ತಮಾಷೆಯಲ್ಲ, ಇನ್ನೇನಿದ್ರೂ ವೈರ್ಲೆಸ್ ಕರೆಂಟ್ ಕಾಲ!

* ಮೆಟಾಮೆಟೀರಿಯಲ್ಗಳಿಂದ ಇದು ಸಾಧ್ಯ
* ಉತ್ತರ ಕೆರೋಲಿನಾ ಎಂಜಿನಿಯರ್ಗಳಿಂದ ಈ ಸಾಧನೆ

ತಂತಿ ಇಲ್ಲದೆ ವಿದ್ಯುತ್ ಪ್ರಸಾರ ಮಾಡುವುದಕ್ಕೆ ಯರೋಸ್ಲಾವ್ ಅವರ ತಂಡ ಬಳಸಿಕೊಂಡದ್ದು ಮೆಟಾಮೆಟೀರಿಯಲ್ಗಳನ್ನು. ಅದೃಶ್ಯ ಗಂಟೆ (ಇನ್ವಿಸಿಬಲ್ ಕ್ಲಾಕ್)ಯನ್ನು ಗುರುತಿಸಲು ವಿಜ್ಞಾನಿಗಳು ಬಳಸುತ್ತಿರುವ ವಸ್ತುಗಳೇ ಮೆಟಾಮೆಟೀರಿಯಲ್ಗಳು. ಸಾಮಾನ್ಯವಾಗಿ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುವಾಗ ಭಾರೀ ಪ್ರಮಾಣದ ವಿದ್ಯುತ್ ನಷ್ಟವಾಗುತ್ತದೆ. ಮೆಟಾಮೆಟೀರಿಯಲ್ಗಳಲ್ಲಿ ಆ ಸಮಸ್ಯೆ ಇಲ್ಲ. 


ವಿಷ್ಣುಪ್ರಿಯ
ಬೆಂಗಳೂರು: ಎಲ್ಲಿ ನೋಡಿದ್ರೂ ವೈರ್ಲೆಸ್ ಫೋನ್, ವೈರ್ಲೆಸ್ ಇಂಟರ್ನೆಟ್, ವೈರ್ಲೆಸ್ ಡಾಟಾ ಟ್ರಾನ್ಸ್ಫರ್... ಹೀಗೆ ಎಲ್ಲವೂ ವೈರ್ಲೆಸ್ ಆಗುತ್ತಿರುವ ಈ ಕಾಲದಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ವೈರ್ಲೆಸ್ ತಂತ್ರಜ್ಞಾನವನ್ನು ಅಪೇಕ್ಷಿಸುವುದು ತಪ್ಪಲ್ಲ. ಹೊಸ ಸುದ್ದಿ ಎಂದರೆ ಈ ವೈರ್ಲೆಸ್ ವಿಚಾರ ನಂಬಲೇ ಅಸಾಧ್ಯವಾದ ಕ್ಷೇತ್ರವೊಂದಕ್ಕೆ ಕಾಲಿಟ್ಟಿದೆ. ಅದು ವಿದ್ಯುತ್ ಕ್ಷೇತ್ರ. ವಿದ್ಯುತ್ ಪ್ರಸರಣಕ್ಕೆ ದೊಡ್ಡ ದೊಡ್ಡ ತಂತಿಗಳು ಅನಿವಾರ್ಯ. ಈಗಲೂ ಇದನ್ನೇ ನಂಬಲೇಬೇಕು. ಆದರೆ ಸಂಶೋಧಕರು ಸುಮ್ಮನೇ ಕುಳಿತುಕೊಳ್ಳುವುದಿಲ್ಲವಲ್ಲ? ಏನಾದರೊಂದು ಆವಿಷ್ಕಾರ ನಡೆಸುತ್ತಲೇ ಇರುವ ವೈಜ್ಞಾನಿಕ ಜಗತ್ತು ಇದೀಗ ವಿದ್ಯುತ್ತನ್ನು ಕೂಡಾ ತಂತಿ ಇಲ್ಲದೇ ಪ್ರಸಾರ ಮಾಡುವ ಸಾಧನೆಗೆ ಕೈ ಹಚ್ಚಿದೆ. ಈ ದಿಶೆಯಲ್ಲಿ ಯಶಸ್ಸು ಸಾಧಿಸಿದೆ ಕೂಡಾ.
ಉತ್ತರ ಕೆರೋಲಿನಾದ ಡ್ಯೂಕ್ ಯೂನಿವಸರ್ಿಟಿಯ ಎಂಜಿನಿಯರ್ಗಳು ಈ ಸಾಧನೆ ಮಾಡಿದ್ದಾರೆ. ಇದುವರೆಗೆ ತಂತಿ ಮೂಲಕವೇ ವಿದ್ಯುತ್ ಪ್ರವಹಿಸುವುದನ್ನು ನೋಡಿದವರು ನಾವು. ಹೀಗಿರುವಾಗ ತಂತಿ ಇಲ್ಲದೆ ವಿದ್ಯುತ್ ಪ್ರಸಾರ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದರೆ ಅದರ ಬಗ್ಗೆ ನಂಬಿಕೆ, ಅಪನಂಬಿಕೆ, ಅನುಮಾನ, ಇದೂ ಸಾಧ್ಯವೇ ಎಂಬ ಕೌತುಕ... ಎಲ್ಲ ಭಾವಗಳೂ ಒಟ್ಟೊಟ್ಟಿಗೇ ಮೇಳೈಸುತ್ತವೆ. ಹೆಚ್ಚಿನ ಭಾಗ ಈ ಆವಿಷ್ಕಾರದ ಮೇಲಿನ ಅಪನಂಬಿಕೆಯೇ ಆಗಿರುತ್ತದೆ. ಆದರೆ ಇಂಥದ್ದೊಂದು ಸಾಧನೆ ಸಾಧ್ಯವಿದೆ ಎಂಬುದನ್ನು ಸಾಧಿಸಿ ತೋರಿಸಿದ್ದು ಯರೋಸ್ಲಾವ್ ಅರ್ಝಮೋವ್ ಅವರ ತಂಡ.

ಮೆಟಾಮೆಟೀರಿಯಲ್ಗಳ ಮ್ಯಾಜಿಕ್
ತಂತಿ ಇಲ್ಲದೆ ವಿದ್ಯುತ್ ಪ್ರಸಾರ ಮಾಡುವುದಕ್ಕೆ ಯರೋಸ್ಲಾವ್ ಅವರ ತಂಡ ಬಳಸಿಕೊಂಡದ್ದು ಮೆಟಾಮೆಟೀರಿಯಲ್ಗಳನ್ನು. ಅದೃಶ್ಯ ಗಂಟೆ (ಇನ್ವಿಸಿಬಲ್ ಕ್ಲಾಕ್)ಯನ್ನು ಗುರುತಿಸಲು ವಿಜ್ಞಾನಿಗಳು ಬಳಸುತ್ತಿರುವ ವಸ್ತುಗಳೇ ಮೆಟಾಮೆಟೀರಿಯಲ್ಗಳು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮೆಟಾಮೆಟೀರಿಯಲ್ಗಳು ಸಂಪೂರ್ಣ ಕೃತಕವಾದಂಥ ವಸ್ತುಗಳು. ಇವುಗಳು ಪ್ರಕೃತಿದತ್ತವಾಗಿ ವಸ್ತುಗಳಿಗೆ ಇರುವಂಥ ಯಾವ ಗುಣಗಳನ್ನೂ ಹೊಂದಿರುವುದಿಲ್ಲ. ಸಂಪೂರ್ಣ ಭಿನ್ನವಾದ ಈ ಮೆಟಾಮೆಟೀರಿಯಲ್ಗಳನ್ನು ಮೈಕ್ರೋವೇವ್ಗಳಲ್ಲಿ, ಮಸೂರಗಳಲ್ಲಿ, ಮಾಡ್ಯುಲೇಟರ್ಗಳಲ್ಲಿ ಮತ್ತಿತರ ಉಪಕರಣಗಳಲ್ಲಿ ಬಳಸಲಾಗುತ್ತದೆ. ಇನ್ವಿಸಿಬಲ್ ಕ್ಲಾಕ್ ಅಥವಾ ಸರ್ವವನ್ನೂ ನಿಯಂತ್ರಿಸುವ, ಜೀವಿಗಳಿಗೆ ಪ್ರಾಯವಾಗುವಂತೆ ಮಾಡುವ `ಕಾಲ'ನನ್ನು ಕಂಡುಕೊಳ್ಳುವ ವಿಜ್ಞಾನಿಗಳ ಪ್ರಯತ್ನಕ್ಕೆ ಕೂಡಾ ಈ ಮೆಟಾಮೆಟೀರಿಯಲ್ಗಳನ್ನು ಬಳಸಲಾಗುತ್ತಿದೆ. ಆದರೆ ಈ ಮೆಟಾಮೆಟೀರಿಯಲ್ಗಳ ಉಪಯೋಗ ಇಷ್ಟಕ್ಕೇ ಸೀಮಿತವಾಗಿಲ್ಲ. ತಂತಿ ಇಲ್ಲದೆ ವಿದ್ಯುತ್ ಪ್ರಸಾರ ಮಾಡುವ ಸಲುವಾಗಿಯೂ ಯಾಕೆ ಬಳಸಬಾರದು ಎಂದು ಚಿಂತಿಸಿದ ಯರೋಸ್ಲಾವ್ ಮತ್ತವರ ತಂಡ ಇದಕ್ಕೆ ಅಗತ್ಯವಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
ತಂತಿಯಿಲ್ಲದೆ ವಿದ್ಯುತ್ ಪ್ರವಹಿಸುವುದಾದರೂ ಹೇಗೆ? ಮೆಟಾಮೆಟೀರಿಯಲ್ಗಳು ವಿದ್ಯುತ್ತನ್ನು ಹೇಗೆ ಪ್ರಸರಿಸುತ್ತವೆ? ಈ ಪ್ರಶ್ನೆಗೆ ಉತ್ತರ ಅರ್ಥವಾಗಬೇಕು ಎಂದಾದರೆ ವೈರ್ಲೆಸ್ ತಂತ್ರಜ್ಞಾನದ ಬಗ್ಗೆ ಅತ್ಯಲ್ಪ ಜ್ಞಾನವಾದರೂ ಇರಬೇಕು. ಇತ್ತೀಚಿನ ದಿನಗಳಲ್ಲಿ ವೈರ್ಲೆಸ್ ಮೊಬೈಲ್ ಚಾರ್ಜರ್ಗಳು ಹೊಸದೊಂದು ಅಲೆಯನ್ನು ಸೃಷ್ಟಿಸಿದ್ದವು. ಆದರೆ ವೈರ್ಲೆಸ್ ಚಾರ್ಜರ್ಗೆ ಮೊಬೈಲ್ ಅತ್ಯಂತ ಹತ್ತಿರ ಇದ್ದರಷ್ಟೇ ಇದು ಕಾರ್ಯ ನಿರ್ವಹಿಸುತ್ತಿತ್ತು. ಇದೇ ತಂತ್ರಜ್ಞಾನವನ್ನು ಸ್ವಲ್ಪ ಅಭಿವೃದ್ಧಿಪಡಿಸಲಾಗಿದ್ದು, ಹೆಚ್ಚು ಕ್ಷಮತೆಯನ್ನು ಪಡೆಯುವಂತಾಗಿದೆ. ರೇಡಿಯೋ ತರಂಗಗಳನ್ನು ಗುರುತಿಸುವ ಉಪಕರಣಗಳು (ಆರ್ಎಫ್ಐಡಿ) ಯಾವ ರೀತಿ ರೇಡಿಯೋ ತರಂಗಗಳನ್ನು ಸ್ವೀಕರಿಸುತ್ತವೆಯೋ ಅಂತೆಯೇ ಮೆಟಾಮೆಟೀರಿಯಲ್ಗಳು ವಿದ್ಯುತ್ ತರಂಗಗಳನ್ನು ಸ್ವೀಕರಿಸಿ ಮುಂದಿನ ಉಪಕರಣದತ್ತ ತರಂಗಗಳನ್ನು ಪ್ರವಹಿಸುತ್ತವೆ. ಈ ರೀತಿಯಲ್ಲಿ ವಿದ್ಯುತ್ ವಿವಿಧೆಡೆಗೆ ಪ್ರವಹಿಸುತ್ತದೆ. ವಿದ್ಯುತ್ ತಂತಿ ಹಾದು ಹೋಗುವಾಗ ಅದು ಜೋತಾಡದಂತೆ ಅಲ್ಲಲ್ಲಿ ಕಂಬಗಳನ್ನು ಸ್ಥಾಪಿಸಲಾಗುತ್ತದೆ. ಅದೇ ರೀತಿಯಲ್ಲಿ ಅಲ್ಲಲ್ಲಿ ಮೆಟಾಮೆಟೀರಿಯಲ್ ಇರುವಂಥ ಟವರ್ಗಳನ್ನು ಸ್ಥಾಪಿಸಿ ವಿದ್ಯುತ್ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರವಹಿಸುವಂತೆ ಮಾಡಲಾಗುತ್ತದೆ.
ವಿದ್ಯುತ್ ಮೂಲ ಮತ್ತು ಅದರ ಗ್ರಾಹಕದ ನಡುವೆ ತರಂಗಗಳ ಹೊಂದಾಣಿಕೆ ಮಾಡಲಾಗುತ್ತದೆ. ಯಾವ ರೀತಿ ರೇಡಿಯೋ ಚಾನೆಲ್ನ ಕಾರ್ಯಕ್ರಮಗಳನ್ನು ಕೇಳಲು ಟ್ಯೂನ್ ಹೊಂದಿಸುತ್ತೇವೆಯೋ ಮೆಟಾಮೆಟೀರಿಯಲ್ಗಳ ಮೂಲಕ ವಿದ್ಯುತ್ ಪ್ರವಹಿಸುವಾಗ ಮತ್ತು ಆ ವಿದ್ಯುತ್ತನ್ನು ಸ್ವೀಕರಿಸುವಾಗ ಇದೇ ರೀತಿಯ ಟ್ಯೂನಿಂಗ್ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುವಾಗ ಭಾರೀ ಪ್ರಮಾಣದ ವಿದ್ಯುತ್ ನಷ್ಟವಾಗುತ್ತದೆ. ಮೆಟಾಮೆಟೀರಿಯಲ್ಗಳಲ್ಲಿ ಆ ಸಮಸ್ಯೆ ಇಲ್ಲ.

ಕೆಲವೊಂದು ಸಮಸ್ಯೆಗಳು
ಹೊಸ ಸಂಶೋಧನೆ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಭರವಸೆಗಳು ಚಿಗುರೊಡೆಯುವಂತೆ ಮಾಡಿದ್ದು ನಿಜ. ಆದರೆ ಇದರಲ್ಲಿ ಕೆಲವೊಂದು ಲೋಪಗಳಿವೆ. ಸದ್ಯಕ್ಕೆ ಯರೋಸ್ಲಾವ್ ಮತ್ತವರ ತಂಡ ಸಣ್ಣ ಪ್ರಮಾಣದ (ಕಡಿಮೆ ವೋಲ್ಟೇಜ್ನ) ವಿದ್ಯುತ್ತನ್ನು ಮೆಟಾಮೆಟೀರಿಯಲ್ಗಳ ಮೂಲಕ ಪ್ರವಹಿಸುವುದರಲ್ಲಷ್ಟೇ ಯಶಸ್ವಿಯಾಗಿದ್ದಾರೆ. ಆಧಿಕ ವೋಲ್ಟೇಜ್ನ ಕರೆಂಟ್ ಈ ಮೆಟಾಮೆಟೀರಿಯಲ್ಗಳ ಮೂಲಕ ಪ್ರವಹಿಸುತ್ತದೆಯೇ ಎಂಬುದನ್ನು ಇನ್ನು ಪರಿಶೀಲಿಸಬೇಕು. ಅಧಿಕ ವೋಲ್ಟೇಜ್ನ ಅಥವಾ ಅಧಿಕ ಶಕ್ತಿಯುತವಾದಂಥ ವಿದ್ಯುತ್ತನ್ನು ನೂತನ ವಿಧಾನದಲ್ಲಿ ಪ್ರವಹಿಸಲು ಪ್ರಯತ್ನಿಸುವಾಗ ವಿದ್ಯುತ್ ತರಂಗಗಳು ಮೈಕ್ರೋವೇವ್ ಅಥವಾ ಲೇಸರ್ಗಳಾಗಿ ಪರಿವರ್ತನೆಗೊಳ್ಳುವ ಅಪಾಯವಿದೆ. ಒಂದುವೇಳೆ, ಮೈಕ್ರೋವೇವ್ ಅಥವಾ ಲೇಸರ್ಗಳಾಗಿ ಬದಲಾದರೆ ಅವು ತಮ್ಮ ಹಾದಿಯಲ್ಲಿ ಬರುವ ಎಲ್ಲವನ್ನೂ ಸುಟ್ಟು ಹಾಕುತ್ತವೆ. ಹೀಗಾಗಿ ಅಧಿಕ ಶಕ್ತಿಯ ವಿದ್ಯುತ್ ತರಂಗಗಳು ಮೈಕ್ರೋವೇವ್ ಅಥವಾ ಲೇಸರ್ ಕಿರಣಗಳಾಗಿ ಬದಲಾಗದಂತೆ ವಿದ್ಯುತ್ತನ್ನು ಮೆಟಾಮೆಟೀರಿಯಲ್ಗಳ ಮೂಲಕ ಪ್ರವಹಿಸುವ ಬಗ್ಗೆ ಸಂಶೋಧನೆ ನಡೆಸಬೇಕಾಗುತ್ತದೆ.
ಒಟ್ಟಾರೆಯಾಗಿ, ಈ ಸಂಶೋಧನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬುದ್ಧವಾಗುವುದು ಖಂಡಿತ. ನಷ್ಟವಾಗುವುದು ತಪ್ಪಿದರೆ ಅದು ಉಳಿತಾಯವಾದಂತೆ. ಹೀಗಾಗಿ ಈ ಸಂಶೋಧನೆ ಯಶಸ್ವಿಯಾಗಿ, ಭಾರೀ ಪ್ರಮಾಣದ ವಿದ್ಯುತ್ತನ್ನು ನಿಸ್ತಂತು ರೂಪದಲ್ಲಿ ಪ್ರವಹಿಸುವುದು ಸಾಧ್ಯವಾದರೆ, ಜಗತ್ತಿನಲ್ಲಿ ವಿದ್ಯುತ್ ಅಭಾವ ಕಡಿಮೆಯಾದೀತು.

Comments

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು