ಶುಕ್ರನಲ್ಲಿ ಓಜೋನ್; ಮಂಗಳನಲ್ಲಿ ನೀರಾವಿ
ಒಂದೆಡೆಯಿಂದ ಮಂಗಳಗ್ರಹ ಮತ್ತೆ ಸುದ್ದಿ ಮಾಡಿದರೆ, ತಾನೇನೂ ಕಮ್ಮಿ ಇಲ್ಲ ಎಂಬಂತೆ ಶುಕ್ರನೂ ಸದ್ದು ಮಾಡುತ್ತಿದ್ದಾನೆ. ಈಗಾಗಲೇ ನೀರು ಪತ್ತೆಯಾಗಿರುವಂಥ ಮಂಗಳಗ್ರಹದಲ್ಲಿನ ವಾತಾವರಣದಲ್ಲಿ ನೀರಾವಿ ಪತ್ತೆಯಾಗಿದೆ. ಹೀಗಾಗಿ ಅಲ್ಲಿ ಮಳೆ ಸುರಿಯುತ್ತದೆಯೇ ಎಂಬ ಚಿಂತನೆಗೆ ಇನ್ನಷ್ಟು ಪ್ರಖರತೆಯನ್ನು ಕೊಟ್ಟಿದೆ. ಇತ್ತ ಶುಕ್ರಗ್ರಹದಲ್ಲಿ ಓಜೋನ್ ಪದರ ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಅಂದರೆ, ಸೂರ್ಯನಿಂದ ಬರುವಂಥ ವಿಕಿರಣಗಳು ಶುಕ್ರನ ನೆಲವನ್ನು ಸ್ಪರ್ಶಿಸುವುದಿಲ್ಲ ಎಂಬುದು ಖಾತ್ರಿಯಾಯಿತು. ವಿಕಿರಣಗಳ ಹಾನಿಯಿಲ್ಲ ಎಂದರೆ ಜೀವಾಸ್ತಿತ್ವದ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ.

ಭೂಮಿಯಲ್ಲದೇ ಇನ್ನೂ ಯಾವುದಾದರೂ ಕಾಯಗಳಲ್ಲಿ ಜೀವಾಸ್ತಿತ್ವ ಇರಬಹುದು. ಅದಕ್ಕೆ ಬೇಕಾದಂತಹ ವಾತಾವರಣವನ್ನು ಹಲವಾರು ಕಾಯಗಳು ಹೊಂದಿವೆ ಎಂಬ ಸತ್ಯ ಗೊತ್ತಾದಾಗ ಆಕಾಶ ಕಾಯಗಳ ಬಗೆಗಿನ ವೈಜ್ಞಾನಿಕ ಚಿಂತನೆಯೇ ಬದಲಾಗಿ ಹೋಯಿತು. ಪ್ರತಿಯೊಂದು ಆಕಾಶಕಾಯಗಳಲ್ಲಿಯೂ ಜೀವಾಸ್ತಿತ್ವದ ಸಾಧ್ಯತೆಯನ್ನು ಅಥವಾ ಜೀವಾಸ್ತಿತ್ವ ಇರುವುದಕ್ಕೆ ಪೂರಕವಾದ ವಾತಾವರಣವನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ವೇಗ ಸಿಕ್ಕಿತು. ನಮ್ಮ ಸೌರಮಂಡಲ ಮಾತ್ರವಲ್ಲದೆ, ಬೇರೆ ಬೇರೆ ಸೌರಮಂಡಲಗಳಲ್ಲಿ ಇರುವಂಥ ಕಾಯಗಳಲ್ಲಿಯೂ ಜೀವಾಸ್ತಿತ್ವ ಇರಬಹುದು, ಅಲ್ಲದೆ ಕಪ್ಪುರಂಧ್ರಗಳಲ್ಲಿಯೂ ಜೀವಾಸ್ತಿತ್ವಕ್ಕೆ ಪುರಕ ವಾತಾವರಣ ಇರುವ ಸಾಧ್ಯತೆ ಇದೆ ಎಂಬ ಚಿಂತನೆಗೆ ಪುಷ್ಟಿ ಸಿಕ್ಕಿತು. ವಿವಿಧ ಗ್ರಹಗಳು, ಕ್ಷುದ್ರಗ್ರಹಗಳು ಮತ್ತಿತರ ಆಕಾಶಕಾಯಗಳಲ್ಲಿ ನೀರಿನ ಅಂಶ ಪತ್ತೆಯಾಯಿತು. ಇದೀಗ ಬಾಹ್ಯಾಕಾಶದಿಂದ ಇನ್ನಷ್ಟು ವಿಸ್ಮಯಗಳು ನಮ್ಮ ಕುತೂಹಲವನ್ನು ತಣಿಸುವುದಕ್ಕೆ ಬಂದಿವೆ..........
ಒಂದೆಡೆಯಿಂದ ಮಂಗಳಗ್ರಹ ಮತ್ತೆ ಸುದ್ದಿ ಮಾಡಿದರೆ, ತಾನೇನೂ ಕಮ್ಮಿ ಇಲ್ಲ ಎಂಬಂತೆ ಶುಕ್ರನೂ ಸದ್ದು ಮಾಡುತ್ತಿದ್ದಾನೆ. ಈಗಾಗಲೇ ನೀರು ಪತ್ತೆಯಾಗಿರುವಂಥ ಮಂಗಳಗ್ರಹದಲ್ಲಿನ ವಾತಾವರಣದಲ್ಲಿ ನೀರಾವಿ ಪತ್ತೆಯಾಗಿದೆ. ಹೀಗಾಗಿ ಅಲ್ಲಿ ಮಳೆ ಸುರಿಯುತ್ತದೆಯೇ ಎಂಬ ಚಿಂತನೆಗೆ ಇನ್ನಷ್ಟು ಪ್ರಖರತೆಯನ್ನು ಕೊಟ್ಟಿದೆ. ಇತ್ತ ಶುಕ್ರಗ್ರಹದಲ್ಲಿ ಓಜೋನ್ ಪದರ ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಅಂದರೆ, ಸೂರ್ಯನಿಂದ ಬರುವಂಥ ವಿಕಿರಣಗಳು ಶುಕ್ರನ ನೆಲವನ್ನು ಸ್ಪರ್ಶಿಸುವುದಿಲ್ಲ ಎಂಬುದು ಖಾತ್ರಿಯಾಯಿತು. ವಿಕಿರಣಗಳ ಹಾನಿಯಿಲ್ಲ ಎಂದರೆ ಜೀವಾಸ್ತಿತ್ವದ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ.
ಮಂಗಳನ ಅಂಗಳದಲ್ಲಿ ಹುಡುಕಾಟ ನಡೆಸುತ್ತಿದ್ದಂಥ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಮಾರ್ಸ್ ಎಕ್ಸ್ ಪ್ರೆಸ್ ಗಗನನೌಕೆಯ ಕಣ್ಣಿಗೆ ಮಂಗಳನ ವಾತಾವರಣದಲ್ಲಿ ನೀರಾವಿ ಕಂಡಿದೆ. ಹೀಗಾಗಿ ಮಂಗಳನಲ್ಲಿ ಜಲಚಕ್ರ ಇರುವುದು ಖಚಿತವಾಗಿದೆ. ಅಂದರೆ ಮೋಡಗಳು ಸಾಧ್ರಗೊಂಡು, ಒಂದಕ್ಕೊಂದು ಘರ್ಷಿಸಿ ಮಳೆಯಾಗಿ ಸುರಿದು, ಮತ್ತೆ ಸೂರ್ಯನ ಶಾಖಕ್ಕೆ ಆವಿಯಾಗಿ ನಿರಾವಿಯ ರೂಪದಲ್ಲಿ ವಾತಾವರಣದಲ್ಲಿ ಶೇಖರಗೊಂಡು, ಅದು ಘನೀಕೃತವಾಗಿ ಮೋಡಗಳ ರೂಪ ತಾಳಿ ಮತ್ತೆ ಮಳೆ ಸುರಿಯುವುದು... ಈ ಜಲಚಕ್ರ ಮಂಗಳನಲ್ಲಿ ಇದೆ ಎಂದಾದರೆ ಅದು ಜೀವಾಸ್ತಿತ್ವಕ್ಕೆ ಪೂರಕವಾದಂಥ ಅಂಶ. ಈಗಾಗಲೇ ಮಂಗಳನಲ್ಲಿ ಸಾಗರವಿದೆ ಎಂಬುದು ವಿಜ್ಞಾನಿಗಳ ಗಮನಕ್ಕೆ ಬಂದಿರುವ ಕಾರಣ ಪ್ರಸ್ತುತ ಸಂಶೋಧನೆಯು ಮಂಗಳನ ಬಗ್ಗೆ ಇನ್ನಷ್ಟು ಸ್ಪಷ್ಟ ಚಿತ್ರಣವನ್ನು ನೀಡಿದೆ ಎಂದೇ ಹೇಳಬೇಕು.

ಇತ್ತ ಶುಕ್ರ ಗ್ರಹದಲ್ಲಿ ಓಜೋನ್ ಪದರವನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ ಇದೇ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ವೀನಸ್ ಎಕ್ಸ್ ಪ್ರೆಸ್ ಗಗನನೌಕೆ. ಈ ಗಗನನೌಕೆಯಲ್ಲಿರುವ ಸ್ಪೈಕಾವ್ ಉಪಕರಣ ಶುಕ್ರಗ್ರಹದಲ್ಲಿ ಓಜೋನ್ ಪದರವನ್ನು ಪತ್ತೆ ಮಾಡಿದೆ. ಇದರೊಂದಿಗೆ ಭೂಮ್ಯೇತರ ಆಕಾಶಕಾಯಗಳಲ್ಲಿ ಜೀವಾಸ್ತಿತ್ವ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳ ಚಿಂತನೆ ಬಲಗೊಂಡಿದೆ. ಶುಕ್ರಗ್ರಹದ ಓಜೋನ್ ಪದರದ ಲಕ್ಷಣಗಳನ್ನು ತಿಳಿದುಕೊಂಡ ಬಳಿಕ ಅನ್ಯಗ್ರಹ ಜೀವಿಗಳ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ ಬಾಹ್ಯಾಕಾಶ ವಿಜ್ಞಾನಿಗಳು.
ಓಜೋನ್ ಎಂದರೆ ಆಮ್ಲಜನಕದ ಮೂರು ಅಣುಗಳನ್ನು ಹೊಂದಿರುವಂಥ ಅನಿಲ. ಸೂರ್ಯನ ಬೆಳಕು ಶುಕ್ರಗ್ರಹದಲ್ಲಿನ ಇಂಗಾಲದ ಡೈ ಆಕ್ಸೈಡಿನ ಅಣುಗಳನ್ನು ಭೇದಿಸಿದಾಗ ಉತ್ಪತ್ತಿಯಾದಂಥ ಆಮ್ಲಜನಕದ ಕಣಗಳಿಂದ ಅಲ್ಲಿ ಓಜೋನ್ ಪದರ ನಿರ್ಮಾಣವಾಗಿದೆ. ಸೂರ್ಯನ ಕಿರಣಗಳೊಂದಿಗೆ ಇಂಗಲದ ಡೈ ಆಕ್ಸೈಡ್ ರಾಸಾಯನಿಕ ಕ್ರಿಯೆಗೆ ಒಳಗಾದಾಕ ಆಮ್ಲಜನಕದ ಕಣಗಳು ಉತ್ಪತ್ತಿಯಾಗಿ ಅವು ಗಾಳಿಯ ಮೂಲಕ ಶುಕ್ರಗ್ರಹದ ಇನ್ನೊಂದು ಭಾಗಕ್ಕೆ ಚಲಿಸಿವೆ. ಈ ರೀತಿ ಚಲಿಸುವಾಗ ಇನ್ನೊಂದು ಆಮ್ಲಜನಕದ ಕಣದೊಂದಿಗೆ ಸಂಯೋಗಗೊಂಡು ಎರಡು ಅಣುಗಳುಳ್ಳ ಆಮ್ಲಜನಕ (O2) ಮತ್ತು ಮೂರು ಅಣುಗಳುಳ್ಳ ಓಜೋನ್ (O3) ಕಣಗಳು ಸೃಷ್ಟಿಯಾಗಿವೆ. ಇದು ಶುಕ್ರಗ್ರಹದಲ್ಲಿ ನಡೆಯುವಂಥ ರಾಸಾಯನಿಕ ಕ್ರಿಯೆಗಳನ್ನು ಹೆಚ್ಚು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ.
ಜೀವಾಸ್ತಿತ್ವ ಇದೆಯೇ?
ನಮ್ಮ ಭೂಮಿಯಲ್ಲಿ ಜೀವಾಸ್ತಿತ್ವ ಇದೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ನೀರು, ಗಾಳಿ ಮತ್ತು ಓಜೋನ್ ಪದರ. ನೀರು ಭೂಮಿಯ ಮೇಲಿದ್ದರಷ್ಟೇ ಸಾಲುವುದಿಲ್ಲ. ಜಲಚಕ್ರದ ಮೂಲಕ ಅದು ಮಳೆಯಾಗಿ ಸುರಿಯಬೇಕು. ಗಾಳಿಯಲ್ಲಿ ಇಂಗಾಲ, ಆಮ್ಲಜನಕ, ಸಾರಜನಕ ಎಲ್ಲವೂ ನಿಗದಿತ ಪ್ರಮಾಣದಲ್ಲಿರಬೇಕು. ಇವುಗಳ ಪೈಕಿ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ (ಸಸ್ಯಗಳು ಆಹಾರ ತಯಾರಿಸುವುದೇ ಇದರಿಂದಾದ ಕಾರಣ ಇದೂ ಮುಖ್ಯವೇ) ಅತೀ ಮುಖ್ಯ. ಇನ್ನು ಓಜೋನ್ ಪದರ ಇಲ್ಲ ಎಂದಾದರೆ ಸೂರ್ಯನಿಂದ ಬರುವಂಥ ವಿಕಿರಣಗಳ ಬಾಧೆಯನ್ನು ತಾಳಲಾರದೆ ಜೀವಿಗಳು ಸಾಯುತ್ತಿದ್ದವು.
ಇಂತಿರುವಾಗ ಶುಕ್ರಗ್ರಹದಲ್ಲಿರುವ ಓಜೋನ್ ಪದರ, ಮಂಗಳ ಗ್ರಹದಲ್ಲಿರುವ ನೀರಿನ ಪ್ರಮಾಣ ಅನ್ಯಗ್ರಹ ಜೀವಿಗಳ ಬಗ್ಗೆ ಹೆಚ್ಚು ಸ್ಪಷ್ಟತೆಯನ್ನು ಮೂಡಿಸಿವೆ. ಭೂಮಿಯನ್ನು ಹೊರತುಪಡಿಸಿ ಇತರ ಆಕಾಶಕಾಯಗಳಲ್ಲಿ ಜೀವಾಸ್ತಿತ್ವ ಇರಬಹುದು ಎಂಬ ಕಲ್ಪನೆಯನ್ನು ಬಲಪಡಿಸುತ್ತವೆ. ಇಲ್ಲಿ ಇನ್ನೂ ಒಂದು ವಿಚಾರವನ್ನು ನಾವು ಸ್ಪಷ್ಟ ಮಾಡಿಕೊಳ್ಳಬೇಕು: ಅನ್ಯಗ್ರಹ ಜೀವಿಗಳು ಭೂಮಿಯಲ್ಲಿನ ಜೀವಿಗಳಂತೆಯೇ ಇರಬೇಕಿಲ್ಲ!
ಈ ಎರಡು ಗ್ರಹಗಳಲ್ಲಿ ಜೀವಾಸ್ತಿತ್ವ ಇದೆಯೋ ಇಲ್ಲವೋ ಎಂಬುದರ ಹುಡುಕಾಟವೂ ಆಗಬೇಕು, ಜೊತೆಗೆ ಇತರ ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹಗಳು... ಮತ್ತಿತರ ಎಲ್ಲ ಕಾಯಗಳಲ್ಲಿಯೂ ಜೀವಾಸ್ತಿತ್ವದ ಹುಡುಕಾಟ ಸಾಗಬೇಕು. ಇದೇನೂ ಸುಲಭದ ವಿಚಾರ ಅಲ್ಲ. ತಕ್ಷಣಕ್ಕೆ ನಮ್ಮ ಕಾರ್ಯ ಯಶಸ್ವಿಯಾಗುತ್ತದೆ ಎಂದು ಹೇಳುವುದೂ ಕಷ್ಟ. ಆದರೆ ವೈಜ್ಞಾನಿಕ ಜಗತ್ತು ತನ್ನ ಒಂದು ಪೂರ್ವಾಗ್ರಹವನ್ನು ತ್ಯಜಿಸಿ ಹುಡುಕಾಟ ನಡೆಸುವುದು ಸೂಕ್ತ: ಅದು- ಜೀವಿಗಳು ಎಂದರೆ ಹೀಗೆಯೇ ಇರಬೇಕು ಎಂಬುದು. ಯಾವ ರೀತಿ ಭೂಮಿಯ ಮೇಲೆ ಭಿನ್ನ ರೀತಿಯ ಜೀವಿಗಳನ್ನು ಕಾಣುತ್ತೇವೆಯೋ ಇಲ್ಲಿಗಿಂತಲೂ ಭಿನ್ನವಾದ ಜೀವಾಸ್ತಿತ್ವ ಇತರ ಕಾಯಗಳಲ್ಲಿ ಇರಬಹುದು. ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದುವರೆಗೆ ಅನ್ಯಗ್ರಹ ಜೀವಾಸ್ತಿತ್ವಕ್ಕಾಗಿನ ತಡಕಾಟದಿಂದ ಸಿಕ್ಕಿರುವಂಥ ಫಲಿತಾಂಶ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದ್ದು, ಈ ವಿಚಾರದಲ್ಲಿ ವಿಜ್ಞಾನಿಗಳ ಸಾಧ್ಯತೆ ಮೆಚ್ಚುವಂಥದ್ದು. ಆದರೆ ಸಾಗಿದ್ದು ಬಹಳ ಕಡಿಮೆ; ಸಾಗಬೇಕಾಗಿರುವ ದೂರ ಇನ್ನೂ ಬಹಳಷ್ಟಿದೆ.
hi its very nice and important information
ReplyDeletenice vishnupriya.. olle mahitigaagi dhanyavaadagalu :-)
ReplyDeleteVery Good
ReplyDelete