ನಮ್ಮ ಸೌರಮಂಡಲ ಲಯವಾಗುತ್ತಿದೆಯೇ?

ಪ್ರಳಯ ಆಗಿಯೇ ಬಿಟ್ಟಿತು ಎಂಬ ಮನಸ್ಥಿತಿಗೆ ಜನ ತಲುಪಿದ್ದಾರೆ. ಆದರೆಡೆಯಲ್ಲಿಯೂ ಸೌರಲೋಕ ಅಂತ್ಯವಾಗುತ್ತದೆಯೇ? ಪ್ರಳಯ ಎಂಬುದು ನಿಜವೇ? ನಮ್ಮ ಸೌರಮಂಡಲದ ಅಂತ್ಯದ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದ್ದು ಲೀಸೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು. ಸಾವು ಎಂದರೆ ಅಂತ್ಯವಲ್ಲ. ಅದು ಕೇವಲ ರೂಪಾಂತರ ಎನ್ನುತ್ತವೆ ಉಪನಿಷತ್ತುಗಳು.

ಅದ್ಯಾವಾಗ ಪ್ರಳಯದ ಬಗ್ಗೆ ಮಾತುಗಳು ಜಿಗಿದೆದ್ದವೋ, ಮಾಧ್ಯಮಗಳಲ್ಲೆಲ್ಲ ಬರೇ ಪ್ರಳಯದ್ದೇ ಸುದ್ದಿಗಳು ತುಂಬಿಕೊಂಡವೋ ಆಗಲೇ ಜನ ಭೀತಿಗೊಳಗಾಗತೊಡಗಿದರು. ಇದರ ನಡುವೆಯೇ ನಮ್ಮ ಸೌ ರಲೋಕ ಅಂತ್ಯದತ್ತ ನಡೆಯುತ್ತಿದೆ ಎಂಬ ಸಂಶೋಧನೆಯೊಂದು ವೈಜ್ಞಾನಿಕ ವಲಯದಲ್ಲಿ ನಡೆದಿದ್ದು, ಅದು ಜನರಲ್ಲಿ ಇನ್ನಷ್ಟು ಆತಂಕಗಳನ್ನು ಸೃಷ್ಟಿಸಿದೆ. ಪ್ರಳಯ ಆಗಿಯೇ ಬಿಟ್ಟಿತು ಎಂಬ ಮನಸ್ಥಿತಿಗೆ ಜನ ತಲುಪಿದ್ದಾರೆ. ಆದರೆಡೆಯಲ್ಲಿಯೂ ಸೌರಲೋಕ ಅಂತ್ಯವಾಗುತ್ತದೆಯೇ? ಪ್ರಳಯ ಎಂಬುದು ನಿಜವೇ? ಎಲ್ಲವೂ ನಾಶವಾಗುತ್ತದೆಯೇ? ಎಂಬೆಲ್ಲ ಪ್ರಶ್ನೆಗಳು ಜನರನ್ನು ಕಾಡುತ್ತಿವೆ.
ಒಂದೊಂದು ಸಂಶೋಧನೆಯಾದಾಗಲೂ ಅದು ಆತಂಕವನ್ನು ಹುಟ್ಟಿಸುವುದು ನಿಜ. ಆದರೆ ಆ ಸಂಶೋಧನೆಯ ಆಳವನ್ನು, ಅದರಲ್ಲಿರುವ ಸತ್ವವನ್ನು ಅರ್ಥ ಮಾಡಿಕೊಂಡು ನಂತರ ನಮ್ಮ ನಿರ್ಧಾರವನ್ನು ತೆಗೆದುಕೊಳ್ಳಬೇಕೇ ಹೊರತು ಯಾರೋ ಸಂಶೋಧನೆ ಮಾಡಿದ್ದಾರೆ ಎಂದ ತಕ್ಷಣ ಅದು ನಿಜವಾಗಿ ಬಿಡುವುದಿಲ್ಲವಲ್ಲ? ಮೊದಲಿಗೆ ನಿಜವೆಂದು ನಂಬಿ ನಂತರ ಅದು ಸುಳ್ಳೆಂದು ಸಾಬೀತಾದ ಮತ್ತು ಮೊದಲಿಗೇ ಅಡ್ಡಿ, ವಿವಾದಗಳನ್ನು ಕಂಡು ನಂತರ ಅದುವೇ ನಿಜವೆಂದು ಸಾಬೀತಾದ ಅದೆಷ್ಟೋ ವೈಜ್ಞಾನಿಕ ಸಂಶೋಧನೆಗಳು ನಮ್ಮೆದುರಿಗೇ ಇವೆ. ಹಾಗಿರುವಾಗ ಒಮ್ಮಿಂದೊಮ್ಮೆಲೇ ಹೊಸ ಸಂಶೋಧನೆಗಳನ್ನು ನಂಬಬೇಕಾದ ಅನಿವಾರ್ಯತೆಯೇನೂ ಇಲ್ಲ.

ಇರಲಿ, ಈಗ ನಮ್ಮ ಸೌರಮಂಡಲದ ಅಂತ್ಯದ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದ್ದು ಲೀಸೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು. ಅವರು ಹೇಳುವ ಪ್ರಕಾರ ಸೂರ್ಯನಂಥ ನಕ್ಷತ್ರಗಳ ಜೀವನದ ಕೊನೆಯ ಘಟ್ಟವೇ ಶ್ವೇತಕುಬ್ಜಾವಸ್ಥೆ. (ನಕ್ಷತ್ರಗಳ ಜೀವನದಲ್ಲಿಯೂ ಹಲವು ಘಟ್ಟಗಳಿವೆ) ಈ ಸ್ಥಿತಿಯಲ್ಲಿ ನಮ್ಮ ಸೂರ್ಯನು ಭೂಮಿಗಿಂತ ಸ್ವಲ್ಪ ಕಡಿಮೆ ಗಾತ್ರದವನಾಗುತ್ತಾನೆ. ಆದರೆ ಆತನ ಸಾಂಧ್ರತೆ ಅಧಿಕವಾಗಿದ್ದು, ಅಂಥ ಸ್ಥಿತಿಯಲ್ಲಿ ಸೂರ್ಯನ ಒಂದು ಚಹಾ ಚಮದಷ್ಟು ಭಾಗವೂ 5 ಟನ್ಗಳಿಗೂ ಹೆಚ್ಚು ಭಾರವಾಗಿರುತ್ತದೆ. ನಾಸಾದ ಹಬಲ್ ಟೆಲೆಸ್ಕೋಪ್ ಕಳುಹಿಸಿದ ವಿವಿಧ ಗೆಲಾಕ್ಸಿಗಳಲ್ಲಿರುವ ಶ್ವೇತಕುಬ್ಜಗಳ ತರಂಗಗುಚ್ಛಗಳನ್ನು ಅಧ್ಯಯನ ಮಾಡಿ ಸಂಶೋಧಕರು ನಮ್ಮ ಸೂರ್ಯನೂ ಅಂತ್ಯದತ್ತ ಸಾಗುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ. ಸಾಮಾನ್ಯ ಸ್ಥಿತಿಗಿಂತ ತಣ್ಣಗಾದ ಅಂದರೆ, 25000 ಡಿಗ್ರಿ ಸೆಲ್ಸಿಯಸ್ಗೂ ಕಡಿಮೆ ಉಷ್ಣಾಂಶವಿರುವ ಶ್ವೇತಕುಬ್ಜ ನಕ್ಷತ್ರಗಳಲ್ಲಿ ಕೆಲವೊಂದು ಬಾರಿ ಆಮ್ಲಜನಕ, ಸಾರಜನಕ, ಸಿಲಿಕಾನ್ ಮತ್ತು ಕಬ್ಬಿಣದಂಥ ಅಂಶಗಳಿರುತ್ತವೆ. ಆದರೆ ಆಗಷ್ಟೇ ಶ್ವೇತಕುಬ್ಜಾವಸ್ಥೆಗೆ ತಲುಪಿದ ನಕ್ಷತ್ರಗಳಲ್ಲಿ ಅತ್ಯಧಿಕ ಉಷ್ಣಾಂಶವಿದ್ದು, ಅಧಿಕ ಸಾಂಧ್ರತೆಯ ರಾಸಾಯನಿಕಗಳಷ್ಟೇ ಇರುತ್ತವೆ. ವಿಶೇಷ ಎಂದರೆ ಈ ಎಲ್ಲಾ ಲೋಹಗಳನ್ನು ಮತ್ತು ರಾಸಾಯನಿಕಗಳನ್ನು ನಕ್ಷತ್ರವು ಸೆಳೆದುಕೊಳ್ಳುವುದು ತನ್ನನ್ನು ಪರಿಭ್ರಮಿಸುತ್ತಿರುವ ಗ್ರಹಗಳಿಂದ! ಆದರೆ ಕೆಲವೊಂದು ಬಾರಿ ಶ್ವೇತಕುಬ್ಜ ನಕ್ಷತ್ರಗಳಲ್ಲಿ ಸಾಮಾನ್ಯವಾಗಿ ಇರುವುದಕ್ಕಿಂತ ಭಿನ್ನವಾದ ಲೋಹಗಳು ಮತ್ತು ರಾಸಾಯನಿಕಗಳೂ ಕಂಡು ಬರುತ್ತವೆ. ಇವೂ ಕೂಡಾ ಗ್ರಹಗಳಿಂದಲೇ ಸೆಳೆದುಕೊಂಡಂಥದ್ದೋ ಅಥವಾ ನಕ್ಷತ್ರಗಳಲ್ಲೇ ಉತ್ಪತ್ತಿಯಾದದ್ದೋ ಅಥವಾ ನಕ್ಷತ್ರಗಳ ಹೊರಪದರದಲ್ಲಿರುವ ದಟ್ಟ ಮೋಡಗಳಲ್ಲಿ ಉತ್ಪತ್ತಿಯಾದದ್ದೋ ಎಂಬ ಪ್ರಶ್ನೆ ಉದ್ಭವಿಸಿತ್ತು.
ಈಗ ನಡೆದಿರುವ ಸಂಶೋಧನೆ ಹೇಳುವ ಪ್ರಕಾರ ಈ ವಸ್ತುಗಳೂ ಗ್ರಹಗಳಿಂಲೇ ಸೆಳೆಯಲ್ಪಟ್ಟದ್ದು. ಹೀಗೆ ಗ್ರಹಗಳಿಂದ ಒಂದೊಂದೇ ಭೌತವಸ್ತುಗಳು ನಕ್ಷತ್ರದಿಂದ ಸೆಳೆಯಲ್ಪಟ್ಟು ಸೌರಮಂಡಲ ಅಂತ್ಯವಾಗುತ್ತದೆ. ನಮ್ಮ ಸೂರ್ಯನಲ್ಲಿ ಇದೇ ರೀತಿಯ ಅವಸ್ಥೆಗಳಾಗಿ ನಮ್ಮ ಸೌರಲೋಕವೂ ಅಂತ್ಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು. ನಮ್ಮ ಕ್ಷೀರಪಥ ಗೆಲಾಕ್ಸಿಯಲ್ಲೇ ಇರುವ ಮತ್ತು ಇತರ ಗೆಲಾಕ್ಸಿಗಳಲ್ಲಿರುವ ಶ್ವೇತಕುಬ್ಜ ನಕ್ಷತ್ರಗಳು ಸೌರಲೋಕಗಳ ಅಂತ್ಯದ ಕಥೆಯನ್ನು ಹೇಳುತ್ತವೆ. ಇದನ್ನು ಆಧಾರವಾಗಿಟ್ಟುಕೊಂಡು ನಮ್ಮ ಸೌರಲೋಕದ ಭವಿಷ್ಯವನ್ನು ಹೇಳಬಹುದು ಎಂಬುದು ವಿಜ್ಞಾನಿಗಳ ವಾದ.

ವಿಜ್ಞಾನಿಗಳ ಸಂಶೋಧನೆ ಅವರಿಗೆ ದೊರಕಿರುವ ಆಧಾರಗಳ ಪ್ರಕಾರ ನಿಜವಿರಬಹುದು ಒಪ್ಪಿಕೊಳ್ಳೋಣ. ಆದರೆ ಇದು ಏಕಮುಖ ವಾದ ಎನಿಸುತ್ತದೆ. ವಿಜ್ಞಾನದ ಬಗ್ಗೆ ಅತ್ಯಂತ ಆಳವಾದ ಅಧ್ಯಯನಗಳ ಮೂಲಕ, ಸೃಷ್ಟಿಯೂ ಸೇರಿದಂತೆ ಸಂಪೂರ್ಣ ವಿಜ್ಞಾನದ ಬಗ್ಗೆ ಸ್ಪಷ್ಟವಾಗಿ ಹೇಳಿರುವಂಥ ಉಪನಿಷತ್ತುಗಳು ನಮ್ಮ ಜೊತೆಗಿರುವಾಗ ಹೀಗೆ ಅನ್ನಿಸಲೇಬೇಕು. ಉಪನಿಷತ್ತುಗಳು ಹೇಳುವ ಪ್ರಕಾರ ಈ ಬ್ರಹ್ಮಾಂಡದಲ್ಲಿ ಏನೆಲ್ಲ ಇದೆಯೋ ಅವ್ಯಾವುದಕ್ಕೂ ಅಂತ್ಯವಿಲ್ಲ. ಆಗುವುದು ಕೇವಲ ರೂಪಾಂತರ. ಆಗಷ್ಟೇ ಜನ್ಮ ತಾಳಿದ ಮಗು ಬೆಳೆಯುತ್ತಾ ಹೊದಂತೆ ಅದರ ಭೌತಿಕ ಶರೀರದಲ್ಲಿ, ಮಾನಸಿಕ ಸ್ಥಿತಿಯಲ್ಲಿ ಯಾವ ರೀತಿ ಬದಲಾವಣೆಗಳಾಗುತ್ತದೆಯೋ ಅದೇ ರೀತಿ ಪ್ರತಿಯೊಂದು ಕಾಯಗಳಲ್ಲಿಯೂ ಬದಲಾವಣೆಗಳಾಗುತ್ತವೆ. ನಮ್ಮ ಶರೀರವೇ ಒಂದು ಲೋಕ. ಐತರೇಯ ಉಪನಿಷತ್ತು ಎಲ್ಲ ಪ್ರಾಣಿಗಳ ಶರೀರವೂ ಒಂದೊ ಲೋಕ ಎಂದು ಹೇಳುತ್ತದೆ ಮತ್ತು ಆ ಲೋಕವನ್ನು ಅಪೋಲೋಕ ಎಂದು ಕರೆದಿದೆ. ನಮ್ಮ ಶರೀರವೆಂಬ ಲೋಕದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಗಮನಿಸಿ. ಪ್ರಾಯವಾದಂತೆ ಕಣ್ಣು ಮಬ್ಬಾಗುತ್ತದೆ. ಕಿವಿ ಮಂದವಾಗುತ್ತದೆ. ತಲೆ ಬೆಳ್ಳಗಾಗುತ್ತದೆ. ದೇಹ ಸಂಕೋಚನಕ್ಕೆ ಒಳಗಾಗುತ್ತದೆ. ಚರ್ಮದಲ್ಲಿ ನೆರಿಗೆಗಳು ಬೀಳುತ್ತವೆ. ಒಂದು ಹಂತದಲ್ಲಿ ನಮ್ಮ ಶರೀರವೆಂಬ ಅಪೋಲೋಕ ಅತ್ಮ ಅಥವಾ ಜೀವದ ಪೋಷಣೆಗೆ ಯೋಗ್ಯವಾಗಿಲ್ಲ ಅನ್ನಿಸಿದಾಗ ಆತ್ಮ ಆ ಲೋಕ ಅರ್ಥಾತ್ ನಮ್ಮ ಶರೀರವನ್ನನು ಬಿಟ್ಟು ಹೋಗುತ್ತದೆ. ಹಾಗಂಥ ಆ ಆತ್ಮ ಸತ್ತು ಹೋಗುತ್ತದೆಯೇ? ಇನ್ನೊಂದು ಶರೀರವನ್ನು ಸೇರಿಕೊಂಡು ಆ ಅಪೋಲೋಕದಲ್ಲಿ ತನ್ನ ಪೋಷಣೆಯನ್ನು ಕಂಡುಕೊಳ್ಳುತ್ತದೆ. ಸಾವು ಎಂದರೆ ಅಂತ್ಯವಲ್ಲ. ಅದು ಕೇವಲ ರೂಪಾಂತರ. ಮುಕ್ತಿ ಸಿಗುವವರೆಗೆ ಈ ರೂಪಾಂತರಗಳು ಮುಂದುವರಿಯುತ್ತದೆ.

ಇಲ್ಲಿ ಇನ್ನೊಂದು ಪ್ರಶ್ನೆ ಕಾಡುತ್ತದೆ. ಮುಕ್ತಿ ಎಂದರೇನು? ಈ ವಿಚಾರದಲ್ಲಿ ಚರ್ಚಿಸುವುದ ಬಹಳಷ್ಟಿದೆ. ವೈಜ್ಞಾನಿಕ ವಲಯವಂತೂ ಇನ್ನೂವರೆಗೆ ಇದನ್ನು ಅರ್ಥ ಮಾಡಿಕೊಂಡಿಲ್ಲ. ಇದಕ್ಕೂ ಮೊದಲು ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳಬೇಕು. ಬೃಹದಾರಣ್ಯಕ ಉಪನಿಷತ್ ಸೃಷ್ಟಿಯ ಬಗ್ಗೆ ಸ್ಪಷ್ಟ ಚಿತ್ರಣ ಕೊಡುತ್ತದೆ. `ಯಥಾ ಸ್ತ್ರೀ ಪುಮಾಂಸೌ ಸಂಪರಿಷ್ವಕ್ತೌ ಸ ಇಮಮೇವಾ ತ್ಯಾನಂ ದ್ವೇಧಾಪಾತಯತ್, ತ್ವತಃ ಪತಿಶ್ಚ ಪತ್ನೀ ಚಾಭವತಾಂ' ಎನ್ನುತ್ತದೆ ಈ ಉಪನಿಷತ್. ಈ ಜಗತ್ತು ಸೃಷ್ಟಿಯಾದ ಆದಿಯಲ್ಲಿ ಇದ್ದದ್ದು `ಅಹಸ್' ಎಂಬ ಸ್ತ್ರೀರೂಪಿ ದ್ರವ್ಯವೂ `ಆತ್ಮತತ್ತ್ವ'ವೆಂಬ ಪುರುಷರೂಪಿಯೂ. ಈ ಎರಡೂ ಶಕ್ತಿಗಳ ಮೂಲ ಒಂದೇ. ಆ ಮೂಲವೇ ಪರಮಾತ್ಮ. ಇಂಥ ಮೂಲಶಕ್ತಿಯೇ ತನ್ನೊಳಗೆ ಉತ್ಪತ್ತಿಯಾದಂಥ ಉದ್ಘೀತ ಮಹಾಕಂಪನವೆಂಬ ಶ್ರದ್ಧಾತರಂಗಗಳ ಮೂಲಕ ತನ್ನನ್ನೇ ಎರಡಾಗಿ ಸೀಳಿಕೊಂಡು ಒಂದು ಪುರುಷರೂಪಿ ಪತಿಯಾಯಿತು. ಇನ್ನೊಂದು ಸ್ತ್ರೀರೂಪಿ ಪತ್ನಿಯಾಯಿತು. ಇದುವೇ ಮುಂದುವರಿದು ಬ್ರಹ್ಮಾಂಡ ವಿಸ್ತಾರವಾಯಿತು. ನಮ್ಮ ಆತ್ಮವೂ ಈ ಮೂಲ ತತ್ತ್ವದ ಅಂದರೆ ಪರಮಾತ್ಮನ ಪ್ರತೀಕ. ವಿಸ್ತಾರವಾಗುವ ಉದ್ದೇಶದಿಂದ ಹೊರಟರೆ ಜನನ ಮಜಣದ ಚಕ್ರದಲ್ಲಿ ಸಿಲುಕಿ ಹಲವು ಜನ್ಮಗಳನ್ನು ಪಡೆಯುತ್ತಲೇ ಇರಬೇಕಾಗುತ್ತದೆ. ಮುಕ್ತಿ ಬೇಕೆಂದಾದಲ್ಲಿ ಹೃದಯದಲ್ಲಿ ಪ್ರತಿಶ್ರದ್ಧಾತರಂಗಗಳು ಏಳಬೇಕು. ಅರ್ಥಾತ್ ಏಕಗೊಳ್ಳುವ ಉದ್ದೇಶ ಹೊಂದಿರಬೇಕು. ಇಷ್ಟೆಲ್ಲಾ ಪ್ರಸ್ತಾಪ ಮಾಡಿದ್ದು ಯಾಕೆಂದರೆ ಬ್ರಹ್ಮಾಂಡದಲ್ಲಿ ಇರುವಂಥ ಯಾವುದೇ ಒಂದು ವಸ್ತು, ಜೀವಿ, ಕಾಯ ಅಂತ್ಯಗೊಳ್ಳುವುದಿಲ್ಲ ಎಂಬುದನ್ನು ಅರಿಕೆ ಮಾಡಲೋಸುಗ. ಅಲ್ಲಾಗುವುದು ರೂಪಾಂತರ. ಒಂದುವೇಳೆ ಮುಕ್ತಿ ಪಡೆದರೂ ಮತ್ತೆ ಈ ಬ್ರಹ್ಮಾಂಡದ ಸೃಷ್ಟಿಮೂಲದಲ್ಲೇ ಲಯವಾಗಬೇಕು. ಹೀಗಾಗಿ ಯಾವುದೇ ಲೋಕಕ್ಕೆ ಅಂತ್ಯವಿಲ್ಲ. ಹೆಚ್ಚೆಂದರೆ ರೂಪಾಂತರಗುಳ್ಳಬಹುದು.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು