ನವತಾರೆಗಳಲ್ಲಿ ಹರಳು, ಕಲ್ಲುಗಳ ಮಳೆ!

ಎಲ್ಲ ಕಾಯಗಳಲ್ಲಿಯೂ ಮಳೆ ಬರುತ್ತದೆಯೇ? ಎಲ್ಲ ಅಧ್ಯಯನಗಳ ಬೆನ್ನಲ್ಲೇ ಮತ್ತೊಂದು ವಿಚಾರವೂ ಬೆಳಕಿಗೆ ಬಂದಿದೆ. ಅದು- ನಕ್ಷತ್ರಗಳಲ್ಲೂ ಮಳೆಯಾಗುತ್ತಿರುವ ವಿಚಾರ! ಸದಾ ಸುಡು ಸುಡು ಎನ್ನುತ್ತಿರುವ, ಬೆಂಕಿಯ ಜ್ವಾಲೆಯನ್ನೇ ಉಸಿರಾಡುತ್ತಿರುವ ನಕ್ಷತ್ರಗಳಲ್ಲಿ ಆಗುತ್ತಿರುವುದು ಜಲವೃಷ್ಟಿ ಅಲ್ಲ. ಬದಲಾಗಿ ಹರಳುಗಳ ಮಳೆ, ಕಲ್ಲುಗಳ ಮಳೆ!




`ಮಳೆ'. ಈ ಶಬ್ದ ಕೇಳಿದ್ರೆ ಸಾಕು, ಮೈ ನಡುಗೋದಕ್ಕೆ ಶುರು ಆಗುತ್ತೆ. `ಥೂ ಈ ಮಳೆ ಬರೋದಕ್ಕೆ ಶುರು ಆದರೆ ಬಿಡೋದೇ ಇಲ್ಲ' ಅನ್ನೋ ಬೈಗುಳವೂ ಕೇಳಿ ಬರುತ್ತದೆ. ಭೂಮಿಯಲ್ಲಿ ಧಾರಾಳ ನೀರು ಇರುವ ಕಾರಣ ಮಳೆ ಬರುತ್ತದೆ ಅಂತ ನಾವು ತಿಳಿದುಕೊಂಡಿದ್ದೇವೆ. ಇತ್ತೀಚೆಗೆ ಹಲವು ಗ್ರಹಗಳಲ್ಲಿ, ಉಪಗ್ರಹಗಳಲ್ಲಿ ಮತ್ತಿತರ ಆಕಾಶಕಾಯಗಳಲ್ಲಿ ನೀರಿನ ಅಸ್ತಿತ್ವ ಪತ್ತೆಯಾಗಿದೆ. ಒಂದು ಗ್ರಹದಲ್ಲಿ ಮಳೆ ಬರುತ್ತಿರುವ ಸಾಧ್ಯತೆಯ ಬಗ್ಗೆಯೂ ಚಿಂತನೆ ನಡೆದಿದೆ. ಹಾಗಿದ್ರೆ ನೀರಿರುವ ಎಲ್ಲ ಕಾಯಗಳಲ್ಲಿಯೂ ಮಳೆ ಬರುತ್ತದೆಯೇ? ಭೂಮ್ಯೇತರ ಆಕಾಶಕಾಯಗಳಲ್ಲಿ ಜೀವಾಸ್ತಿತ್ವ, ನೀರಿನ ಇರವಿನ ಬಗ್ಗೆ ನಡೆಯುತ್ತಿರುವಂಥ ಸಂಶೋಧನೆಗಳು ಈ ಎಲ್ಲ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸುತ್ತಿವೆ. ಈ ಎಲ್ಲ ಅಧ್ಯಯನಗಳ ಬೆನ್ನಲ್ಲೇ ಮತ್ತೊಂದು ವಿಚಾರವೂ ಬೆಳಕಿಗೆ ಬಂದಿದೆ. ಅದು- ನಕ್ಷತ್ರಗಳಲ್ಲೂ ಮಳೆಯಾಗುತ್ತಿರುವ ವಿಚಾರ!
    ಸದಾ ಸುಡು ಸುಡು ಎನ್ನುತ್ತಿರುವ, ಬೆಂಕಿಯ ಜ್ವಾಲೆಯನ್ನೇ ಉಸಿರಾಡುತ್ತಿರುವ ನಕ್ಷತ್ರಗಳಲ್ಲೂ ಮಳೆ ಬರುತ್ತದೆಯೇ? ಅಷ್ಟು ಮಳೆ ಬಂದರೂ ನಕ್ಷತ್ರಗಳ ಬೆಂಕಿಯ ಕಿಡಿ ಆರಿಲ್ಲವೆ? ಸಾವಿರ ಪ್ರಶ್ನೆಗಳು ಉದ್ಭವಿಸುವುದು ಸಹಜ. ನಕ್ಷತ್ರಗಳಲ್ಲಿ ಆಗುತ್ತಿರುವುದು ಜಲವೃಷ್ಟಿ ಅಲ್ಲ. ಬದಲಾಗಿ ಹರಳುಗಳ ಮಳೆ, ಕಲ್ಲುಗಳ ಮಳೆ! ಈ ಮಳೆಯನ್ನು ಆಸ್ವಾದಿಸಿ ಅದರ ವಿಚಾರವನ್ನು ಜಗತ್ತಿನೆದುರು ತೆರೆದಿಟ್ಟದ್ದು ನಾಸಾದ ಸ್ಪಿಟ್ಜರ್ ಸ್ಪೇಸ್ ಟೆಲೆಸ್ಕೋಪ್. ಸದ್ಯಕ್ಕೆ ಈ ಹರಳು, ಕಲ್ಲುಗಳ ಮಳೆ ಕಂಡು ಬಂದಿರುವುದು ಉದಯಿಸುತ್ತಿರುವ ತಾರೆಗಳಲ್ಲಿ. ಪ್ರತಿಯೊಂದು ಮಹಾಸ್ಫೋಟದ ಬಳಿಕವೂ ಹೊಸ ತಾರೆಗಳ ಉದಯವಾಗುತ್ತದೆ, ಅವುಗಳ ಬಾಲ್ಯಾವಸ್ಥೆಯಲ್ಲಿ ಹರಳುಗಳ ವೃಷ್ಟಿಯಾಗುವುದು ಕಂಡುಬಂದಿದೆ. ಆಗಷ್ಟೇ ಸೃಷ್ಟಿಯಾಗಿರುವ ತಾರೆಗಳಲ್ಲಿ ಭಾರೀ ಪ್ರಮಾಣದ ಅನಿಲಮೋಡ ಇರುತ್ತದೆ. ಈ ದಟ್ಟಾನಿಲವು ನವತಾರೆಗಳಲ್ಲಿ ಭಾರೀ ವೇಗದೊಂದಿಗೆ ಕುಸಿಯುತ್ತಿರುತ್ತದೆ. ಇನ್ನೂ ವಿಶೇಷ ಎಂದರೆ ಈ ಹರಳುಗಳು ಓಲಿವಿನ್ ಎಂಬ ಹಸಿರು ಲವಣದಿಂದ ಮಾಡಲ್ಪಟ್ಟಿದೆ. ಓಹಿಯೋದ ಯೂನಿವರ್ಸಿಟಿ ಆಫ್ ಟೋಲೆಡೋದ ವಿಜ್ಞಾನಿಗಳು ಮತ್ತು ನಾಸಾದ ವಿಜ್ಞಾನಿಗಳು ಈ ಸಂಶೋಧನೆ ಮಾಡಿದ್ದಾರೆ.

ಕುದಿ ವಾತಾವರಣದಲ್ಲಿ  ಹರಳು ಸೃಷ್ಟಿ
ಸಾಮಾನ್ಯ ವಾತಾವರಣದಲ್ಲಿ ಈ ಹರಳುಗಳು ಸೃಷ್ಟಿಯಾಗುವುದಿಲ್ಲ. ಕುದಿ ಕುದಿ ಲಾವಾದಂತಹ ವಾತಾವರಣದಲ್ಲಷ್ಟೇ ಈ ಹರಳುಗಳ ಸೃಷ್ಟಿಯಾಗುತ್ತದೆ. ಹಾಗಿದ್ದರೆ ನಕ್ಷತ್ರಗಳಲ್ಲಿ ಈ ಹರಳುಗಳು ಸೃಷ್ಟಿಯಾಗುವುದಾದರೂ ಹೇಗೆ? ಇದುವರೆಗೆ ನಡೆದಿರುವ ಸಂಶೋಧನೆಗಳ ಪ್ರಕಾರ ಈ ಹರಳುಗಳು ಸೃಷ್ಟಿಯಾಗುವುದು ಉದಯಿಸುತ್ತಿರುವ ನಕ್ಷತ್ರಗಳ ಮೇಲ್ಮೈಯಲ್ಲಿ. ನಕ್ಷತ್ರಗಳಲ್ಲಿ ಸಹಜವಾಗಿಯೇ ಅತ್ಯಧಿಕ ತಾಪಮಾನ ಇರುವುದರಿಂದಾಗಿ ಈ ಹರಳುಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ನಂತರ ನಕ್ಷತ್ರಗಳ ಇತರ ಭಾಗಕ್ಕೆ, ಅಂದರೆ ನಕ್ಷತ್ರದ ಮಟ್ಟಕ್ಕೆ ಆತ್ಯಧಿಕ ತಣ್ಣಗಿರುವ ಭಾಗಕ್ಕೆ ಚಲಿಸುತ್ತವೆ. ಯಾವ ರೀತಿ ಮೋಡಗಳು ಅಧಿಕ ಸಾಂಧ್ರ ವಾತಾವರಣದಿಂದ ಕಡಿಮೆ ಸಾಂಧ್ರ ವಾತಾವರಣದತ್ತ ಚಲಿಸುತ್ತವೆಯೋ ಅದೇ ರೀತಿಯಲ್ಲಿ ಈ ಹರಳುಗಳು ಅಧಿಕ ಉಷ್ಣಾಂಶದ ಪ್ರದೇಶದಿಂದ ಕಡಿಮೆ ಉಷ್ಣಾಂಶದ ಪ್ರದೇಶಕ್ಕೆ ಚಲಿಸುತ್ತವೆ. ಈ ರೀತಿ ತಂಪು ಪ್ರದೇಶಕ್ಕೆ ಬರುವ ಹರಳುಗಳು ಪ್ರಜ್ವಲಿಸುವ ಉಲ್ಕೆಗಳಂತೆ ನಕ್ಷತ್ರದ ಮೇಲೆ ಬೀಳುತ್ತವೆ ಎನ್ನುತ್ತದೆ ಸಂಶೋಧನೆ.
    ಸ್ಪಿಟ್ಜರ್ನ ಇನ್ಫ್ರಾರೆಡ್ ಡಿಟೆಕ್ಟರ್ಗಳು ಈ ಹರಳುಮಳೆಯನ್ನು ಗುರುತಿಸಿವೆ. ನಮ್ಮ ಸೂರ್ಯನಂತೆಯೇ ಇರುವ ಆದರೆ ಬಾಲ್ಯಾವಸ್ಥೆಯಲ್ಲಿರುವ ಎಚ್ಒಪಿಎಸ್-68 ಎಂಬ ನಕ್ಷತ್ರದಲ್ಲಿ ಈ ಹರಳುಮಳೆಯನ್ನು ಗುರುತಿಸಲಾಗಿದೆ. ಇಂಥದ್ದೇ ಹರಳುಗಳನ್ನು ನಾಸಾದ ಸ್ಟಾರ್ಡಸ್ಟ್ ಮತ್ತು  ಡೀಪ್ ಇಂಪ್ಯಾಕ್ಟ್ ಯೋಜನೆಗಳು ಇಂಥ ಹರಳುಗಳನ್ನು ಧೂಮಕೇತುಗಳಲ್ಲಿ ಗುರುತಿಸವೆ. ನಕ್ಷತ್ರಗಳಲ್ಲಿರುಂಥ ಧೂಳಿನ ಮೋಡ ಅಧಿಕ ಸಾಂಧ್ರವಾಗಿದ್ದು, ದಟ್ಟವಾಗಿದೆ. ಕರಾಳಗುಹೆಯೊಳಗೆ ಇರುವಂಥ ವಾರವರಣ ಇರುತ್ತದೆ. ಆದರೆ ನಕ್ಷತ್ರಗಳಲ್ಲಿ ಸೃಷ್ಟಿಯಾಗುವಂಥ ಬೆಳಕನ್ನು ಸೆಳೆದುಕೊಳ್ಳುವ ಈ ಹರಳುಗಳು ಹಸಿರುಬಣ್ಣವನ್ನು ಪ್ರತಿಫಲಿಸಿ, ಪಚ್ಚೆಯ ಹರಳಿನಂತೆ ಮಿನುಗುತ್ತವೆ. ರಾತ್ರಿಯ ಆಗಸದಲ್ಲಿ ಹೊಳೆಯುವ ನಕ್ಷತ್ರಗಳು ನಮ್ಮ ಕಣ್ಣಿಗೆ ಕಾಣುವಂತೆ, ನಕ್ಷತ್ರಗಳಲ್ಲಿರುವ ಈ ಹರಳುಗಳು ಕೂಡಾ ಮಿನುಗುತ್ತಿರುತ್ತವೆ. ಅಲ್ಲದೆ ನಕ್ಷತ್ರಗಳ ಸುತ್ತ ವೇಗವಾಗಿ ಗಿರಕಿ ಹೊಡೆಯುತ್ತಿರುವ, ಗ್ರಹಗಳನ್ನು ಸೃಷ್ಟಿಸುವ ತಟ್ಟೆಗಳು (ಡಿಸ್ಕ್ ಗಳು) ಇರುವುದನ್ನು ಕೂಡಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇನ್ನೂ ವಿಶೇಷವೆಂದರೆ ದಟ್ಟಮೋಡಗಳಿಂದ ಹೊರಗಿರುವ ಹರಳುಗಳು ಮತ್ತು ಮೋಡದ ಹೊರಗಿನ ವಾತಾರಣದ ಅತಿ ಶೀತಲ ವಾತಾವರಣ ವಿಜ್ಞಾನಿಗಳನ್ನು ಅಚ್ಚರಿಯ ಕೂಪಕ್ಕೆ ತಳ್ಳಿದೆ. ಇಲ್ಲಿನ ತಾಪಮಾನ ಮೈನಸ್ 170 ಡಿಗ್ರಿ ಸೆಲ್ಸಿಯಸ್! ಧೂಮಕೇತುಗಳಲ್ಲಿ ಸಹ ಇಂಥದ್ದೇ ಮಾದರಿಯ ಹರಳುಗಳು ಹೇಗೆ ಕಂಡುಬರುತ್ತವೆ ಎಂಬುದನ್ನು ಈ ಸಂಶೋಧನೆ ವಿವರಿಸಬಹುದು ಎಂಬ ವಿಶ್ವಾಸ ವೈಜ್ಞಾನಿಕ ವಲಯದಲ್ಲಿ ಮೂಡಿದೆ. ಯಾಕೆಂದರೆ ಧೂಮಕೇತುಗಳು ನೀರಿನ ಫ್ರೀಜಿಂಗ್ ತಾಪಮಾನಕ್ಕಿಂತಲೂ ಆಧಿಕ ಶೀತಲವಾಗಿರುತ್ತವೆ. ಇವುಗಳ ತಾಪಮಾನ ಸುಮಾರು ಮೈನಸ್ 700 ಡಿಗ್ರಿ ಸೆಲ್ಸಿಯಸ್ಗಳು.

ಗ್ರಹಗಳ ಸೃಷ್ಟಿಯ ರಹಸ್ಯ?
ನಕ್ಷತ್ರಗಳಲ್ಲಿ ಕಂಡುಬಂದಿರುವ ಈ ಹರಳುಮಳೆ, ಗ್ರಹ ಸೃಷ್ಟಿಸುವ ತಟ್ಟೆಗಳು ಮತ್ತಿತರ ವಿಚಾರಗಳು ಗ್ರಹಗಳ ಸೃಷ್ಟಿ ರಹಸ್ಯವನ್ನು ಭೇದಿಸಬಹುದೆ? ಸಣ್ಣ ಸಣ್ಣ ಹರಳುಗಳು ಧೂಮಕೇತುಗಳಲ್ಲಿವೆ. ಅವುಗಳಿಗಿಂತ ಸ್ವಲ್ಪ ದೊಡ್ಡ ಗಾತ್ರದ ಹರಳುಗಳು ನಕ್ಷತ್ರಗಳಲ್ಲಿವೆ. ಈ ಹರಳುಗಳು ನಕ್ಷತ್ರಗಳ ಮೇಲೆ ಮಳೆಯ ರೂಪದಲ್ಲಿ ಬೀಳುತ್ತಿರುತ್ತವೆ. ಅಂದರೆ ಈ ಹರಳುಗಳು ನಕ್ಷತ್ರದ ಗುರುತ್ವಾಕರ್ಷಣ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಆ ಪ್ರಭಾವದ ಹಾದಿಯಲ್ಲಿ ಮಳೆಯಂತೆ ನುಗ್ಗುತ್ತವೆ. ಈ ಹರಳುಗಳಿಗಿಂತಲೂ ಮೊದಲು ಗ್ರಹ ಸೃಷ್ಟಿಸುವಂಥ ತಟ್ಟೆಗಳಿವೆ. ಹಾಗಿರುವಾಗ ಗ್ರಹಗಳ ಸೃಷ್ಟಿ ರಹಸ್ಯ ಅದರ ಜೊತೆಗೆ ವಿಶ್ವದ ಸೃಷ್ಟಿ ರಹಸ್ಯ ಇಲ್ಲೇ ಯಾಕೆ ಅಡಗಿರಬಾರದು?
    ನಕ್ಷತ್ರವೊಂದು ಮಹಾಸ್ಫೋಟಕ್ಕೆ ಒಳಗಾದಾಗ ಲಕ್ಷಾಂತರ ಹೋಳುಗಳಾಗಿ ವಿಭಜನೆಗೊಳ್ಳುತ್ತದೆ. ಈ ರೀತಿ ಸ್ಫೋಟಗೊಂಡ ನಕ್ಷತ್ರದ ಕೇಂದ್ರ ಭಾಗ ಅಥವಾ ಗರ್ಭ ಹೊಸ ನಕ್ಷತ್ರವಾಗಿ ರೂಪುಗೊಳ್ಳುತ್ತದೆ. ಹಾಗಿದ್ದರೆ ಉಳಿದ ಭಾಗಗಳು? ಯಾವೆಲ್ಲ ನಕ್ಷತ್ರದ ಗುರುತ್ವಾಕರ್ಷಣ ಶಕ್ತಿಯ ಪ್ರಭಾವಲಯದಲ್ಲೇ ಗಿರಕಿ ಹೊಡೆಯುತ್ತಿವೆಯೋ ಅವೆಲ್ಲ ಮತ್ತೆ ನಕ್ಷತ್ರದ ಜೊತಗೇ ಮಿಲನಗೊಳ್ಳುತ್ತವೆ. ಅದುವೇ ಹರಳುಗಳ ಮಳೆ ಇರಬೇಕು! ಇದನ್ನು ವಿಜ್ಞಾನಿಗಳೇನೂ ಹೇಳಿಲ್ಲ. ಆದರೆ ಈ ರೀತಿಯಾಗಿ ಸಮರ್ಥ ವಾದವನ್ನು ಮಂಡಿಸಲು ಅಡ್ಡಿಯಿಲ್ಲ. ಸ್ಫೋಟಗೊಂಡ ನಕ್ಷತ್ರದ ಭಾಗಗಳಲ್ಲಿ ಕೆಲವೊಂದು ದೊಡ್ಡ ಗಾತ್ರದವುಗಳಿರಬಹುದು. ಇವೇ ಗ್ರಹಗಳಾಗಿ, ಉಪಗ್ರಹಗಳಾಗಿ, ಕ್ಷುದ್ರಗ್ರಹಗಳಾಗಿ ರೂಪುಗೊಂಡಿರಬೇಕು. ಶೀತಲ ಮೋಡ ಕೂಡಾ ನಕ್ಷತ್ರದಿಂದ ಪ್ರತ್ಯೇಕಗೊಂಡು ಧೂಮಕೇತುಗಳಾಗಿ ರೂಪಾಂತರಗೊಂಡಿರಬೇಕು. ಈ ರೀತಿ ರೂಪಾಂತರಕ್ಕೊಳಗಾದಾಗ ನಕ್ಷತ್ರದ ಕೆಲವೊಂದು ಪುಟ್ಟ ಹರಳುಗಳನ್ನೂ ತಮ್ಮ ಜೊತೆ ಸೆಳೆದುಕೊಂಡಿರಬೇಕು. ಸಣ್ಣ ಭಾಗಗಳು ದೊಡ್ಡ ಭಾಗಗಳ ಗುರುತ್ವಾಕರ್ಷಣ ಶಕ್ತಿಯಿಂದ ಸೆಳೆಯಲ್ಪಟ್ಟು ಅವುಗಳಿಗೆ ಗಿರಕಿ ಹೊಡೆಯುತ್ತಾ ಉಪಗ್ರಹಗಳಾಗಿರಬಹುದು. ಈ ರೀತಿ ನಕ್ಷತ್ರವೊಂದು ಸ್ಫೋಟಗೊಂಡಾಗ ಅದರಿಂದಲೇ `ಜೀವಮೂಲ'ವೂ ಸಿಡಿದು ಹೊರಬಂದಿರಬಹುದಲ್ಲವೆ? ಎಷ್ಟೇ ಸತ್ಯಗಳು ವೈಜ್ಞಾನಿಕ ಸಂಶೋಧನೆಗಳಿಂದ ಉದ್ಭವಿಸಿ ಬಂದರೂ ಹುಡುಕಾಟ ಮಾತ್ರ ಕೊನೆಗೊಳ್ಳದು.

Comments

  1. Hi sir,
    nice article. i like your articles, writing style, your thought...

    rajesh, new delhi

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು