ಕೃಷ್ಣಕುಹರದ ರಹಸ್ಯಗಳು....


ಕಪ್ಪು ರಂಧ್ರಗಳು ಸಾಮಾನ್ಯವಾಗಿ ಅತ್ಯಧಿಕ ರಾಶಿಯನ್ನು ಹೊಂದಿರುತ್ತವೆ. ಮರ್ಕಾರಿಯನ್  509 ಗೆಲಾಕ್ಸಿಯಲ್ಲಿ ಇರುವಂಥ, ನಮ್ಮ ಸೂರ್ಯನಿಗಿಂತ 30 ಕೋಟಿ ಪಟ್ಟು ಅಧಿಕ ರಾಶಿಯನ್ನು ಹೊಂದಿರುವಂಥ ಕಪ್ಪುರಂಧ್ರವನ್ನು ವಿಜ್ಞಾನಿಗಳ ತಂಡ ಅಧ್ಯಯನಕ್ಕೆ ಒಳಪಡಿಸಿದಾಗ ಈ ವಿಸ್ಮಯಗಳು ಹೊರ ಬಿದ್ದಿವೆ.

ಬಾಹ್ಯಾಕಾಶ ವಿಜ್ಞಾನವೇ ಹಾಗೆ. ತಿಳಿದಷ್ಟೂ ಹೆಚ್ಚು ಹೆಚ್ಚು ವಿಸ್ಮಯಗಳು ಅನಾವರಣಗೊಳ್ಳುತ್ತಾ, ಕುತೂಹಲವನ್ನು, ಕೌತುಕವನ್ನು ಹೆಚ್ಚಿಸುತ್ತಾ ಇರುತ್ತವೆ. ಗ್ರಹಗಳು, ನಕ್ಷತ್ರಗಳು, ಧೂಮಕೇತುಗಳು... ಹೀಗೆ ಪ್ರತಿಯೊಂದು ಆಕಾಶಕಾಯಗಳೂ ವಿಸ್ಮಯಗಳ ಆಗರ. ಒಂದೊಂದು ಕಾಯವೂ ವೈಜ್ಞಾನಿಕ ಜಗತ್ತನ್ನು ತನ್ನ ವಿಸ್ಮಯಗಳಿಂದಲೇ ತನ್ನತ್ತ ಸೆಳೆದುಕೊಳ್ಳುವಂಥ ಸಾಮರ್ಥ್ಯ ಉಳ್ಳವುಗಳು. ಅದರಲ್ಲಿಯೂ ವಿಜ್ಞಾನಿಗಳನ್ನು ಇಂದಿಗೂ ಕಾಡುತ್ತಿರುವಂಥ ಕಾಯಗಳೆಂದರೆ ಕೃಷ್ಣಕುಹರಗಳು, ಅಂದರೆ ಕಪ್ಪುರಂಧ್ರಗಳು ಅಥವಾ ಬ್ಲ್ಯಾಕ್ ಹೋಲ್ ಗಳು.

ಈ ಕೃಷ್ಣಕುಹರಗಳೊಳಗೆ ಹಲವಾರು ಸಹಸ್ಯಗಳು ಅಡಗಿವೆ. ಜಗತ್ತಿನ ಸೃಷ್ಟಿಯ ಬಗ್ಗೆ, ಸೃಷ್ಟಿಯ ಮೂಲದ ಬಗ್ಗೆ, ಈ ಬ್ರಹ್ಮಾಂಡದ ಭವಿಷ್ಯದ ಬಗ್ಗೆ ಇವುಗಳಿಂದಲೇ ಮಾಹಿತಿ ಸಿಗಬಹುದು ಎಂದು ವಿಜ್ಞಾನಿಗಳು ಅಂದುಕೊಂಡಿದ್ದಾರೆ. ಕಪ್ಪು ರಂಧ್ರಗಳು ತಮ್ಮ ಗುರುತ್ವಾಕರ್ಷಣ ಶಕ್ತಿಗೆ ಸಿಲುಕಿದಂಥ ಎಲ್ಲವನ್ನು ಸ್ವಾಹಾ ಮಾಡುತ್ತವೆ, ಬೆಳಕನ್ನು ಸಹ ಬಿಡುವುದಿಲ್ಲ ಎಂದೂ ವೈಜ್ಞಾನಿಕ ಜಗತ್ತು ಭಾವಿಸಿತ್ತು. ಇದರ ಹಿಂದಿನ ರಹಸ್ಯಗಳು ಹೀಗೆ ಇರಬಹುದು ಎಂದು ಅಂದಾಜಿಸಲಾಗಿದ್ದರೂ ಸಹ ನಿಖರವಾಗಿ ಯಾವುದನ್ನೂ ಹೇಳುವುದಕ್ಕೆ ವೈಜ್ಞಾನಿಕ ಜಗತ್ತಿಗೆ ಸಾಧ್ಯವಾಗಿಲ್ಲ. ಹೀಗಾಗಿ ಕಪ್ಪುರಂಧ್ರಗಳ ಸುತ್ತ ವಿಜ್ಞಾನಿಗಳ ಚಿಂತನಾಲೋಕವೇ ಸೃಷ್ಟಿಯಾಗಿದೆ. ಅವುಗಳ ಬಗ್ಗೆ ಮಾಹಿತಗಳನ್ನು ಹೇಗೆಲ್ಲ ತಿಳಿದುಕೊಳ್ಳಬಹುದು ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ, ಅದಕ್ಕೆ ಹಲವಾರು ರೀತಿಯಲ್ಲಿ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಆದರೆ ಬಹಳ ಕಾಲದಿಂದ ವಿಜ್ಞಾನಿಗಳು ತಮ್ಮ ಪ್ರಯತ್ನವನ್ನು ನಡೆಸುತ್ತಿದ್ದರೂ ಸಹ ಕಪ್ಪುರಂಧ್ರಗಳು ತಮ್ಮ ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ.

ಇಂತಿರಬೇಕಾದರೆ ಎಸ್ಆರ್ಒಎನ್ ನೆದರ್ಲೆಂಡ್ಸ್  ಸಂಸ್ಥೆಬಾಹ್ಯಾಕಾಶ ಸಂಶೋಧನಾ ವಿಭಾಗದ ಡಾ. ಜೆಲ್ ಕಾಸ್ತ್ರಾ ನೇತೃತ್ವದ ತಂಡ ನಡೆಸಿದಂಥ ಸಂಶೋಧನೆ ಕಪ್ಪುರಂಧ್ರಗಳ ಬಗ್ಗೆ ಅಚ್ಚರಿಯ ಫಲಿತಾಂಶಗಳನ್ನು ನೀಡಿದೆ. ಇದುವರೆಗೆ ಕಪ್ಪು ರಂಧ್ರಗಳು ತಮ್ಮ ವ್ಯಾಪ್ತಿಗೆ ಬಂದದ್ದೆಲ್ಲವನ್ನೂ ಸ್ವಾಹಾ ಮಾಡುತ್ತವೆ ಎಂದು ನಂಬಲಾಗಿತ್ತಲ್ಲ, ಇದನ್ನೇ ಸುಳ್ಳು ಅಂತ ಹೇಳುತ್ತಿದೆ ಇವರ ಸಂಶೋಧನೆ. ಕಪ್ಪುರಂಧ್ರಗಳ ಸುತ್ತ ಸಾಂದ್ರ ಗಳಿ ಹರಡಿಕೊಂಡಿರುತ್ತದೆ. ಈ ಗಾಳಿಯನ್ನೆಲ್ಲ ಕಪ್ಪುರಂಧ್ರ ತನ್ನ ತೀರದ ಆಹಾರ ದಾಹಕ್ಕೆ ಇರುವಂಥ ತಿನಿಸೋ ಎಂಬಂತೆ ಸೇವಿಸುತ್ತಿರುತ್ತದೆ. ಈ ಪ್ರಕ್ರಿಯೆ ನಡೆಯುವಾಗ ಕಪ್ಪುರಂಧ್ರಗಳಿಂದ ಭಾರೀ ಪ್ರಮಾಣದ ನೇರಳಾತೀತ ಮತ್ತು ಕ್ಷ-ಕಿರಣಗಳು ಹೊರ ಹೊಮ್ಮುತ್ತವೆ.

ಈ ರೀತಿಯಲ್ಲಿ ಹೊರಹೊಮ್ಮುವಂಥ ಕಿರಣಗಳು ಅದೆಷ್ಟು ಶಕ್ತಿಶಾಲಿಯಾಗಿರುತ್ತವೆ ಎಂದರೆ ಕಪ್ಪುರಂಧ್ರಗಳ ಉದರದೊಳಕ್ಕೆ ನುಗ್ಗುತ್ತಿರುವಂಥ ಗಾಳಿಯಲ್ಲಿ ಒಂದು ಭಾಗದ ಹಾದಿಯನ್ನು ತಿರುಗಿಸಿ ಕಪ್ಪುರಂಧ್ರದಿಂದ ಹೊರಕ್ಕೆ ಸೆಳೆಯುತ್ತದೆ. ಕಪ್ಪುರಂಧ್ರ ಮತ್ತು ಬಿಸಿ ಗಾಳಿಯ ಪದರದ ಮೇಲ್ಭಾಗದಲ್ಲಿ ಒಂದು ಪರಿವರ್ತಕ ಪ್ರಭಾವಲಯ (ಕನ್ವರ್ಟರ್ ಕರೋನಾ) ಸುತ್ತು ಹೊಡೆಯುತ್ತಿದ್ದು, ಇಲ್ಲಿಂದ ಶೀತಲ ಗಾಳಿ ಸುಮಾರು ಪ್ರತಿ ಸೆಕೆಂಡಿಗೆ 700 ಕಿಲೋ ಮೀಟರ್ ವೇಗದಲ್ಲಿ ಬುಲ್ಲೆಟ್ನಂತೆ ಹೊರ ಹೊಮ್ಮುತ್ತದೆ.
ಕಪ್ಪು ರಂಧ್ರಗಳು ಸಾಮಾನ್ಯವಾಗಿ ಅತ್ಯಧಿಕ ರಾಶಿಯನ್ನು ಹೊಂದಿರುತ್ತವೆ. ಮರ್ಕಾರಿಯನ್ 509 ಗೆಲಾಕ್ಸಿಯಲ್ಲಿ ಇರುವಂಥ, ನಮ್ಮ ಸೂರ್ಯನಿಗಿಂತ 30 ಕೋಟಿ ಪಟ್ಟು ಅಧಿಕ ರಾಶಿಯನ್ನು ಹೊಂದಿರುವಂಥ ಕಪ್ಪುರಂಧ್ರವನ್ನು ವಿಜ್ಞಾನಿಗಳ ತಂಡ ಅಧ್ಯಯನಕ್ಕೆ ಒಳಪಡಿಸಿದಾಗ ಈ ವಿಸ್ಮಯಗಳು ಹೊರ ಬಿದ್ದಿವೆ.

ರಹಸ್ಯಗಳ ಸಾಲು ಸಾಲು
ಕಪ್ಪುರಂಧ್ರದ ಅಧ್ಯಯನ ನಡೆಸಿದಾಗ ಕಂಡಂಥ ಮುಖ್ಯ ವಿಚಾರ ಎಂದರೆ ಪರಿವರ್ತಕ ಪ್ರಭಾವಲಯ. ಇದು ನೇರಳಾತೀತ ಬೆಳಕಿನಲ್ಲಿ ಮಿಂಚಂತೆ ಹೊಳೆಯುವ ಅನಿಲಗಳ ತಟ್ಟೆಯಂತಿರುವ ರಚನೆ. ನೇರಳಾತೀತ ಬೆಳಕು ಕಪ್ಪುರಂಧ್ರದಿಂದ ವಿವಿಧ ಶಕ್ತಿ ಮಟ್ಟದಲ್ಲಿ ಹೊಮ್ಮುತ್ತದೆ. ಕ್ಷಕಿರಣವೂ ತನ್ನ ಅತ್ಯಂತ ಕಡಿಮೆ ಶಕ್ತಿಮಟ್ಟದಿಂದ ಶುರುವಾಗಿ ನಮ್ಮ ಕಣ್ಣಿಗೆ ಗೋಚರಿಸುವ ಬೆಳಕಿಗಿಂತ ಹಲವು ನೂರು ಪಟ್ಟು ಅಧಿಕ ಶಕ್ತಿ ಮಟ್ಟದವರೆಗೂ ಭಿನ್ನತೆ ಹೊಂದಿರುತ್ತದೆ. ವಿಶೇಷವೆಂದರೆ ಈ ಅನಿಲತಟ್ಟೆಯ ಮೇಲ್ಭಾಗದಲ್ಲಿನ ಅನಿಲ ಅತ್ಯಧಿಕ ಶಾಖವನ್ನು ಹೊಂದಿರುತ್ತದೆ ಮತ್ತು ಈ ಶಾಖದಿಂದಾಗಿಯೇ ಪ್ರಭಾವಲಯದಂತೆ ಕಾಣಿಸುತ್ತದೆ. ಈ ಅತಿಶಾಖದ ಅನಿಲವು ಅನಿಲತಟ್ಟೆಯಿಂದ ನೇರಳಾತೀತ ಕಿರಣಗಳನ್ನು ಸೆಳೆದುಕೊಂಡು ಅದನ್ನು ಪುನರ್ ಸಂಸ್ಕರಣೆಗೆ ಒಳಪಡಿಸುತ್ತದೆ ಮತ್ತು ಕ್ಷ-ಕಿರಣವನ್ನು ಉತ್ಪಾದಿಸುತ್ತದೆ. ಇದು ಖಂಡಿತವಾಗಿಯೂ ಹಲವು ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಶಾಖವನ್ನು ಹೊಂದಿರುತ್ತದೆ. ಐದು ಬಾಹ್ಯಾಕಾಶ ದೂರದರ್ಶಕಗಳನ್ನು ಬಳಸಿ ಈ ಪ್ರಭಾವಲಯವನ್ನು ಅಧ್ಯಯನ ಮಾಡಲಾಗಿದೆ ಎನ್ನುತ್ತಾರೆ ಜೆಲ್ ಕಾಸ್ತ್ರಾ.

ಎಕ್ಸ್ಎಂಎಂ ನ್ಯೂಟನ್ ಬಾಹ್ಯಾಕಾಶ ದೂರದರ್ಶಕದಲ್ಲಿನ ರಿಫ್ಲೆಕ್ಷನ್ ಗ್ರೇಟಿಂಗ್ ಸ್ಪೆಕ್ಟ್ರೋಮೀಟರ್ (ಆರ್.ಜಿ.ಎಸ್) ಮೂಲಕ ಪಡೆದಂಥ ಕ್ಷ-ಕಿರಣಗುಚ್ಛಗಳನ್ನು ಪರಿಶಿಲನೆಗೆ ಒಳಪಡಿಸಿದಾಗ ಶೀತಲ ಗಾಳಿ ಪ್ರಭಾವಲಯದಿಂದ ಬುಲ್ಲೆಟ್ನಂತೆ ನುಗ್ಗಿ ಬರುವುದು ಕಂಡುಬಂದಿದೆ. ಹಬಲ್ ಬಾಹ್ಯಾಕಾಶ ದೂರದರ್ಶಕದಲ್ಲಿನ ಕಾಸ್ಮಿಕ್ ಒರಿಜಿನ್ ಸ್ಪೆಕ್ಟ್ರೋಗ್ರಾಫ್ ಪಡೆದಂಥ ನೇರಳಾತೀತ ಕಿರಣಗಳನ್ನು ಪರಿಶೀಲನೆಗೆ ಒಳಪಡಿಸಿದಾಗ, ಕಪ್ಪುರಂಧ್ರಗಳಿಂದ ಮರ್ಕಾರಿಯನ್ ಗೆಲಾಕ್ಸಿಯತ್ತ ನುಗ್ಗುವಂಥ ಶೀತಲ ಅನಿಲಗಳು ವಿವಿಧ ಪ್ರದೇಶದಲ್ಲಿ 14 ರೀತಿಯ ವೇಗದ ಅಂಶಗಳನ್ನು ಹೊಂದಿರುತ್ತವೆ ಎಂಬ ವಿಚಾರ ತಿಳಿದು ಬಂದಿದೆ.

ಕ್ಷ-ಕಿರಣ ಮತ್ತು ನೇರಳಾತೀತ ಕಿರಣಗಳಿಂದ ಪಡೆದ ಮಾಪನಗಳನ್ನು ಕ್ರೋಡೀಕರಿಸಿ ಲೆಕ್ಕಾಚಾರ ಮಾಡಿದಾಗ ತಿಳಿದ ಇನ್ನೂ ಒಂದು ಮಹತ್ವದ ವಿಚಾರವೆಂದರೆ, ಈ ಗಾಳಿಯು ಹೊರಕ್ಕೆ ವೇಗವಾಗಿ ಚಿಮ್ಮುವುದು ಕಪ್ಪುರಂಧ್ರದಿಂದ ಸುಮಾರು 15 ಜ್ಯೋತಿರ್ವರ್ಷಗಳಷ್ಟು (ಒಂದು ಜ್ಯೋತಿರ್ವರ್ಷ ಎಂದರೆ 9460730472580.8 ಕಿಲೋಮೀಟರ್ ಗಳು) ದೂರದಲ್ಲಿರುವ ಸಾಂಧ್ರವಾದ ಅನಿಲ ಕೇಂದ್ರದಿಂದಾಗುತ್ತದೆ. ಕಪ್ಪುರಂಧ್ರದ ಸನಿಹದಲ್ಲಿ ಉತ್ಪತ್ತಿಯಾಗುವಂಥ ಶಕ್ತಿ ಇಷ್ಟು ದೂರದಲ್ಲಿವ ಅನಿಲ ಕೇಂದ್ರದಿಂದ ಗಾಳಿಯನ್ನು ಹೊರದಬ್ಬುವಷ್ಟು ಸಮರ್ಥವಾಗಿರುತ್ತದೆ.

ಕಪ್ಪುರಂಧ್ರದಿಂದ ಇನ್ನಷ್ಟು ದೂರಕ್ಕೆ ಬಂದರೂ ಸಹ, ಅಲ್ಲಿಯೂ ಕಪ್ಪುರಂಧ್ರದ ಪ್ರಭಾವ ಕಾಣಿಸಿಕೊಳ್ಳುತ್ತದೆ. ಅಲ್ಲಿರುವಂಥ ಇಂಟರ್ ಸ್ಟೆಲ್ಲಾರ್ ಗ್ಯಾಸ್ ಅತ್ಯಧಿಕ ಅಯನೀಕೃತವಾಗಿರುತ್ತದೆ. ಕ್ಷ-ಕಿರಣಗಳ ಪ್ರಭಾವದಿಂದಾಗಿ ಈ ಅನಿಲವು ತನ್ನಲ್ಲಿನ ಎಲೆಕ್ಟ್ರಾನುಗಳನ್ನು ಕಳೆದುಕೊಂಡಿರುತ್ತದೆ. ಈ ಕಪ್ಪುರಂಧ್ರದಿಂದ ಹಲವು ಸಾವಿರ ಜ್ಯೋತಿರ್ವರ್ಷಗಳಷ್ಟು ದೂರಕ್ಕೂ ಈ ಕ್ಷ-ಕಿರಣವು ಸಂಚರಿಸಿ, ಅಲ್ಲಿ ಪ್ರತಿ ಸೆಕೆಂಡಿಗೆ 200 ಕಿ.ಮೀ. ವೇಗದಲ್ಲಿ ಬೀಸುತ್ತಿರುವಂಥ ಧೂಳುಮಿಶ್ರಿತ ಗಾಳಿಗೆ ಹೊಳಪು ನೀಡುತ್ತದೆ.

ಕಪ್ಪುರಂಧ್ರಗಳ ಬಗ್ಗೆ ಇಷ್ಟೆಲ್ಲ ವಿಚಾರಗಳು ತಿಳಿದು ಬಂದರೂ ಸಹ ಇದೇನೂ ಪರಿಪೂರ್ಣ ಮಾಹಿತಿಯಲ್ಲ. ಕಪ್ಪುರಂಧ್ರಗಳು ಇನ್ನಷ್ಟು ರಹಸ್ಯಗಳನ್ನು ತಮ್ಮೊಳಗೆ ಆಡಕವಾಗಿಸಿಕೊಂಡಿರುವ ಸಾಧ್ಯತೆಗಳಿದೆ. ಆವುಗಳನ್ನೆಲ್ಲ ಕೆದಕುವ ಪ್ರಯತ್ನವನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ. ಕಪ್ಪುರಂಧ್ರಗಳ ಸಾಮಥ್ರ್ಯ ಅಗಾಧವಾದುದು ಎಂದು ವೈಜ್ಞಾನಿಕ ಜಗತ್ತು ಈಗಾಗಲೇ ಒಪ್ಪಿಕೊಂಡಿದ್ದರೂ ಸಹ, ಅದನ್ನು ಪ್ರಯೋಗಗಳ ಮೂಲಕ ಅಳೆಯುವ ಪ್ರಯತ್ನ ನಡೆಸುತ್ತಿದೆ. ಅದರಿಂದಲಾದರೂ ಸೃಷ್ಟಿ ರಹಸ್ಯ ಅರಿಯುವುದಕ್ಕೆ ಸಾಧ್ಯವೇ ಎಂಬ ದೂರದ ಆಸೆ ವೈಜ್ಞಾನಿಕ ಜಗತ್ತಿನಲ್ಲಿದೆ. ಏನಾಗುತ್ತದೆಯೋ? ಕಾಲವೇ ಹೇಳಬೇಕು.

Comments

  1. really amazing......nijakku vijnaanada bagge eshtu tilidukondaru adu kadimeye.....adara bagge hechchu hechchu tilidukondantella, adara aala hechchuttale hoguttade.....:) nice artilcle.....

    ReplyDelete
  2. Really nice article Vishnupriya. Much informative. Sorry, I had a doubt on below two lines, don't mind I am asking this,
    ..."ಕಪ್ಪು ರಂಧ್ರಗಳು ತಮ್ಮ ಗುರುತ್ವಾಕರ್ಷಣ ಶಕ್ತಿಗೆ ಸಿಲುಕಿದಂಥ ಎಲ್ಲವನ್ನು ಸ್ವಾಹಾ ಮಾಡುತ್ತವೆ, ಬೆಳಕನ್ನು ಸಹ ಬಿಡುವುದಿಲ್ಲ ಎಂದೂ ವೈಜ್ಞಾನಿಕ ಜಗತ್ತು ಭಾವಿಸಿತ್ತು."... Yes it is been believed it absorbs the light. But,
    ..."ಇದುವರೆಗೆ ಕಪ್ಪು ರಂಧ್ರಗಳು ತಮ್ಮ ವ್ಯಾಪ್ತಿಗೆ ಬಂದದ್ದೆಲ್ಲವನ್ನೂ ಸ್ವಾಹಾ ಮಾಡುತ್ತವೆ ಎಂದು ನಂಬಲಾಗಿತ್ತಲ್ಲ, ಇದನ್ನೇ ಸುಳ್ಳು ಅಂತ ಹೇಳುತ್ತಿದೆ ಇವರ ಸಂಶೋಧನೆ."...
    If they say wrong, then why light that falls, will not get reflected back from Black hole?
    Vishnupriya, can you please find out more on " ಎಸ್ಆರ್ಒಎನ್ ನೆದರ್ಲೆಂಡ್ಸ್ ಸಂಸ್ಥೆಯ ಬಾಹ್ಯಾಕಾಶ ಸಂಶೋಧನಾ ವಿಭಾಗದ ಡಾ. ಜೆಲ್ ಕಾಸ್ತ್ರಾ ನೇತೃತ್ವದ ತಂಡ ನಡೆಸಿದಂಥ ಸಂಶೋಧನೆ" that what they said about Light get absorbed in Black Hole?

    ReplyDelete
  3. kiran- scientists observed that UV and X rays are coming out of black holes and part of wind, which is entering into black holes are sucked back into the dense gas+dust discs....

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು