ಮೃತ್ಯು ವೀಣೆಯಲ್ಲಿ ಮಿಡಿದ ಬಾಳ ಶೃತಿ...

ಆತ್ಮಶಕ್ತಿ, ಮನೋಶಕ್ತಿ, ವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಶೃತಿಯೇ ಸಾಕ್ಷಿ. ಶೃತಿಯ ಜೀವನದ ಮಜಲುಗಳನ್ನು ನೋಡಿದಾಗ, ಆಕೆ ಎದುರಿಸಿದ ಸವಾಲುಗಳನ್ನು ನೆನೆಸಿದಾಗ ಕಣ್ಣುಗಳು ಮಂಜಾಗುತ್ತವೆ. ತನ್ನ ಸಮಸ್ಯೆಗಳ ವಿರುದ್ಧ ಆಕೆ ಹೋರಾಡಿದ ರೀತಿ ಅಭಿಮಾನದ ಹೊಳಹನ್ನು ಮೂಡಿಸುತ್ತದೆ. ಆ ಒಂದು ಕ್ಷಣದಲ್ಲಿ ಉಸಿರುಗಟ್ಟಿದಂಥ ಅನುಭವವಾಗಿತ್ತು. ಕಷ್ಟಗಳು, ಸಮಸ್ಯೆಗಳು ಎಂದರೆ ಧೃತಿಗೆಡದೇ ಇದ್ದಂಥ ಜೀವ ಅಂದು ಥರಗುಟ್ಟಿತ್ತು. ಜೊತೆಗೇ ಅಚ್ಚರಿಯ ಆಘಾತ. ಮನೋಸ್ಥೈರ್ಯವನ್ನೇ ಉಸಿರಾಗಿಸಿಕೊಂಡಿರುವಂಥ ದಿಟ್ಟೆದೆಯ ವ್ಯಕ್ತಿತ್ವವನ್ನು ಕಂಡಾಗ ಅಭಿಮಾನದಿಂದ ಕಣ್ಣುಗಳು ಹನಿಗೂಡಿದ್ದರ ಅರಿವೂ ಆಗಿರಲಿಲ್ಲ. ಮಾತಾಡಲೋ, ಬೇಡವೋ, ಪ್ರಶ್ನೆಗಳನ್ನು ಕೇಳಿ ಜೀವನದ ಕಹಿಯನ್ನು ಕೆದಕಿ ಗಾಯದ ಮೇಲೆ ಬರೆ ಎಳೆಯುವಂಥ ದುಸ್ಸಾಹಸಕ್ಕೆ ಮುಂದಾಗಲೋ ಎಂದೆಲ್ಲ ಚಿಂತಿಸಿ, ತಲೆಕಡಿಸಿಕೊಂಡು ಕಡೆಗೂ ಮಾತು ಶುರುವಿಟ್ಟುಕೊಂಡರೆ ಜೀವನವನ್ನು ಎದುರಿಸುವಂಥ ಧೈರ್ಯ ಹೀಗಿರಬೇಕು ಎಂಬ ಭಾವನೆ ಮೂಡಿಸುವಂಥ ಮಾತುಗಳಿಗೆ ಮನಸ್ಸು ಶರಣಾಗಿತ್ತು. ಅಂಥದ್ದೊಂದು ಶರಣಾಗತಿಗೆ ನನ್ನ ಮನಸ್ಸು ಒಳಗಾದದ್ದು ಜಗತ್ತಿನಲ್ಲಿಡೀ ಪ್ರಖ್ಯಾತಿ ಪಡೆದಂಥ ವ್ಯಕ್ತಿಯೊಂದಿಗೆ ಮಾತನಾಡಿದಾಗ ಅಲ್ಲ. ಬಹುತೇಕ ಜನರು ಜಗತ್ತು ಎಂದರೇನೆಂಬುದನ್ನು, ಜೀವನದ ಸವಾಲುಗಳು ಹೇಗಿರುತ್ತವೆ ಎಂಬುದನ್ನು ಅರಿಯುವುದಕ್ಕೆ ಶುರು ಮಾಡುವಂಥ ಪ್ರಾಯದಲ್ಲಿ ಮೃತ್ಯುವಿನೊಂದಿಗೇ ಸೆಣಸಾಡಿ, ಮೃತ್ಯುಶಕ್ತ...