ಗಣೇಶ ತಾಂಡವ ಕಾವ್ಯ

(ತಾಂಡವ ನೃತ್ಯ ಮಾಡುವ ಮುದ್ದು ಬೆನಕನ್ನು ಕೊಂಡಾಡುವ ಈ ಕೀರ್ತನೆಯ ಸುಮಧುರ, ಅದ್ಭುತ ಗಾಯನ ಆಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...

ಶಿವನ ಶೂಲದಿರಿತಕೊರಗಿ ಗಜನ ಶಿರವನಿರಿದು ತಂದು
ಕೊರಳೊಳಿರಿಸುತಲೆದ್ದು ಬಂದ ಮುದ್ದು ಕಂದ ಗಣಪ |
ಪಿರುದುದಾಕರ್ಣವೇನ್ ಚಂದ ಕಿರಿನಯನದಾನಂದ
ನೀಳನಾಸಿಕವುದರ ಬ್ರಹ್ಮಾಂಡ ವಕ್ರತುಂಡ ಬೆನಕ ||೧||

ಜ್ವಲಿಸುತಾಖಂಡಮಂಡಲ ಕೆಡುಹಿ ಮೂಷಕನತಿಭಂಡ
ಅಂಕ ಬಿಂಕ ಡೊಂಕ ಡಂಭ ಮುರಿದು ಗೆಲಿದ ವೀರ|
ಋಷಿಜನ ಸುರರತಿಭಯ ಭಯ ವಿನಾಶಕ ನಲಿದ
ಢಮ ಢಮ ಢಮರನಿನಾದ ಜಯ ಜಯಹೇ ರಿಪುಸಂಹಾರ ||೨||

ಗಣಪತಿ ಸೋದರ ಶರವಣ ಕೂಡಿ ವಾಹನವೇರಿ
ಜಗಜಗದಗಲ ತಿರುಗೀಕ್ಷಿಪ ಪರಿಯದು ನೋಡಿ |
ಶಿವಶಿವೆಗೆರಗಿ ತಾ ಕರಮುಗಿದು ಪದಪಿಡಿದು
ಅಂಡ ಪಿಂಡ ಬ್ರಹ್ಮಾಂಡವೈ ನೀವೆಂದ ಮೊದಲ್ವಂದಿತ ||೩||

ಅರಿಗಳೆಂಟು ಮನುಜ ಮನದಿ ಮನೆಯ ಮಾಡಿ
ಮೇಲೆ ಬಿದ್ದು ಮೇಧೆ ಮೆದ್ದು ಮತಿ ಮಂದವಾಗಿ |
ಮಮ ಕಾಮ ಮದ ಮೋಹ ಮತ್ಸರ ಕ್ರೋಧ
ಲೋಭಾಹಂಗಳರಿದು ತರಿದ ತಾಂಡವ ಗಣಪ || ೪ ||

ಬಂಡಿ ಬಂಡಿ ಬಂಡಿ ತಿಂಡಿ ಭಕ್ಷ್ಯ ಭೋಜ್ಯವೆಲ್ಲವುಂಡು
ಗುಂಡುಗುಂಡುಗಾಗಿ ಎಡವಿಬಿದ್ದು ಧಿಗ್ಗನೆದ್ದ ಸುಂದರ |
ಹಾವ ಪಿಡಿದು ಗಟ್ಟಿಯಾಗಿ ಉದರ ಬಿಗಿದು ಗೇಲಿಮಾಳ್ಪ
ಚಂದ್ರಮಗೆ ಶಾಪವಿತ್ತು ನಶಿಪ ಪರಶುಪಾಶಧರ ||೫||

ಗಣ ಗಣವಗಣಿತ ಶಿವಗಣ ಭೂತಗಣಗಳ ಕೂಡಿ
ಅಸುರರೆದೆ ಬಗೆದು ಮೂಜಗವ ಕಾಯ್ವ ಗಣನಾಯಕ |
ಧಿಕ್ ತಕಿಟ ಧಿಕ್ ತಕಿಟ ಧಿಕ್ ತಕಿಟ ತಾಂಡವನಾದ
ತಕ ತಕಿಟ ತಾನಲಿದ ಪರಶಿವನೊಲವ ವಿನಾಯಕ ||೬||

ಗಂಗೆಗೌರಿಯೊಲವ ಕಂದ ಚೆಂದ ಬೆನಕನ
ವಿಧ ವಿಧ ಪರಿ ಪರಿ ಸುತಿಸಿರೊಲಿವಳಮ್ಮ ಲಕುಮಿ |
ಜಪ ತಪ ಬಲು ಬಕುತಿಯಲಿ ಧೇನಿಸಿ ಬೇಡಿರೆ
ಹರುಷದಿ ಕರುಣಿಪ ವರಗಳನಗಣಿತ ಗಣಪ ||೭||

ಹರಿಹರ ಸುರ ಋಷಿ ಗುರುಜನ ಮಾನಸ ಪೂಜಿತ
ಕಳೆಕಳೆದು ಕುಲಕಾಯ್ದು ಕರುಣೆಯಲಿ ಕಾಪಾಡು |
ಹೇ ಕರಣಾಕರ ಲಂಬೋದರ ಢುಂಢಿರಾಜ
ಸಿದ್ಧಿದಾಯಕ ಬುದ್ಧಿದಾಯಕ ನಮಸ್ತೇ ನಮಸ್ತೇ ||೮||

ಕವಿಪಯಣಿಗನ್ಬರೆದೀ ಕಾವ್ಯವನು
ಬಕುತಿಯಲಿ ಪಾಡಿ ಭಜಿಸಿರೆ |
ಭಜಿಪ ಸ್ತುತಿಯನಿನಿತು ಕೇಳಿರೆ
ಹರಸಿ ಕಾಯ್ವನು ಭಕ್ತವತ್ಸಲ ಗಣಪ || ೯||

- ಪ್ರಕಾಶ ಪಯಣಿಗ

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು