ತಾಯಿ ಜಗದಂಬೆ

(ತಾಯಿ ಜಗದಂಬೆಯನ್ನು ಸ್ತುತಿಸುವ ಈ ಕೀರ್ತನೆಯ ಸುಮಧುರ ಗಾಯನವನ್ನು ಆಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ....

ಧಮನಿ ಧಮನಿ
ಮನ ಮಿಡಿದು ಕುಣಿದು
ಪಾಡಿತು ಎನ್ನ ಮನದಣಿಯೆ |
ಹೃದಯ ಮಂದಿರ
ನಂದಾ ದೀಪವು
ಜಗದಂಬೆಯ ಪದಕೆ ಮಣಿಯೆ ||೧||

ಕಾರ್ಮುಗಿಲ ಕರಿ
ನೆರಳಿನ ಭಯವು
ಬೆಂಬಿಡದೆ ಕಾಡಿ ಕೊಲುತಿದೆ |
ಓಂಕಾರ ನಾದ
ಶರವಾಗಿ ಮುತ್ತಿ
ಕಾರಿರುಳ ಕಳೆದು ಬೆಳಗಿದೆ ||೨||

ಭವದ ಕಡಲೊಳು
ವಿಕಟ ಅಲೆ ನಡುವೆ
ಮುಳುಗಲೆನ್ನ ಹಾಯಿದೋಣಿ |
ಜಗ ಪೊರೆವ ನಿನ್ನ
ನಾಮ ಬಲ ಪಿಡಿದು
ದಡ ಸೇರಿದೆ ನಾರಾಯಣಿ ||೩||

ಧ್ಯಾನವು ಪೂಜೆಯು
ನಾ ಅರಿಯೆ ತಾಯಿ
ತಂತ್ರವೋ ಮಂತ್ರವೋ |
ಉಸಿರು ಉಸಿರಿನಲಿ
ಮಾತೆ ಜಗದಂಬೆ
ಒಲುಮೆ ಕರುಣೆ ಮಾತ್ರವೋ ||೪||

ಲೌಕಿಕವು ಕಳೆದು
ತನು ಮನ ಆತ್ಮ
ಶುದ್ಧ ಚಿತ್ತ ಸ್ಫಟಿಕ ಮಣಿ |
ಮನ ಹೊಳೆವ ಪುಷ್ಪ
ಮಂದಾರ ಕಮಲ
ನೀನಿರಲು ವಾಣಿ ಶರ್ವಾಣಿ ||೫||

ಜನುಮ ಮರು ಜನುಮ
ನರ ಜನುಮ ಸಾಕು
ಸಾಕಿನಿತು ಹರಣದ ಮರಣ |
ಪೊಡಮಡುವೆ ತಾಯಿ
ಶಾಂಕರಿ ಶಾರದೆ
ಶಾಂಭವಿಯ ಪದುಮ ಚರಣ ||೬||

ಪದಕುಸುಮ ಮಾಲೆ
ಜಪವಿದುವೆ ಗಾನ
ಬಕುತಿಯಿದು ಮುಕುತಿ ಮಾರ್ಗ|
ಶರಣು ಶರಣೆಂಬೆ
ಕರುಣದಿ ಒಲಿಯೇ
ನೀ ಪಯಣಿಗಮಾತೆ ದುರ್ಗಾ ||೭||

- ಪ್ರಕಾಶ್ ಪಯಣಿಗ

Comments

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು