ಎತ್ತ ಕಡೆ ಸಾಗುತ್ತಿದ್ದೇವೆ ನಾವು?


ಪಾವನೆ ಎನಿಸಿಕೊಂಡಿದ್ದ ಗಂಗೆ ಕಲಿಷಿತಗೊಂಡಿದ್ದಾಳೆ. ಯಮುನೆಯ ಸ್ಥಿತಿಯೇನೂ ಭಿನ್ನವಾಗಿಲ್ಲ. ಗೋದಾವರಿಯ `ವರಿ' ನಿಜಕ್ಕೂ ಆತಂಕಕಾರಿ. ಸರಸ್ವತಿ ಸ್ವರ ಉಡುಗುತ್ತಿದೆ. ನರ್ಮದೆಯ ನೆಮ್ಮದಿಯೇ ಹಾಳಾಗಿದೆ. ಸಿಂಧು ಬತ್ತುತ್ತಿದ್ದಾಳೆ. ಕಾವೇರಿ ಅದೆಷ್ಟು ಕಾವೇರಿದ್ದಾಳೆ ಎಂಬ ಸತ್ಯ ಕರ್ನಾಟಕದ ಜನರಿಗೆ ಗೊತ್ತಿದೆ. ಈ ಎಲ್ಲ ನದಿಗಳು ತಮ್ಮ ಹರಿವನ್ನು ನಿಲ್ಲಿಸಿದರೆ ಅವಿಭಜಿತ ಭಾರತ ಬರಡಾಗುತ್ತದೆ!

ಭಾರತ ಪಾಕಿಸ್ತಾನದ ಸಂಬಂಧವನ್ನು ನೆನೆಸಿಕೊಂಡಾಗಲೆಲ್ಲ ಆಕೆ ನೆನಪಾಗುತ್ತಾಳೆ. ಭಾರತದಲ್ಲಿಯೇ ಹುಟ್ಟಿ, ಭಾರತದಲ್ಲಿಯೇ ಬೆಳೆದು, ತನ್ನ ಜನ್ಮಭೂಮಿಗೂ ಒಂದಷ್ಟು ಕೊಡುಗೆಯನ್ನು ನೀಡಿ ಈಕೆ ಪಾಕಿಸ್ತಾನ ಸೇರುತ್ತಾಳೆ. ಅಲ್ಲಿನ ನೆಲಕ್ಕೊಂದಷ್ಟು ಕೊಡುಗೆಯನ್ನು ನಿಡುತ್ತಾಳೆ. ತನ್ನ ಬೆಳವಣಿಗೆಯ ಜೊತೆ ಜೊತೆಗೆ, ನಾಡಿಗೇ ಒಳಿತನ್ನು ಬಯಸುತ್ತಾಳೆ. ನಾಡನ್ನೂ ಬೆಳೆಸುತ್ತಾಳೆ. ಭಾರತದ ಮುಕುಟಮಣಿಗೆ ಸಿಂಗಾರವಾಗಿದ್ದಂಥ ಈಕೆ ಇಂದು ಸೊರಗಿದ್ದಾಳೆ. ಕ್ಷಯರೋಗಿಯಂತೆ ಕ್ಷೀಣಿಸುತ್ತಿದ್ದಾಳೆ. ಸಂಪೂರ್ಣ ಕ್ಷಯಿಸಿ, ಸಾವನ್ನಪ್ಪುವುದು ನಿಶ್ಚಿತವೋ ಎಂಬಂತೆ ಕುಗ್ಗಿ ಹೋಗಿದ್ದಾಳೆ.

ಈಕೆ ಸಿಂಧು. ಭಾರತ-ಪಾಕಿಸ್ತಾನದ ಉತ್ತರದ ಭಾಗಗಳ ಜೀವಿಗಳಿಗೆ ಜೀವಜಲವನ್ನು ಕೊಟ್ಟು ದಾಹವನ್ನು ತೀರಿಸುವ ಈಕೆ ಇಂದು ತನ್ನ ದಾಹವನ್ನು ತೀರಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿದ್ದಾಳೆ. ಈಕೆಯ ಒಡಲಿಂದ ಅಮೃತ ಸಮಾನವಾದ ಜಲವನ್ನು ಹೀರುತ್ತಿರುವಂಥ ಮಾನವ ಆಕೆಗೆ ವಿಷವಿಕ್ಕುತ್ತಿದ್ದಾನೆ. ತತ್ಪರಿಣಾಮ ಆಕೆ ಸೊರಗಿದ್ದಾಳೆ. ಭಾರತ ಮತ್ತು ಪಾಕಿಸ್ತಾನಗಳು ಕಾಶ್ಮೀರ ತನಗೆ, ತನಗೆ ಎಂದು ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ಹೋರಾಡುತ್ತಲೇ ಬಂದಿವೆ. ಆದರೆ ಎರಡೂ ದೇಶಗಳು ಈ ಭಾಗದ ನದಿಗಳು ಸೇರಿದಂತೆ ಎಲ್ಲ ರೀತಿಯ ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಗೆ ಗಮನವನ್ನೇ ಕೊಟ್ಟಿಲ್ಲ.

ಸಿಂಧು ನದಿ ಈಗಾಗಲೇ ತನ್ನ ಸಹಜತೆಯನ್ನು ಕಳೆದುಕೊಂಡಿದೆ. ಕಾಶ್ಮೀರದಲ್ಲಿ ಹಿಮಗಡ್ಡೆಗಳು ಕರಗುತ್ತಿವೆ. ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗಳು ಸಿಂಧು ನದಿಯ ಒಡಲನ್ನು ಬರಿದು ಮಾಡುತ್ತಿವೆ. ಜಗತ್ತಿನ ಒಟ್ಟು ಹತ್ತಿ ಉತ್ಪಾದನೆಯಲ್ಲಿ ಶೆ.30ರಷ್ಟನ್ನು ಭಾರತ ಮತ್ತು ಪಾಕಿಸ್ತಾನಗಳು ಉತ್ಪಾದಿಸುತ್ತಿವೆ. ಇದರಲ್ಲಿ ಬಹುಪಾಲು ಸಿಂಧು ನದಿ ಪ್ರಾಂತ್ಯದಿಂದಲೇ ಬರುತ್ತದೆ. ಹತ್ತಿ ಬೆಳೆಯುವುದಕ್ಕಾಗಿ ಮತ್ತು ದೆಲ್ಲಿ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಪ್ರತಿ ವರ್ಷವೂ ಸಹ 73,700 ಗ್ಯಾಲನ್ ನೀರನ್ನು ಸಿಂಧು ನದಿಯಿಂದ ತೆಗೆಯಲಾಗುತ್ತದೆ. ಆದರೆ ಸಿಂಧು ನದಿಯಲ್ಲಿ ನಿರು ಬತ್ತದಂತೆ ನೋಡಿಕೊಳ್ಳುವಂಥ ಪ್ರಯತ್ನಗಳು ಮಾತ್ರ ನಡೆಯುತ್ತಲೇ ಇಲ್ಲ.

ಭಾರತ ಮತ್ತು ಪಾಕಿಸ್ತಾನಗಳ ಕೈಗಾರಿಕೆಗಳು ನೀರನ್ನು ಬಳಸಿಕೊಳ್ಳುವುದಕ್ಕಿಂತಲೂ ಅಧಿಕ ಪ್ರಮಾಣದ ನೀರನ್ನು ಪೋಲು ಮಾಡುತ್ತಿವೆ. ನೀರಿನ ಮಿತ ಬಳಕೆಯಂತೂ ಈ ಕೈಗಾರಿಕೆಗಳಲ್ಲಿ ಇಲ್ಲವೇ ಇಲ್ಲ. ಒಂದೆಡೆಯಿಂದ ಎರಡೂ ದೇಶಗಳಲ್ಲಿ ಜನಸಂಖ್ಯೆ ಏರುತ್ತಿದೆ; ಮತ್ತೊಂದೆಡೆ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗುತ್ತದೆ. ಎರಡರ ದಾಹವನ್ನು ತೀರಿಸುವುದಕ್ಕೂ ನೀರು ಬೇಕು. ಸರಿ, ಅದಕ್ಕೆಷ್ಟು ಬೇಕೋ ಅಷ್ಟನ್ನು ಬಳಸಿಕೊಂಡರೆ ಸಮಸ್ಯೆಯಿಲ್ಲ; ಆದರೆ ಪೋಲು ಮಆಡುವ ಪ್ರಮಾಣವೇ ಹೆಚ್ಚಾಗಿರುವುದರಿಂದ ನೀರಿನ ಮೂಲಕ್ಕೆ ಸಮಸ್ಯೆಯಾಗುತ್ತಿದೆ. ಸಿಂಧು ನದಿಗೆ ಆಗುತ್ತಿರುವ ಸಮಸ್ಯೆಯೂ ಇದುವೇ.

ಈಗಾಗಲೇ ಸಿಂಧು ಪ್ರಾಂತ್ಯದ ಕೆಲವೊಂದು ಪ್ರದೇಶಗಳು ಬರಡಾಗಿದ್ದು, ಕೃಷಿ ಮಾಡುವುದಕ್ಕೆ ಯೋಗ್ಯವಿಲ್ಲದಂತಾಗಿದೆ. ಆಲ್ಲದೆ ಈ ಪ್ರದೇಶದಲ್ಲಿದ್ದಂಥ ಮೀನುಗಾರರೂ ಸಹ ಈಗ ನಿರುದ್ಯೋಗಿಗಳಾಗಿದ್ದಾರೆ. ತತ್ಪರಿಣಾಮ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮೊದಲೇ ನಗರಗಳು ನೀರಿಗಾಗಿ ಅವಲಂಬಿಸಿರುವುದು ದೂರ ದೂರದಲ್ಲಿರುವಂಥ ನದಿಗಳನ್ನೇ; ಕುಡಿಯುವ ನಿರಿನ ಯೋಜನೆಯ ಮೂಲಕ ಈ ನಗರಗಳಿಗೆ ನೀರು ತಲುಪುತ್ತಿದೆ. ನಗರಗಳಲ್ಲಿನ ಜನಸಂಖ್ಯೆ ಹೆಚ್ಚುತ್ತಾ ಹೋದರೆ ಇಲ್ಲೂ ಬರಗಾಲ ತಾಂಡವವಾಡುವ ದಿನ ದೂರ ಇಲ್ಲ.
ಇನ್ನು ನೀರಿಗಾಗಿ ಸಿಂಧು ನದಿಯನ್ನೇ ಅವಲಂಬಿಸಿರುವಂಥ ಪಾಕಿಸ್ತಾನದ ಬಂದರು ನಗರ ಕರಾಚಿ ಕೂಡಾ ನೀರಿನ ಸಮಸ್ಯೆಗೆ ತುತ್ತಾಗುತ್ತಿದೆ. ಕರಾಚಿಗೆ ನೀರು ಸರಬರಾಜಾಗುವಂಥ ಪೈಪ್ಲೈನ್ಗಳಿಂದ ಭಾರೀ ಪ್ರಮಾಣದ ನೀರು ಕಳವಾಗುತ್ತಿದ್ದು, ಈ ಕಳವಿನ ನೀರಿನಿಂದಾಗುವ ನಷ್ಟ ವಾರ್ಷಿಕ 50 ಕೋಟಿ ಡಾಲರ್!

ಇನ್ನೂ ಒಂದು ಪ್ರಮುಖ ವಿಚಾರವೆಂದರೆ, ಸಿಂಧು ನದಿಯಲ್ಲಿರುವಂಥ ಒಂದು ಜಾತಿಯ ಡಾಲ್ಫಿನ್ ಗಳು ಈಗ ಅವಸಾನದತ್ತ ಸಾಗುತ್ತಿವೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನೀರಾವರಿ ಯೋಜನೆಗಳು ಮತ್ತು ವಿದ್ಯುತ್ ಯೋಜನೆಗಳು ಡಾಲ್ಫಿನ್ ಗಳ ಜೀವಕ್ಕೇ ಸಂಚಕಾರ ತರುತ್ತಿದ್ದು, ಪ್ರಸ್ತುತ ಸುಮಾರು 100ರಷ್ಟು ಡಾಲ್ಫಿನ್ ಗಳು ಉಳಿದುಕೊಂಡಿರಬಹುದಷ್ಟೇ. ಸಿಂಧು ನದಿ ಈ ಪ್ರಮಾಣದಲ್ಲಿ ಬತ್ತುವುದಕ್ಕೆ ಶುರುವಾದರೆ ಇವು ಕೂಡಾ ಸಾವನ್ನಪ್ಪಿ ಸಿಂಧು ನದಿಯ ಡಾಲ್ಫಿನ್ ತಳಿಗಳೇ ಕಣ್ಮರೆಯಾಗುವ ಆತಂಕವಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು.

ಒಪ್ಪಂದ ಪ್ರಯೋಜನಕ್ಕಿಲ್ಲ
ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನಗಳು 1960ರಲ್ಲಿ ಸಿಂಧು ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ವೈಜ್ಞಾನಿಕ ಲೆಕ್ಕಾಚಾರಗಳ ಪ್ರಕಾರ 2025ರ ವೇಳೆಗೆ ಭಾರತದ ಜನಸಂಖ್ಯೆ 1960ರಲ್ಲಿ ಇದ್ದದ್ದರ ಮೂರು ಪಟ್ಟು ಮತ್ತು ಪಾಕಿಸ್ತಾನದ ಜನಸಂಖ್ಯೆ ಆರು ಪಟ್ಟು ಏರಿಕೆಯಾಗಲಿದೆ. ಅಂದರೆ ಅಷ್ಟು ಪ್ರಮಾಣದ ನೀರಿನ ಬಳಕೆ ಹೆಚ್ಚಾಗುತ್ತದೆ. ಜೊತೆಗೆ ಹಿಮಾಲಯದಲ್ಲಿ ಹಿಮಗಡ್ಡೆಗಳು ಕರಗುತ್ತಿರುವುದರ ಪರಿಣಾಮ ಸಿಂಧು ನದಿಗೆ ಸದಾ ನೀರಿನ ಹರಿವು ಸಿಗುತ್ತಿಲ್ಲ. ಹಿಮಗಡ್ಡೆಗಳು ಕರಗಿದಾಗ ಪ್ರವಾಹ ಪರಿಸ್ಥಿತಿ ಎದುರಾದರೆ, ಉಳಿದ ಸಮಯದಲ್ಲಿ ನೀರಿನ ಬರ ಎದುರಾಗುತ್ತದೆ. ಏರುತ್ತಿರುವ ತಾಪಮಾನ ಸಿಂಧು ನದಿಯ ಒಡಲನ್ನು ಬತ್ತಿಸುತ್ತಿದೆ.
ಎರಡೂ ದೇಶಗಳೂ ಸಹ ಸಿಂಧು ನದಿಗೆ ಅಣೆಕಟ್ಟು ಕಟ್ಟಿ ಜಲವಿದ್ಯುತ್ ಯೋಜನೆ ರೂಪಿಸುವಲ್ಲಿ ಮತ್ತು ಅವುಗಳಿಗೆ ಕಾಲುವೆಗಳನ್ನು ನಿರ್ಮಿಸುವಲ್ಲಿ ಸ್ಪರ್ಧೆಗಿಳಿವೆ. ಇದರಿಂದಾಗಿ ಸಿಂಧು ನದಿ ನಿರು ತನ್ನ ಕೊನೆಯನ್ನು ತಲುಪುವ ಹೊತ್ತಿಗೆ ತೀರಾ ಕೃಶವಾಗುತ್ತಿದೆ.

ಭಾರತ ಪಾಕಿಸ್ತಾನವನ್ನ ಸುಲಭವಾಗಿ ಬರದ ಸ್ಥಿತಿಗೋ, ಪ್ರವಾಹದ ಸ್ಥಿತಿಗೋ ಸಿಲುಕಿಸಬಹುದು. ಸಿಂಧು ನದಿ ನೀರಿನ ಹರಿವನ್ನು ಬೇರೆಡೆಗೆ ತಿರುಗಿಸಿದರೆ ಅಥವಾ ಅಣೆಕಟ್ಟುಗಳನ್ನು ಕಟ್ಟಿ ನೀರು ಮುಂದೆ ಸಂಚರಿಸದಂತೆ ತಡೆಯಬಹುದು. ಇಲ್ಲವೇ ಕಟ್ಟಿಟ್ಟ ನೀರನ್ನು ಒಮ್ಮೆಲೇ ಬಿಟ್ಟು ಪಾಕಿಸ್ತಾನವನ್ನು ಪ್ರವಾಹದ ಸ್ಥಿತಿಗೆ ಸಿಲುಕಿಸಬಹುದು. ಸ್ವಾತಂತ್ರ್ಯ ಕಾಲದಿಂದಲೂ ಭಾರತದ ಮೇಲೆ ದ್ವೇಷ ಸಾಧಿಸುತ್ತಲೇ ಬಂದಂಥ ಪಾಕಿಸ್ತಾನ, ನೇರಾ ನೇರ ಹೋರಾಡುವುದಕ್ಕೆ ಆಗುವುದಿಲ್ಲ ಎಂದು ಉಗ್ರರನ್ನು ಛೂ ಬಿಡುತ್ತಾ ಸೇಡು ತೀರಿಸಿಕೊಳ್ಳುತ್ತಿದೆ. ಒಂದು ವೇಳೆ ಭಾರತ (ಸಮರ್ಥ ನಾಯಕ ಇದ್ದರಷ್ಟೇ) ತಿರುಗಿ ಬಿದ್ದು, ಪಾಕಿಸ್ತಾನಕ್ಕೆ ಸೇರಬೇಕಾದ ನೀರಿನ ಜೊತೆ ಆಟ ಆಡಿದರೆ ತನ್ನ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಪಾಕಿಸ್ತಾನ ಅರಿತುಕೊಂಡಿದ್ದರೆ ಅದು ಭಾರತದೊಂದಿಗೆ ಸ್ನೇಹದಿಂದ ಇರುತ್ತಿತ್ತು. ಸದ್ಯಕ್ಕೆ ತನಗೆ ನೀರು ಸಿಗುತ್ತಿಲ್ಲ ಎಂಬುದು ಪಾಕಿಸ್ತಾನಕ್ಕೂ ಗೊತ್ತಿದೆ. ಭಾರತ ಮನಸು ಮಾಡಿದರೆ ಇನ್ನಷ್ಟು ನಿರು ಸಿಗಬಹುದು ಎಂಬ ಸತ್ಯವೂ ಗೊತ್ತಿದೆ. ಆದರೆ ಭಾರತದ ವಿರುದ್ಧ ಅದು ಉಗ್ರರನ್ನು ಛೂಬಿಡುತ್ತಿದ್ದರೆ ಭಾರತ ಸುಮ್ಮನಿದ್ದೀತೇ? ಹೌದು ಎರಡೂ ದೇಶಗಳು ಈ ಬಗ್ಗೆ ಚಿಂತನೆ ನಡೆಸಬೇಕು. ಕೇವಲ ಶಾಂತಿ, ಶಾಂತಿ, ಶಾಂತಿ ಎಂದು ಜಪಿಸಿದರೆ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ.

`ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು' ಎಂದು ಮಂತ್ರ ಜಪಿಸುತ್ತೇವೆ. ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂದೂ, ಕಾವೇರಿ ನದಿಗಳ ಪಾವಿತ್ರ್ಯ ಈ ಜಲಪಾತ್ರೆಯಲ್ಲಿರುವ ನೀರನ್ನು ಸೇರಲು ಎಂಬುದು ಈ ಮಂತ್ರದ ಶಬ್ದಶಃ ಅರ್ಥವಾದರೂ ಅದರ ಹಿಂದಿರುವ ಕಳಕಳಿಯನ್ನು ನಾವು ಅರ್ಥ ಮಾಡಿಕೊಂಡಿಲ್ಲ. ಸುಮ್ಮನೇ ಒಂದು ಸುತ್ತು ಯೋಚನೆ ಮಾಡಿ- ಈ ನದಿಗಳು ಎಲ್ಲೆಲ್ಲ ಹರಿಯುತ್ತವೆ? ಇಷ್ಟು ನದಿಗಳು ಅವಿಭಜಿತ ಭಾರತದ ದಾಹವನ್ನು ತೀರಿಸಬಲ್ಲವು; ಕೃಷಿಗೆ ಅಗತ್ಯವಿರುವ ನೀರನ್ನು ಪೂರೈಸಬಲ್ಲವು. ಅದಕ್ಕೇ ಇವುಗಳು ಪವಿತ್ರ ಎನಿಸಿದವು. ಪವಿತ್ರ ಎಂದರೆ ಅವುಗಳ ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕು. ಈ ಜವಾಬ್ದಾರಿಯೇ ಇದರ ಹಿಂದಿರುವ ಕಳಕಳಿ. ಪಾವನೆ ಎನಿಸಿಕೊಂಡಿದ್ದ ಗಂಗೆ ಕಲಿಷಿತಗೊಂಡಿದ್ದಾಳೆ. ಯಮುನೆಯ ಸ್ಥಿತಿಯೇನೂ ಭಿನ್ನವಾಗಿಲ್ಲ. ಗೋದಾವರಿಯ `ವರಿ' ನಿಜಕ್ಕೂ ಆತಂಕಕಾರಿ. ಸರಸ್ವತಿ ಸ್ವರ ಉಡುಗುತ್ತಿದೆ. ನರ್ಮದೆಯ ನೆಮ್ಮದಿಯೇ ಹಾಳಾಗಿದೆ. ಸಿಂಧು ಬತ್ತುತ್ತಿದ್ದಾಳೆ. ಕಾವೇರಿ ಅದೆಷ್ಟು ಕಾವೇರಿದ್ದಾಳೆ ಎಂಬ ಸತ್ಯ ಕರ್ನಾಟಕದ ಜನರಿಗೆ ಗೊತ್ತಿದೆ. ಈ ಎಲ್ಲ ನದಿಗಳು ತಮ್ಮ ಹರಿವನ್ನು ನಿಲ್ಲಿಸಿದರೆ ಅವಿಭಜಿತ ಭಾರತ ಬರಡಾಗುತ್ತದೆ!

Comments

  1. ಎಷ್ಟೊಂದು ಸುಂದರವಾಗಿ ಬರೆದಿದ್ದಿರಾ ..... ಓದಲು ಬಹಳ ಚೆನ್ನಾಗಿದೆ... ಅಧ್ಭುತ ವಿಷಯ ಸಂಗ್ರಹಣೆ .... ವಿಶೇಷ ಉಪಯುಕ್ತ ಮಾಹಿತಿಗಳು..... :)

    ReplyDelete
  2. ಪ್ರಶಾಂತ್ ನಿಮ್ಮ ಪ್ರೀತಿ, ಹಾರೈಕೆಗೆ ನಾನು ಚಿರಋಣಿ...

    ReplyDelete
  3. idu nijakku vishaadakara sangati. idara bagge manushya endu jaagrutanaagutano gottilla.........:(

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು