ಇಂಗಾಲವಿಲ್ಲದ ಜೀವಗಳು...!


ವೈಜ್ಞಾನಿಕ ಜಗತ್ತು ಇಂದು ಅಚ್ಚರಿ ಎನ್ನಿಸುವಂಥ ಒಂದು ಸಾಧನೆ ಮಾಡುವುದಕ್ಕೆ ಕಾರಣವಾಗಿದೆ. ಅದು ಕಾರ್ಬನ್ (ಇಂಗಾಲ) ಇಲ್ಲದಂಥಜೀವ ಜಗತ್ತಿನ ಸೃಷ್ಟಿ! 

ಅನ್ವೇಷಣೆ ಅನ್ನುವಂಥದ್ದು ಸದಾ ಚಲನಶೀಲ. ಒಂದು ವಿಚಾರದ ಅನ್ವೇಷಣೆಯಾದರೆ ಅದನ್ನು ಮತ್ತೊಂದಷ್ಟು ಒರೆಗೆ ಹಚ್ಚಿ ಆ ಅನ್ವೇಷಣೆಯನ್ನು ಇನ್ನಷ್ಟು ಬಲಗೊಳಿಸುವ ಪ್ರಯತ್ನ ನಡೆಯುತ್ತದೆ. ಇಂಥ ಪ್ರಯತ್ನದಲ್ಲಿ ಎಷ್ಟೋ ಬಾರಿ ಮೊದಲಿನ ಅನ್ವೇಷಣೆಯೇ ಸುಳ್ಳು ಎಂಬ ಫಲಿತಾಂಶ ಬರುತ್ತದೆ. ಮಹತ್ತರವಾದಂಥ ನಿರೀಕ್ಷೆಗಳನ್ನಿಟ್ಟುಕೊಂಡು ಪ್ರಯೋಗ ಶುರು ಮಾಡುತ್ತೇವೆ. ಫಲಿತಾಂಶ ಬಂದಾಗ ಎಲ್ಲವೂ ತಲೆಕೆಳಗಾಗಿರುತ್ತದೆ. ಹಾಗಂತ ಪ್ರಯತ್ನಗಳು ನಿಲ್ಲುವುದಿಲ್ಲ. ಅದು ವಿಜ್ಞಾನದ ತಾಕತ್ತು. ಅದೆಷ್ಟೇ ವೈಫಲ್ಯಗಳು ಎದುರಾದರೂ ಮರಳೆ ಯತ್ನವ ಮಾಡುವಂಥ ಮನಸ್ಥಿತಿಯೇ ವೈಜ್ಞಾನಿಕ ಜಗತ್ತನ್ನು ಕಂಡು ಇತರರು ಅಚ್ಚರಿಗೊಳ್ಳುವಂತೆ ಮಾಡುತ್ತದೆ.

ಇಂಥ ಮನಸ್ಥಿತಿಯೇ ವೈಜ್ಞಾನಿಕ ಜಗತ್ತು ಇಂದು ಅಚ್ಚರಿ ಎನ್ನಿಸುವಂಥ ಒಂದು ಸಾಧನೆ ಮಾಡುವುದಕ್ಕೆ ಕಾರಣವಾಗಿದೆ. ಅದು ಕಾರ್ಬನ್ (ಇಂಗಾಲ) ಇಲ್ಲದಂಥಜೀವ ಜಗತ್ತಿನ ಸೃಷ್ಟಿ! ಪ್ರಸ್ತುತ ಭೂಮಿಯಲ್ಲಿ ಕಾರ್ಬನ್ ಅಥವಾ ಇಂಗಾಲವನ್ನು ಹೊಂದಿಲ್ಲದಂಥ ಜೀವಿಗಳನ್ನು ಹುಡುಕುವುದು ಕಷ್ಟ. ಯಾವುದೇ ಜೀವಿಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡರೂ ಆ ಜೀವಿಯಲ್ಲಿ ಇಂಗಾಲ ಇದ್ದೇ ಇರುತ್ತದೆ. ನಾವು ಉಸಿರಾಡುವ ಗಾಳಿಯ ಮೂಲಕವೇ ಇಂಗಾಲ ನಮ್ಮ ದೇಹ ಸೇರುತ್ತಿರುವಾಗ ಬೇರೆ ಪ್ರಶ್ನೆ ಬೇಕೆ? ಶಾರೀರಿಕ ನೆಲೆಗಟ್ಟಿನಲ್ಲಿ ಯೋಚಿಸಿದರೂ ಸಹ ಈ ಶರೀರದ ಪ್ರತಿಯೊಂದು ಭಾಗವೂ ಇಂಗಾಲವನ್ನು ಒಳಗೊಂಡಿದೆ ಎಂಬುದು ದಿಟ. ಇಂತಿರುವಾಗ ವಿಜ್ಞಾನಿಗಳು ಇಂಗಾಲವೇ ಇಲ್ಲದಂಥ ಜೀವ ಜಗತ್ತನ್ನು ಸೃಷ್ಟಿಸಿದ್ದಾರೆ ಎಂದರೆ?

ನಮ್ಮ ಭೂಮಿಯ ಮೇಲಿನ ಎಲ್ಲ ಜೀವಿಗಳೂ ಸಹ ಇಂಗಾಲವನ್ನು ಒಳಗೊಂಡಿರುವ ಕಾರಣ ಭೂಮ್ಯೇತರ ಆಕಾಶಕಾಯಗಳಲ್ಲಿ ಜೀವ ಆಸ್ತಿತ್ವದ ಸಾಧ್ಯತೆಯಿದ್ದರೆ ಆ ಜೀವಿಗಳು ಕೂಡಾ ಇಂಗಾಲವನ್ನು ಹೊಂದಿರಲೇಬೇಕು ಎಂದು ಭಾವಿಸಲಾಗಿತ್ತು. ಆದರೆ, ಒಂದು ಸಣ್ಣ ಅನುಮಾನ ಇಂದು ಮಹಾನ್ ಸಂಶೋಧನೆಗೆ ಕಾರಣವಾಗಿದೆ. ಒಂದು ವೇಳೆ ಯಾವುದಾದರೂ ಒಂದು ಆಕಾಶಕಾಯದಲ್ಲಿ ಇಂಗಾಲವೇ ಇಲ್ಲ ಎಂದಾದರೆ, ಆ ಆಕಾಶಕಾಯದಲ್ಲಿ ಜೀವಾಸ್ತಿತ್ವ ಯಾಕಿರಬಾರದು? ಇಂಗಾಲವಿಲ್ಲದೆಯೇ ಜೀವಿಗಳು ಬದುಕುವುದಕ್ಕೆ ಯಾಕೆ ಸಾಧ್ಯವಿಲ್ಲ? ಎಂಬ ಪ್ರಶ್ನೆಗಳು ಇಂಗಾಲವಿಲ್ಲದ ಜೀವಲೋಕವನ್ನು ಸೃಷ್ಟಿಸುವಂತೆ ವಿಜ್ಞಾನಿಗಳನ್ನು ಪ್ರೇರೇಪಿಸಿವೆ. ಇದರ ಪ್ರೇರಣೆಗೆ ಒಳಗಾದಂಥ ಗ್ಲಾಸ್ಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಪ್ರಯತ್ನವನ್ನು ಶುರು ಮಾಡಿದ್ದಾರೆ. ಈಗಾಗಲೇ ಒಂದು ಹಂತದ ಯಶಸ್ಸು ಗಳಿಸಿದ್ದಾರೆ. ಅಂದರೆ ಇಂಗಾಲವೇ ಇಲ್ಲದಂಥ ಜೀವಕೋಶಗಳನ್ನು ಸೃಷ್ಟಿಸುವಲ್ಲಿ ಇವರು ಸಫಲರಾಗಿದ್ದಾರೆ. ಇವುಗಳೆ ಐಶೆಲ್ಗಳು ಅಂದರೆ ಇನಾರ್ಗಾನಿಕ್ ಕೆಮಿಕಲ್ ಸೆಲ್ಸ್. ಇಂಗಾಲ ಇರುವಂಥ ಎಲ್ಲವನ್ನೂ ಸಹ ಆರ್ಗಾನಿಕ್ ಎನ್ನುತ್ತಾರೆ. ಉದಾಹರಣೆಗೆ ಆರ್ಗಾನಿಕ್ ಜೀವಕೋಶಗಳು, ಆರ್ಗಾನಿಕ್ ರಾಸಾಯನಿಕಗಳು ಮೊದಲಾದವು.

ಇಂಗಾಲವಿಲ್ಲದಂಥ ಜೀವಿಗಳು ಒತ್ತಟ್ಟಿಗಿರಲಿ, ಬಹುಶಃ ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ಇಂಗಾಲವಿಲ್ಲದಂಥ ವಸ್ತುಗಳೇ ತೀರಾ ಕಡಿಮೆ ಎನ್ನಬಹುದು. ಇಂತಿರುವಾಗ ಕಾರ್ಬನ್ ಇಲ್ಲದೇ ಇರುವಂಥ ಜೀವಕೋಶಗಳು ನಿಜಕ್ಕೂ ಮಹತ್ವದ ಹೆಜ್ಜೆಗಳೆಂದೇ ಹೇಳಬೇಕು. ಹಾಗಂಥ ಈ ಜೀವಕೋಶಗಳು ಒಂದೇ ಬಾರಿಗೆ ಸೃಷ್ಟಿಯಾಗಲಿಲ್ಲ. ಹಲವಾರು ರಾಸಾಯನಿಕ ಕ್ರಿಯೆಗಳನ್ನು ನಡೆಸಿದಂಥ ಪ್ರೊ, ಲೀ ಕ್ರೋನಿನ್ ಮತ್ತವರ ತಂಡ ಈ ಕೋಶಗಳನ್ನು ಸೃಷ್ಟಿಸಿದೆ. ಸಾಮಾನ್ಯ ಜೀವಕೋಶಗಳಲ್ಲಿರುವಂಥ ಹಲವು ಪದರಗಳು ಅಥವಾ ಮೆಂಬ್ರೇನ್ಗಳು ಈ ಜೀವಕೋಶಗಳಲ್ಲಿಯೂ ಇವೆ. ಇವು ಲವಣಗಳು, ಪೋಷಕಾಂಶಗಳು ಮತ್ತಿತರ ಅಗತ್ಯ ವಸ್ತುಗಳು ಹಾಗೂ ಶಕ್ತಿಯ ಸಂಚಾರಕ್ಕೆ ಅನುವು ಮಾಡಿಕೊಡುತ್ತವೆ.
ಇವೆಲ್ಲದಕ್ಕಿಂತ ಹೆಚ್ಚಾಗಿ ವಿದ್ಯುಚ್ಛಕ್ತಿಯನ್ನು ಶೇಖರಿಸಿಟ್ಟುಕೊಳ್ಳುವಂಥ ಸಾಮಥ್ರ್ಯ ಈ ಜೀವಕೋಶಗಳಿಗಿರುವುದೇ ಅಚ್ಚರಿ ಹುಟ್ಟಿಸುತ್ತದೆ. ಅಂದರೆ ಈ ಕೋಶಗಳನ್ನು ಸೆನ್ಸರ್ ಗಳು ಮತ್ತಿತರ ವಿದ್ಯುತ್ ಉಪಕರಣಗಳಲ್ಲಿಯೂ ಬಳಸುವುದಕ್ಕೆ ಸಾಧ್ಯವಿದೆ.

ಜೀವಾಸ್ತಿತ್ವವೇ ಮುಖ್ಯ ಗುರಿ
ಈ ಕೋಶಗಳನ್ನು ಎಲ್ಲೆಲ್ಲ ಬಳಸಿಕೊಳ್ಳಬಹುದು ಎಂಬ ಬಗ್ಗೆ ಹಲವಾರು ಸಾಧ್ಯತೆಗಳು ಗೋಚರಿಸುತ್ತವೆ. ಯಾವತ್ತೂ ಹಾಗೆಯೇ, ಒಂದು ವಸ್ತು ಇದೆ ಎಂದಾದಾಗ ಅದರ ಉಪಯೋಗದ ಬಗ್ಗೆ ಹಲವಾರು ದಾರಿಗಳು ತೆರೆದುಕೊಳ್ಳುತ್ತವೆ. ಆದರೆ ಈ ಸಂಶೋಧನೆಯ ಮುಖ್ಯ ಗುರಿ ಅದಲ್ಲ. ಜೀವಾಸ್ತಿತ್ವ ಈ ಜೀವಕೋಶಗಳಿಂದಾಗಬೇಕು- ಇದುವೇ ಗುರಿ. ಪ್ರಸ್ತುತ ಭೂಮಿಯ ಮೇಲೆ ಇರುವಂಥ ಜೀವಿಗಳೆಲ್ಲವೂ ಕಾರ್ಬನ್ ಒಳಗೊಂಡಿರುತ್ತವೆ. ಅಂದರೆ ಈ ಜೀವಿಗಳ ಜೀವಕೋಶಗಳು ಆರ್ಗಾನಿಕ್ ಅಥವಾ ಜೈವಿಕ (ಬಯೊಲಾಜಿಕಲ್) ಜೀವಕೋಶಗಳು. ಈ ಜೀವಕೋಶಗಳು ಯಾವ ರೀತಿ ಕಾರ್ಯನಿರ್ವಹಿಸಿ ಜೀವ ಜಗತ್ತನ್ನು ಪೋಷಿಸುತ್ತವೆಯೋ ಅದೇ ರೀತಿ ಇನಾರ್ಗಾನಿಕ್ ಅಥವಾ ಕಾರ್ಬನ್ ಇಲ್ಲದಂಥ ಜೀವಕೋಶಗಳು ಜೀವ ಜಗತ್ತನ್ನು ಪೋಷಿಸುತ್ತವೆಯೇ ಎಂಬುದನ್ನು ಪರಿಶೀಲಿಸುವ ತುಡಿತ ಈಗ ವೈಜ್ಞಾನಿಕ ಜಗತ್ತಿನಲ್ಲಿದೆ. ಇದರಲ್ಲಿ ಯಶಸ್ವಿಯಾದರು ಎಂದಾದರೆ ಇನ್ನೂ ಹಲವಾರು ಸಾಧ್ಯತೆಗಳು ನಮ್ಮ ಕಣ್ಣ ಮುಂದೆ ಸುಳಿದಾಡುತ್ತವೆ.

`ಪ್ರಸ್ತುತ ಜೀವವಿಕಾಸದ ಬಗ್ಗೆ ಇರುವಂಥ ಸಿದ್ಧಾಂತ ಒಂದು ವಿಶೇಷ ವಿಕಾಸ ಸಿದ್ದಾಂತ. ಯಾಕೆಂದರೆ ಇದು ಕಾರ್ಬನ್ ಹೊಂದಿರುವಂಥ ಜೀವಿಗಳ ವಿಕಾಸದ ಬಗ್ಗೆಯಷ್ಟೇ ಮಾತಾಡುತ್ತದೆ. ಒಂದು ವೇಳೆ ನಮ್ಮ ತಂಡ ಕಾರ್ಬನ್ ಇಲ್ಲದ ಜೀವಾಸ್ತಿತ್ವವನ್ನು ನಿರೂಪಿಸುವಲ್ಲಕ ಯಶಸ್ವಿಯಾಯಿತು ಎಂದಾದರೆ ಅದು ಜೀವ ವಿಕಾಸದ ಸಾಮಾನ್ಯ ಸಿದ್ಧಾಂತವಾಗುತ್ತದೆ' ಎನ್ನುತ್ತಾರೆ ಪ್ರೊ. ಕ್ರೋನಿನ್.
ಜೀವ ವಿಕಾಸದ ಬಗ್ಗೆ ಈ ಸಂಶೋಧನೆ ಮಹತ್ವದ ವಿಚಾರಗಳನ್ನು ಬೆಳಕಿಗೆ ತರುವುದು ಮಾತ್ರವಲ್ಲದೆ, ಜೀವ ವಿಕಾಸ ಕೇವಲ ಇಂಗಾಲ ಇರುವಂಥ ಜೀವಿಗಳಲ್ಲಿ ಮಾತ್ರ ಆದದ್ದಲ್ಲ, ಇಂಗಾಲ ಹೊಂದಿರದಂಥ ಜೀವಿಗಳೂ ಅಸ್ತಿತ್ವದಲ್ಲಿವೆ ಎಂಬುದನ್ನು ನಿರೂಪಿಸುತ್ತವೆ. ಇದು ನಿರೂಪಿತವಾಯಿತು ಎಂದಾದರೆ ಜೀವಾಸ್ತಿತ್ವದ ಬಗೆಗಿನ ಕಲ್ಪೆನೆಯನ್ನೇ ನಾವು ಬದಲಿಸಿಕೊಳ್ಳಬೇಕಾಗುತ್ತದೆ.
ಇದರ ಮುಖ್ಯ ಪ್ರಯೋಜನ ಎಂದರೆ ಭೂಮ್ಯೇತರ ಆಕಾಶಕಾಯಗಳಲ್ಲಿ ಜೀವಾಸ್ತಿತ್ವ ಇರಬಹುದಾದಂಥ ಸಾಧ್ಯತೆಯ ಬಗೆಗೆ ಚಿಂತನೆಗಳು ಗಟ್ಟಿಯಾಗುತ್ತವೆ. ಇದುವರೆಗೆ ಭೂಮ್ಯೇತರ ಆಕಾಶಕಾಯಗಳಲ್ಲಿ ಇಂಗಾಲವನ್ನು ಹೊಂದಿದ ಜೀವಿಗಳನ್ನು ಹುಡುಕುವುದಕ್ಕೆ ನಾವು ಪ್ರಯತ್ನ ಪಡುತ್ತಿದ್ದೇವೆಯೇ ಹೊರತು ಇಂಗಾಲ ಇಲ್ಲದಂಥ ಜೀವಿಗಳು ಇರಬಹುದು ಎಂಬ ಕಲ್ಪನೆ ನಮ್ಮ ಮನಸ್ಸಿಗೆ ಬಂದಿರಲಿಲ್ಲ. ಅಷ್ಟಕ್ಕೂ ಇಂಗಾಲ ಇಲ್ಲದೆ ಜೀವಿಗಳು ಇರಬಹುದು ಎಂಬ ಚಿಂತನೆಯೇ ಇದುವರೆಗೆ ನಮ್ಮ ಮನಸ್ಸಿನಲ್ಲ ಹೊಳೆದಿರಲಿಲ್ಲ.

ಅನ್ಯಗ್ರಹಗಳತ್ತ
ಭೂಮ್ಯೇತರ ಆಕಾಶಕಾಯಗಳಲ್ಲಿ ಜೀವಾಸ್ತಿತ್ವಕ್ಕಾಗಿ ನಾವು ಮಾಡಿರುವಂಥ ಪ್ರಯತ್ನ ಮೆಚ್ಚಬೇಕಾದದ್ದೇ. ಆದರೆ ಪ್ರಯತ್ನದಲ್ಲೇ ದೋಷಗಳಿದ್ದರೆ ಫಲ ಸಿಗುವುದಕ್ಕೆ ಸಾಧ್ಯವಿಲ್ಲ. ಪೂರ್ವಾಗ್ರಹವನ್ನಿಟ್ಟುಕೊಂಡೇ ನಾವು ಹುಡುಕಾಟ ಶುರು ಮಾಡಿದ್ದು. ಅಂದರೆ ಬೇರೆ ಆಕಾಶಕಾಯಗಳಲ್ಲಿ ಜೀವಾಸ್ತಿತ್ವ ಇದೆ ಎಂದಾದರೆ ಅದು ಇಂಗಾಲವನ್ನು ಹೊಂದಿರಲೇಬೇಕು, ಆ ಜೀವಿಗಳು ನಮ್ಮಲ್ಲಿನ ಜೀವಿಗಳಂತೆಯೇ ಇರಬೇಕು ಎಂಬ ಕಲ್ಪನೆಯನ್ನು ಇಟ್ಟುಕೊಂಡೇ ಹುಡುಕಾಟ ನಡೆಸಿದೆವು. ಇದೀಗ ಇಂಗಾಲವಿಲ್ಲದಂಥ ಜೀವಕೋಶಗಳ ಸೃಷ್ಟಿಯಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಜೀವಾಸ್ತಿತ್ವದ ಬೇರೆ ಬೇರೆ ಸಾಧ್ಯತೆಗಳನ್ನು ಕಂಡುಕೊಳ್ಳುವಂಥ ಪ್ರಯತ್ನ ಮಾಡೋಣ.

ಇದು ಸಾಧ್ಯವೇ ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ಒಂದು ಸಣ್ಣ ಉದಾಹರಣೆ- ಭಾರತ ಮತ್ತಿತರ ಸಮಶೀತೋಷ್ಣ ವಲಯದಲ್ಲಿ ವಾಸಿಸುವ ನಮ್ಮಲ್ಲಿ ಹೆಚ್ಚಿನವರು ಎಣ್ಣೆಗಪ್ಪು ಬಣ್ಣದವರು. ಅದೇ ಅಮೆರಿಕ, ಬ್ರಿಟನ್ ಮತ್ತಿತರ ಶೀತ ವಲಯದವರು ಬಿಳಿಯರು. ಇನ್ನು ಆಫ್ರಿಕಾದಂಥ ಉಷ್ಣವಲಯದವರು ಕಡುಗಪ್ಪು ಬಣ್ಣದವರು. ಹಾಗೆಯೇ ಭೂಮಿಯ ಮೇಲೆ ವಾಸಿಸುವ ಇತರ ಜೀವಿಗಳು, ಸಾಗರವನ್ನು ಅವಲಂಬಿಸಿರುವಂಥ ಜೀವಿಗಳು, ನದಿ, ಸರೋವರಗಳಲ್ಲಿ ಬದುಕು ಕಟ್ಟಿಕೊಂಡಿರುವ ಜೀವಿಗಳು, ಮರುಭೂಮಿಯಲ್ಲಿ ಬದುಕುತ್ತಿರುವಂಥ ಜೀವಿಗಳು ಅವುಗಳಿಗೆ ಅಗತ್ಯವಿರುವಂಥ ಶಾರೀರಿಕ ರಚನೆಗಳನ್ನು ಹೊಂದಿವೆ.  ಅಂದರೆ ಆಯಾ ಪರಿಸರಕ್ಕೆ ತಕ್ಕಂತೆ ಶಾರೀರಿಕ ಹೊಂದಾಣಿಕೆಗಳು ಭೂಮಿಯ ಮೇಲೆಯೇ ಇವೆ ಎಂದಾಯಿತು. 

ಹೀಗಿರುವಾಗ ಭೂಮ್ಯೇತರ ಆಕಾಶಕಾಯಗಳಲ್ಲನ ಜೀವಿಗಳು ಭೂಮಿಯಲ್ಲಿರುವಂಥ ಜೀವಿಗಳಂತೆಯೇ ಇರಬೇಕು ಎಂದು ಬಯಸುವುದು ತಪ್ಪಾಗುತ್ತದೆ. ಹೀಗಾಗಿಯೇ ಇಂಗಾಲ ಇಲ್ಲದಂಥ ಜೀವಕೋಶಗಳ ಸೃಷ್ಟಿ ಈಗ ಮಹತ್ವದ ಸಾಧನೆಯೇ ಆಗಿದೆ. ಭೂಮ್ಯೇತರ ಆಕಾಶಕಾಯಗಳಲ್ಲಿ ಇಂಗಾಲವೇ ಇಲ್ಲದಂಥ ಜೀವಿಗಳು ಇರಬಹುದಲ್ಲವೇ?
ಅಂದಹಾಗೆ ಹೊಸದಿಗಂತದಲ್ಲಿನ ವಿಜ್ಞಾನ ವಿಶೇಷ ಅಂಕಣಕ್ಕೆ ಇಂದಿಗೆ 50 ವಾರಗಳು ತುಂಬಿದವು. ವಿಜ್ಞಾನವನ್ನು ಪ್ರೀತಿಸುತ್ತಾ, ಪ್ರೋತ್ಸಾಹಿಸುತ್ತಿರುವವರಿಗೆ ವಂದನೆಗಳು.

Comments

  1. Antoo vishwaamitra srushti aagutta anta anisitu.good info.. haage 50 tumbiddakke shubha haaraikegalu.
    SHREEPADA RAO..

    ReplyDelete

Post a Comment

Popular posts from this blog

ಮಾನವ ವಲಸೆ ಬಂದ ಬಗೆ ಹೇಗೆ?

ಅವಸಾನದತ್ತ ಹವಳದ ದಂಡೆಗಳು...!

ಸೃಷ್ಟಿ ರಹಸ್ಯದ ಬೆನ್ನು ಹತ್ತಿ...