ಅಳಿವ ಜೀವಿಗೆ ಕಾಂಡಕೋಶದ ರಕ್ಷೆ?


ವಿನಾಶದ ಅಂಚಿಗೆ ಬಂದಿರುವಂಥ ಜೀವಿಗಳ ರಕ್ಷಣೆ ಸಾಧ್ಯವೇ ಇಲ್ಲವೇನೋ ಎಂದು ಆತಂಕಕ್ಕೊಳಗಾಗಿರುವಂಥ ಈ ಕಾಲಘಟ್ಟದಲ್ಲಿ ವೈಜ್ಞಾನಿಕ ತಂತ್ರಜ್ಞಾನವೊಂದು ಭರವಸೆಯ ಬೆಳಕನ್ನು ಹೊಮ್ಮಿಸಿದೆ. ಅದು ಕಾಂಡಕೋಶ ತಂತ್ರಜ್ಞಾನ. ಆದರೆ ಈ ರೀತಿ ಜೀವಿಗಳು ಸೃಷ್ಟಿಯಾಗಿ ಅವುಗಳ ಸಂಖ್ಯೆ ಹೆಚ್ಚಾದರೆ ವಾಸಿಸುವುದೆಲ್ಲಿ? 

ಮಾನವನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಇದಕ್ಕೆ ತತ್ಸಮಾನವಾಗಿ ಇತರ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ತನ್ನ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಇತರ ಜೀವಿಗಳಿಗೂ ಈ ಭೂಮಿಯ ಮೇಲೆ ಹಕ್ಕಿದೆ ಎಂಬುದನ್ನು ಆತ ನಿರ್ಲಕ್ಷಿಸುತ್ತಿದ್ದಾನೆ. ಪರಿಣಾಮ ಹಲವಾರು ಜೀವಿಗಳು ಇಂದು ಕಣ್ಮರೆಯಾಗಿವೆ. ಇನ್ನೂ ಉನವಾರು ಪ್ರಭೇದದ ಜೀವಿಗಳು ಅದೇ ಹಾದಿಯಲ್ಲಿ ಸಾಗುತ್ತಿವೆ. ಅಳಿವಿನ ಅಂಚಿಗೆ ಬಂದು ನಿಂತ ಪ್ರಾಣಿಗಳನ್ನು ರಕ್ಷಿಸಬೇಕು ಎಂಬ ಕುಗು ದಶದಿಕ್ಕುಗಳಲ್ಲೂ ಮಾರ್ದನಿಸುತ್ತಿದೆ. ರಕ್ಷಣೆಯ ಬಗ್ಗೆ ನಡೆದಿರುವಂಥ ಕಾರ್ಯಗಳು ಮಾತ್ರ ಬಹುತೇಕ ನಿಷ್ಪ್ರಯೋಜಕ!

ವಿನಾಶದ ಅಂಚಿಗೆ ಬಂದಿರುವಂಥ ಜೀವಿಗಳ ರಕ್ಷಣೆ ಸಾಧ್ಯವೇ ಇಲ್ಲವೇನೋ ಎಂದು ಆತಂಕಕ್ಕೊಳಗಾಗಿರುವಂಥ ಈ ಕಾಲಘಟ್ಟದಲ್ಲಿ ವೈಜ್ಞಾನಿಕ ತಂತ್ರಜ್ಞಾನವೊಂದು ಭರವಸೆಯ ಬೆಳಕನ್ನು ಹೊಮ್ಮಿಸಿದೆ. ಅದು ಕಾಂಡಕೋಶ ತಂತ್ರಜ್ಞಾನ. ಪ್ರತಿಯೊಂದು ಜೀವಿಗಳ ಜೀವಕೋಶಗಳಿಗೂ ಮೂಲಕೋಶಗಳಾಗಿರುವುದು ಕಾಂಡಕೋಶ. ಇಂಥ ಕಾಂಡಕೋಶಗಳನ್ನು ಪಡೆದು ಮಾನವನ ಹಲವಾರು ಸಮಸ್ಯೆಗಳನ್ನು ನಿವಾರಿಸುವಲ್ಲಿ ವೈಜ್ಞಾನಿಕ ಜಗತ್ತು ಈಗಾಗಲೇ ಯಶಸ್ವಿಯಾಗಿದೆ. ಕಾಂಡಕೋಶಗಳಿಂದಲೇ ಜೀವಿಗಳನ್ನು ಸೃಷ್ಟಿಸುವಂಥ ಕಾರ್ಯದಲ್ಲಿಯೂ ಯಶಸ್ಸು ಸಿಕ್ಕಿದೆ. ಸುಮಾರು 10,000 ವರ್ಷಗಳ ಹಿಂದೆ ಅಳಿದು ಹೋಗಿರುವಂಥ ತುಪ್ಪಟದ ಆನೆಯನ್ನು ಇದೇ ತಂತ್ರಜ್ಞಾನದಿಂದ ಮತ್ತೆ ಸೃಷ್ಟಿಸುವಂಥ ಪ್ರಯತ್ನವನ್ನು ಜಪಾನಿನ ವಿಜ್ಞಾನಿಗಳು ಮಾಡುತ್ತಿದ್ದಾರೆ. ಅಳಿದು ಹೋಗಿರುವ ಜೀವಿಗಳ ಕಥೆ ಒತ್ತಟ್ಟಿಗಿರಲಿ, ಪ್ರಸ್ತುತ ವಿನಾಶದ ಅಂಚಿನಲ್ಲಿರುವ ಜೀವಿಗಳನ್ನು ಈ ತಂತ್ರಜ್ಞಾನದ ಮೂಲಕ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾದರೆ?

ಇಂಥದ್ದೊಂದು ಪ್ರಯತ್ನವನ್ನು ಮಾಡುತ್ತಿದ್ದಾರೆ ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳು. ಅಳಿವಿನ ಅಂಚಿನಲ್ಲಿರುವಂಥ 800ಕ್ಕೂ ಅಧಿಕ ಜೀವಿಗಳ ಕಾಂಡಕೋಶವನ್ನು ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದು, ಈ ಕಾಂಡಕೋಶಗಳನ್ನು ಮೂಲವಸ್ತುವನ್ನಾಗಿಟ್ಟುಕೊಂಡು ಅದೇ ಪ್ರಭೇದದ ಜೀವಿಗಳನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರ ಜೊತೆಗೆ ಅಳಿವಿನಂಚಿನಲ್ಲಿರುವ ಜೀವಿಗಳ ಆರೋಗ್ಯದಲ್ಲಿ ಇರಬಹುದಾದಂಥ ಸಮಸ್ಯೆಗಳನ್ನು ಮತ್ತು ಅವುಗಳಲ್ಲಿ ವಂಶೋತ್ಪತ್ತಿ ಕೊರತೆಯನ್ನು ನಿವಾರಿಸುವ ಸಲುವಾಗಿಯೂ ಈ ಕಾಂಡಕೋಶಗಳನ್ನು ಬಳಸಿಕೊಳ್ಳುವ ಪ್ರಯತ್ನ ಸಾಗಿದೆ. ಜೀವಿಗಳಲ್ಲಿರುವಂಥ ಸಮಸ್ಯೆಗಳನ್ನು ಮನಗಂಡು ಅವುಗಳಿಗೆ ಕಾಂಡಕೋಶದ ಚಿಕಿತ್ಸೆ ನೀಡುವುದು ವಿಜ್ಞಾನಿಗಳ ಯೋಚನೆ.

ಕಾಂಡಕೋಶಗಳಿಂದ ಭರವಸೆ
ಇದುವರೆಗೆ ಭ್ರೂಣದಿಂದಷ್ಟೇ ಕಾಂಡಕೋಶಗಳನ್ನು ಪಡೆಯುವ ಸಾಮಥ್ರ್ಯ ವೈಜ್ಞಾನಿಕ ಜಗತ್ತಿಗೆ ಇತ್ತು, ಇದೇ ಮೊದಲ ಬಾರಿಗೆ ಸಂಪೂರ್ಣ ಬೆಳವಣಿಗೆ ಹೊಂದಿದಂಥ ಜೀವಿಯಿಂದ ಕಾಂಡಕೋಶವನ್ನು ಪಡೆದು ವಿಜ್ಞಾನಿಗಳು ಮಹತ್ವದ ಸಾಧನೆ ಮಾಡಿದ್ದಾರೆ. ಅಳಿವಿನಂಚಿನಲ್ಲಿರುವ ಜೀವಿಗಳ ಪಾಲಿಗೆ ಇದೊಂದು ಕ್ರಾಂತಿ ಎಂದೇ ಹೇಳಬಹುದು. ಸಾಮಾನ್ಯವಾಗಿ ವಯಸ್ಕ ಜೀವಿಗಳಿಂದ ಕಾಂಡಕೋಶಗಳನ್ನು ಪಡೆಯುವುದು ಕಷ್ಟ. ಆದರೆ, ಇನ್ಡ್ಯೂಸ್ಡ್ ಪ್ಲೂರಿಪೊಟೆನ್ಸಿ ಎಂಬ ತಂತ್ರಜ್ಞಾನದ ಮೂಲಕ ವಯಸ್ಕ ಜೀವಿಗಳಿಂದ ಕಾಂಡಕೋಶವನ್ನು ಪಡೆಯುವಲ್ಲಿ ಸಫಲತೆ ಸಿಕ್ಕಿದೆ. ಅಂದರೆ ಸಾಮಾನ್ಯವಾಗಿ ವಯಸ್ಕ ಜೀವಿಗಳಲ್ಲಿರುವಂಥ ಕೋಶಗಳಿಗೆ ವಂಶವಾಹಿಗಳನ್ನು ಸೇರಿಸಿ ಜೀವಕೋಶಗಳಲ್ಲಿ ಪರಿವರ್ತನೆಯನ್ನು ಮಾಡಲಾಗುತ್ತದೆ. ಈ ಮೂಲಕ ಕಾಂಡಕೋಶ ಪಡೆಯಲಾಗಿದೆ. ಈ ತಂತ್ರಜ್ಞಾನಿದ ಮೂಲಕ ಅಳಿವಿನಂಚಿನಲ್ಲಿರುವ ಜೀವಿಗಳನ್ನು ಉಳಿಸಬಹುದು ಎಂಬ ಚಿಂತನೆ 2008ರಲ್ಲಿಯೇ ಮೊಳಕೆಯೊಡೆದಿತ್ತು. ಅಂದಿನಿಂದಲೇ ವಿಜ್ಞಾನಿಗಳು ತಮ್ಮ ಪ್ರಯತ್ನವನ್ನು ಅರಂಭಿಸಿದರು.

ಆರಂಭದಲ್ಲಿ ಮಂಗನ ಜಾತಿಗೆ ಸೇರಿದ ಮ್ಯಾಂಡ್ರಿಲಸ್ ಲ್ಯುಸೋಫಿಯಸ್ ಎಂಬ ಜೀವಿಯಿಂದ ಕಾಂಡಕೋಶಗಳನ್ನು ಪಡೆದರು. ಈ ಜೀವಿಗೂ ಮಾನವನಿಗೂ ನಿಕಟ ನಂಟು ಇರುವ ಕಾರಣವೇ ಇದನ್ನು ಮೊದಲ ಆಯ್ಕೆಯನ್ನಾಗಿ ಮಾಡಲಾಯಿತು. ತಮ್ಮ ಪ್ರಯೋಗಕ್ಕೆ ವಿಜ್ಞಾನಿಗಳು ಆಯ್ಕೆ ಮಾಡಿದ ಇನ್ನೊಂದು ಜೀವಿ ಉತ್ತರ ಧ್ರುವದ ಬಿಳಿ ರೈನೋಸೆರಸ್. ಭೂಮಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಅಪಾಯದಲ್ಲಿರುವ ಪ್ರಾಣಿಯಾದ ಕಾರಣ ಇದದನ್ನು ಆಯ್ಕೆ ಮಾಡಲಾಯಿತು. ಆರಂಭದಲ್ಲಿ ಈ ಪ್ರಾಣಿಗಳಿಗೆ ತೀರಾ ಹತ್ತಿರದಲ್ಲಿರುವ ಪ್ರಭೇದದ ಜೀವಿಗಳಲ್ಲಿ ವಂಶವಾಹಿಗಳನ್ನು ಸೇರಿಸುವ ಪ್ರಯತ್ನವನ್ನು ವಿಜ್ಞಾನಿಗಳು ಮಾಡಿದ್ದರು. ಯಶಸ್ಸು ಮಾತ್ರ ಸಿಕ್ಕಿರಲಿಲ್ಲ. ಆದರೆ ಈ ಎರಡೂ ಪ್ರಾಣಿಗಳ ವಂಶವಾಹಿಗಳನ್ನು ಮನುಷ್ಯನ ಜೀವಕೋಶಗಳೊಂದಿಗೆ ಸೇರಿಸಿದಾಗ ಅಚ್ಚರಿಯ ಫಲಿತಾಂಶ ಹೊರಬಿತ್ತು. ಒಂದಷ್ಟು ಕಾಂಡಕೋಶಗಳು ಉತ್ಪತ್ತಿಯಾಗಿದ್ದವು. ಕಾಂಡಕೋಶಗಳ ಪ್ರಮಾಣ ಕಡಿಮೆಯಾದರೂ ಅದು ವಿಜ್ಞಾನಿಗಳ ಪ್ರಯೋಗಕ್ಕೆ ಸಾಕಷ್ಟಿತ್ತು.

ಇದೇ ತಂತ್ರಜ್ಞಾನವನ್ನು ಇನ್ನೊಂದಷ್ಟು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು ಮ್ಯೂಸಿಯಂಗಳಲ್ಲಿ ಕೆಡದಂತೆ ಸಂರಕ್ಷಿಸಿ ಇಟ್ಟಿರುವಂಥ ಮೃತ ಜೀವಿಗಳ ಚರ್ಮದಿಂದ ಕಾಂಡಕೋಶಗಳನ್ನು ಪಡೆದು, ಈ ಕೋಶಗಳಿಂದ ವೀರ್ಯಾಣುಗಳನ್ನು ಪ್ರತ್ಯೇಕಿಸಿ, ಈ ವೀರ್ಯಾಣುಗಳನ್ನು ಕೃತಕ ಗರ್ಭಧಾರಣೆ ಮೂಲಕ ಪ್ರಸ್ತುತ ಅಸ್ತಿತ್ವದಲ್ಲಿರುವ ಜೀವಿಗಳ ದೇಹಕ್ಕೆ ಸೇರಿಸುವ ಮೂಲಕ ಅಳಿವಿನಂಚಿನಲ್ಲಿರುವ ಜೀವಿಯ ಮರಿಯನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಯಶಸ್ವಿಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಪ್ರಸ್ತುತ ಅಳಿವಿನಂಚಿನಲ್ಲಿರುವ ಜೀವಿಗಳಲ್ಲಿ ಬಹುತೇಕ ಜೀವಿಗಳು ವಂಶೋತ್ಪಾದನೆ ಮಾಡುತ್ತಿಲ್ಲ. ಅವುಗಳ ಆರೋಗ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳಿರುವುದು ಇದಕ್ಕೆ ಕಾರಣವಿರಬಹುದು. ಆದರೆ ಕಾಂಡಕೋಶಗಳಿಂದ ವೀರ್ಯಾಣುವನ್ನು ಪಡೆದು, ಕೃತಕ ಗರ್ಭಧಾರಣೆ ಮೂಲಕ ಸೃಷ್ಟಿಸುವಂಥ ಪೀಳಿಗೆಯ ಜೀವಿಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ. ಇವು ನಂತರ ಸ್ವತಃ ವಂಶೋತ್ಪಾದನೆ ಮಾಡುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಮಾನವನಲ್ಲಿ ಕಾಣಿಸಿಕೊಳ್ಳುವಂಥ ಸಂತಾನಹೀನತೆಯ ಸಮಸ್ಯೆ ನಿವಾರಿಸಲು ಕಾಂಡಕೋಶಗಳನ್ನು ಬಳಸಿಕೊಳ್ಳುವಂಥ ಪ್ರಯತ್ನಗಳು ಕೂಡಾ ನಡೆಯುತ್ತಿವೆ.

ವಾಸಿಸುವುದೆಲ್ಲಿ?
ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ವೈಜ್ಞಾನಿಕ ಶಕ್ತಿಯಿಂದ ಮತ್ತೆ ಸೃಷ್ಟಿ ಮಾಡಬಹುದು. ಅವುಗಳ ಆರೋಗ್ಯದಲ್ಲಿ ಯಾವ ಸಮಸ್ಯೆಯೂ ಇಲ್ಲದಂತೆಯೂ ನೋಡಿಕೊಳ್ಳಬಹುದು. ಅದರಲ್ಲಿ ಎರಡು ಮಾತಿಲ್ಲ. ಆದರೆ ಈ ರೀತಿ ಜೀವಿಗಳು ಸೃಷ್ಟಿಯಾಗಿ ಅವುಗಳ ಸಂಖ್ಯೆ ಹೆಚ್ಚಾದರೆ ವಾಸಿಸುವುದೆಲ್ಲಿ? ವಾಸ್ತವವಾಗಿ ಈ ಜೀವಿಗಳೆಲ್ಲ ಅಳಿವಿನತ್ತ ಸಾಗಿದ್ದೇ ವಾಸಯೋಗ್ಯ ಸ್ಥಳದ ಅಭಾವದಿಂದ. ಜೀವಿಗಳ ಆವಾಸಸ್ಥಾನಗಳನ್ನು ಮಾನವ ಅತಿಕ್ರಮಣ ಮಾಡಿಕೊಂಡದ್ದರ ಪರಿಣಾಮ ಈ ಜೀವಿಗಳೆಲ್ಲ ಅಳಿವಿನತ್ತ ಸಾಗಿದವು. ಈಗ ಹಲವು ಜೀವಿಗಳು ಅಳಿವಿನತ್ತ ಸಾಗುತ್ತಿರುವುದು ಕೂಡಾ ಇದೇ ಕಾರಣಕ್ಕೆ.
ವೈಜ್ಞಾನಿಕ ತಂತ್ರಜ್ಞಾನದ ನೆರವಿನಿಂದ ಅಳಿವಿನಂಚಿನಲ್ಲಿರುವ ಜೀವಿಗಳು ಸೃಷ್ಟಿಯಾಗಲಿ, ಸಂತೋಷವೇ. ಆದರೆ ಅವುಗಳಿಗೆ ಅಗತ್ಯವಿರುವ ಆವಾಸಸ್ಥಾನಗಳನ್ನು ಬಿಟ್ಟುಕೊಡುವುದಕ್ಕೆ ಮಾನವ ಸಿದ್ಧವಿದ್ದಾನೆಯೇ? ಈ ಜೀವಿಗಳ ಆವಾಸಸ್ಥಾನವನ್ನು ಕಿತ್ತುಕೊಳ್ಳದೇ ಇರುತ್ತಿದ್ದರೆ ಇವಿಗಳು ಅಳಿಯುವ ಪ್ರಶ್ನೆಯೇ ಬರುತ್ತಿರಲಿಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ನಾವು ಸಿದ್ಧವಿಲ್ಲ. ಆದರೆ ಪ್ರಾಣಿಗಳನ್ನು ರಕ್ಷಿಸಿ ಎಂದು ಉದ್ದುದ್ದ ಉಪದೇಶ ಮಾತ್ರ ಕೊಡುತ್ತೇವೆ. ಎಂಥ ವಿಪರ್ಯಾಸ ನೋಡಿ!

Comments

  1. ನಮ್ಮ ವಿಶ್ವದ ಅಧುನಿಕ ತಂತ್ರಜ್ಞಾನದಿಂದ ಎಷ್ಟು ಲಾಭ ವಿದೆಯೋ ಅಷ್ಟೇ ನಷ್ಟವೂ ಇದೆ , ನಿಮ್ಮ ಪ್ರಶ್ನೆ ನಿಜವಾಗಿಯೂ ಒಂದು ದೊಡ್ಡ ಪ್ರಶ್ನೆ ,ಇದು ಒಂದು ರೀತಿಯ "ವಿನಾಶ ಕಾಲ ವೀಪರೀತ ಬುದ್ದಿ "ಅಂತಾನೆ ಹೇಳಬಹುದು

    ReplyDelete
  2. idu prakrutiya viruddha anta nanaganisiddu.prakruti,yaavyaavdu yestestu irabekembudannu taane nirdharisutte.ondu hosa vastu atawa,jeevi utpannavaadaagaloo hosa shatruvoo huttikolluvudu prakruti ya kelasa anta anisike.jai vijnaana.
    H.R.SHREEPADA RAO.

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು