ದ್ವಾದಶಾವತಾರ ಕಾವ್ಯ

(ಈ ಕೀರ್ತನೆಯ ಸುಮಧುರ ಗಾಯನವನ್ನು 8ಡಿ ರೂಪದಲ್ಲಿ ಆಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ....

ಜಲವೆದ್ದು ಜಗಮುಳುಗಿ
ಹೊಳೆಯು ತಾ ಕಡಲಾಗಿ
ಜೀವಸೆಲೆ ಬತ್ತಿ ಧಗಧಗಿಸಿ |
ಕುಲಕೋಟಿ ಕರುಣೆಯಲಿ
ಬಾ ಎನಲು ಕೈನೀಡಿ
ಕಾಪಾಡು ಮೀನ ತಾ ಅವತರಿಸಿ ||೧||

ಮಂದರನ ಕಂದರದಿ
ಛಾಪ ವಾಸುಕಿ ಪಿಡಿದು
ಸುಧೆಗಾಗಿ ಪಾಲ್ಗಡಲ ಕಡೆಯೆ |
ಗಿರಿಗಾಮೆ ಬಲವಾದೆ
ಲಕುಮಿ ತಾ ಸೋಜಿಗದಿ
ಬರುತಿರೆ ಸತಿಯಾಗಿ ಸಿರಿಯ ಪಡೆವೆ ||೨||

ಇಳೆಯ ತಾ ಪಿಡಿದು
ಗೋಳಾಡಿ ಪಾತಾಲ
ಅಸುರ ಬಲ ಗಹಗಹಿಸಿ ಹಗೆತನದಿ |
ವಸುಮತಿಪತಿ ಪದುಮಳ
ಕಾಪಾಡೆ ಕೋರೆಯಲಿ
ನಗುತ ಕುಳಿತ ಭುವಿಯು ಒಡೆತನದಿ ||೩||

ಪಾಹಿ ಪಾಹಿ ಕೇಶವ
ಪಾಹಿ ನೀ ಮಾಧವ
ಕರೆದ ಕಶಿಪುಸುತ ಜ್ಞಾನಮಂದಿರ |
ಕಂಬದೊಳು ಬಿಂಬ ತಾ
ಮೈದಳೆದ ನರಸಿಂಹ
ಪೊರೆಯೊ ಕರುಣದಿ ಬಕುತ ಬಂಗಾರ ||೪||

ಬಲರೊಳು ಅತಿಬಲ ಬಲಿ
ತಾನೆನುತ ಬೀಗಿರಲು
ಕರದೊಳಗೆ ತ್ರಿಭುವನ ಭವನ |
ಅವತರಿಸಿ ವಟುವಾಗಿ
ಬೇಡಿ ಮೂರಡಿ ಚರಣ
ಶಿರದೊಳಗೆ ಮೋಹ ಕಳೆವ ವಾಮನ ||೫||

ಆಳರಸ ಅರಿಯಾಗಿ
ಜನಮನಕೆ ಕೆಡುಕಾಗೆ
ವನಜನಾಭ ನೀ ದಯದಿ ಹರಸು |
ಪೊರೆದು ಪಾಲಿಸೆ ಜಗವ
ತರಿದು ಅರಸರ ಶಿರವ
ಮೆರೆಯಿತಾಗ ಭಾರ್ಗವನ ಪರಶು ||೬||

ದುರುಳನಾ ದಶಮುಖ
ಜಾನಕಿಯ ಸೆಳೆದೊಯ್ಯೆ
ದರ್ಪವಳಿದು ಹತ ಪ್ರಾಣ ರಾವಣ |
ಜಗಕೆ ದೃಷ್ಟಾಂತ ನೀ
ಕುಲಕೆ ಭೂಷಣನು ನೀ
ಇಳೆಯ ಪುರುಷೋತ್ತಮ ರಾಘವ ||೭||

ಪಾಂಡವರ ಹೆಸರಿನಲಿ
ಗೀತ ಸಾರವನರುಹಿ
ಧರ್ಮನಿಧಿ ನರಗೆ ಸಾರಥಿ |
ಅಸುರ ಕುಲಕೋಟಿ ಬಲ
ಮುರಿದು ತಾ ಛಲದಲಿ
ಜಗಪೊರೆವ ಮುರಾರಿ ನಿನಗಾರತಿ ||೮||

ಜನಮನಕೆ ಮೋಕ್ಷದ
ಮಾರ್ಗವ ತೋರೆ ತಾ
ಅವತರಿಸಿ ಗುರುವಾದನಾ ಬುದ್ಧ |
ದ್ವಾಪರದೊಳು ನಿರ್ಗುಣ
ತತ್ವವಾ ಬೋಧಿಸಿ
ಮನುಜಕುಲ ಪಾಲನೆಗೆ ತಾ ಸಿದ್ಧ ||೯||

ದುರುಳಜನ ಸಂಹರಿಸಿ
ವಸುಂಧರೆ ಕೋಮಲೆ
ಕಾಪಾಡು ಅಶ್ವಾರೂಢ ಕಲ್ಕಿ |
ಅಧರ್ಮ ಅಶಾಂತಿಯು
ನೆಲೆಯಾಗಿ ಕಲಿಯು ತಾ
ಮೆರೆದಿರಲು ಯುಗಕೆ ನೀಡುವೆ ಮುಕ್ತಿ ||೧೦||

ಆ ರೋಗ ಈ ರೋಗ
ಮನುಜ ಕಡುಕಷ್ಟವೆನೆ
ಓಷಧಿಯ ಚಿಲುಮೆಯು ತಾನಾಗಿ |
ಉದ್ಧರಿಸಿ ಬಕುತಗಣ
ಧನ್ವಂತರಿ ನೀನಿರೆ
ಬಾಳುವೆವು ಚೆಂದದೊಳು ಹಾಯಾಗಿ ||೧೧||

ಮೋಹಿನಿಯ ಮೋಹದಲಿ
ಅಸುರಕುಲ ಮರುಳಾಗಿ
ಸುರಪಾಲಿಗೆ ಸುಧೆಯ ಹರಿಸಿ ತಾ |
ಜಗದಗಲ ಬಕುತಿಸುಧೆ
ಪಸರಿಸುತ ಒಲವಿನಲಿ
ಪಯಣಿಗನೊಡೆಯ ಲಕುಮಿಪತಿಯೆ ಬಾ ||೧೨||

- ಪ್ರಕಾಶ ಪಯಣಿಗ

Comments

  1. ದಶಾವತಾರದ ಬಗ್ಗೆ ಕೆಲವೊಮ್ಮೆ ಕೆಳಿದ್ದೆ.. ದ್ವಾದಶಾವತಾರ ಒoದು ಹೊಸ ತರಹದ ವಿಶ್ಲೆಷಣೆ😄🙏

    ReplyDelete
    Replies
    1. ವಿಷ್ಣುವಿನ ಮತ್ತೆರಡು ಪ್ರಮುಖ ಅವತಾರಗಳು ಧನ್ವಂತರಿ ಮತ್ತು ಮೋಹಿನಿ ಅವತಾರ... ರೋಗಗಳಿಂದ ಮನುಕುಲವನ್ನು ಕಾಪಾಡಬೇಕೆಂಬ ಕಾಳಜಿಯಲ್ಲಿ ಧನ್ವಂತರಿ ಅವತಾರವನ್ನು ಈ ಕಾವ್ಯದಲ್ಲಿ ಬಳಸಲಾಗಿದೆ. ಸುರರಿಗೆ ಅಮೃತ ಕೊಡಿಸಿದ ಅವತಾರ ಮೋಹಿನಿ. ಲೋಕಕ್ಕೆ ಪ್ರೇಮ ಮತ್ತು ಸ್ನೇಹವೆಂಬ ಅಮೃತ ಕರುಣಿಸಬೇಕೆಂಬ ದೃಷ್ಟಿಯಲ್ಲಿ ಇದನ್ನು ಬಳಸಲಾಗಿದೆ.

      Delete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು