ಮಾನವ ಮೀನಿನ ರೂಪಾಂತರವೇ?

ಬಹುಶಃ ಇಂಥದ್ದೊಂದು ಪ್ರಶ್ನೆ ಕೇಳಿದರೆ, ಮನುಷ್ಯನನ್ನು ಇಷ್ಟೊಂದು ಲೇವಡಿ ಮಾಡುತ್ತಿದ್ದಾರೆಯೇ ಎಂದು ಯಾರಾದರೂ ಭಾವಿಸಬಹುದೋ ಏನೋ? ಆದರೂ ಈ ಮನುಷ್ಯನೆಂಬೋ ಜೀವಿ ಭೂಮಿಗೆ ಬಂದದ್ದಾದರೂ ಎಲ್ಲಿಂದ? ತಾನೇ ತಾನಾಗಿ ಭೂಮಿಯ ಮೇಲೆ ಪ್ರತ್ಯಕ್ಷನಾದನೇ? ಅಥವಾ ಜೀವ ವಿಕಾಸದ ಹಂತದಲ್ಲಿ ಯಾವುದೋ ಪುಟ್ಟ ಜೀವಿ ವಿಕಾಸ ಹೊಂದಿ ಮನುಷ್ಯ ರೂಪವನ್ನು ತಾಳಿತೋ?

ನಿಜ, ಈ ಎಲ್ಲ ಪ್ರಶ್ನೆಗಳ ಬಗ್ಗೆ ವೈಜ್ಞಾನಿಕ ಲೋಕದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. `ಮಂಗನಿಂದ ಮಾನವ'ನ ವಿಕಾಸವಾಯಿತು ಎಂದು ಇದುವರೆಗೆ ಹೇಳುತ್ತಲೇ ಬಂದಿದ್ದೇವೆ. ಇದಕ್ಕೂ ಹಿಂದಿನ ವಿಕಾಸವಾದದ ಹಂತಗಳೇನಾದರೂ ಇವೆಯೇ ಎಂಬ ಚಿಂತನೆ ವೈಜ್ಞಾನಿಕ ಜಗತ್ತಿನಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದರ ಫಲವೇ ಹಲವಾರು ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ಈ ಸಂಶೋಧನೆಗಳ ಪೈಕಿ, ಮೋನಾಶ್ ಯೂನಿವರ್ಸಿಟಿಯಲ್ಲಿನ ಆಸ್ಟ್ರೇಲಿಯನ್ ರಿಜನರೇಟಿವ್ ಮೆಡಿಸಿನ್ ಸಂಸ್ಥೆಯ ಪ್ರೊ. ಪೀಟರ್ ಕ್ಯೂರಿ ಮತ್ತು ಯೂನಿವರ್ಸಿಟಿ ಆಫ್ ಸಿಡ್ನಿಯ ಪ್ರೊ. ನಿಕೊಲಸ್ ಕೋಲ್ ನೇತೃತ್ವದ ವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆ ಅಚ್ಚರಿ ಹುಟ್ಟಿಸುವಂತಿದೆ. ಕಾರಣ, ಇವರ ಸಂಶೋಧನೆಯಿಂದ ತಿಳಿದು ಬಂದದ್ದು ಏನೆಂದರೆ- ಮಾನವರು ಮೀನಿನ ರೂಪಾಂತರವಾಗಿರಬೇಕು!

ವಿವಿಧ ಜಾತಿಯ ಮೀನುಗಳಲ್ಲಿ ಮಾಂಸಖಂಡಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಸಂಶೋಧನೆಗೆ ಒಳಪಡಿಸಿದಂಥ ವಿಜ್ಞಾನಿಗಳು, ಮಾನವನಲ್ಲಿಯೂ ಇದೇ ರೀತಿಯಲ್ಲಿ ಮಾಂಸಖಂಡಗಳು ಬೆಳೆಯುವುದನ್ನು ಕಂಡುಕೊಂಡಿದ್ದಾರೆ. ಇದರೊಂದಿಗೆ ಸುಮಾರು 40 ಕೋಟಿಗೂ ಅಧಿಕ ವರ್ಷಗಳ ಹಿಂದಿನ ನಮ್ಮ ಪೂರ್ವಜರು ಮಿನುಗಳ ರೂಪಾಂತರವೇ ಆಗಿರಬೇಕು ಎಂಬ ವಾದವನ್ನು ವಿಜ್ಞಾನಿಗಳ ತಂಡ ಮಂಡಿಸುತ್ತಿದೆ.

 ನಾಲ್ಕು ಕಾಲುಗಳುಳ್ಳ ಪ್ರಾಣಿಗಳು ಭೂಮಿಯ ಮೇಲೆ ವಿಕಾಸ ಹೊಂದುವುದಕ್ಕೆ ಲಂಗ್ ಫಿಶ್ ಜಾತಿಯ ಮೀನುಗಳೇ ಕಾರಣ ಎಂದು ವೈಜ್ಞಾನಿಕ ಜಗತ್ತು ಈ ಹಿಂದಿನಿಂದಲೂ ನಂಬಿಕೊಂಡು ಬಂದಿದೆ. ಈ ಜಾತಿಯ ಮೀನುಗಳು ನೆಲದ ಮೇಲೆ ತಮ್ಮ ಈಜುರೆಕ್ಕೆಗಳಲ್ಲಿನ ಮಾಂಸಖಂಡಗಳನ್ನು ಬಳಸಿ ಉಸಿರಾಡುವ ಸಾಮರ್ಥ್ಯ ಹೊಂದಿವೆ ಮತ್ತು ಈ ಮೂಲಕ ಭೂಮಿಯ ಮೇಲೆಯೂ ಸಹ ಬದುಕಬಲ್ಲವಾಗಿವೆ. ಆದರೆ ಪ್ರಸ್ತುತ ಈ ಜಾತಿಯ ಮೀನುಗಳು ಅವಸಾನದ ಅಂಚಿನಲ್ಲಿವೆ. ಹಿಗಾಗಿ ಈ ಜಾತಿಯ ಮೀನುಗಳ ಪಳೆಯುಳಿಕೆಗಳನ್ನಷ್ಟೇ ವೈಜ್ಞಾನಿಕ ಜಗತ್ತು ಈ ಹಿಂದೆ ಅಧ್ಯಯನ ಮಾಡುವುದಕ್ಕೆ ಸಾಧ್ಯವಾಗಿತ್ತು. ಆದರೆ ಆಸ್ಟ್ರೀಲಿಯಾದಲ್ಲಿ ಈ ಜಾತಿಯ ಮೂರು ಉಪಜಾತಿಯ ಮೀನುಗಳು ಇನ್ನೂ ಇವೆ. ಇವುಗಳಲ್ಲಿ ಎರಡು ಜಾತಿಯ ಮೀನುಗಳು ಆಸ್ಟ್ರೇಲಿಯಾದ ಸಾಗರದಲ್ಲಿ ಕಂಡುಬಂದರೆ ಇನ್ನೊಂದು ಜಾತಿಯ ಮೀನು ಕ್ವೀನ್ಸ್ ಲ್ಯಾಂಡ್ ಮೇರಿ ನದಿಯ ಜಲಾನಯನ ಪ್ರದೇಶದಲ್ಲಿ ಕಂಡುಬರುತ್ತದೆ. ಈ ವಿಜ್ಞಾನಿಗಳ ತಂಡ ಈ ಮುರೂ ಉಪಜಾತಿಯ ಮೀನುಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ.

ಮುಖ್ಯವಾಗಿ ಈ ಮೀನುಗಳಲ್ಲಿ ಈಜುರೆಕ್ಕೆಗಳ ಮಾಂಸಖಂಡಗಳು ಹೇಗೆ ವಿಕಾಸ ಹೊಂದಿದವು ಎಂಬುದನ್ನು ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದೆ. ಅದರಲ್ಲೂ ಮುಖ್ಯವಾಗಿ ಮುಂಭಾಗದಲ್ಲಿರುವ ಪೆಲ್ವಿಕ್ ಫಿನ್ (ಜೋಡಿ ಈಜುರೆಕ್ಕೆಗಳು- ಇವು ಮೇಲಕ್ಕೆ, ಕೆಳಕ್ಕೆ ಹೋಗುವುದಕ್ಕೆ ಮತ್ತು, ತಿರುಗುವುದಕ್ಕೆ ಮೀನುಗಳಿಗೆ ನೆರವಾಗುತ್ತವೆ.)ಗಳ ವಿಕಾಸವನ್ನು ಅಧ್ಯಯನ ಮಾಡಿದ್ದಾರೆ. ಯಾಕೆಂದರೆ ಇವೇ ಈಜುರೆಕ್ಕೆಗಳು ನಾಲ್ಕು ಕಾಲುಗಳುಳ್ಳ ಪ್ರಾಣಿಗಳಲ್ಲಿ ಹಿಂಗಾಲುಗಳಾಗಿ ಬದಲಾದವು ಎಂದು ನಂಬಲಾಗಿದೆ. ಇಂತಿರುವಾಗ ಈ ಈಜುರೆಕ್ಕೆಗಳಿಂದ ಕಾಲುಗಳು ಮತ್ತು ಮೀನುಗಳಿಂದ ನಾಲ್ಕುಕಾಲಿನ ಪ್ರಾಣಿಗಳು ಹೇಗೆ ವಿಕಾಸ ಹೊಂದಿದವು ಮತ್ತು ಈ ಎರಡು ಕಶೇರುಕಗಳಲ್ಲಿ (ಬೆನ್ನು ಮೂಳೆಗಳುಳ್ಳ ಜೀವಿಗಳು) ಏನಾದರೂ ಸಾಮ್ಯತೆ ಅಥವಾ ವ್ಯತ್ಯಾಸವಿದೆಯೇ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಿದ್ದಾರೆ ವಿಜ್ಞಾನಿಗಳು.

ಇದಕ್ಕಾಗಿ ವಿಜ್ಞಾನಿಗಳು ಆಸ್ಟ್ರೇಲಿಯಾದ ಬ್ಯಾಂಬೂ ಶಾರ್ಕ್ ಮತ್ತು ಇದರ ಸೋದರ ಸಂಬಂಧಿ ಎಲಿಫೆಂಟ್ ಶಾರ್ಕ್ (ಇವು ವಿಕಾಸದ ಕಾಲಕ್ಕೆ ಸಮೀಪದ ನಂಟು ಹೊಂದಿರುವ ಮೃದ್ವಸ್ಥಿ ಮೀನುಗಳು ಆಥವಾ primitive cartilaginous fish) ಮತ್ತು ಆಸ್ಟ್ರೇಲಿಯಾದ ಲಂಗ್ ಫಿಶ್, ಝೀಬ್ರಾ ಫಿಶ್ ಮತ್ತು ಅಮೆರಿಕದ ಪ್ಯಾಡಲ್ ಫಿಶ್ (ಇವು ಮೂಳೆ ಮೀನುಗಳು ಅಥವಾ bony fishes)ಗಳನ್ನು ಅಧ್ಯಯನಕ್ಕೆ ಒಳಪಡಿಸಿದರು. ಮೂಳೆಮೀನುಗಳು ಅದರಲ್ಲೂ ಮುಖ್ಯವಾಗಿ ಲಂಗ್ ಫಿಶ್ ಗಳು ನಾಲ್ಕು ಕಾಲಿನ ಪ್ರಾಣಿಗಳಿಗೆ ಅತ್ಯಂತ ಸಮೀಪದ ಸಂಬಂಧ ಹೊಂದಿರುವ ಪೂರ್ವಜರು.

ವಿಜ್ಞಾನಿಗಳ ತಂಡ ಈ ಮೀನುಗಳ ಈಜುರೆಕ್ಕೆಗಳ ಮಾಂಸಖಂಡಗಳನ್ನು ಕುಲಾಂತರಿ ತಂತ್ರಜ್ಞಾನಕ್ಕೆ ಒಳಪಡಿಸಿದಾಗ ಸೃಷ್ಟಿಯಾದಂತಹ ಮಾಂಸಖಂಡಗಳು ನಾಲ್ಕು ಕಾಲಿನ ಪ್ರಾಣಿಗಳು ವಿಕಾಸ ಹೊಂದಿದ ಆರಂಭದಲ್ಲಿ ಅವುಗಳ ದೇಹದಲ್ಲಿ ಇದ್ದಂಥ ಮಾಂಸಖಂಡಗಳಾಗಿದ್ದವು. ಪೆಲ್ವಿಕ್ ಫಿನ್ ಮಾಂಸಖಂಡಗಳ ಬೆಳವಣಿಗೆ ಮೂಳೆ ಮೀನುಗಳು ಮತ್ತು ಮೃದ್ವಸ್ಥಿ ಮೀನುಗಳಲ್ಲಿ ಭಿನ್ನವಾಗಿವೆ. ಅಲ್ಲದೆ ಮೂಳೆ ಮೀನಿಗಳ ಮಾಂಸಖಂಡ ರಚನೆ ನಾಲ್ಕುಕಾಲಿನ ಪ್ರಾಣಿಗಳ ವಿಕಾಸಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತಿದೆ. ಅಲ್ಲದೆ, ಈ ಮೀನುಗಳು ಮತ್ತು ನಮ್ಮ ಜೀನೋಮ್(ಜೀವಿಗಳಲ್ಲಿನ ಆನುವಂಶಿಕ ಸಂದೇಶ)ಗಳ ನಡುವೆ ಅಂಥ ಭಿನ್ನತೆಯೇನಿಲ್ಲ. ಇವೆಲ್ಲ ಫಲಿತಾಂಶಗಳನ್ನನು ಒಟ್ಟುಗೂಡಿಸಿ ನೋಡಿದಾಗ ಮಾನವನ ಪೂರ್ವಜರು ಕೂಡಾ ಇವೇ ಮೀನುಗಳೇ ಆಗಿವೆ ಎಂದೆನಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

Comments

  1. ಸರ್ ನಿಮ್ಮ ವೈಜ್ನಾನಿಕ ಬರಹಗಳು ತುಂಬಾ ಓದುಗರನ್ನು ಚಿಂತನೆಗೆ ಹಚ್ಚುತ್ತಿವೆ.... ಕನ್ನಡದಲ್ಲಿ ವಿಜ್ನಾನಕ್ಕೆ ಸಂಬಂದಿಸಿದ ಲೇಖನಗಳು ವಿರಳ..... ಬರೆಯುತ್ತಿರಿ....

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು