ಕೃಷ್ಣಕುಹರದೊಳಗೆ ಜೀವಾಸ್ತಿತ್ವ!!!

ಅದ್ಯಾಕೋ ಇತ್ತೀಚೆಗೆ ಈ ಕೃಷ್ಣಕುಹರಗಳು ಅರ್ಥಾತ್ ಕಪ್ಪುರಂಧ್ರಗಳು ಅಥವಾ ಬ್ಲ್ಯಾಕ್ ಹೋಲ್ ಗಳು ತುಂಬಾನೇ ಕಾಡುತ್ತಾ ಇವೆ; ನನ್ನನ್ನು ಮಾತ್ರವಲ್ಲ, ವಿಜ್ಞಾನಿಗಳನ್ನು ಕೂಡಾ! ಕೃಷ್ಣಕುಹರಗಳು ಇವೆ ಎಂಬ ಸಂಗತಿ ವೈಜ್ಞಾನಿಕ ಜಗತ್ತಿಗೆ ಗೊತ್ತಾದಂಥ ದಿನದಿಂದಲೇ ಇವುಗಳ ಬಗ್ಗೆ ಹೆಚ್ಚೆಚ್ಚು ಸಂಶೋಧನೆ ನಡೆಸುವಂಥ ಪ್ರುಯತ್ನಗಳು ನಡೆಯುತ್ತಿವೆ. ಅದಕ್ಕಾಗಿಯೇ ಹಲವಾರು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ.

ಮೊನ್ನೆ 5ನೇ ತಾರೀಕಿನಂದು ಕೃಷ್ಣಕುಹರದ ರಹಸ್ಯಗಳು ಎಂಬ ಲೇಖನ ಬರೆದಾಗ; ಆ ಲೇಖನಕ್ಕೆ ಬಂದಂಥ ಪ್ರತಿಕ್ರಿಯೆಗಳು ಕೃಷ್ಣಕುಹರಗಳ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಜಾಲಾಡುವಂತೆ ನನ್ನನ್ನು ಪ್ರೇರೇಪಿಸಿದ್ದಂತೂ ನಿಜ. ಅದರಲ್ಲೂ ಮುಖ್ಯವಾಗಿ, ಫೇಸ್ ಬುಕ್ ಮಿತ್ರರೂ, ಹಿರಿಯರೂ ಆದಂಥ ಶ್ರೀಪಾದ ರಾವ್ ಅವರು ಭಾಗವತದಲ್ಲಿನ ಒಂದು ವಿಚಾರವನ್ನು- ಮಹಾಭಾರತ ಯುದ್ಧ ಮುಗಿದ ಮೇಲೆ ಶ್ರೀಕೃಷ್ಣ ಅರ್ಜುನನನ್ನು ಕರೆದುಕೊಂಡು ಗಾಢಾಂಧಕಾರವಿರುವಂಥ ಕೃಷ್ಣಕುಹರದೊಳಗೆ ಕರೆದುಕೊಂಡು ಹೋಗಿ ಅಲ್ಲಿ ಆದಿನಾರಾಯಣನ ದರ್ಶನ ಮಾಡಿದ- ಉಲ್ಲೇಖಿಸಿದ್ದನ್ನು ನೋಡಿದಾಗ ಒಂದು ಕ್ಷಣದಲ್ಲಿಯೇ ಅದರ ಬಗ್ಗೆ ಮನಸ್ಸಿನೊಳಗೆ ಹಲವು ರೀತಿಯ ಯೋಚನೆಗಳು ಸುಳಿದಾಡಿ ಮಾಯವಾದವು. ವೈಜ್ಞಾನಿಕ ಜಗತ್ತಿನ ಬೇರೆ ಬೇರೆ ಹೊಸ ವಿಚಾರಗಳು ಗಮನಕ್ಕೆ ಬಂದಾಗ ಅದು ಮರೆತೇ ಹೋಗಿತ್ತು. ಇಂತಿರುವಾಗ ಈ ವಿಚಾರವನ್ನು ಮತ್ತೆ ನೆನಪು ಮಾಡಿದ್ದು ರಷ್ಯಾದ ವಿಶ್ವವಿಜ್ಞಾನಿ (ಕಾಸ್ಮೊಲಾಜಿಸ್ಟ್) ಯಶೇಸ್ಲಾವ್ ಡುಶ್ಶೇವ್ (Vyacheslav Dokuchaev).

ಅದೂ ಹೇಗೆ ಗೊತ್ತೆ? ಕೃಷ್ಣಕುಹರಗಳು ಅಥವಾ ಕಪ್ಪುರಂಧ್ರಗಳು ಅಥವಾ ಬ್ಲ್ಯಾಕ್ ಹೋಲ್ ಗಳು ಒಳಗೆ ಜೀವಾಸ್ತಿತ್ವದ ಸಾಧ್ಯತೆಯಿದೆ ಎಂಬ ಆತನ ಸಂಶೋಧನೆಯ ಮೂಲಕ. ಹೌದು ಈತನ ಸಂಶೋಧನೆಯ ಪ್ರಕಾರ ಅತೀತರಾಶಿಯ (ಸೂಪರ್ ಮ್ಯಾಸಿವ್) ಕೃಷ್ಣಕುಹರಗಳಲ್ಲಿ ಜೀವಾಸ್ತಿತ್ವಕ್ಕೆ ಬೇಕಾದಂಥ ವಾತಾವರಣವಿದೆ! ಅಲ್ಲದೇ ಒಂದು ವೇಳೆ ಅಲ್ಲಿ ಈಗಾಗಲೇ ಜೀವಾಸ್ತಿತ್ವ ಇದೆ ಎಂದಾದರೆ ಭೂಮಿಯಲ್ಲಿನ ಜೀವಾಸ್ತಿತ್ವಕ್ಕಿಂತ ಅತ್ಯಧಿಕ ನಾಗರಿಕತೆಯನ್ನು ಬೆಳೆಸಿಕೊಂಡವಾಗಿರುತ್ತವೆ ಮತ್ತು ಎಲ್ಲ ವಿಚಾರಗಳಲ್ಲಿಯೂ ಅವು ನಮ್ಮನ್ನು ಮೀರಿಸುತ್ತವೆ.

ರಷ್ಯನ್ ಅಕಾಡೆಮಿ ಆಫ್ ಸೈನ್ಸ್ ನ ಮಾಸ್ಕೋಸ್ ಇನ್ ಸ್ಟಿಟ್ಯೂಟ್ ಫರ್ ನ್ಯೂಕ್ಲಿಯಾರ್ ರಿಸರ್ಚ್ ವಿಜ್ಞಾನಿಯಾಗಿರುವ ಡುಶ್ಶೇವ್, ಕೃಷ್ಣಕುಹರಗಳ ಬಗ್ಗೆ ಈಗಾಗಲೇ ಇರುವಂಥ ದಾಖಲೆಗಳು ಮತ್ತು ಹೊಸ ಸಂಶೋಧನೆಗಳಿಂದ ತಿಳಿದುಬಂದ ಕೆಲವೊಂದು ಹೊಸ ವಿಚಾರಗಳನ್ನು ಒಗ್ಗೂಡಿಸಿ ವಿಶ್ಲೇಷಿಸಿದಾಗ ಕೆಲವೊಂದು ಮಾದರಿಯ ಕೃಷ್ಣಕುಹರಗಳಲ್ಲಿ ಜೀವಾಸ್ತಿತ್ವಕ್ಕೆ ಅನುಕೂಲವಾಗುವಂಥ ಅಂಶವಿದೆ ಎಂದೆನೆಸುತ್ತದೆ ಎಂದಿದ್ದಾರೆ. ಅತ್ಯಧಿಕ ವಿದ್ಯುದಾವೇಶ ಹೊಂದಿರುವ ಮತ್ತು ಸದಾ ಪರಿಭ್ರಮಿಸುತ್ತಿರುವಂಥ ಕೃಷ್ಣಕುಹರಗಳೊಳಗೆ ಇರುವಂಥ ಕೆಲವೊಂದು ಪ್ರದೇಶಗಳಲ್ಲಿ ಫೋಟಾನ್ ಗಳು ಸ್ಥಿರ ಕಕ್ಷೆಯಲ್ಲಿ ಪರಿಭ್ರಮಿಸಲು ಸಾಧ್ಯವಾಗುತ್ತದೆ. ಇಂಥ ಕಕ್ಷೆಗಳ ಮತ್ತು ಅವುಗಳ ಕಾರ್ಯಸ್ವರೂಪದ ಬಗ್ಗೆ ಡುಶ್ಶೇವ್ ಅಧ್ಯಯನ ನಡೆಸುತ್ತಿದ್ದಾರೆ.

ಒಂದು ವೇಳೆ ಕೃಷ್ಣಕುಹರಗಳ ಒಳಗೆ ಫೋಟಾನ್ ಗಳಿಗೆ ಸ್ಥಿರ ಕಕ್ಷೆ ಇದ್ದದ್ದೇ ಆದಲ್ಲಿ, ಗ್ರಹಗಳಂತ ದೊಡ್ಡ ಕಾಯಗಳಿಗೂ ಸ್ಥಿರ ಕಕ್ಷೆ ಯಾಕಿರಬಾರದು? ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂಬುದು ಡುಶ್ಶೇವ್ ವಾದ. ಆದರೆ ಇದರ ಸತ್ಯಾಸತ್ಯತೆಯನ್ನು, ಅಂದರೆ ದೊಡ್ಡ ಕಾಯಗಳಿಗೂ ಸ್ಥಿರ ಕಕ್ಷೆ ಇದೆಯೇ ಎಂಬುದನ್ನು ಕಂಡುಕೊಳ್ಳುವುದಕ್ಕೆ ಇವೆಂಟ್ ಹಾರಿಝಾನ್ (ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಯಾವ ಪ್ರದೇಶದಲ್ಲಿ ಕಾಲ ಮತ್ತು ವಿಶ್ವಗಳು ಒಂದಾಗುತ್ತವೆಯೋ ಅಥವಾ ಯಾವ ಪ್ರದೇಶದಿಂದ ಆಚೆಗೆ ನಡೆಯುವಂಥ ವಿದ್ಯಮಾನಗಳನ್ನನು ಗಮನಿಸುವುದಕ್ಕೆ ಸಾಧ್ಯವಿಲ್ಲವೋ ಆ ಪ್ರದೇಶ ಇವೆಂಟ್ ಹಾರಿಝಾನ್, event horizon)ನ್ನು ದಾಟಿ ಹೋಗಬೇಕಾಗುತ್ತದೆ,

ಆದರೆ ಈ ಇವೆಂಟ್ ಹಾರಿಝಾನ್ ಗಿಂತ ಆಕಡೆಗೆ ಇನ್ನೂ ಒಂದು ಪ್ರದೇಶವಿದೆ; ಅದು- ಕೌಶಿ ಹಾರಿಝಾನ್ (Cauchy horizon)- ಇಲ್ಲಿ ಕಾಲ ಮತ್ತು ವಿಶ್ವ ಮತ್ತೆ ತಮ್ಮ ಸಹಜ ಸ್ಥಿರ ಸ್ಥಿತಿಗೆ ಬರುತ್ತವೆ. ಹೀಗಾಗಿ ಒಂದು ವೇಳೆ ಕಪ್ಪುರಂಧ್ರಗಳೊಳಗೆ ಜೀವಾಸ್ತಿತ್ವ ಇದ್ದದ್ದೇ ಆದಲ್ಲಿ ಇದೇ ಪ್ರದೇಶದಲ್ಲಿರಬೇಕು. ಅಲ್ಲದೆ ಒಂದು ವೇಳೆ ಜೀವಾಸ್ತಿತ್ವ ಇರುವುದು ನಿಜವಾದರೆ ಆ ಜೀವಿಗಳು ನಮಗಿಂತ ಹೆಚ್ಚು ವಿಕಾಸವಾಗಿರಬಹುದು. ಡುಶ್ಶೇವ್ ಅವರ ಚಿಂತನೆ ಕೇವಲ ಥಿಯರಿಟಿಕಲ್ ಎನ್ನಿಸಿದರೂ ಸಹ ಇದು ಯಾಕೆ ನಿಜವಿರಬಾರದು ಎಂಬ ಅನುಮಾನವಂತೂ ಕಾಡುತ್ತದೆ. ಇರಲಿ, ಇದರ ಮುಂದಿನ ಫಲಿತಾಂಶಕ್ಕಾಗಿ ಕಾಯೋಣ, ಅಲ್ಲವೇ?

Comments

  1. very nice info sir, i always read your blog, its very informative--- manasa

    ReplyDelete
  2. ಹ್ಮ್.. ಹೌದು. ಚೆನ್ನಾಗಿದೆ ಲೇಖನ.

    ReplyDelete
  3. Time and Space ಅನ್ನು "ಕಾಲ ಮತ್ತು ದೇಶ" ಎಂದೆನ್ನುವುದು ಹೆಚ್ಚು ಸೂಕ್ತ ಎನ್ನಿಸುತ್ತದೆ.

    ಲೇಖನ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು.

    ReplyDelete
  4. ವಿಜ್ಞಾನ ಎನ್ನುವುದು ಬರೀ ಊಹೆ ಆಗಬಾರದು. ಅದಕ್ಕೆ ಆಧಾರ ಇರಬೇಕು. ಆದರೆ ಅಗಣಿತ ದೂರದ ಬಾಹ್ಯಾಕಾಶದಲ್ಲಿನ ಆಗು ಹೋಗುಗಳ ಬಗ್ಗೆ ಊಹೆ ಮಾಡುವುದನ್ನು ಬಿಟ್ಟರೆ ವಿಜ್ಞಾನಿಗಳು ಇನ್ನೇನು ಮಾಡಲು ಸಾಧ್ಯ? ಹಾಗಾಗಿ ಊಹೆಯೇ ಸತ್ಯ ಎಂದು ಭ್ರಮಿಸಬಹುದು. ಆ ಭ್ರಮೆಯಲ್ಲಿ ದೂರದಲ್ಲಿ ಎಲ್ಲೋ ನಮ್ಮಂತಹ ಅಥವಾ ನಮಗಿಂತ ಮುಂದುವರಿದ ಜೀವಿಗಳು ಇರಬಹುದೆಂದು ನಂಬಿ ಖುಶಿಪಡಲೇನೂ ಅಡ್ಡಿಯಿಲ್ಲ. ಕೃಷ್ಣ ಕುಹರಗಳ ಒಳಗೆ ಕಾಲ - ಅವಕಾಶ (ಟೈಮ್- ಸ್ಪೇಸ್) ಸಮತೋಲ ಮುರಿದು ಬೀಳುತ್ತದೆ ಎಂದು ಎಲ್ಲೋ ಓದಿದ ನೆನಪು. ಆದ್ದರಿಂದ ಕೃಷ್ಣ ಕುಹರಗಳ ಆಚೆಗೆ ಜೀವಿಗಳ ಅಸ್ತಿತ್ವವನ್ನು ಊಹಿಸಬಹುದೇ ಹೊರತು ಕೃಷ್ಣ ಕುಹರಗಳಒಳಗಲ್ಲ.

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು