ್ನುವ ಆಯುರ್ವೇದ ವೈದ್ಯ ಪದ್ಧತಿ ಹಲವು ರೋಗಗಳ ಚಿಕಿತ್ಸೆಗೆ ಬಾಳೆಹಣ್ಣಿನ ಸತ್ವವನ್ನೂ ಬಳಸಿಕೊಂಡಿದೆ. ನಮ್ಮ ಅಕ್ಕ ಪಕ್ಕದಲ್ಲೇ ಇರುವ ಗಿಡ, ಮರ, ಬಳ್ಳಿಗಳು ಯಾವೆಲ್ಲ ರೀತಿಯಲ್ಲಿ ಉಪಯೋಗಕ್ಕೆ ಬರುತ್ತವೆ ಎಂಬ ಬಗ್ಗೆ ಭಾರತದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ. ಈಗಾಗಲೇ ಕೇರಳದಲ್ಲಿ ಈ ನಿಟ್ಟಿನಲ್ಲಿ ಜಾಗೃತಿ ಮೂಡುತ್ತಿದೆ. ಅಲ್ಲಿನ ಆಯುರ್ವೇದ ತಜ್ಞರು ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಆದರೆ ಈಗ ಅಳಿದು ಹೋಗಿರುವ ಮತ್ತು ಅಳಿದು ಹೋಗುತ್ತಿರುವ ಮೂಲಿಕೆಗಳನ್ನು ಮತ್ತು ಅವುಗಳ ಎಲ್ಲಾ ರೀತಿಯ ಉಪಯೋಗಗಳನ್ನು ಕಲೆಹಾಕಿ ಅದರಿಂದ ಆಯುರ್ವೇದ ಚಿಕಿತ್ಸಾ ಕ್ರಮವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇಂಥ ಮೂಲಿಕೆಗಳ ಮತ್ತು ಇತರೆ ಸಸ್ಯ ಸಂಪತ್ತಿನ ಇನ್ನಿತರ ವೈಜ್ಞಾನಿಕ ಉಪಯೋಗಗಳ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿಲ್ಲ. ಮಾತ್ರವಲ್ಲ ಚಿಕಿತ್ಸೆಗೆ ಅಗತ್ಯವಿರುವ ಮೂಲಿಕೆಗಳಿರಬಹುದು ಅಥವಾ ಸಸ್ಯಗಳ ಇತರೆ ಉಪಯೋಗಗಳ ವಿಚಾರ ಇರಬಹುದು ಆ ನಿಟ್ಟಿನಲ್ಲಿ ನಡೆಯುವ ಸಂಶೋಧನೆಗಳಿಗೆ ಸರ್ಕಾರದಿಂದ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ. ನಮ್ಮಲ್ಲೇ ಇರುವಂಥ ಸಂಪನ್ಮೂಲಗಳ ಬಗ್ಗೆ ದೇಶದೆಲ್ಲೆಡೆ ಜಾಗೃತಿ ಮೂಡಿಸಬೇಕಾದ ತುರ್ತು ಅಗತ್ಯವಿದೆ.

Comments

  1. ಬಹಳ ದಿನಗಳಿಂದ ನೆಟ್ ಕಡೆ ಬಂದಿರಲಿಲ್ಲ... ನಿನ್ನೆ ಮೊನ್ನೆ ಬಂದಾಗ ತಕ್ಷಣ ನನ್ನ ಗಮನ ಹರಿದದ್ದು ನಿಮ್ಮ ಬರಹಗಳ ಕಡೆಗೆ.. ಕಬ್ಬಿಣದ ಕಡಲೆ ಎಂದೇ ಪರಿಗಣಿಸಲಾಗುವ ವಿಜ್ಞಾನದ ವಿಚಾರಗಳನ್ನು ಸರಳವಾಗಿ ಬಿಡಿಸಿಡುವ ನಿಮ್ಮ ಚಾತುರ್ಯ ತುಂಬಾ ಹಿಡಿಸಿತು. ನೀವು ಇನ್ನಷ್ಟು ಗಮನವಿಟ್ಟು ಬರೆಯುತ್ತಾ ಹೋದಲ್ಲಿ ನಮ್ಮಲ್ಲಿಯ ವಿಜ್ಞಾನ ವಿಷಯಗಳ ಬರಹಗಾರರ ಕೊರತೆಯನ್ನು ಸಮರ್ಥವಾಗಿ ನೀಗಿಸಬಲ್ಲಿರಿ ಎಂಬುದು ನನ್ನ ಅಭಿಪ್ರಾಯ.. ನಿಮಗೆ ಶುಭವಾಗಲಿ..
    ನಲ್ಮೆಯಿಂದ,
    ಶಮ, ನಂದಿಬೆಟ್ಟ

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು