ಚೀನಾದಲ್ಲೊಂದು ಜಗದಚ್ಚರಿ!

ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಲು ಚೀನಾ ಎಲ್ಲಾ ರೀತಿಯಿಂದಲೂ ಅರ್ಹತೆ ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಅತಿ ದೊಡ್ಡದಾದ ರೇಡಿಯೋ ಟೆಲೆಸ್ಕೋಪನ್ನು ಅದು ನಿರ್ಮಿಸುತ್ತಿದೆ. 2016ರ ವೇಳೆಗೆ ಇದು ಪೂರ್ಣಗೊಳ್ಳಲಿದೆ. ಆದರೆ ಚೀನಾದ ಮನಸ್ಥಿತಿಯಲ್ಲಿ ಅಪಾಯವಿದೆ. ಪ್ರಪಂಚವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅರ್ಥಾತ್ ಪ್ರಪಂಚದಲ್ಲೇ ಕಮ್ಯುನಿಸಂ ಅನ್ನು ಮುಂಚೂಣಿಗೆ ತಲುಪಲು ಪ್ರಯತ್ನಿಸುತ್ತಿದೆ. ಚೀನಾದ ಸಮಕ್ಕೆ ಇನ್ನೊಂದು ಶಕ್ತಿ ಬೆಳೆಯಲೇಬೇಕಾದ ಅನಿವಾರ್ಯತೆ ಈಗಿದೆ. 

ಕೆಲವೊಂದು ಸಾರಿ ಚೀನಾದಷ್ಟು ದುಷ್ಟರಾಷ್ಟ್ರ ಇನ್ನೊಂದಿಲ್ಲ ಎನ್ನಿಸುತ್ತದೆ. ಆದರೆ ಅಭಿವೃದ್ಧಿಯ ಪಥದಲ್ಲಿ ಅದರ ವೇಗ, ಅದರ ಸಾಧನೆ ನೋಡಿದಾಗ ಅದರ ಬಗೆಗಿನ ಭಾವನೆಗಳೇ ಬದಲಾಗುತ್ತವೆ. ಅದು ಚೀನಾ ದೇಶದ ಸಾಮರ್ಥ್ಯ. ಜಗತ್ತಿನ ಶಕ್ತಿಯುತ ರಾಷ್ಟ್ರವಾಗಿ ಗುರುತಿಸಿಕೊಳ್ಳುವ ಹಂಬಲದಲ್ಲಿ ಅದು ಮುನ್ನಡೆಯುತ್ತಿದ್ದು, ಆ ಹಾದಿಯಲ್ಲಿ ಅದು ಸ್ಥಾಪಿಸಿರುವ ಮತ್ತು ಸ್ಥಾಪಿಸುತ್ತಿರುವ ಮೈಲಿಗಲ್ಲುಗಳು ಎಂಥವರನ್ನಾದರೂ ಅಚ್ಚರಿಯ ಕೂಪಕ್ಕೆ ತಳ್ಳುತ್ತವೆ. ಅಂಥದ್ದೇ ಒಂದು ಸಾಧನೆಯನ್ನು ಚೀನಾ ಮತ್ತೊಮ್ಮೆ ಸಾಧಿಸಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಲು ಚೀನಾ ಎಲ್ಲಾ ರೀತಿಯಿಂದಲೂ ಅರ್ಹತೆ ಪಡೆದುಕೊಳ್ಳುತ್ತಿದೆ.
ಜಗತ್ತಿನಲ್ಲಿ ಅತಿ ದೊಡ್ಡದಾದ ರೇಡಿಯೋ ಟೆಲೆಸ್ಕೋಪನ್ನು ಅದು ನಿರ್ಮಿಸುತ್ತಿದೆ. ಪ್ರಸ್ತುತ ಈ ರೇಡಿಯೋ ಟೆಲೆಸ್ಕೋಪ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 2016ರ ವೇಳೆಗೆ ಪೂರ್ಣಗೊಳ್ಳಲಿದೆ. ನಿಜ. ಚೀನಾದ ಪ್ರಗತಿಯ ದಾಪುಗಾಲು ಉಳಿದೆಲ್ಲ ದೇಶಗಳಿಗಿಂತ ದೊಡ್ಡದಿದೆ ಮತ್ತು ವೇಗವಾಗಿದೆ.
1963ರಲ್ಲಿ ಪೋರ್ಟೆರಿಕೋದಲ್ಲಿ ಅರೆಸಿಬೋ ಅಬ್ಸರ್ವೇಟರಿ ನಿರ್ಮಿಸಲಾಗಿತ್ತು. 1000 ಅಡಿ (305 ಮೀಟರ್) ವ್ಯಾಸದ ಈ ಟೆಲೆಸ್ಕೋಪ್ ಜಗತ್ತಿನಲ್ಲೇ ಅತಿ ದೊಡ್ಡದು ಎಂದು ಇದುವರೆಗೆ ಖ್ಯಾತಿ ಪಡೆದಿತ್ತು. 7.9 ಲಕ್ಷ ಚದರ ಅಡಿ ಪ್ರದೇಶದ ಚಿತ್ರಣವನ್ನು ತೋರಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಟೆಲೆಸ್ಕೋಪ್ ಸ್ಥಾನವನ್ನು ಕಸಿದುಕೊಳ್ಳಲು ಚೀನಾ ಸಿದ್ಧವಾಗಿದೆ. ಚೀನಾ ನಿರ್ಮಿಸುತ್ತಿರುವ ಟೆಲೆಸ್ಕೋಪ್ ಹೆಸರು- ಫೈವ್ ಹಂಡ್ರೆಡ್ ಮೀಟರ್ ಆಪರ್ಚರ್ ಸ್ಪೆರಿಕಲ್ ರೇಡಿಯೋ ಟೆಲೆಸ್ಕೋಪ್ (ಫಾಸ್ಟ್- ಎಫ್ಎಎಸ್ಟಿ)! ಅರೆಸಿಬೋಗೆ ಸೆಡ್ಡು ಹೆಡೆಯುವಂಥ ಈ ಟೆಲೆಸ್ಕೋಪ್ನ ಸಾಮರ್ಥ್ಯವಾದರೂ ಎಂಥಾದ್ದು?
3000 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ರೇಡಿಯೋ ಆಂಟೆನಾಗಳು ಎಷ್ಟಿರಬಹುದು? ಸಾವಿರಾರು ಆಂಟೆನಾಗಳು ಇಷ್ಟು ಪ್ರದೇಶದಲ್ಲಿರುತ್ತವೆ. ಅಂಥ ಎಲ್ಲ ರೇಡಿಯೋ ಆಂಟೆನಾಗಳನ್ನು ಒಟ್ಟುಗೂಡಿಸಿದರೆ ಎಷ್ಟಾಗುತ್ತದೆಯೋ ಅಷ್ಟು ಸಾಮಥ್ರ್ಯದ ಮತ್ತು ಆ ಆಂಟೆನಾಗಳನ್ನು ಒಟ್ಟುಮಾಡುವ `ಸ್ಕ್ವೇರ್ ಕಿಲೋ ಮೀಟರ್ ಎರ್ರೇ' (ಎಸ್ಕೆಎ) ನಿರ್ಮಿಸಲು ಚೀನಾ ಮೊದಲು ಪ್ರಸ್ತಾಪ ಮಾಡಿತ್ತು. ಅಂದರೆ ಈ ಎಲ್ಲ ಆಂಟೆನಾಗಳ ಒಟ್ಟು ವಿಸ್ತೀರ್ಣ ಒಂದು ಚದರ ಕಿಲೋ ಮೀಟರ್. ಈ ಯೋಜನೆಗಳನ್ನು ಪಡೆಯಲು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಪ್ರಯತ್ನಿಸುತ್ತಿವೆ.
ಈ ವಿಚಾರ ಹಾಗಿರಲಿ, 2006ರಲ್ಲಿ ಚಿಂತನಸಭೆ ನಡೆಸಿದ ವಿಜ್ಞಾನಿಗಳು ಮತ್ತು ತಂತ್ರಜ್ಞರು `ಫಾಸ್ಟ್' ನಿರ್ಮಿಸಬಹುದೆಂದು ಸೂಚಿಸಿದರು. ಅದು ಸಾಧ್ಯವಿದೆ ಎಂಬ ಭರವಸೆ ಚೀನಾ ಸರ್ಕಾರಕ್ಕೆ ಮೂಡಿದ್ದೇ ತಡ, `ಫಾಸ್ಟ್' ನಿರ್ಮಾಣ ಕಾರ್ಯಕ್ಕೆ ಅನುಮೋದನೆ ಕೊಟ್ಟುಬಿಟ್ಟಿತು. ಈ ಟೆಲೆಸ್ಕೋಪ್ ನಿರ್ಮಾಣದ ಒಟ್ಟು ವೆಚ್ಚ 10.79 ಕೋಟಿ ಅಮೆರಿಕನ್ ಡಾಲರ್. ದಕ್ಷಿಣ ಗಿಝೌ ಪ್ರಾಂತ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಟೆಲೆಸ್ಕೋಪ್ನ ನಿರ್ಮಾಣ ಕಾರ್ಯ ಕಳೆದ ಮಾರ್ಚ್ ನಲ್ಲೇ ಶುರುವಾಗಿದೆ. ಅರಸಿಬೋ ನಿಗದಿತ ಸ್ಪೆರಿಕಲ್ ಕರ್ವೇಚರ್ ಹೊಂದಿದ್ದು, ಡಿಶ್ನ ಮೇಲ್ಭಾಗದಲ್ಲಿ ಮಾತ್ರ ಸಂದೇಶಗಳನ್ನು ರವಾನಿಸುವ ಸಾಮರ್ಥ್ಯ ಹೊಂದಿದೆ. ಆದರೆ `ಫಾಸ್ಟ್' ಎಲ್ಲಾ ಕೋವಗಳಲ್ಲಿಯೂ ಸಂದೇಶಗಳನ್ನು ರವಾನಿಚಬಲ್ಲದು. `ಫಾಸ್ಟ್'ನ ಡಿಶ್ನಲ್ಲಿ 4400 ತ್ರಿಕೋನಾಕೃತಿಯ ಪಾನೆಲ್ಗಳಿವೆ.

ಏನಿದರ ಕಾರ್ಯ?
`ಫಾಸ್ಟ್' ನಿರ್ಮಿಸುತ್ತಿರುವುದು ಖಗೋಳ ಅಧ್ಯಯನಕ್ಕೆ. ಕ್ಷೀರಪಥ ಮತ್ತಿತರ ಗೆಲಾಕ್ಸಿಗಳಿಂದ ಬರುವ ಸೂಕ್ಷ್ಮ ಸಂದೇಶಗಳನ್ನು ಪಡೆದು ಅವುಗಳ ಅಧ್ಯಯನ ನಡೆಸುವುದು ಇದರ ಉದ್ದೇಶ. ಇಷ್ಟಕ್ಕೇ ಮುಗಿದಿಲ್ಲ, ವಿವಿಧ ನಕ್ಷತ್ರಗಳನ್ನು, ಗ್ರಹಗಳನ್ನು ಮತ್ತಿತರ ಆಕಾಶಕಾಯಗಳನ್ನು ಅಧ್ಯಯನ ಮಾಡುವುದರ ಜೊತೆಗೆ, ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಕ್ಷೇತ್ರವನ್ನು ಅಧಿಕ ಚಿಂತನೆ ಹಚ್ಚಿರುವಂಥ ಅನ್ಯಗ್ರಹ ಜೀವಿಗಳ ಬಗ್ಗೆಯೂ ಈ ಟೆಲೆಸ್ಕೋಪ್ ಅಧ್ಯಯನ ನಡೆಸಲಿದೆ. ಇದು ಸುಲಭದ ಕೆಲಸವೇನೂ ಅಲ್ಲ, ಅದಕ್ಕೆ ತಾಳ್ಮೆ ಬೇಕು. ಅಧಿಕ ವೆಚ್ಚವನ್ನೂ ಮಾಡಬೇಕು. ಉಪಕರಣವೂ ಸಮರ್ಥವಾಗಿರಬೇಕು. ಇದೆಲ್ಲವನ್ನೂ ಹೊಂದಲು `ಫಾಸ್ಟ್' ಸಮರ್ಥವಾಗಿದೆ. ಸುಮಾರು 1000 ಜ್ಯೋತಿರ್ವರ್ಷಗಳಷ್ಟು ದೂರದಿಂದ ಬರುವ ರೇಡಿಯೋ ಸಂದೇಶಗಳನ್ನು ಅಥವಾ ಪಲ್ಸಾರ್ಗಳನ್ನು (ನಕ್ಷತ್ರಗಳಿಂದ ಸೂಸುವ ಅಲೆಗಳು ಅರ್ಥಾತ್ ವಿದ್ಯುತ್ಕಾಂತೀಯ ಸಂದೇಶಗಳು) ಗ್ರಹಿಸುವ ಸಾಮರ್ಥ್ಯ ಈ ಟೆಲೆಸ್ಕೋಪ್ಗಿದೆ. ಇದುವೇ ಈ ಟೆಲೆಸ್ಕೋಪ್ಗೆ ವ್ಯಾಪಕ ಕೀರ್ತಿಯನ್ನು ತಂದುಕೊಡುವುದಂತೂ ಖಂಡಿತ.

ಚೀನಾದ ಪುಟಿತಕ್ಕೆ ಕನ್ನಡಿ
ಬಹಳ ವರ್ಷಗಳಿಂದ ಬಾಹ್ಯಾಕಾಶ ಕ್ಷೇತ್ರದ ಮೇಲೆ ಚೀನಾ ಕಣ್ಣಿಟ್ಟು ಕುಳಿತಿದೆ. ಯಾವಾಗ ಅವಕಾಶ ಸಿಕ್ಕರೂ ಅದನ್ನು ಬಳಸಿಕೊಳ್ಳುವಂಥ ಚಾತುರ್ಯವೂ ಅದಕ್ಕಿದೆ. ಬಂಡವಾಳವಂತೂ ಬೇಕಾದಷ್ಟಿದೆ. ಅಮೆರಿಕ, ರಷ್ಯಾಗಳ ಬಳಿಕ ವೈಜ್ಞಾನಿಕ ಕ್ಷೇತ್ರದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ರಾಷ್ಟ್ರ ಎಂಬ ಹೆಗ್ಗಳಿಕೆಯೂ ಅದಕ್ಕಿದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಜಗತ್ತಿನ ದೊಡ್ಡಣ್ಣ ಎಂದೆನಿಸಿಕೊಳ್ಳಬೇಕು, ಜಗತ್ತೇ ತನ್ನನ್ನು ಕಂಡು ಅಚ್ಚರಿಪಡಬೇಕು ಎಂಬ ತುಡಿತವಿದೆ. ಈ ಪುಟಿತಕ್ಕೆ ಸಾಕ್ಷಿಯಾಗಿ ನಿಲ್ಲಬಲ್ಲದು `ಫಾಸ್ಟ್' ಚೀನಾ ಇದೊಂದೇ ವಿಚಾರದಲ್ಲಿ ಮಾತ್ರವಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಧಿಸುತ್ತಿರುವ ಬೆಳವಣಿಗೆ, ಮಾಡುತ್ತಿರುವ ಪ್ರಯೋಗಗಳನ್ನು ಗಮನಿಸಿದರೆ ಜಗತ್ತು ಒಂದಲ್ಲ ಒಂದು ದಿನ ಚೀನಾದ ಮುಂದೆ ತಲೆಬಾಗಬೇಕಾಗಿ ಬಂದೀತು.
ಪ್ರತಿಯೊಂದು ಅಭಿವೃದ್ಧಿಯೂ ಪ್ರಪಂಚಕ್ಕೆ ಒಳಿತಾಗಬೇಕು, ಅದರಿಂದ ಏನಾದರೂ ಕೆಡುಕಾಯಿತು ಎಂದಾದರೆ ಅದು ಪ್ರಪಂಚವನ್ನು ವಿನಾಶದೆಡೆಗೆ ತಳ್ಳುವುದು ಖಂಡಿತ. ಹಾಗಂತ ಚೀನಾ ಇದೀಗ ನಿರ್ಮಿಸುತ್ತಿರುವ ಫೈವ್ ಹಂಡ್ರೆಡ್ ಮೀಟರ್ ಆಪರ್ಚರ್ ಸ್ಪೆರಿಕಲ್ ರೇಡಿಯೋ ಟೆಲೆಸ್ಕೋಪ್ನಿಂದ ಹಾನಿಯೇನೂ ಇಲ್ಲ. ಹಾನಿಯಿರುವುದು ಚೀನಾದ ಮನಸ್ಥಿತಿಯಲ್ಲಿ. ಹೇಳಿ ಕೇಳಿ ಅದು ಕಮ್ಯುನಿಸ್ಟ್ ರಾಷ್ಟ್ರ. ಪ್ರಪಂಚವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅರ್ಥಾತ್ ಪ್ರಪಂಚದಲ್ಲೇ ಕಮ್ಯುನಿಸಂ ಅನ್ನು ಮುಂಚೂಣಿಗೆ ತಲುಪಲು ಪ್ರಯತ್ನಿಸುತ್ತಿದೆ. ಅದರಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯ ತಂತ್ರವೂ ಸೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸಿದ್ದೇ ಆದಲ್ಲಿ, ಉಳಿದೆಲ್ಲ ದೇಶಗಳಿಗಿಂತ ಮುಂಚೂಣಿಗೆ ಬಂದದ್ದೇ ಆದಲ್ಲಿ ತನಗಿಂತ ಕೆಳಮಟ್ಟದಲ್ಲಿರುವ ಕ್ಷೇತ್ರಗಳು ತನ್ನನ್ನು ಅವಲಂಬಿಸಬೇಕಾಗುತ್ತದೆ, ತನಗೆ ತಲೆಬಾಗಬೇಕಾಗುತ್ತದೆ ಎಂಬ ಸತ್ಯ ಚೀನಾಕ್ಕೆ ಗೊತ್ತಿದೆ. ಆದ ಕಾರಣವೇ ಚೀನಾ ಅಭಿವೃದ್ಧಿಗೆ ತುಡಿಯುತ್ತಿರುವುದು. ಹಾಗಾಗಿಯೇ ಚೀನಾದ ಮನಸ್ಸು ಪ್ರಪಂಚಕ್ಕೆ ಅಪಾಯಕಾರಿ ಎಂದಿರುವುದು. ಚೀನಾದ ಸಮಕ್ಕೆ ಇನ್ನೊಂದು ಶಕ್ತಿ ಬೆಳೆಯಲೇಬೇಕಾದ ಅನಿವಾರ್ಯತೆ ಈಗಿದೆ.
ಚೀನಾದ ಪ್ರತಿಸ್ಪರ್ಧಿ ಸ್ಥಾನವನ್ನು ತುಂಬಬಲ್ಲ ಯೋಗ್ಯತೆ ಖಂಡಿತವಾಗಿಯೂ ಭಾರತಕ್ಕಿದೆ. ಅದಕ್ಕೆ ಬೇಕಾದಂತ ಪ್ರಯತ್ನವನ್ನು ಮಾಡಬೇಕು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮಲ್ಲಿನ ಆಂತರಿಕ ಕಲಹ, ಭ್ರಷ್ಟಾಚಾರವನ್ನು ಬದಿಗೊತ್ತಿ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕಬೇಕು.

Comments

  1. " ಪ್ರಪಂಚವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅರ್ಥಾತ್ ಪ್ರಪಂಚದಲ್ಲೇ ಕಮ್ಯುನಿಸಂ ಅನ್ನು ಮುಂಚೂಣಿಗೆ ತಲುಪಲು ಪ್ರಯತ್ನಿಸುತ್ತಿದೆ."

    ರೇಡಿಯೋ ಟೆಲೆಸ್ಕೋಪ್ ಮಾಡುವುದಕ್ಕೂ ಇದಕ್ಕೂ ಸಂಬಂಧವೇನು? ಇದರಿಂದ ಕಮ್ಯೂನಿಸಂ ಹೇಗೆ 'ಪ್ರಪಂಚದಾದ್ಯಂತ' ಮುಂಚೂಣಿಗೆ ತರುತ್ತದೆ? ಅಭಿವೃದ್ಧಿಯೆನ್ನುವುದು ಭಾರತ ಸಾಧಿಸಿದರೆ ಮಾತ್ರ ಹೆಮ್ಮೆ, ಚೀನಾ ಸಾಧಿಸಿದರೆ ಅಪಾಯ! ಎಲ್ಲ ದೇಶಗಳಿಗೂ ಅಭಿವೃದ್ಧಿ ಅವರವರ ಹೆಮ್ಮೆಯ ವಿಷಯ. ಅಮೆರಿಕಾಗಿಂತ ಅದು ಮುಂಚೂಣಿಯಲ್ಲಿ ನಿಲ್ಲಲು ಬಯಸಿದರೆ ತಪ್ಪೇನು? ಈ ವಿಷಯದಲ್ಲಿ ಅಮೆರಿಕಾವೂ ಕೂಡ ಅಪಾಯಕಾರಿಯೇ ಅಲ್ಲವೇ?

    ಅಂದಹಾಗೆ ರೇಡಿಯೋ ಟೆಲೆಸ್ಕೋಪ್ ಮಾಹಿತಿ ಚೆನ್ನಾಗಿದೆ.

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು