ದೇಹ ಕಿರಿದಾಗುತ್ತಿದೆ, ಮೆದುಳು ಸಂಕುಚಿಸುತ್ತಿದೆ

ನಮ್ಮ ಪೂರ್ವಜರಿಗಿಂತ ನಾವೇ ಶ್ರೇಷ್ಠ ಎಂಬ ಅಹಂಭಾವ ನಮ್ಮಲ್ಲಿ ಮನೆಮಾಡಿದೆ. ಇಂಥ ದಾಡಸಿತನದಿಂದಾಗಿ ನಮ್ಮ ಅವಸಾನವನ್ನು ನಾವೇ ಕಂಡುಕೊಳ್ಳುತ್ತಿದ್ದೇವೇನೋ ಎಂದೆನ್ನಿಸತೊಡಗಿದೆ. ಕೇಂಬ್ರಿಡ್ಜ್ ವಿ.ವಿ.ಯ ಸಂಶೋಧಕರು ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ ಮಾನವನ ಶರೀರದ ಗಾತ್ರ ತಲೆಮಾರಿನಿಂದ ತಲೆಮಾರಿಗೆ ಕಿರಿದಾಗುತ್ತಿದೆ. ಮೆದುಳು ಕೂಡಾ ಸಂಕೋಚನಕ್ಕೆ ಒಳಗಾಗುತ್ತಿದೆ. 

ಎವರೆಸ್ಟ್ ಏರುವುದಕ್ಕೆ ನಮಗೆ ಗೊತ್ತಿದೆ. ಚಂದ್ರನಲ್ಲಿಯೂ ಕಾಲಿಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ. ಬಾಹ್ಯಾಕಾಶವೆಲ್ಲ ನಮ್ಮದೇ, ಅನ್ಯಗ್ರಹ ಜೀವಿಗಳನ್ನೂ ಹುಡುಕುತ್ತಿದ್ದೇವೆ, ಸೂರ್ಯಲೋಕವನ್ನೂ ಪ್ರವೇಶಿಸುವ ತಾಕತ್ತು ನಮ್ಮಲ್ಲಿದೆ ಎಂಬೆಲ್ಲ ಹುಚ್ಚು ಭ್ರಮೆಯಲ್ಲಿ ತೇಲಾಡುತ್ತಿದ್ದೇವೆ. !ನಮ್ಮ ಪೂರ್ವಜರಿಗಿಂತ ನಾವೇ ಶ್ರೇಷ್ಠ ಎಂಬ ಅಹಂಭಾವ ನಮ್ಮಲ್ಲಿ ಮನೆಮಾಡಿದೆ. ಇಂಥ ದಾಡಸಿತನದಿಂದಾಗಿ ನಮ್ಮ ಅವಸಾನವನ್ನು ನಾವೇ ಕಂಡುಕೊಳ್ಳುತ್ತಿದ್ದೇವೇನೋ ಎಂದೆನ್ನಿಸತೊಡಗಿದೆ.
ಇದೇನೂ ಸುಖಾಸುಮ್ಮನೇ ಮಾಡುತ್ತಿರುವ ಆರೋಪವಲ್ಲ. ಯಾವ ವೈಜ್ಞಾನಿಕ ಕ್ಷೇತ್ರ ಇಂದು ನಾವು ಹೇಳಿಕೊಳ್ಳುತ್ತಿರುವ `ಅಭಿವೃದ್ಧಿ'ಗೆ ಕಾರಣವಾಗಿದೆಯೋ ಅದೇ ವೈಜ್ಞಾನಿಕ ಕ್ಷೇತ್ರ ನಡೆಸಿದಂಥ ಸಂಶೋಧನೆಯಿಂದಾಗಿ ಈ ಅನುಮಾನಗಳ ಬೇರು ಆಳಕ್ಕಿಳಿದಿದೆ. `ಅಭಿವೃದ್ಧಿ' ಎಂಬ ಹೆಸರಿನಲ್ಲಿ ನಾವು ಇದುವರೆಗಿ ಸೇವಿಸಿದ್ದು, ಈಗ ಸೇವಿಸುತ್ತಿರುವುದು ಹೀಗೇ ಮುಂದುವರಿದರೆ ಮುಂದೆ ಸೇವಿಸುವುದು ಬರೇ ವಿಷವನ್ನು. ಉಸಿರಿನ ಕಣ ಕಣದಲ್ಲಿಯೂ ಇದ್ದದ್ದು, ಈಗಿರುವುದು ವಿಷಾನಿಲ, ಶ್ವಾಸಕೋಶವನ್ನು ಹೊಕ್ಕು ಹೊರಬರುತ್ತಿದ್ದುದೆಲ್ಲವೂ ವಿಷಾನಿಲ ಎಂಬುದನ್ನು ವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ. ಒಂದರ್ಥದಲ್ಲಿ ಇಂದು ಮಾನವನ ದೇಹವೇ ವಿಷಮಯವಾಗಿದೆ. ಅರ್ಥಾತ್ ದೇಹದಲ್ಲಿಯೇ ವಿಷತುಂಬಿಕೊಂಡಿದ್ದ ಪೂತನಿಯಂತಾಗಿದ್ದೇವೆ. 
ಅಂದರೆ ನಮ್ಮ ಪೂರ್ವಜರಿಗಿಂತ ದೊಡ್ಡವರು, ಬುದ್ಧಿವಂತರು, ಚಾಣಾಕ್ಯರು... ಎಂದೆಲ್ಲ ಅಂದುಕೊಂಡಿದ್ದೇವಲ್ಲ, ಇದೆಲ್ಲವೂ ತಿರುವು ಮುರುವು ಎಂಬುದು ದಿಟವಾಗಿದೆ. ನಮ್ಮ ಪೂರ್ವಜರ ಸಮಕ್ಕೆ ನಿಲ್ಲಲು ನಾವು ಆಶಕ್ತರು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಕಾರಣ ಇಷ್ಟೆ-  ಕೇಂಬ್ರಿಡ್ಜ್ ವಿ.ವಿ.ಯ ಸಂಶೋಧಕರು ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ ಮಾನವನ ಶರೀರದ ಗಾತ್ರ ತಲೆಮಾರಿನಿಂದ ತಲೆಮಾರಿಗೆ ಕಿರಿದಾಗುತ್ತಿದೆ. ಮೆದುಳು ಕೂಡಾ ಸಂಕೋಚನಕ್ಕೆ ಒಳಗಾಗುತ್ತಿದೆ. ಇಂದಿನ ಕಾಲದ ಜನರು ಗಾತ್ರದಲ್ಲಿ ಬೇಟೆಯಾಡಿಯೋ ಹಸಿ ಗೆಡ್ಡೆ ಗೆಣಸುಗಳನ್ನು ತಿಂದೋ ಬದುಕುತ್ತಿದ್ದ ತಮ್ಮ ಪೂರ್ವಜರಿಗಿಂತ ಅಂದರೆ ಸುಮಾರು 10,000 ವರ್ಷಗಳ ಹಿಂದಿನ ಮಾನವನಿಗಿಂತ ಶೇ.10ರಷ್ಟು ಕಿರಿದಾಗಿದ್ದಾರೆ. ಇವರ ಮೆದುಳು ಕೂಡಾ ಗಾತ್ರ ಸಾಮರ್ಥ್ಯಗಳೆರಡರಲ್ಲೂ ಕಿರಿದಾಗಿದೆ. 

ಯಾಕೆ ಹೀಗೆ?
ತೀರಾ ಇತ್ತೀಚೆಗೆ ನಡೆದಿದ್ದ ಒಂದು ಸಂಶೋಧನೆಯ ಪ್ರಕಾರ ಮಾನವನ ಗಾತ್ರ ತಲೆಮಾರಿನಿಂದ ತಲೆಮಾರಿಗೆ ಹೆಚ್ಚಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ಕೇಂಬ್ರಿಡ್ಜ್ ವಿ.ವಿ.ಯ ಸಂಶೋಧನೆ ಇದನ್ನು ಅಲ್ಲಗಳೆಯುತ್ತದೆ. ಲಕ್ಷ ವರ್ಷಗಳ ಹಿಂದಿನ ನಮ್ಮ ಪೂರ್ವಜರ ಗಾತ್ರ, ಮೆದುಳಿನ ಗಾತ್ರ ಮತ್ತು ಸಾಮರ್ಥ್ಯದ ಮುಂದೆ ನಮ್ಮದೇನೂ ಅಲ್ಲ ಎನ್ನುತ್ತದೆ ಈ ಸಂಶೋಧನೆ. ಹಂಟರ್ ಗ್ಯಾದರರ್ ಎಂದು ಕರೆಸಿಕೊಳ್ಳುತ್ತಿದ್ದ ಮಾನವ ಬೇಟೆಯಾಡುತ್ತಾ, ಸಿಕ್ಕ ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ ಜೀವನ ಸಾಗಿಸುತ್ತಿದ್ದ. ಅಂಥ ಮಾನವ ಕೃಷಿ ಮಾಡುವುದನ್ನು ಕಲಿತುಕೊಂಡ. ಯಾವಾಗ ಕೃಷಿ ಕಲಿತನೋ ಆಗ ಆತ ತನ್ನ ಆಹಾರ ಪದ್ಧತಿಯ ಮೇಲೆ ನಿಯಂತ್ರಣ ಹಾಕಿಕೊಂಡ. ನಗರೀಕರಣ ಪ್ರಾರಂಭವಾಯಿತು. ಆರೋಗ್ಯದ ಜೊತೆಗೇ ಹೊಂದಾಣಿಕೆ ಮಾಡಿಕೊಳ್ಳಲಾರಂಭಿಸಿದ. ಆರೋಗ್ಯ ಹದಗೆಡಲಾರಂಭಿಸಿತು.
ಇಷ್ಟಕ್ಕೇ ಸುಮ್ಮನಾಗುತ್ತಾನೆಯೇ? ಕೃಷಿಯನ್ನು ಅಭಿವೃದ್ಧಿಪಡಿಸುವ ಹುಮ್ಮಸ್ಸಿನಲ್ಲಿ ಏನೇನೋ ಪ್ರಯೋಗಗಳನ್ನು ಮಾಡಿದ. ಕೆಲವು ಯಶಸ್ವಿಯಾದರೆ ಅಧಿಕ ಪಾಲು ಅಪಾಯಕಾರಿಯಾಗಿ ಪರಿಣಮಿಸಿದವು. ಆಹಾರ ಸರಪಣಿಯಲ್ಲೆ ವಿಷ ಹರಿದಾಡತೊಡಗಿತು. ಆ ವಿಷವನ್ನೇ ತಿಂದು ನಾವೂ ವಿಷಮಯವಾದೆವು. ನಮ್ಮ ಆರೋಗ್ಯ, ಶಾರೀರಕ ವ್ಯವಸ್ಥೆ, ಮಾನಸಿಕ ಸಾಮರ್ಥ್ಯ ಹದಗೆಟ್ಟು ಹೋಯಿತು. ಹೀಗೆಯೇ ಮುಂದುವರಿದು ಶರೀರದ ಗಾತ್ರ ಕಿರಿದಾಯಿತು. ಮೆದುಳು ಚಿಕ್ಕದಾಯಿತು. ಅದರ ಸಾಮಥ್ರ್ಯ ಸಂಕುಚಿಸಿತು. 
ಆಫ್ರಿಕಾ, ಯೂರೋಪು ಮತ್ತು ಏಷ್ಯಾ ಖಂಡಗಳಲ್ಲಿ ದೊರೆತ ಮಾನವ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಇಥಿಯೋಪಿಯಾದಲ್ಲಿ ಸಿಕ್ಕಿದ ಸುಮಾರು 2 ಲಕ್ಷ ವರ್ಷಗಳಷ್ಟು ಹಿಂದಿನದಿರಬಹುದಾದ ಮಾನವ ಪಳೆಯುಳಿಕೆಯು ಆ ಕಾಲದ ಮಾನವರ ಸಾಮರ್ಥ್ಯವನ್ನು ಹೊರಗೆಡಹಿದೆ. ಇಂದಿನ ಮನುಷ್ಯರಿಗಿಂತ ಅಂದಿನ ಕಾಲದ ಜನರು ಹಲವು ಪಟ್ಟು ದೃಢಕಾಯರಾಗಿದ್ದರು. ಸಾಮರ್ಥ್ಯವುಳ್ಳವರಾಗಿದ್ದರು. ಇಸ್ರೇಲಿನಲ್ಲಿ ದೊರೆತಂತಹ 1.2 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆಗಳು ಸಹ ಇದನ್ನೇ ದೃಢಪಡಿಸುತ್ತವೆ. ಬಹುತೇಕ ಸರಾಸರಿ 10,000 ವರ್ಷಗಳ ಹಿಂದಿನ ಮಾನವರೆಲ್ಲ ಇಷ್ಟೊಂದು ಸಾಮರ್ಥ್ಯ ಹೊಂದಿದ್ದರು ಎನ್ನುತ್ತದೆ ಸಂಶೋಧನೆ.
ಕೃಷಿ ಮಾಡಿ ಬದುಕು ಸಾಗಿಸುವುದನ್ನು ಮಾನವ ಕಲಿತದ್ದು ಸುಮಾರು 10000 ವರ್ಷಗಳ ಹಿಂದೆ. ಈ ಕೃಷಿ ಪದ್ಧತಿ ಶುರುವಾದದ್ದೇ ಮಾನವ ಕೃಶನಾಗುವುದಕ್ಕೆ, ಆತನ ಮೆದುಳು ಸಂಕೋಚನಗೊಳ್ಳುವುದಕ್ಕೆ ಕಾರಣ ಎನ್ನುತ್ತದೆ ಸಂಶೋಧನೆ. ಆಹಾರದಲ್ಲಿ ತನಗೆ ತಾನಿ ನಿಯಂತ್ರಣ ಹೇರಿಕೊಂಡದ್ದು ವಿಟಮಿನ್ಗಳು ಮತ್ತು ಲವಣಗಳ ಕೊರತೆಗೆ ಕಾರಣವಾಗಿರಬಹುದು. ಅಲ್ಲದೆ, ಕಾಲಾಂತರಗಲ್ಲಿ ಕೀಟನಾಶಕಗಳು, ಕ್ರಿಮಿನಾಶಕಗಳ ಬಳಕೆ ಮಾಡಲು ಆರಂಭಿಸಿದ್ದು ಇನ್ನಷ್ಟು ಹಾನಿಯನ್ನುಂಟುಮಾಡಿತು.
ಇನ್ನು ಮೆದುಳಿನ ವಿಚಾರಕ್ಕೆ ಬಂದರೆ ಇನ್ನಷ್ಟು ಆಶ್ಚರ್ಯವಾಗುತ್ತದೆ. ಸುಮಾರು 20,000 ವರ್ಷಗಳ ಹಿಂದಿನ ಪರುಷನ ಮೆದುಳು 1500 ಘನ ಸೆಂ.ಮೀ. ಇದ್ದಿತ್ತು. ಆದರೆ ಈಗಿನ ಪುರುಷರ ಮೆದುಳು 1350 ಘನ ಸೆಂ.ಮೀ. ಇದೆ. ಮಹಿಳೆಯರ ಮೆದುಳು ಕೂಡಾ ಇದೇ ಅನುಪಾತದಲ್ಲಿ ಸಂಕೋಚನಕ್ಕೊಳಗಾಗಿದೆ. ಹಾಗಂತ ನಾವು ಕಡಿಮೆ ಬುದ್ಧಿವಂತರು ಎಂದಲ್ಲ ಎನ್ನುತ್ತಾರೆ ಸಂಶೋಧಕರು.

ಇನ್ನಷ್ಟು ಸಮಸ್ಯೆ ಕಾದು ಕುಳಿತಿದೆ
ಕಾಲಘಟ್ಟ ಬದಲಾದಂತೆ ಮಾನವ ಕೂಡಾ ಬದಲಾಗುತ್ತಿದ್ದಾನೆ. ಆತನ ಶರೀರ ಕ್ಷಯವಾಗುತ್ತಿದೆ. ಇತ್ತೀಚಿನ ದಿನಗಳಲ್ಲಂತೂ ನಾವು ಬಳಸುವ ಪ್ರತಿಯೊಂದು ಆಹಾರ ವಸ್ತುವೂ ಸಹ ವಿಷಕಾರಿಯಾಗಿದೆ. ಇಂತಿರುವಾಗ ನಮ್ಮ ಮುಂದಿನ ತಲೆಮಾರುಗಳ ಸ್ಥಿತಿ ಹೇಗಿರಬಹುದು? ನಮ್ಮ ಪೂರ್ವಜರಿಗಿಂತ ನಮ್ಮ ಸಾಮರ್ಥ್ಯ ಕಡಿಮೆ ಇದೆ. ರೋಗನಿರೋಧಕ ಶಕ್ತಿಯೂ ಇಲ್ಲ ಎಂದಾದರೆ ನಮ್ಮ ಮುಂದಿನ ಪೀಳಿಗೆಗಳಲ್ಲಿ ಇವು ಇನ್ನಷ್ಟು ಕ್ಷೀಣಿಸುತ್ತಾ ಹೋಗುವುದು ದಿಟ. ಈ ನಿಟ್ಟಿನಲ್ಲಿ ನಾವು ಇನ್ನಾದರೂ ಚಿಂತಿಸದೇ ಹೋದಲ್ಲಿ ಮುಂದೊಂದು ದಿನ ಮನುಷ್ಯ ಎಂದರೆ ಆತ ವಿಷಜಂತು ಎಂಬಲ್ಲಿಗೆ ಬಂದು ನಿಂತೀತು, ಜೋಕೆ!
ಆಹಾರ ಸರಪಣಿಯುದ್ದಕ್ಕೂ ವಿಷ, ಕೀಟನಾಶಕ ಮತ್ತಿತರ ರಾಸಾಯನಿಕಗಳು ಹರಿಯುತ್ತಿವೆ. ಕೀಟನಾಶಕ ಇಲ್ಲದ ಬೆಳೆಯೇ ಇಲ್ಲ. ಈ ಕೀಟನಾಶಕಗಳ ಬಳಕೆಯಿಂದಾಗಿ ಈಗಾಗಲೇ ಹಲವಾರು ಜೀವಸಂಕುಲಗಳು ಅಳಿದು ಹೋಗಿವೆ. ಇನ್ನೂ ಹಲವು ಅಳಿವಿನ ಅಂಚಿಗೆ ಬಂದು ಕುಳಿತಿವೆ. ಇದೇ ರೀತಿ ಪ್ರಾಣಿ ಸಂಕುಲ ಆಳಿಯುತ್ತಾ ಹೋದದ್ದೇ ಆದಲ್ಲಿ ಮುಂದೊಂದು ದಿನ ಭೂಮಿಯ ಮೇಲೆ ಪ್ರಾಣಿಗಳೇ ಇಲ್ಲ ಎಂದಾಗಬಹುದು. ಮಾನವ ನಡೆಸುತ್ತಿರುವ ಒಂದೊಂದು ಪ್ರಯೋಗಗಳು ಸಹ ಮಾನವನನ್ನೇ ಹಂತ ಹಂತವಾಗಿ ಕೊಲ್ಲುತ್ತಿವೆ. ಮಾನವನೂ ಭೂಮಿಯ ಮೇಲೆ ಇಲ್ಲದ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಹಾಗಂತ ಮಾನವನ `ಪ್ರಗತಿ'ಯೆಂಬೋ ಭ್ರಮೆಯ ತುಡಿತವನ್ನು ಅದರಷ್ಟಕ್ಕೇ ಬಿಡಲು ಪ್ರಕೃತಿಯೂ ಸಿದ್ಧವಿಲ್ಲ. ಪ್ರತಿಯೊಂದು ಕಡೆಯೂ ಸಮತೋಲನ ಇರಲೇಬೇಕು. ಅಂತೆಯೇ ಭೂಮಿಯ ಜೀವಸಂಕುಲಗಳು ಕೂಡಾ ಸಮತೋಲನ ಕಾಯ್ದುಕೊಳ್ಳುತ್ತವೆ. ಮಾನವನ ಅತಿರೇಕದ ಪ್ರಗತಿಯನ್ನು ಪ್ರಕೃತಿ ತಡೆಯುತ್ತದೆ. ಕಾಲಚಕ್ರ ಉರುಳಿದಂತೆ ಈಗಿನ ಸಮಸ್ಯೆಗಳು ಕೂಡಾ ನಿವಾರಣೆಯಾಗಬಹುದು ಎಂಬ ವಿಶ್ವಾಸವಿದೆ.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು