ಆಲ್ಬರ್ಟ್ ಐನ್ ಸ್ಟೀನನ ಸಿದ್ಧಾಂತವೇ ಸುಳ್ಳೇ?

ಭೌತಶಾಸ್ತ್ರಕ್ಕೊಂದು  ಮೂಲಭೂತ ನಿಯಮ ಎನ್ನುವುದನ್ನು ಕೊಟ್ಟದ್ದು ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್. ಅದು ವಿಶೇಷ ಸಾಪೇಕ್ಷತಾ ಸಿದ್ಧಾಂತ. ಇದೀಗ ಈ ಸಿದ್ಧಾಂತವೇ ಸುಳ್ಳಾಗಿರಬಹುದೇ ಎಂಬ ಚಿಂತನೆಯನ್ನು ಹಚ್ಚಿದೆ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿನ ಸಂಶೋಧನೆ.

ಐನ್ ಸ್ಟೀನನ ವಿಶೇಷ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಒಂದು ವ್ಯವಸ್ಥೆ ಭೌತಶಾಸ್ತ್ರದ ಎಲ್ಲ ನಿಯಮಗಳನ್ನೂ ಸಮರ್ಪಕವಾಗಿ ಸಾಬೀತುಪಡಿಸುತ್ತದೆ ಎಂದಾದರೆ ಆ ವ್ಯವಸ್ಥೆಯ ಜೊತೆಗೆ ಸಂಬಂಧ ಹೊಂದಿರುವಂಥ ಇನ್ನೊಂದು ವ್ಯವಸ್ಥೆಯೂ ಸಹ ಭೌತಶಾಸ್ತ್ರದ ಎಲ್ಲ ನಿಯಮಗಳಿಗೂ ಅನ್ವಯವಾಗಿರಲೇಬೇಕು.

ಈ ಸಿದ್ಧಾಂತದ ಪ್ರಕಾರವೇ ಐನ್ ಸ್ಟೀನ್ ರಾಶಿ ಮತ್ತು ಶಕ್ತಿಯ ನಡುವಿನ ಸಂಬಂಧದ ಸೂತ್ರವನ್ನು ಕೊಟ್ಟ. ಇದುವೇ ಮಾಸ್ ಎನರ್ಜಿ ರಿಲೇಶನ್, E= mc2. ಇಲ್ಲಿ E ಅಂದರೆ ಶಕ್ತಿ, m ಅಂದರೆ ಕಣದ ರಾಶಿ ಮತ್ತು c ಬೆಳಕಿನ ವೇಗ. ಇವುಗಳ ಪೈಕಿ ಬೆಳಕಿನ ವೇಗವನ್ನು ಸ್ಥಿರಾಂಕವೆಂದು ಪರಿಗಣಿಸಲಾಗಿತ್ತು. ಬೆಳಕಿನ ವೇಗ ಪ್ರತಿ ಸೆಕೆಂಡಿಗೆ 186,282 ಮೈಲಿಗಳು ಎಂಬುದು ಇದುವರೆಗಿನ ಲೆಕ್ಕಾಚಾರ. ಬೆಳಕಿನ ವೇಗವನ್ನು ಈ ಸಂಖ್ಯೆಗೆ ಸ್ಥಿರಗೊಳಿಸಿಯೇ ಭೌತಶಾಸ್ತ್ರದ ಎಲ್ಲ ನಿಯಮಗಳನ್ನೂ ರೂಪಿಸಲಾಗಿದೆ.

ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಲ್ಲಿನ ಸಂಶೋಧನೆ ಬೆಳಕಿನ ವೇಗವನ್ನೇ ಪ್ರಶ್ನಿಸಿದೆ. ಅಂದರೆ ನಿಗದಿತ ಶಕ್ತಿ ಮಟ್ಟದಲ್ಲಿ, ನಿಗದಿತ ರಾಶಿಯ ಒಂದು ಕಣ ಗರಿಷ್ಠ ಎಂದರೆ ಬೆಳಕಿನ ವೇಗದಲ್ಲಿ ಚಲಿಸಬಹುದು ಎಂಬ ತತ್ತ್ವವನ್ನು ಅಲ್ಲಗಳೆಯುವಂಥ ಫಲಿತಾಂಶ ಹೊರಬಿದ್ದಿದೆ. ಜಿನೇವಾದಲ್ಲಿರು ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಿಂದ 454 ಮೈಲಿ ದೂರದ ಇಟಲಿಯಲ್ಲಿರುವ ಪ್ರಯೋಗಾಲಯಕ್ಕೆ ನ್ಯೂಟ್ರಿನೋ ಕಣವನ್ನು ಕಳುಹಿಸಿದಾಗ ಅದು ಬೆಳಕಿನ ವೇಗಕ್ಕಿಂತ 60 ನ್ಯಾನೋಸೆಕೆಂಡುಗಳಷ್ಟು ವೇಗವಾಗಿ ಚಲಿಸಿದೆ. ವಿಜ್ಞಾನಿಗಳ ಲೆಕ್ಕಾಚರದಲ್ಲಿ 10 ನ್ಯಾನೋಸೆಕೆಂಡುಗಳ ತಪ್ಪಿರಬಹುದು ಎಂದು ಅಂದಾಜಿಸಿದರೂ ನ್ಯೂಟ್ರಿನೋ ಕಣವು ಒಂದೋ ಬೆಳಿಕಿನ ವೇಗಕ್ಕಿಂತ 50 ನ್ಯಾನೋ ಸೆಕೆಂಡುಗಳಷ್ಟು ವೇಗವಾಗಿ ಚಲಿಸಿರಬೇಕು, ಇಲ್ಲವೇ 70 ನ್ಯಾನೋಸೆಕೆಂಡುಗಳಷ್ಟು ವೇಗದಲ್ಲಿ ಚಲಿಸಿರಬೇಕು. ಏನೇ ಆದರೂ ಬೆಳಕಿನ ವೇಗಕ್ಕಿಂತ ಅಧಿಕ ವೇಗದಲ್ಲಿ ನ್ಯೂಟ್ರಿನೋ ಚಲಿಸಿರುವುದಂತೂ ವಿಜ್ಞಾನಿಗಳ ಗಮನಕ್ಕೆ ಬಂದಿದೆ.

1 ನ್ಯಾನೋಸೆಕೆಂಡು ಎಂದರೆ ಒಂದು ಸೆಕೆಂಡಿನ 1000000000ನೇ ಒಂದು ಭಾಗ. 60 ನ್ಯಾನೋ ಸೆಕೆಂಡು ಎಂದರೆ ಒಂದು ಸೆಕೆಂಡಿನ 1000000000ನೇ 60 ಭಾಗ. ನಮ್ಮ ದೃಷ್ಟಿಯಲ್ಲಿ ಇದು ತೀರಾ ಚಿಕ್ಕ ಮೌಲ್ಯ ಎನಿಸಿದರೂ ಸಹ ಭೌತಶಾಸ್ತ್ರದಲ್ಲಿ ಇದು ಅತ್ಯಧಿಕ ಪರಿಣಾಮ ಬೀರುತ್ತದೆ. ಹಾಗಂಥ ಐನ್ ಸ್ಟೀನನ ಸಿದ್ಧಾಂತವನ್ನು ಒಂದೇ ಬಾರಿಗೆ ತಿರಸ್ಕರಿಸುವುದಕ್ಕೆ ಸಾಧ್ಯವಿಲ್ಲ.

ವಿಜ್ಞಾನಿಗಳ ಲೆಕ್ಕಾಚಾರದಲ್ಲಿ ಏನಾದರೂ ಎಡವಟ್ಟಾಗಿರಲೂಬಹುದು. ಜಿನೇವಾ ಮತ್ತು ಇಟಲಿಯಲ್ಲಿನ ಪ್ರಯೋಗಾಲಯಗಳ ನಡುವಿನ ದೂರವನ್ನು ಲೆಕ್ಕ ಮಾಡುವಲ್ಲಿ ತಪ್ಪಾಗಿರುವ ಸಾಧ್ಯತೆಯೂ ಇದೆ, ಸಮಯದ ಲೆಕ್ಕಾಚಾರದಲ್ಲಿ ತಪ್ಪಾಗಿರುವ ಸಾಧ್ಯತೆಯೂ ಇದೆ. ಜಪಾನ್ ಅಥವಾ ಅಮೆರಿಕದಲ್ಲಿರುವ ಪ್ರಯೋಗಾಲಯಗಳಿಗೆ ನ್ಯೂಟ್ರಿನೋವನ್ನು ಕಳುಹಿಸಿ ಮತ್ತೊಮ್ಮೆ ಪ್ರಯೋಗ ಮಾಡಬೇಕಾದ ಅಗತ್ಯವಿದೆ.

ಒಂದು ವೇಳೆ ಈಗ ಸಿಕ್ಕಿರುವಂಥ ಫಲಿತಾಂಶವೇ ನಿಜ, ಐನ್ ಸ್ಟೀನನ ಸಿದ್ಧಾಂತ ಸುಳ್ಳು ಎಂದು ಸಾಬೀತಾದಲ್ಲಿ ಭೌತಶಾಸ್ತ್ರ ಮೂಲ ನಿಯಮವನ್ನೇ ಬದಲಾಯಿಸಬೇಕಾಗಿ ಬರುವುದು ಮಾತ್ರವಲ್ಲ, ಪ್ರತಿಯೊಂದು ನಿಯಮಗಳನ್ನೂ ಬದಲಾಯಿಸಬೇಕಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ಓದುತ್ತಿರುವಂಥ ಪಠ್ಯವನ್ನೂ! ಶಿಕ್ಷಕರು ಪಾಠ ಮಾಡುವಾಗಲೂ ಭೌತಶಾಸ್ತ್ರದ ಹೊಸ ಮೂಲ ನಿಯಮವನ್ನು ಹೇಳಬೇಕಾಗಿ ಬರುತ್ತದೆ. ಅಲ್ಲದೆ, ಈ ವಿಶ್ವ ಕಾರ್ಯನಿರ್ವಹಿಸುವ ರೀತಿಯ ಬಗ್ಗೆಯೂ ಮತ್ತೊಮ್ಮೆ ಚಿಂತನೆ ನಡೆಸಬೇಕಾಗುತ್ತದೆ. ಸಮಯ ಒಂದೇ ರೀತಿಯಲ್ಲಿ ಚಲಿಸುತ್ತಲೇ ಇರುತ್ತದೆ, ಅಂದರೆ ಸಮಯವೂ ಒಂದು ಸ್ಥಿರಾಂಕ ಎಂಬ ಚಿಂತನೆಯನ್ನು ಕೂಡಾ ಪರಾಮರ್ಶಿಸಬೇಕಾಗುತ್ತದೆ. ಯಾವುದೆಲ್ಲ ಸ್ಥಿರಾಂಕಗಳು ಎಂದು ವಿಜ್ಞಾನ ಪರಿಗಣಿಸುತ್ತದೆಯೋ ಅವೆಲ್ಲದರ ಬಗ್ಗೆ ಮತ್ತೊಮ್ಮೆ ಚಿಂತನೆ ನಡೆಸಿ ಅವು ಸ್ಥಿರಾಂಕಗಳು ಹೌದೋ ಅಲ್ಲವೋ ಎಂಬುದನ್ನು ಕಂಡುಕೊಳ್ಳಬೇಕಾಗುತ್ತದೆ.

ಅದ್ಯಾಕೋ ಐನ್ ಸ್ಟೀನನ ಬಗ್ಗೆ ಅತೀವ ಪ್ರೀತಿಯಿದ್ದರೂ ಸಹ ಹೊಸ ಸಂಶೋಧನೆ ನಿಜವಿರಲೂ ಬಹುದು ಎನಿಸುತ್ತದೆ. ಬೆಳಕನ್ನು ನೀಡುತ್ತಿರುವವನು ಸೂರ್ಯ. ಅವನ ಬೆಳಕಿನ ವೇಗವನ್ನೇ ಸ್ಥಿರಾಂಕ ಎಂದು ವಿಜ್ಞಾನ ಪರಿಗಣಿಸಿರುವಂಥದ್ದು. ಅಂಥ ಸೂರ್ಯ ಸ್ಥಿರವಲ್ಲ. ಅವನಿಗೂ ಜೀವಿತಾವಸ್ಥೆಯ ವಿವಿಧ ಹಂತಗಳಿವೆ. ಈ ಹಂತಗಳು ಬದಲಾದಾಗ ಅವನ ಬೆಳಕಿನ ವೇಗ ಬದಲಾಗಿರಬಹುದೇ? ವಿಜ್ಞಾನಿಗಳು ಪರೀಕ್ಷೆಗೆ ಒಳಪಡಿಸಿದಂಥ ನ್ಯೂಟ್ರಿನೋವನ್ನು ಆತನಿಂದಲೇ ಪಡೆದದ್ದು. ಯಾವುದಕ್ಕೂ ಇನ್ನಷ್ಟು ಸ್ಪಷ್ಟವಾದ ಫಲಿತಾಂಶ ಬರಬೇಕು. ಇಲ್ಲದೇ ಒಂದು ನಿರ್ಧಾರಕ್ಕೆ ಬರುವುದು ಕಷ್ಟ.

Comments

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು